ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭಾರತದ ಈಶಾನ್ಯ ರಾಜ್ಯಗಳ ಚುನಾವಣೆಗಳಿಗೆ ಸಂಬಂಧಿಸಿ ಈ ವಾರದಲ್ಲಿ ವ್ಯಕ್ತವಾದಷ್ಟು ಆಸಕ್ತಿ ಹಿಂದೆಂದೂ ಇರಲಿಲ್ಲ. ನಾನು ಸಾಮಾನ್ಯವಾಗಿ ಬೆಳಿಗ್ಗೆ ಬೇಗ ಅಂದರೆ 5 ಗಂಟೆಗೆ ಏಳುತ್ತೇನೆ. ಶನಿವಾರ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಸುದ್ದಿ ವಾಹಿನಿಗಳು ಚರ್ಚೆಯಲ್ಲಿ ಭಾಗವಹಿಸಲಿರುವ ಪರಿಣತರ ಜತೆಗೆ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‍ನ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಸಜ್ಜಾಗಿದ್ದವು.

ಒಂದು ದೇಶಕ್ಕೆ ಇದು ಒಳ್ಳೆಯ ಲಕ್ಷಣ. ಈಶಾನ್ಯ ಭಾಗವನ್ನು ಭಾರತ ಹೇಗೆ ನಿರ್ಲಕ್ಷಿಸುತ್ತಿದೆ ಎಂದು ದೂರಿ ‘ಇಂಡಿಯಾ ಟುಡೆ’ ನಿಯತಕಾಲಿಕವು ಕೆಲವು ವರ್ಷಗಳ ಹಿಂದೆ ಸಂಪಾದಕೀಯವನ್ನು ಪ್ರಕಟಿಸಿದ್ದು ನನಗೆ ನೆನಪಿದೆ. ಅದೇ ಸಂಚಿಕೆಯಲ್ಲಿ ಆಗ ಚುನಾವಣೆ ನಡೆಯುತ್ತಿದ್ದ ಎಂಟು ರಾಜ್ಯಗಳ ಬಗೆಗಿನ ವರದಿಗಳೂ ಇದ್ದವು. ಆದರೆ ಪತ್ರಿಕೆಯ ಮುಖಪುಟದಲ್ಲಿ ಉತ್ತರ ಭಾರತದ ಐದು ದೊಡ್ಡ ರಾಜ್ಯಗಳು ಮಾತ್ರ ಬಿಂಬಿತವಾಗಿದ್ದವು. ಜತೆಗೆ ಚುನಾವಣೆ ನಡೆಯಬೇಕಿದ್ದ ಈಶಾನ್ಯ ಭಾಗದ ಮೂರು ರಾಜ್ಯಗಳನ್ನು ನಿರ್ಲಕ್ಷಿಸಲಾಗಿತ್ತು. ಇಂತಹ ಮನೋಭಾವ ಬದಲಾಗುತ್ತಿರುವಂತೆ ಕಾಣುತ್ತಿದೆ ಮತ್ತು ಇದು ನಮಗೆಲ್ಲರಿಗೂ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ.

ಫಲಿತಾಂಶ ಕುತೂಹಲಕರವಾಗಿದೆ ಮತ್ತು ತ್ರಿಪುರಾದ ಫಲಿತಾಂಶ ಇನ್ನೂ ಹೆಚ್ಚು ಆಸಕ್ತಿದಾಯಕವಾಗಿದೆ. ಕಮ್ಯುನಿಸ್ಟ್ ಪಕ್ಷಗಳು ಸಕ್ರಿಯವಾಗಿ ಉಳಿದಿರುವ ದೊಡ್ಡ ಪ್ರಜಾತಂತ್ರ ದೇಶಗಳಲ್ಲಿ ಭಾರತವೇ ಕೊನೆಯದ್ದಾಗಿದೆ. ಈ ಪಕ್ಷಗಳ ಶಕ್ತಿ ತೀವ್ರವಾಗಿ ಕುಂದಿದ್ದರೂ ಇವು ದೇಶದ ರಾಜಕಾರಣವನ್ನು ವರ್ಣಮಯವಾಗಿಸಿವೆ ಮತ್ತು ಮೌಲ್ಯ ತುಂಬಿವೆ. ಆದರೆ, ಈ ಸಂದರ್ಭದಲ್ಲಿ ಕಾಂಗ್ರೆಸ್‍ ಪಕ್ಷದ ಬಗ್ಗೆ ಗಮನಹರಿಸಲು ನಾನು ಬಯಸುತ್ತೇನೆ.

ರಾಜಸ್ಥಾನದಲ್ಲಿ ಫೆಬ್ರುವರಿಯಲ್ಲಿ ನಡೆದ ಉಪಚನಾವಣೆಗಳಲ್ಲಿ ಗೆದ್ದ ಬಳಿಕ ಕಾಂಗ್ರೆಸ್‍ ಮುಖಂಡ ಸಚಿನ್‍ ಪೈಲಟ್‍ ಹೀಗೆ ಹೇಳಿದ್ದರು: ‘ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ಪಾಲಿಕೆಗಳು, ವಾರ್ಡ್‍ಗಳಂತಹ ಚುನಾವಣೆಗಳಲ್ಲಿ ಗೆಲ್ಲಬೇಕು. ಇಂತಹ ಚುನಾವಣೆಗಳೇ ಪಕ್ಷ ಸಂಘಟನೆಯ ತಳಹದಿ
ಯನ್ನು ರೂಪಿಸುತ್ತವೆ. ನಾವು ರಾಜ್ಯಗಳಲ್ಲಿ ಗೆಲ್ಲಬೇಕಿದೆ. ಸಾಕಷ್ಟು ಸಂಖ್ಯೆಯ ರಾಜ್ಯಗಳಲ್ಲಿ ಅಧಿಕಾರ ಹಿಡಿಯದಿದ್ದರೆ ರಾಷ್ಟ್ರಮಟ್ಟದಲ್ಲಿ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ’.

ರಾಷ್ಟ್ರೀಯ ಪಕ್ಷಗಳು ಗೆಲ್ಲಲು ರಾಜ್ಯಗಳು ಯಾಕೆ ಮುಖ್ಯ? ಸ್ಥಳೀಯವಾಗಿ ಅಧಿಕಾರ ಹಿಡಿಯುವುದರ ಮಹತ್ವ ಏನು? ಇತಿಹಾಸದಲ್ಲಿ ಎಂದೂ ಕಾಂಗ್ರೆಸ್‍ ಪಕ್ಷ ಇಷ್ಟೊಂದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರಲಿಲ್ಲ. ಹಾಗಾಗಿಯೇ ಸ್ಥಳೀಯ ಚುನಾವಣೆಯ ಮಹತ್ವದತ್ತ ನಾವು ಗಮನ ಹರಿಸಬೇಕಿದೆ. ಈ ವರ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ಈ ಚಿತ್ರಣ ಬದಲಾದರೂ ಆಗಬಹುದು. 2019ರ ಲೋಕಸಭೆ ಚುನಾವಣೆಗೆ ಮೊದಲಿನ ದಿನಗಳಲ್ಲಿ ಕಾಂಗ್ರೆಸ್‍ ಪಕ್ಷ ಉತ್ತಮ ಪ್ರದರ್ಶನ ತೋರುವುದು ಆ ಪಕ್ಷದ ಅಧ್ಯಕ್ಷ ರಾಹುಲ್‍ ಗಾಂಧಿಗೆ ಯಾಕೆ ಮುಖ್ಯ?

ಇದರಿಂದ ದೊರೆಯುವ ಮೊದಲ ಅನುಕೂಲ ಬಹಳ ಸ್ಪಷ್ಟ. ಅಧಿಕಾರದಲ್ಲಿ ಇರುವುದೇ ರಾಜಕಾರಣದ ಮುಖ್ಯ ಉದ್ದೇಶ. ಪಕ್ಷವು ತನ್ನ ಸಿದ್ಧಾಂತದ ಎಳೆಗಳನ್ನು ರೂಪಿಸಿಕೊಂಡು ಕಾರ್ಯಸೂಚಿಯನ್ನು ಸಿದ್ಧಪಡಿಸಬಹುದು. ಅದು ಹೇಗೆಂದರೆ, ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ದನದ ಮಾಂಸ ಮತ್ತು ಜಾನುವಾರು ಕೊಲ್ಲುವುದನ್ನು ನಿಷೇಧಿಸುವ ಮೂಲಕ ಕೆಲವು ತಿಂಗಳುಗಳು ದೇಶದಾದ್ಯಂತ ಇದು ಚರ್ಚೆಯಾಗುವಂತೆ ಬಿಜೆಪಿ ಮಾಡಿತು.

ಎರಡನೆಯ ಅನುಕೂಲವೆಂದರೆ, ನಗರಪಾಲಿಕೆ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ತಮ್ಮ ಕ್ಷೇತ್ರಕ್ಕಾಗಿ ಕೆಲಸ ಮಾಡಲು ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಜನರ ಮನೆಗಳಿಗೆ ವಿದ್ಯುತ್‍ ಸಂಪರ್ಕ ಕೊಡಿಸುವುದರಿಂದ ಹಿಡಿದು ಅವರ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ದೊರಕಿಸಿಕೊಂಡು
ವಂತಹ ಕೆಲಸಗಳನ್ನು ಮಾಡುತ್ತಲೇ ಬಹಳಷ್ಟು ರಾಜಕಾರಣಿಗಳು ತಮ್ಮ ದಿನವನ್ನು ಆರಂಭಿಸುತ್ತಾರೆ ಮತ್ತು ಇಂತಹ ಕೆಲಸಗಳ ಮೂಲಕವೇ ಅವರ ದಿನ ಕೊನೆಯಾಗುತ್ತದೆ. ಇಂತಹ ಕೆಲಸಗಳನ್ನು ಅಧಿಕಾರದಲ್ಲಿರುವ ಪಕ್ಷಕ್ಕಷ್ಟೇ ಮಾಡಲು ಸಾಧ್ಯ. ವಿರೋಧ ಪಕ್ಷಕ್ಕಲ್ಲ.

ಮೂರನೇ ಅನುಕೂಲ ಹಣ. ಇದು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ವೈಯಕ್ತಿಕವಾಗಿ ಭ್ರಷ್ಟರಾಗಿ ಇಲ್ಲದಿದ್ದಾಗಲೂ ತಮ್ಮ ಪಕ್ಷಕ್ಕಾಗಿ ಮುಖಂಡರು ಹಣ ಮಾಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ ಎಂಬುದು ವಾಸ್ತವ. ಪತ್ರಕರ್ತ ಧೀರೇನ್‍ ಭಗತ್‍ ಅವರು ತಮ್ಮ ‘ಕಂಟೆಂಪರರಿ ಕನ್ಸರ್‍ವೇಟಿವ್ಸ್’ ಎಂಬ ಪುಸ್ತಕದಲ್ಲಿ ವಿ.ಪಿ. ಸಿಂಗ್‍ ಅವರಿಗೆ ಸಂಬಂಧಿಸಿದ ಅತ್ಯುತ್ತಮವಾದ ಘಟನೆಯೊಂದನ್ನು ಇದಕ್ಕೆ ಸಂಬಂಧಿಸಿ ಉಲ್ಲೇಖಿಸುತ್ತಾರೆ. ಅಧಿಕಾರದಲ್ಲಿರುವ ಪಕ್ಷಕ್ಕೆ ಉದ್ಯಮ ಸಂಸ‍್ಥೆಗಳು ಅಧಿಕೃತವಾಗಿಯೇ ಹಣ ನೀಡುತ್ತವೆ ಮತ್ತು ಯಾಕೆ ಈ ಹಣ ನೀಡಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಅಧಿಕಾರದಲ್ಲಿದ್ದರೆ ಇರುವ ಅನುಕೂಲದ ನಾಲ್ಕನೆಯ ಅಂಶ ಅಭ್ಯರ್ಥಿಗಳು ಖರ್ಚು ಮಾಡುವ ಹಣಕ್ಕೆ ಸಂಬಂಧಿಸಿದ್ದಾಗಿದೆ. ವಿರೋಧ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮೆಲ್ಲ ಹಣವನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ. ಹಾಗಾಗಿ ಅವರು ಆಡಳಿತ ಪಕ್ಷದ ಅಭ್ಯರ್ಥಿಯಷ್ಟು ಸ್ಪರ್ಧಾತ್ಮಕವಾಗುವುದು ಸಾಧ್ಯವಾಗುವುದಿಲ್ಲ.

ಐದನೆಯ ಅಂಶ ಏನೆಂದರೆ, ಜನರಿಗೆ ಯಾವ ಸಂದೇಶ ಹೋಗಬೇಕು ಎಂಬುದನ್ನು ಅಧಿಕಾರದಲ್ಲಿರುವ ಪಕ್ಷ ನಿಯಂತ್ರಿಸುವುದು ಸಾಧ್ಯ. ಸರ್ಕಾರವು ಜಾಹೀರಾತುಗಳ ಮೂಲಕಇದನ್ನು ಮಾಡುತ್ತದೆ. ಭಾರತದಲ್ಲಿ ಅತ್ಯಂತ ದೊಡ್ಡ ಜಾಹೀರಾತುದಾರ ಕೇಂದ್ರ ಸರ್ಕಾರ. ಕಳೆದ ವರ್ಷ ಪ್ರಧಾನಿ ಮತ್ತು ಅವರ ಯೋಜನೆಗಳ ಜಾಹೀರಾತಿಗೆ ಕೇಂದ್ರ ಸರ್ಕಾರ ₹1,280 ಕೋಟಿ ವೆಚ್ಚ ಮಾಡಿದೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಅರ್ಥಮಾಡಿಕೊಳ್ಳಲು ಉದ್ಯಮ ಸಂಸ್ಥೆಗಳು ನೀಡಿದ ಜಾಹೀರಾತಿನ ಮೊತ್ತವನ್ನು ಗಮನಿಸಬಹುದು. ಲಕ್ಸ್ ಸಾಬೂನಿನಿಂದ ತಾಜ್‍ಮಹಲ್‍ ಚಹಾದವರೆಗೆ ದಿನಬಳಕೆಯ ಎಲ್ಲವನ್ನೂ ಮಾರಾಟ ಮಾಡುವ ಹಿಂದೂಸ್ತಾನ್‍ ಯುನಿಲಿವರ್ ಸಂಸ್ಥೆಯು ಕಳೆದ ವರ್ಷ ಜಾಹೀರಾತಿಗೆ ಮಾಡಿದ ಖರ್ಚು ₹900 ಕೋಟಿ. ಭಾರತದ ಎಲ್ಲ ದೂರಸಂಪರ್ಕ (ಮೊಬೈಲ್‍) ಕಂಪನಿಗಳು ಜಾಹೀರಾತಿಗೆ ಖರ್ಚು ಮಾಡುವ ಹಣವನ್ನು ಒಟ್ಟಾಗಿಸಿದರೂ ಅದು ಕೇಂದ್ರ ಸರ್ಕಾರ ವ್ಯಯ ಮಾಡುವ ಮೊತ್ತದಷ್ಟಾಗುವುದಿಲ್ಲ. ಎಲ್ಲ ರಾಜ್ಯ ಸರ್ಕಾರಗಳೂ ಪ್ರಚಾರಕ್ಕಾಗಿ ಒಂದು ಮೊತ್ತವನ್ನು ನಿಗದಿ ಮಾಡುತ್ತವೆ ಮತ್ತು ಇದು ಮುಖ್ಯವಾಗಿ ಸ್ವಪ್ರಚಾರಕ್ಕೇ ಬಳಕೆಯಾಗುತ್ತದೆ. ದೆಹಲಿಯ ಅರವಿಂದ ಕೇಜ್ರಿವಾಲ್‍ ನೇತೃತ್ವದ ಸರ್ಕಾರ 2015ರಲ್ಲಿ ಪ್ರಚಾರಕ್ಕೆ ಬಳಸಿದ ಹಣ ₹526 ಕೋಟಿ.

ಜಾಹೀರಾತಿಗಾಗಿ ನೀಡುವ ಹಣವು ಮಾಧ್ಯಮಗಳನ್ನು ಸರ್ಕಾರದ ಪರ ನಿಲ್ಲುವಂತೆ ಮಾಡುತ್ತದೆ ಎಂಬುದು ಆರನೆಯ ಅಂಶ. ಸರ್ಕಾರದ ಜಾಹೀರಾತನ್ನೇ ಮುಖ್ಯವಾಗಿ ಅವಲಂಬಿಸಿರುವ ಪ್ರಾದೇಶಿಕ ಪತ್ರಿಕೆಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚು ನಿಜ. ಈ ಅವಲಂಬನೆಗೆ ಒಂದು ಉದಾಹರಣೆಯನ್ನೂ ಕೊಡಬ
ಹುದು. 1.5 ಕೋಟಿ ಓದುಗರಿರುವ ದೇಶದ ಏಳನೇ ಅತ್ಯಂತ ದೊಡ್ಡ ಪತ್ರಿಕೆ ‘ರಾಜಸ್ಥಾನ ಪತ್ರಿಕಾ’, ರಾಜಸ್ಥಾನದ ವಸುಂಧರಾ ರಾಜೇ ನೇತೃತ್ವದ ಸರ್ಕಾರ ಜಾಹೀರಾತು ನೀಡುವುದನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು (ಜಾಹೀರಾತು ನಿಲ್ಲಿಸಲು ಕಾರಣ ಸರ್ಕಾರದ ಪರವಾಗಿ ಪತ್ರಿಕೆ ಇರಲಿಲ್ಲ ಎನ್ನುವುದಾಗಿರಬಹುದು).

ಅಧಿಕಾರದಲ್ಲಿರುವ ಪಕ್ಷಕ್ಕೆ ದೊರೆಯುವ ಏಳನೇ ಮತ್ತು ಕೊನೆಯ ಅನುಕೂಲವೆಂದರೆ, ಆ ಪಕ್ಷವು ಆಡಳಿತ ವ್ಯವಸ್ಥೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವುದು ಸಾಧ್ಯವಾಗುತ್ತದೆ. ಚುನಾವಣಾ ಆಯೋಗವು ಸ್ವಲ್ಪ ಮಟ್ಟಿಗೆ ಇದರ ಮೇಲೆ ಕಣ್ಣಿಡುತ್ತದೆ. ಆದರೆ ಅದು ಚುನಾವಣೆ ಘೋಷಣೆಯಾದ ಬಳಿಕ ಮಾತ್ರ. ಉಳಿದ ಐದು ವರ್ಷಗಳ ಉದ್ದಕ್ಕೂ ಅಧಿಕಾರದಲ್ಲಿರುವ ಪಕ್ಷವು ಪೊಲೀಸ್‍ ಪಡೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದು, ತನ್ನ ಬೆಂಬಲಿಗರಿಗೆ ಸ್ಥಾನಗಳನ್ನು ನೀಡಬಹುದು ಮತ್ತು ಸರ್ಕಾರದ ಮೂಲಸೌಕರ್ಯವನ್ನು ತನಗೆ ಬೇಕಾದಂತೆ ಬಳಕೆ ಮತ್ತು ದುರ್ಬಳಕೆ ಮಾಡಿಕೊಳ್ಳಬಹುದು.

ನಮ್ಮ ದೇಶದಲ್ಲಿ ಈ ಅಂಶಗಳೇ ರಾಜಕೀಯ ಪಕ್ಷಗಳನ್ನು ಪೋಷಿಸುತ್ತವೆ ಮತ್ತು ಸಂರಕ್ಷಿಸುತ್ತವೆ. ಸ್ಥಳೀಯ ಅಧಿಕಾರದ ಮೂಲಕ ನಿರಂತರವಾಗಿ ಶಕ್ತಿ ಮತ್ತು ಪೋಷಣೆ ಪಡೆದುಕೊಳ್ಳದಿದ್ದರೆ 2019ರಲ್ಲಿ ಪ್ರಧಾನಿ ಹುದ್ದೆಯ ಸಹಜ ಉಮೇದುವಾರನಾಗಿ ಹೊರಹೊಮ್ಮುವುದು ರಾಹುಲ್‍ ಗಾಂಧಿಗೆ ಕಷ್ಟವಾಗಬಹುದು.

ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT