ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾರ್ಯತೆಯ ತಳಹದಿಯ ಮೇಲೆ ನಿಂತ ಬಾಂಧವ್ಯ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಎರಡು ದೇಶಗಳ ಬಾಂಧವ್ಯವು ಅಗತ್ಯ ಹಾಗೂ ಅನಿವಾರ್ಯತೆಗಳ ತಳಹದಿಯ ಮೇಲೆ ನಿಂತಿರುತ್ತದೆ. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಸ್ಕೃತಿ, ಪರಂಪರೆ, ಭೌಗೋಳಿಕ ವೈವಿಧ್ಯತೆಯಲ್ಲಿ ಬಹುತೇಕ ಸಾಮ್ಯತೆಗಳು ಎದ್ದು ಕಾಣುತ್ತವೆ. ಉಭಯ ದೇಶಗಳೂ ಸಾವಿರಾರು ಕಿ.ಮೀ ದೂರದ ವರೆಗೆ ಒಂದೇ ಗಡಿಯನ್ನು ಹೊಂದಿವೆ.

ಇಷ್ಟೆಲ್ಲ ಆದರೂ, ಈ ಎರಡು ದೇಶಗಳ ನಡುವೆ ಸೌಹಾರ್ದಯುತ ಸಂಬಂಧ ಹರಳುಗಟ್ಟಲಿಲ್ಲ ಎನ್ನುವುದು ವಿಚಿತ್ರ. ಬಹುಶಃ ಉಭಯ ದೇಶಗಳ ನಡುವೆ ಬಾಂಧವ್ಯದ ಅನಿವಾರ್ಯತೆಗೆ ಕಾಲ ಕೂಡಿ ಬಂದಿಲ್ಲವೇನೋ!

ಪಾಕಿಸ್ತಾನಕ್ಕೆ ಭಾರತವು ಮೊದಲನೇ ಶತ್ರುವಲ್ಲ; ಬದಲಿಗೆ ಎರಡನೇ ಶತ್ರು ಎನ್ನುವ ಸುದ್ದಿಗಳು ಆಗಾಗ ಪಾಕ್‌ನಿಂದ ಕೇಳಿ ಬರುತ್ತಿದ್ದವು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಮೊದಲ ಶತ್ರುವಿನ ಪಟ್ಟವನ್ನು ಅಮೆರಿಕ ಪಡೆದುಕೊಳ್ಳಬೇಕಾಗಿದೆ. ಇದು ಅಚ್ಚರಿ ಪಡುವಂಥ ವಿದ್ಯಮಾನವೇನೂ ಅಲ್ಲ. ಯಾಕೆಂದರೆ, ಈ ಎರಡೂ ದೇಶಗಳ ನಡುವಿನ ಸಂಬಂಧವು ಸುದೀರ್ಘ ಇತಿಹಾಸವನ್ನೇ ಹೊಂದಿದೆ. ಬಹುಶಃ ಇದು ಇನ್ನೂ ಮುಗಿಯದೇ ಇರಬಹುದು.

ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಎರಡು ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಬಹುದಿತ್ತು. ಆದರೆ ಎರಡೂ ದೇಶಗಳು ಅದೆಷ್ಟು ಅಂತರ ಕಾಪಾಡಿಕೊಂಡವು ಎಂದರೆ ಒಂದರ ಶತ್ರು ಇನ್ನೊಂದು ದೇಶದ ಮಿತ್ರ ರಾಷ್ಟ್ರವಾಗಿ ಬಿಟ್ಟಿದೆ. ಚೀನಾ ಹಾಗೂ ಅಮೆರಿಕ ತಮ್ಮ ಸ್ವಹಿತಾಸಕ್ತಿಗಾಗಿ ಇದನ್ನು ಬಳಸಿಕೊಂಡಿವೆ.

ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಪಾಕ್ ಅನ್ನು ಪರಿಗಣಿಸದೇ ಅಮೆರಿಕವು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಬಹುಶಃ ಇದು ಅತ್ಯಂತ ಕಠೋರವಾಗಿ ಕಾಣಬಹುದು. ಆದರೆ ಇದರಲ್ಲಿ ಹೊಸದೇನೂ ಇಲ್ಲ. ಅಮೆರಿಕದ ನೀತಿಯು, ಅದರಲ್ಲೂ ಪ್ರಮುಖವಾಗಿ ದಕ್ಷಿಣ ಏಷ್ಯಾ ವಿಷಯದಲ್ಲಿ ಯಾವತ್ತೂ ಪರಹಿತ ಚಿಂತನೆಯಿಂದ ಕೂಡಿಲ್ಲ. ಡಾಲರ್‌ಗೆ ವಿಸ್ಮಯಗೊಂಡ ಈ ಭಾಗದ ರಾಷ್ಟ್ರಗಳು ಅಮೆರಿಕದ ಈಧೋರಣೆಯನ್ನು ಅರ್ಥಮಾಡಿಕೊಂಡಿಲ್ಲ ಎನ್ನುವುದು ಬೇಸರದ ಸಂಗತಿ.

ಆರಂಭಿಕ ವರ್ಷಗಳಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಬಹುಶಃ ಭಾರತದ ಇತಿಹಾಸದ ಗತಿಯೇ ಬದಲಾಗಿಬಿಡುತ್ತಿತ್ತೇನೋ! ಪಾಕಿಸ್ತಾನದಲ್ಲಿ ಜನರಲ್ ಅಯೂಬ್ ಖಾನ್ ಅವರು ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದಲ್ಲಿಯೇ ಭಾರತದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದ್ದರು. ಆದರೆ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. `ಯಾರ ವಿರುದ್ಧ ರಕ್ಷಣೆ?~ ಎಂದು ಛೀಮಾರಿ ಹಾಕಿದ್ದರು.

ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದರೆ ಕಳೆದ ಐದು ದಶಕಗಳು ಹೇಗೆ ವಿಭಿನ್ನವಾಗಿರುತ್ತಿದ್ದವು ಎನ್ನುವುದನ್ನು ಊಹಿಸಿಕೊಳ್ಳಿ!

ಪಾಕಿಸ್ತಾನವು ನಿಸ್ಸಂಶಯವಾಗಿ ಭಾರತವನ್ನು ಗುರಿಯಾಗಿಸಿಕೊಳ್ಳದೆಯೇ ತನ್ನ ನೀತಿಯನ್ನು ರೂಪಿಸಿಕೊಳ್ಳಬಹುದಿತ್ತು. ಆದರೆ ಪಾಕ್ ತುಳಿದ ಹಾದಿ ಚೀನಾಕ್ಕೆ ಅನುಕೂಲವಾಯಿತು. ಪ್ರಗತಿಪರ ಪ್ರಧಾನಿ ಎಂದೇ ಬಿಂಬಿಸಿಕೊಂಡಿದ್ದ ಜುಲ್ಫಿಕರ್ ಅಲಿ ಭುಟ್ಟೊ ಪಾಕಿಸ್ತಾನವನ್ನು ಮುಸ್ಲಿಂ, ಅಹ್ಮದಿಗಳು ಹಾಗೂ ಮುಸ್ಲಿಮೇತರರ ರಾಷ್ಟ್ರ ಎಂದು ಘೋಷಿಸಿಬಿಟ್ಟರು ಮತ್ತು ವಾರದ ರಜೆಯನ್ನು ಭಾನುವಾರದ ಬದಲಿಗೆ ಶುಕ್ರವಾರ ನಿಗದಿಪಡಿಸಿದರು.

ಉಗ್ರರಿಗೆ ಧನ ಸಹಾಯ, ತರಬೇತಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮೂಲಕ ಪಾಕಿಸ್ತಾನವು ದೊಡ್ಡ ತಪ್ಪು ಮಾಡಿತು. ಆದರೆ ಪಾಕ್‌ನಿಂದ ನೆರವು ಪಡೆದ ಉಗ್ರರು ಭಾರತಕ್ಕೆ ಕೇಡು ಬಗೆದರು. ಈ ಉಗ್ರರು ಈಗಲೂ ಪಾಕಿಸ್ತಾನವನ್ನು ತಮ್ಮ ಸ್ವರ್ಗವನ್ನಾಗಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದ ಮೇಲೆ ಇದೀಗ  ಪಾಕಿಸ್ತಾನಕ್ಕೆ ಜ್ಞಾನೋದಯವಾಗಿದೆ. ಆದರೆ ಅದು ತನ್ನ ಮೂರ್ಖತನವನ್ನು ಮಾತ್ರ ಈಗಲೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ.
ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಬಹುತೇಕರು ಮೂಲಭೂತವಾದದಿಂದ ಪ್ರಭಾವಿತರಾದವರು. ಇವರು `ಜಿಹಾದಿ~ ಪರಿಕಲ್ಪನೆಯೇ ಸರ್ವಶ್ರೇಷ್ಠ ಎನ್ನುವುದರಲ್ಲಿ ಅಚಲ ನಂಬಿಕೆ ಇಟ್ಟವರು. ಇದೇ ಕಾರಣಕ್ಕಾಗಿಯೇ ಪಾಕಿಸ್ತಾನವು ಭಯೋತ್ಪಾದನೆಯನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮಗಳು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. 

 ಇತ್ತೀಚೆಗೆ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ `ವ್ಯೆಹಾತ್ಮಕ ಸಹಭಾಗಿತ್ವ ಒಪ್ಪಂದ~ ಮಾಡಿಕೊಳ್ಳಲಾಯಿತು. ಈ ಒಪ್ಪಂದ, ಭಾರತವು ಆಫ್ಘನ್ ಭದ್ರತಾ ಪಡೆಗೆ ಸೇನಾ ತರಬೇತಿ ನೀಡುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಬದಲಿಗೆ ವ್ಯಾಪಾರ ಹಾಗೂ ಆರ್ಥಿಕ ಅಭಿವೃದ್ಧಿ, ಖನಿಜ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಬಲವರ್ಧನೆಯಂಥ ವಿಷಯಗಳನ್ನೂ ಒಳಗೊಂಡಿದೆ. ಆದರೆ ಈ ಒಪ್ಪಂದದ ಮೂಲಕ ಭಾರತವು ಎಲ್ಲಿ  ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮುವುದೋ ಎನ್ನುವ ಆತಂಕ ಪಾಕಿಸ್ತಾನವನ್ನು ಕಾಡುತ್ತಿದೆ.
 
ಪಾಕ್ ಈ ಒಪ್ಪಂದವನ್ನು `ಪಾಕಿಸ್ತಾನ ವಿರೋಧಿ ಕ್ರಮ~ ಎಂದು ವ್ಯಾಖ್ಯಾನಿಸಬಾರದು. ಅಲ್ಲದೆ, ಕೇವಲ ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತ್ರವೇ ಭಾರತವು ಆಫ್ಘಾನಿಸ್ತಾನದ ಜತೆ ಒಪ್ಪಂದ ಮಾಡಿಕೊಂಡಿದೆ ಎಂದೂ ಅರ್ಥೈಸಬಾರದು. ಒಪ್ಪಂದದ ಬಳಿಕ ಹಮೀದ್ ಕರ್ಜೈ `ಭಾರತವು ನಮಗೆ ಪರಮಾಪ್ತ ರಾಷ್ಟ್ರ; ಆದರೆ ಪಾಕಿಸ್ತಾನವು ಮಲಸಹೋದರ~ ಎಂದು ಉದ್ಗರಿಸಿದ್ದು ಭಾರತ ಹಾಗೂ ಪಾಕ್ ಮಧ್ಯೆ ಅತ್ಯಂತ ಎಚ್ಚರಿಕೆಯಿಂದ ಸಾಮರಸ್ಯವನ್ನು ಕಾಪಾಡುವ ಅವರ ಆಶಯಕ್ಕೆ ಸಾಕ್ಷಿಯಾಗಿದೆ.

ಹಖಾನಿ ಸಂಘಟನೆ ವಿಷಯದಲ್ಲಿ ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. `ಪಾಕ್ ಈ ಸಂಘಟನೆಗೆ ಆಶ್ರಯ ನೀಡಿದೆ~ ಎಂದೂ ಕರ್ಜೈ ಆರೋಪ ಮಾಡಿದ್ದರು. ಅಮೆರಿಕದ ಸೇನಾ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲ್ಲನ್ ಕೂಡ ಈ ವಿಷಯದಲ್ಲಿ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

 `ಹಖಾನಿ ಉಗ್ರ ಜಾಲವು ಸಾಕ್ಷಾತ್ ಐಎಸ್‌ಐನ ಸೇನೆ ಎಂಬಂತೆ ವರ್ತಿಸುತ್ತಿದೆ. ಪಾಕಿಸ್ತಾನವು ಹಖಾನಿ ಜಾಲದ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ  ಇದರಲ್ಲಿ ಪಾಕ್ ವಿಫಲವಾದರೆ ಅಮೆರಿಕವೇ ಇದಕ್ಕೆ ತಕ್ಕ ಪಾಠ ಕಲಿಸುತ್ತದೆ~ ಎಂದು ಎಚ್ಚರಿಕೆ ನೀಡಿದ್ದರು. ಪಾಕ್ ನೆಲದಲ್ಲಿ ಆಶ್ರಯ ಪಡೆದಿರುವ ಹಖಾನಿ ಜಾಲವನ್ನು ಸದೆಬಡಿಯಲು ಅಮೆರಿಕವು ಪಾಕಿಸ್ತಾನದಲ್ಲಿ  ಕಾರ್ಯಾಚರಣೆ ನಡೆಸುವುದಕ್ಕೆ ಹಿಂದೇಟು ಹಾಕುವುದಿಲ್ಲ ಎನ್ನುವ ಸ್ಪಷ್ಟ ಸೂಚನೆಯೂ ಈ ಎಚ್ಚರಿಕೆಯಲ್ಲಿ ಧ್ವನಿಸುತ್ತದೆ.

ಭಾರತ-ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ-ಈ ಮೂರೂ ದೇಶಗಳು ಮೈತ್ರಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿದೆ. ಇದು ಸಾಕಾರವಾಗಬೇಕಾದರೆ ಆಫ್ಘಾನಿಸ್ತಾನವನ್ನು ತನ್ನ `ಸಮರ ತಂತ್ರದ ನೆಲೆ~ಎಂಬ ನಂಬಿಕೆಯನ್ನು ಪಾಕಿಸ್ತಾನವು ಬಿಡಬೇಕಾಗುತ್ತದೆ.

ಆಫ್ಘಾನಿಸ್ತಾನವು ಈ ವಿಷಯಕ್ಕಾಗಿಯೇ ಹಲವಾರು ವರ್ಷಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತ ಬಂದಿದೆ. ಅಷ್ಟಕ್ಕೂ ತಾನು ಪಾಕಿಸ್ತಾನದಿಂದ ಉಪಕೃತವಾಗುವುದು ಆಫ್ಘಾನಿಸ್ತಾನಕ್ಕೆ ಬೇಕಾಗಿಲ್ಲ. ಆಫ್ಘಾನಿಸ್ತಾನ ಒಂದು ಸಾರ್ವಭೌಮ ದೇಶವಾಗಿದ್ದು, ತನ್ನ ನೆಲಕ್ಕೆ ಸರಿಹೊಂದುವ ನೀತಿಗಳನ್ನು ರೂಪಿಸುವ ಹಕ್ಕು ಹೊಂದಿದೆ. ಪಾಕಿಸ್ತಾನವು ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ!

2014ರೊಳಗೆ ಆಫ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಾಗಿ ಅಮೆರಿಕ ಹೇಳಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಭಾರತ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಒಟ್ಟಾಗಿ ತಮ್ಮ ದೇಶಗಳಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಶ್ರಮಿಸಬೇಕು. ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ತನ್ನ ಗಡುವಿಗೆ ಅಮೆರಿಕ ಎಷ್ಟರಮಟ್ಟಿಗೆ  ಬದ್ಧವಾಗಿರುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಒಂದು ವೇಳೆ ಸೇನೆಯನ್ನು ವಾಪಸ್ ಕರೆಸಿಕೊಂಡರೂ, ಅಮೆರಿಕ ಹಾಗೂ ನ್ಯಾಟೊ ಪಡೆಗಳನ್ನು ನೆಚ್ಚಿಕೊಳ್ಳದೆಯೇ ಆಫ್ಘಾನಿಸ್ತಾನ ಹಾಗೂ ಇತರ ರಾಷ್ಟ್ರಗಳು ಭಯೋತ್ಪಾದನೆ ದಮನಕ್ಕೆ ಕಾರ್ಯತಂತ್ರ ರೂಪಿಸಬಹುದೇ ಎನ್ನುವ ಮಾರ್ಗೋಪಾಯವನ್ನು ಹುಡುಕುವುದು ಮಹತ್ವದ ವಿಚಾರವಾಗುತ್ತದೆ.

ಇನ್ನು ತಾಲಿಬಾನ್ ವಿಷಯವನ್ನೇ ತೆಗೆದುಕೊಳ್ಳಿ. 140,000 ಸಿಬ್ಬಂದಿಯನ್ನು ನಿಯೋಜಿಸಿದರೂ ತಾಲಿಬಾನ್ ಅನ್ನು ವಶಪಡಿಸಿಕೊಳ್ಳುವುದು ಅಸಾಧ್ಯವಾದ ಕೆಲಸ ಎಂದು ಪಾಕಿಸ್ತಾನ ಪಡೆಗಳಿಗೆ ಮನವರಿಕೆಯಾಗಿದೆ. ಅಂತಿಮವಾಗಿ ತಾಲಿಬಾನ್ ವಿರುದ್ಧ ಆಫ್ಘಾನಿಸ್ತಾನವು ಯುದ್ಧ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ಎಲ್ಲಿಯವರೆಗೆ ಪಾಕಿಸ್ತಾನವು ನೆರವು ನೀಡುವುದಿಲ್ಲವೋ ಅಲ್ಲಿಯವರೆಗೆ ಆಫ್ಘಾನಿಸ್ತಾನವು ಈ ಸಾಹಸಕ್ಕೆ ಮುಂದಾಗಲು ಸಾಧ್ಯವಿಲ್ಲ.

ಇತ್ತೀಚೆಗೆ ಲಂಡನ್‌ನಲ್ಲಿ ಕರ್ಜೈ ಅವರು ತಾಲಿಬಾನ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಕೆಂಡಕಾರಿದ್ದರು. `ನಮ್ಮ ದೇಶದಲ್ಲಿ ಮಾರಣಾಂತಿಕ ದಾಳಿ ನಡೆಸಿದ ತಾಲಿಬಾನ್‌ಗೆ ಪಾಕಿಸ್ತಾನದ ಕುಮ್ಮಕ್ಕಿದೆ. ಪಾಕ್ ಬೆಂಬಲ ಇಲ್ಲದೆಯೇ ತಾಲಿಬಾನ್ ಹುಲ್ಲು ಕಡ್ಡಿ ಅಲುಗಾಡಿಸಲೂ ಸಾಧ್ಯವಿಲ್ಲ~ ಎಂದು ವ್ಯಂಗ್ಯವಾಡಿದ್ದರು.

 ತಾಲಿಬಾನ್ ಕುರಿತ ಅಸ್ಪಷ್ಟ ಧೋರಣೆಗೆ ಪಾಕಿಸ್ತಾನವು ಮುಂದೆ ಭಾರಿ ಬೆಲೆ ತೆರಬೇಕಾಗಿ ಬರಬಹುದು. ಈಗಲೂ ಕಾಲ ಮಿಂಚಿಲ್ಲ. ಪಾಕ್ ಈ ಸತ್ಯವನ್ನು ಅರಿತುಕೊಳ್ಳಲಿ.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT