ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಮಿಕ ಆಂಗ್ಲರ ಮರಣ ಸ್ಮಾರಕಗಳು

Last Updated 10 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಕಲಾದಗಿಯ ದ.ರಾ. ಪುರೋಹಿತ ಅವರು, ತಮ್ಮೂರಲ್ಲಿರುವ ಆಂಗ್ಲರ ಗೋರಿಗಳನ್ನು ನೋಡಲು ಬಹಳ ದಿನಗಳಿಂದ ಕರೆಯುತ್ತಿದ್ದರು. 19ನೇ ಶತಮಾನದ ಗೋರಿಗಳವು. ಅವನ್ನು ನೋಡಲು ಈಚೆಗೆ ಸಾಧ್ಯವಾಯಿತು.

ಈಗಿನ ಬಾಗಲಕೋಟೆ ಜಿಲ್ಲೆಯಲ್ಲಿರುವ ಕಲಾದಗಿಯು, ಬ್ರಿಟಿಶರ ಕಾಲದ ಸೈನಿಕ ನೆಲೆಗಳಲ್ಲಿ ಒಂದಾಗಿತ್ತು. 1884ರ ತನಕ ಇದು ಮುಂಬೈ ಪ್ರೆಸಿಡೆನ್ಸಿಯಲ್ಲಿ ಜಿಲ್ಲಾಕೇಂದ್ರವೂ ಆಗಿತ್ತು. ಬ್ರಿಟಿಶರು ಇಲ್ಲಿ ಬೀಡುಬಿಡಲು ಕಾರಣಗಳಲ್ಲಿ ಒಂದು ಘಟಪ್ರಭೆ ಹೊಳೆಯಾದರೆ, ಇನ್ನೊಂದು ಹೊಳೆಗಿಂತಲೂ ಮಿಗಿಲಾಗಿ ಪ್ರವಹಿಸುತ್ತಿದ್ದ ಜನಪ್ರತಿರೋಧ.
 
ಹೈದರಾಬಾದ್ ನಿಜಾಮರು ಹಾಗೂ ಮೈಸೂರ ಒಡೆಯರು ಆಂಗ್ಲರ ಯಜಮಾನಿಕೆ ಒಪ್ಪಿಕೊಂಡವರಾದ ಕಾರಣ, ಅವರ ಸೀಮೆಗಳಲ್ಲಿ ಬ್ರಿಟಿಶರಿಗೆ ಆತಂಕವಿರಲಿಲ್ಲ. ಆದರೆ ತಮ್ಮ ನೇರ ಆಳ್ವಿಕೆಯಿದ್ದ ಮುಂಬೈ ಕರ್ನಾಟಕದಲ್ಲಿ ಅವರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದರು. ತಮ್ಮ ಶಸ್ತ್ರಗಳನ್ನು ಒಪ್ಪಿಸಲು ನಿರಾಕರಿಸಿ ಬ್ರಿಟಿಶರಿಗೆ ಸವಾಲೊಡ್ಡಿದ ಬೇಡರ ಹಲಗಲಿಯು, ಕಲಾದಗಿಗೆ ತೀರಾ ಸನಿಹದಲ್ಲಿರುವುದು ಗಮನಾರ್ಹ.

ಬ್ರಿಟಿಶರ ಗೋರಿಗಳನ್ನು ನಾನು ಅಂಡಮಾನಿನಲ್ಲೂ ನೋಡಿರುವೆ. ಬಹುಶಃ ಭಾರತದಲ್ಲಿ ಎಲ್ಲೆಲ್ಲಿ ಬ್ರಿಟಿಶ್ ವಸತಿ ಮತ್ತು ಸೈನಿಕನೆಲೆ (ಕಂಟೋನ್ಮೆಂಟ್) ಇದ್ದವೋ ಅಲ್ಲೆಲ್ಲ ಇವಿವೆ. ಶ್ರೀರಂಗಪಟ್ಟಣದ ಗೋರಿಗಳ ಬಗ್ಗೆ ಕವಿ ಕೆ.ಎಸ್.ನಿಸಾರ್ ಅಹಮದ್- `ಅನಾಮಿಕ ಆಂಗ್ಲರು~ ಎಂಬ ಕವಿತೆ ಬರೆದಿರುವರು.
 
`ಇತಿಹಾಸದಪಹಾಸ್ಯದಂತೆ ಆಂಗ್ಲರ ಶ್ಮಶಾನ; ಅರೆಯೆಕರೆ ಖುಷ್ಕಿನೆಲ ಕವುಚಿ ಹಿಡಿದಿರುವೆರಡು ಶುಷ್ಕಶತಮಾನ~ ಎಂದು ಕವಿತೆ ಆರಂಭವಾಗುತ್ತದೆ. ಕವಿಗೆ ಈ ಆಂಗ್ಲರು `ಸಾಮ್ರೋಜ್ಞಿ ಸೇವೆಯಲಿ ಸವೆದವರು; ಇಂಡಿಯಾದಲ್ಲೊಂದು ಇಂಗ್ಲೆಂಡು ಸ್ಥಾಪಿಸಲು ಹೆಣಗಿದವರು~ ಎನ್ನುವುದು ಗೊತ್ತಿದೆ.
 
ಆದರೆ ಹುಟ್ಟುನೆಲಕ್ಕೆ ಹೊರತಾಗಿ ಪರದೇಶಿಗಳಾಗಿ ಮರಳಿ ಮನೆಗೆ ಹೋಗಲಾಗದೆ ಸತ್ತ ಅವರ ಬಗ್ಗೆ ಅಪಾರ ಕರುಣೆಯೂ ಇದೆ. ಚರಿತ್ರೆಯ ಭಾರವನ್ನು ಪಕ್ಕಕ್ಕಿಟ್ಟು, ಆಳುವವವರು ಆಳಿಸಿಕೊಳ್ಳುವವರು ಎಂಬ ಭೇದಗಳಾಚೆ ಹೋಗಿ, ಒಟ್ಟು ಮಾನವರ ದುರಂತಗಳಿಗೆ ಮಿಡಿಯುವ ದಾರ್ಶನಿಕ ಚಿಂತನೆ ಕವಿತೆಯಲ್ಲಿದೆ.

ಕಲಾದಗಿಯ ಗೋರಿಫಲಕಗಳನ್ನು ಓದುವಾಗಲೂ ಇಂತಹುದೇ ಮರುಕ ಉಕ್ಕುತ್ತದೆ. ಒಂದು ಫಲಕದಲ್ಲಿ ಕ್ಯಾಪ್ಟನನೊಬ್ಬನ ಮಡದಿಯಾದ ಜೇನ್, ತನ್ನ 21ನೇ ವಯಸ್ಸಿನಲ್ಲಿ (1839) ಮಡಿದ ದಾಖಲೆಯಿದೆ. ಯಾಕಿಷ್ಟು ಕಿರುವಯಸ್ಸಿನಲ್ಲಿ ಮಡಿದಳೋ ಏನೋ?

ಇನ್ನೊಂದು ಶಾಸನದಲ್ಲಿ ಮೇರಿ ಆನ್ನೆ ಮತ್ತು ಹೆನ್ರಿ ರೈಸ್ ದಂಪತಿಗಳ ಪೌಲಿನಾ ಎಂಬ 13 ತಿಂಗಳ ಕೂಸೊಂದು (1821) ಮರಣಿಸಿದೆ. ಆ ತಾಯೆಷ್ಟು ನೋವುಂಡಳೋ? ಈಜಲು ಹೋದ ಇಬ್ಬರು ತರುಣ ಸೈನಿಕರು ಹೊಳೆಯ ಪಾಲಾದ ಕತೆ ಹೇಳುವ ಮತ್ತೊಂದು ಲಿಖಿತವಿದೆ.
 
(ಅವರ ಜಲಕೇಳಿಯನ್ನು ಮತ್ಯುಕೇಳಿಯಾಗಿಸಿದ ಘಟಪ್ರಭೆ ತನಗೇನೂ ಸಂಬಂಧ ಇಲ್ಲದಂತೆ ಅಲ್ಲೇ ತಣ್ಣಗೆ ಹರಿಯುತ್ತಿದೆ). ಗೋರಿಬರೆಹದಲ್ಲಿರುವ ಕತೆಗಳು ವಿಷಾದ ಕವಿಸುವದು ಮಾತ್ರವಲ್ಲ, ನಮ್ಮನ್ನು ಗುಲಾಮರಾಗಿಸಿ ಬಲುದರ್ಪದಿಂದ ಆಳಿಹೋದ ಆಂಗ್ಲರು ಕೂಡ, ಸಾವು ಬಂದಾಗ ಕೇವಲ ಮನುಷ್ಯರು ಎಂಬುದನ್ನು ಸೂಚಿಸುತ್ತವೆ.
 
ಸಾವಿನ ಸಮಾಜವಾದಕ್ಕೆ ಮಗು, ಸೈನಿಕ, ವೃದ್ಧ, ಚಕ್ರವರ್ತಿ ಎಂಬ ಫರಕೆಲ್ಲಿದೆ? ಇದ್ದಿದ್ದರೆ ರಾಜ್ಯವಿಸ್ತರಣೆ ಮಾಡುತ್ತ ಮೆರೆಯುತ್ತಿದ್ದ ಔರಂಗಜೇಬನೂ ಅಲೆಕ್ಸಾಂಡರನೂ ಹಾದಿಯಲ್ಲಿಯೇ ಸಾಯುತ್ತಿದ್ದರೇಕೆ?

ಭಾರತದಲ್ಲಿ ಇನ್ನೊಂದು ನಮೂನೆಯ ಮರಣ ಸ್ಮಾರಕಗಳಿವೆ. ಅವು ಭಾರತೀಯರ ಬಂಡಾಯದಲ್ಲಿ ಬಿಳಿಯರು ಕೊಲೆಗೀಡಾದ ಜಾಗಗಳು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಶರು ಹತ್ಯೆಯಾದ ಲಖನೊದ ರೆಸಿಡೆನ್ಸಿ ಹಾಗೂ ದೆಹಲಿಯ ಮ್ಯೂಟಿನಿ ಮೆಮೋರಿಯಲ್ ಇಂತಹವು.
 
ಕಲಾದಗಿಯ ಸೈನಿಕರು ಕಾಯಿಲೆ ಮತ್ತು ಆಕಸ್ಮಿಕಗಳಿಂದ ಮಡಿದರೆ, ಇವರು ಸ್ವಾತಂತ್ರ್ಯಕ್ಕಾಗಿ ದಂಗೆಯೆದ್ದ ಭಾರತೀಯ ಬ್ರಿಟಿಶ್ ಸೈನಿಕರಿಂದ ಕೊಲ್ಲಲ್ಪಟ್ಟವರು.

ಸತ್ತವರಲ್ಲಿ ಮಹಿಳೆಯರೂ ಮಕ್ಕಳೂ ಇದ್ದರು. ಬಂಡುಕೋರರು ಲಖನೊದ ರೆಸಿಡೆನ್ಸಿಗೆ ಮುತ್ತಿಗೆ ಹಾಕಿದಾಗ ಸತ್ತ ಮಹಿಳೆಯರು ಮತ್ತು ಮಕ್ಕಳ ಗೋಳನ್ನು ಮನಕರಗುವಂತೆ ಅಲ್ಲಿನ ಫಲಕಗಳಲ್ಲಿ ಬಣ್ಣಿಸಲಾಗಿದೆ.
 
ಆಂಗ್ಲರ ಮುದ್ದು ನಾಯಿಯ ಸಾವಿಗೂ ಸ್ಮಾರಕವಿದೆ. ಮುತ್ತಿಗೆಯ `ಘೋರಘಟನೆ~ಗಳಿಗೆ ಸಾಕ್ಷಿಯಾಗಿ ಹೇಗೋ ಬದುಕುಳಿದು ಇಂಗ್ಲೆಂಡಿಗೆ ಹೋಗಿ 50 ವರ್ಷಗಳ ಬಳಿಕ ತೀರಿಕೊಂಡ ಒಬ್ಬ ಮಹಿಳೆಗೂ ಸ್ಮಾರಕವಿದೆ. ಸಾರ್ವಜನಿಕ ಪ್ರಜ್ಞೆಗೆ ಸೈನಿಕರ ಸಾವು ಸಹಜವೆನಿಸುತ್ತದೆ. ಕಾರಣ, ತರುಣರು ಸೈನ್ಯಕ್ಕೆ ತಲೆಗೆ ಕಫನ್ ಸುತ್ತಿಕೊಂಡೇ ಸೇರಿದವರು.

ಆದರೆ ಮಹಿಳೆಯರು-ಮಕ್ಕಳ ಸಾವು ಅಸಹಜವೆನಿಸಿ ಕರುಣೆಯುಕ್ಕಿಸುತ್ತದೆ.ಲಖನೊ ಮುತ್ತಿಗೆಯಲ್ಲಿ ಬಂಡೆದ್ದ ಭಾರತೀಯರೂ ಪ್ರಾಣ ಕಳೆದುಕೊಂಡರು. ಅವರು ಆಂಗ್ಲರ ಪಾಲಿಗೆ `ಶತ್ರು~ಗಳಾದ ಕಾರಣ, ಅವರಿಗೆ ಸ್ಮಾರಕವಿಲ್ಲ. ಒಂದೇ ಸಾವನ್ನು ಅಳೆಯಲು ಎರಡು ಮಾನದಂಡಗಳು!

1857ರ ದಂಗೆಯ ದುರಂತಕ್ಕಾಗಿ, ಲಖನೊದಲ್ಲಿ ಮುತ್ತಿಗೆಯಲ್ಲಿ ಪಾಳಾದ ರೆಸಿಡೆನ್ಸಿಯ ಬಂಗಲೆಗಳನ್ನು ರಕ್ಷಿಸಿಡಲಾಗಿದೆ; ಗೋಡೆಗಳಲ್ಲಿ ತುಪಾಕಿ ಗುಂಡಿನ ಕುರುಹುಗಳು ಇನ್ನೂ ಕಾಣಸಿಗುತ್ತವೆ.

ಇದೇ ಕಾಲದಲ್ಲಿ ದೆಹಲಿಯಲ್ಲಿ ನಡೆದ ಬಂಡಾಯದಲ್ಲಾದ ಸಾವುಗಳಿಗೆ ಬ್ರಿಟಿಶರು ಎತ್ತರದ ಕೆಂಗಲ್ಲಿನ ಸ್ಮಾರಕವೊಂದನ್ನು ಕಟ್ಟಿದರು. ಮ್ಯೂಟಿನಿ ಮೆಮೋರಿಯಲ್ ಎಂದು ಹೆಸರುಳ್ಳ ಅದರ ಎಲ್ಲ ಬದಿಗೂ ಅಮೃತಶಿಲೆಯಲ್ಲಿ ಕೆತ್ತಿಸಿದ ಫಲಕಗಳಿವೆ.

ಅವುಗಳಲ್ಲಿ ಮುತ್ತಿಗೆಯಲ್ಲಿ ಸತ್ತ, ಗಾಯಗೊಂಡ ಹಾಗೂ ಕಾಣೆಯಾದ ಆಫೀಸರುಗಳ ಹಾಗೂ ಸೈನಿಕರ ಲೆಕ್ಕವನ್ನು ಕೊರೆಯಲಾಗಿದೆ. ಅದರಲ್ಲೂ ಮೊದಲು ಆಂಗ್ಲರ (ಯೂರೋಪಿಯನ್ಸ್), ಬಳಿಕ ಆಂಗ್ಲರ ಪರವಾಗಿ ಹೋರಾಡಲು ಸೇನೆ ಸೇರಿದ್ದ ಸ್ಥಳೀಯರ (ನೇಟಿವ್ಸ್) ಸಂಖ್ಯೆಯನ್ನು ಪ್ರತ್ಯೇಕ ಅಂಕಣಗಳಲ್ಲಿ ನಮೂದಿಸಿದೆ.
 
ಕರ್ನಲುಗಳಿಗೆ ಪ್ರತ್ಯೇಕ ಫಲಕಗಳಿವೆ. ಒಟ್ಟಿನಲ್ಲಿ ಸಂಭವಿಸಿದ ಒಟ್ಟು 3854 ಮಾನವ ನಷ್ಟದಲ್ಲಿ 2168 ಯೂರೋಪಿಯನ್ನರೂ 1686 `ನೇಟಿವ~ರೂ ಇದ್ದಾರೆ. ಎರಗಿದ ಸಾವಿಗೆ ಮಾತ್ರ ಸತ್ತವರ ಅಂತಸ್ತು ಮತ್ತು ಜನಾಂಗಗಳ ತಾರತಮ್ಯವು ಇದ್ದಂತಿಲ್ಲ. 

ಮೇಲಿನ ಅಂಕಿಅಂಶ ನೋಡುವಾಗ, ಬ್ರಿಟಿಶರಾಳ್ವಿಕೆ ಒಪ್ಪಿಕೊಂಡಿದ್ದ ಎಲ್ಲ ಸಂಸ್ಥಾನಗಳೂ ಅವರ ಯುದ್ಧಗಳಿಗೆ ತಂತಮ್ಮ ಸೈನಿಕರನ್ನು ಕಳಿಸಿಕೊಟ್ಟಿರುವುದು ಗೊತ್ತಾಗುತ್ತದೆ. ಇಲ್ಲೂ ಲಖನೊದಲ್ಲಿಯೂ ಮೈಸೂರಿನಿಂದ ಹೋದವರ ಸೈನಿಕರ ಲೆಕ್ಕವು ಪ್ರತ್ಯೇಕವಾಗಿ ಸಿಗುತ್ತದೆ.
 
ಬ್ರಿಟಿಶರು ಭಾರತದ ಬೇರೆಬೇರೆ ಪ್ರದೇಶಗಳಿಗೆ ಮಾತ್ರವಲ್ಲ, ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಮಾಡಿದ ಯುದ್ಧಗಳಿಗೆ ಹೋಗಿ ಪ್ರಾಣಬಿಟ್ಟವರಲ್ಲಿ ಭಾರತದ ಎಲ್ಲ ಭಾಗಗಳ ಸೈನಿಕರಿದ್ದಾರೆ.

ಇವರು ಸಾಮಾನ್ಯವಾಗಿ ನಮ್ಮ ರೈತಾಪಿ ಮತ್ತು ಕೃಷಿಕೂಲಿ ಕುಟುಂಬದ ತರುಣರು. ಯುದ್ಧ ಸ್ಮಾರಕಗಳಲ್ಲಿ ಅವರ ಹೆಸರುಗಳಿಲ್ಲ. ಬದಲಿಗೆ ಸಂಖ್ಯೆಗಳಿವೆ. ಜನರು ಅನಾಮಿಕರಾಗಿ ಅವರ ಸಾವು ಸಂಖ್ಯೆಗಳಾಗಿ ಬದಲಾಗುವುದೇ ಯುದ್ಧ ಗಣಿತದ ಮಹಾಕ್ರೌರ್ಯವೆಂದು ಕಾಣುತ್ತದೆ.
 
ಸೈನಿಕರ ಅಕಾಲಿಕ ಸಾವಿನಿಂದ ಅವರನ್ನವಲಂಬಿಸಿದ ಕುಟುಂಬಗಳಲ್ಲಿ ಏನಾಯಿತು ಎಂಬುದನ್ನು ಈ ಸಂಖ್ಯೆಗಳು ಮರೆಮಾಚಿಬಿಡುತ್ತದೆ. ಕೋಮುದಂಗೆಗಳಲ್ಲೂ ಕ್ರಿಕೆಟ್ಟಿನ ಸ್ಕೋರಿನಂತೆ ಸಂಖ್ಯೆಗಳು ತಾನೇ ವರದಿಯಾಗುವುದು? ಸಂಖ್ಯೆಗಳ ಹಿಂದಿನ ಮಾನವೀಯ ಕತೆಯನ್ನು ಹೇಳಲು ಕವಿತೆಯೋ ಕತೆಯೋ ಹುಟ್ಟಬೇಕು.

ಬ್ರಿಟಿಶ್ ಯುದ್ಧಸಂಸ್ಕೃತಿಯಲ್ಲಿ ರಣರಂಗದಲ್ಲಿ ಸತ್ತವರಿಗೆ ಅಪೂರ್ವ ಗೌರವ ಸಲ್ಲಿಸುವ ಪದ್ಧತಿಯಿದೆ. ಮುಖ್ಯವಾಗಿ ಸೈನಿಕರ ಶೌರ್ಯದ ಗುಣಗಾನ ಮಾಡುವ ಸ್ಮಾರಕಗಳನ್ನು ನಿಲ್ಲಿಸುವರು; ಆಂಗ್ಲ ಕವಿಗಳು ವೀರರ ಬಗ್ಗೆ ಶೋಕಗೀತೆ ಬರೆಯುವರು. (ಅಂತಹ ಕೆಲವು ಆಂಗ್ಲ ಶೋಕಗೀತೆಗಳನ್ನು ಬಿಎಂಶ್ರೀಯವರು ಅನುವಾದಿಸಿರುವುದುಂಟು).
 
ಆಳುವ ವರ್ಗಗಳು ತಾವು ಹೂಡುವ ಕದನಗಳಲ್ಲಿ ಮಡಿದವರ ಶೌರ್ಯ ಮತ್ತು ಗಂಡುತನವನ್ನು ಕೊಂಡಾಡುವ ಮೂಲಕ ಯುದ್ಧಸಂಸ್ಕೃತಿಯನ್ನು ವೈಭವೀಕರಿಸುತ್ತ ಅದನ್ನೊಂದು ಮೌಲ್ಯವಾಗಿ ಮಂಡಿಸುತ್ತವೆ.

ಯುದ್ಧವನ್ನು ಯಾಕಾಗಿ ಯಾರಿಗಾಗಿ ಯಾರು ಮಾಡಿದರು ಎಂಬ ಮೂಲಭೂತ ಪ್ರಶ್ನೆಯನ್ನೇ ಅವು ಅಡಗಿಸುತ್ತವೆ. ಆದ್ದರಿಂದಲೇ ಶೋಕಗೀತೆಗಳು ಮತ್ತು ಯುದ್ಧ ಸ್ಮಾರಕಗಳು ಆಳದಲ್ಲಿ ಜನರಿಗೆ ಪ್ರಭುತ್ವ ಮಾಡಿದ ವಂಚನೆಯ ಸಂಕೇತಗಳಾಗಿಯೂ ತೋರುತ್ತವೆ.

ರಣಸ್ಮಾರಕಗಳ ವ್ಯಂಗ್ಯವೆಂದರೆ, ಬ್ರಿಟಿಶರೆದುರು ಹೋರಾಡಿ ಮಡಿದ ಭಾರತೀಯರು ಇಲ್ಲಿ  ಶತ್ರುಗಳಾಗಿ ಚಿತ್ರಣಗೊಳ್ಳುವುದು. ಯುದ್ಧಸಂಸ್ಕೃತಿಯ ಪರಿಭಾಷೆಯ ಲಕ್ಷಣವೇ ಇದು. `ನಮ್ಮ~ ದೊರೆ `ಅನ್ಯ~ ರಾಜ್ಯದ ಮೇಲೆ ದಂಡೆತ್ತಿ ಹೋದರೆ ಅದು ಆಕ್ರಮಣವಲ್ಲ, ರಾಜ್ಯವಿಸ್ತರಣೆ; ಅಲ್ಲಿಂದ ಸಂಪತ್ತನ್ನು ಸೂರೆಹೊಡೆದು ತಂದರೆ ಅದು ಲೂಟಿಯಲ್ಲ, ಸಾಹಸ;
 
`ನಮ್ಮ~ ಸೈನಿಕರು `ಶತ್ರು~ ಸೈನಿಕರನ್ನು ಕೊಂದರೆ ಅದು ಕೊಲೆಯಲ್ಲ, ಶೌರ್ಯ. `ನಮ್ಮ~ ಸೈನಿಕರು ಪ್ರಾಣಬಿಟ್ಟರೆ, ಅದು ಸಾವಲ್ಲ. ಹುತಾತ್ಮರಾಗುವಿಕೆ; `ಅನ್ಯ~ ರಾಜ್ಯದ ದೊರೆ ಇದೇ ಕೆಲಸಕ್ಕಾಗಿ `ನಮ್ಮ~ ರಾಜ್ಯದ ಮೇಲೆ ಬಂದರೆ ಅದು ಆಕ್ರಮಣ.
 
ಕೊಂದರೆ ಕ್ರೌರ್ಯ. ನಡೆಯುವುದು ಒಂದೇ ಯುದ್ಧ. ಸಂಭವಿಸಿರುವುದು ಸಮಾನ ಸಾವು. ಆದರೆ ಅವನ್ನು ಬಣ್ಣಿಸಿರುವ ಪರಿಭಾಷೆ ಮಾತ್ರ ಬೇರೆ. ಈ ವಿನ್ಯಾಸ ಇತಿಹಾಸ ಪಠ್ಯಗಳಲ್ಲಿ ಸಾಮಾನ್ಯವಾಗಿದೆ.

ಈ ತಾರತಮ್ಯದ ಭಾಷೆಯನ್ನು ಬಿಟ್ಟುಕೊಟ್ಟು ನೋಡುವುದಾದರೆ, ಆತ್ಮರಕ್ಷಣೆಗಾಗಿ ಸ್ವಾಭಿಮಾನಕ್ಕಾಗಿ ಹಲಗಲಿ ಬೇಡರಂತಹ ಜನ ಸಮುದಾಯಗಳು, ಕಿತ್ತೂರುಗಳಂತಹ ಸಣ್ಣ ಸಂಸ್ಥಾನಗಳು ಮಾಡಿದ ಪ್ರತಿರೋಧೀ ಯುದ್ಧಗಳು ಮಾತ್ರ ನ್ಯಾಯಬದ್ಧವಾದವು.

ಉಳಿದಂತೆ ಎಲ್ಲ ಬಲಿಷ್ಠರು ಮಾಡುವ ಸೈನಿಕ ಆಕ್ರಮಣಗಳು ದುರ್ಬಲರ ಚಿಕ್ಕವರ ಸ್ವಾತಂತ್ರ್ಯವನ್ನು ಮನ್ನಿಸದ, ತಮ್ಮ ಸಾಮ್ರೋಜ್ಯ ವಿಸ್ತರಣೆ ಮಾಡಿಕೊಳ್ಳುವ, ಸಂಪತ್ತಿನ ಲೂಟಿ ಮಾಡುವ ಕಾರ್ಯಗಳೇ.
 
ಗಜನಿ, ಘೋರಿ, ಬ್ರಿಟಿಶರು ಮಾಡಿದ್ದು; ಮೊಗಲರು ಆದಿಲಶಾಹಿಗಳ ಮೇಲೆ ಮಾಡಿದ್ದು; ಕೃಷ್ಣದೇವರಾಯ ಒರಿಸ್ಸಾದ ಗಜಪತಿಯ ಮೇಲೆ ದಂಡೆತ್ತಿ ಹೋಗಿದ್ದು; ಪೇಶ್ವೆಗಳು ಶೃಂಗೇರಿಯ ಮೇಲೆ ಮಾಡಿದ್ದು, ಈಗ ಅಮೆರಿಕ ಮಾಡುತ್ತಿರುವುದು ಹೇಗೆ ಬೇರೆಬೇರೆ ಆಗುತ್ತವೆ?   

ಬ್ರಿಟಿಶರ ಮರಣ ಸ್ಮಾರಕಗಳಲ್ಲಿ ಇನ್ನೊಂದು ಮಾದರಿಯಿದೆ. ಅದು ಬ್ರಿಟಿಶರೇ ಹೂಡಿದ ಆಕ್ರಮಣಕಾರಿ ಯುದ್ಧಗಳಲ್ಲಿ ಮಡಿದ ಸೈನಿಕರಿಗಾಗಿ ನಿಲ್ಲಿಸಿದ ಸ್ಮಾರಕಗಳು. ಶ್ರೀರಂಗಪಟ್ಟಣದ ನಡುಗಡ್ಡೆಯ ತುದಿಯಲ್ಲಿ ಕಾವೇರಿ ಹೊಳೆ ಕವಲೊಡೆಯುವ ತಾಣದಲ್ಲಿ, ಕೊನೇ ಮೈಸೂರು ಯುದ್ಧದಲ್ಲಿ (1799) ಸತ್ತ ಬ್ರಿಟಿಶ್ ಸೈನಿಕರ ವಿವರಗಳಿವೆ.
 
ಬ್ರಿಟಿಶ್ ಸೈನಿಕರು ಜಗತ್ತಿನ ಯಾವೆಲ್ಲ ದೇಶಗಳಿಗೆ ಹೋಗಿ ಯುದ್ಧ ಮಾಡಿದರೋ, ಆ ದೇಶಗಳ ಹೆಸರುಗಳನ್ನು ಕೆತ್ತಿರುವ ಸ್ಮಾರಕವು ಚೆನ್ನೈನಲ್ಲಿ ಕಡಲ ದಂಡೆಗೇ ಇದೆ. ಇಲ್ಲಿ ಕೂಡ ಕರ್ನಾಟಕದ ಕುದುರೆದಳದ ಐದು ಪಡೆಗಳು ನಷ್ಟವಾದ ವಿವರವಿದೆ.

ದೆಹಲಿಯ ಇಂಡಿಯಾ ಗೇಟಿನಲ್ಲಿಯೂ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಬ್ರಿಟಿಶರು ನಡೆಸಿದ ಯುದ್ಧಗಳಲ್ಲಿ ಸೈನಿಕರಾಗಿ ಹೋಗಿ ಸತ್ತವರ ಹೆಸರನ್ನು ಕೆತ್ತಲಾಗಿದ್ದು, ಅಲ್ಲೂ ಮೈಸೂರು ಪಡೆಗಳ ಉಲ್ಲೇಖವಿದೆ.

ಇವನ್ನೆಲ್ಲ ಕಾಣುವಾಗ, ಬ್ರಿಟಿಶರು ಸೂರ್ಯ ಮುಳುಗದ ಸಾಮ್ರೋಜ್ಯ ಕಟ್ಟುವುದಕ್ಕಾಗಿ ಎಷ್ಟೊಂದು ಅನಾಮಿಕ ಭಾರತೀಯ ಸೈನಿಕರ ಪ್ರಾಣ ಬಲಿಹೋಯಿತಲ್ಲ ಎಂದು ಕಳವಳವಾಗುತ್ತದೆ. ತನಗೆ ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಇಚ್ಛೆಯಿಲ್ಲದಿದ್ದರೂ ಬೇರೊಬ್ಬರ ಪರವಾಗಿ ಕೊಲ್ಲುವುದು ಯುದ್ಧಸಂಸ್ಕೃತಿಯ ವೈರುಧ್ಯಗಳಲ್ಲಿ ಒಂದು.
 
ಇಂಗ್ಲೆಂಡು ಅಥವಾ ಅಮೆರಿಕದ ಯುದ್ಧಗಳಲ್ಲಿ ಸತ್ತ ಸೈನಿಕರು ಅವರ ದೇಶದವರೇ ಆಗಿದ್ದರೂ ಅವರು ಆಯಾ ದೇಶಗಳ ಸಾಮಾನ್ಯ ಜನರೇ? ಆದ್ದರಿಂದ ಯುದ್ಧಸಂಸ್ಕೃತಿಯು ಕಂಡವರ ಮಕ್ಕಳನ್ನಲ್ಲ, ತಮ್ಮೂರ ಮಕ್ಕಳನ್ನೂ ಬಾವಿಗೆ ತಳ್ಳಿ ಆಳ ನೋಡುತ್ತದೆ. ಯುದ್ಧಸ್ಮಾರಕಗಳು ಆಳುವ ವರ್ಗಗಳು ಸಂಪತ್ತಿನ ದಾಹಕ್ಕಾಗಿ ಶೌರ್ಯದ ಹೆಸರಲ್ಲಿ ಮಾಡಿದ ಮನೆಮುರುಕತನದ ಸಂಕೇತಗಳು.
 
ಆದರೆ ಆಳುವವರ್ಗಗಳು ಯುದ್ಧ ಕ್ರೌರ್ಯವನ್ನು ಶೌರ್ಯವೆಂದೂ ಅದರಲ್ಲಿ ಸಾಯುವುದು ದೇಶಕ್ಕಾಗಿ ಮಾಡುವ ಬಲಿದಾನವೆಂದೂ, ಸತ್ತವರಿಗೆ ವೀರಸ್ವರ್ಗ ಸಿಗುವುದೆಂದೂ ಕತೆ ಹುಟ್ಟಿಸಿ ನಂಬಿಸುತ್ತಲೇ ಬಂದಿವೆ. ಹೀಗಾಗಿ ಯುದ್ಧಗಳಿಗೆ ಕೊನೆಯಿಲ್ಲವಾಗಿದೆ.

ಬ್ರಿಟಿಶ್ ಯುದ್ಧಸ್ಮಾರಕವನ್ನು ಪವಿತ್ರವೆಂದೂ ಅವರ ಗೆಲುವು ನಮ್ಮ ಗೆಲುವೆಂದೂ ಸಂಭ್ರಮಿಸುವ ಒಂದು ವಿಶೇಷ ಜಾಗ ಭಾರತದಲ್ಲಿದೆ. ಅದೆಂದರೆ, ಮಹಾರಾಷ್ಟ್ರದಲ್ಲಿರುವ ಕೊರೆಗಾಂವ್ ಸ್ಮಾರಕ. ಇದು ಬ್ರಿಟಿಶರು ಪೇಶ್ವೆಗಳನ್ನು ಸೋಲಿಸಿದ ಕುರುಹಿಗಾಗಿ ಕಟ್ಟಿಸಿದ ವಿಜಯಸ್ಥಂಭ.
 
ಆ ಯುದ್ಧದಲ್ಲಿ ಪುಣೆಯ ಪೇಶ್ವೆಗಳ ವಿರುದ್ಧ ಬ್ರಿಟಿಶರ ಪರವಾಗಿ ವೀರೋಚಿತ ಹೋರಾಟ ಮಾಡಿದವರು ಮಹಾರ್ ರೆಜಿಮೆಂಟಿಗೆ ಸೇರಿದ ದಲಿತ ಸೈನಿಕರು. ಪೇಶ್ವೆಗಳ ಅಸ್ಪೃಶ್ಯತಾ ನೀತಿಯ ಬಗ್ಗೆ ತೀವ್ರ ಅಸಹನೆಯಿದ್ದ ಮಹಾರರಿಗೆ, ತಮ್ಮನ್ನು ಸೇನೆಗೆ ಸೇರಿಸಿಕೊಂಡು ಸಾಮಾಜಿಕ ಮುಂಚಲನೆಗೆ ಕಾರಣವಾದ ಬ್ರಿಟಿಶರ ಬಗ್ಗೆ ಕೃತಜ್ಞತೆಯಿತ್ತು.
 
ಹೀಗಾಗಿ ಇವತ್ತಿಗೂ ಮಹಾರಾಷ್ಟ್ರದ ದಲಿತರು ವರ್ಷದ ಒಂದು ದಿನ ಇಲ್ಲಿ ಸೇರಿ ಸಂಭ್ರಮ ಆಚರಿಸುವರು. ಆದ್ದರಿಂದ ಬ್ರಿಟಿಶ್ ಯುದ್ಧ ಸ್ಮಾರಕಗಳನ್ನೆಲ್ಲ ವಸಾಹತುಶಾಹಿ ಆಳ್ವಿಕೆಯ ಗುಲಾಮಗಿರಿಯ ಕುರುಹುಗಳೆಂದು ಭಾವಿಸುವಂತಿಲ್ಲ. ಅವಕ್ಕೆ ಬೇರೆಬೇರೆ ಮುಖಗಳೂ ಇವೆ. 

ಇನ್ನೂ ಕೆಲವು ಸ್ಮಾರಕಗಳಿವೆ. ಅವು ಯುದ್ಧ ಘೋಷಿಸಿದವರನ್ನು ಸ್ವಾಗತಿಸಲು ಕಟ್ಟಿದ ಸ್ಮಾರಕಗಳು. ಕೊಲ್ಕತ್ತೆಯ ವಿಕ್ಟೋರಿಯಾ ಮೆಮೋರಿಯಲ್, ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಇಂತಹವು. ಕುವೆಂಪು ಕಲ್ಕತ್ತೆಗೆ ಹೋದಾಗ ವಿಕ್ಟೋರಿಯಾ ಮೆಮೋರಿಯಲ್ ಒಳಗೆ ಹೋಗಲು ನಿರಾಕರಿಸಿದರು.

ಆದರೆ ಈ ಸ್ಮಾರಕಗಳು ಈಗಲೂ ಪ್ರವಾಸಿಗರಿಂದ ಗಿಜಿಗುಟ್ಟುತ್ತಿರುತ್ತವೆ. ಸತ್ತಸೈನಿಕರ ಹೆಸರುಗಳನ್ನು ಬರೆದಿರುವ ದೆಹಲಿಯ ಇಂಡಿಯಾ ಗೇಟಿನ ಆಸುಪಾಸಿನಲ್ಲಂತೂ, ಫೋಟೊ ತೆಗೆಸಿಕೊಳ್ಳುವ, ತಿಂಡಿ ತಿನ್ನುವ, ಮೆಹಂದಿ ಹಾಕಿಸಿಕೊಳ್ಳುವ, ಬಲೂನು ಹಾರಿಸುವ ಎಷ್ಟೆಲ್ಲ ಸಂಭ್ರಮಾಚರಣೆಗಳು ಜರುಗುತ್ತವೆ.

ಚರಿತ್ರೆಯ ಮೇಲೆ ಬಿದ್ದಿರುವ ಮರೆವಿನ ಪರದೆ ಸೋಜಿಗ ಹುಟ್ಟಿಸುತ್ತದೆ. ಈ ಸ್ಮಾರಕಗಳಿಗೆ ಐತಿಹಾಸಿಕ ಮಹತ್ವ ಇರುವುದರಿಂದ ನಾಗರಿಕ ದೇಶವಾಗಿ ನಾವು ಅವನ್ನು ಇಟ್ಟುಕೊಳ್ಳಬೇಕಾಗಿದೆ, ಸರಿ.

ಸಮಸ್ಯೆಯೆಂದರೆ ನಮ್ಮ ಜನರನ್ನು ನಮ್ಮವರಿಂದಲೇ ಕೊಲ್ಲಿಸಿ ಅವರು ಬರೆದುಹೋಗಿರುವ ಬರೆಹವನ್ನೂ ಇಟ್ಟುಕೊಳ್ಳಬೇಕಾಗಿರುವುದು. ದೆಹಲಿಯ ದಂಗೆಯ ಸ್ಮಾರಕದಲ್ಲಿ ದಂಗೆ ಮುಗಿದ ದಿನವನ್ನು `ಫೈನಲಿ ಎವ್ಯಾಕ್ಯುಯೇಟೆಡ್ ಬೈ ದಿ ಎನಿಮಿ: 20.9.1887~ ಎಂದು ಬರೆಯಲಾಗಿದೆ. 

ಈಚೆಗೆ ಭಾರತ ಸರ್ಕಾರವು, ದೆಹಲಿ ಸ್ಮಾರಕದ ಬಳಿ `ಈ ಸ್ಮಾರಕದಲ್ಲಿರುವ ಶತ್ರುಗಳು ಎಂಬ ಪದವು, ಆಂಗ್ಲರ ವಸಾಹತುಶಾಹಿಯ ವಿರುದ್ಧ ರಾಷ್ಟ್ರೀಯ ವಿಮೋಚನೆಗಾಗಿ ವೀರೋಚಿತವಾಗಿ ಹೋರಾಡಿದ ಹುತಾತ್ಮರನ್ನು ಸೂಚಿಸುತ್ತದೆ~ ಎಂದು ತಿದ್ದುಪಡಿ ಬೋರ್ಡನ್ನು ಹಾಕಿದೆ. ಚೆನ್ನೈನ ವಿಜಯ ಸ್ಮಾರಕದಲ್ಲಿ ಸಹ `ಬ್ರಿಟಿಶ್ ಸಾಮ್ರೋಜ್ಯಕ್ಕಾಗಿ~ ಎಂದು ಕೊರೆದಿದ್ದ ಕಲ್ಲನ್ನು ತೆಗೆದು, ಆ ಜಾಗದಲ್ಲಿ `ರಾಷ್ಟ್ರೀಯ ಹೋರಾಟಕ್ಕಾಗಿ~ ಎಂದೂ ತಿದ್ದಿರುವ ಕಲ್ಲನ್ನು ಕೂರಿಸಲಾಗಿದೆ.
 
ಚೆನ್ನೈನಲ್ಲಿ ತಿದ್ದುಪಡಿಯನ್ನು ಇಂಗ್ಲೀಶಿನ ಫಲಕಗಳಿಗೆ ಮಾತ್ರ ಮಾಡಲಾಗಿದ್ದು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಮೂಲ ಒಕ್ಕಣೆ ಉಳಿದುಕೊಂಡಿದೆ.
 
ಫಲಕಗಳನ್ನೇನೋ ತಿದ್ದಬಹುದು. ಸಂಭವಿಸಿದ ವಿದ್ಯಮಾನವನ್ನು ತಿದ್ದಬಹುದೇ? ಕಲಾದಗಿಯಲ್ಲಿ ಫಲಕಗಳನ್ನೇನು ತಿದ್ದಿಲ್ಲ. ಆದರೆ ಅರಿವುಗೇಡಿಗಳು ಅವನ್ನು ಒಡೆದು ಹಾಕುತ್ತಿದ್ದಾರೆ. ತಿದ್ದಾಟ, ಆಕ್ರೋಶ, ಭಗ್ನಗೊಳಿಸುವಿಕೆ, ಸಂಭ್ರಮ, ಲಜ್ಜೆ ಎಷ್ಟೆಲ್ಲ ಭಾವಗಳಿಗೆ ಕಾರಣವಾಗಿವೆ ಈ ಸ್ಮಾರಕಗಳು!

ಬ್ರಿಟಿಶರು ದೇಶವನ್ನು ಮಾತ್ರವಲ್ಲ, ತಮ್ಮ ಯುದ್ಧಸ್ಮಾರಕಗಳನ್ನೂ ರಾಣಿಯ ಗವರ್ನರ್ ಜನರಲ್ಲುಗಳ ಪ್ರತಿಮೆಗಳನ್ನೂ ಬಿಟ್ಟು ಹೋದರು. ಅವೀಗ ನಮ್ಮ ಅಂಥ ಕೇಡನ್ನೇನೂ ಬಯಸುತ್ತಿಲ್ಲ.

ಆದರೆ ನಮ್ಮದೇ ಸರ್ಕಾರಗಳ ನೀತಿಗಳಿಂದ ಆಕ್ರಾಮಕವಾಗಿ ಬರುತ್ತಿರುವ ನವಬ್ರಿಟಿಶರು, ಅವರು ಸಾರಿರುವ ವಣಿಕ ಯುದ್ಧಗಳು ಹಾಗೂ ಅವುಗಳಿಂದ ಸಂಭವಿಸುತ್ತಿರುವ ಸಾವುಗಳೂ ಮಾತ್ರ ಕೇಡು ತರುತ್ತಿವೆ.

ಅವುಗಳ ಪರಿಣಾಮವಾಗಿ ಈತನಕ ನಮ್ಮ ರೈತರ ಸಮಾಧಿಗಳು ನಿರ್ಮಾಣಗಳಾದವು. ಈಗ ಅವುಗಳ ಜತೆಗೆ `ಚಿಲ್ಲರೆ~ ವ್ಯಾಪಾರಿಗಳ ಸಮಾಧಿಗಳ ನಿರ್ಮಾಣ ಶುರುವಾಗುತ್ತದೆಯೋ ಏನೋ? ಎಲ್ಲ ಸಾಮ್ರೋಜ್ಯಗಳು ಸಹಸ್ರಾರು ಅನಾಮಿಕರನ್ನು ಬಲಿಗೊಟ್ಟೇ ನಿರ್ಮಾಣವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT