ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಎಲ್ಲರಿಗಾಗಿ

Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅವೆರಡು ಅಪಮಾನಗಳೂ ಬೇರೆಯೇ. ಗಾಂಧಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ರೈಲಿನಿಂದ ಬಿಸಾಡಿದರು. ಅದು ಪರದೇಶದಲ್ಲಿ, ಪರಕೀಯರಿಂದಾದ ಅಪಮಾನ. ಆದರೆ ಇದಕ್ಕಿಂತ ದಾರುಣವಾದದ್ದು ಅಂಬೇಡ್ಕರ್‌ಗೆ ಸ್ವಂತ ನೆಲದಲ್ಲಿ, ಸವರ್ಣೀಯರಿಂದ ಆದದ್ದು. ತನ್ನವರಿಂದಲೇ ಆಗುವ ಅಪಮಾನ ಭಯಾನಕ.

ಆಗಿನ್ನೂ ಅವರಿಗೆ ಪ್ರೌಢಶಾಲೆಯ ಹಂತ. ಗೋರೆಗಾಂವ್‌ಗೆ ಹೊರಟವನನ್ನು ದಲಿತನೆಂದು ತಿಳಿದ ಕೂಡಲೇ ಗಾಡಿಗೂ, ಎತ್ತುಗಳಿಗೂ ಮೈಲಿಗೆಯಾಯಿತೆಂದು, ಅವಾಚ್ಯವಾಗಿ ನಿಂದಿಸಿ ಎಳೆದು ಬಿಸಾಡುತ್ತಾರೆ. ಅಲ್ಲಿಂದ ಅಪಮಾನಗಳ ಸುರಿಮಳೆ. ಕುಡಿಯಲು ನೀರು ಕೇಳಿದರೆ ಕೊಚ್ಚೆ ಗುಂಡಿ ತೋರುತ್ತಾರೆ. ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದಿದ್ದಕ್ಕೆ ಬೆನ್ನ ತುಂಬಾ ಬಾಸುಂಡೆ. ಮುಟ್ಟಿಸಿಕೊಳ್ಳದ ಕ್ಷೌರಿಕರು. ತರಗತಿಯಲ್ಲೂ ಪ್ರತ್ಯೇಕವಾಗಿ ಕೂರಿಸುವ ಶಿಕ್ಷಕ. ಮುಟ್ಟಿಯಾನೆಂದು ಹೆದರಿ ಊಟದ ಡಬ್ಬಿಯನ್ನು ಮುಚ್ಚಿಡುವ ಸಹಪಾಠಿಗಳು. ಸಂಸ್ಕೃತ ಕಲಿಕೆಗೆ ನಕಾರ.

ಇದೆಲ್ಲ ಬಾಲ್ಯದ ಮಾತಾಯಿತು. ಕಾಲೇಜು ಅಧ್ಯಾಪಕನಾದ ಮೇಲೂ ಕ್ಯಾಂಟೀನಿನ ಬ್ರಾಹ್ಮಣ ಮಾಲೀಕ ಟೀ ಕೊಡಲು ತಿರಸ್ಕರಿಸುತ್ತಾನೆ. ವಿದೇಶ ವ್ಯಾಸಂಗ ಮುಗಿಸಿ ಬಂದು ಬರೋಡ ರಾಜರ ಮಿಲಿಟರಿ ಕಾರ್ಯದರ್ಶಿಯಾಗಿದ್ದರೂ ನೀನು ಹಿಂದೂ ಇರಬಹುದು; ಆದರೆ ದಲಿತ ಎಂದು ಪಾರ್ಸಿ ಹೋಟೆಲ್‌ನಿಂದ ಹೊರ ಹಾಕುತ್ತಾರೆ. ಆಶ್ರಯ ಕೊಡುತ್ತೇನೆಂದ ಮೇಲ್ಜಾತಿಯ ಪ್ರೊಫೆಸರ್, ಹೆಂಡತಿಯ ಮಾತಿಗೆ ಹೆದರಿ ಬಾಗಿಲು ಬಂದ್ ಮಾಡುತ್ತಾನೆ. ಊರಾಚೆಯ ಮರದ ಕೆಳಗೆ ಕುಳಿತು ಅಳುತ್ತಾರೆ ಅಂಬೇಡ್ಕರ್.

ಕಠೋರ ಜಾತಿ ವ್ಯವಸ್ಥೆ ಎದುರು ಬರೋಡ ರಾಜರೂ ಅಸಹಾಯಕರಾಗುತ್ತಾರೆ. ಅಂಗಡಿ ತೆರೆದರೆ ಕಕ್ಷಿದಾರರು ಬರದಂತೆ ನೋಡಿಕೊಳ್ಳುತ್ತಾರೆ. ಸುಸಂಸ್ಕೃತರಾದ ಉಪನ್ಯಾಸಕರು ಕಾಲೇಜಿನಲ್ಲಿ ಎಲ್ಲರಿಗಾಗಿ ಇರಿಸಿದ್ದ ನೀರು ಕುಡಿದಿದ್ದಕ್ಕೆ ಮೈಲಿಗೆಯಾಯಿತೆಂದು ರಾದ್ಧಾಂತ ಎಬ್ಬಿಸುತ್ತಾರೆ.

ಹೀಗೆ ಅಪಮಾನಿಸುವವರು ಬ್ರಾಹ್ಮಣರು ಮಾತ್ರವಲ್ಲ. ಎಲ್ಲ ದಲಿತೇತರ ಸವರ್ಣೀಯರು; ಮುಸ್ಲಿಮರೂ. ಇದೆಲ್ಲ ಪುರಾಣ, ಜನಪದಗಳಿಂದ ಹೆಕ್ಕಿದ ಕಲ್ಪಿತ ಕತೆಗಳಲ್ಲ. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಪ್ರತಿಭಾವಂತ ದಲಿತನೊಬ್ಬ ಅನುಭವಿಸಿದ ದಾರುಣ ವಾಸ್ತವ. ಕೆರೆ, ಬಾವಿಗಳ ನೀರು ಮುಟ್ಟುವಂತಿಲ್ಲ. ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಪ್ರವೇಶವಿಲ್ಲ. ಪ್ರತಿಭಟಿಸುವುದೊಂದೇ ಉಳಿದ ದಾರಿ.

೧೯೨೭ರ ಡಿಸೆಂಬರ್ ೨೫ ರಂದು ಅಂಬೇಡ್ಕರ್ ಕರೆಯಂತೆ ಮನುಸ್ಮೃತಿಯ ಪ್ರತಿಯೊಂದನ್ನು, ಅದರಲ್ಲಿ ಹಲವು ಉತ್ತಮ ಅಂಶಗಳಿದ್ದರೂ ಸುಡಲಾಗುತ್ತದೆ. ವೇದಗಳನ್ನು ಓದಿದ ಶೂದ್ರರ ಕಿವಿಯಲ್ಲಿ ಕಾದ ಸೀಸವನ್ನು ಸುರಿಯಲು ಹೇಳುವ ‘ಮನುಸ್ಮೃತಿ’ ಜಾತಿ ವ್ಯವಸ್ಥೆಯ ತಳಪಾಯ. ಅದನ್ನು ಅನುಕೂಲಕ್ಕೆ ತಕ್ಕಂತೆ ವೈದಿಕರು ಬದಲಿಸಿಕೊಳ್ಳುತ್ತಾ ಬಂದಿದ್ದಾರೆ. ಮನುಸ್ಮೃತಿ ಪ್ರಕಾರ ರಸಾಯನಿಕ, ದ್ರವ ಪದಾರ್ಥ, ಬಣ್ಣದ ಬಟ್ಟೆ, ಹೂಗಳು, ಸುಗಂಧವಸ್ತುಗಳು ಮತ್ತು ಶಸ್ತ್ರಾಸ್ತ್ರಗಳ ವ್ಯಾಪಾರದಲ್ಲಿ ಬ್ರಾಹ್ಮಣರು ತೊಡಗಬಾರದೆಂಬ ಕಟ್ಟಪ್ಪಣೆ ಇದೆ.

ಸ್ವಾತಂತ್ರ್ಯಪ್ರೇಮಿಗಳಾಗಿದ್ದರೂ ಆಳದಲ್ಲಿ ಚಾತುರ್ವರ್ಣವನ್ನು ಆರಾಧಿಸುತ್ತಿದ್ದ ಬಾಲಗಂಗಾಧರ ತಿಲಕರು, ಬಟ್ಟೆಮಿಲ್ ಸ್ಥಾಪಿಸಲು ನೆರವಾಗುವುದನ್ನು ಅಂಬೇಡ್ಕರ್ ಖಂಡಿಸುತ್ತಾರೆ. ಅಂಬೇಡ್ಕರ್ ಮತ್ತು ಗಾಂಧಿ ನಡುವಿನ ೧೯೩೧ರ ಮುಖಾಮುಖಿ ಭಾರತದ ಶಾಶ್ವತ ಬಿಕ್ಕಟ್ಟಿನಂತೆ ತೋರುತ್ತದೆ. ಇಬ್ಬರ ಗುರಿಗಳೂ ಒಂದೇ. ದಾರಿಗಳು ಬೇರೆ ಬೇರೆ. ಸಮಾನಾಂತರ ರೇಖೆಗಳಂತೆ ಸಾಗುತ್ತಾರೆ. ಇಬ್ಬರದೂ ಅಖಂಡ ಬದ್ಧತೆ. ಇಬ್ಬರೂ ಹಟಮಾರಿಗಳು. ವರ್ಣಾಶ್ರಮ ಧರ್ಮದಲ್ಲಿ ಅಸ್ಪೃಶ್ಯತೆಗೆ ಸಮರ್ಥನೆ ಇಲ್ಲ.

ಎಲ್ಲರೂ ಸೇರಿ ಅದನ್ನು ಉಚ್ಛಾಟನೆ ಮಾಡೋಣ. ಅಸ್ಪೃಶ್ಯರು ಹಿಂದೂ ಸಮಾಜದ ಭಾಗ. ದೇವಾಲಯಗಳಿಗೆ ಪ್ರವೇಶ ಕೊಡಿಸೋಣ. ಬ್ರಾಹ್ಮಣ-ಭಂಗಿ ಇಬ್ಬರೂ ಒಂದೇ. ವರ್ಣಾಶ್ರಮ ಧರ್ಮವನ್ನೇ ಬೇರು ಸಹಿತ ನಾಶಮಾಡೋದು ನನಗೆ ಒಪ್ಪಿಗೆ ಇಲ್ಲ. ಏಕೆಂದರೆ ಅದರಲ್ಲಿ ನಾನು ವಿಶ್ವಾಸ ಹೊಂದಿದ್ದೇನೆ. ಆದರೆ ಅದು ಶುದ್ಧೀಕರಣಗೊಳ್ಳಬೇಕು. ಮೊದಲ ಆದ್ಯತೆಯಾಗಿ ರಾಜಕೀಯ ಸ್ವಾತಂತ್ರ್ಯ ಪಡೆಯೋಣ. ಧಾರ್ಮಿಕ, ಸಾಮಾಜಿಕ ಸಂಗತಿಗಳನ್ನು ಇದರೊಂದಿಗೆ ತಳುಕು ಹಾಕಬಾರದು. ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ, ಅಸ್ಪೃಶ್ಯತಾ ನಿರ್ಮೂಲನೆಯನ್ನು ಕಾರ್ಯಕ್ರಮದ ಪಟ್ಟಿಯಲ್ಲಿ ಸೇರಿಸಲು ನಾನು ಹೆಣಗಿದ್ದೇನೆ. ಇದಕ್ಕಾಗಿ ಕಾಂಗ್ರೆಸ್ ಇಪ್ಪತ್ತು ಲಕ್ಷ ರೂಪಾಯಿ ಖರ್ಚು ಮಾಡಿದೆ.

ಇಷ್ಟಾಗಿಯೂ ನೀವು ನನ್ನನ್ನು ಮತ್ತು ಕಾಂಗ್ರೆಸ್‌ ಅನ್ನು ಕಠೋರವಾಗಿ ವಿರೋಧಿಸುವುದೇಕೆ? ಇದು ಗಾಂಧಿಯ ಪ್ರಶ್ನೆ. ಅಂಬೇಡ್ಕರ್ ಉತ್ತರ ಹರಿತ. ಕಾಂಗ್ರೆಸ್ ಅಪ್ರಾಮಾಣಿಕ. ಇಪ್ಪತ್ತು ಲಕ್ಷದಲ್ಲಿ ಸವರ್ಣೀಯರಲ್ಲಿ ಜಾಗೃತಿ ಮೂಡಿಸಬಹುದಿತ್ತು. ನಿಮ್ಮ ನಾಯಕರು ವಾರಕ್ಕೊಮ್ಮೆ ಅಸ್ಪೃಶ್ಯರ ಜೊತೆ ಊಟ ಮಾಡಬಹುದಿತ್ತು. ನಿಮಗೆ ತತ್ವ ಬೇಕಿಲ್ಲ; ಶಕ್ತಿ ಬೇಕಾಗಿದೆ. ನಾನು ಹಿಂದೂಗಳನ್ನೂ, ಕಾಂಗ್ರೆಸ್‌ ಅನ್ನೂ ನಂಬಲಾರೆ. ನೀವು ಪ್ರವೇಶ ಕೊಡಿಸಿರುವ ಮಂದಿರಗಳಿಗೆ ನಾಯಿಗಳೂ ಪ್ರವೇಶಿಸಲಾರವು. ನಾವು ಪ್ರಾಣಿಗಳಿಗಿಂತ ಕಡೆ.

ಬ್ರಿಟಿಷರು ನಮ್ಮ ಶತ್ರುಗಳಿರಬಹುದು. ಆದರೆ ಅವರು ವೈದಿಕರಿಗಿಂತ, ಕಾಂಗ್ರೆಸ್‌ಗಿಂತ ವಾಸಿ. ಮುಸ್ಲಿಂ, ಸಿಖ್ಖರಂತೆ ಅಸ್ಪೃಶ್ಯರೂ ಒಂದು ಭಿನ್ನ ಘಟಕ. ಅಸ್ಪೃಶ್ಯರಿಗೆ ಈ ದೇಶ ಮಾಡಿರುವ ಶತಶತಮಾನಗಳ ಅಪಮಾನದ ಹಿನ್ನೆಲೆಯಲ್ಲಿ ನಾವು ದೇಶದ್ರೋಹಿಗಳಾದರೂ ತಪ್ಪಿಲ್ಲ. ನೀವು ಬ್ರಾಹ್ಮಣರಿಗೆ ಹೆದರುತ್ತೀರಿ. ಅವರು ನಿಮ್ಮನ್ನು ನಿಯಂತ್ರಿಸ್ತಾರೆ. ಅವರು ಒಪ್ಪಿದ್ದು ನಿಮಗೆ ಪ್ರಾಮಾಣ್ಯ. ಅವರ ಹಿತ ಕಾಪಾಡುವವರೆಗೂ ನಿಮ್ಮ ಮಹಾತ್ಮ ಪಟ್ಟಕ್ಕೆ ಧಕ್ಕೆ ಇಲ್ಲ. ನಿಮ್ಮ ಒಳಮನಸ್ಸು ಪುಕ್ಕಲು. ಬ್ರಾಹ್ಮಣರ ಹಿತಕ್ಕೆ ನೀವು ಧಕ್ಕೆ ತಂದ ಕ್ಷಣ ನಿಮ್ಮ ಮಹಾತ್ಮ ಪಟ್ಟ ಏನಾಗುತ್ತೆ ಎಂದು ನನಗೆ ಗೊತ್ತು. ಮಹಾತ್ಮರುಗಳಿರುವುದು ದೂಳೆಬ್ಬಿಸುವುದಕ್ಕೆ. ಅದರಿಂದ ಶೋಷಿತ ಸಮುದಾಯದ ಸ್ಥಿತಿ ಬದಲಾಗುವುದಿಲ್ಲ ಎನ್ನುತ್ತಾರೆ. ಅಂಬೇಡ್ಕರ್ ಗಾಂಧಿಗಿಂತ ಇಪ್ಪತ್ತೆರಡು ವರ್ಷ ಚಿಕ್ಕವರು. ಗಾಂಧಿ, ಮೊದಲು ಇವನಾರೋ ಶೂದ್ರರ ಉದ್ಧಾರಕ್ಕೆ ಹೊರಟ ಬ್ರಾಹ್ಮಣರ ಹುಡುಗನಿರಬೇಕು ಎಂದುಕೊಳ್ಳುತ್ತಾರೆ.

ಅಂಬೇಡ್ಕರ್ ಭಾವೋದ್ರೇಕದಿಂದ ಗದ್ಗದಿತರಾಗಿ ನನಗೆ ತಾಯ್ನಾಡು ಎಂಬುದೇ ಇಲ್ಲ ಎಂದಾಗ, ಇದು ನಮ್ಮೆಲ್ಲರ ತಾಯ್ನಾಡು, ನಾನು ಅಸ್ಪೃಶ್ಯತೆಯ ಬಗ್ಗೆ ಯೋಚಿಸಲು ಶುರು ಮಾಡಿದಾಗ ನೀವಿನ್ನೂ ಹುಟ್ಟಿಯೇ ಇರಲಿಲ್ಲ ; ಹಿಂದೂಗಳಿಂದ ಅಸ್ಪೃಶ್ಯರನ್ನು ರಾಜಕೀಯವಾಗಿ ಪ್ರತ್ಯೇಕಿಸುವುದಕ್ಕೆ ನನ್ನ ಕಡುವಿರೋಧವಿದೆ; ಅದು ಇಬ್ಬರಿಗೂ ಆತ್ಮಹತ್ಯಾತ್ಮಕ ನಿಲುವಾಗುತ್ತದೆ ಎನ್ನುತ್ತಾರೆ. ಮತ್ತೊಮ್ಮೆ ಪುಣೆಯಲ್ಲಿ ಮಾವಿನಮರದ ಕೆಳಗೆ ಕುಳಿತ ಗಾಂಧಿ -ಅಂಬೇಡ್ಕರ್ ನಡುವಿನ ಚುಟುಕು ಸಂವಾದ ಗಾಂಧಿಯವರ ಸಂಕಟವನ್ನು ತೆರೆದಿಡುತ್ತದೆ. ನಾನು ಅಸ್ಪೃಶ್ಯ ನಿರ್ಮೂಲನವನ್ನು ಬೆಂಬಲಿಸಿ ಅತ್ತ ಸನಾತನವಾದಿಗಳಿಗೆ ರಾಕ್ಷಸನಂತೆ ಕಂಡೆ. ಇತ್ತ ಅಸ್ಪೃಶ್ಯರೂ ನನ್ನ ನಿಷ್ಠೆಯನ್ನು ನಂಬಲಿಲ್ಲ ಎನ್ನುತ್ತಾರೆ. ಅಂಬೇಡ್ಕರ್ ಮೌನವಾಗುತ್ತಾರೆ.

ಅಂಬೇಡ್ಕರ್ ಸದಾ ಎತ್ತುತ್ತಿದ್ದ ಮಾರ್ಮಿಕ ಪ್ರಶ್ನೆ: ನೂರೈವತ್ತು ವರ್ಷ ಆಳಿದ, ಗುಲಾಮಗಿರಿ ಹೇರಿದ, ಬ್ರಿಟಿಷರನ್ನು ‘ಭಾರತ ಬಿಟ್ಟು ತೊಲಗಿ’ ಎಂದು ಕನಲಿ ಹೇಳುವುದಾದರೆ, ಐದು ಸಾವಿರ ವರ್ಷಗಳಿಂದ ಗುಲಾಮರಂತೆ ನಡೆಸಿಕೊಂಡ ಹಿಂದೂ ಸವರ್ಣೀಯರನ್ನು ಯಾವ ಕಟುವಾದ ಮಾತುಗಳಿಂದ ಚುಚ್ಚಬೇಕು?

ಅಂಬೇಡ್ಕರ್ ಚಿಂತನೆಯನ್ನು ರೂಪಿಸಿದ್ದು ಅವರ ಅಪಮಾನಗಳೇ ಆದರೂ ಅದಕ್ಕೆ ಹಲವಾರು ಪೂರಕ ಚಾರಿತ್ರಿಕ ಸಂಗತಿಗಳಿವೆ. ಜಾತಿವಿನಾಶ ಚಳವಳಿಯು ಬಸವಣ್ಣನ ನಾಯಕತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿಯೇ ಆಗಿಹೋಗಿತ್ತು. ಹದಿನಾಲ್ಕನೇ ಶತಮಾನದ ಸಂತ ಕಬೀರರ ಪ್ರಭಾವ ಅಂಬೇಡ್ಕರ್ ಅವರ ಮೇಲೆ ಆಗಿತ್ತು. ಮಹಾರಾಷ್ಟ್ರದ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿಬಾ ಪುಲೆ ಅವರಿಂದ ಹತ್ತೊಂಬತ್ತನೆ ಶತಮಾನದಲ್ಲಿ ದೊಡ್ಡ ಕ್ರಾಂತಿ ಸಂಭವಿಸಿತ್ತು. ಶೂದ್ರರಿಗೆ, ಹೆಂಗಸರಿಗೆ ಶಿಕ್ಷಣ ನೀಡಿದ ತಪ್ಪಿಗೆ ಸವರ್ಣೀಯರು ಸಾವಿತ್ರಿಬಾ ಪುಲೆ ಅವರಿಗೆ ಕಲ್ಲು, ಸಗಣಿಯಲ್ಲಿ ಹೊಡೆದಿದ್ದರು.

ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಓದಲು ಅಂಬೇಡ್ಕರ್‌ಗೆ ಸಹಾಯ ಮಾಡಿದವರು ಬರೋಡಾ ರಾಜರು. ಅಮೆರಿಕದಲ್ಲಿ ಕಪ್ಪು ಜನರ ಸ್ವಾತಂತ್ರ್ಯದ ಅಭೀಪ್ಸೆಗಳು ಅಂಬೇಡ್ಕರ್‌ಗೆ ಹೊಸ ದಿಕ್ಕು ತೋರಿದ್ದವು. ಅವರು ಭಾಗವಹಿಸಿದ ಸಮಾವೇಶ, ಮಂಡಿಸಿದ ಭಾಷಣ, ಬರೆದ ಪುಸ್ತಕಗಳು ಅಸಂಖ್ಯ. ಅವರೊಬ್ಬ ಬಹುದೊಡ್ಡ ಸಂಘಟಕರಾಗಿದ್ದರು. ಅಂಬೇಡ್ಕರ್ ಬಗ್ಗೆ ಟೀಕೆಗಳೂ ಇದ್ದವು. ಅವರನ್ನು ಬ್ರಿಟಿಷರ ಏಜೆಂಟು, ಹುಲ್ಲಿನ ಜತೆ ಬಂದ ಹಾವು, ನಿಷ್ಠಾವಂತ ಶೂದ್ರ ನಾಯಕರನ್ನು ಕೇವಲ ಕಾಂಗ್ರೆಸ್‌ನವರು ಎನ್ನುವ ಒಂದೇ ಕಾರಣಕ್ಕೆ ದೂರ ಇಟ್ಟ, ಲಿಬರಲ್ ಧೋರಣೆಯ ಸವರ್ಣೀಯರನ್ನೂ ಒಳಗೊಳ್ಳದ ಸ್ವಕೇಂದ್ರಿತ ವ್ಯಕ್ತಿ ಎಂದು ದೂರಲಾಗಿತ್ತು.

ಬಹುಮುಖ್ಯವಾದ ಆರೋಪವೆಂದರೆ ಅಂಬೇಡ್ಕರ್, ಭಾರತದ ಮೂಲನಿವಾಸಿ, ಬುಡಕಟ್ಟು, ಅಲೆಮಾರಿ ಜನಾಂಗಗಳನ್ನು ತಮ್ಮ ಹೋರಾಟದ ವ್ಯಾಪ್ತಿಯ ಆಚೆಗೆ ಇರಿಸಿದ್ದಾರೆಂದು ಠಕ್ಕರ್ ಬಾಪಾ ಖಂಡಿಸುತ್ತಿದ್ದುದು. ಅವರಿಗಿನ್ನೂ ರಾಜಕೀಯ ಪ್ರಜ್ಞೆ ಬೆಳೆದಿಲ್ಲವೆಂಬ ಸಮರ್ಥನೆಯನ್ನು ಅಂಬೇಡ್ಕರ್ ನೀಡಿದರೂ ಅದೊಂದು ಗಂಭೀರ ಆರೋಪವಾಗಿ ಅಂಬೇಡ್ಕರ್ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿತು. ಭಾರತದ ಶೂದ್ರರ ಚಳವಳಿಯನ್ನು ಬರಿಯ ಮಹಾರ್‌ಗಳ ಚಳವಳಿಯಾಗಿಸಿದರೆಂಬುದು ಮತ್ತೊಂದು ಆರೋಪ. ಯಾವ ಪಟ್ಟುಗಳನ್ನು ಬಳಸಿ ಅಂಬೇಡ್ಕರ್ ವಾದಿಸುತ್ತಿದ್ದರೋ ಅದೇ ಪಟ್ಟುಗಳನ್ನು ಬಳಸಿ ಅಂಬೇಡ್ಕರ್ ಅವರ ದೋಷವನ್ನು ಹೇಳಲಾಯಿತು.

ಈಗ ನಮ್ಮ ಸುತ್ತ ಏನಾಗುತ್ತಿದೆ ಎಂದು ನಾವೆಲ್ಲ ನೋಡುತ್ತಿದ್ದೇವೆ. ಕುಪ್ಪೇಗಾಲದ ಸರ್ಕಾರಿ ಶಾಲೆಯಲ್ಲಿ ದಲಿತ ಮಾಡಿದ ಅಡುಗೆ ತಿನ್ನದಂತೆ ಸವರ್ಣೀಯ ಮಕ್ಕಳಿಗೆ ಸೂಚಿಸಲಾಗಿದೆ. ಇದು, ದಲಿತ ಶಿಕ್ಷಕ ಹೇಳಿದ ಪಾಠ ಕೇಳಬಾರದು, ಕ್ರೈಸ್ತ ವೈದ್ಯನ ಬಳಿ ಚಿಕಿತ್ಸೆ ಪಡೆಯಬಾರದು, ಮುಸ್ಲಿಂ ಚಾಲಕನ ಬಸ್ಸಿನಲ್ಲಿ ಕೂರಬಾರದು ಎನ್ನುವಷ್ಟೇ ಹಾಸ್ಯಾಸ್ಪದ. ಮೇಲುಜಾತಿಯ ಅಹಂಕಾರ ಎಲ್ಲಿಗೆ ಮುಟ್ಟುತ್ತಿದೆ ಗಮನಿಸಿ. ಸನಾತನಗಳಿರಲಿ, ಮಡೆಸ್ನಾನವನ್ನು ಗುಪ್ತವಾಗಿ ಆರಾಧಿಸುವ, ಅದನ್ನು ತಾಯ್ತನದ, ರಸಾಯನಿಕ ಕ್ರಿಯೆ ಎಂದು ಬಣ್ಣಿಸುವ ಲೇಖಕ- ಲೇಖಕಿಯರಿದ್ದಾರೆ.

ಅವರವರ ಮನೆಗಳಲ್ಲಿ ಯಾರು ಯಾತರ ಮೇಲಾದರೂ ಹೊರಳಾಡಿಕೊಳ್ಳಲಿ, ಸಾರ್ವಜನಿಕವಾಗಿ ಹಾಗೆ ಆಚರಿಸುವುದು ಅಮಾನವೀಯ. ರಾಜಕಾರಣಿಗಳತ್ತ ನೋಡಿ. ಕೇಂದ್ರ ಸಚಿವೆ ಸಾಧ್ವಿ ಶಿರೋಮಣಿಯೊಬ್ಬರು ರಾಮನ ಮಕ್ಕಳು, ಹಾದರದ ಮಕ್ಕಳು ಎಂದು ವಿಭಜಿಸಿ ಮಾತನಾಡುತ್ತಾರೆ. ಹದಿನಾಲ್ಕು ವರ್ಷಗಳ ಹಿಂದೆ ಏಳು ಜನ ದಲಿತರನ್ನು ಕಂಬಾಲಪಲ್ಲಿಯಲ್ಲಿ ಜೀವಂತವಾಗಿ ಸುಟ್ಟ ರೆಡ್ಡಿಒಕ್ಕಲಿಗ ಸಮುದಾಯಕ್ಕೆ ಸೇರಿದ ಎಲ್ಲ ಹಂತಕರೂ ದೋಷಮುಕ್ತರಾಗಿ ಹೊರಬರುತ್ತಾರೆ.

ಉತ್ತರಪ್ರದೇಶದ ಬದೌನ್ ಜಿಲ್ಲೆಯ ಗ್ರಾಮ ಒಂದರಲ್ಲಿ ಬಹಿರ್ದೆಸೆಗೆ ಹೋದ ಇಬ್ಬರು ದಲಿತ ಹೆಣ್ಣುಮಕ್ಕಳನ್ನು ಮೇಲುಜಾತಿಯವರು ಅತ್ಯಾಚಾರವೆಸಗಿ ಮರಕ್ಕೆ ನೇಣು ಹಾಕುತ್ತಾರೆ. ನಮಗೊಂದು ಸಂವಿಧಾನವಿದೆ. ಅದು ಸಮಾನತೆಯನ್ನು ಬೋಧಿಸುತ್ತದೆ. ಆದರೆ ಹುಟ್ಟಿನ ಆಧಾರದಿಂದ ನಿರ್ಣಯವಾಗುವ ಶ್ರೇಷ್ಠತೆಯ ವ್ಯಸನ ಇಲ್ಲಿ ಭಯಂಕರ ರೋಗವಾಗಿದೆ. ಶೋಷಿತ ಸಮುದಾಯಗಳು ಅಕ್ಷರಸ್ಥರಾಗದಿದ್ದರೆ, ಅಕ್ಷರಸ್ಥರಾದವರು ಜಾಗೃತಿ ಮೂಡಿಸದಿದ್ದರೆ, ಈ ರೋಗ ವಾಸಿಯಾಗುವುದಿಲ್ಲ.

ಸಚಿವ ಆಂಜನೇಯ ಜಾತಿಗಣನೆಗೆ ಉತ್ಸಾಹದಿಂದ ಹೊರಟಿದ್ದಾರೆ. ಈ ಅರ್ಥಪೂರ್ಣ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ. ಜಾತಿಯನ್ನು ಮುಚ್ಚಿಡುವುದರಿಂದ ಜಾತ್ಯತೀತರಾಗಲು ಸಾಧ್ಯವಿಲ್ಲ. ಜಾತಿ ಕುರಿತು ಮೇಲರಿಮೆ ಎಷ್ಟು ಮೂರ್ಖತನವೋ ಕೀಳರಿಮೆಯೂ ಮೂರ್ಖತನ. ಭಾರತವೆಂಬ ಅರಣ್ಯದಲ್ಲಿ ಎಷ್ಟು ಹುಲಿ, ಸಿಂಹ, ತೋಳ, ನರಿ, ಮೊಲ, ಜಿಂಕೆಗಳಿವೆ ಎಂದು ಖಚಿತವಾಗಿ ಪ್ರಭುತ್ವಕ್ಕೆ ತಿಳಿಯುವುದು ನಾನಾ ದೃಷ್ಟಿಯಿಂದ ಅಗತ್ಯ. ತನ್ನ ಅಪಾರ ಓದಿನಿಂದ ಘನತೆ ಪಡೆದಿದ್ದ ಅಂಬೇಡ್ಕರ್ ಈಗಿರುವ ಎಲ್ಲ ಜಾತಿಗಳಿಗೆ ಸೇರಿದ ಶೋಷಕನನ್ನೂ ಶೋಷಿತನನ್ನೂ ಎಚ್ಚರಗೊಳಿಸುವ ಗುರು. ಇದೇ ಡಿಸೆಂಬರ್ ಆರಕ್ಕೆ ಅವರು ನಿರ್ಗಮಿಸಿ ಐವತ್ತೆಂಟು ವರ್ಷಗಳಾಯಿತು. ಅವರ ಮಹಾಪರಿನಿರ್ವಾಣ ದಿವಸದ ಸಂದರ್ಭದಲ್ಲಿ ಅಂಬೇಡ್ಕರ್ ಎಲ್ಲರಿಗಾಗಿ ಎಂದು ಗ್ರಹಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT