ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಹಳ್ಳದಲ್ಲಿ ಅತಿ ಆಳಕ್ಕೆ ಇಳಿದವರು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ನಮ್ಮ ವಿಧಾನಸಭೆಯ ಕಾಮಕಲಾಪದಿಂದ ತುಸು ಈಚೆ ಬರೋಣ. ಎರಡು ತಿಂಗಳ ಹಿಂದೆ ಮಧ್ಯಪ್ರದೇಶ ವಿಧಾನ ಸಭೆಯಲ್ಲಿ ಇನ್ನೊಂದು ಬಗೆಯ ಗದ್ದಲ ಉಂಟಾಗಿತ್ತು. ಇಂದೋರ್‌ನ ಡಾಕ್ಟರ್‌ಗಳು ಮನೋರೋಗಿಗಳ ಗುಪ್ತಾಂಗದ ಮೇಲೆ ವಿದೇಶೀ ಔಷಧವೊಂದನ್ನು ಪ್ರಯೋಗಿಸಿ ನೋಡುತ್ತಿದ್ದ ಘಟನೆ ಕುರಿತ ಗದ್ದಲ ಅದಾಗಿತ್ತು.
 
ಧನಿಕ ಕಂಪೆನಿಗಳಿಂದ ಕೋಟಿಗಟ್ಟಲೆ ಹಣ ಪಡೆದು ಅಂಥ ಅನೈತಿಕ ಪ್ರಯೋಗ ನಡೆಸಿದ ಡಾಕ್ಟರ್‌ಗಳಿಗೆ ಕೇವಲ ಐದು ಸಾವಿರ ರೂಪಾಯಿ ದಂಡ ಹೇರಿದ ಸರ್ಕಾರದ ಮೇಲೆ ವಿರೋಧ ಪಕ್ಷಗಳ ವಾಗ್ದಾಳಿ ನಡೆದಿತ್ತು.
 
ಆರು ತಿಂಗಳ ಹಿಂದೆ ಆಂಧ್ರಪ್ರದೇಶ ವಿಧಾನಸಭೆಯಲ್ಲೂ ಗದ್ದಲ ಉಂಟಾಗಿತ್ತು. ಗುಂಟೂರಿನ ಆದಿವಾಸಿ ಮಹಿಳೆಯರ ಮೇಲೆ ಔಷಧ ಕಂಪೆನಿಯೊಂದು ನಡೆಸಿದ ಕರಾಳ ಪ್ರಯೋಗ ಕುರಿತು ಸದನದ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಭಾರತದಲ್ಲಿ ಹೆಚ್ಚುತ್ತಿರುವ ಅನೈತಿಕ ಔಷಧ ಪ್ರಯೋಗಗಳ ಹಾವಳಿ ಕುರಿತಾಗಿ ಸರ್ವೋಚ್ಚ ನ್ಯಾಯಾಲಯ ಮೊನ್ನೆ ಸೋಮವಾರ ಕೇಂದ್ರ ಸರ್ಕಾರದ ಸ್ಪಷ್ಟೀಕರಣ ಕೇಳಿದೆ.

ವಿದೇಶಿ ಔಷಧ ಕಂಪೆನಿಗಳಿಗೆ ನಮ್ಮ ನೆಲದಲ್ಲಿ ಔಷಧಗಳ ಪ್ರಯೋಗ ನಡೆಸಲು ಭಾರತ ಸರ್ಕಾರ 2005ರಲ್ಲಿ ಅನುಮತಿ ಕೊಟ್ಟಿದ್ದೇ ತಡ, ಅವಕಾಶಗಳ ಮಹಾದ್ವಾರವೇ ತೆರೆಯಿತು.
 

ಬಡವರು, ಅನಕ್ಷರಸ್ಥರು, ಅಸ್ವಸ್ಥರನ್ನು ಪ್ರಯೋಗಪಶುಗಳಂತೆ ನಡೆಸಿಕೊಳ್ಳುವ ಕೃತ್ಯ ಅದೆಷ್ಟು ಶೀಘ್ರ ಹೆಚ್ಚಿತೆಂದರೆ ಮರುವರ್ಷವೇ ಪಶ್ಚಿಮದ ಪ್ರತಿಷ್ಠಿತ ವೈಯರ್ಡ್ ಪತ್ರಿಕೆ ಭಾರತವನ್ನು `ಗಿನಿಹಂದಿಗಳ ರಾಷ್ಟ್ರ~ ಎಂದು ಹೆಸರಿಸಿ ಸುದೀರ್ಘ ಲೇಖನ ಬರೆದಿತ್ತು. ಸಾವಿರಾರು ಆಸ್ಪತ್ರೆಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದರೂ ಈ ಪತ್ರಿಕೆ ತನ್ನ ತನಿಖೆಗೆಂದು ವರ್ಧಾ ಬಳಿಯ ಸೇವಾಶ್ರಮ ಆಸ್ಪತ್ರೆಯನ್ನೇ ಆಯ್ಕೆ ಮಾಡಿತ್ತು.
 
ಗಾಂಧೀಜಿಯವರು ರೋಗಿಗಳಿಗೆ ಶುಶ್ರೂಷೆ ನೀಡುತ್ತಿದ್ದ ಪುಣ್ಯಭೂಮಿಯಲ್ಲೇ ಇಂದು ರೋಗಿಗಳ ಮೇಲೆ ಏನೆಲ್ಲ ಪ್ರಶ್ನಾರ್ಥ ಪ್ರಯೋಗಗಳು ನಡೆಯುತ್ತಿವೆ ಎಂಬುದನ್ನು ವಿವರಿಸಿತ್ತು.

ಈಗಂತೂ ಔಷಧ ಪರೀಕ್ಷಾ ಪ್ರಯೋಗಗಳು ವಿರಾಟ್ ಸ್ವರೂಪ ಪಡೆದಿವೆ. ಒಂದು ಸಮೀಕ್ಷೆಯ ಪ್ರಕಾರ ಸದ್ಯಕ್ಕೆ ಸುಮಾರು 1600 ಬಗೆಯ ಪ್ರಯೋಗಗಳು ನಡೆಯುತ್ತಿವೆ. ಯುರೋಪ್ ಮತ್ತು ಅಮೆರಿಕದ ಔಷಧ ಕಂಪೆನಿಗಳು ಒಂದೂವರೆ ಲಕ್ಷ ಜನರ ಮೇಲೆ ತಮ್ಮ ಹೊಸ ಔಷಧವನ್ನು ಪ್ರಯೋಗಿಸಿ ನೋಡುತ್ತಿವೆ. 2007ರಿಂದ 2010ರ ಅವಧಿಯಲ್ಲಿ ಒಟ್ಟು 1727 ಜನರು ಸಾವಪ್ಪಿದ್ದಾರೆ.
 
ಕೆಲವು ಸಾವುಗಳು ಆತ್ಮಹತ್ಯೆಗಳೆಂದು ದಾಖಲಾಗಿವೆ. ಕೆಲವು ಆತ್ಮಹತ್ಯೆಗಳು ಔಷಧ ಸೇವನೆಗೆ ನೇರವಾಗಿ ಸಂಬಂಧಿಸಿದ್ದರೂ ದಾಖಲೆಗಳಲ್ಲಿ ಅವನ್ನು ನಿರಾಕರಿಸಲಾಗಿದೆ. ಇನ್ನು, ಇಂಥ ಪ್ರಯೋಗಗಳಿಂದಾಗಿ ಅತ್ತ ಬದುಕಲಾರದೆ ಇತ್ತ ಸಾವೂ ಬಾರದೆ ನಿತ್ಯ ನರಳುವ ರೋಗಿಗಳು ಎಷ್ಟಿದ್ದಾರೊ ಲೆಕ್ಕಕ್ಕೆ ಸಿಕ್ಕಿಲ್ಲ.

ಸಾವಿನ ಸಂಖ್ಯೆ ಏಕೆ ಇಷ್ಟು ಜಾಸ್ತಿ ಇದೆ ಎಂಬುದಕ್ಕೆ ವೈದ್ಯ ಸಂಶೋಧಕರು ನಂಬಲರ್ಹ ಕಾರಣಗಳನ್ನೇ ನೀಡುತ್ತಾರೆ. ಅವರ ಪ್ರಕಾರ, ಅನೇಕ ಹೊಸ ಔಷಧಗಳನ್ನು ಸಾವಿನಂಚಿಗೆ ಬಂದ ರೋಗಿಗಳ ಮೇಲೆಯೇ ಪ್ರಯೋಗಿಸುತ್ತಾರೆ. ಈಗಿರುವ ಯಾವ ಔಷಧವೂ ರೋಗಿಯನ್ನು ಉಳಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ ಡಾಕ್ಟರ್, `ಇದೀಗ ಹೊಸ ಔಷಧವೊಂದು ಬರಲಿದೆ, ಪ್ರಯೋಗ ಮಾಡಿ ನೋಡೋಣವೆ?~ ಎಂದು ರೋಗಿಯನ್ನು ಕೇಳುತ್ತಾರೆ.
 
ಅಥವಾ ರೋಗಿಯ ಸಂಬಂಧಿಗಳನ್ನು ಕೇಳುತ್ತಾರೆ. ಅವರ ಒಪ್ಪಿಗೆ ಪಡೆದೇ ನಡೆಸಿದ ಅಂಥ ಪ್ರಯೋಗದಲ್ಲಿ ರೋಗಿ ಸಾವಪ್ಪಿದರೆ ಅದರ ಅಪಕೀರ್ತಿ ವೈದ್ಯರ ಮೇಲೆ ಬರುವುದಿಲ್ಲ. ಔಷಧ ಕಂಪೆನಿಯೂ ಪರಿಹಾರ ನೀಡಬೇಕಾಗಿಲ್ಲ.

ಹೊಸ ಔಷಧಗಳು ಬಳಕೆಗೆ ಬರಬೇಕೆಂದರೆ ಮನುಷ್ಯರ ಮೇಲೆ ಪ್ರಯೋಗ ಮಾಡಿ ನೋಡಲೇಬೇಕಾಗುತ್ತದೆ; ಆ ಹಂತದಲ್ಲಿ ಕೆಲವು ನತದೃಷ್ಟರ ಸಾವು ನೋವು ಅನಿವಾರ್ಯ ಎಂದು ವೈದ್ಯವಿಜ್ಞಾನಿಗಳು ವಾದಿಸುತ್ತಾರೆ.
 
ಒಂದು ಔಷಧ ಯಶಸ್ವಿಯಾದರೆ ಅದರ ಲಾಭವನ್ನು ಪಶ್ಚಿಮದ ಔಷಧ ಕಂಪೆನಿಗಳು ತಮ್ಮ ಶೇರುದಾರರಿಗೆ ಹಂಚುತ್ತವೆ; ಅವು ತಮ್ಮದೇ ದೇಶದ ಪ್ರಜೆಗಳ ಮೇಲೆ ಔಷಧ ಪ್ರಯೋಗ ಮಾಡುವ ಬದಲು ಬಡ, ಅನಕ್ಷರಸ್ಥರೇ ತುಂಬಿರುವ ದೇಶಗಳಿಗೆ ಏಕೆ ಬರಬೇಕು ಎಂಬ ಪ್ರಶ್ನೆಯೂ ಏಳುತ್ತದೆ.

ಸುಧಾರಿತ ದೇಶಗಳಲ್ಲಿ ಹೊಸ ಔಷಧವನ್ನು ಬಿಡುಗಡೆ ಮಾಡುವ ಮುನ್ನ ತೀರ ಬಿಗಿಯಾದ ಕಟ್ಟುಪಾಡುಗಳಿವೆ. ಇಲಿಗಳ ಮೇಲೆ, ಗಿನಿಹಂದಿಗಳ ಮೇಲೆ ಮೊದಲು ಪ್ರಯೋಗ ನಡೆಸಿ ಅಲ್ಲಿ ಯಶಸ್ವಿಯಾದರೆ ಒಂದಿಬ್ಬರು ರೋಗಿಗಳ ಮೇಲೆ ಮೂರನೆಯ ಹಂತದ ಪ್ರಯೋಗ ನಡೆಸಬಹುದು.
 
ಅಲ್ಲೂ ಯಶಸ್ವಿಯಾದರೆ ನಾಲ್ಕನೆಯ ಹಂತದಲ್ಲಿ ನೂರಿನ್ನೂರು ರೋಗಿಗಳ ಮೇಲೆ ಪ್ರಯೋಗಿಸಿ ನೋಡಬೇಕು. ಆನಂತರದ ಐದನೆಯ ಹಂತವೆಂದರೆ ಹತ್ತಾರು ಸಾವಿರ ಜನರಿಗೆ ಅದೇ ಔಷಧ ನೀಡುವುದು. ಪ್ರತಿ ಹಂತದಲ್ಲೂ ರೋಗಿಯ ಅನುಮತಿ ಪಡೆದಿರಬೇಕು. ಅನುಮತಿ ನೀಡುವವರಿಗೆ ವಿಮಾ ಕಂಪೆನಿ ಕೂಡ ಅನುಮತಿ ನೀಡಿರಬೇಕು.ರೋಗಿಗೆ ಭಾರೀ ಪರಿಹಾರ (ಪರೀಕ್ಷಾ ಶುಲ್ಕ) ನೀಡಬೇಕು.

ನಮ್ಮಲ್ಲಿ ಹಾಗಲ್ಲ; ಪ್ರಯೋಗ ನಡೆಸಲು ಒಪ್ಪಿದ ಡಾಕ್ಟರ್‌ಗಳಿಗೆ ಡಾಲರ್ ಕೊಟ್ಟರೆ ಸಾಕು ಈ ಎಲ್ಲ ನಿಯಮಗಳನ್ನೂ ಸಡಿಲಿಸಬಹುದು. ಈ ಸಡಿಲ ನೀತಿಯಿಂದಾಗಿಯೇ ಇಲ್ಲಿ ಅಸಂಖ್ಯ ಮಹಿಳೆಯರು ಗರ್ಭ ಧರಿಸದಂತೆ ಅವರ ಗರ್ಭಕೋಶದಲ್ಲಿ `ಕ್ವಿಕಕ್ರೈನ್~ ಮಾತ್ರೆಯನ್ನು ತೂರಿಸಿ ದುರಂತಗಳಾಗಿವೆ.
 
ಇದಕ್ಕೆ ತದ್ವಿರುದ್ಧವಾಗಿ ಬಂಜೆ ಮಹಿಳೆಯರು ಗರ್ಭ ಧರಿಸಲೆಂದು ತಪ್ಪು ಔಷಧವನ್ನು ಪ್ರಯೋಗಿಸಿ ಅದೆಷ್ಟೊ ರೋಗಗ್ರಸ್ಥ ಶಿಶುಗಳು ಜನಿಸಿವೆ. ಸ್ತನ ಕ್ಯಾನ್ಸರ್ ಶಮನಕ್ಕೆ ಬಳಸುವ `ಲೆಟ್ರೊಝೊಲ್~ ಹೆಸರಿನ ಔಷಧವನ್ನು ಮಹಿಳೆಯರ ಗರ್ಭ ಕಟ್ಟುವ ಔಷಧವಾಗಿ 400 ಅನಕ್ಷರಸ್ಥ ಮಹಿಳೆಯರ ಮೇಲೆ ಪ್ರಯೋಗಿಸಲಾಗಿತ್ತು.
 
ಅದರ ಫಲಿತಾಂಶ ಹೇಗಿತ್ತೆಂದರೆ ಬಂಜೆತನದ ಸಮಸ್ಯೆ ಇರುವ ಅಸಂಖ್ಯ ಮಹಿಳೆಯರಿಗೆ ಇದೊಂದು ಆಶಾಕಿರಣವೆಂದೇ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಈ `ಅಡ್ಡ ಔಷಧ~ದ ಪರಿಣಾಮ ಕುರಿತು ಸಂಶೋಧನೆ ನಡೆಸಿದಾಗ 150 ಮಹಿಳೆಯರಿಗೆ ಜನಿಸಿದ ಮಕ್ಕಳು ಕ್ಷೀಣ ಹೃದಯ, ಶಿಥಿಲ ಮೂಳೆ ಹಾಗೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದುದು ಕಂಡುಬಂದಿತ್ತು.
 
ಜನಪರ ಸಂಘಟನೆಗಳ ಶತಾಯ ಗತಾಯ ಹೋರಾಟದ ನಂತರ ನಾಲ್ಕು ತಿಂಗಳ ಈಚೆಗಷ್ಟೇ ಭಾರತದ ಔಷಧ ನಿಯಂತ್ರಣ ಮಹಾ ನಿರ್ದೇಶಕರು ಅದಕ್ಕೆ ನಿಷೇಧ ಹೇರಿದ್ದಾರೆ. ಇಂಥ ನಿಷೇಧಗಳ ಮೇಲೆ ಕಣ್ಣಿಡಲೂ ಪುರುಸೊತ್ತಿಲ್ಲದ ಡಾಕ್ಟರ್‌ಗಳು ಮುಂದೆಯೂ ಮಕ್ಕಳಿಲ್ಲದ ದಂಪತಿಗೆ ಅದನ್ನೇ ಶಿಫಾರಸು ಮಾಡುತ್ತಿರುತ್ತಾರೆ.

 

ಈಚೀಚೆಗಂತೂ ಪ್ರತಿವರ್ಷ ಪ್ರತಿ ರಾಜ್ಯದಲ್ಲಿ ಎಂಬಂತೆ ಇಂಥ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕೆಲವು ಮಾತ್ರ ಬೆಳಕಿಗೆ ಬರುತ್ತಿವೆ. ಗರ್ಭಕೋಶದ ಕ್ಯಾನ್ಸರ್ ಬಾರದಂತೆ ತಡೆಯುವ ಗರ್ಡಾಸಿಲ್ ಲಸಿಕೆಯನ್ನು ಆಂಧ್ರದ ಸಾವಿರಾರು ಆದಿವಾಸಿ  ಹೈಸ್ಕೂಲ್ ಹುಡುಗಿಯರಿಗೆ ಹಾಕಿಸಿ ಏಳು ಯುವತಿಯರು ಸತ್ತಿದ್ದಾರೆ.

ಇನ್ನುಳಿದವರ ಬಗ್ಗೆ ಸಮೀಕ್ಷೆ ನಡೆದರೂ ವರದಿ ಹೊರಕ್ಕೆ ಬಂದಿಲ್ಲ. ಭೋಪಾಲ್ ಅನಿಲ ದುರಂತ ನಡೆದ ತಾಣದಲ್ಲಂತೂ ನಿರಂತರ ಒಂದಲ್ಲ ಒಂದು ಬಗೆಯ ಔಷಧ ಪ್ರಯೋಗ ನಡೆಯುತ್ತಲೇ ಇದೆ. ಇಂದೋರಿನಲ್ಲಿ, ಗುಂಟೂರಿನಲ್ಲಿ, ಫರಿದಾಬಾದ್‌ನಲ್ಲಿ ದುರಂತ ಘಟನೆಗಳು ವರದಿಗಳು ಬರುತ್ತಲೇ ಇವೆ.

ಔಷಧ ಸಿದ್ಧವಾಗಿ ಅದು ಅಪಾಯಕಾರಿ ಎಂದು ವಿದೇಶಗಳಲ್ಲಿ ನಿಷೇಧ ಹೇರಿದ ಮೇಲೂ ಅದೇ ಔಷಧ ಇಲ್ಲಿ ಹತ್ತಾರು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಉದಾಹರಣೆಗೆ ನೋವು ಶಮನದ ನಿಮುಸಿಲೈಡ್ ಹೆಸರಿನ ಔಷಧವನ್ನು ಅದು ಯಕೃತ್ತಿಗೆ ಹಾನಿ ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಅಮೆರಿಕ, ಯುರೋಪ್ ಅಷ್ಟೇಕೆ, ಪಕ್ಕದ ಬಾಂಗ್ಲಾದೇಶ್ ಕೂಡ ನಿಷೇಧಿಸಿದ್ದರೂ ನಮ್ಮ ದೇಶ ನಿಷೇಧ ಹಾಕಿರಲಿಲ್ಲ.
 
ಕೊನೆಗೂ ಅನೇಕ ಸಂಘಟನೆಗಳ ಒತ್ತಾಯದಿಂದಾಗಿ ಅದರ ತಯಾರಿಕೆಯನ್ನು ನಿಷೇಧಿಸಲಾಯಿತೇ ವಿನಾ, ಮಾರುಕಟ್ಟೆಯಲ್ಲಿರುವ ಶಿಲ್ಕನ್ನು ಹಿಂಪಡೆಯಲಿಲ್ಲ; `ಉಳಿಕೆ ಔಷಧವನ್ನು ಹಿಂಪಡೆಯಬೇಕೆಂಬ ಕಾನೂನೇ ನಮ್ಮಲ್ಲಿಲ್ಲ~ ಎನ್ನುತ್ತಾರೆ, ಔಷಧತಜ್ಞ ಡಾ. ಚಂದ್ರ ಗುಲ್ಹಾಟಿ.
 
ಬದಲಿಗೆ ಶಿಲ್ಕು ಖಾಲಿಯಾಗುವವರೆಗೂ ಅದನ್ನೇ ಶಿಫಾರಸು ಮಾಡುವಂತೆ ಔಷಧ ಕಂಪೆನಿಗಳು ಡಾಕ್ಟರ್‌ಗಳಿಗೆ ಆಮಿಷ ಒಡ್ಡುತ್ತವೆ.ಔಷಧ ಪ್ರಯೋಗದ ಮುನ್ನ ನೀತಿ ಸಮಿತಿಯ ಅನುಮತಿ ಪಡೆಯಬೇಕೆಂಬ ನಿಯಮವೇನೋ ನಮ್ಮಲ್ಲಿದೆ.
 
ಒಂದು ವೈದ್ಯಕೀಯ ಸಂಸ್ಥೆಯವರು ಅನುಮತಿ ನಿರಾಕರಿಸಿದರೆ ಇನ್ನೊಂದು ರಾಜ್ಯಕ್ಕೆ ಹೋಗಿ ಅನುಮತಿ ಪಡೆದ ಉದಾಹರಣೆಗಳಿವೆ. ಅನುಮತಿ ಪಡೆಯದೇ, ರೋಗಿಗಳಿಗೂ ವಿಷಯ ತಿಳಿಸದೆ ಪ್ರಯೋಗ ನಡೆಸುವುದೂ ಇದೆ.
 
ಇಂಥ ಪ್ರಯೋಗ ನಡೆಯುವಾಗ ಮೇಲ್ವಿಚಾರಣೆ ಹಾಗಿರಲಿ, ಪ್ರಯೋಗಕ್ಕೆ ತುತ್ತಾದ ವ್ಯಕ್ತಿ ಸಾವಪ್ಪಿದರೆ ಸೂಕ್ತ ಪರಿಹಾರ ನೀಡುವ ವಿಷಯದಲ್ಲೂ ಬಿಗಿ ನಿಯಮಗಳಿಲ್ಲ. ಮಧ್ಯಪ್ರದೇಶದಲ್ಲಿ ನಡೆಸಿದ ಪ್ರಯೋಗದಲ್ಲಿ 81 ಜನರು ನಿಧನರಾದರೂ ಯಾರೊಬ್ಬರಿಗೂ ಪರಿಹಾರ ನೀಡಲಾಗಿಲ್ಲ.
 
ಇದು ವಿದೇಶೀ ಕಂಪೆನಿಗಳ ಕತೆಯಷ್ಟೇ ಅಲ್ಲ, ನಮ್ಮವರೂ ಹೀಗೆ ಮಾಡಿದ್ದಿದೆ. ಬೆಂಗಳೂರಿನ ವಿಖ್ಯಾತ ಕಂಪೆನಿಯೊಂದು ಹೃದ್ರೋಗಿಗಳ ಮೇಲೆ ಸ್ಟ್ರೆಪ್ಟೊಕೈನ್ನೀಸ್ ಹೆಸರಿನ ಔಷಧವೊಂದನ್ನು ಹೀಗೆ ರಹಸ್ಯವಾಗಿ ಅವೈಜ್ಞಾನಿಕ ವಿಧಾನದಲ್ಲಿ ಪ್ರಯೋಗಿಸಿ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿತ್ತು.

ಬೆಂಗಳೂರಿನ ವಿಷಯ ಬೇರೆಯದೇ ಬಿಡಿ. ಛೀಮಾರಿ ಹಾಕಿಸಿಕೊಂಡವರೇ ಎತ್ತರಕ್ಕೇರುತ್ತಾರೆ! ದೇಶ ವಿದೇಶಗಳ ಔಷಧ ಕಂಪೆನಿಗಳನ್ನು ಕರೆಸಿ ಭರ್ಜರಿ ಮೇಳ ನಡೆಸುವ ಕರ್ನಾಟಕದ ಹೆಮ್ಮೆಯೇನು ಗೊತ್ತೆ? ಭಾರತದಲ್ಲಿ ನಡೆಯುವ ಶೇಕಡಾ 70ರಷ್ಟು ಪ್ರಯೋಗಗಳು ನಮ್ಮಲ್ಲೇ ನಡೆಯುತ್ತವೆ.
 
ಇಲ್ಲಿನ ಕ್ಲಿನಿಕಲ್ ಪರೀಕ್ಷೆಗಳು ತೀರಾ ಅನೈತಿಕ ಮಟ್ಟಕ್ಕಿಳಿದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಆರೋಗ್ಯ ಸಚಿವ ರಾಮದಾಸ್ ಅವುಗಳಿಗೆ ನಿಷೇಧ ಹಾಕಿ ಸಂಪೂರ್ಣ ತನಿಖೆಗೆ ಸಮಿತಿ ನೇಮಕ ಮಾಡುತ್ತೇನೆಂದು ಘೋಷಿಸಿದರು.

ಮರುದಿನವೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಔಷಧ ಕಂಪೆನಿಗಳ 11ನೇ ಬಯೊಮೇಳದ ಉದ್ಘಾಟನಾ ಸಂದರ್ಭದಲ್ಲಿ `ನಿಷೇಧ ಏನೂ ಇಲ್ಲ, ಭಯಪಡಬೇಡಿ, ನಿಮ್ಮ ಸಂಶೋಧನೆಗಳಿಗೆ ಯಾವುದೇ ಅಡ್ಡಿ ಬಾರದಂತೆ ನಾನು ನೋಡಿಕೊಳ್ಳುತ್ತೇನೆ~ ಎಂದು ಹೇಳಿದ್ದನ್ನು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತು.
 
ಈ ವರ್ಷ 12ನೇ ಬಯೊಮೇಳದ ಉದ್ಘಾಟನೆಯ ದಿನವೇ ಸರ್ವೋಚ್ಚ ನ್ಯಾಯಾಲಯ ಔಷಧ ಕಂಪೆನಿಗಳ ಸಂಶೋಧನಾ ಅಕೃತ್ಯಗಳ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟೀಕರಣ ಕೇಳಿದೆ.

ಮಹಿಳೆಯರು, ಮಕ್ಕಳನ್ನೇ ಹೆಚ್ಚಾಗಿ ಗುರಿಯಿಡುವ ಇಂಥ ಅನೈತಿಕ ಕೃತ್ಯಗಳ ಮೇಲೆ ಕಣ್ಣಿಡಬೇಕಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಶಾಸನ ಸಭೆಯಲ್ಲಿ ಸೆಕ್ಸ್ ಚಿತ್ರ ನೋಡುತ್ತ ಕೂರುತ್ತಾರೆ. ಸಮಾಜದ ನೈತಿಕ ಶಿಸ್ತನ್ನು ಕಾಪಾಡಬೇಕಾದ ಶಿಕ್ಷಕರು, ಮಠಾಧೀಶರು, ಪೊಲೀಸರು, ವಕೀಲರು, ನ್ಯಾಯಾಧೀಶರು, ಡಾಕ್ಟರ್‌ಗಳು, ಪತ್ರಕರ್ತರು, ವಿಜ್ಞಾನಿಗಳು, ರಾಜಕಾರಣಿಗಳು ತಂತಮ್ಮ ವೃತ್ತಿಯ ಘನತೆಗೆ ಮಸಿ ಬಳಿದೂ ಬೆಳೆಯುತ್ತಾರೆ.
 
ಹಾಗಿದ್ದರೆ ಹೊನ್ನು, ಮಣ್ಣು, ಹೆಣ್ಣಿನಂಥ ಮಾದಕ ದ್ರವ್ಯಗಳ ಆಸೆಗೆ ಬಿದ್ದವರಲ್ಲಿ ಯಾರ ಪತನ ಅತಿ ಆಳದ್ದು?
ಸರಿಯಾಗಿ ಅಳೆದರೆ ಔಷಧರಂಗದ ಪಿಪಾಸುಗಳಿಗೇ ಮೊದಲ ಶ್ರೇಯಾಂಕ ಸಿಗಬೇಕು. ಏಕೆಂದರೆ, ಅವರ ಅಕೃತ್ಯದಿಂದಾಗಿ ಅದೆಷ್ಟೊ ಜನರು ಸಾವನ್ನಪ್ಪುತ್ತಾರೆ, ಜೀವನವಿಡೀ ನರಳುತ್ತಾರೆ; ಅದೆಷ್ಟೊ ವಿಕಲಾಂಗ ಶಿಶುಗಳು ಹುಟ್ಟುತ್ತವೆ, ಸಾಯುತ್ತವೆ; ಇನ್ನು ಕೆಲವಂತೂ ಬದುಕುಳಿದು ತಾಯಂದಿರ ಕ್ಲೇಶವನ್ನು ಅನಂತವಾಗಿಸುತ್ತವೆ.

(ನಿಮ್ಮ ಅನಿಸಿಕೆ ತಿಳಿಸಿ: (editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT