ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಾಭಿಮಾನಿಗಳ ನಡುವೆ ಭಿನ್ನ ದನಿಗಳು

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಕಟ್ಟಾ ಕಮ್ಯುನಿಸ್ಟ್‌ಗಳಾಗಿದ್ದು ನಂತರ ಪಕ್ಷ ಹಾಗೂ ಅದರ ಸಿದ್ಧಾಂತವನ್ನು ತೊರೆದವರ ನಿವೇದನೆ ರೂಪದ ಪ್ರಬಂಧಗಳನ್ನೊಳಗೊಂಡ ಸಂಗ್ರಹ `ದಿ ಗಾಡ್ ದಟ್ ಫೇಯ್ಲ್ಡ~ ಪುಸ್ತಕ 1980ರ ದಶಕದ ಆರಂಭದಲ್ಲಿ ಮಾರ್ಕ್ಸ್‌ವಾದಿ ಹಂತದಿಂದ ಹೊರಬರುವ ವೇಳೆ ನನಗೆ ಸಿಕ್ಕಿತ್ತು. ಈ ಪುಸ್ತಕ ಅತ್ಯಂತ ಆಸಕ್ತಿ ಹುಟ್ಟಿಸುವ, ತೀವ್ರವಾಗಿ ಓದಿಸಿಕೊಳ್ಳುವಂತಹ ಪುಸ್ತಕವಾಗಿತ್ತು. ಇದಕ್ಕೆ ಒಂದು ಕಾರಣ, ಬರಹದ ಗುಣಮಟ್ಟ (ಈ ಪುಸ್ತಕದ ಲೇಖಕರಲ್ಲಿ ಆರ್ಥರ್ ಕೋಸ್ಲರ್; ಇಗ್‌ನಾಝಿಯೊ ಸೈಲೊನ್ ಹಾಗೂ ಲೂಯಿಸ್ ಫಿಷರ್ ಸೇರಿದ್ದರು). ಮತ್ತೊಂದು ಕಾರಣ, ಒಂದಾನೊಂದು ಕಾಲದ ಕಟ್ಟಾನುಯಾಯಿಗಳು ಸಾಮಾನ್ಯವಾಗಿ ಭಿನ್ನ ಅಭಿಪ್ರಾಯಗಳನ್ನು ತೀವ್ರ ಒಳನೋಟಗಳಿಂದ ಮಂಡಿಸುತ್ತಾರೆ. ಹೀಗಾಗಿಯೇ, ಟೆರ‌್ರಿ ಈಗಲ್‌ಟನ್ ಹಾಗೂ ಜೇಮ್ಸ ಕ್ಯಾರೊಲ್ ಅವರು, ಕ್ಯಾಥೊಲಿಕ್ ಚರ್ಚ್ ಕುರಿತಂತಹ ಅಭೇದ್ಯವೆನಿಸುವ ವೃತ್ತಾಂತಗಳನ್ನು ಬರೆದಿದ್ದಾರೆ. ಒಂದು ಕಾಲದಲ್ಲಿ ಪಾದ್ರಿಯಾಗಲು ಬಯಸಿದ್ದ ಅವರು ಇದರ ಒಳಮರ್ಮಗಳನ್ನು ಅರಿತವರಾಗಿದ್ದರು. ಈಗ ಮಾಜಿ ಜಿಹಾದಿಗಳ ಅನೇಕ  ಆತ್ಮ ವೃತ್ತಾಂತಗಳೂ ಲಭ್ಯವಿವೆ.

ನನಗೆ  `ದಿ ಗಾಡ್ ದಟ್ ಫೇಯ್ಲ್ಡ~ ನೆನಪಾಗಲು ಕಾರಣ, ಇತ್ತೀಚೆಗೆ ನನ್ನ ಗಮನಕ್ಕೆ ಬಂದ ರಾಷ್ಟ್ರೀಯ ಸ್ವಯಂಸೇವಕ (ಆರ್‌ಎಸ್‌ಎಸ್) ಸಂಘಕ್ಕೆ ಸೇರಿದವರೊಬ್ಬರ ಜೀವನ ವೃತ್ತಾಂತ. 1970ರ ದಶಕದಲ್ಲಿ ಅರ್ಥಶಾಸ್ತ್ರಜ್ಞ ಎಸ್. ಎಚ್. ದೇಶಪಾಂಡೆಯವರು ಬರೆದ ಈ ಆತ್ಮವೃತ್ತಾಂತ ಮೂಲ ಮರಾಠಿಯಲ್ಲಿ ಪ್ರಕಟವಾಗಿ ನಂತರ ಇಂಗ್ಲಿಷ್‌ನಲ್ಲಿ `ಕ್ವೆಸ್ಟ್~ ಪತ್ರಿಕೆಯಲ್ಲಿ ` ಮೈ ಡೇಸ್ ಇನ್ ದಿ ಆರ್‌ಎಸ್‌ಎಸ್~ (ಆರ್‌ಎಸ್‌ಎಸ್‌ನಲ್ಲಿ ನನ್ನ ದಿನಗಳು) ಶೀರ್ಷಿಕೆಯಡಿ ಪ್ರಕಟವಾಗಿತ್ತು.

ದೇಶಪಾಂಡೆಯವರು 1925ರಲ್ಲಿ ಪುಣೆಯಿಂದ ಸುಮಾರು 30 ಮೈಲಿ ದೂರವಿರುವ ಹಳ್ಳಿಯಲ್ಲಿ ಹುಟ್ಟಿದ್ದರು. 1938ರಲ್ಲಿ ನಗರಕ್ಕೆ ಬಂದು ಸ್ವಲ್ಪ ದಿನಗಳಲ್ಲಿಯೇ ಸಂಘಕ್ಕೆ ಸೇರಿಕೊಂಡರು. ಅವರು ತರಬೇತಿ ಪಡೆಯುತ್ತಿದ್ದ ಆರಂಭದ ದಿನಗಳಲ್ಲಿ ಖ್ಯಾತ ಮರಾಠಿ ಸಾಹಿತಿ ಪಿ. ಜಿ. ಸಹಸ್ರಬುದ್ಧೆ ಅವರ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದರು.

ಆರ್‌ಎಸ್‌ಎಸ್ ಕಾರ್ಯಕರ್ತರ ಬದ್ಧತೆಗೆ ಆಕರ್ಷಿತರಾಗಿ ಅವರ ಶಿಬಿರಗಳಲ್ಲಿ, ಪ್ರಚಲಿತ ವಿಷಯಗಳಾದ `ಬಂಡವಾಳಶಾಹಿ~, `ಸಮಾಜವಾದ~ ಹಾಗೂ `ಫ್ಯಾಸಿಸಂ~ (ಉಗ್ರ ಬಲಪಂಥೀಯ) ಕುರಿತಂತೆ  ಸಹಸ್ರಬುದ್ಧೆ ಅವರು ಉಪನ್ಯಾಸಗಳನ್ನು ನೀಡುತ್ತಿದ್ದರು.

ಹೀಗಿದ್ದೂ, ಈ ಪ್ರಯೋಗ ಶೀಘ್ರವೇ ನೆಲಕಚ್ಚಿತು. `ಆರ್‌ಎಸ್‌ಎಸ್ ನಾಯಕನಿಗೆ ಪೂರ್ಣ ನಿಷ್ಠೆ ಇರಬೇಕೆಂದು ಒತ್ತಾಯಿಸುತ್ತಾ ಎಲ್ಲಾ ಮುಕ್ತ ಚರ್ಚೆಗಳನ್ನೂ ಹತ್ತಿಕ್ಕುವ ವಾತಾವರಣದಲ್ಲಿ ಆ ವಿದ್ವಾಂಸರಿಗೆ ಉಸಿರುಕಟ್ಟುವಂತಾಗಿದ್ದು ಇದಕ್ಕೆ ಕಾರಣ~. ಸ್ವಲ್ಪವೇ ಸಮಯದಲ್ಲಿ ಆರ್‌ಎಸ್‌ಎಸ್ ನ ಬೌದ್ಧಿಕತೆ ವಿರೋಧಿ ವಾತಾವರಣದಿಂದ ಡಾ. ಸಹಸ್ರಬುದ್ಧೆ ಪೂರ್ಣ ಭ್ರಮನಿರಸನಗೊಂಡಿದ್ದರು.

ಶಾಖಾದಲ್ಲಿನ ಬದುಕಿನಲ್ಲಿ ಡ್ರಿಲ್‌ಗಳು, ಶಿಸ್ತಿನ ನಡಿಗೆಗಳು, ದೈಹಿಕ ಕಸರತ್ತುಗಳೇ ಪ್ರಧಾನವಾಗಿ ಆವರಿಸಿಕೊಂಡಿದ್ದವು. ಹೊಸದಾಗಿ ಪ್ರವೇಶಿಸಿದ ಇವರು ಬೆಳಗಿನ ಕಸರತ್ತುಗಳನ್ನು ಗ್ರಾಮೀಣ ಮಹಾರಾಷ್ಟ್ರದ ಪಾರಂಪರಿಕ ನೃತ್ಯಗಳೊಡನೆ ಹೋಲಿಕೆ ಮಾಡಿದರು. ಬೆಳಗಿನ ಕಸರತ್ತುಗಳೆಂದರೆ ಅವು ಬರೀ ಡ್ರಿಲ್ ರೀತಿ. ಆದರೆ ನೃತ್ಯವೆಂಬುದು ಪರವಶಗೊಳಿಸುವ ಅನುಭವ. ದೇಶಪಾಂಡೆ ಹೀಗೆ ನೆನಪಿಸಿಕೊಂಡಿದ್ದಾರೆ: `ಆರ್‌ಎಸ್‌ಎಸ್ ಲೇಝಿಮ್ (ದೈಹಿಕ ಕಸರತ್ತಿಗೂ ಬಳಕೆಯಾಗುವ ಮಹಾರಾಷ್ಟ್ರದ ಜನಪದ ನೃತ್ಯ) ಹೆಚ್ಚು ಯಾಂತ್ರಿಕವಾಗಿರುತ್ತಿತ್ತು. ಅದರಲ್ಲಿ ಕಸುವು ಇದ್ದರೂ ಅದರಲ್ಲಿ ಭಾವೋತ್ಕರ್ಷತೆ  ಇರುತ್ತಿರಲಿಲ್ಲ.~

`ಕ್ಯಾಂಪ್ ಲೈಫ್‌ನ ಮುಖ್ಯ ಅಂಶ~ವೆಂದರೆ, `ಶತ್ರು~ವಿನಿಂದ ಎರಗಲಿರುವ ದಾಳಿಯ ಸಾಧ್ಯತೆ ಬಗ್ಗೆ ರಾತ್ರಿಯ ನೀರವದಲ್ಲಿ ಮೊಳಗಿಸುವ ಎಚ್ಚರಿಕೆಯ ಗಂಟೆ. ಆಗ ಹಾಸಿಗೆಯಿಂದ ನೆಗೆದು ಎರಡು ನಿಮಿಷಗಳಲ್ಲಿ ಸಮವಸ್ತ್ರ ಧರಿಸಿ  ಪೆರೇಡ್ ಮೈದಾನಕ್ಕೆ ಓಡಬೇಕು. ಎಚ್ಚರಿಕೆ ಗಂಟೆಯ ಶಬ್ದ ನಿಜಕ್ಕೂ ಹೆದರಿಕೆ ಹುಟ್ಟಿಸುವಂತಿರುತ್ತಿತ್ತು. `ಎದ್ದೇಳಿ ಎದ್ದೇಳಿ ! ಇಡೀ ಶಿಬಿರಕ್ಕೆ ಬೆಂಕಿ ಬಿದ್ದಿದೆ~ ಎಂಬ ಮಾತು ಕಿವಿಯಲ್ಲೇ ಅರಚಿದಂತಾಗುತ್ತಿತ್ತು~ಎಂದು ದೇಶಪಾಂಡೆ ನೆನಪಿಸಿಕೊಂಡಿದ್ದಾರೆ.

 ವಿದೇಶಿಯರಿಂದ ಬಿಡುಗಡೆ ಪಡೆದುಕೊಳ್ಳಲು ಸೆಣಸುತ್ತಿರುವ ಕ್ರಾಂತಿಕಾರಿ ಸಂಘಟನೆ ಆರ್‌ಎಸ್‌ಎಸ್ ಎಂದು ದೇಶಪಾಂಡೆ ಅವರಿಗೆ ಹೇಳಲಾಗಿತ್ತು. ಹೀಗಾಗಿ, `1942ರಲ್ಲಿ `ಭಾರತ ತೊಲಗಿ~ ಚಳವಳಿ ಕಾವು ಪಡೆದುಕೊಂಡಾಗ ಆರ್‌ಎಸ್‌ಎಸ್ ನಿಷ್ಕ್ರಿಯ ಪ್ರೇಕ್ಷಕನಾಗಿಯೇ ಉಳಿದದ್ದು ಅಚ್ಚರಿ ಎನಿಸಿತ್ತು. ವಿದೇಶಿ ಆಳ್ವಿಕೆಯನ್ನು ಕಿತ್ತೊಗೆಯುವಷ್ಟು ಆರ್‌ಎಸ್‌ಎಸ್ ಆಗಲಿ ರಾಷ್ಟ್ರವಾಗಲಿ ಇನ್ನೂ ಬಲಗೊಂಡಿಲ್ಲ ಎಂಬ ನೆಲೆಯಲ್ಲಿ  ಈ ನಿಲುವನ್ನು ಸಿದ್ಧಾಂತ ಬೋಧಿಸುವ ತರಗತಿಯೊಂದರಲ್ಲಿ ಸಮರ್ಥಿಸಿಕೊಳ್ಳಲಾಗಿತ್ತು. ಗೋಲಿಬಾರ್‌ಗಳಲ್ಲಿ ಚೆಲ್ಲಿದ ರಕ್ತವೆಲ್ಲವೂ ವ್ಯರ್ಥ ಎಂದೂ ಈ ಭಾಷಣಕಾರರು ನಮಗೆ ಹೇಳಿದ್ದರು~ ಎಂದು ಬರೆದಿದ್ದಾರೆ.

 ಅನೇಕ ವರ್ಷಗಳ ನಂತರ ಸಂಘದಲ್ಲಿನ ತಮ್ಮ ದಿನಗಳ ಬಗ್ಗೆ ಹಿನ್ನೋಟ ಹರಿಸುತ್ತಾ ದೇಶಪಾಂಡೆ ಹೀಗೆ ತೀರ್ಮಾನ ಕೊಡುತ್ತಾರೆ: `ತನ್ನ ಅನುಯಾಯಿಗಳ ಮನಸ್ಸುಗಳಲ್ಲಿ ಏಕತೆ ಹಾಗೂ ಸೋದರತ್ವದ ಭಾವವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದದ್ದೇ ಆರ್‌ಎಸ್‌ಎಸ್‌ನ ಪ್ರಮುಖ ಸಾಧನೆ. ನಿಜ. ಇದು ಹಿಂದೂಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಮಹಾರಾಷ್ಟ್ರ ಮೂಲದ ಹೊರತಾಗಿಯೂ ಮಹಾರಾಷ್ಟ್ರ ದುರಭಿಮಾನದಿಂದ ಆರ್‌ಎಸ್‌ಎಸ್ ಹೊರತಾಗಿದೆ... ನಿಜ ಹೇಳಬೇಕೆಂದರೆ, ತಮಿಳರಾಗಿರಲಿ, ಬಂಗಾಳಿಗಳಾಗಿರಲಿ, ಮಹಾರಾಷ್ಟ್ರದವರಾಗಿರಲಿ ಅಥವಾ ಪಂಜಾಬಿಗಳಾಗಿರಲಿ ಅವರ ನಡುವಿನ ಸಹಜ ಸ್ನೇಹಭಾವಗಳೇ ಹೆಚ್ಚು ಹೃದಯಸ್ಪರ್ಶಿಯಾದದ್ದು.~

ಮತ್ತೊಂದು ನೆಲೆಯಲ್ಲಿ,`ಆರ್‌ಎಸ್‌ಎಸ್ ವಿಚಾರಧಾರೆಯಲ್ಲಿ ಎರಡನೇ ದರ್ಜೆ ಬೌದ್ಧಿಕತೆಗೂ ಅವಕಾಶವಿಲ್ಲ. ಸಿದ್ಧಾಂತ ತರಗತಿಗಳು ಎಂದು ತಪ್ಪಾಗಿ ಕರೆಯಲಾಗುವ ಸಭೆಗಳಲ್ಲಿ ಮಾಡಲಾಗುವ ಭಾಷಣಗಳಲ್ಲಿನ ಪೊಳ್ಳುತನಗಳಿಗೆ ಈ ಬೌದ್ಧಿಕತೆ ವಿರೋಧಿ ನಿಲುವು ಕಾರಣ~ ಎಂದು ಈ ಮಾಜಿ ಸದಸ್ಯ ನೆನಪಿಸಿಕೊಳ್ಳುತ್ತಾರೆ. ಒಂದು ವಿಚಾರ ಎಂದರೆ, `ಈ ಭಾಷಣಕಾರನನ್ನು ಆರ್‌ಎಸ್‌ಎಸ್ ಶ್ರೇಣೀಕೃತ ವ್ಯವಸ್ಥೆಯಲ್ಲಿ ಹೊಂದಿದ ಅಧಿಕಾರಕ್ಕಾಗಿಯಲ್ಲದೆ ಅವರಲ್ಲಿನ ಪಾಂಡಿತ್ಯಕ್ಕಾಗಿ ಆಯ್ಕೆ ಮಾಡುತ್ತಿರಲಿಲ್ಲ. ಅವರು ಬರೀ ಭಾವನಾತ್ಮಕವಾದ ಸವಕಲು ನುಡಿಗಳನ್ನೇ ಹೇಳಿದಾಗ ಕನಿಷ್ಠ ಅವರನ್ನು ಸಹಿಸಿಕೊಂಡಿರಬಹುದಿತ್ತು. ಆದರೆ ತಮ್ಮ ವಾದಗಳಿಗೆ ಸೈದ್ಧಾಂತಿಕ ಆಧಾರ ನೀಡ ತೊಡಗಿದ ಕ್ಷಣವೇ, ಅವರ ನಿಜ ವ್ಯಕ್ತಿತ್ವ ಬಯಲಾಗುತ್ತಿತ್ತು. `ಹಿಂದೂಸ್ತಾನ ಹಿಂದೂಗಳಿಗೆ ಸೇರಿದ್ದು~, `ಕೇಸರಿ ಧ್ವಜ ನಮ್ಮ ರಾಷ್ಟ್ರೀಯ ಧ್ವಜ~, `ಒಂದು ರಾಷ್ಟ್ರ, ಒಬ್ಬನೇ ನಾಯಕ~ ಇತ್ಯಾದಿ ಕ್ಲೀಷೆಗಳನ್ನು ಮತ್ತೆಮತ್ತೆ ಪುನರುಚ್ಚರಿಸುವುದು ವಾಕರಿಕೆ ತರಿಸುವಂತಿರುತ್ತಿತ್ತು.~

ಕೆಲವೊಮ್ಮೆ ಘೋಷಣೆಗಳೂ ಬಳಲಿಸುವಂಥ್ದ್ದದೇ ಎಂಬುದನ್ನು ಭಾಷಣಕಾರರೂ ಕಂಡುಕೊಂಡಿದ್ದರು. ಆಗ ಹಿಂದೂಗಳ ಹಿಂದಿನ  `ವೈಭವಪೂರ್ಣ~ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು ಅವರು. ಅಥವಾ ಪ್ರಜಾಸತ್ತಾತ್ಮಕ ರಾಜಕೀಯವನ್ನು ಲೇವಡಿ ಮಾಡುತ್ತಿದ್ದರು. ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ತಪ್ಪು ಹುಡುಕುತ್ತಿದ್ದರು. ಏಕೆಂದರೆ, ಬ್ರಿಟಿಷರು ಅದನ್ನು ಹುಟ್ಟು ಹಾಕಿದ್ದರು. ಜರ್ಮನರು ಮತ್ತು ಇಟಾಲಿಯನ್ನರ ಶಿಸ್ತನ್ನು ಕೊಂಡಾಡಲಾಗುತ್ತಿತ್ತು... ಇದನ್ನೆಲ್ಲಾ ಕೇಳುತ್ತಾ ಈ ಎಲ್ಲಾ ಪ್ರಕ್ರಿಯೆಯಲ್ಲಿ ಏನಾದರೂ ತಾರ್ಕಿಕವಾದದ್ದು ಅಥವಾ ಸ್ವಂತಿಕೆಯದ್ದು ಇದೆಯಾ ಎಂದು ವ್ಯರ್ಥವಾಗಿ ಎಸ್. ಎಚ್. ದೇಶಪಾಂಡೆ ಹುಡುಕಾಟ ನಡೆಸಿದರು.

`ಈ ಬೌದ್ಧಿಕ ದಾರಿದ್ರ್ಯದ ಒಟ್ಟಿಗೆ, ಯಾವುದೇ ಟೀಕೆ, ವಿಮರ್ಶೆಗಳಿಗೂ  ಅಸಹನೆ ತೋರುವುದನ್ನು ಆರ್‌ಎಸ್‌ಎಸ್ ಜೊತೆಯಾಗಿಸಿಕೊಂಡಿತು. ಆರ್‌ಎಸ್‌ಎಸ್ ತತ್ವವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಬರೆದ ಲೇಖನಗಳಿಗಾಗಿ ಕನಿಷ್ಠ ಮೂವರು ಮರಾಠಿ ಲೇಖಕರ ಮೇಲೆ ತಾವು ಸಂಘದಲ್ಲಿದ್ದ ದಿನಗಳಲ್ಲಿ ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು~ ಎಂಬುದನ್ನು ಈ ಅರ್ಥಶಾಸ್ತ್ರಜ್ಞರು ವಿಷಾದದಿಂದ ನೆನಪಿಸಿಕೊಂಡಿದ್ದಾರೆ.

ಒಟ್ಟಾರೆ ಹೇಳಬೇಕೆಂದರೆ, ಸಂಘ ಪರಿವಾರದ್ದು ಮುಚ್ಚಿದ ಮನಸ್ಸಾಗಿತ್ತು. ಆದರೆ ದೇಶಪಾಂಡೆ ಹೇಳುತ್ತಾರೆ: `ಮುಸ್ಲಿಮರಿಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ನ ಈ ಅಸಹನೆ ಇನ್ನೂ ತೀವ್ರವಾದ ಸ್ವರೂಪ ಹೊಂದಿತ್ತು. ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬನ ಮನದಲ್ಲಿ ಮುಸ್ಲಿಮನೊಬ್ಬನ ಚಿತ್ರ ಯಾವಾಗಲೂ ತೀವ್ರ ವಿಲಕ್ಷಣದ್ದಾಗಿರುತ್ತದೆ. ನನ್ನೊಬ್ಬ ಬುದ್ಧಿಜೀವಿ ಸ್ನೇಹಿತ ನನ್ನಂತೇ ಈಗ ಆರ್‌ಎಸ್‌ಎಸ್ ತೊರೆದಿದ್ದಾರೆ. ಮುಸಲ್ಮಾನರೂ ಕೂಡ ಸುಶಿಕ್ಷಿತರಾಗಿರಬಹುದು ಸುಸಂಸ್ಕೃತರಾಗಿರಬಹುದು ಮೃದುಭಾಷಿಯಾಗಿರಬಹುದು ಎಂಬುದನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಅವರಿನ್ನೂ  ಮುಸ್ಲಿಂ = ಕಠಾರಿ ಎಂಬಂತಹ ಸಮೀಕರಣದಿಂದ  ಹೊರಬರಲಿಕ್ಕಾಗಿಲ್ಲ~.

ಸಂಘ ಪರಿವಾರದ ಮೇಲೆ  ನಿಕಟವಾಗಿ ಸಂಶೋಧನೆ ಮಾಡಿ ಭಾರತೀಯ ಹಾಗೂ ಪಾಶ್ಚಿಮಾತ್ಯ ವಿದ್ವಾಂಸರು ಬರೆದ ಪುಸ್ತಕಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊರಬಂದಿವೆ. ಆದರೆ  ನನಗನಿಸಿದಂತೆ ಆರ್‌ಎಸ್‌ಎಸ್ ಕುರಿತ ಅತ್ಯುತ್ತಮ ಪುಸ್ತಕ ಎಂದರೆ ಡಿ.ಆರ್. ಗೋಯಲ್ ಅವರು ಬರೆದಿರುವುದು. ಗೋಯಲ್ ಅವರೂ ಎಸ್. ಎಚ್. ದೇಶಪಾಂಡೆಯವರಂತೆ ಒಂದಾನೊಂದು ಕಾಲದಲ್ಲಿ ಕಟ್ಟಾ ಸ್ವಯಂಸೇವಕರಾಗಿದ್ದು ನಂತರ ಸಂಘ ತೊರೆದವರು. ಸ್ಪಷ್ಟ ಖಚಿತತೆಯ ಈ ಭಾಗದಲ್ಲಿ ಗೋಯಲ್ ಅವರು ಸಂಘದ ಸಿದ್ಧಾಂತಗಳ ತಾತ್ಪರ್ಯವನ್ನು ಒಟ್ಟಾರೆಯಾಗಿ ಹೀಗೆ ಬಿಡಿಸಿಟ್ಟಿದ್ದಾರೆ:

`ಅನಾದಿ ಕಾಲದಿಂದ ಹಿಂದೂಗಳು ಭಾರತದಲ್ಲಿದ್ದಾರೆ. ಹಿಂದೂಗಳೇ ರಾಷ್ಟ್ರ. ಏಕೆಂದರೆ ಎಲ್ಲಾ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕನ್ನು ಕೊಡುಗೆಯಾಗಿ ನೀಡಿರುವುದು ಅವರೇ. ಹಿಂದೂಯೇತರರು ಆಕ್ರಮಣಕಾರರು ಅಥವಾ ಅತಿಥಿಗಳು. ಅವರುಗಳು ಹಿಂದೂ ಸಂಪ್ರದಾಯಗಳನ್ನು ಅಥವಾ ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಅವರನ್ನು ಸಮಾನವಾಗಿ ಪರಿಗಣಿಸಲಾಗದು ಇತ್ಯಾದಿ...; ಈ ಪರಕೀಯರ ಆಕ್ರಮಣಗಳ ವಿರುದ್ಧ  ತಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಸಂರಕ್ಷಣೆಗಳಿಗಾಗಿ ಹಿಂದೂಗಳು ನಡೆಸಿದ ಹೋರಾಟದ ಇತಿಹಾಸ ಭಾರತದ ಇತಿಹಾಸ. ಈ ಬೆದರಿಕೆ ಈಗಲೂ ಮುಂದುವರಿದಿದೆ. ಏಕೆಂದರೆ ಈ ರಾಷ್ಟ್ರವನ್ನು ಹಿಂದೂ ರಾಷ್ಟ್ರವಾಗಿ ನಂಬದವರ ಕೈಗಳಲ್ಲಿ ಅಧಿಕಾರಸೂತ್ರವಿದೆ. ರಾಷ್ಟ್ರೀಯ ಏಕತೆ ಎಂಬುದು ಈ ರಾಷ್ಟ್ರದಲ್ಲಿ ಬದುಕುವವರೆಲ್ಲರ ಏಕತೆ ಎಂದು ಮಾತನಾಡುವವರು ಅಲ್ಪಸಂಖ್ಯಾತ ಮತಗಳನ್ನು ತಮ್ಮದಾಗಿಸಿಕೊಳ್ಳುವ ಸ್ವಾರ್ಥದ ಗುರಿ ಹೊಂದಿದವರು.

ಹೀಗಾಗಿಯೇ ಅವರು ದ್ರೋಹಿಗಳು. ಹಿಂದೂಗಳ ಏಕತೆ ಹಾಗೂ ಒಟ್ಟಾಗಿಸುವಿಕೆ ಈಗಿನ ಸದ್ಯದ ಅಗತ್ಯ. ಏಕೆಂದರೆ ಎಲ್ಲ ಕಡೆಯಿಂದಲೂ ಹಿಂದೂಗಳಿಗೆ ಶತ್ರುಗಳು ಆವರಿಸಿಕೊಂಡಿದ್ದಾರೆ. ಬೃಹತ್ ಪ್ರತಿಕ್ರಿಯೆಗೆ ಹಿಂದೂಗಳು ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆಕ್ರಮಣ ಎಂಬುದೇ ದೊಡ್ಡ ರಕ್ಷಣೆ. ಏಕತೆಯ ಕೊರತೆ ಹಿಂದೂಗಳ ಎಲ್ಲಾ ತೊಂದರೆಗಳ ಮೂಲ ಕಾರಣ. ಆ ಏಕತೆಯನ್ನು ಮರಳಿ ತರುವ ದೈವಿಕ ರಾಯಭಾರಕ್ಕಾಗಿ ಸಂಘ ಹುಟ್ಟು ಪಡೆದಿದೆ.~

ಡಿ.ಆರ್. ಗೋಯಲ್ ಅವರು ಮತ್ತೂ ಹೇಳುತ್ತಾರೆ: `ಅದರ ಅಸ್ತಿತ್ವದ ಈ 74 ವರ್ಷಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳಲ್ಲಿ ಇದಕ್ಕಿಂತ ಹೆಚ್ಚಿನದನ್ನು ಏನೂ ಹೇಳಿಲ್ಲ ಎಂಬುದನ್ನು ಯಾವುದೇ ವೈರುಧ್ಯದ ಭೀತಿ ಇಲ್ಲದೆ ಈಗಲೂ ಹೇಳಬಹುದು~. ಗೋಯಲ್ ಅವರು  ಇದನ್ನು ಬರೆದದ್ದು 1999ರಲ್ಲಿ. ಆದರೆ ಕಳೆದ 13 ವರ್ಷಗಳಲ್ಲಿ ಆ `ಶಾಖಾ~ಗಳಲ್ಲಿ ಈಗಲೂ ಹೆಚ್ಚಿನದನ್ನು ಹೇಳುತ್ತಿಲ್ಲ.

 (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT