ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ವಿರೋಧಿ ಕಾನೂನು: ಮತ್ತೊಮ್ಮೆ ವಿವಾದದ ಸುಳಿಯಲ್ಲಿ

Last Updated 18 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮಹಿಳೆಯರ ವಿರುದ್ಧದ ದೌರ್ಜನ್ಯಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ರೂಪಿಸಲಾಗಿದೆ ಎಂದು ಬಿಂಬಿಸಲಾಗುತ್ತಿರುವ ಅಪರಾಧ ಕಾನೂನು (ತಿದ್ದುಪಡಿ) ಮಸೂದೆ- 2013ಕ್ಕೆ ಕೇಂದ್ರ ಸಂಪುಟ ತನ್ನ ಒಪ್ಪಿಗೆಯನ್ನು ಸೂಚಿಸಿದೆ. ವರ್ಮಾ ಸಮಿತಿಯ ವರದಿಯನ್ನು ಸಂರ್ಪೂಣವಾಗಿ ಮನ್ನಿಸದೆ ಆತುರಾತುರವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಿ, ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರವನ್ನು ಪಡೆದ ಸರ್ಕಾರ, ಅಪರಾಧ ಕಾನೂನು (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಸ್ವೀಕೃತಿಯನ್ನು ಪಡೆಯಲು ಅದನ್ನು ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.

ಸುಗ್ರೀವಾಜ್ಞೆ ಜಾರಿಯಾದ ಆರು ವಾರಗಳ ಒಳಗೆ ಅದಕ್ಕೆ ಶಾಸನಾತ್ಮಕ ಅಂಗೀಕಾರವನ್ನು ಪಡೆಯುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಆ ಅವಧಿ ಏಪ್ರಿಲ್ ತಿಂಗಳ ನಾಲ್ಕನೇ ತಾರೀಖಿಗೆ ಮುಗಿಯಲಿದೆ. ಮಾರ್ಚಿ 22 ರಂದು ಕೊನೆಗೊಳ್ಳಲಿರುವ ಸಂಸತ್ತಿನ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಬದಲು ಸರ್ಕಾರ ತರಲಿಚ್ಛಿಸಿರುವ ಈ ತಿದ್ದುಪಡಿ ಮಸೂದೆಗೇನಾದರೂ ಅಂಗೀಕಾರ ದೊರೆಯದಿದ್ದರೆ, ಇತ್ತ ಅಪರಾಧ ಕಾನೂನು (ತಿದ್ದುಪಡಿ) 2013ಗೂ ಮಾನ್ಯತೆ ಇಲ್ಲ, ವಿಧೇಯಕಕ್ಕೂ ಜೀವವಿಲ್ಲ.

ಈ ಮಧ್ಯೆ ತಿದ್ದುಪಡಿ ಮಸೂದೆಗೆ ಪಕ್ಷಾತೀತವಾದ ಬೆಂಬಲವನ್ನು ಸಂಸತ್ತಿನಲ್ಲಿ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಸರ್ವ ಪಕ್ಷದ ಸಭೆಯನ್ನು ಕರೆದಿದ್ದು, ಈಗಾಗಲೇ ಈ ಕಾಯಿದೆಯ ಬಗ್ಗೆ ಏಳುತ್ತಿರುವ ಅಪಸ್ವರಗಳ ಶಮನಕ್ಕಾಗಿ ಪ್ರಯತ್ನಿಸುತ್ತಿದೆ.

ದೆಹಲಿಯ ಯುವತಿಯ ಸಾವು ಸಂಭವಿಸಿದಾಗಿನಿಂದ ಆಗಾಗ್ಗೆ ತನ್ನ ನಿಲುವುಗಳನ್ನು, ನೀತಿಗಳನ್ನು ಬದಲಾಯಿಸುತ್ತಿರುವ ಕೇಂದ್ರ ಸರ್ಕಾರ ತಾನೀಗ ಸಂಸತ್ತಿನಲ್ಲಿ ಮಂಡಿಸ ಹೊರಟಿರುವ (ತಿದ್ದುಪಡಿ) ಮಸೂದೆಯಲ್ಲಿ ಮಹಿಳೆಯರ ಹಿತಾಸಕ್ತಿಗಳಿಗೆ ಭಂಗ ತರಬಹುದಾದಂಥ ಕೆಲ ಭಾಗಗಳನ್ನು ಸೇರಿಸಿದೆ. ಅದರಲ್ಲಿ ತೀರಾ ಗಂಭೀರವಾದದ್ದು ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು 16ಕ್ಕೆ ನಿಗದಿಪಡಿಸಿರುವುದು.

ಮಹಿಳಾ ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ ಲಿಂಗ ತಟಸ್ಥವಾದ ಲೈಂಗಿಕ ದೌರ್ಜನ್ಯ ಎಂಬ ಪದವನ್ನು ಕೈಬಿಟ್ಟು ಅತ್ಯಾಚಾರ ಎಂಬ ಪದವನ್ನು ಬಳಕೆ ಮಾಡಿರುವುದು ಸರಿಯೇ. ಹೆಣ್ಣಿನ ದೇಹದ ಮೇಲೆ ಪುರುಷನಿಂದಾಗುವ ಆಕ್ರಮಣವನ್ನು ಮಾತ್ರ ಅತ್ಯಾಚಾರ ಎಂದು ಗುರುತಿಸುವ ಮೂಲಕ ಅದಕ್ಕೆ ಪುರುಷನನ್ನು ಈ ಮಸೂದೆ ಹೊಣೆಗಾರನನ್ನಾಗಿಸುತ್ತದೆ. ಆದರೆ ಅತ್ಯಾಚಾರ ಎಂಬ ಪದದಲ್ಲಿಯೇ ಅಡಗಿರುವ `ಬಲಾತ್ಕಾರ'ದ ಅಂಶವನ್ನೇ ದುರ್ಬಲಗೊಳಿಸುವಂಥ ರೀತಿಯಲ್ಲಿ ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು 16ಕ್ಕೆ ಇಳಿಸ ಹೊರಟಿರುವುದು ಮಾತ್ರ ಅತ್ಯಂತ ಗಂಭೀರ ಸ್ವರೂಪದ ದುಷ್ಟರಿಣಾಮಗಳಿಗೆ ಎಡೆ ಮಾಡಿಕೊಡುವ ಸಂಭವವಿದೆ.

ಲೈಂಗಿಕ ಕ್ರಿಯೆಗೆ ಸಮ್ಮತಿಸುವ ವಯಸ್ಸನ್ನು ಕುರಿತಂತೆ ಈಗಾಗಲೇ ಸಾಕಷ್ಟು ಗೊಂದಲಗಳೂ ವಿರೋಧಾಭಿಪ್ರಾಯಗಳೂ ಇವೆ. ಭಾರತೀಯ ದಂಡ ಸಂಹಿತೆಯ 375ನೇ ವಿಧಿಯ ಪ್ರಕಾರ ಲೈಂಗಿಕ ಕ್ರಿಯೆಗೆ ಸಮ್ಮತಿಸುವ ವಯಸ್ಸು 16. ಆದರೆ ಕಳೆದ ವರ್ಷವಷ್ಟೇ ಜಾರಿಗೆ ಬಂದ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ- 2012ರ ಪ್ರಕಾರ ಸಮ್ಮತಿಸಿದ ಲೈಂಗಿಕ ಕ್ರಿಯೆಗೆ ನಿಗದಿತವಾದ ವಯಸ್ಸು 18. ಬಾಲನ್ಯಾಯ ಕಾಯಿದೆ ಕೂಡ ಸಮ್ಮಿತಿಸುವ ವಯಸ್ಸನ್ನು 18 ಎಂದು ಸ್ಪಷ್ಟಪಡಿಸಿದೆ. ಫೆಬ್ರುವರಿಯಲ್ಲಿ ಹೊರಡಿಸಿದ ಸುಗ್ರೀವಾಜ್ಞೆ ಸಮ್ಮತಿಸುವ ವಯಸ್ಸನ್ನು 16ರಿಂದ 18ಕ್ಕೆ ಏರಿಸಿತ್ತು. ಈಗ ಮತ್ತೆ ಸಮ್ಮತಿಯ ವಯಸ್ಸನ್ನು 16ಕ್ಕೆ ನಿಗದಿ ಪಡಿಸುವ ನಿರ್ಧಾರವನ್ನು ತೆಗೆದುಕೊಂಡಿರುವ ಮಂತ್ರಿಮಂಡಲದ ಕ್ರಮ ನಮ್ಮ ದೇಶದಲ್ಲಿರುವ ವಿವಿಧ ಕಾನೂನುಗಳ ನಡುವೆಯೇ ಗೊಂದಲಗಳಿಗೆ ಎಡೆ ಮಾಡಿಕೊಡುವುದಕ್ಕಷ್ಟೇ ಅಲ್ಲ, ವಿಭಿನ್ನ ರೀತಿಯಲ್ಲಿ ಅವುಗಳನ್ನು ಅರ್ಥೈಸಲು ಕೂಡ ಎಡೆ ಮಾಡಿಕೊಡುವಂತಿದೆ.

ಒಂದೆಡೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಕೂಗು ಗಟ್ಟಿಯಾಗುತ್ತಾ ಹೋಗುತ್ತಿದ್ದರೆ, ಮತ್ತೊಂದೆಡೆ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿರುವ ಒಂದು ಕಟು ಸತ್ಯ. ಎಂಟು ತಿಂಗಳ ಹೆಣ್ಣು ಶಿಶುವಿನಿಂದ ಹಿಡಿದು ಎಂಬತ್ತು ವರ್ಷದ ಹಿರಿಯ ನಾಗರಿಕ ಮಹಿಳೆಯವರೆಗೆ ಯಾರನ್ನು ಬೇಕಾದರೂ ಅತ್ಯಾಚಾರಕ್ಕೆ ಗುರಿಮಾಡಬಹುದಾದ ಕಾಮುಕರು ನಮ್ಮ ನಡುವೆ ಇದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಹದಿಹರೆಯದ ಹೆಣ್ಣು ಮಕ್ಕಳ ಮೇಲೆ ಶಾಲೆಗಳೂ ಸೇರಿದಂತೆ, ಅನೇಕ ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಚಾರ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು 16ಕ್ಕೆ ಇಳಿಸಿದರೆ, ಅತ್ಯಾಚಾರಕ್ಕೆ ಮೂಲವಾದ ಬಲಾತ್ಕಾರದ ಲೈಂಗಿಕ ಸಂಪರ್ಕಕ್ಕೆ ಹೆಣ್ಣಿನ ಸಮ್ಮತಿಯಿತ್ತು ಎಂದು ಬಿಂಬಿಸಿ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅತ್ಯಾಚಾರಿಗಳಿಗೆ ಸುಲಭವಾಗುತ್ತದೆ.

ಹೆಣ್ಣಿಗೆ ರಕ್ಷಣೆ ಒದಗಿಸುವಂಥ ಯಾವುದೇ ಹೊಸ ಕಾನೂನು ಅಸ್ತಿತ್ವಕ್ಕೆ ಬರಬೇಕಾದರೆ ಅದಕ್ಕೆ ವ್ಯಕ್ತವಾಗುವ ಒಂದು ಪ್ರಬಲ ವಿರೋಧವೆಂದರೆ ಮಹಿಳೆಯರು ಅದರ ದುರುಪಯೋಗ ಪಡಿಸಿಕೊಂಡು ಪುರುಷರನ್ನು ಶೋಷಣೆ ಮಾಡುತ್ತಾರೆ ಎಂಬುದು. ಈ ಭಾವನೆಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ಅನೇಕರಿಂದ ಬೆಂಬಲವಿದೆ. ಆದರೆ ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಣ್ಣುಮಕ್ಕಳಿಗೆ ಅನ್ಯಾಯವಾಗುವ ರೀತಿಯಲ್ಲಿ ಈ ಕಾನೂನನ್ನು ಅತ್ಯಾಚಾರವೆಸಗುವ ಅನೇಕ ಪುರುಷರು ದುರುಪಯೋಗ ಮಾಡಿಕೊಳ್ಳಬಹುದಾದ ಸಾಧ್ಯತೆಯನ್ನು ಕೇಂದ್ರ ಸಂಪುಟದಲ್ಲಿದ್ದವರು ಪರಿಗಣಿಸಲಿಲ್ಲವೇಕೆ? ಲೈಂಗಿಕ ಕ್ರಿಯೆಗೆ ಸಮ್ಮತಿಯನ್ನು ಸೂಚಿಸುವ ವಯಸ್ಸನ್ನು 16 ಎಂದು ನಿಗದಿಪಡಿಸವುದರ ಬಗ್ಗೆ ಇದೇ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ತೀವ್ರ ವಿರೋಧ ವ್ಯಕ್ತ ಪಡಿಸಿದರು ಎಂದು ವರದಿಗಳು ತಿಳಿಸಿವೆ. ಆದಾಗ್ಯೂ ಅದನ್ನು ಲೆಕ್ಕಿಸದೆ, ಇಂತಹುದೊಂದು ಗಂಭೀರವಾದ ವಿಚಾರವನ್ನು ಸಾರ್ವಜನಿಕ ಚರ್ಚೆಗೂ ಒಳಪಡಿಸದೆ ಈ ದೇಶದ ಪ್ರಜೆಗಳ ಮೇಲೆ ಹೇರ ಹೊರಟಿರುವುದು ಕೂಡ  `ಬಲಾತ್ಕಾರ'ದ ಮತ್ತೊಂದು ಮುಖವಷ್ಟೆ.

ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು 16 ವರ್ಷಕ್ಕೆ ಇಳಿಸುವುದರಿಂದ ಬಾಲ್ಯ ವಿವಾಹಕ್ಕೆ ಕಾನೂನಿನ ಬೆಂಬಲವನ್ನು ಅಪ್ರತ್ಯಕ್ಷವಾಗಿ ನೀಡಿದಂತೆ. ವಿವಾಹದ ಕನಿಷ್ಠ ವಯಸ್ಸನ್ನು ಹೆಣ್ಣಿಗೆ 18 ವರ್ಷಗಳು ಎಂದು ನಿಗದಿಪಡಿಸಿದ್ದರೂ, ದೇಶದ ನಾನಾ ಭಾಗಗಳಲ್ಲಿ ಇಂದಿಗೂ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ ವ್ಯಾಪಕವಾಗಿ ನಡೆಯುತ್ತಿವೆ. ಸರ್ಕಾರಿ ಮೂಲಗಳ ಪ್ರಕಾರ ಶೇಕಡಾ 37ರಷ್ಟು ಸ್ತ್ರೀ ಜನಸಂಖ್ಯೆಯ ವಿವಾಹಗಳು ಅವರು 18 ವರ್ಷ ವಯಸ್ಸನ್ನು ತಲುಪುವ ಮುನ್ನವೇ ನಡೆಯುತ್ತಿದ್ದು, ಬಿಹಾರ, ಮಧ್ಯಪ್ರದೇಶ ಮತ್ತು ರಾಜಾಸ್ಥಾನ ರಾಜ್ಯಗಳಲ್ಲಿ ಈ ಪ್ರಮಾಣ ಶೇಕಡಾ 50-60ರಷ್ಟಿದೆ!

ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗಿ, ತಾಯ್ತನದ ಜವಾಬ್ದಾರಿಯನ್ನು ಹೊರಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಿಲ್ಲದ ಹೆಣ್ಣುಮಕ್ಕಳನ್ನು ಬಲಾತ್ಕಾರದ ಮದುವೆಗಳಿಗಷ್ಟೇ ಅಲ್ಲ, ವಿವಾಹಾ ನಂತರ ಅತ್ಯಾಚಾರಕ್ಕೆ ಗುರಿಪಡಿಸಲು ಕೂಡ ಉದ್ದೇಶಿತ ಮಸೂದೆ ಕುಮ್ಮಕ್ಕು ಕೊಡುವ ಸಾಧ್ಯತೆಯಿದೆ. ವೈವಾಹಿಕ ಅತ್ಯಾಚಾರವನ್ನು ಅತ್ಯಾಚಾರವೆಂದು ಪರಿಗಣಿಸಲು ಸಿದ್ಧವೇ ಇಲ್ಲದ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ, ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಲು ಇದೊಂದು ಅಪ್ರತ್ಯಕ್ಷ ಆಹ್ವಾನವಾಗಬಹುದು. ಈ ದೇಶದಲ್ಲಿ 15-19 ವರ್ಷ ವಯಸ್ಸಿನ ತಾಯಂದಿರಲ್ಲಿ ಮಾತೃ ಮರಣದ ಪ್ರಮಾಣ ಈಗಾಗಲೇ ಅಧಿಕವಾಗಿದ್ದು, ವೈವಾಹಿಕ ಅತ್ಯಾಚಾರ ಪ್ರೇರಿತ ಅಸುರಕ್ಷಿತ ತಾಯ್ತನಕ್ಕೆ, ಸಮ್ಮತಿಯ ವಯಸ್ಸನ್ನು ಇಳಿಸಿರುವುದು ಕೂಡ ಒಂದು ಕಾರಣವಾಗಬಹುದು.

ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸನ್ನು 16ಕ್ಕೆ ಇಳಿಸಲು ಕಾನೂನಿನಲ್ಲೇ ಅವಕಾಶವನ್ನು ನೀಡಿಬಿಟ್ಟರೆ, ಹದಿಹರೆಯದ ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಿದ ಅತ್ಯಾಚಾರಿಯೊಡನೆಯೇ ಆಕೆಯನ್ನು ಬಲಾತ್ಕಾರದ ವಿವಾಹದ ಸಂಬಂಧಕ್ಕೆ ಸಿಲುಕಿಸುವುದು ಮತ್ತಷ್ಟು ಸುಲಭವಾಗುತ್ತದಷ್ಟೆ. ಈಗಾಗಲೇ ಇಂಥ ಘಟನೆಗಳು ಕಾನೂನಿನ ಕಣ್ಣಿಗೆ ಬಿದ್ದೋ ಬೀಳದೆಯೋ ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಲೇ ಇವೆ. ಇದೇನಾದರೂ ಜಾರಿಗೆ ಬಂದರೆ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಸಂದೇಹವಿಲ್ಲ.
ಊಳಿಗಮಾನ್ಯ ಸಂಸ್ಕೃತಿಯಲ್ಲಂತೂ ಅಸಾಹಾಯಕ ಹೆಣ್ಣುಗಳ ಮೇಲೆ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ದೇಶದ ಅನೇಕ ಕಡೆಗಳಲ್ಲಿ ಪ್ರಬಲ ಜಾತಿಗಳು, ಶ್ರಿಮಂತ ಭೂಮಾಲೀಕ ವರ್ಗ ಹಾಗೂ ಖಾಪ್ ಪಂಚಾಯತಿಗಳಂಥ ವ್ಯವಸ್ಥೆಗಳು ಹೆಣ್ಣು ಮಕ್ಕಳನ್ನು ಭೋಗ ವಸ್ತುಗಳಂತೆ ಪರಿಗಣಿಸಿ ಅವರ ಮೇಲೆ ನಡೆಯವ ಲೈಂಗಿಕ ಆಕ್ರಮಣಕ್ಕೆ ಕಾರಣರಾದವರನ್ನು ದಂಡಿಸದೆ, ಹೆಣ್ಣಿನ್ನೇ ಅತ್ಯಾಚಾರಕ್ಕೆ ಹೊಣೆ ಮಾಡಿ ಅವಳ ಸ್ವಾತಂತ್ರ್ಯವನ್ನೂ ಕಸಿದು ಕೊಳ್ಳುತ್ತಿರುವಂಥ ಪ್ರಸಂಗಗಳು ವರದಿಯಾಗುತ್ತಲೇ ಇವೆ. ಇಂಥ ಪರಿಸರಗಳಲ್ಲಂತೂ ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು ಇಳಿಸುವುದರಿಂದ, ಅದನ್ನು ಮುಂದಿಟ್ಟುಕೊಂಡು ಹೆಣ್ಣಿನ ಮೇಲೆ ಮತ್ತಷ್ಟು ಲೈಂಗಿಕ ಒತ್ತಡವನ್ನು ತಂದು, ಅದಕ್ಕೆ ಆಕೆಯ ಸಮ್ಮತಿಯಿತ್ತು ಎಂದು ವಾದಮಾಡುವುದು, ಅಥವಾ ಬಲಾತ್ಕಾರದ ಮದುವೆಗೆ ಅವಳನ್ನು ತಳ್ಳುವುದು-ಇವೆರಡೂ ಹೆಚ್ಚಾಗಬಹುದು. ಇಂಥ ಪರಿಸ್ಥಿತಿಯಲ್ಲಿ, ವಯಸ್ಕ ಸ್ಥಿತಿಗೆ ತಲುಪುವ ಮುನ್ನ ಹೆಣ್ಣನ್ನು ಲೈಂಗಿಕ ಸಂಪರ್ಕಕ್ಕೆ ಬಲಾತ್ಕಾರ ಮಾಡಿದರೆ ಅದನ್ನು ಪ್ರತಿಭಟಿಸುವ ಅಥವಾ ಕಾನೂನು ಕ್ರಮಕ್ಕೆ ಒತ್ತಾಯಿಸುವ ಮನಸ್ಸಿರುವವರು ಕೂಡ ಮೌನವಾಗಬೇಕಾಗುತ್ತದೆ.

ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು 16 ವರ್ಷಕ್ಕೆ ಇಳಿಸುವ ಬಗ್ಗೆ ಅಷ್ಟೊಂದು ಗಾಬರಿಯಾಗಬೇಕಾದ ಅಗತ್ಯವಿಲ್ಲ, ಏಕೆಂದರೆ ಇಂದಿನ ಇಂಟರ್‌ನೆಟ್ ಯುಗದಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಜಾಗೃತಿ ಮೂಡಿರುತ್ತದೆ ಎನ್ನುವ ಅಭಿಪ್ರಾಯವೂ ಕೆಲವು ವಲಯಗಳಲ್ಲಿ ವ್ಯಕ್ತವಾಗುತ್ತಿದೆ. ಕುಟುಂಬ, ಶಾಲೆ ಮುಂತಾದ ಸಾಮಾಜಿಕ ಸಂಸ್ಥೆಗಳ ನಿಯಂತ್ರಣ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಅನೇಕ ಮಾಧ್ಯಮಗಳಲ್ಲಿ ನಿರಂತರವಾಗಿ ಬಿಂಬಿತವಾಗುತ್ತಿರುವ ಮುಕ್ತ ಲೈಂಗಿಕತೆಯನ್ನು ಪ್ರತಿಪಾದಿಸುವ ಕಾರ್ಯಕ್ರಮಗಳ ಪ್ರಭಾವಕ್ಕೊಳಗಾಗಿ ಅನೇಕ ಹದಿಹರೆಯದ ಮಕ್ಕಳು ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ನಡುವೆ ಇರುವ ಗೆರೆಯನ್ನೇ ಗುರುತಿಸಲಾಗದ ಮಟ್ಟಕ್ಕೆ ತಲುಪಿದ್ದಾರೆನ್ನುವುದು ನಿಜ.

ಹಾಗೆಂದ ಮಾತ್ರಕ್ಕೆ ಸಮಾಜ ತನ್ನ ಜವಾಬ್ದಾರಿಯನ್ನು ಕಳೆದುಕೊಳ್ಳಬಹುದೇ? ಮಕ್ಕಳಲ್ಲಿ ಲೈಂಗಿಕತೆಯ ಬಗ್ಗೆ ಅರಿವು ಮೂಡಿಸಲು ಲೈಂಗಿಕ ಶಿಕ್ಷಣವನ್ನು ನೀಡಲು ವಿರೋಧ ವ್ಯಕ್ತಪಡಿಸುವ ಮಡಿವಂತಿಕೆಯ ಮನಸ್ಸುಗಳು 16ನೇ ವಯಸ್ಸಿನಲ್ಲಿಯೇ ಮಕ್ಕಳು ಲೈಂಗಿಕ ಕ್ರಿಯೆಗೆ ಸಮ್ಮತಿಯನ್ನು ನೀಡಬೇಕೇ ಇಲ್ಲವೇ ಎಂಬ ವಿವೇಚನೆಯನ್ನು ಹೊಂದಿರುತ್ತಾರೆ ಎಂದು ವಾದ ಮಾಡುವುದೇಕೆ? ಕಾನೂನುಗಳ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಹೊಣೆಯನ್ನು ಹೊತ್ತಿರುವ ಸರ್ಕಾರ ಇಂಥ ಗಂಭೀರವಾದ ವಿಷಯವನ್ನು ವಿವಿಧ ಆಯಾಮಗಳಿಂದ ಪರಿಶೀಲಿಸುವುದನ್ನು ಬಿಟ್ಟು ಕೆಲ ಹಿತಾಸಕ್ತಿಗಳ ಒತ್ತಡಗಳಿಗೆ ಮಣಿಯಬಹುದೇ? ಈ ಪ್ರಶ್ನೆಗಳೆಲ್ಲಾ ಪ್ರಶ್ನೆಗಳಾಗಿಯೇ ಉಳಿದಿವೆ.

ವಯಸ್ಕರೆಂದು ಪರಿಗಣಿಸುವ ಮುನ್ನವೇ ಸ್ವಇಚ್ಛೆಯಿಂದ ಲೈಂಗಿಕ ಕ್ರಿಯೆಗಳಲ್ಲಿ ಹೆಣ್ಣು ಮಕ್ಕಳು ಭಾಗಿಯಾಗಿ, ತದನಂತರದಲ್ಲಿ ಗಂಡು ಮಕ್ಕಳನ್ನು ಮಾತ್ರ ಅದಕ್ಕೆ ಹೊಣೆಗಾರರನ್ನಾಗಿಸಿ ಅವರು ಶಿಕ್ಷೆಯನ್ನು ಅನುಭವಿಸುವಂತೆ ಸುಳ್ಳು ದೂರುಗಳನ್ನು ದಾಖಲಿಸುವುದನ್ನು ತಪ್ಪಿಸಲು ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು 16ಕ್ಕೆ ಇಳಿಸಲು ಒಂದು ಮುಖ್ಯ ಕಾರಣ ಎಂದು ಕೂಡ ಹೇಳಲಾಗುತ್ತಿದೆ. `ಸುಳ್ಳು ದೂರು'ಗಳು ಮತ್ತು `ಸತ್ಯ ದೂರು'ಗಳು ಎಂದು ದೂರುಗಳನ್ನು ವರ್ಗೀಕರಿಸಿ, ಯಾವುದು ಹೆಚ್ಚು, ಯಾವುದು ಕಡಿಮೆ ಎಂಬ ಅಂಕಿ-ಅಂಶಗಳೇನಾದರೂ ಪೊಲೀಸ್ ಇಲಾಖೆಗಳ ಬಳಿ ಇವೆಯೇ? ದಿನನಿತ್ಯ ಅತ್ಯಾಚಾರಗಳ ಸಂಖ್ಯೆ ಏರುತ್ತಿರುವ ಪರಿಯನ್ನು ನೋಡಿದರೆ ತಿಳಿಯುತ್ತದೆ ಇಲ್ಲಿ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತರು ಎಂಬುದು.

ಹೆಣ್ಣಿಗೆ ಬದುಕುವ ಹಕ್ಕನ್ನು ನೀಡುವ ವಿಚಾರ ಬಂದಾಗಲೆಲ್ಲಾ ವಿರೋಧಗಳು ವ್ಯಕ್ತವಾಗುವುದು ಈ ಸಮಾಜದ ಇತಿಹಾಸದ ಒಂದು ಭಾಗ. ಸಮ್ಮತಿಸಿದ ಲೈಂಗಿಕ ಕ್ರಿಯೆಯ ವಯಸ್ಸನ್ನು ಏರಿಸಲು ಈ ದೇಶದಲ್ಲಿ ಒಂದು ದೊಡ್ಡ ಹೋರಾಟವೇ ನಡೆದಿದೆ. ಅದನ್ನು ನಮ್ಮ ಸರ್ಕಾರ ನೆನಪಿನಲ್ಲಿಟ್ಟುಕೊಂಡು, ಹೆಣ್ಣಿಗೆ ಈ ದೇಶದಲ್ಲಿ ಸುರಕ್ಷಿತ ಬದುಕನ್ನು ಕಟ್ಟಿಕೊಡುವ ಪ್ರಯತ್ನಗಳಲ್ಲಿ ಸ್ತ್ರೀ ಸಂವೇದನೆ ಇರುವವರನ್ನು ತೊಡಗಿಸಲಿ. ಸ್ತ್ರೀಯರನ್ನು ರಾಜಕೀಯ ದಾಳಗಳಾಗಿ ಬಳಸುವ ಪರಂಪರೆಗೆ ಕೊನೆ ಹಾಡಿ ಈಗಲಾದರೂ ಪ್ರಜ್ಞಾವಂತ ಧ್ವನಿಗಳಿಗೆ ಬೆಲೆ ಕೊಡದಿದ್ದರೆ ನಿರ್ಭಯ ಸ್ಥಿತಿ ಎನ್ನುವುದು ಮತ್ತೊಂದು ಮರೀಚಿಕೆಯಾಗಿಯೇ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT