ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರೇಕದ ರಾಷ್ಟ್ರಭಕ್ತಿ ದೇಶಪ್ರೇಮವೇ ಅಲ್ಲ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದೇಶಪ್ರೇಮ ಮತ್ತು ಅತಿ ದೇಶಪ್ರೇಮದ ನಡುವಣ ವ್ಯತ್ಯಾಸಗಳ ಬಗ್ಗೆ ನಾನು ಇತ್ತೀಚೆಗೆ ಯೋಚಿಸುತ್ತಿದ್ದೇನೆ. ಲೇಖಕ, ಸಮಾಜ ಸುಧಾರಕ ಮತ್ತು ರಾಜಕೀಯ ಹೋರಾಟಗಾರನಾಗಿ ಭಾರತದ ಪ್ರಜಾಸತ್ತೆಯನ್ನು ಅತ್ಯುತ್ತಮವಾಗಿ ಪ್ರತಿನಿಧಿಸಿದ ಬಲರಾಜ ಪುರಿ ಅವರ ನೆನಪಿನಲ್ಲಿ ಭಾಷಣ ಮಾಡುವುದಕ್ಕಾಗಿ ಜಮ್ಮುವಿಗೆ ಭೇಟಿ ನೀಡಿದ್ದು ನನ್ನ ಯೋಚನೆಗೆ ಪ್ರಚೋದನೆ ಅಥವಾ ಪ್ರೇರಣೆಯಾಯಿತು.

ಭಾರತದಲ್ಲಿ ಇಂದು ಬಹಳಷ್ಟು ಅತಿರೇಕದ ರಾಷ್ಟ್ರಪ್ರೇಮಿಗಳು ಸಕ್ರಿಯವಾಗಿದ್ದಾರೆ. ಇವರು ರಾತ್ರಿ ಹಗಲೆನ್ನದೆ ಪಾಕಿಸ್ತಾನವನ್ನು ಅಥವಾ ಚೀನಾವನ್ನು ಮತ್ತು ಕೆಲವೊಮ್ಮೆ ಎರಡೂ ದೇಶಗಳನ್ನು ಬಯ್ಯುತ್ತಿದ್ದಾರೆ. ಬಲರಾಜ್ ಪುರಿ ಅವರು ದೇಶದ ಬಗೆಗಿನ ತಮ್ಮ ಪ್ರೀತಿಯನ್ನು ಬಹಳ ಭಿನ್ನವಾಗಿ ವ್ಯಕ್ತಪಡಿಸಿದರು. ತಮ್ಮ ಸುದೀರ್ಘ ಜೀವನದಲ್ಲಿ ಅವರು ಬ್ರಿಟಿಷರಿಂದ ದೇಶ ಸ್ವಾತಂತ್ರ್ಯ ಪಡೆಯಲು, ಕಾಶ್ಮೀರದ ಮಹಾರಾಜರ ನಿರಂಕುಶ ಆಡಳಿತದಿಂದ ಮುಕ್ತಿ ಪಡೆಯಲು, ಕಾಶ್ಮೀರದ ಜನರ ಮಾನವ ಹಕ್ಕುಗಳಿಗಾಗಿ ಮತ್ತು ಜಮ್ಮು ಹಾಗೂ ಲಡಾಖ್‍ನ ಸ್ವಾಯತ್ತೆಗಾಗಿ ಹೋರಾಡಿದರು.

ಭಾರತ ಬಿಟ್ಟು ತೊಲಗಿ ಚಳವಳಿಯಿಂದ ಪ್ರೇರಣೆಗೊಂಡು ಉರ್ದು ವಾರಪತ್ರಿಕೆ ಆರಂಭಿಸುವ ಮೂಲಕ ಬಲರಾಜ್ ಅವರ ದೇಶಪ್ರೇಮದ ಜೀವನ ಅವರ ಹದಿನಾಲ್ಕನೇ ವರ್ಷದಲ್ಲಿಯೇ ಆರಂಭವಾಯಿತು. ಬಳಿಕ ಹಲವು ದಶಕಗಳ ಕಾಲ ಸಕ್ರಿಯ ಪತ್ರಕರ್ತರಾಗಿದ್ದರು. ಇಂಗ್ಲಿಷ್‍ನಲ್ಲಿ ಹಲವು ಪುಸ್ತಕಗಳನ್ನೂ ಬರೆದರು. ಭಾರತದ ಮುಸ್ಲಿಮರ ಬಗೆಗಿನ ಮಹತ್ವದ ಅಧ್ಯಯನ, ಜಮ್ಮು ಪ್ರಾಂತ್ಯ ಮತ್ತು ಕಾಶ್ಮೀರ ಕಣಿವೆಯ ನಡುವಣ ಸಂಕೀರ್ಣವಾದ ಸಂಬಂಧದ ವಿಶ್ಲೇಷಣೆ, ಕಾಶ್ಮೀರದಲ್ಲಿ ಬಂಡಾಯದ ಮೂಲದ ಬಗೆಗಿನ ಅಧಿಕಾರಯುತವಾದ ವಿಶ್ಲೇಷಣೆ ಅವುಗಳಲ್ಲಿ ಸೇರಿವೆ.

ಬಲರಾಜ್ ಅವರ ಬರಹ ಮತ್ತು ಪ್ರಾಮಾಣಿಕತೆ ಹಾಗೂ ವೈಯಕ್ತಿಕ ದಿಟ್ಟತನಕ್ಕಾಗಿ ಅವರ ಬಗ್ಗೆ ಬಹಳ ಮೆಚ್ಚುಗೆ ಇದೆ. 1980 ಮತ್ತು 1990ರ ದಶಕಗಳಲ್ಲಿ ಜಮ್ಮುವಿನಲ್ಲಿ ಯಾವಾಗ ಬೇಕಿದ್ದರೂ ಕೋಮು ಹಿಂಸೆ ನಡೆಯಬಹುದು ಎಂಬಂತಹ ಸ್ಥಿತಿ ಇತ್ತು. ಒಂದೆಡೆ ರಾಮಜನ್ಮಭೂಮಿ ಚಳವಳಿಯ ಹಿಂದೂ ಉಗ್ರಗಾಮಿಗಳು ಮತ್ತು ಇನ್ನೊಂದೆಡೆ ಕಾಶ್ಮೀರ ಕಣಿವೆಯಲ್ಲಿ ಪಂಡಿತ ಸಮುದಾಯಕ್ಕೆ ಸೇರಿದ ಜನರಿಗೆ ಮುಸ್ಲಿಂ ಉಗ್ರರು ನೀಡುತ್ತಿದ್ದ ಹಿಂಸೆ ಇದಕ್ಕೆ ಕಾರಣ. ಬಲರಾಜ್ ಅವರ ಸಮಕಾಲೀನರಲ್ಲಿ ಅವರ ಬಗೆಗಿನ ವೈವಿಧ್ಯಮಯವಾದ ನೆನಪುಗಳಿವೆ. ಅರುವತ್ತು ದಾಟಿದ್ದ ಬಲರಾಜ್ ಅವರು ತಮ್ಮ ಹಳೆಯ ಸ್ಕೂಟರ್‍ನಲ್ಲಿ ತಮ್ಮ ಊರಿನ ಬೀದಿಗಳಲ್ಲಿ ತಿರುಗಾಡುತ್ತಾ ದ್ವೇಷ ಮತ್ತು ಸಿಟ್ಟು, ಹಿಂಸೆಯಾಗಿ ಬದಲಾಗದಂತೆ ತಡೆಯುತ್ತಿದ್ದರು.

ಅನುಮಾನ ಮತ್ತು ವೈಷಮ್ಯದಿಂದ ತುಂಬಿ ಹೋಗಿದ್ದ ರಾಜ್ಯದ ಎಲ್ಲ ಪ್ರದೇಶಗಳು ಮತ್ತು ಸಮುದಾಯದ ಜನರಿಗೆ ಬಲರಾಜ್ ಅವರ ಬಗ್ಗೆ ವಿಶ್ವಾಸವಿತ್ತು. 2014ರ ಆಗಸ್ಟ್‌ನಲ್ಲಿ ಬಲರಾಜ್ ಅವರು ನಿಧನರಾದಾಗ ಪ್ರಕಟವಾದ ಒಂದು ನುಡಿನಮನದಲ್ಲಿ ಈ ಸಾಲುಗಳಿದ್ದವು: ‘ತನ್ನ ಪ್ರಾದೇಶಿಕ ಅಸ್ಮಿತೆಯ ನೇತಾರನನ್ನು ಜಮ್ಮು ಕಳೆದುಕೊಂಡಿತು, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರನನ್ನು ಕಾಶ್ಮೀರ ಕಳೆದುಕೊಂಡಿತು, ಶಾಂತಿಯ ಪರ ಹೋರಾಟಗಾರನನ್ನು ಇಡೀ ರಾಜ್ಯ ಕಳೆದುಕೊಂಡರೆ, ದೇಶಕ್ಕೆ ಉದಾರವಾದಿ, ಪ್ರಗತಿಪರ ಧ್ವನಿಯೊಂದು ನಷ್ಟವಾಯಿತು’. ಬಲರಾಜ್ ಅವರನ್ನು ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಮತ್ತೊಬ್ಬರು ಹೋಲಿಸಿದ್ದರು. ಈ ಇಬ್ಬರೂ ನಾಯಕರು ಎಲ್ಲ ರಚನಾತ್ಮಕ ಕೆಲಸಗಳಿಗಾಗಿ ಅಪರಿಮಿತ ಚೈತನ್ಯವನ್ನು ಹರಿಸಿದರು ಮತ್ತು ಅವರು ಮಾಡಿದ ಎಲ್ಲ ಕೆಲಸಗಳಿಗೂ ಒಂದು ಮಾನವೀಯತೆಯ ಆಯಾಮ ಇತ್ತು.

ಜಮ್ಮುವಿನ ಸ್ಮಶಾನಕ್ಕೆ ಅವರ ಮೃತದೇಹವನ್ನು ಒಯ್ಯುವಾಗ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರಲ್ಲೊಬ್ಬ ಹಿರಿಯ ವ್ಯಕ್ತಿ ಜೋರಾಗಿ ಅಳುತ್ತಾ, ‘ಈ ವ್ಯಕ್ತಿ ಯಾವತ್ತೂ ತಮ್ಮನ್ನು ಮಾರಾಟಕ್ಕೆ ಒಡ್ಡಿಕೊಂಡಿರಲಿಲ್ಲ’, ‘ಈ ವ್ಯಕ್ತಿ ಯಾವತ್ತೂ ತಮ್ಮನ್ನು ಮಾರಾಟಕ್ಕೆ ಒಡ್ಡಿಕೊಂಡಿರಲಿಲ್ಲ’ ಎಂದು ಮೆಲುದನಿಯಲ್ಲಿ ಹೇಳುತ್ತಿದ್ದರು. ಜಮ್ಮುವಿನ ಜನರು ಇಷ್ಟೊಂದು ದುಃಖಿತರಾದದ್ದನ್ನು ಬಲರಾಜ್ ಅವರ ಕುಟುಂಬ ಮತ್ತು ಗೆಳೆಯರು ಯಾವತ್ತೂ ಕಂಡಿರಲಿಲ್ಲ. ಈ ಜನರ ಶ್ರದ್ಧಾಂಜಲಿ ಮನಮುಟ್ಟುವಂತಿತ್ತು ಮತ್ತು ಅದಕ್ಕೆ ಬಲರಾಜ್ ಎಲ್ಲ ರೀತಿಯಲ್ಲಿ ಅರ್ಹರಾಗಿದ್ದರು. ಬಳಿಕ, ಮುದ್ರಣ ಮಾಧ್ಯಮವೂ ಇದೇ ರೀತಿಯ ನುಡಿ ನಮನವನ್ನು ಅರ್ಪಿಸಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಲರಾಜ್ ಅವರು ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಆದರೆ, ಈ ರಾಜ್ಯದ ಹೊರಗೆ, ಬಲರಾಜ್ ಅವರು ಮಾಡಿದ ಕೆಲಸ ಎಷ್ಟು ತಿಳಿದಿರಬೇಕಿತ್ತೋ ಅಷ್ಟು ತಿಳಿದಿಲ್ಲ ಎಂಬುದು ವಿಷಾದದ ಸಂಗತಿ. ಎಂದಿಗಿಂತಲೂ ಹೆಚ್ಚಾಗಿ, ಬಲರಾಜ್ ಅವರಂತಹ ದೇಶಪ್ರೇಮಿಗಳ ಅಗತ್ಯ ಇಂದು ಭಾರತಕ್ಕೆ ಇದೆ. ಬೇರೊಂದು ದೇಶವನ್ನು ನಿರಂತರವಾಗಿ ತೆಗಳುವ ಮೂಲಕ ಅಲ್ಲದೆ, ತಮ್ಮ ಮಾತು ಮತ್ತು ಕೃತಿಗಳ ಮೂಲಕ ತಮ್ಮ ದೇಶವನ್ನು ಹೆಚ್ಚು ಸಹಿಷ್ಣು, ಹೆಚ್ಚು ಸಮೃದ್ಧ, ಕಡಿಮೆ ಅಸಂತುಷ್ಟ, ಕಡಿಮೆ ಸಂಘರ್ಷಭರಿತ ಮಾಡುವ ಮೂಲಕ ದೇಶಪ್ರೇಮವನ್ನು ವ್ಯಕ್ತಪಡಿಸುವ ಜನರು ಭಾರತಕ್ಕೆ ಬೇಕಾಗಿದ್ದಾರೆ. ಭಾಷೆ, ಜಾತಿ ಅಥವಾ ಧರ್ಮದಿಂದ ಒಡೆದುಹೋಗಿರುವ ಜನರ ಮಧ್ಯೆ ಪರಸ್ಪರ ಗೌರವ ಹಾಗೂ ಸಹಿಷ್ಣುತೆ ಹೆಚ್ಚಿಸುತ್ತಲೇ ದಲಿತರು ಹಾಗೂ ಮಹಿಳೆಯರಂತಹ ದಮನಿತ ಸಮುದಾಯಗಳಿಗೆ ಘನತೆ ನೀಡಲು ಯತ್ನಿಸುವುದೇ ಬಹುಶಃ ದೇಶಪ್ರೇಮದ ಮುಖ್ಯ ರೂಪ ಎನ್ನಬಹುದೇನೊ.

ಈಗಿನ ಅತಿ ಅಭಿವ್ಯಕ್ತಿ ಮತ್ತು ಅತಿರೇಕದ ದೇಶಪ್ರೇಮಿಗಳಂತಲ್ಲದೆ, ಬಲರಾಜ್ ಅವರು ತಮ್ಮ ದೇಶವನ್ನು ನೆರೆಯ ದೇಶಗಳಿಗಿಂತ ಬಲಶಾಲಿಯಾಗಿಸುವ ಯೋಚನೆಗೆ ಬಲಿಯಾಗಿರಲಿಲ್ಲ. ಅದರ ಬದಲಿಗೆ, ಭಾರತ ಅದರ ಪೌರರಿಗೆ ಹೆಚ್ಚು ಉತ್ತಮವಾದ ಮತ್ತು ಸುರಕ್ಷಿತವಾದ ಸ್ಥಳವಾಗಬೇಕು ಎಂದು ಅವರು ಬಯಸಿದ್ದರು. ಅದು ಬಲರಾಜ್ ಅವರ ಜೀವನ ನಮಗೆ ಕಲಿಸುವ ಮೊದಲ ಪಾಠ. ಏಕರೂಪದ ದೇಶಪ್ರೇಮ ಎಂಬುದೊಂದು ಇಲ್ಲ, ಬದಲಿಗೆ, ಹಲವು ಮತ್ತು ಒಂದರ ಮೇಲೊಂದು ಪಸರಿಸಿರುವ ದೇಶಪ್ರೇಮ ಇದೆ ಎಂಬುದು ಅವರು ಕಲಿಸಿದ ಎರಡನೇ ಪಾಠ.

‘ಸೇವಾ ಕಾರ್ಯ ಮನೆಯಲ್ಲಿಯೇ ಆರಂಭವಾಗುತ್ತದೆ’ ಎಂಬ ಪ್ರಸಿದ್ಧವಾದ ಒಂದು ನುಡಿಕಟ್ಟು ಇದೆ. ದೇಶಪ್ರೇಮವೂ ಮನೆಯಿಂದಲೇ ಆರಂಭವಾಗುತ್ತದೆ. ಬಲರಾಜ್ ಅವರು ತಮ್ಮ ಪಟ್ಟಣ ಮತ್ತು ಜಿಲ್ಲೆಯನ್ನು ಪ್ರೀತಿಸಿದ್ದರು, ಜತೆಗೆ ಅವರಲ್ಲಿ ತಮ್ಮ ರಾಜ್ಯ ಮತ್ತು ದೇಶದ ಬಗ್ಗೆಯೂ ಪ್ರೀತಿ ಇತ್ತು. ಅವರು ಏಕಕಾಲಕ್ಕೆ ಜಮ್ಮು ನಗರವನ್ನು, ಜಮ್ಮು ಪ್ರಾಂತ್ಯವನ್ನು, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು, ಭಾರತ ದೇಶವನ್ನು ಪ್ರೀತಿಸುತ್ತಿದ್ದರು. ನಿಮ್ಮ ಪ್ರದೇಶ ಮತ್ತು ನಿಮ್ಮ ಪ್ರಾಂತ್ಯದ ಬಗೆಗಿನ ಪ್ರೀತಿ ನಿಮ್ಮ ದೇಶಪ್ರೇಮಕ್ಕೆ ಪೂರಕವಾಗಿರುತ್ತದೆ ಎಂಬುದನ್ನು ಅವರು ತೋರಿಸಿಕೊಟ್ಟರು.

ತಮ್ಮ ನೆರೆಯ ರಾಜ್ಯ ಪಂಜಾಬ್‍ನಲ್ಲಿ ಶಾಂತಿ ಮತ್ತು ಆತ್ಮಗೌರವ ಹೆಚ್ಚಿಸಲು ಬಲರಾಜ್ ಅವರು ಕೆಲಸ ಮಾಡಿದ್ದರು ಎಂಬುದು ಗಮನಾರ್ಹ. ಅವರು ನಿರರ್ಗಳವಾಗಿ ಮಾತನಾಡಬಲ್ಲ ಆರು ಭಾಷೆಗಳಲ್ಲಿ ಪಂಜಾಬಿ ಕೂಡ ಸೇರಿತ್ತು. ಸಂಘ ಪರಿವಾರದವರ ಹಿಂದಿ ಹೇರಿಕೆಗೆ ಬಲಿಯಾಗದೆ, ತಾವು ಮಾತನಾಡುವ ಸಿಖ್ಖರ ಮಾತೃಭಾಷೆ ಪಂಜಾಬಿಯನ್ನು ಗೌರವಿಸಿ ಎಂದು ಪಂಜಾಬ್‍ನ ಹಿಂದೂಗಳಿಗೆ ಅವರು ಕರೆ ಕೊಟ್ಟಿದ್ದರು. ಜತೆಗೆ, ಬಂದೂಕಿನಿಂದ ಮಾತ್ರ ಮಾತನಾಡುವ ಜರ್ನೈಲ್ ಸಿಂಗ್ ಭಿಂದ್ರನ್‍ವಾಲೆ ಮತ್ತು ಆತನ ಉಗ್ರಗಾಮಿ ಅನುಯಾಯಿಗಳನ್ನು ಅತ್ಯಂತ ಸ್ಪಷ್ಟವಾಗಿ ಅವರು ವಿರೋಧಿಸಿದ್ದರು. ಆಪರೇಷನ್ ಬ್ಲೂಸ್ಟಾರ್ ಬಳಿಕ ಪಂಜಾಬ್‍ಗೆ ಭೇಟಿ ನೀಡಿದ್ದ ಹೊರರಾಜ್ಯದ ಮೊದಲ ವ್ಯಕ್ತಿ ಬಲರಾಜ್. ಅಲ್ಲಿ ಅವರು ಹಿಂಸೆಯನ್ನು ವಿರೋಧಿಸಿ, ಸಾಮರಸ್ಯದ ಪರವಾಗಿ ಮಾತನಾಡಿದರು.

ದೇಶಪ್ರೇಮವನ್ನು ಸಂಕೇತಗಳ ಪೂಜೆಯ ಮಟ್ಟಕ್ಕೆ ಇಳಿಸಲು ಕೆಲವರು ಬಯಸುತ್ತಿದ್ದಾರೆ. ಆದರೆ, ತ್ರಿವರ್ಣ ಧ್ವಜಕ್ಕೆ ದಿನಕ್ಕೆ ಹತ್ತು ಬಾರಿ ಪೂಜೆ ಮಾಡಿದರೆ ನೀವು ಒಳ್ಳೆಯ ದೇಶಪ್ರೇಮಿ ಆಗುವುದು ಸಾಧ್ಯವಿಲ್ಲ. ನಿಮ್ಮ ಪ್ರದೇಶ, ನಿಮ್ಮ ಪಟ್ಟಣ, ನಿಮ್ಮ ಜಿಲ್ಲೆ, ನಿಮ್ಮ ರಾಜ್ಯ ಮತ್ತು ನಿಮ್ಮ ದೇಶವನ್ನು ಹೆಚ್ಚು ಸಹಿಷ್ಣುವಾಗಿ, ಎಲ್ಲರನ್ನೂ ಒಳಗೊಳ್ಳುವಂತಹುದಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ರೂಪಿಸುವುದೇ ಹೆಚ್ಚು ಬಾಳಿಕೆ ಬರುವ ಹಾಗೂ ಹೆಚ್ಚು ರಚನಾತ್ಮಕವಾದ ದೇಶಪ್ರೇಮದ ವಿಧಾನವಾಗಿದೆ.

ಬಲರಾಜ್ ಅವರ ದೇಶಪ್ರೇಮ ಸಾಂಕೇತಿಕವಾದುದಾಗಿರಲಿಲ್ಲ, ಬದಲಿಗೆ ಹೆಚ್ಚು ಸತ್ತ್ವಯುತವಾದುದಾಗಿತ್ತು. ‘ಮೇರಾ ಭಾರತ್ ಮಹಾನ್’ ಎಂದು ಆಗಾಗ ಮತ್ತು ನಡು ನಡುವೆ ‘ಪಾಕಿಸ್ತಾನಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗುವ ಮೂಲಕ ತಾಯ್ನಾಡಿನ ಮೇಲಿನ ತಮ್ಮ ಪ್ರೀತಿಯನ್ನು ಬಲರಾಜ್ ಅವರು ವ್ಯಕ್ತಪಡಿಸಲಿಲ್ಲ. ನಿತ್ಯದ ಜೀವನದಲ್ಲಿ ಜನರಿಗೆ ಗೌರವ, ಘನತೆ, ಸಮಾನತೆ, ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿದರು. ನಮ್ಮ ಸಂವಿಧಾನದ ಚಿಂತನೆಗಳಿಗೆ ಪೂರಕವಾಗಿ ದೇಶವನ್ನು ಬೆಳೆಸಲು ಅವರು ತಮ್ಮ ವರ್ತನೆ ಮತ್ತು ಬರಹದ ಮೂಲಕ ಶ್ರಮಿಸಿದರು.

ಬಲರಾಜ್ ಅವರು ಶ್ಲಾಘನೀಯ ಮತ್ತು ಅಸಾಧಾರಣ ವ್ಯಕ್ತಿತ್ವ ಹೊಂದಿದ್ದರು. ಆದರೆ ಅಂತಹ ವ್ಯಕ್ತಿತ್ವ ಹೊಂದಿದ್ದ ಏಕೈಕ ವ್ಯಕ್ತಿ ಅಲ್ಲ. ನಮ್ಮ ದೇಶದಲ್ಲಿ ತಮ್ಮ ಹಳ್ಳಿ, ಜಿಲ್ಲೆ, ರಾಜ್ಯ ಮತ್ತು ದೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಅಳವಡಿಸಲು ಕೆಲಸ ಮಾಡಿದ ದೇಶಪ್ರೇಮಿಗಳಾಗಿರುವ ಹಲವು ಜನರಿದ್ದಾರೆ. ಇಂತಹ ಕೆಲವು ವ್ಯಕ್ತಿಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಉಳಿದವರು ಅಪರಿಚಿತರಾಗಿಯೇ ಉಳಿದಿದ್ದಾರೆ. ಆದರೆ ಈ ಬಗ್ಗೆ ಅವರೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗೆ ನೋಡಿದರೆ, ಪ್ರಚಾರ ಅಥವಾ ಅತಿ ಪ್ರಚಾರ, ನಿಜವಾದ ದೇಶಪ್ರೇಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪ್ರತಿಕೂಲವೂ ಆಗಬಹುದು. ಪ್ರಚಾರಕ್ಕೆ ಹೆಚ್ಚು ಹೆಚ್ಚು ಹಾತೊರೆದಂತೆ ಸಮಾಜ ಸುಧಾರಣೆ ಮತ್ತು ರಚನಾತ್ಮಕ ಕೆಲಸಕ್ಕೆ ದೊರೆಯುವ ಸಮಯ ಕಡಿಮೆಯಾಗಬಹುದು.

ಬಲರಾಜ್ ಅವರು ದೇಶಪ್ರೇಮಿಯಾಗಿದ್ದರೇ ಹೊರತು ಅತಿರೇಕದ ರಾಷ್ಟ್ರಭಕ್ತ ಅಲ್ಲ. ಇತರ ದೇಶಗಳನ್ನು ದ್ವೇಷಿಸುವ ಬದಲಿಗೆ ತಮ್ಮ ದೇಶವನ್ನು ಉತ್ತಮ ಸ್ಥಳವಾಗಿ ಮಾರ್ಪಡಿಸುವುದಕ್ಕೆ ಅವರು ಆದ್ಯತೆ ನೀಡಿದ್ದರು. ಮನೆಯಿಂದ, ನೆಲೆಸಿರುವ ಸ್ಥಳದಿಂದ ದೇಶಪ್ರೇಮ ಆರಂಭ ಎಂಬುದನ್ನು ಅವರು ಗುರುತಿಸಿದ್ದರು. ಹಾಗೆಯೇ ರಾಜ್ಯ ಮತ್ತು ದೇಶದ ಜತೆಗೆ ತಮ್ಮ ಸ್ಥಳವು ಹೊಂದಿರುವ ಸಂಬಂಧದ ವಿಸ್ತಾರವಾದ ನೆಲೆಯಲ್ಲಿ ಯೋಚನೆ ಮಾಡಬೇಕು ಎಂಬದನ್ನೂ ಅವರು ಅರ್ಥ ಮಾಡಿಕೊಂಡಿದ್ದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದಕ್ಕಾಗಿ ಅವರು ಯಾವತ್ತೂ ಹಿಂಸೆಯ ಮೊರೆ ಹೋದವರಲ್ಲ, ಅವರ ಭಾಷೆಯಲ್ಲಿ ಕೂಡ ಹಿಂಸೆಯ ಛಾಯೆ ಇರಲಿಲ್ಲ. ಅವರು ಬದ್ಧತೆ ಮತ್ತು ಅಭಿಮಾನದಿಂದ ಕೆಲಸ ಮಾಡಿದವರೇ ಹೊರತು ಪ್ರಶಸ್ತಿ ಅಥವಾ ಪ್ರತಿಫಲಕ್ಕಾಗಿ ಕೆಲಸ ಮಾಡಿದವರಲ್ಲ.

ಬಲರಾಜ್ ಅವರ ಜೀವನದ ಕೊನೆಯ ಒಂದು ಅಂಶವನ್ನೂ ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಸ್ವಾತಂತ್ರ್ಯ ಪಡೆದು ಎಪ್ಪತ್ತು ವರ್ಷಗಳ ಬಳಿಕ ಭಾರತ ಇಂದು ಆಳವಾಗಿ ವಿಭಜಿತವಾದ ಸಮಾಜವಾಗಿದೆ. ಅಧಿಕಾರದಾಹಿಗಳಾದ ರಾಜಕಾರಣಿಗಳು ಮತ್ತು ಟಿಆರ್‍ಪಿಯ ಬೆನ್ನು ಬಿದ್ದಿರುವ ಮಾಧ್ಯಮಗಳು ಈ ವಿಭಜನೆಗೆ ಕಾರಣವಾಗಿದ್ದಾರೆ ಮತ್ತು ಅದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಈಗ ಭಾರತದಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಸಾಮರಸ್ಯ ಮೂಡಿಸುವುದು.

ಹಾಗೆಯೇ ಇದು ಅತ್ಯಂತ ಅನಿವಾರ್ಯವಾದ ಕೆಲಸವೂ ಹೌದು. ಜಾತಿ, ಧರ್ಮಗಳು, ಪ್ರದೇಶಗಳು ಮತ್ತು ಭಾಷೆಗಳ ನಡುವಣ ಸಂಬಂಧದಲ್ಲಿ ಉಂಟಾಗಿರುವ ಅನುಮಾನ ಮತ್ತು ದ್ವೇಷದ ಬದಲಿಗೆ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳುವುದು ಭಾರತವು ಒಗ್ಗಟ್ಟಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಉಳಿಯಲು ಅಗತ್ಯವಾಗಿದೆ. ಈ ಸಾಮರಸ್ಯಕ್ಕಾಗಿ ಬಲರಾಜ್ ಅವರು ತಮ್ಮ ಜೀವನವಿಡೀ ಶ್ರಮಿಸಿದರು; ಶ್ರೇಷ್ಠ ದೇಶಪ್ರೇಮಿ ಮತ್ತು ಸಾಮರಸ್ಯದ ಪ್ರತಿಪಾದಕ ಮೋಹನ್‍ದಾಸ್ ಕರಮಚಂದ್ ಗಾಂಧಿಯ ಹೆಜ್ಜೆಗಳನ್ನು ಅಭಿಮಾನದಿಂದ ಅನುಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT