ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡತ್ತವಾರಿಸ್ ನೆನಪುಗಳು

Last Updated 17 ನವೆಂಬರ್ 2012, 19:30 IST
ಅಕ್ಷರ ಗಾತ್ರ

`ಅಡತ್ತವಾರಿಸ್~ ಸಿನಿಮಾ ಶುರುಮಾಡುವಾಗ ನಾವೆಲ್ಲಾ ಹಾಡುಗಳನ್ನು ಧ್ವನಿಮುದ್ರಿಸಲೆಂದು ಸೇರಿದ್ದೆವು. ಇಳಯರಾಜಾ, ಎಸ್.ಪಿ.ಮುತ್ತುರಾಮನ್, ರಜನೀಕಾಂತ್ ಎಲ್ಲರೂ ಕುಳಿತಿದ್ದರು.

ನಾನೂ ಚರ್ಚೆಯಲ್ಲಿ ಪಾಲ್ಗೊಂಡೆ. ಹಳ್ಳಿಯ ಹಾಡೊಂದು ಚಿತ್ರದ ಮೊದಲ ಗೀತೆ ಎಂದು ನಿರ್ಧರಿಸಿದೆವು. ಪಂಜು ಅರುಣಾಚಲಂ ಸಾಹಿತ್ಯವನ್ನೂ ಬರೆದುಕೊಡಲು ಒಪ್ಪಿದ್ದಾಯಿತು. ಮಾರನೇ ದಿನ ಎವಿಎಂ `ಜಿ~ ಥಿಯೇಟರ್‌ನಲ್ಲಿ `ಸಾಂಗ್ ರೆಕಾರ್ಡಿಂಗ್ ಪೂಜೆ~.

ಮನೆಗೆ ಬಂದಿದ್ದೆನಷ್ಟೆ. ಒಂದು ಫೋನ್ ಬಂದಿತು. ಎತ್ತಿಕೊಂಡರೆ ಮುತ್ತುರಾಮನ್ ಧ್ವನಿ. `ಹಳ್ಳಿಹಾಡನ್ನು ಕ್ಲಬ್ ಸಾಂಗ್ ಆಗಿ ಪರಿವರ್ತಿಸಲಾಗಿದೆ, ಒಂದು ಚೂರು ಚೇಂಜ್ ಅಷ್ಟೆ~ ಎಂದು ಅವರು ಹೇಳಿದಾಗ ನನಗೆ ಪರಮಾಶ್ಚರ್ಯ. ರಾತ್ರಿ 8 ಗಂಟೆಯವರೆಗೆ ಚರ್ಚೆ ನಡೆಸಿ ಬಂದಿದ್ದೆ. ದಿಢೀರನೆ ಅದು ಬದಲಾಗಿದ್ದು ಹೇಗೆಂದು ನನಗೆ ಅರ್ಥವಾಗಲೇ ಇಲ್ಲ.

`ಅದು ಹೇಗೆ ಬದಲಾಯಿತು~ ಎಂದು ಕೇಳಿದೆ. ರಜನೀಕಾಂತ್ ಅವರೇ ನಿಮಗೆ ಫೋನ್ ಮಾಡಿ ಮಾತನಾಡುತ್ತಾರೆ ಎಂದು ಹೇಳಿ ಮಾತು ಮುಗಿಸಿದರು. ಸ್ವಲ್ಪ ಹೊತ್ತಿನಲ್ಲೇ ರಜನೀಕಾಂತ್ ಕೂಡ ಫೋನ್ ಮಾಡಿ, ಅದೇ ವಿಷಯ ಹೇಳಿದರು. ರಾತ್ರಿ ಹಾಡು ಬರೆಯುವಾಗ ಪಂಜು ಅರುಣಾಚಲಂ ಅವರಿಗೆ ಕ್ಲಬ್ ಸಾಂಗ್‌ನ ಲಯ ಹೊಳೆದ ಕಾರಣಕ್ಕೆ ಆ ಹಾಡಿನ ಹಿನ್ನೆಲೆ ಬದಲಾಗಿತ್ತು. `ಸುಮ್ಮನೆ ನಾಳೆ ರೆಕಾರ್ಡಿಂಗ್‌ಗೆ ಬನ್ನಿ, ಎಲ್ಲವೂ ಒಳ್ಳೆಯದಾಗುತ್ತದೆ~ ಎಂದು ರಜನಿ ಹೇಳಿದಾಗ ನಾನು ಮರುಮಾತಾಡಲಿಲ್ಲ. ಆದರೂ ಸಣ್ಣದೊಂದು ಆತಂಕ.

ಪಂಜು ಅರುಣಾಚಲಂ ಬರೆದ ಆ ಹಾಡು `ಆಸೈ ನೂರುವರೈ~. ಮಲೇಷ್ಯಾ ವಾಸುದೇವನ್ ಅದನ್ನು ಹಾಡಿದ್ದರು. ಇಳಯರಾಜಾ ಇದುವರೆಗೆ ರಾಗ ಸಂಯೋಜಿಸಿರುವ ಹತ್ತು ಶ್ರೇಷ್ಠ ಹಾಡುಗಳಲ್ಲಿ ಅದೂ ಒಂದು ಎಂಬುದರಲ್ಲಿ ಅನುಮಾನವೇ ಇಲ್ಲ. ಮೊನ್ನೆ ಮೊನ್ನೆ `ಎವಿಎಂ~ ಚೆಟ್ಟಿಯಾರ್ ಅವರ ಮಗ ಶರವಣನ್ ಆ ಹಾಡನ್ನು ತಮ್ಮ ಇನ್ನೊಂದು ತಮಿಳು ಚಿತ್ರದಲ್ಲಿ ಬಳಸಿಕೊಳ್ಳಲು ಅನುಮತಿ ಕೇಳಿದರು. ಹಿಂದಿನ ದಿನ ಅಂದುಕೊಂಡ ಗೀತೆ ಬದಲಾಗಿ ಬೇರೆಯದೇ ಹಾಡಾಗಿ ಅತ್ಯಂತ ಜನಪ್ರಿಯವಾದ ಕತೆಯಿದು.

`ಅಡತ್ತವಾರಿಸ್~ ಚಿತ್ರದ ಒಂದು ಹಾಡನ್ನು ರಾಜಸ್ತಾನದಲ್ಲಿ ತೆಗೆಯಬೇಕು ಎಂಬುದು ನನ್ನ ಆಸೆ. ಕೆಲವರು ಅಷ್ಟೆಲ್ಲಾ ಖರ್ಚು ಮಾಡಿಕೊಂಡು ಅಲ್ಲಿಗೆ ಏಕೆ ಹೋಗುತ್ತೀರಿ ಎಂದು ಕಿವಿಮಾತು ಹೇಳಿದರು. ನನಗೆ ರಜನಿ-ಶ್ರೀದೇವಿ ಜೋಡಿ ಇದ್ದಿದ್ದರಿಂದ ಹಾಡು ಬಲು ಸೊಗಸಾಗಿ ಮೂಡಿಬರಬೇಕು ಎಂಬ ಬಯಕೆ.
 
ಯಾರ ಮಾತನ್ನೂ ಕೇಳದೆ ಉದಯಪುರದ ಲೇಕ್ ಸೆಂಟರ್‌ನಲ್ಲಿದ್ದ ಐಷಾರಾಮಿ ಹೋಟೆಲ್‌ನಲ್ಲಿ ಎಲ್ಲರಿಗೂ ಪ್ರತ್ಯೇಕ ರೂಮ್‌ಗಳನ್ನು ಬುಕ್ ಮಾಡಿದೆ- ನನಗೆ, ರಜನೀಕಾಂತ್‌ಗೆ, ಶ್ರೀದೇವಿಗೆ, ನಿರ್ದೇಶಕರಿಗೆ, ಕ್ಯಾಮೆರಾಮನ್‌ಗೆ ಹೀಗೆ. ಈಗ ಭಾರತದ ಅತಿ ದುಬಾರಿ ಹೋಟೆಲ್‌ಗಳಲ್ಲಿ ಅದೂ ಒಂದು.

ಸುಂದರವಾದ ಕೊಳದ ನಡುವೆ ಇರುವ ಹೋಟೆಲ್ ಅದು. ಉದಯಪುರಕ್ಕೆ ವಿಮಾನದಲ್ಲಿ ಹೋಗುವಾಗ ರಜನೀಕಾಂತ್, ನನಗೆ ಯಾವ ಬ್ರಾಂಡ್‌ನ ಮದ್ಯ ಇಷ್ಟ ಎಂದು ಕೇಳಿದ. ನೆಪೋಲಿಯನ್ ಬ್ರಾಂಡಿ ನನ್ನಿಷ್ಟದ ಬ್ರಾಂಡ್ ಆಗಿದ್ದರಿಂದ ಅದನ್ನೇ ಹೇಳಿದೆ. ಅವನು ಯಾಕೆ ಅದನ್ನು ಕೇಳಿದನೋ ಗೊತ್ತಾಗಲಿಲ್ಲ.

ಎರಡು ದಿನ ಶೂಟಿಂಗ್ ಆಯಿತು. ಎರಡನೇ ದಿನ ರೂಮ್‌ಗೆ ಮರಳಿದಾಗ ನೆಪೋಲಿಯನ್ ಬ್ರಾಂಡಿಯ ಐದು ಬಾಟಲುಗಳು ಇದ್ದವು. ಅಲ್ಲಿ `ಮೈ ಕಾಂಪ್ಲಿಮೆಂಟ್ಸ್~ ಎಂಬ ಚೀಟಿಯೂ ಇತ್ತು. ಅದನ್ನು ಯಾರು ಕೊಟ್ಟದ್ದು ಎಂದು ಹೋಟೆಲ್ ಹುಡುಗನನ್ನು ಕೇಳಿದೆ.

`ರಜನೀಕಾಂತ್ ಸಾಬ್~ ಎಂಬ ಉತ್ತರ ಬಂತು. ರಜನಿ ಮೊದಲ ಬಾರಿಗೆ `ಡೈನರ್ಸ್‌ ಕ್ಲಬ್ ಕಾರ್ಡ್~ ತೆಗೆದುಕೊಂಡಿದ್ದ. ಅದನ್ನು ಬಳಸಿ ನನಗೆ ನನ್ನಿಷ್ಟದ ಮದ್ಯವನ್ನು ಉಡುಗೊರೆಯಾಗಿ ನೀಡಿದ್ದ. ಆ ಕಾಲದಲ್ಲಿ ಅದು ತುಂಬಾ ದುಬಾರಿ ಬ್ರಾಂಡಿ. ರಜನಿ ನನಗೆ ಅಷ್ಟು ಆತ್ಮೀಯನಾಗಿದ್ದ.

ಒಂದು ದಿನ ವಾಹಿನಿ ಸ್ಟುಡಿಯೋಗೆ ಬಂದೆ. `ಆಸೈ ನೂರುವರೈ~ ಹಾಡಿನ ಚಿತ್ರೀಕರಣ ನಡೆಯಬೇಕಿತ್ತು. ನಾನು ಕಾರಿಳಿದದ್ದೇ ಮಂಕಾದ ವಾತಾವರಣ. ಡಾನ್ಸರ್ಸ್‌ ಅಲ್ಲಲ್ಲಿ ಮಲಗಿದ್ದರು. ಮುತ್ತುರಾಮನ್ ನನ್ನನ್ನು ಕಂಡವರೆ ಓಡೋಡಿ ಬಂದರು. `ರಜನೀಕಾಂತ್ ಅವರಿಗೆ ಮೈ ಸರಿಯಿಲ್ಲ. ಮೇಕಪ್ ರೂಮ್‌ನಲ್ಲಿದ್ದಾರೆ. ಒಂದು ಗಂಟೆ ರೆಸ್ಟ್ ತೆಗೆದುಕೊಂಡು ಆಮೇಲೆ ಶೂಟಿಂಗ್‌ಗೆ ಬರುತ್ತಾರೆ~ ಎಂದರು.

ಮೈ ಸರಿ ಇಲ್ಲದಿರುವಾಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಬಿಟ್ಟು ಇಲ್ಲಿ ಯಾಕೆ ಒದ್ದಾಡಬೇಕು ಎಂದು ನನಗನ್ನಿಸಿತು. ಮೇಕಪ್ ರೂಮ್‌ಗೆ ಹೋಗಿ, `ಲೇ... ರಜನಿ~ ಅಂದೆ. ಥಟ್ಟನೆ ಎದ್ದುನಿಂತು, ಸ್ವಲ್ಪ ಹೊತ್ತಿನಲ್ಲೇ ಶೂಟಿಂಗ್‌ಗೆ ಬರುವುದಾಗಿ ಹೇಳಿದ. ಮೈ ಸುಡುತ್ತಿತ್ತು.

ಶೂಟಿಂಗ್ ಪ್ಯಾಕಪ್ ಮಾಡಿಸಿ, ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದೆ. ಅಷ್ಟೊಂದು ಡಾನ್ಸರ್ಸ್‌ ಬಂದಿರುವಾಗ ತನ್ನ ಆರೋಗ್ಯದ ಕಾರಣಕ್ಕೆ ಶೂಟಿಂಗ್ ಪ್ಯಾಕಪ್ ಆಗುವುದು ಅವನಿಗೆ ಇಷ್ಟವಿರಲಿಲ್ಲ. ನನ್ನ ಬಲವಂತಕ್ಕೆ ಅವನು ಮಣಿಯಲೇಬೇಕಾಯಿತು.
ಮಾರನೇ ದಿನ ಒಂಬತ್ತು ಒಂಬತ್ತೂವರೆ ಗಂಟೆಗೆ ಶೂಟಿಂಗ್ ನಡೆಯುತ್ತಿದ್ದ ಅದೇ ಜಾಗಕ್ಕೆ ಹೋದೆ.
 
ರಜನಿ ಅದಾಗಲೇ ಡಾನ್ಸರ್ಸ್‌ ಮಧ್ಯೆ ನಿಂತು ಶೂಟಿಂಗ್‌ನಲ್ಲಿ ನಿರತನಾಗಿದ್ದ. `ದ್ವಾರಕೀಶ್ ಸರ್, ನೀವೇನೂ ಯೋಚನೆ ಮಾಡಬೇಡಿ. ಮನೆಗೆ ಹೋಗಿ ನೆಮ್ಮದಿಯಿಂದ ಮಲಗಿ. ಈ ಹಾಡಿನ ಶೂಟಿಂಗ್ ಮುಗಿಸಿಯೇ ನಾನು ಮನೆಗೆ ಹೋಗೋದು~ ಎಂದ. ಬೆಳಗ್ಗೆ ಒಂಬತ್ತು ಗಂಟೆಗೆ ಶುರುವಾದ ಹಾಡಿನ ಚಿತ್ರೀಕರಣ ಪೂರ್ತಿ ಮುಗಿದದ್ದು ಮಾರನೇ ದಿನ ಬೆಳಗಿನ ಜಾವ 2.30 ಗಂಟೆಗೆ. ಅಷ್ಟೂ ಹೊತ್ತು ನಿರಂತರವಾಗಿ ಶೂಟಿಂಗ್‌ನಲ್ಲಿ ತೊಡಗಿ, ನಿರ್ಮಾಪಕರಿಗೆ ನಷ್ಟವಾಗಬಾರದೆಂಬ ಕಾಳಜಿಯಿಂದ ರಜನಿ ಕೆಲಸ ಮಾಡಿದ್ದನ್ನು ನಾನೆಂದಿಗೂ ಮರೆಯಲಾರೆ.

`ಅಡತ್ತವಾರಿಸ್~ ಚಿತ್ರದಲ್ಲಿ ದೊಡ್ಡ ತಾರಾಗಣವಿತ್ತು. ವಿ.ಕೆ.ರಾಮಸ್ವಾಮಿ ಹಾಗೂ ಮನೋರಮಾ ಜೋಡಿ ಪ್ರಮುಖವಾದದ್ದು. ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿ.ಕೆ.ರಾಮಸ್ವಾಮಿ ನಟಿಸಿದ್ದರು. ಚಿತ್ರೀಕರಣವೆಲ್ಲಾ ಮುಗಿದ ನಂತರ ಒಂದು ದಿನ ಅವರು ನನಗೆ ಫೋನ್ ಮಾಡಿದರು. ನನಗೆ ಆಶ್ಚರ್ಯ. `ಹದಿನೈದು ದಿನ ನಾನು ಊರಿನಲ್ಲಿ ಇರುವುದಿಲ್ಲ.

ನಿಮ್ಮ ಸಿನಿಮಾ ಬಿಡುಗಡೆ ಹತ್ತಿರವಾಗಿದೆ ಎಂದು ಕೇಳಿದೆ. ಒಂದು ವೇಳೆ ಅಷ್ಟರಲ್ಲೇ ಡಬ್ಬಿಂಗ್ ಮಾಡಿ ಮುಗಿಸಬೇಕಾದರೆ ತಿಳಿಸಿ~ ಎಂದು ಅವರು ನನ್ನನ್ನು ಕೇಳಿದರು. ಅಷ್ಟು ಅನುಭವ ಇರುವ ನಟರೊಬ್ಬರ ಕಾಳಜಿ ಹೇಗಿತ್ತು, ನೋಡಿ. ತಮಿಳುನಾಡಿನ ಶ್ರೇಷ್ಠ ನಟರಲ್ಲಿ ಒಬ್ಬರಾಗಿದ್ದ ವಿ.ಕೆ.ರಾಮಸ್ವಾಮಿ ಜೀವನದುದ್ದಕ್ಕೂ ಹಾಗೇ ಇದ್ದವರು. ನಮಗೆ ಅಂಥ ನಟರು ಬೇಕು. ಆಮೇಲೆ ನಾನು ಹೇಳಿದ ದಿನ ಬಂದು ಡಬ್ಬಿಂಗ್ ಮಾಡಿ ಮುಗಿಸಿಯೇ ಅವರು ಊರಿಗೆ ಹೋದದ್ದು.

ಮದ್ರಾಸ್‌ನ ಮಿಡ್‌ಲ್ಯಾಂಡ್ಸ್ ಟಾಕೀಸಿನಲ್ಲಿ `ಅಡತ್ತವಾರಿಸ್~ ಜೋರಾಗಿ ಬಿಡುಗಡೆಯಾಯಿತು. `ತಮಿಳ್‌ನಾಟ್ಟಲಿ ಇರುಕ ಪೆರಿಯ ಪೆರಿಯ ಬ್ಯಾನರೆಲ್ಲ ಉಫ್ಫನಡಚಾರ್ ದ್ವಾರಕೀಶ್~ (ತಮಿಳುನಾಡಿನಲ್ಲಿರುವ ದೊಡ್ಡ ಬ್ಯಾನರ್‌ಗಳನ್ನೆಲ್ಲಾ ದ್ವಾರಕೀಶ್ ಉಫ್ ಅಂತ ಹೊಡೆದರು) ಎಂದು ಕೆಲವು ಪತ್ರಿಕೆಗಳು ಬರೆದವು.

ಚಿತ್ರದ ನೂರನೇ ದಿನದ ಸಮಾರಂಭವನ್ನು ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಮಾಡಿದೆವು. ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿ ಗಿನ್ನೆಸ್ ದಾಖಲೆ ನಿರ್ಮಿಸಿರುವ ಮನೋರಮಾ, ತಾವು ಕಂಡ ಶ್ರೇಷ್ಠ ನಿರ್ಮಾಪಕರಲ್ಲಿ ನಾನೂ ಒಬ್ಬ ಎಂದಾಗ ಆಕಾಶಕ್ಕೆ ಮೂರೇ ಗೇಣು. ಡಬ್ಬಿಂಗ್‌ಗೆ ಮೊದಲೇ ಅವರಿಗೆ ಎಷ್ಟು ಹಣ ಬಾಕಿ ಇತ್ತೋ ಅಷ್ಟನ್ನು ನಾನು ಹುಡುಕಿಕೊಂಡು ಹೋಗಿ ಕೊಟ್ಟಿದ್ದೆನಷ್ಟೆ. ಅದೊಂದರಿಂದಲೇ ಅವರು ಅಷ್ಟು ಕೃತಜ್ಞರಾದರು.
`ಅಡತ್ತವಾರಿಸ್~ ಚಿತ್ರದ ವ್ಯಾಪಾರವೆಲ್ಲವೂ ಮಣಿರತ್ನಂ ಅಣ್ಣ ಜೀವಿ ಅವರ ಉಸ್ತುವಾರಿಯಲ್ಲೇ ನಡೆಯಿತು. ಆಯಾ ಪ್ರದೇಶಗಳ ಹಂಚಿಕೆ ಹಕ್ಕನ್ನು ಅವರ ಮಾತನ್ನು ಕೇಳಿಯೇ ಅಗ್ರಿಮೆಂಟ್ ಹಾಕಿಕೊಟ್ಟೆ. `ಸ್ಟಾರಿಂಗ್ ರಜನೀಕಾಂತ್, ಡೈರೆಕ್ಟೆಡ್ ಬೈ ಮುತ್ತುರಾಮನ್, ಮ್ಯೂಸಿಕ್ ಬೈ ಇಳಯರಾಜ~ ಎಂದೇ ಅಗ್ರಿಮೆಂಟ್‌ನಲ್ಲಿ ಬರೆದಿದ್ದು.

ತಿರುಚನಾಪಳ್ಳಿಯ ವಿತರಕರು ಮಾತ್ರ ಅಗ್ರಿಮೆಂಟ್‌ನಲ್ಲಿ ಶ್ರೀದೇವಿ ಹೆಸರಿಲ್ಲ ಎಂದು ತಕರಾರು ತೆಗೆದರು. ಅವರು ಶ್ರೀದೇವಿಯವರ ಸಂಬಂಧಿಗೆ ಬೇಕಾದವರು ಎಂದು ಆಮೇಲೆ ತಿಳಿಯಿತು. ಆಗಿನ್ನೂ ಶ್ರೀದೇವಿ ಡೇಟ್ಸ್ ನಿಕ್ಕಿಯಾಗಿರಲಿಲ್ಲ. ಅದನ್ನು ಪಕ್ಕಾ ಮಾಡಿಕೊಳ್ಳಲು ಅವರ ಮನೆಗೆ ಹೋದಾಗ ನನಗೆ ಅದೇ ಆತಂಕ. ಆದರೆ, ಅವರ ಮನೆಯಲ್ಲಿ ಅವರ ತಾಯಿ ಆ ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ. ನಾನೇ ಆ ಬಗೆಗೆ ಕೇಳಿದಾಗ, `ಅವರೇನೋ ಹೇಳಿದರು. ನಮಗೆ ನಿಮ್ಮ ಮೇಲೆ ನಂಬಿಕೆ ಇದೆ~ ಎಂದಾಗ ನನಗೆ ಸಮಾಧಾನವಾಯಿತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT