ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣಕಾರರಿಗೆ ಜೀವಾವಧಿಶಿಕ್ಷೆ

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ


2006ರಲ್ಲಿ ನಾನು ಸಿಸಿಬಿಯಲ್ಲಿ ಎಸಿಪಿ ಆಗಿದ್ದೆ. ಕೋರಮಂಗಲ ಪೊಲೀಸ್ ಠಾಣೆ ಸರಹದ್ದಿನಲ್ಲಿ ಒಂದು ಅಪಹರಣವಾಗಿದೆ ಎಂಬ ಸುದ್ದಿ ಬಂತು. ಇಮ್ರಾನ್ ಬೇಗ್ ಎಂಬ ಹದಿನಾರು ವರ್ಷದ ಹುಡುಗನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಅವನ ತಂದೆ ಶೇರ್ ಅಲಿ ಅವರನ್ನು ಹೆದರಿಸಿ 25 ಲಕ್ಷ ರೂಪಾಯಿ ಒತ್ತೆಹಣ ನೀಡುವಂತೆ ಅಪಹರಣಕಾರರು ಕೇಳಿದ್ದರು. ಶೇರ್ ಅಲಿ ಜೊತೆಗೆ ಮಾತನಾಡಲು ಅವರ ಮಗನ ಮೊಬೈಲನ್ನೇ ಬಳಸಿದ್ದರು. ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಿದ್ದರು.

ಸೌದೆ, ಸರ್ವೆ ಮರ ವ್ಯಾಪಾರ ಮಾಡಿಕೊಂಡಿದ್ದ ಶೇರ್ ಅಲಿ ಅವರದ್ದು ಮಧ್ಯಮ ವರ್ಗದ ಕುಟುಂಬ. ಕೋರಮಂಗಲ ಹಾಗೂ ಬೇಗೂರಿನಲ್ಲಿ ಅವರ ಎರಡು ಅಂಗಡಿಗಳಿದ್ದವು. ವ್ಯಾಪಾರ ಚೆನ್ನಾಗೇ ನಡೆಯುತ್ತಿತ್ತು. ಹಾಗಂತ ಅವರು ತುಂಬಾ ಶ್ರೀಮಂತರೇನೂ ಆಗಿರಲಿಲ್ಲ. ಒಂದು ದಿನ ಕೋರಮಂಗಲದ ಅವರ ಅಂಗಡಿಗೆ ಗ್ರಾಹಕರಂತೆ ಮಾರುತಿ ವ್ಯಾನ್‌ನಲ್ಲಿ ಕೆಲವರು ಬಂದರು. ಒಬ್ಬ ಇಳಿದುಬಂದು, ‘ಒಳಗೆ ಮೇಡಂ ಇದ್ದಾರೆ. ಅವರೇ ವ್ಯಾಪಾರ ಮಾಡೋರು. ದಯವಿಟ್ಟು ವ್ಯಾನ್ ಹತ್ತಿರಕ್ಕೆ ಬನ್ನಿ’ ಎಂದು ಕರೆದ. ಅಂಗಡಿಯಲ್ಲಿ ಆಗ ಇದ್ದ ಇಮ್ರಾನ್  ಬೇಗ್ ವ್ಯಾನ್ ಬಳಿಗೆ ಹೋದ. ಅವನು ಮಾತನಾಡುವ ಮೊದಲೇ ದುಷ್ಕರ್ಮಿಗಳು ಕಾರಿನ ಒಳಗೆ ತಳ್ಳಿದರು. ಕ್ಷಣಾರ್ಧದಲ್ಲೇ ಕಾರು ಅಲ್ಲಿಂದ ಹೊರಟಿತು. ಒಳಗೆ ಬುರ್ಖಾ ತೊಟ್ಟು ಕೂತಿದ್ದು ಮಹಿಳೆಯಲ್ಲ; ಅವನೂ ಒಬ್ಬ ಅಪಹರಣ ಕಾರನೇ. 2006ರ ಡಿಸೆಂಬರ್ 25ರಂದು ನಡೆದ ಅಪಹರಣ ಇದು.

ಶೇರ್ ಅಲಿ ಬಳಿ ಇಪ್ಪತ್ತೈದು ಲಕ್ಷ ರೂಪಾಯಿ ಇರಲಿಲ್ಲ. ಅವರ ಸಕಲ ಆಸ್ತಿ ಮಾರಿದರೂ ಅಷ್ಟು ಹಣ ಹೊಂದಿಸುವುದು ಅಸಾಧ್ಯವಿತ್ತು. ಅದಕ್ಕೇ ವಿಧಿಯಿಲ್ಲದೆ ಅವರು ಪೊಲೀಸರಿಗೆ ದೂರು ಕೊಟ್ಟರು. ಅಪಹರಣಕಾರರನ್ನು ಫೋನ್ ಕರೆಯಿಂದಲೇ ಸುಲಭವಾಗಿ ‘ಟ್ರೇಸ್’ ಮಾಡಬಹುದು ಎಂದು ನಮ್ಮ ಇಲಾಖೆಯ ಅನೇಕರು ಅಂದುಕೊಂಡಿದ್ದರು. ಆದರೆ, ಅದು ಒಂದೇ ದಿನದಲ್ಲಿ ಸಾಧ್ಯವಾಗಲಿಲ್ಲ. ಹಾಗಾಗಿ ಮರುದಿನ ಪ್ರಕರಣ ತುಂಬಾ ಗಂಭೀರ ಸ್ವರೂಪ ಪಡೆದುಕೊಂಡಿತು. ಸೌಮ್ಯೇಂದು ಮುಖರ್ಜಿ ಎಂಬ ಕೋರಮಂಗಲದ ಡಿಸಿಪಿ ನೇತೃತ್ವದಲ್ಲಿ ಅಪಹರಣಕಾರರ ಪತ್ತೆಮಾಡಲು ಒಂದು ತಂಡ ನಿಯೋಜಿತವಾಯಿತು. ಸಿಸಿಬಿಯಲ್ಲಿದ್ದ ನನಗೆ, ನಂಜುಂಡೇಗೌಡ, ಸಿದ್ಧರಾಮಯ್ಯ, ರಮೇಶ್‌ಚಂದ್ರ ಮೊದಲಾದವರಿಗೆ ಅವರಿಗೆ ಸಾಥ್ ನೀಡುವ ಜವಾಬ್ದಾರಿ ಸಿಕ್ಕಿತು. ಮೊಬೈಲ್ ಟ್ರೇಸ್ ಮಾಡಲು ಹಲವರು ನಿಯೋಜಿತರಾದರೆ, ಆ ಕರೆ ಬರುತ್ತಿರುವ ಪ್ರದೇಶದಲ್ಲಿ ನಿಗಾ ಇಡಲು ಸಾಕಷ್ಟು ಮಂದಿ ಕಾರ್ಯಪ್ರವೃತ್ತರಾದೆವು. ಮೊಬೈಲ್ ಕರೆ ಬರುತ್ತಿದ್ದದ್ದು ಕೋಲಾರದ ಸುತ್ತಮುತ್ತಲ ಪ್ರದೇಶದಿಂದ.

ಕೋಲಾರ ಬಸ್‌ಸ್ಟ್ಯಾಂಡ್‌ನಲ್ಲಿ ಬಂದು ನಿಲ್ಲುವಂತೆ ಶೇರ್ ಅಲಿಗೆ ಅಪಹರಣಕಾರ ಸೂಚಿಸಿದ. ಹಣ ತಂದಿರಬೇಕೆಂದೂ, ಅದನ್ನು ಎಲ್ಲಿ ಕೊಡಬೇಕು ಎಂಬುದನ್ನು ಆನಂತರ ತಿಳಿಸುವುದಾಗಿಯೂ ಹೇಳಿದ. ನಮ್ಮ ತಂಡದವರೆಲ್ಲಾ ಮೊದಲೇ ವೇಷ ಮರೆಸಿ ಕೊಂಡು ಕೋಲಾರ ಬಸ್‌ಸ್ಟ್ಯಾಂಡ್‌ನಲ್ಲಿ ನೆಲೆಗೊಂಡಿದ್ದೆವು. ರೈತ, ಲಾರಿ ಕ್ಲೀನರ್, ತರಕಾರಿ ಮಾರುವವ ಹೀಗೆ ನಮ್ಮ ತಂಡದ ಎಲ್ಲರೂ ವೇಷ ಬದಲಿಸಿಕೊಂಡು ಅಲ್ಲಿ ನಿಂತಿದ್ದೆವು. ಆ ಪ್ರದೇಶದಲ್ಲಿ ಎಲ್ಲರೂ ಹೇಗೆ ವರ್ತಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ ನಂತರವೇ ಆ ರೀತಿ ವೇಷ ಬದಲಿಸಿಕೊಳ್ಳುವುದು ಸಾಧ್ಯ. ನಿತ್ಯವೂ ಅಲ್ಲಿ ಬರುವ ತರಕಾರಿ ವ್ಯಾಪಾರಿಗಳ ಮಧ್ಯೆ ನಾವೂ ಅವರದ್ದೇ ವೇಷದಲ್ಲಿ ನಿಲ್ಲುವುದು ತಮಾಷೆಯ ಸಂಗತಿಯಲ್ಲ. ಅಲ್ಲಿರುವ ಎಲ್ಲರಿಗೂ ಬಾಯಿಮುಚ್ಚಿಸುವ ಕಷ್ಟವೂ ಇರುತ್ತದೆ.

ಡಿಸೆಂಬರ್ 26ರ ರಾತ್ರಿ ಶೇರ್ ಅಲಿ ಬಸ್ ಸ್ಟ್ಯಾಂಡ್‌ಗೆ ಬಂದು ನಿಂತರು. ಸ್ವಲ್ಪ ಹೊತ್ತಿನಲ್ಲೇ ಅಪಹರಣಕಾರ ಫೋನ್ ಮಾಡಿ, ಕೆಟ್ಟಾತಿಕೆಟ್ಟ ಮಾತುಗಳಲ್ಲಿ ಅವರನ್ನು ನಿಂದಿಸಿದ. ‘ಯಾರ್ಯಾರನ್ನೋ ಕರೆದುಕೊಂಡು ಬಂದಿದ್ದೀರಿ’ ಎಂದು ಅನುಮಾನಿಸಿದ. ಮರುದಿನ ಬೇರೆ ಜಾಗಕ್ಕೆ ಬರುವಂತೆ ತಿಳಿಸಿದ. ಶೇರ್ ಅಲಿ ಗಾಬರಿಗೊಂಡರು.

ಎರಡು ದಿನ ಹೀಗೆಯೇ ಕಳೆಯಿತು. ‘ಅಲ್ಲಿಗೆ ಬಾ, ಇಲ್ಲಿಗೆ ಬಾ’ ಎನ್ನುವುದು. ಆಮೇಲೆ ‘ಈಗ ಬೇಡ’ ಎನ್ನುವುದು ಅಪಹರಣಕಾರನ ಚಾಳಿಯಾಯಿತು. ಮತ್ತೆ ಕೋಲಾರಕ್ಕೇ ಬರಲು ಅವನು ಸೂಚಿಸಿದ. ಕೋಲಾರ ಹೊರವಲಯದ ಕಲ್ಯಾಣ ಮಂಟಪ ವೊಂದರ ಎದುರಿನ ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಲು ಹೇಳಿದ.

ಆಟೋವೊಂದರಲ್ಲಿ ಶೇರ್ ಅಲಿ ಅಲ್ಲಿಗೆ ಹೋದರು. ಚಾಲಕನ ಸೀಟಿನಲ್ಲಿ ಇದ್ದದ್ದು ನಮ್ಮ ಪೊಲೀಸೇ. ಹಿಂದೆ ಅವರ ಜೊತೆ ಕುಳಿತಿದ್ದ ಇನ್ನೊಬ್ಬರೂ ನಮ್ಮವರೇ. ಸಂಜೆ ಅಲ್ಲಿಗೆ ತಲುಪಿಕೊಂಡರೂ ರಾತ್ರಿ ಆಗುವವರೆಗೆ ಅಪಹರಣಕಾರ ಫೋನ್ ಮಾಡಲಿಲ್ಲ. ಆಮೇಲೆ ಶೇರ್ ಅಲಿ ಮೊಬೈಲ್‌ಗೆ ಫೋನ್ ಬಂತು. ‘ಆಟೋದಲ್ಲಿ ಪಕ್ಕದಲ್ಲಿರುವವರು ಯಾರು?’ ಎಂದು ಕೇಳಿದ. ತಮ್ಮದೇ ಸಂಬಂಧಿಕನ ಆಟೋ ಅದೆಂದೂ, ಅದರಲ್ಲಿ ಇರುವ ಇಬ್ಬರೂ ತಮ್ಮ ಸಂಬಂಧಿಕರೇ ಎಂದು ಅವರು ಹೇಳಿದ ಮೆಲಷ್ಟೇ ಅಪಹರಣಕಾರನಿಗೆ ಸಮಾಧಾನ. ಕೋಲಾರದಿಂದ ಕೆ.ಜಿ.ಎಫ್ ಕಡೆಗೆ ಹೋಗುವಾಗ ಒಂದು ಬೈಪಾಸ್ ಸಿಗುತ್ತದೆ. ಅದರ ಸರ್ಕಲ್‌ಗೆ ಬರುವಂತೆ ಅವನು ಮತ್ತೆ ಸೂಚಿಸಿದ.

ಶೇರ್ ಅಲಿ ಮೊಬೈಲ್‌ಗೆ ಫೋನ್ ಬಂದ ತಕ್ಷಣ ನಡೆಯುತ್ತಿದ್ದ ಮಾತುಕತೆಯ ಅಷ್ಟೂ ವಿಷಯ ನಮ್ಮನ್ನು ತಲುಪುವಂತೆ ವ್ಯವಸ್ಥೆ ಮಾಡಿಕೊಂಡಿದ್ದೆವು. ಆಟೋದಲ್ಲಿ ನಮ್ಮ ಪೊಲೀಸರೇ ಇದ್ದದ್ದರಿಂದ ಇದು ಸಾಧ್ಯವಾಗಿತ್ತು. ಬೈಪಾಸ್‌ನ ಸರ್ಕಲ್‌ಗೆ ನಾವೂ ಹೋದೆವು. ಆಟೋ ಸಾಕಷ್ಟು ಮುಂದೆ ಇತ್ತು. ನಾವು ಅದರಿಂದ ತುಂಬಾ ದೂರದಲ್ಲೇ ನಿಂತೆವು. ಅದು ನಿರ್ಜನ ಪ್ರದೇಶ. ಎದುರಲ್ಲಿ ಒಂದು ಬಾರ್ ಇತ್ತು. ಒತ್ತೊತ್ತಾಗಿ ಅಂಗಡಿಗಳೂ ಇರಲಿಲ್ಲ. ಚದುರಿದಂತೆ ಅಲ್ಲಲ್ಲಿ ಮಾತ್ರ ಅಂಗಡಿಗಳಿದ್ದವು. ನಮ್ಮ ತಂಡದ ಹೆಚ್ಚು ಜನ ಏಕಕಾಲದಲ್ಲಿ ಅಲ್ಲಿ ನಿಲ್ಲುವುದಂತೂ ಸಾಧ್ಯವೇ ಇರಲಿಲ್ಲ.

ಆಟೋ ಅಲ್ಲಿ ತಲುಪಿದ್ದೇ ಮತ್ತೆ ಆ ಅಪಹರಣಕಾರ ವೀಕ್ಷಕ ವಿವರಣೆ ಕೊಡುವಂತೆ ಮಾತನಾಡಲು ಪ್ರಾರಂಭಿಸಿದ. ‘ನೀನು ಇಂಥ ಬಣ್ಣದ ಶರ್ಟ್ ಹಾಕಿದ್ದೀಯ, ಆಟೋದಿಂದ ಹತ್ತು ಅಡಿ ದೂರದಲ್ಲಿ ನಡೆದುಕೊಂಡು ಹೋಗುತ್ತಿರುವವನು ಯಾರು? ಅವನನ್ನು ದೂರ ಹೋಗಲು ಹೇಳು...’ ಹೀಗೆ ಕ್ಷಣಕ್ಷಣಕ್ಕೂ ಅವನು ಸೂಚನೆಯ ಮೇಲೆ ಸೂಚನೆ ಕೊಡಲು ಶುರುವಿಟ್ಟ. ಸ್ವಲ್ಪ ಹೊತ್ತು ಕಳೆಯಿತು. ಆಗ ಕಗ್ಗತ್ತಲಾದ್ದರಿಂದ ಆ ಪ್ರದೇಶದಲ್ಲಿ ಎಲ್ಲಿ ಏನಿದೆ ಎಂಬುದೇ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮತ್ತೆ ಅವನು ಫೋನ್ ಮಾಡಿ, ಹಣವನ್ನು ಅಲ್ಲೇ ಇಟ್ಟು ಹೋಗುವಂತೆ ಹೇಳಿದ. ಶೇರ್ ಅಲಿ ಮತ್ತೆ ಗೊಂದಲಕ್ಕೆ ಬಿದ್ದರು. ಹಣವನ್ನು ಅಲ್ಲೇ ಇಟ್ಟು ಹೋದರೆ, ತಮ್ಮ ಮಗ ಸಿಗುತ್ತಾನೆಂಬುದಕ್ಕೆ ಏನು ಖಾತರಿ ಎಂಬುದು ಅವರ ಪ್ರಶ್ನೆ. ಯಾವುದೇ ಕಾರಣಕ್ಕೂ ಹಣವನ್ನು ಅಲ್ಲೇ ಇಟ್ಟು ಹೋಗಬೇಡಿ ಎಂದು ಆಟೋದಲ್ಲಿದ್ದ ನಮ್ಮ ಪೊಲೀಸರ ಮೂಲಕ ಶೇರ್ ಅಲಿಯವರ ಕಿವಿಗೆ ಮುಟ್ಟಿಸಿದೆವು. ಹಣದ ಸೂಟ್‌ಕೇಸನ್ನು ಆಚೆ ಇಟ್ಟು, ಅದರ ಮೇಲೆ ಅವರು ಕೂತಿದ್ದರು. ಪದೇಪದೇ ರಿಂಗಿಸುತ್ತಿದ್ದ ಅವರ ಮೊಬೈಲ್‌ನಲ್ಲಿ ಅಪಹರಣಕಾರನ ವೀಕ್ಷಕ ವಿವರಣೆ ಮುಂದುವರಿದೇ ಇತ್ತು. ಅಲ್ಲೇ ಹತ್ತಿರದಲ್ಲಿ ಅಪಹರಣಕಾರರು ಇದ್ದಾರೆಂಬುದು ನಮಗೆ ಸ್ಪಷ್ಟವಾಯಿತು.

ನಮ್ಮ ತಂಡದಲ್ಲಿ ಬಾಬು ಹಾಗೂ ಪುರುಷೋತ್ತಮ್ ಎಂಬ ಸಾಹಸೀಪ್ರವೃತ್ತಿಯ ಇನ್ಸ್‌ಪೆಕ್ಟರ್‌ಗಳಿದ್ದರು. ತುಂಬಾ ಹಿಂದಿನಿಂದ ಕವರ್ ಮಾಡಿಕೊಂಡು, ಅಪಹರಣಕಾರರನ್ನು ಟ್ರೇಸ್ ಮಾಡುವಂತೆ ಅವರಿಗೆ ಹೇಳಿದೆವು. ಡಾಬಾ, ಸಣ್ಣ ಹೋಟೆಲ್ ಎಲ್ಲವನ್ನೂ ಹಾದು ಅವರು ಅಲ್ಲಿದ್ದ ಬಾರ್‌ನೊಳಗೆ ಬಂದರು. ಅಪಹರಣಕಾರರು ಅಲ್ಲಿಂದಲೇ ಮಾತನಾಡುತ್ತಿದ್ದದ್ದೆಂಬುದು ಬಾಬು, ಪುರುಷೋತ್ತಮ್‌ಗೆ ಗೊತ್ತಾಯಿತು. ಅವರಿಬ್ಬರೂ ನಮ್ಮನ್ನೆಲ್ಲಾ ಅಲರ್ಟ್ ಮಾಡಿದರು.

ಅವರು ಕಂಡಿದ್ದೇ ಎರಗಲು ಇಬ್ಬರೂ ಇನ್ಸ್‌ಪೆಕ್ಟರ್‌ಗಳು ಸನ್ನದ್ಧರಾದರು. ಕೊನೆಗೂ ಅಪಹರಣಕಾರರು ಎಲ್ಲಿ ನಿಂತಿದ್ದಾರೆಂಬುದು ಅವರಿಗೆ ಗೊತ್ತಾಗಿಹೋಯಿತು. ಮೊಬೈಲ್ ಮೂಲಕ ಮಾತಾಡಿ, ಸೂಚನೆಗಳನ್ನು ನೀಡುತ್ತಿದ್ದ ಅವರತ್ತ ಬಾಬು, ಪುರುಷೋತ್ತಮ್ ನುಗ್ಗಿದರು. ಅಲ್ಲಿಂದ ಜಿಗಿದದ್ದೇ ಅಪರಹಣಕಾರರು ಹೊರಗೆ ಬಂದರು. ನಮ್ಮೆಲ್ಲರತ್ತ ಕಲ್ಲಿನ ಮಳೆಗರೆದರು. ಕತ್ತಲಲ್ಲೂ ನಮ್ಮ ಪೊಲೀಸರು ಗುಂಡು ಹಾರಿಸಿದರು. ಗುಂಡು ಇಬ್ಬರು ಅಪಹರಣಕಾರರ ಕಾಲುಗಳಿಗೆ ಬಿದ್ದವು. ಪುಣ್ಯಕ್ಕೆ ಯಾರ ಪ್ರಾಣಕ್ಕೂ ಕುತ್ತು ಬರಲಿಲ್ಲ. ಆ ಕಗ್ಗತ್ತಲಲ್ಲಿ ಕಾಲುಗಳಿಗೆ ಮಾತ್ರ ಗುಂಡು ಹಾರಿಸುವುದು ಸುಲಭವಲ್ಲ.

ನಮ್ಮ ಕೈಗೆ ಸಿಕ್ಕ ಇಬ್ಬರು ಅಪಹರಣಕಾರರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ವಿಚಾರಣೆಗೆ ಒಳಪಡಿಸಿದೆವು. ಅಪಹೃತನಾಗಿದ್ದ ಹುಡುಗನನ್ನು ಬೆಂಗಳೂರಿನಲ್ಲಿ ಇಟ್ಟಿರುವುದಾಗಿ ಅವರು ಹೇಳಿದ್ದೇ ನಮ್ಮ ಎದೆ ಧಸಕ್ಕೆಂದಿತು. ಅಲ್ಲಿ ಅವನಿಗೆ ಏನಾದರೂ ತೊಂದರೆ ಕೊಟ್ಟರೇನು ಗತಿ ಎಂಬುದು ನಮ್ಮೆಲ್ಲರ ಚಿಂತೆ. ಮಡಿವಾಳ ಹತ್ತಿರವಿದ್ದ ಮಾಂಸದಂಗಡಿಯವನ ಮನೆಯೊಳಗೆ ಹುಡುಗನನ್ನು ಬಚ್ಚಿಟ್ಟಿದ್ದರು. ನಾವು ಅಲ್ಲಿನ ಪೊಲೀಸರಿಗೆ ಹುಡುಗನನ್ನು ಪತ್ತೆಮಾಡಲು ಹೇಳಿದೆವು. ಆ ಮನೆಗೆ ದಾಳಿಮಾಡಿ ನಮ್ಮ ಪೊಲೀಸರು ಹುಡುಗನನ್ನು ಪತ್ತೆಮಾಡಿದರು. ಹದಿನಾರು ವರ್ಷದ ಹುಡುಗ ಸುಮಾರು ನಾಲ್ಕು ದಿನ ಕತ್ತಲಲ್ಲೇ ಇದ್ದ. ಆಗಿದ್ದ ಆಘಾತದಿಂದ ಅವನು ಖಿನ್ನನಾಗಿದ್ದ.

ಅಪ್ಪ-ಮಗ ಮತ್ತೆ ಒಂದುಗೂಡಿದ ಕ್ಷಣವನ್ನಂತೂ ನಮ್ಮ ತಂಡದ ಯಾರೂ ಮರೆಯಲು ಸಾಧ್ಯವಿಲ್ಲ. ನಾಲ್ಕು ದಿನಗಳ ನಂತರ ಶೇರ್ ಅಲಿ ನೆಮ್ಮದಿಯ ನಿಟ್ಟುಸಿರಿಟ್ಟರು.

ಸೌಮ್ಯೇಂದು ಮುಖರ್ಜಿ ಹಾಗೂ ಪುರುಷೋತ್ತಮ್ ಇಬ್ಬರೂ ಸವಾಲಾಗಿ ಸ್ವೀಕರಿಸಿ, ಈ ಪ್ರಕರಣದ ತನಿಖೆ ನಡೆಸಿದರು. 2010ರ ಜುಲೈನಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಅಪಹರಣ ಕಾರರಾದ ನಾಜಿರುದ್ದೀನ್, ಚಾಂದ್ ಪಾಷಾ ಮತ್ತು ನಯಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅಪಹರಣಕಾರರಿಗೆ ಹೀಗೆ ಶಿಕ್ಷೆಯಾದಾಗ ನಮಗೆ ಹೆಮ್ಮೆ ಎನ್ನಿಸುತ್ತದೆ. ನಾವು ಪಟ್ಟ ಕಷ್ಟಕ್ಕೆ ಸಿಗುವ ನಿಜವಾದ ಫಲ ಇದೇ ಅಲ್ಲವೇ?

ಮುಂದಿನ ವಾರ: ಇನ್ನೊಂದು ಅಪಹರಣ ಪ್ರಕರಣ
ಶಿವರಾಂ ಅವರ ಮೊಬೈಲ್ ನಂಬರ್ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT