ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹಜಾರೆ ಜೊತೆ ಎರಡು ದಿನ...

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಕಳೆದ ಮೇ 27 ಮತ್ತು 28 ನನ್ನ ಪಾಲಿಗೆ ವಿಶೇಷವಾದ ದಿನಗಳು. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜದ ಪ್ರತಿನಿಧಿಗಳಿಗಾಗಿ ಇಂಡಿಯಾ ಅಗೇನ್ಸ್ಟ್ ಕರಪ್ಷನ್ ಸಂಘಟನೆಯ ಕಾರ್ಯಕರ್ತರು ಬೆಂಗಳೂರು ಮತ್ತು ಸುತ್ತಮುತ್ತ ಸರಣಿ ಸಭೆಗಳನ್ನು ಆಯೋಜಿಸಿದ್ದರು. ಈ ಸಭೆಗಳಲ್ಲಿ ಪಾಲ್ಗೊಂಡಿದ್ದ ನಾನು ಎರಡೂ ದಿನ ಈ ತಂಡದ ಭಾಗವೇ ಆಗಿದ್ದೆ.

ದೇಶದ ಬಹುತೇಕರು ಈಗ ಅಣ್ಣಾ ಮತ್ತು ಅವರು ಮಹಾರಾಷ್ಟ್ರದ ರಾಳೇಗಣಸಿದ್ಧಿಯಲ್ಲಿ ಅಭಿವೃದ್ಧಿಗಾಗಿ ಕೈಗೊಂಡಿರುವ ಪ್ರಯೋಗಗಳ ಬಗ್ಗೆ ಕೇಳಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅಲ್ಲಿನ ಜನರ ಬದುಕಿನಲ್ಲಿ ಅಣ್ಣಾ ತಂದಿರುವ ಅಸಾಧಾರಣ ಪರಿವರ್ತನೆ ದಾಖಲಾರ್ಹವಾದುದು. ಅವರ ಕಾರ್ಯ ಮತ್ತು ಯಶಸ್ಸಿನ ಬಗ್ಗೆ ನನಗೆ ಅಪಾರ ಗೌರವ ಇದೆಯಾದರೂ, ಅವರೊಡನೆ ಕಳೆದ ಈ ಎರಡು ದಿನಗಳಲ್ಲಿ ಅಣ್ಣಾ ನನ್ನ ಮೇಲೆ ಇಷ್ಟೊಂದು ಪ್ರಭಾವ ಬೀರಬಹುದು ಎಂದು ಮಾತ್ರ ನಾನು ಎಣಿಸಿರಲಿಲ್ಲ.

ಸ್ವಾಗತ ಭಾಷಣದ ಜೊತೆಗೆ ಅಣ್ಣಾ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕಾದ ಹೊಣೆಯೂ ನನ್ನ ಮೇಲಿತ್ತು. ಸ್ವಾಮಿ ವಿವೇಕಾನಂದ ಹಾಗೂ ಅವರ ಬರಹಗಳಿಂದ ಅಣ್ಣಾ ಪ್ರಭಾವಿತರಾಗಿರುವ ಬಗೆಯೂ ನನ್ನನ್ನು ಪ್ರೇರೇಪಿಸಿತು.

`ಸ್ವಾಮೀಜಿಯ ಬರಹಗಳು ಸ್ವಾಮಿ ವಿವೇಕಾನಂದ ಯುವ ಚಳವಳಿಯನ್ನು ಹುಟ್ಟುಹಾಕಲಷ್ಟೇ ನನಗೆ ಪ್ರೇರಣೆ ನೀಡಿಲ್ಲ, ಅವರ ಕೆಲಸ ಮತ್ತು ದೃಷ್ಟಿಕೋನ ಇಂದು ನಾನು ಏನೇನು ಕೆಲಸ ಮಾಡುತ್ತಿದ್ದೇನೋ ಅವೆಲ್ಲದರ ಮೇಲೂ ಸಾಕಷ್ಟು ಪ್ರಭಾವ ಬೀರಿವೆ. ರಾಷ್ಟ್ರ ನಿರ್ಮಾಣದ ದಿಸೆಯಲ್ಲಿ ಸ್ವಾಮಿ ವಿವೇಕಾನಂದರು ನೀಡಿರುವ ಕರೆ ಅಸಾಧಾರಣವಾಗಿದ್ದು, ಅದೇ ನನ್ನ ಬದುಕಿನ ಏಕೈಕ ಧ್ಯೇಯ~ ಎಂದೇ ಅಣ್ಣಾ ನಂಬ್ದ್ದಿದಾರೆ.

`ಅಗ್ನಿದಿವ್ಯ ಸಿದ್ಧಾಂತ~ದ ಬಗ್ಗೆ ಬರೆದಿರುವ ಪರಿಣತ ನಾಯಕರು, ಸ್ವಾನುಭವದಿಂದ ಕೆಲವರು ಹೇಗೆ ಪಾಠ ಕಲಿಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಅವರಂತೆ ನಮಗೂ ನಮ್ಮ ಬದುಕಿನಲ್ಲಿ ಸಾಕಷ್ಟು ಅನುಭವಗಳಾಗುತ್ತವೆ. ಆದರೆ ಇಂತಹ ಅನುಭವಗಳಿಂದ ಪಾಠ ಕಲಿಯುವುದು ಮಾತ್ರವಲ್ಲ, ಅದರಿಂದ ತಾವೂ ಬದಲಾಗಿ ತಮ್ಮ ಸುತ್ತಮುತ್ತಲಿನ ಜನರನ್ನೂ ಪರಿವರ್ತಿಸಲು ಮುಂದಡಿ ಇಡುವ ಕಾರಣದಿಂದ ಕೆಲವರಷ್ಟೇ ವಿಶೇಷ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ. ಅಣ್ಣಾ ಸಹ ಇಂತಹುದೇ ಗುಂಪಿಗೆ ಸೇರಿದವರು.

ಸೇನೆಯಲ್ಲಿದ್ದ ಅಣ್ಣಾ, ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದವರು. ಹೀಗಾಗಿ, ತಮಗೆ ಪುನರ್ಜನ್ಮ ದೊರೆತಿದ್ದು ಏನಾದರೂ ವಿಶೇಷವಾದದ್ದನ್ನು ಸಾಧಿಸುವ ಸಲುವಾಗಿಯೇ ಎಂದು ಅವರು ಬಲವಾಗಿ ನಂಬಿದ್ದಾರೆ.

ಅಣ್ಣಾ ಅವರ ಗುಣಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇಷ್ಟವಾದದ್ದು ಅವರ ಸರಳತೆ, ನಮ್ರತೆ, ಹಾಸ್ಯ ಮನೋಭಾವ. ಸರಳತೆ ಅವರಲ್ಲಿ ಅತ್ಯಂತ ಸಹಜವಾಗಿ ಹಾಸುಹೊಕ್ಕಾಗಿದೆ. ಇತರರ ಸೇವೆಯಿಂದ ತಮಗಾಗುವ ಸಂತೋಷವನ್ನು ಅವರು ಆನಂದದಿಂದ ಹಂಚಿಕೊಳ್ಳುತ್ತಾರೆ. `ಜನರು ಸಮಾಜ ಸೇವೆ ಮಾಡುತ್ತಾ ಸಂತೋಷ ಮತ್ತು ಆರೋಗ್ಯದಿಂದ ಇರುವುದು ಬಿಟ್ಟು ಕೇವಲ ತಮಗಾಗಿಯೇ ಬದುಕುತ್ತಾ ತಮ್ಮದೇ ಒಳಿತಿನ ಬಗ್ಗೆ ಧ್ಯಾನಿಸುತ್ತಾ ಸದಾ ಅಸಂತೋಷದಿಂದ ಇರುತ್ತಾರೆ. ಹೀಗೆ ಕ್ಷೋಭೆಗೊಳಗಾಗಿ ಒತ್ತಡ ಅನುಭವಿಸುವುದೇಕೆ~ ಎಂದು ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಅಣ್ಣಾ ಅವರಲ್ಲಿ ಒಬ್ಬ ಅಪೂರ್ವ ಸಂವಹನಕಾರನನ್ನೂ ನಾನು ಗುರುತಿಸಿದ್ದೇನೆ. ಸಾರ್ವಜನಿಕರ ಆಗುಹೋಗುಗಳನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಅದನ್ನು ರಾಜಕಾರಣಿಗಳಿಗೆ ಹೇಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂಬುದೂ ಅವರಿಗೆ ಗೊತ್ತಿದೆ. ತಮ್ಮ ವಿರೋಧಿಗಳಷ್ಟೇ ಚಾಣಾಕ್ಷರಾಗಿರುವ ಅಣ್ಣಾ, ಭಾಷೆ, ಉತ್ಸಾಹ, ವಿಷಯದ ಆಳ ಮತ್ತು ಶೈಲಿಯ ಮೂಲಕ ಯಾವ ರೀತಿ ಜನರ ಮೇಲೆ ಪ್ರಭಾವ ಬೀರಬೇಕು ಎಂಬುದನ್ನೂ ಚೆನ್ನಾಗಿ ತಿಳಿದಿದ್ದಾರೆ. ತಮ್ಮ ಬಗ್ಗೆ ಮತ್ತು ತಮ್ಮ ಸಾಧನೆಯ ಬಗ್ಗೆ ಯಾವುದೇ ಅಹಮಿಕೆ ಇಲ್ಲದೇ ಹೇಳಿಕೊಳ್ಳುವುದು, ತಮಗೆ ಸಹಮತ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವಾಗಲೂ ದ್ವೇಷ ಭಾವನೆ ಹೊಂದದಿರುವುದು ಅವರ ವಿಭಿನ್ನ ವ್ಯಕ್ತಿತ್ವದ ಪ್ರಮುಖ ಅಂಶಗಳು.

ಅಣ್ಣಾ `ಕಾರ್ಯಕರ್ತರ ಕಾರ್ಯಕರ್ತ~. ಅನ್ಯಾಯ ಕಂಡರೆ ಅವರು ಸಿಡಿದೇಳುತ್ತಾರೆ. ಅದಕ್ಕಾಗಿ ವೈಯಕ್ತಿಕವಾಗಿ ಕಷ್ಟ ಅನುಭವಿಸಬೇಕಾದ ಸಂದರ್ಭ ಎದುರಾದರೂ ಅನ್ಯಾಯವನ್ನು ಮೂಕಪ್ರೇಕ್ಷಕನಂತೆ ನೋಡುತ್ತಾ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ತಮ್ಮ ನಿಲುವಿನ ಬಗ್ಗೆ ಅವರ ವಿವರಣೆ ಸ್ಪಷ್ಟ ಮತ್ತು ಸರಳವಾಗಿರುತ್ತದೆ. ವ್ಯಕ್ತಿ, ಸಮಾಜ ಅಥವಾ ರಾಷ್ಟ್ರಸೇವೆಗಾಗಿ ಯಾರು ಜೀವ ತೆರುತ್ತಾರೋ ಅವರಿಗೆ ಎಂದಿಗೂ ಸಾವಿಲ್ಲ; ಸದಾ ಕಾಲ ಭೀತಿಯಿಂದ, ತಮಗಾಗಿಯಷ್ಟೇ ಬದುಕುವವರು ಪ್ರತಿದಿನವೂ ಸಾಯುತ್ತಾರೆ ಎಂದು ಅವರು ಪ್ರತಿಪಾದಿಸುತ್ತಾರೆ.

ಅಣ್ಣಾ ಅವರ ಯಶಸ್ಸಿನ ಮಾಪನವೂ ಅಷ್ಟೇ ಸರಳವಾದುದು. ಅವರ ಶಾಲೆಗೆ ಪ್ರವೇಶ ಬೇಕಾದವರು ಕನಿಷ್ಠ ಒಂದು ಬಾರಿಯಾದರೂ ಫೇಲ್ ಆಗಿರಬೇಕು! ಎಂತಹ ಮಕ್ಕಳಿಗೆ ಇತರ ಶಾಲೆಗಳು ಪ್ರವೇಶ ನೀಡುವುದಿಲ್ಲವೋ ಅಂತಹವರಿಗೆ ಅವರ ಶಾಲೆಯಲ್ಲಿ ಪ್ರವೇಶ ಖಚಿತವಾಗಿಯೂ ಸಿಗುತ್ತದೆ. ಹೀಗೆ ಇಲ್ಲಿ ಸೇರಿ ಕಲಿತವರು ಮುಂದೆ ವೈದ್ಯರಾಗಿರುವ ಉದಾಹರಣೆಯೂ ಇದೆ. ಸೋಲಿನಲ್ಲೇ ನಾವು ಯಶಸ್ಸು ಕಾಣುವಂತಾದರೆ ಆಗ ನಮ್ಮ ಬದುಕು ಸಾರ್ಥಕವಾದಂತೆ ಎಂದು ಅವರು ಹೇಳುತ್ತಾರೆ.

`ಎಷ್ಟು ಕಾಲ ನಾನು ಬದುಕಿರುತ್ತೇನೋ ಅಷ್ಟರವರೆಗೂ ಕಲಿಯುತ್ತಲೇ ಇರುತ್ತೇನೆ~ ಎಂಬ ರಾಮಕೃಷ್ಣ ಪರಮಹಂಸರ ಉಕ್ತಿಯಂತೆ, ಮಗುವಿನಂತಹ ಕುತೂಹಲ, ಸದಾ ಕಾಲ ಕಲಿಯುವ ಹಂಬಲ ಅಣ್ಣಾ ಅವರಿಗಿದೆ. ಬೆಂಗಳೂರು ಸನಿಹದ ಟಿ.ಬೇಗೂರಿನಲ್ಲಿ ಅವರು ತೋರಿದ ಉತ್ಸಾಹ, ಅವರಲ್ಲಿದ್ದ ಚೈತನ್ಯ, ವೈದ್ಯಕೀಯ ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಲಿ ನಡೆಯುತ್ತಿರುವ ಕಾರ್ಯವನ್ನು ಅರಿಯಲು ತೋರಿದ ಹಂಬಲ ಉತ್ತೇಜನೀಯ.

ಹೇಳಿಕೊಳ್ಳುವ ರೀತಿಯಲ್ಲೇ ಮೌಲ್ಯಯುತವಾಗಿ ಬದುಕುವುದು ಮಹತ್ವದ ಸಂಗತಿ. ನಮ್ಮ ನಂಬಿಕೆ ಮತ್ತು ನಾವು ಬದುಕುವ ರೀತಿಯ ನಡುವೆ ಇರುವ ಅಂತರ ಮಹಾನ್ ವ್ಯಕ್ತಿಗಳು ಹಾಗೂ ಸಾಮಾನ್ಯ ಜನರ ನಡುವೆ ಇರುವ ವ್ಯತ್ಯಾಸದ ದ್ಯೋತಕ. ಆದರೆ ಅಣ್ಣಾ ಅವರ ವಿಷಯದಲ್ಲಿ ಅಂತಹ ಅಂತರ ಕಂಡುಬರುವುದಿಲ್ಲ. ಅವರು ಏನು ಹೇಳುವರೋ, ಯಾವುದನ್ನು ನಂಬಿರುವರೋ ಅದೇ ರೀತಿ ಬದುಕುತ್ತಿದ್ದಾರೆ.

`ರಾಷ್ಟ್ರ ಸೇವೆಯ ಪರಿಕಲ್ಪನೆಯನ್ನೇ ನಾನು ಮದುವೆಯಾಗಿ ಬಿಟ್ಟಿದ್ದೇನೆ, ಹೀಗಾಗಿ ನನ್ನ ಬದುಕಿನಲ್ಲಿ ಬೇರೆ ಮದುವೆಗೆ ಆಸ್ಪದವೇ ಇಲ್ಲ~ ಎಂದು ಅಣ್ಣಾ ಆಗಾಗ ಹಾಸ್ಯ ಧಾಟಿಯಲ್ಲಿ ಹೇಳುತ್ತಿರುತ್ತಾರೆ. ತಮ್ಮ ಹತ್ತಿರದ ಬಹುತೇಕ ಬಂಧುಬಾಂಧವರ ಹೆಸರುಗಳೂ ಅವರಿಗೆ ನೆನಪಿಲ್ಲ. ಗ್ರಾಮ ಸೇವೆಯಲ್ಲಿನ ಅವರ ಬದ್ಧತೆ ಅಷ್ಟರ ಮಟ್ಟಿನದು. ತಮ್ಮ ಈ ಕಾರ್ಯಕ್ಕೆ ಯಾವ ವೈಯಕ್ತಿಕ ಅಡೆತಡೆಯೂ ಆಗಲು ಅವರು ಅವಕಾಶ ಮಾಡಿಕೊಟ್ಟಿಲ್ಲ. ಸಾಮಾಜಿಕ ಕಾರ್ಯಕರ್ತರಿಗೆ ಹೃದಯದಾಳದಿಂದ ಮತ್ತು ಅನುಭವದ ಮೂಸೆಯಿಂದ ಅವರು ನೀಡುವ ಪಂಚಸೂತ್ರಗಳು ಹೀಗಿವೆ- ಉದಾತ್ತ ಚಿಂತನೆ, ಉತ್ತಮ ಕೆಲಸ, ನಿಷ್ಕಳಂಕ ಬದುಕು, ತ್ಯಾಗ ಮತ್ತು ಟೀಕೆಗಳನ್ನು ಎದುರಿಸುವ ಸಾಮರ್ಥ್ಯ.

ಗಾಂಧಿ, ವಿವೇಕಾನಂದರಂತಹ ಮಹೋನ್ನತ ನಾಯಕರು ಇತರರು ಅನುಕರಿಸಲು ಕಷ್ಟವಾಗುವಂತೆ ಬದುಕಿದವರು. ಅಣ್ಣಾ ಹಜಾರೆ ಅವರೂ ಇಂತಹವರ ಸಾಲಿಗೇ ಸೇರುತ್ತಾರೆ. ಆದರೆ ಅವರ ಬದುಕಿನ ವಿವಿಧ ಆಯಾಮಗಳಿಂದ ಇತರರು ನಿಸ್ಸಂದೇಹವಾಗಿಯೂ ಸ್ಫೂರ್ತಿಯನ್ನಂತೂ ಪಡೆಯಬಹುದು. ನಾವು ಸಂಪೂರ್ಣವಾಗಿ ಅಣ್ಣಾ ಅವರಂತೆ ಆಗಲು ಸಾಧ್ಯವಾಗದೇ ಇರಬಹುದು. ಆದರೆ ಹಾಗೆ ಆಗಬೇಕೆಂಬ ಮನೋಭಾವ ಒಬ್ಬ ವ್ಯಕ್ತಿಯಲ್ಲಿ ಮೂಡಿದರೂ ಸಾಕು, ದೇಶ ಮತ್ತು ಜಗತ್ತಿಗೆ ಅದರಿಂದ ಲಾಭವಾಗುವುದಂತೂ ನಿಶ್ಚಿತ.

ಭಾರತ ಬಯಸುವಂತಹ ಒಬ್ಬ ಸಮಾಜೋದ್ಧಾರಕನನ್ನಾಗಿ ಅಣ್ಣಾ ಅವರನ್ನು ಬಿಂಬಿಸಬೇಕಾದ ಅಗತ್ಯವಿಲ್ಲ. ಆದರೆ ನೈತಿಕವಾಗಿ ಮತ್ತು ಯೋಗ್ಯವಾಗಿ ಬದುಕಲು ಭಾರತೀಯರನ್ನು ಒಗ್ಗೂಡಿಸುವ, ಅವರಲ್ಲಿ ಸ್ಫೂರ್ತಿ ತುಂಬುವ ಸಾಮರ್ಥ್ಯ ಇರುವ ವ್ಯಕ್ತಿ ಅವರಾಗಿದ್ದಾರೆ ಎಂಬುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT