ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದು ಅಪಹರಣವಲ್ಲ, ಕೊಲೆ

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಇಸವಿ 2004. ತಾರೀಕು ಜುಲೈ 11. ಅಲಸೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹುಡುಗನೊಬ್ಬ ಕಾಣೆಯಾದ. ಸೋದರತ್ತೆಯ ಮಗನನ್ನು ಭೇಟಿ ಮಾಡಲು ಆ ದಿನ ಮನೆಯಿಂದ ಹೋದವನು ಮರಳಲೇ ಇಲ್ಲ. ಎರಡು ದಿನ ಕಳೆಯಿತು. ಅವನ ತಂದೆ 13ನೇ ತಾರೀಕು ಅಲಸೂರು ಪೊಲೀಸ್ ಠಾಣೆಯಲ್ಲಿ ತಮ್ಮ ಮಗ ಕಾಣೆಯಾದ ಕುರಿತು ದೂರು ಕೊಟ್ಟರು. ಕೇಸು ದಾಖಲಾಯಿತು.

ಪೊಲೀಸರು ಹತ್ತರಲ್ಲಿ ಅದೂ ಒಂದು ಮಾಮೂಲು `ಕಾಣೆಯಾಗಿದ್ದ~ ಪ್ರಕರಣ ಎಂದುಕೊಂಡು ಸುಮ್ಮನಾದರು. ಅಷ್ಟೇನೂ ಆಸಕ್ತಿ ವಹಿಸಲಿಲ್ಲ. ಕಾಣೆಯಾದ ಹುಡುಗನ ತಂದೆಗೆ ಸಹಜವಾಗಿಯೇ ಆತಂಕ. ಅವರು ಮಗ ಇರಬಹುದಾದ ಸಾಧ್ಯತೆಯ ಸ್ಥಳಗಳಲ್ಲೆಲ್ಲಾ ಹುಡುಕಾಡಿದರು. ನೆಂಟರಿಷ್ಟರಿಗೆ ಫೋನ್ ಮಾಡಿ ವಿಚಾರಿಸಿದರು. ಮಗ ಮಾತ್ರ ಸಿಗಲಿಲ್ಲ. ಠಾಣೆಗೆ ಪದೇಪದೇ ಎಡತಾಕಿದರು. `ನಿಮ್ಮ ಮಗ ಪ್ರಾಯದ ಹುಡುಗ. ವಯಸ್ಸು ಹದಿನೇಳು. ಚಿಕ್ಕ ಹುಡುಗ ಏನೂ ಅಲ್ಲ, ಬರುತ್ತಾನೆ ಬಿಡಿ~ ಎಂದುಬಿಟ್ಟರು ಪೊಲೀಸರು. ಹುಡುಗನ ತಂದೆ ದಿಕ್ಕೇ ತೋಚದಂತಾದರು. ಹುಡುಕುವುದನ್ನು ಮಾತ್ರ ಬಿಡಲೇ ಇಲ್ಲ.

ಕಾಣೆಯಾದ ಹುಡುಗನ ತಂದೆಗೆ ಕೆಲವು ದಿನಗಳ ನಂತರ ಒಂದು ಪತ್ರ ಬಂದಿತು. ಆಂಧ್ರಪ್ರದೇಶದ ಮದನಪಲ್ಲಿಯಿಂದ ಪೋಸ್ಟ್ ಆಗಿದ್ದ ಆ ಪತ್ರದಲ್ಲಿ `ನಾವು ನಕ್ಸಲೀಯರು. ಎರಡು ಕೋಟಿ ರೂಪಾಯಿ ಕೊಡದೇ ಇದ್ದರೆ ನಿಮ್ಮ ಮಗನನ್ನು ಕೊಂದು ಹಾಕುತ್ತೇವೆ~ ಎಂದು ಧಮಕಿಹಾಕುವ ಧಾಟಿಯಲ್ಲಿ ಬರೆದಿದ್ದರು. ಗುಜರಿ ಅಂಗಡಿ ಮಾಲೀಕನಾಗಿದ್ದ ಆ ತಂದೆಗೆ ಭೂಮಿ ಕಂಪಿಸಿದ ಅನುಭವ. ಮಗನನ್ನು ಬಿಡಿಸಿ ಕರೆತರಲು ಅವರ ಬಳಿ ನಿಜಕ್ಕೂ ಅಷ್ಟು ಹಣ ಇರಲಿಲ್ಲ. ಏನು ಮಾಡುವುದೋ ಎಂದು ಯೋಚಿಸುವ ಹೊತ್ತಿಗೇ ಎರಡನೇ ಪತ್ರ ಬಂತು. ಅದು ಕೂಡ ಮದನಪಲ್ಲಿಯಿಂದಲೇ ಪೋಸ್ಟ್ ಆದದ್ದು. ತಮ್ಮ ಮಗನ ಕಣ್ಣಿಗೆ ಬಟ್ಟೆ ಕಟ್ಟಿದ್ದನ್ನು ಅಪಹರಣಕಾರರು ಫೋಟೋ ತೆಗೆದು ಕಳಿಸಿದ್ದರು. ಬೇಗ ಹಣದ ವ್ಯವಸ್ಥೆ ಮಾಡದೇ ಇದ್ದರೆ ಮುಗಿಸುವುದಾಗಿ ಇನ್ನೊಮ್ಮೆ ಧಮಕಿ ಹಾಕಿದ್ದರು.

ಎರಡೂ ಪತ್ರಗಳನ್ನು ತೆಲುಗಿನಲ್ಲಿ ಬರೆದಿದ್ದರು. ಆ ತಂದೆ ಬೇರೆ ದಾರಿ ಕಾಣದ ತಕ್ಷಣ ಅಲಸೂರು ಪೊಲೀಸ್ ಠಾಣೆಗೆ ಎರಡೂ ಪತ್ರಗಳನ್ನು ತೆಗೆದುಕೊಂಡು ಹೋಗಿ, ತೋರಿಸಿದರು. ಮೊದಲು ಕೊಟ್ಟಿದ್ದ ದೂರಿಗೆ ಪೂರಕವಾಗಿ ಇನ್ನೊಂದು ದೂರನ್ನು ಕೊಟ್ಟರು. ಮಗನನ್ನು ಅಪಹರಿಸಿ, ಒತ್ತೆಹಣ ಕೇಳುತ್ತಿದ್ದಾರೆಂಬುದನ್ನು ಉಲ್ಲೇಖಿಸಿದರು. ನಕ್ಸಲೀಯರು ಅಪಹರಿಸಿರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕೇಸು ದಿಢೀರನೆ ಮಹತ್ವ ಪಡೆದು ಕೊಂಡಿತು. ಪೊಲೀಸ್ ಕಮಿಷನರ್ ಆ ಪ್ರಕರಣವನ್ನು `ಸಿಟಿ ಕ್ರೈಮ್ ಬ್ರ್ಯಾಂಚ್~ (ಸಿಸಿಬಿ)ಗೆ ವಹಿಸಿದರು.

ನಾನು ಆಗ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ತಂಡದವರು ದಾಖಲೆಗಳನ್ನು ಗಮನಿಸಿದೆವು. ಹುಡುಗ ಸೋದರತ್ತೆಯ ಮಗನ ನೋಡಲೆಂದು ಹೊರಟ ನಂತರ ಕಾಣೆಯಾಗಿದ್ದ. ಹಾಗಾಗಿ ನಮ್ಮ ಮೊದಲ ಅನುಮಾನ ಆ ಸೋದರತ್ತೆಯ ಮಗ. ಅವನನ್ನು ಭೇಟಿ ಮಾಡಲು ಹೋದೆವು. ನಮ್ಮ ಮಾಹಿತಿದಾರರ ಜಾಲ ಪ್ರಬಲವಾಗಿತ್ತು.

ಕನಕಪುರ ರಸ್ತೆಯ ಅಂಜನಾಪುರದಲ್ಲಿ ಆ ಹುಡುಗ ಹಾಗೂ ಅವನ ಕೆಲವು ಗೆಳೆಯರು ಇದ್ದರೆಂಬುದನ್ನು ತಿಳಿಯಿತು. ಮೂವರು ಆರೋಪಿಗಳು- ಶೇಕ್ ರಹೀಜ್ ಅಹಮದ್, ಶಫೀಉಲ್ಲಾ, ತಜ್ಮಲ್ ಅಹಮದ್ ನಮಗೆ ಅಲ್ಲಿ ಸಿಕ್ಕರು. ಅವರನ್ನು ಸಿಸಿಬಿಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದೆವು. ಆಗ ನಡೆದ ನಿಜವಾದ ಸಂಗತಿಯನ್ನು ಎಲ್ಲರೂ ಬಾಯಿಬಿಟ್ಟರು.

ಶೇಕ್ ರಹೀಜ್ ಅಹಮದ್ ಹೈದರಾಬಾದ್ ಮೂಲದವನು. ಅವನು ಅಮೆರಿಕದಲ್ಲಿ ಕೆಲಸ ಮಾಡಿ, ಯಾಕೋ ಸಾಕೆನ್ನಿಸಿ ಭಾರತಕ್ಕೆ ಬಂದು ನೆಲೆಸಿದ್ದ. ಅಮೆರಿಕದಲ್ಲಿಯೇ ಹುಟ್ಟಿ ಬೆಳೆದವಳನ್ನು ಮದುವೆಯಾಗಿದ್ದ. ಅಲ್ಲಿ ಮಾಡಿದ ಒಂದಿಷ್ಟು ಹಣವನ್ನು ಖರ್ಚು ಮಾಡಿಕೊಂಡು ಬದುಕುತ್ತಿದ್ದವನಿಗೆ ಕಷ್ಟವಿಲ್ಲದೆ ಹಣ ಸಂಪಾದಿಸುವ ದಾರಿ ಹುಡುಕುವ ಮನಸ್ಸಾಯಿತು. ಅವನ ಆ ಆಸೆಗೆ ನೀರೆರೆದದ್ದು ತಜ್ಮಲ್ ಅಹಮದ್. ತನ್ನ ಸಂಬಂಧಿಯನ್ನೇ ಅಪಹರಿಸುವ ಐಡಿಯಾ ಕೊಟ್ಟದ್ದು ಅವನೇ. `ಅವರಪ್ಪನ ಬಳಿ ಸಾಕಷ್ಟು ಹಣವಿದೆ. ಒತ್ತೆ ಇಟ್ಟುಕೊಂಡು ಕೇಳಿದರೆ ಕೊಡುತ್ತಾರೆ~ ಎಂದು ಸಲಹೆ ಕೊಟ್ಟ. ಅಮೆರಿಕದ ಶೇಕ್ ರಹೀಜ್ ಬಹು ಬೇಗ ಅದನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸಿದ.

ನವಾಜ್ ಅಹಮದ್‌ನನ್ನು ತನ್ನ ಬಳಿ ಬರುವಂತೆ ತಜ್ಮಲ್ ಕರೆದ. ನವಾಜ್‌ಗೆ ಕಂಪ್ಯೂಟರ್ ಗೇಮ್ ಆಡುವ ಹುಚ್ಚು. ಗೆಳೆಯರ ಮನೆಯಲ್ಲಿ ಆ ಅವಕಾಶವಿತ್ತು. ಸೋದರತ್ತೆಯ ಮಗ ತಜ್ಮಲ್ ಕರೆಗೆ ಅವನು ತಕ್ಷಣ ಸ್ಪಂದಿಸಿ ಮನೆಯಿಂದ ಹೊರಟ. ಬೆಂಗಳೂರಿನ ಸೇಂಟ್‌ಮಾರ್ಕ್ಸ್ ರಸ್ತೆ `ಕೋಶೀಸ್~ ಹತ್ತಿರ ತಜ್ಮಲ್ ಹಾಗೂ ಗೆಳೆಯರು ಅವನಿಗೆ ಸಿಕ್ಕರು. ಅಲ್ಲಿಯೇ ವಾಹನ ನಿಲ್ಲಿಸುವಂತೆ ನವಾಜ್‌ಗೆ ಹೇಳಿ, ಅಲ್ಲಿಂದ ವಿಲ್ಸನ್ ಗಾರ್ಡನ್‌ನಲ್ಲಿದ್ದ ಮನೆಗೆ ಅವನನ್ನು ಕರೆದುಕೊಂಡು ಹೋದರು.

ನವಾಜ್ ಕಂಪ್ಯೂಟರ್ ಗೇಮ್ ಆಡುತ್ತಾ ಮೈಮರೆತ. ಅವನ ಅಪ್ಪನಿಂದ ಹಣವನ್ನೇನೋ ಪಡೆಯಬಹುದು. ಆದರೆ, ಹೊರಗೆ ಬಿಟ್ಟಮೇಲೆ ನವಾಜ್ ತಮ್ಮ ರಹಸ್ಯವನ್ನೆಲ್ಲಾ ಬಯಲು ಮಾಡುತ್ತಾನೆ. ಹಾಗಾಗಿ ಅವನನ್ನು ಮುಗಿಸಿ, ಬದುಕಿದ್ದಾನೆ ಎಂದು ಸುಳ್ಳು ಹೇಳಿಯೇ ಅವನಪ್ಪನಿಂದ ಹಣ ಕೇಳಿದರಾಯಿತು ಎಂದು ಶೇಕ್ ರಹೀಜ್ ಅಹಮದ್ ಪ್ಲಾನ್ ಬದಲಿಸಿದ. ಕಂಪ್ಯೂಟರ್ ನೋಡುತ್ತಿದ್ದ ನವಾಜ್ ಕತ್ತಿಗೆ ಕೇಬಲ್ ವೈರ್ ತೆಗೆದುಕೊಂಡು ಹಿಂದಿನಿಂದ ಬಿಗಿದರು. ಕೊಸರಾಡಿದ ಕೆಲವೇ ಕ್ಷಣಗಳಲ್ಲಿ ಅವನು ಮೃತಪಟ್ಟ.
ಒಂದು ಡ್ರಮ್‌ನಲ್ಲಿ ನವಾಜ್ ಶವವನ್ನು ತುಂಬಿಸಿದರು. ಸಿಟಿ ಮಾರ್ಕೆಟ್ ಬಳಿಯ ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆಯಲ್ಲಿ ಶೌಚಾಲಯ ಶುಚಿಗೊಳಿಸಲು ಆಸಿಡ್ ಮಾರುತ್ತಾರೆ. ಅದನ್ನು ತಂದು ಶವವಿದ್ದ ಡ್ರಮ್‌ಗೆ ತುಂಬಿಸಿದರು. ಭದ್ರವಾಗಿ ಪ್ಯಾಕ್ ಮಾಡಿ, ಗಮ್ ಟೇಪ್‌ನಲ್ಲಿ ಸೀಲ್ ಮಾಡಿದರು. ಅವರ ಬಳಿ ಮಾರುತಿ ಕಾರ್ ಇತ್ತು. ಅದರ ಡಿಕ್ಕಿಯಲ್ಲಿ ಡ್ರಮ್ಮನ್ನು ಇಟ್ಟುಕೊಂಡು ಹೋಗಿ ಎಸೆದುಬಿಟ್ಟಿದ್ದರು.

ಕೊಂದ ದಿನವೇ ಪತ್ರ ಬರೆದು, ಅದನ್ನು ಮದನಪಲ್ಲಿಯಲ್ಲಿ ಪೋಸ್ಟ್ ಮಾಡಿದರು. ಮೇಡಿ ಮಲ್ಲಸಂದ್ರ ಸಮೀಪದ ನೀಲಗಿರಿ ತೋಪಿನಲ್ಲಿ ಶವ ತುಂಬಿಸಿದ್ದ ಡ್ರಮ್ ಬಿಸಾಡಿದ್ದರು. ಅವರ ಮಾತಿನಲ್ಲಿ ನಿಜವಿದೆಯೋ ಇಲ್ಲವೋ ಎಂದು ನಮಗೆ ಮೊದಲು ಅನುಮಾನ ಬಂತು. ಅವರು ತೋರಿಸಿದ ಜಾಗಕ್ಕೆ ಹೋದೆವು. ದೂರದಲ್ಲಿದ್ದ ಹಳ್ಳದಲ್ಲಿ ನೀಲಿ ಪ್ಲಾಸ್ಟಿಕ್ ಡ್ರಮ್ ಕಾಣಿಸಿತು. ಅದನ್ನು ಬಿಚ್ಚಿದರೆ, ಕೆಲವು ಮೂಳೆಗಳ ತುಂಡುಗಳಿದ್ದವು.

ಮಾಂಸವೆಲ್ಲಾ ಆಸಿಡ್‌ನಲ್ಲಿ ಸುಟ್ಟು, ಕರಗಿ ಮುದ್ದೆಯಂತಾಗಿತ್ತು. ಒಳಉಡುಪುಗಳ ಕೆಲವು ಸಣ್ಣ ತುಂಡುಗಳನ್ನು ಬಿಟ್ಟರೆ ಬೇರೇನೂ ಸಿಗಲಿಲ್ಲ. ಅನಿವಾರ್ಯವಾಗಿ ಡಿಎನ್‌ಎ ಪರೀಕ್ಷೆ ಮಾಡಿಸಬೇಕಾಯಿತು. ನ್ಯಾಯಾಲಯದ ಅನುಮತಿ ಪಡೆದು, ಅದರ ಸಮ್ಮುಖದಲ್ಲೇ ಮೃತಪಟ್ಟವನ ತಾಯಿ-ತಂದೆ, ಸಹೋದರರ ರಕ್ತವನ್ನು ಪಡೆದು, ಡಿಎನ್‌ಎ ಪರೀಕ್ಷೆಗಾಗಿ ಅದನ್ನು ಹಾಗೂ ಶವದ ಮುದ್ದೆಯನ್ನು ಹೈದರಾಬಾದ್‌ಗೆ ಕಳುಹಿಸಿಕೊಟ್ಟೆವು. ಅನುಮತಿ ಪಡೆದ 24 ಗಂಟೆಯೊಳಗೆ ಅದು ಹೈದರಾಬಾದ್‌ನ ಸೆಂಟ್ರಲ್ ಫೊರೆನ್ಸಿಕ್ ಲ್ಯಾಬ್ ತಲುಪಬೇಕಿತ್ತು. ಡಿಎನ್‌ಎ ಪರೀಕ್ಷೆಯಿಂದ ಅದು ನವಾಜ್‌ನದ್ದೇ ಶವ ಎಂಬುದು ದೃಢಪಟ್ಟಿತು. ಸಿಕ್ಕಿದ್ದ ತಲೆಬುರುಡೆಯನ್ನು ಸೂಪರ್‌ಇಂಪೋಸ್ ಮಾಡಿಸಿದ ನಂತರ ಕೂಡ ಕೊಲೆಯಾದವನು ಅವನೇ ಎಂಬುದು ಖಚಿತವಾಯಿತು. ಸಿಕ್ಕ ಎಲ್ಲಾ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಇಟ್ಟೆವು. ಎಲ್ಲಾ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸಿದ ನಂತರವೂ ಸಾಕಷ್ಟು ವಾದ-ಪ್ರತಿವಾದ ನಡೆಯಿತು. ತಪ್ಪಿತಸ್ಥರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.

ಪೊಲೀಸರು ಮೊದಲು ದೂರು ದಾಖಲಾದ ಕ್ಷಣವೇ ಮುತುವರ್ಜಿ ವಹಿಸಿ ಕಾಣೆಯಾದ ಹುಡುಗನ ಸಂಬಂಧಿಯನ್ನು ಕರೆಸಿ ಗಂಭೀರವಾಗಿ ವಿಚಾರಣೆ ಮಾಡಿದ್ದರೆ ನವಾಜ್ ಜೀವ ಉಳಿಯುತ್ತಿತ್ತೋ ಏನೋ? ಹುಡುಗ ನಾಪತ್ತೆಯಾದ ಎರಡು ದಿನಗಳ ನಂತರ ತಜ್ಮಲ್ ಅಹಮದ್ ಅಲಸೂರು ಪೊಲೀಸ್ ಠಾಣೆಗೆ ಬಂದಿದ್ದ. ನವಾಜ್ ತಂದೆಯೇ ಅವನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆಗ ಪೊಲೀಸರು ಅವನನ್ನು ವಿಚಾರಣೆ ಮಾಡದೆ ಸುಮ್ಮನೆ ಬಿಟ್ಟಿದ್ದರು.

ಜಂಟಿ ಆಯುಕ್ತ ಅಲೋಕ್ ಮೋಹನ್ ಹಾಗೂ ಕಮಿಷನರ್ ಮರಿಸ್ವಾಮಿ ಸಿಸಿಬಿಗೆ ಕೇಸನ್ನು ವಹಿಸಿದಾಗ ನಾವು ಮೊದಲಿಗೆ ಹುಡುಕಿದ್ದೇ ಕಾಣೆಯಾದವನ ಸಂಬಂಧಿ ತಜ್ಮಲ್‌ನನ್ನು. ಅಪಹರಣದ ಬಗ್ಗೆ ಅವನಿಗೆ ಎಲ್ಲಾ ವಿಷಯಗಳೂ ಗೊತ್ತಿತ್ತು. ಪತ್ರಗಳಲ್ಲಿ ಇದ್ದ ಕೈಬರವಣಿಗೆಗೆ ಹೋಲಿಸಲು ಆರೋಪಿಗಳಿಂದ ನಾವು ಬರೆಸಿದ ಬರವಣಿಗೆಯಿಂದಲೂ ಉಪಯೋಗವಾಯಿತು. ಕೈಬರಹ ತಜ್ಞರಿಗೆ ಅದನ್ನು  ಕಳುಹಿಸಿದಾಗ ಅದು ಶೇಕ್ ರಹೀಜ್ ಅಹಮದ್‌ನದ್ದೇ  `ಹ್ಯಾಂಡ್ ರೈಟಿಂಗ್~ ಎಂಬುದು ಸ್ಪಷ್ಟವಾಯಿತು.

ಮೇಲ್ನೋಟಕ್ಕೆ ಮಾಮೂಲಿ ಅಪಹರಣ ಪ್ರಕರಣ ಎನ್ನಿಸಿದರೂ ಅದರ ಹಿಂದೆ ಎಷ್ಟೆಲ್ಲಾ ಸಂಕೀರ್ಣ ಸಮಸ್ಯೆಗಳಿರುತ್ತವೆ ಎಂಬುದಕ್ಕೆ ಇಂಥ ಕೆಲವೇ ಕೆಲವು ಪ್ರಕರಣಗಳು ಸಾಕ್ಷಿಯಂತೆ ಕಾಣುತ್ತವೆ.

ಮುಂದಿನ ವಾರ:ಭಾರತಿ ಅರಸ್ ಭಾಗಿಯಾದ ಮೈನವಿರೇಳಿಸುವ ಪ್ರಕರಣ. ಶಿವರಾಂ ಅವರ ಮೊಬೈಲ್ ಸಂಖ್ಯೆ 9448313066
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT