ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವದ ಆಕಾಶದಲ್ಲಿ...

ಅಕ್ಷರ ಗಾತ್ರ

ಸಾಲಿಗ್ರಾಮ ಮೇಳದಲ್ಲಿ ನಾನೂ ರಾಮನಾರಿಯೂ ಕೋಡಂಗಿ, ಬಾಲಗೋಪಾಲ, ಪೀಠಿಕೆ ಸ್ತ್ರೀವೇಷ ಎಲ್ಲವನ್ನೂ ಮಾಡುತ್ತಿದ್ದೆವು. ಪ್ರಸಂಗದಲ್ಲಿ ನಮ್ಮದು ಪಡೆಗಳ, ಬಲಗಳ ಪಾತ್ರ. ನಮ್ಮ ವೇಷ ಮುಗಿದ ಮೇಲೆ ಗುರುಗಳಾದ ವೀರಭದ್ರ ನಾಯಕರ ಬಳಿ ಕುಳಿತುಕೊಳ್ಳುವುದು.

ಅವರು ಮುಖಕ್ಕೆ ಬಣ್ಣ ಹಾಕುವುದನ್ನು, ವೇಷ ಕಟ್ಟುವುದನ್ನು ನೋಡುವುದು. ನಮ್ಮದು ಕೆಲವೇ ನಿಮಿಷ ರಂಗಸ್ಥಳದಲ್ಲಿರುವ ವೇಷವಾದರೂ ಬಣ್ಣ ತೆಗೆದು ಮಲಗುವಂತಿಲ್ಲ. ಬೆಳಗ್ಗಿನವರೆಗೆ ರಂಗಸ್ಥಳದ ಮುಂದೆ ನೆಲದಲ್ಲಿ ಕುಳಿತು ಆಟ ನೋಡಬೇಕೆಂದು ಗುರುಗಳ ಆದೇಶವಿತ್ತು. ಹಗಲೂ ಸರಿಯಾಗಿ ನಿದ್ದೆ ಮಾಡದೆ ರಾತ್ರಿಯೂ ಎಚ್ಚರವಾಗಿರುವುದು ನಮ್ಮಂಥ ಹುಡುಗರಿಗೆ ಸಾಧ್ಯವಾಗುವ ಮಾತೆ? ಹಗಲು ಹೊತ್ತು ಗುರುಗಳ ಬಟ್ಟೆ ಒಗೆಯುವುದು, ಸ್ನಾನಕ್ಕೆ ನೀರು ಸಿದ್ಧಗೊಳಿಸುವುದು, ಊಟ ತಂದುಕೊಡುವುದು, ಮಧ್ಯಾಹ್ನದ ಬಳಿಕ ಬಿಡಾರದಲ್ಲಿ ಬಟ್ಟೆ ಹಾಸಿ ಒರಗುವಷ್ಟರಲ್ಲಿ ಸಂಜೆಯಾಗಿಬಿಡುತ್ತಿತ್ತು.

ರಾತ್ರಿ ಆಟ ನೋಡುವುದಕ್ಕೆಂದು ರಂಗಸ್ಥಳದ ಮುಂದೆ ಕುಕ್ಕುರುಗಾಲಲ್ಲಿ ಕೂತು ಮೊಣಕಾಲುಗಳ ಮೇಲೆ ಗದ್ದ ಇಟ್ಟು ಕುಳಿತ ಕೂಡಲೇ ಕಣ್ಣರೆಪ್ಪೆಗಳು ನಮ್ಮ ನಿಯಂತ್ರಣ ಮೀರಿ ಮುಚ್ಚಿಕೊಳ್ಳಲಾರಂಭಿಸುತ್ತಿದ್ದವು. ಗುರುಗಳ ವೇಷದ ಪ್ರವೇಶವಾಗುತ್ತಲೇ ಕಣ್ಣುಜ್ಜಿಕೊಂಡು ಆಸಕ್ತಿಯಿಂದ ನೋಡುತ್ತಿರುವಂತೆ ನಟಿಸುತ್ತಿದ್ದೆವು. ಗುರುಗಳು ಕೂಡ ರಂಗಸ್ಥಳದಲ್ಲಿ ಓರೆಗಣ್ಣಿನಿಂದ ಹುಡುಗರು ಆಟ ನೋಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಿದ್ದರು. ನಾವು ತೂಕಡಿಸುತ್ತಿದ್ದರೆ, ತಮ್ಮ ವೇಷ ರಂಗಸ್ಥಳಕ್ಕೆ ನಿರ್ಗಮಿಸಿದ ಕೂಡಲೇ ಚೌಕಿ
(ಬಣ್ಣದ ಮನೆ)ಗೆ ಕರೆಸಿ ಗದರಿಸುತ್ತಿದ್ದರು, ಕೆಲವೊಮ್ಮೆ ಏಟು ಬಿಗಿದದ್ದೂ ಇದೆ.

ಕೆಲವೊಮ್ಮೆ ನಿದ್ದೆ ತಾಳಲಾರದೆ ರಂಗಸ್ಥಳದ ಅಡಿಭಾಗಕ್ಕೆ ನುಸುಳಿ ಪವಡಿಸಿಬಿಡುತ್ತ್ದ್ದಿದೆವು. ಆಗ ಸಾಲಿಗ್ರಾಮ ಮೇಳ ಟೆಂಟ್ ಮೇಳವಾಗಿತ್ತು. ಹಲಗೆಗಳನ್ನು ಹಾಸಿದ ಎತ್ತರದ ರಂಗಮಂಟಪ ಆಗಷ್ಟೇ ಯಕ್ಷಗಾನ ಕ್ಷೇತ್ರದಲ್ಲಿ ಸ್ಥಾಪನೆಗೊಳ್ಳುತ್ತಿತ್ತು. ಆ ಐತಿಹಾಸಿಕ ಬದಲಾವಣೆ ನಮ್ಮಂಥ ನಿದ್ದೆಗೇಡಿಗಳ ಪಾಲಿಗೆ ತುಂಬ ಅನುಕೂಲಕರವಾಯಿತು.

ಗುರುಗಳ ವೇಷ ರಂಗಸ್ಥಳದಲ್ಲಿ ಇರುವವರೆಗೆ ನಾವು ರಂಗಸ್ಥಳದ ಮುಂದಿರುತ್ತಿದ್ದೆವು. ಅವರು ನಿರ್ಗಮಿಸಿದ ಕೂಡಲೇ ಯಥಾಪ್ರಕಾರ ರಂಗಸ್ಥಳದ ಅಡಿಭಾಗಕ್ಕೆ. ವೇಷಧಾರಿಗಳ ಧಡ್ ಧಡ್ ಪದಾಘಾತಗಳನ್ನು ಕೇಳಿಸಿಕೊಳ್ಳುತ್ತ ಅದೇ ಲಯವಾಗಿ ನಿದ್ದೆಗೆ ಜಾರುತ್ತಿದ್ದೆವು. ಒಮ್ಮೆ ಗುರುಗಳ ಕಣ್ಣುಗಳು ರಂಗಸ್ಥಳದಿಂದಲೇ ನಮ್ಮನ್ನು ಹುಡುಕಾಡಿದವು. ನಾವು ಇರಬೇಕಾದಲ್ಲಿ ಇರಲಿಲ್ಲ. ನಿದ್ದೆ ಬೇಗನೆ ಆವರಿಸಿದ್ದರಿಂದ ತೆವಳಿಕೊಂಡು ರಂಗಸ್ಥಳದಡಿಯ ನಮ್ಮ ಗುಹಾಲೋಕ ಸೇರಿಬಿಟ್ಟಿದ್ದೆವು.

ಗುರುಗಳು, `ಹುಡುಗರು ಎಲ್ಲಿದ್ದಾರೆ, ನೋಡು' ಅಂತ ಗಣಪತಿ ಪೆಟ್ಟಿಗೆಯವನನ್ನು ಕಳುಹಿಸಿದರು. ಆತ ಅಲ್ಲಿಲ್ಲಿ ಹುಡುಕಿ ರಂಗಸ್ಥಳದಡಿಗೆ ಬಿಲ್ಲನ್ನು ಚಾಚಿ, ತಿವಿದು ನಮ್ಮನ್ನು ಎಬ್ಬಿಸಿದ. ನಡುಗುತ್ತ ಹೋಗಿ ಚೌಕಿಯಲ್ಲಿ ನಿಂತೆವು. `ಆಟ ನೋಡದೆ ನಿದ್ದೆ ಮಾಡುತ್ತೀರಾ... ಕಳ್ಳ ನನ್ಮಕ್ಕಳೇ...' ಎಂದವರೇ ಬಿಲ್ಲು ಎತ್ತಿ ಬಾರಿಸತೊಡಗಿದರು. ಆಗ, ಚೌಕಿಯಲ್ಲಿ ಘನತೆಯ ವೇಷಧಾರಿ ಸಿರಿಯಾರ ಮಂಜು ನಾಯ್ಕರು ಇದ್ದರು. ವೀರಭದ್ರ ನಾಯಕರಲ್ಲಿ, `ಯಾಕೆ ಹೊಡೆಯುತ್ತೀರಿ... ಪಾಪದ ಹುಡುಗರು' ಎಂದು ದನಿ ಎತ್ತಿದರು. ವೀರಭದ್ರ ನಾಯಕರು ಮಂಜು ನಾಯ್ಕರತ್ತ ಒಮ್ಮೆ ನೋಡಿ, ಬಿಲ್ಲನ್ನು ಚೆಲ್ಲಿ ಸುಮ್ಮನಾದರು. ನಾವೇ ಕಾರಣವಾಗಿ, ಅವರಿಬ್ಬರ ಮಧ್ಯೆ ಲಘು ಜಗಳವೂ ಆಗುತ್ತಿತ್ತು. `ನಾವು ಕಲಿಯಲು ಕಷ್ಟಪಟ್ಟಿಲ್ಲವೆ? ಇವರಿಗೇನು ಮಾರಿ...' ಎಂದು ವೀರಭದ್ರ ನಾಯಕರು ಹೇಳಿದರೆ, `ಅದು ನಮ್ಮ ಕಾಲ... ಈ ಕಾಲ ಬೇರೆ ನೋಡಿ ನಾಕ್‌ರೆ...' ಎಂದು ಸಿರಿಯಾರ ಮಂಜು ನಾಯ್ಕರು ತಾಳ್ಮೆಯಿಂದ ಪ್ರತಿನುಡಿಯಾಡುತ್ತಿದ್ದರು.

ಆಗ ಮೇಳದ ಚೌಕಿಯಲ್ಲಿ ರಾರಾಜಿಸುತ್ತಿದ್ದ ಕಲಾವಿದರಾದರೂ ಎಂಥವರು! ಮರವಂತೆ ನರಸಿಂಹ ದಾಸ ಭಾಗವತರು, ಮದ್ದಲೆವಾದಕ ಹುಂಚದಕಟ್ಟೆ ಶ್ರಿನಿವಾಸ ಆಚಾರ್ಯರು, ಚೆಂಡೆವಾದಕ ಕೆಮ್ಮಣ್ಣು ಆನಂದರವರು, ಮಲ್ಪೆ ಶಂಕರನಾರಾಯಣ ಸಾಮಗರು, ಮಟಪಾಡಿ ವೀರಭದ್ರ ನಾಯಕರು, ಸಿರಿಯಾರ ಮಂಜು ನಾಯ್ಕರು, ಕುಮಟಾ ಗೋವಿಂದ ನಾಯ್ಕರು, ಜಲವಳ್ಳಿ ವೆಂಕಟೇಶ ರಾಯರು, ಬೆಳ್ತೂರು ರಮೇಶರವರು, ಚೇರ್ಕಾಡಿ ಮಾಧು ನಾಯ್ಕರು, ಸ್ತ್ರೀವೇಷಕ್ಕೆ ಆರಾಜೆ ಮಂಜುರವರು, ಹಾಸ್ಯಕ್ಕೆ ಮುಖ್ಯಪ್ರಾಣ ಕಿನ್ನಿಗೋಳಿಯವರು...!  `ವಸಂತ ಸೇನೆ' ಎಂಬ ಹೊಸ ಪ್ರಸಂಗದ ದಿಗ್ವಿಜಯ ನಡೆಯುತ್ತಿತ್ತು. ಯಾವ ಪ್ರಸಂಗವಾದರೇನು, ನಮ್ಮದು ಅದೇ ಪಡೆಗಳ ವೇಷ. ಚೌಕಿಯಲ್ಲಿ ಹೇಗೂ ಏಟುಗಳು; ರಂಗಸ್ಥಳದಲ್ಲಿಯೂ ಪಡೆಗಳಿಗೆ ಹೊಡೆಯುವ ಅವಕಾಶ ಬಂದಾಗ ಯಾರೂ ಬಿಡುತ್ತಿರಲಿಲ್ಲ. ನಮ್ಮನ್ನು ಅಟ್ಟಾಡಿಸುವುದು ಎಲ್ಲರಿಗೂ ಮೋಜಿನ ಸಂಗತಿಯಾಗಿತ್ತು.

ಲೌಕಿಕವಾದ ಬದುಕು ಹೇಗೇ ಇರಲಿ... ರಂಗದ ಮುಂದೆ ಬೆಳಕಿಗೆ ಮುಖ ಒಡ್ಡುತ್ತ ಬರುವಾಗ ಎಲ್ಲವೂ ಮರೆತುಹೋಗುತ್ತಿತ್ತು. ಪಡೆಯೇ ಆಗಿರಲಿ, ಬಲವೇ ಆಗಿರಲಿ ಪೌರಾಣಿಕ ಲೋಕದೊಳಗೆ ಪ್ರವೇಶವಾಗಿ, ಪಾತ್ರದ ಆವೇಶವಾಗಿ, ವೇಷವೇ ತಾನಾಗಿ... ಭಾಗವತರು ಥೈ ಥೈ ಥೈ ಎಂದು ಹೇಳುವಾಗ ಪಾದದ ಹಿಮ್ಮಡಿಯನ್ನು ಪೃಷ್ಠಕ್ಕೆ ತಾಗುವಂತೆ ಎತ್ತರೆತ್ತರ ಹಾರುತ್ತ...

ಎತ್ತರೆತ್ತರಕೆ ಹಾರುತ್ತಿತ್ತು ನಮ್ಮ ವಿಮಾನ !
ದೆಹಲಿಯ ವಿಮಾನ ನಿಲ್ದಾಣದಲ್ಲಿ ಶೂಗಳ ಮುಂದುದಿಗೆ ಕಾಗದದ ಪಿಂಡಿಯನ್ನು ತುರುಕಿಸಿ ಕಾಲೆಳೆಯುತ್ತ ಸಾಗುತ್ತಿದ್ದ ನನಗೆ, ಈ ದರಿದ್ರ ಶೂಗಳನ್ನು ಕೈಯಲ್ಲಿ ಹಿಡಿದುಕೊಂಡು ನಡೆಯೋಣ ಅನ್ನಿಸುತ್ತಿತ್ತು. ಆದರೆ, ಶಿಷ್ಟಾಚಾರ ಮೀರುವ ಹಾಗಿಲ್ಲ. ಬಹುಶಃ ಸನಿಹದಲ್ಲಿ ನಡೆಯುತ್ತಿದ್ದ ಕೆರೆಮನೆ ಮಹಾಬಲ ಹೆಗಡೆಯವರ ಮನಸ್ಸಿನಲ್ಲಿಯೂ ಅದೇ ಭಾವವಿದ್ದಿರಬಹುದು. `ವಿಜಯ'ದ ಭೀಷ್ಮನಾಗಿ ರಂಗಸ್ಥಳವೇ ನಡುಗುವಂತೆ `ಏರಿರಿ ಎನ್ನಯ ರಥವನು' ಎಂದು ಹೂಂಕರಿಸುತ್ತಿದ್ದ ಧೀಮಂತ ಕಲಾವಿದ ಮಹಾಜನಾರಣ್ಯದಲ್ಲಿ ಮುಗ್ಧನಂತೆ ನಡೆಯುತ್ತಿರುವುದನ್ನು ಸೋಜಿಗದಿಂದ ನೋಡುತ್ತಿದ್ದೆ.

ಅದೋ... ಅಲ್ಲಿ ನಿಂತಿದೆ ಜರ್ಮನಿಯ ವಿಮಾನ. ಲಗುಬಗೆಯಿಂದ ಅದರ ಮೆಟ್ಟಿಲುಗಳನ್ನು ಏರತೊಡಗಿದೆವು. ಬದುಕಿನಲ್ಲಿಯೇ ಮೊದಲ ಅನುಭವವದು. ರಂಗಸ್ಥಳದಲ್ಲಿ ಕುಮ್ಚಟ್ ಹಾಕುತ್ತ ಆಗಸಕ್ಕೆ ಹಾರುವ ಕನಸು ಕಾಣುತ್ತಿದ್ದ ಯಕ್ಷಗಾನ ಕಲಾವಿದರಾದ ನಾವು ಈಗ ನಿಜವಾಗಿ ಮುಗಿಲುಗಳ ನಡುವೆ ತೇಲುತ್ತಿದ್ದೆವು. ನಾನೂ ಬಿರ್ತಿ ಬಾಲಕೃಷ್ಣರವರೂ ಕೆರೆಮನೆ ಮಹಾಬಲ ಹೆಗಡೆಯವರೂ ಒಂದೇ ಸಾಲಿನ ಸೀಟುಗಳಲ್ಲಿ ಕುಳಿತಿದ್ದೆವು. ವಿಮಾನದ `ಗುಂಯ್' ಎಂಬ ಸದ್ದು ಕಿವಿಗಳ ತುಂಬ ತುಂಬಿಕೊಂಡು ಸ್ತಬ್ಧ ಮೌನವೇ ಸುತ್ತಲೆಲ್ಲ ಆವರಿಸಿದಂತಿತ್ತು.

ಪ್ರಯಾಣ ಆರಂಭಿಸಿ ಒಂದೆರಡು ಗಂಟೆಗಳು ಆಗಿರಬಹುದು. `ಸಂಜೀವ, ನಿಮ್ಮಲ್ಲಿ ಪ್ರಯಾಣದ ಹೆಜ್ಜೆಯಿದೆಯಲ್ಲ... ಅದಕ್ಕೆ ಕೊಂಚ ಲಾಲಿತ್ಯವಿದ್ದರೆ ಚೆನ್ನ ಮಾರಾಯ... ನಮ್ಮಲ್ಲಿ ಮೂಡ್ಕಣಿ ನಾರಾಯಣ ಹೆಗಡೆಯವರು ಹೇಗೆ ಕುಣಿಯುತ್ತಿದ್ದರು ನೋಡು...' ಎಂದು ತಕ್ಕಿಟ ತಕಧಿನ ಧೀಂಕಿಟ ತಕಧಿನ ಬಾಯಿತಾಳವನ್ನು ಕುಳಿತಲ್ಲಿಯೇ ಅಭಿನಯಿಸಲು ಪ್ರಯತ್ನಿಸಿದರು ಕೆರೆಮನೆಯವರು.

ಮೇರು ಕಲಾವಿದನಿಂದ ಯಕ್ಷಗಾನದ ಪಾಠ ಕೇಳಿಸಿಕೊಳ್ಳುವ ಅವಕಾಶ ಎಂದಿಗೆ ಆರಂಭವಾಯಿತೊ... ಆಮೇಲೆ ನಾನು ನಿಜ ಅರ್ಥದಲ್ಲಿ ಮುಗಿಲಲ್ಲಿಯೇ ತೇಲಲಾರಂಭಿಸಿದೆ. ಅದೂ ಕೆರೆಮನೆಯವರ ಅನುಭವದ ಆಕಾಶ! ಇವತ್ತಿಗೂ ಪ್ರಯಾಣದ ಹೆಜ್ಜೆಗಳನ್ನು ಹಾಕುವಾಗ ಕೆರೆಮನೆಯವರು ಹೇಳಿಕೊಟ್ಟದ್ದು ನೆನಪಿಗೆ ಬರುತ್ತದೆ. ನಡುವೆ, ಮಾತು ನಿಲ್ಲಿಸಿದ ಕೆರೆಮನೆಯವರು, `ಬಾಲ, ಇದು ಎಲ್ಲಿ?' ಎಂದು ಕಿರುಬೆರಳನ್ನು ಎತ್ತಿ ಹಿಡಿದು ಬಿರ್ತಿ ಬಾಲಕೃಷ್ಣರವರನ್ನು ಕೇಳಿದರು. ಬಿರ್ತಿ ಬಾಲಕೃಷ್ಣರವರು ಅವರನ್ನು ಟಾಯ್ಲೆಟ್ ಬಳಿಗೆ ಕರೆದೊಯ್ದು ಬಿಟ್ಟು ಬಂದರು. ಮರಳಿ ಬಂದ ಮೇಲೆ, `ಬೇಸಿನ್‌ಗೆ ನೀರು ಹಾಕುವುದು ಎಲ್ಲಿ ಎಂದು ಗೊತ್ತಾಗಲೇ ಇಲ್ಲ ಮಾರಾಯ' ಎಂದು ನಗುತ್ತ ಕುಳಿತರು. ಅವರ ಮಾತು ನನಗೂ ಸವಾಲು ಅನ್ನಿಸಿ, ನಾನು ಎದ್ದು ಟಾಯ್ಲೆಟ್‌ಗೆ ಹೋದೆ. ಒಳಗೆ, ಎಲ್ಲಿ ಹುಡುಕಾಡಿದರೂ ನೀರು ಬರುವ ಟ್ಯಾಪ್ ಯಾವುದೆಂದು ಗೊತ್ತಾಗಲಿಲ್ಲ. ಕೊನೆಗೆ, ಆದದ್ದು ಆಗಲಿ ಎಂದು ಯಾವುದೋ ಒಂದು ಒತ್ತಿಗುಂಡಿಯನ್ನು ಒತ್ತಿದೆ.

`ಬುಸ್' ಎಂದು ಸದ್ದಾಯಿತು. ನಾನು ನಡುಗಿಹೋದೆ. ಬಹುಶಃ ಗಾಳಿಯೂ ನೀರೂ ಜೊತೆಯಾಗಿ ಹೊಮ್ಮುವ ಕಾರಣದಿಂದ ಹಾಗಾಗಿರಬೇಕು. ಬೇಗಬೇಗನೆ ಬಾಗಿಲು ತೆರೆದು ನನ್ನ ಆಸನಕ್ಕೆ ಮರಳಿ ಕುಳಿತಾಗಲೂ ನನ್ನ ಒಡಲಿನ ಭಯ ಅಡಗಿರಲಿಲ್ಲ. ನಮ್ಮ ಇಂಥ ಅನುಭವಗಳನ್ನು ನೋಡಿ ಬಿರ್ತಿ ಬಾಲಕೃಷ್ಣರವರು ಸುಮ್ಮನೆ ನಗುತ್ತಿದ್ದರು.

ವೆಸ್ಟ್ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ವಿಮಾನ ಭೂಸ್ಪರ್ಶ ಮಾಡಿದ ಕೂಡಲೇ ನಾವು ಇಳಿದು ಮಾಯಾ ರಾವ್ ಮತ್ತು ಜೊತೆಗಿದ್ದ ಕಲಾವಿದರ ಜೊತೆ ಹೆಜ್ಜೆಹಾಕತೊಡಗಿದೆವು. ಏರ್‌ಪೋರ್ಟ್‌ನ ಕಾರಿಡಾರ್‌ನಲ್ಲಿಯೂ ಕಾಲೆಳೆದುಕೊಂಡು ನಡೆಯುವ ಕಷ್ಟ ಇದ್ದೇ ಇತ್ತು. ಒಂದು ದೊಡ್ಡ ಕಟ್ಟಡದ ಹೆಬ್ಬಾಗಿಲನ್ನು ಪ್ರವೇಶಿಸಿದಾಗ ಮುಂದೆ ಚಲಿಸುವ ಮೆಟ್ಟಿಲು (ಎಸ್ಕಲೇಟರ್) ಗಳಿದ್ದವು.

ನಾನು ಅದನ್ನು ನೋಡಿದ್ದೇ ಮೊದಲು. ಎಲ್ಲರೂ ಅದರ ಮೇಲೆ ಹೆಜ್ಜೆಯಿಟ್ಟು ನಿಶ್ಚಲ ಚಲನೆಯಲ್ಲಿ ಸಾಗುತ್ತಿರುವುದನ್ನು ನೋಡಿ ನನಗೂ ಹಾಗೆ ಹೋಗಬೇಕೆಂದು ಅನ್ನಿಸಿತ್ತು. ಕೆರೆಮನೆ ಮಹಾಬಲ ಹೆಗಡೆಯವರು ಹೇಗೂ ದೇಹದ ತೋಲನ ಕಾಯ್ದುಕೊಂಡು ಮೆಟ್ಟಿಲ ಮೇಲೆ ಹೆಜ್ಜೆ ಇಟ್ಟೇಬಿಟ್ಟರು. ನಾನು ಮಾತ್ರ ಒಮ್ಮೆ ಪಾದ ಇಡುವುದು, ತೆಗೆಯುವುದು... ಕೊನೆಗೂ ನನಗೆ ಅದರಲ್ಲಿ ನಿಲ್ಲುವ ಧೈರ್ಯ ಬರಲಿಲ್ಲ. ನನ್ನ ಜೊತೆಗಿದ್ದ ಕೆರೆಮನೆಯವರು ನನ್ನಿಂದ ಮೆಲ್ಲಮೆಲ್ಲನೆ ದೂರವಾದಂತೆ ಮೇಲೆ ಸಾಗುತ್ತಿದ್ದರು. ಇನ್ನು ಇಲ್ಲಿಯೇ ನಿಂತರೆ, ಹಿಂದುಳಿದುಬಿಡುತ್ತೇನೆ ಎಂದುಕೊಂಡವನೇ ಮಗ್ಗುಲಲ್ಲಿಯೇ ಇದ್ದ ಚಲಿಸದ ಮೆಟ್ಟಿಲುಗಳ ಮೇಲೆ ತ್ವರಿತಗತಿಯ ಹೆಜ್ಜೆಗಳನ್ನು ಹಾಕುತ್ತ ಮೇಲೆ ಓಡಿದೆ. ಕೆರೆಮನೆಯವರು ಮೇಲ್ತುದಿಗೆ ತಲುಪುವುದಕ್ಕೂ ನಾನು ಹೋಗಿ ಅಲ್ಲಿ ನಿಲ್ಲುವುದಕ್ಕೂ ಸರಿಯಾಯಿತು. `ಹ್ಯಾಂಗೆ...' ಎಂಬ ಹೆಮ್ಮೆಯ ಭಾವದಿಂದ ಅವರು ನನ್ನನ್ನು ಒಮ್ಮೆ ನೋಡಿ ಮುಂದೆ ಹೆಜ್ಜೆ ಹಾಕಿದರು. ನಾನು ಅವರ ಹೆಜ್ಜೆಗಳನ್ನು ಅನುಸರಿಸಿದೆ....

ಅವರ ಹೆಜ್ಜೆಗಳನ್ನು ಅನುಸರಿಸುತ್ತಿರುವಾಗ ಹೆಮ್ಮೆಯೂ ಸಾತ್ವಿಕ ಭಯವೂ ಜೊತೆಯಾಗಿ ಮನಸ್ಸಿನಲ್ಲಿ ಮೂಡುತ್ತಿದ್ದವು. ಅವರು ಎಂದರೆ ಯಾರು; ಶಿವರಾಮ ಕಾರಂತರು! ಕರಾವಳಿಯ ಕಡಲ ತೀರದಲ್ಲಿ ಏಕಾಂಗಿಯಾಗಿ ನಡೆಯುವ ಸ್ವಾಭಿಮಾನದಲ್ಲಿಯೇ ಅವರು ಇಟಲಿಯಲ್ಲಿಯೂ ನಡೆಯುತ್ತಿದ್ದರು. ನಡೆಯುವುದು ಮಾತ್ರವಲ್ಲ, ನಡೆಯೂ ನಡತೆಯೂ! ಜೊತೆಗೆ ಪ್ರೊಫೆಸರ್ ಕು.ಶಿ. ಹರಿದಾಸ ಭಟ್ಟರು, ಭಾಗವತ ನೀಲಾವರ ರಾಮಕೃಷ್ಣಯ್ಯನವರು, ಮಣೂರು ಮಹಾಬಲ ಕಾರಂತರು, ಪ್ರೊಫೆಸರ್ ಲಕ್ಷ್ಮೀನಾರಾಯಣ ಸಾಮಗರು, ಹಾರಾಡಿ ಪ್ರದೇಶದ ಪ್ರತಿಭಾವಂತ ಕಲಾವಿದರು....

ಇಟಲಿಯಿಂದ ಉಡುಪಿಗೆ ಬಂದು ಯಕ್ಷಗಾನದ ಕುರಿತು ಅಧ್ಯಯನ ನಡೆಸಿದ ಸೆಲಿನಾ ಬ್ರೂನಾ, ರಂಗತಜ್ಞ ಮರೋತಿ ಅವರ ಆಹ್ವಾನದ ಮೇರೆಗೆ ಶಿವರಾಮ ಕಾರಂತರು ಸಾಂಪ್ರದಾಯಿಕ ಯಕ್ಷಗಾನ ತಂಡದ ನೇತೃತ್ವ ವಹಿಸಿದ್ದರು. ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಶಿವರಾಮ ಕಾರಂತರಿಗೆ ಅಂಥ ಒಲವಿಲ್ಲವೆಂದೇ ತೋರುತ್ತದೆ. ಅವರದೇನಿದ್ದರೂ ಯಕ್ಷಗಾನವನ್ನು ಸಮಕಾಲೀನವಾಗಿ ಮರುರೂಪಿಸುವ ಸೃಜನಶೀಲ ಚಿಂತನೆ. ಆದರೂ ವಿದೇಶದ ವಿದ್ವಾಂಸರ ಒತ್ತಾಸೆಯಲ್ಲಿ ಈ ತಂಡದ ಮುನ್ನೆಲೆಯಲ್ಲಿ ನಿಂತಿದ್ದರು.

ಅಲ್ಲಲ್ಲಿ ನಮ್ಮ ತಂಡದ ಹಲವು ಪ್ರದರ್ಶನಗಳು ಪ್ರಸ್ತುತಗೊಂಡವು. ಎಲ್ಲವೂ ಅಪ್ಪಟ ಸಾಂಪ್ರದಾಯಿಕ ಶೈಲಿಯಲ್ಲಿ. ನನಗೆ ತೆರೆ ಹಿಡಿಯುವ, ಹಿಮ್ಮೇಳ ಸಾಮಗ್ರಿಗಳನ್ನು ಸಿದ್ಧಗೊಳಿಸುವ, ವೇಷಭೂಷಣ ಕಟ್ಟಲು ನೆರವಾಗುವ ಜವಾಬ್ದಾರಿ. `ಅವನಿಗೆಲ್ಲ ಗೊತ್ತಿದೆ, ಅವನು ನಮ್ಮ ತಂಡದಲ್ಲಿದ್ದರೆ ಅನುಕೂಲ' ಎಂಬ ಕಾರಣಕ್ಕಾಗಿಯೇ ನನಗೆ ಈ ಅವಕಾಶ ಸಿಕ್ಕಿದ್ದಲ್ಲವೆ? `ಅಭಿಮನ್ಯು ಕಾಳಗ' ಹಲವೆಡೆ ರಂಗವೇರಿತು. ಪರಿಸರ, ಹವೆ, ಆಹಾರ ಎಲ್ಲವೂ ಬದಲಾದುದರಿಂದ ಕಲಾವಿದರಿಗೆ ಹೊಂದಿಕೊಳ್ಳಲು ಕೊಂಚ ಕಷ್ಟವಾಗುತ್ತಿತ್ತು.

ಅಭಿಮನ್ಯು ಪಾತ್ರ ಮಾಡುವ ಕಲಾವಿದರು ಒಮ್ಮೆ ಅಸ್ವಸ್ಥರಾದರು. ಅವರ ಬದಲಿಗೆ, ಹೊಂತಕಾರಿಯ ಪಾತ್ರ ನಿರ್ವಹಿಸುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ನೀಲಾವರ ರಾಮಕೃಷ್ಣಯ್ಯನವರು, `ನಮ್ಮ ಸಂಜೀವ ಮಾಡಬಹುದು...' ಎಂದರು. `ಆ ಪಾತ್ರ ಮಾಡುವಷ್ಟು ಅವನು ಚುರುಕಿದ್ದಾನೆಯೆ?' ಎಂಬ ಪ್ರಶ್ನೆ ಎದ್ದಿತು.

`ಒಮ್ಮೆ ಕುಣಿಸಿ ನೋಡುವ' ಎಂದರು ಭಾಗವತ ನೀಲಾವರ ರಾಮಕೃಷ್ಣಯ್ಯನವರು. `ಸರಿ' ಎಂದರು ಪ್ರೊಫೆಸರ್ ಕು.ಶಿ. ಹರಿದಾಸ ಭಟ್ಟರು. ಮುಂದೆ ಕುರ್ಚಿಯೊಂದರಲ್ಲಿ ಶಿವರಾಮ ಕಾರಂತರು ಗಡ್ಡಕ್ಕೆ ಕೈ ಕೊಟ್ಟು ಕುಳಿತರು. ನಾನು ಸೊಂಟಕ್ಕೆ ವಸ್ತ್ರವೊಂದನ್ನು ಬಿಗಿದು ಕಟ್ಟಿದೆ. ಇಟಲಿಯ ಯಾವುದೋ ಪಟ್ಟಣದ ಆ ಪುಟ್ಟ ಕೊಠಡಿಯನ್ನು ಭಾಗವತ ನೀಲಾವರ ರಾಮಕೃಷ್ಣಯ್ಯನವರು `ಇಂತು ಚಿಂತಿಸುವುದನರಿತಭಿಮನ್ಯು ಮಹಾಂತ ಪರಾಕ್ರಮದಿ...' ಎಂದು ಹಾಡಿ ಥೈ ಥೈ ಎಂದು ಹೇಳುತ್ತಿರುವಂತೆ ಬಾಗಿಲ ಹೊರಗೆ ನಿಂತ ನಾನು ಜಿಗಿಯುತ್ತ ಉತ್ಸಾಹದಿಂದ ಪ್ರವೇಶಿಸಿದೆ. `ಬೊಪ್ಪನೆ ಬಿಡು ಬಿಡು ಚಿಂತೆಯ' ಮುಂತಾದ ತ್ವರಿತ ಲಯದ ಏರು ಪದ್ಯಗಳನ್ನು ಅಭಿನಯಿಸಿ ಕಾಣಿಸಿದೆ. ಅಷ್ಟೆ. `ಸರಿ, ಇವನೇ ಮಾಡಲಿ' ಎನ್ನುತ್ತ ಶಿವರಾಮ ಕಾರಂತರು ಎದ್ದು ಹೋದರು.

ಆ ಪರೀಕ್ಷೆಯಲ್ಲಿ ಪಾಸಾಗಿದ್ದೆ. ಅಂದು ಸಂಜೆ ರಂಗದ ಮೇಲೆ ನಿಜ ಅಭಿಮನ್ಯುವಾಗಿ ಮೆರೆದೆ. ಆಮೇಲೆ, ಅಭಿಮನ್ಯು ಪಾತ್ರ ಮಾಡುವವರ ಆರೋಗ್ಯ ಸರಿಯಾಯಿತು. ಅವರೇ ಮುಂದೆ ಆ ಪಾತ್ರವನ್ನು ನಿರ್ವಹಿಸಿದರು. ಅಂತೂ ಅಂದು ದೈತ್ಯ ಪ್ರತಿಭೆಗಳ ಮುಂದೆ ಅಪಾತ್ರನಾಗದಿರುವ ಅದೃಷ್ಟ ನನ್ನ ಪಾಲಿಗಾಯಿತು...

ಆ ಪಾತ್ರ ಈ ಪಾತ್ರ ಎಂದಿಲ್ಲ. ಹುಡುಗಾಟಿಕೆಯಲ್ಲಿ ಮಾಡದ ಪಾತ್ರಗಳಿಲ್ಲ. ಎಪ್ಪತ್ತರ ದಶಕವಿಡೀ ನಾನು ಎಷ್ಟು ಹವ್ಯಾಸಿ ಸಂಘದ ಆಟಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ ಎಂಬುದನ್ನು ಲೆಕ್ಕವಿಟ್ಟಿಲ್ಲ. ಯಾಕೆ ಇಲ್ಲವೆಂದು ಹೇಳಲಿ, ನಾನು ಭಸ್ಮಾಸುರನ ಪಾತ್ರವನ್ನೂ ಮಾಡಿದ್ದೇನೆ! ಆ ಕಾಲದಲ್ಲಿ ಬಡಗುತಿಟ್ಟಿನ ಕ್ಷೇತ್ರದಲ್ಲಿ ಹೊಸ ಅಲೆ ಉರುಳಿಕೊಂಡು ಬರುತ್ತಿತ್ತು.

ಹೀಗೆ ಹೇಳುವಾಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಅಭಿನಯ ಸಿರಿ ನಿಮ್ಮ ಕಣ್ಣ ಮುಂದೆ ಪದ್ಮದಂತೆ ಅರಳುತ್ತಿದ್ದರೆ ನಿಮ್ಮ ಊಹೆ ಸರಿಯಾಗಿದೆ. ನಾನೆಂದಲ್ಲ, ಬಡಗುತಿಟ್ಟಿನ ವೃತ್ತಿಪರ, ಹವ್ಯಾಸಿ ವಲಯದಲ್ಲೆಲ್ಲ ಅದೇ ಶಬ್ದಾಭಿನಯ, ಅದೇ ಅನುಕರಣೆ! ಗದಾಯುದ್ಧದ ಕೌರವ ಮಾಡುವಾಗಲೂ ಜನಪ್ರಿಯವಾದ ಬಿಂಬವೊಂದು ನನ್ನ ಕಣ್ಣ ಮುಂದಿರುತ್ತಿತ್ತು. 80ರ ದಶಕದಿಂದೀಚೆಗೆ ಶಿವರಾಮ ಕಾರಂತರನ್ನು ಅನುಸರಿಸಲಾರಂಭಿಸಿದ ಮೇಲೆ ಯಕ್ಷಗಾನದಲ್ಲಿ ಸ್ವಂತಿಕೆಯನ್ನು ಸ್ಥಾಪಿಸುವ ತುಡಿತದ ಕದ ತೆರೆದುಕೊಂಡಿತು. ಆಮೇಲಾಮೇಲೆ ಯಕ್ಷಗಾನ ಕೇಂದ್ರ, ಶಿವರಾಮ ಕಾರಂತರ ಯಕ್ಷರಂಗದಲ್ಲಿಯೇ ಹೆಚ್ಚಾಗಿ ಭಾಗವಹಿಸಿತೊಡಗಿದುದರಿಂದ ಜನಪ್ರಿಯತೆಯಿಂದ ಗಂಭೀರ ಪ್ರಸ್ತುತಿಯೆಡೆಗೆ ಪ್ರವೃತ್ತಿ ಹೊರಳತೊಡಗಿತು.

ದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರವನ್ನೂ ಮಾಡುತ್ತಿದ್ದೆ. ಒಮ್ಮೆ ಮೇಳವೊಂದಕ್ಕೆ ಅತಿಥಿ ಕಲಾವಿದನಾಗಿ, ತಲೆಯಲ್ಲಿ ಕೊಂಬು ಧರಿಸಿಕೊಂಡು ರಂಗಸ್ಥಳಕ್ಕೆ ವೈಭವದಿಂದ ಆಗಮಿಸುವ ಆ ಪಾತ್ರ ನಿರ್ವಹಣೆಗೆ ಹೋಗಿದ್ದೆ. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಮೊದಲೊಮ್ಮೆ ದೇವರ ಮುಂದೆ ನಿಂತು ತೀರ್ಥ ಪ್ರಸಾದ ತೆಗೆದುಕೊಳ್ಳುವುದು ಸಂಪ್ರದಾಯ. ಹಾಗೆಯೇ ಬೊಗಸೆಯೊಡ್ಡಿ ನಿಂತಿದ್ದೆ. ಚೌಕಿ ದೇವರ ಮುಂದೆ ನಿಂತಿದ್ದ ಮನಸ್ಸಿನಲ್ಲಿ ಆವತ್ತಿನ ಮಹಿಷಾಸುರನನ್ನು ಹೇಗೆ ಪ್ರಸ್ತುತಪಡಿಸಬೇಕೆಂಬ ಯೋಚನೆಗಳೇ ಓಡಾಡುತ್ತಿದ್ದವು.
ಒಂದೆರಡು ಕ್ಷಣ ಕಳೆದಿರಬಹುದು... ಕಲಾವಿದರ ಮಧ್ಯದಿಂದ ಒಂದು ಧ್ವನಿ ತೂರಿ ಬಂತು... `ಕೊಡಬೇಡಿ... ಪ್ರಸಾದ ಕೊಡಬೇಡಿ...'
(ಸಶೇಷ) ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT