ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಅರಿವಿದ್ದೂ ಅನುಕಂಪ ತರವೇ?

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೊನ್ನೆ ಮಂಗಳವಾರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ‘ಈ ವಿಷಯದಲ್ಲಿ ಭಾವನಾತ್ಮಕ ವಾದಕ್ಕಿಳಿಯದೇ, ವಸ್ತುಸ್ಥಿತಿ, ಅಂತರರಾಷ್ಟ್ರೀಯ ಒಡಂಬಡಿಕೆ ಮತ್ತು ಪುರಾವೆಗಳನ್ನು ಮುಂದಿಟ್ಟು ವಾದಿಸಿ’ ಎಂದು ಸರ್ಕಾರ ಮತ್ತು ರೋಹಿಂಗ್ಯಾ ಸಮುದಾಯದ ಪರ ವಕಾಲತ್ತು ವಹಿಸಿರುವ ಫಾಲಿ ಎಸ್. ನಾರಿಮನ್ ತಂಡಕ್ಕೆ ಹೇಳಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದರೆ, ರೋಹಿಂಗ್ಯಾ ಬಿಕ್ಕಟ್ಟಿನ ಕುರಿತು ಹೆಚ್ಚಾಗಿ ಕೇಳಿ ಬರುತ್ತಿರುವುದು ಭಾವನಾತ್ಮಕ ವಾದ. ಭಾರತದ ಮಾನವ ಹಕ್ಕು
ಪ್ರತಿಪಾದಕರು, ಬುದ್ಧಿಜೀವಿಗಳು ರೋಹಿಂಗ್ಯಾ ವಿಷಯದಲ್ಲಿ ಭಾರತ ಮಾನವೀಯತೆ ಪ್ರದರ್ಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಹಾಗಾದರೆ ಇದು ದಕ್ಷಿಣ ಏಷ್ಯಾದ ಮಟ್ಟಿಗೆ ಭಾರತ ತನ್ನ ಹಿರಿತನವನ್ನೂ, ಔದಾರ್ಯ ಗುಣವನ್ನು ತೋರುವ ಸಂದರ್ಭವೇ? ಆ ಬಗ್ಗೆ ಖಚಿತ ನಿಲುವು ತಳೆಯುವ ಮೊದಲು ರೋಹಿಂಗ್ಯಾ ಬಿಕ್ಕಟ್ಟಿಗಿರುವ ವಿವಿಧ ಆಯಾಮಗಳನ್ನು ಪರಿಶೀಲಿಸಬೇಕು. ಈ ಬಿಕ್ಕಟ್ಟು ಉದ್ಭವವಾಗಿದ್ದು ಇದೇ ಮೊದಲಲ್ಲ. ಮ್ಯಾನ್ಮಾರಿನ ರಾಖೈನ್ ರಾಜ್ಯ ಹಲವು ದಶಕಗಳಿಂದ ಕುಲುಮೆಯಂತೆ ಇದೆ. ಘರ್ಷಣೆ, ದಾಳಿ, ಜನಾಂಗೀಯ ಹತ್ಯೆ ಆ ರಾಜ್ಯದ ಮಟ್ಟಿಗೆ ಪ್ರತಿದಿನದ ವಿದ್ಯಮಾನ. ಇಂದು ತಂಡ ತಂಡವಾಗಿ ಮ್ಯಾನ್ಮಾರ್‌ನಿಂದ ಗುಳೆ ಹೊರಟಿರುವ ರೋಹಿಂಗ್ಯಾ ಸಮುದಾಯ ಅಲ್ಲಿನ ಮೂಲ ನಿವಾಸಿಗಳಲ್ಲ. ಮೊದಲ ಆಂಗ್ಲೊ ಬರ್ಮಾ ಯುದ್ಧದ ಬಳಿಕ 1824ರಲ್ಲಿ ಬ್ರಿಟಿಷ್ ಸರ್ಕಾರ ಬರ್ಮಾವನ್ನು ವಶಕ್ಕೆ ಪಡೆದುಕೊಂಡಾಗ, ಅಲ್ಲಿನ ಕೃಷಿ ಕೆಲಸಗಳಿಗೆ, ಪೂರ್ವ ಬಂಗಾಳದ ಚಿತ್ತಗಾವ್ ಪ್ರದೇಶದ ಮುಸ್ಲಿಮರು ಕೂಲಿಯಾಳುಗಳಾಗಿ ವಲಸೆ ಹೋದರು. ಎರಡನೇ ವಿಶ್ವಯುದ್ಧದ ಬಳಿಕ ಬ್ರಿಟಿಷರು ಬರ್ಮಾ ತೊರೆದರು. ಆ ವೇಳೆಗಾಗಲೇ ಸ್ಥಳೀಯರಲ್ಲಿ ರಾಷ್ಟ್ರೀಯತೆಯ ಭಾವ ಜಾಗೃತವಾಗಿತ್ತು. ರಾಖೈನ್ ರಾಜ್ಯದಲ್ಲಿ ಹೆಚ್ಚುತ್ತಿದ್ದ ರೋಹಿಂಗ್ಯಾ ಸಮುದಾಯದವರ ಸಂಖ್ಯೆ ಸ್ಥಳೀಯ ಸಮುದಾಯಗಳಲ್ಲಿ ಆತಂಕ ಉಂಟು ಮಾಡಿದರೆ, ರೋಹಿಂಗ್ಯಾ ಸಮುದಾಯದಲ್ಲಿ ಅಭದ್ರತೆಯ ಭಾವ ಸೃಷ್ಟಿಸಿತು. ಪರಿಣಾಮವಾಗಿ ಕೋಮುಗಲಭೆಗಳು ಆರಂಭವಾದವು.

ಇಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಪ್ರೀತಿ, ಕರುಣೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಬುದ್ಧನ ಅನುಯಾಯಿಗಳಾದ ಮ್ಯಾನ್ಮಾರ್ ಬೌದ್ಧರು ವಲಸಿಗರನ್ನು ಒಪ್ಪಿಕೊಳ್ಳದಂತಹ ಕಠೋರ ಹೃದಯಿಗಳೇ? ವಲಸಿಗರು ಸಂಖ್ಯೆಯಲ್ಲಿ ಅಧಿಕಗೊಳ್ಳುತ್ತಿದ್ದಾರೆ ಎಂಬ ಭೀತಿಯಷ್ಟೇ ಈ ದ್ವೇಷಕ್ಕೆ ಮೂಲವಲ್ಲ. ಕೊಂಚ ಹಿಂದೆ ತಿರುಗಿ ನೋಡಿದರೆ, 1943-44 ರಲ್ಲಿ ಬ್ರಿಟಿಷರ ಕಾಲಾಳುಗಳಾಗಿ ರೋಹಿಂಗ್ಯಾ ಸಮುದಾಯದವರು ಜಪಾನಿಯರ ಮೇಲೆ ಗೆರಿಲ್ಲಾ ಯುದ್ಧ ಹೂಡಿದ್ದು ಕಾಣುತ್ತದೆ. ಜೊತೆಗೆ ತಾವು ಅಧಿಕ ಸಂಖ್ಯೆಯಲ್ಲಿದ್ದ ಪ್ರದೇಶದಲ್ಲಿ ಸ್ಥಳೀಯ ಬೌದ್ಧರು ಮತ್ತು ಹಿಂದೂಗಳ ಮೇಲೆ ಸವಾರಿ ಮಾಡಿದ್ದಿದೆ. ಬರಬರುತ್ತಾ ರೋಹಿಂಗ್ಯಾ ಸಮುದಾಯದಲ್ಲಿ ಪ್ರತ್ಯೇಕತಾವಾದ ಮೊಳೆತು 47-48ರ ಭಾರತ ವಿಭಜನೆಯ ಸಂದರ್ಭದಲ್ಲಿ ರಾಖೈನ್ ರಾಜ್ಯವನ್ನು ಪಶ್ಚಿಮ ಪಾಕಿಸ್ತಾನಕ್ಕೆ ಸೇರಿಸಬೇಕು ಎಂದು ರೋಹಿಂಗ್ಯಾ ಸಮುದಾಯ ಒತ್ತಾಯಿಸಿ ಸೋತಿತ್ತು. ಈ ಬೆಳವಣಿಗೆಗಳಿಂದ ರೋಹಿಂಗ್ಯಾ ಸಮುದಾಯದವರು ನಿಯತ್ತಿನವರಲ್ಲ ಎಂಬುದು ಮ್ಯಾನ್ಮಾರಿನ ಬೌದ್ಧರ ಮನದಲ್ಲಿ ಬೇರೂರಿತು. ಹಾಗಾಗಿ ತಾವು ಮ್ಯಾನ್ಮಾರ್ ನಾಗರಿಕರು ಎಂದು ರೋಹಿಂಗ್ಯಾ ಸಮುದಾಯದವರು ಕರೆದುಕೊಂಡರೂ, ಬಹುಸಂಖ್ಯಾತ ಜನ ಆ ಮಾತನ್ನು ಪುರಸ್ಕರಿಸಲಿಲ್ಲ.

1982ರಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ನೂತನ ಕಾನೂನನ್ನು ಮ್ಯಾನ್ಮಾರ್ ಜಾರಿಗೆ ತಂದಾಗ ತನ್ನ ನಿಲುವನ್ನು ಗಟ್ಟಿಗೊಳಿಸಿತು. 1982ರ ಕಾನೂನಿನಂತೆ-ಬ್ರಿಟಿಷ್ ಆಡಳಿತ ಆರಂಭವಾಗುವುದಕ್ಕೂ ಮೊದಲೇ ಬರ್ಮಾದಲ್ಲಿ ವಾಸವಾಗಿದ್ದವರಿಗೆ ಮಾತ್ರ ಅಲ್ಲಿನ ಪೌರತ್ವದ ಅವಕಾಶ ನೀಡಿತು. ಹೀಗಾಗಿ ಬ್ರಿಟಿಷ್ ಆಡಳಿತದ ವೇಳೆ ಅರಾಕಾನ್ ಪ್ರದೇಶಕ್ಕೆ ಬಂದ ರೋಹಿಂಗ್ಯಾ ಸಮುದಾಯದವರು ಅಸ್ತಿತ್ವ ಕಳೆದು ಕೊಳ್ಳುವಂತಾಯಿತು. ಅವರನ್ನು ಮ್ಯಾನ್ಮಾರ್ ಸರ್ಕಾರ, ಸರ್ಕಾರಿ ನೌಕರಿಯಿಂದ ದೂರ ಇರಿಸಿತು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ ಕಸಿದುಕೊಂಡಿತು. ಮದುವೆ, ಮಕ್ಕಳ ಸಂಖ್ಯೆ ಎಲ್ಲಕ್ಕೂ ಸರ್ಕಾರದ ಅಪ್ಪಣೆ ಬೇಕಾದ ಸಂದರ್ಭ ಸೃಷ್ಟಿಯಾ
ಯಿತು. ಅಧಿಕೃತವಾಗಿ 135 ಜನಾಂಗಗಳನ್ನು ಮ್ಯಾನ್ಮಾರ್ ಒಪ್ಪಿಕೊಂಡಿದ್ದರೂ ರೋಹಿಂಗ್ಯಾ ಸಮುದಾಯವನ್ನು ಮಾತ್ರ ದೂರವೇ ಇಟ್ಟಿತು. ಇದರಿಂದಾಗಿ ಹಲವರು ಬಾಂಗ್ಲಾದತ್ತ ತೆರಳಿದರೆ, ದೊಡ್ಡ ಸಂಖ್ಯೆಯ ರೋಹಿಂಗ್ಯಾ ಸಮುದಾಯದವರು ಒಂದು ರಾಜ್ಯದ ಮಟ್ಟಿಗೆ ಸಂಖ್ಯೆಯನ್ನು ಉಳಿಸಿಕೊಂಡರು. ರಾಖೈನ್ ರಾಜ್ಯದಲ್ಲಿ ಬಹುಸಂಖ್ಯಾತರಾಗುವಷ್ಟು ಬೆಳೆದರು. ಆದರೆ ಒಂದು ಎಂಬ ಭಾವ ಮೂಡದ ಕಾರಣ ಘರ್ಷಣೆಗಳು ತಹಬಂದಿಗೆ ಬರಲಿಲ್ಲ. 1978 ರಿಂದ ಹಿಡಿದು 91-92, 2005 ಮತ್ತು 2012ರಲ್ಲಿ ಕೂಡ ಘರ್ಷಣೆ ವಿಕೋಪಕ್ಕೆ ಹೋಗಿ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿತ್ತು.

ಈ ನಡುವೆ ಮ್ಯಾನ್ಮಾರಿನಲ್ಲಿ 969 ಆಂದೋಲನ ಆರಂಭವಾಯಿತು. ಬೌದ್ಧ ಮತದ ವೈಶಿಷ್ಟ್ಯವನ್ನು ಸಾರುವ ಈ ಮೂರು ಸಂಖ್ಯೆಗಳ ಹೆಸರಿನ ಆಂದೋಲನ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದಿತು. ಅಶಿನ್ ವಿರಾಥು ಎಂಬ ಬೌದ್ಧ ಸನ್ಯಾಸಿ ಆಂದೋಲನದ ನೇತೃತ್ವ ವಹಿಸಿದರು. ಮ್ಯಾನ್ಮಾರಿನ ಬೌದ್ಧ ಮತಾನುಯಾಯಿಗಳು ಇದನ್ನುರಾಷ್ಟ್ರವಾದಿ ಚಳವಳಿ ಎಂದು ಕರೆದರೆ, ಟೀಕಾಕಾರರು ಮುಸ್ಲಿಂ ವಿರೋಧಿ ಆಂದೋಲನ ಎಂದು ಜರೆದರು. ಈ ಆಂದೋಲನದ ರೂವಾರಿಯ ಬಗ್ಗೆ ವರದಿ ಮಾಡಿ ‘Face of Buddhist Terror’ ಎಂದು ‘ಟೈಮ್ಸ್’ ಪತ್ರಿಕೆ ಕರೆದಿತ್ತು. ಆಂದೋಲನದ ಮೂಲಕ ವ್ಯಾಪಾರ ವಹಿವಾಟು, ನೌಕರಿ ಇತ್ಯಾದಿಗಳಲ್ಲಿ ಮುಸ್ಲಿಂ ಸಮುದಾಯವನ್ನು ದೂರವಿರಿಸುವಂತೆ ಕರೆ ನೀಡಲಾಯಿತು. ಓರ್ವ ಬೌದ್ಧ ಸನ್ಯಾಸಿಯಾಗಿ ಒಂದು ಜನಾಂಗದ ವಿರುದ್ಧ ದ್ವೇಷ ಸಾಧಿಸಬಹುದೇ ಎಂಬ ಪ್ರಶ್ನೆಗೆ ಅಶಿನ್ ವಿರಾಥು ‘You can be full of kindness and love, but you cannot sleep next to a mad dog’ ಎಂದಿದ್ದರು. ಇಷ್ಟರ ಮಟ್ಟಿಗೆ ಬೌದ್ಧರು ಮತ್ತು ಮುಸ್ಲಿಮರ ನಡುವೆ ಬರ್ಮಾದಲ್ಲಿ ಕಂದಕ ಏರ್ಪಟ್ಟಿತ್ತು.

ಇದಿಷ್ಟು ಇಂದಿನ ಬಿಕ್ಕಟ್ಟಿಗೆ ಪೂರಕವಾದ ಅಂಶಗಳಾದರೆ, ಸದ್ಯದ ವಲಸೆ ಪರಿಸ್ಥಿತಿಗೆ ಬೀಜಾಂಕುರವಾಗಿದ್ದು ಆಗಸ್ಟ್ ಕೊನೆಯ ವಾರ ಪೊಲೀಸ್ ಚೌಕಿಯ ಮೇಲೆ ನಡೆದ ದಾಳಿ. ಅಂದು ರೋಹಿಂಗ್ಯಾ ಗುಂಪೊಂದು ರಾಖೈನ್ ರಾಜ್ಯದ ಪೊಲೀಸ್ ಚೌಕಿಯ ಮೇಲೆ ದಾಳಿ ಮಾಡಿತು. ಹತ್ತಾರು ಮಂದಿ ರಕ್ಷಣಾ ಸಿಬ್ಬಂದಿ ಹತರಾದರು. ಆ ಬಳಿಕ ಮ್ಯಾನ್ಮಾರ್ ಸಶಸ್ತ್ರ ಪಡೆ ರೋಹಿಂಗ್ಯಾ ಬಂಡುಕೋರರನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆಗೆ ಮುಂದಾಯಿತು. ಪ್ರತಿರೋಧ, ಪ್ರತಿದಾಳಿಯಿಂದಾಗಿ ನೂರಾರು ಮಂದಿ ಪ್ರಾಣತೆತ್ತರು. ಭಯಭೀತರಾದವರು ಬಾಂಗ್ಲಾದೇಶದತ್ತ ಗುಳೆ ಹೊರಟರು. ರೋಹಿಂಗ್ಯಾ ಸಮುದಾಯದವರನ್ನು ತನ್ನವರೆಂದು ಬಾಂಗ್ಲಾ ಒಪ್ಪಿಕೊಳ್ಳದಿದ್ದರೂ, ಮತೀಯ ತಂತುವಿನಿಂದ ನಿರಾಶ್ರಿತ ಶಿಬಿರ ತೆರೆಯಿತು. ಹೆಚ್ಚೆಚ್ಚು ಜನ ಬಂದಂತೆಲ್ಲಾ ನಿಭಾಯಿಸಲು ಸೋತು ಭಾರತದ ಗಡಿಯತ್ತ ತಳ್ಳಿತು. ಭಾರತ ಅವರಿಗೆ ಆಶ್ರಯ ನೀಡಬಾರದೇ ಎಂಬ ಪ್ರಶ್ನೆ ಉದ್ಭವವಾಗಿದ್ದೇ ಆಗ. ‘ಹೆಚ್ಚುವರಿಯಾಗಿ ಅವರಿಗೆ ಆಶ್ರಯ ನೀಡುವುದಿರಲಿ, ಈಗಾಗಲೇ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವ 40 ಸಾವಿರದಷ್ಟು ರೋಹಿಂಗ್ಯಾ ಸಮುದಾಯದವರನ್ನೂದೇಶದ ಭದ್ರತೆಯ ದೃಷ್ಟಿಯಿಂದ ಹಿಮ್ಮೆಟ್ಟಿಸಬೇಕು’ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿತು. ಹಾಗಾಗಿ ಚರ್ಚೆ ಮಾನವೀಯತೆ ವರ್ಸಸ್ ಭದ್ರತೆ ಸುತ್ತ ಗಿರಕಿ ಹೊಡೆಯುತ್ತಿದೆ.

ಅಷ್ಟಕ್ಕೂ ಕೇಂದ್ರ ಸರ್ಕಾರದ ಆತಂಕಕ್ಕೆ ಕಾರಣವಿದೆಯೇ? ಮ್ಯಾನ್ಮಾರ್ ಗುಪ್ತಚರ ಇಲಾಖೆ ಒಟ್ಟುಮಾಡಿರುವ ದಾಖಲೆಗಳು, ಇಂಟರ್‌ನ್ಯಾಷನಲ್ ಕ್ರೈಸಿಸ್ ಗ್ರೂಪ್‌ನಂತಹ ಸಂಸ್ಥೆಗಳ ಮಾಹಿತಿಯ ಪ್ರಕಾರ ಉಗ್ರ ಸಂಘಟನೆಗಳಾದ ಅಲ್ ಕೈದಾ, ಲಷ್ಕರ್ ಎ ತಯಬಾ ಮತ್ತು ಐಎಸ್ ಈಗಾಗಲೇ
ರೋಹಿಂಗ್ಯಾ ಸಮುದಾಯದ ಜೊತೆ ನಂಟು ಹೊಂದಿದೆ. 2013ರಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ಪಾಕಿಸ್ತಾನದ ಐಎಸ್ಐ ಬೆಂಬಲಿತ ಜೆಯುಡಿ, ಮ್ಯಾನ್ಮಾರ್ ಒಳಗೆ ಮತ್ತು ಹೊರಗೆ ದಾಳಿ ನಡೆಸಲು ರೋಹಿಂಗ್ಯಾ ಯುವಕರಿಗೆ ತರಬೇತಿ ನೀಡುತ್ತಿದೆ’ ಎಂಬ ಅಂಶವನ್ನು ಹೇಳಿತ್ತು. ನಂತರ
ಲಷ್ಕರ್ ಮುಖ್ಯಸ್ಥ ಮತ್ತು ಮಂಬೈ ದಾಳಿಯ ರೂವಾರಿ ಹಫೀಸ್ ಮೊಹಮದ್ ಸಯೀದ್ ‘ಬರ್ಮಾ ಸರ್ಕಾರದೊಂದಿಗೆ ಕೈ ಜೋಡಿಸಿ ಮುಸ್ಲಿಂ ಜನಾಂಗವನ್ನು ಬರ್ಮಾದಲ್ಲಿ ಅಳಿಸಿ ಹಾಕುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. It is an obligation on the whole Muslim ummah to defend the rights and honor of Rohingya Muslims in Burma’ ಎಂಬ ಹೇಳಿಕೆ ನೀಡಿದ್ದರು.

2013ರ ಜುಲೈ 7 ರಂದು ಬೋಧಗಯಾದಲ್ಲಿ ಬಾಂಬ್ ಸ್ಫೋಟ ನಡೆದು, ಮಹಾಬೋಧಿ ದೇವಾಲಯದ ಮೇಲೆ ಉಗ್ರರ ದಾಳಿಯಾದಾಗ ರೋಹಿಂಗ್ಯಾ ಸಮುದಾಯದ ಹೆಸರು ಕೇಳಿ ಬಂದಿತ್ತು. ಲಷ್ಕರ್ ಹಲವು ವರ್ಷಗಳ ಹಿಂದೆಯೇ ರೋಹಿಂಗ್ಯಾ ಮುಸ್ಲಿಮರನ್ನು ಜಿಹಾದ್‌ಗೆ
ಅಣಿಗೊಳಿಸಿ ಉಗ್ರ ಸಂಘಟನೆಗೆ (Difa-e Mussalman Arakan) ಬುನಾದಿ ಹಾಕಿದೆ. ಅದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲ ಸೌದಿ ರಾಷ್ಟ್ರಗಳಿಂದ ಬಂದರೆ, ಶಸ್ತ್ರಾಸ್ತ್ರಗಳು ಥಾಯ್ಲೆಂಡ್ ಕಡೆಯಿಂದ ಸರಬರಾಜಾಗುತ್ತಿವೆ ಎಂಬ ಅಂಶ ಚರ್ಚೆಗೆ ಬಂದಿತ್ತು. ರೋಹಿಂಗ್ಯಾ ಉಗ್ರ
ಜಾಲ ಭಾರತದಲ್ಲಿ ಹರಡಿರುವುದು ಸಾಬೀತಾದದ್ದು,ಬರ್ದವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಹೈದರಾಬಾದಿನಲ್ಲಿ ಖಾಲಿದ್‌ ಎಂಬಾತ ಬಂಧನಕ್ಕೆ ಒಳಗಾದಾಗ. ಆತ ಭಾರತಕ್ಕೆ ನುಸುಳಿ ಬರುವ ಮುನ್ನ ಲಷ್ಕರ್ ಸಂಘಟನೆ ತನಗೆ ಮ್ಯಾನ್ಮಾರಿನಲ್ಲಿ ತರಬೇತಿ ನೀಡಿದ್ದ ಬಗ್ಗೆ ಹೇಳಿಕೆ ನೀಡಿದ್ದ. ನಂತರ ಭಾರತ ಸರ್ಕಾರ, ಬಾಂಗ್ಲಾ ಮತ್ತು ಮ್ಯಾನ್ಮಾರ್ ಜೊತೆ ಸೇರಿ ಅರಾಕಾನ್ ಕಣಿವೆ ಜಿಹಾದಿಗಳ ಬೀಡಾಗಿ ಮಾರ್ಪಡದಂತೆ ತಡೆಯಲು ಪ್ರಯತ್ನಿಸಿತು.

ಇನ್ನು, 2013 ಒಂದರಲ್ಲೇ ರೋಹಿಂಗ್ಯಾ ಸಮುದಾಯದ ಸುಮಾರು 40 ಸಾವಿರದಷ್ಟು ಜನ ಬಾಂಗ್ಲಾ ಗಡಿಯಿಂದ ಭಾರತದ ಒಳಗೆ ನುಸುಳಿ ಬಂದಿದ್ದಾರೆ ಎಂಬುದು ಹೆಚ್ಚಾಗಿ ಸುದ್ದಿಯಾಗಿಲ್ಲ. ಅದರಲ್ಲೂ 20 ಸಾವಿರ ಮಂದಿ ಜಮ್ಮು ಪ್ರದೇಶದಲ್ಲಿ ತಳ ಊರಿದ್ದಾರೆ. ಮಿಕ್ಕವರು ದೆಹಲಿ, ಹರಿಯಾಣ, ಕೋಲ್ಕತ್ತ ಮತ್ತು ಹೈದರಾಬಾದ್ ಕಡೆಗೆ ಬಂದಿದ್ದಾರೆ. ಮ್ಯಾನ್ಮಾರ್ ಗಡಿ ಜಮ್ಮುವಿನಿಂದ ಬಹುದೂರದಲ್ಲಿದೆ, ಆದರೆ ರೋಹಿಂಗ್ಯಾ ಸಮುದಾಯದವರು ಸದ್ದಿಲ್ಲದೆ ಜಮ್ಮುವಿನವರೆಗೆ ಬಂದು ಅಲ್ಲಿ ಬಿಡಾರ ಹಾಕಿಯಾಗಿದೆ. ಹಾಗಾಗಿ ಇದೊಂದು ಯೋಜಿತ ಕೃತ್ಯವೇ ಎಂಬ ಅನುಮಾನಕ್ಕೂ ಆಸ್ಪದವಿದೆ. ಗಡಿ ರಕ್ಷಣಾ ಪಡೆಯ (BSF) ಪಂಜಾಬ್ ವಿಭಾಗದ ಐಜಿ ಆಗಿದ್ದ ಅಶೋಕ್ ಕುಮಾರ್ ‘Challenges to internal security of India’ ಕೃತಿಯಲ್ಲಿ ಅಕ್ರಮ ನುಸುಳುಕೋರರು ಹೇಗೆ ಉಗ್ರರ ಏಜೆಂಟರಾಗಿ ಬಳಕೆಯಾಗುತ್ತಾರೆ ಎಂಬುದನ್ನು ವಿವರಿಸುತ್ತಾ, ‘ಕೇವಲ ಒಂದೇ ಮತಾನುಯಾಯಿಗಳು ಎನ್ನುವುದನ್ನು ಬಿಟ್ಟರೆ. ರೋಹಿಂಗ್ಯಾ ಮುಸ್ಲಿಮರಿಗೂ ಭಾರತದ ಮುಸ್ಲಿಮರಿಗೂ ಯಾವುದೇ ಸಾಮ್ಯವಿಲ್ಲ. ಭಾರತದ ಮುಸ್ಲಿಮರೊಂದಿಗೆ ಬೆರೆತು ಬಾಳಲು ಅವರಿಗೆ ಸಾಧ್ಯವಾಗುತ್ತದೆಯೇ ಎಂಬುದೂ ಅನುಮಾನ’ ಎನ್ನುತ್ತಾರೆ. ಜೊತೆಗೆ, ಪಾಕಿಸ್ತಾನ, ಮಲೇಷ್ಯಾದಂತಹ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳು ರೋಹಿಂಗ್ಯಾ ಸಮುದಾಯದವರನ್ನು ಒಳಕರೆದುಕೊಳ್ಳಲು ಆಸಕ್ತಿ ತೋರುತ್ತಿಲ್ಲವೇಕೆ ಎಂಬ ಪ್ರಶ್ನೆಯೂ ಇದೆ. ಈ ಎಲ್ಲ ಸಂಗತಿಗಳನ್ನು ನೋಡಿದಾಗ ಅವರಿಗೆ ಆಶ್ರಯ ನೀಡುವುದು ಉಚಿತವೇ ಎಂಬ ಪ್ರಶ್ನೆ ಮೂಡುತ್ತದೆ.

ಈಗಾಗಲೇ ವಲಸೆ ಸಮಸ್ಯೆಯಿಂದ ಯುರೋಪ್ ಕಂಗೆಟ್ಟಿದೆ. ಕಳೆದ ವರ್ಷ ತೆರೆದ ಬಾಹುಗಳಿಂದ ವಲಸಿಗರನ್ನು ಸ್ವಾಗತಿಸಿ ಮೆಚ್ಚುಗೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಜರ್ಮನಿಯಲ್ಲಿ ನಿರಾಶ್ರಿತರ ಸಂಖ್ಯೆ ಮತ್ತು ಹೆಚ್ಚಾದ ಅಪರಾಧ ಪ್ರಕರಣಗಳನ್ನು ತೂಗಿ ನೋಡುವ ಕಸರತ್ತು ಆರಂಭವಾಗಿದೆ. ಕೇವಲ ಮಾನವೀಯತೆಯ ದೃಷ್ಟಿಯಿಂದ ನೋಡಿದರೂ, ಏಷ್ಯಾದ ಇತರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಭಾರತ ಈ ಸಮಸ್ಯೆಗೆ ತಾತ್ಕಾಲಿಕವಾಗಿ ಸ್ಪಂದಿಸಬೇಕೇ ಹೊರತು, ಇಡಿಯಾಗಿ ಹೆಗಲು ಕೊಡುವುದರಲ್ಲಿ ಯಾವ ಅರ್ಥವೂ ಕಾಣುವುದಿಲ್ಲ. ಈ ವಿಷಯ ಕುರಿತ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ಶುಕ್ರವಾರದ ತನಕ ಮುಂದೂಡಿದೆ. ಫಾಲಿ ಎಸ್. ನಾರಿಮನ್‌ನಂತಹ ಘಟಾನುಘಟಿ ವಕೀಲರು ರೋಹಿಂಗ್ಯಾ ಸಮುದಾಯದ ಪರ ಮಾನವೀಯತೆ ಎಂಬ ಗುರಾಣಿ ಹಿಡಿದು ವಾದಿಸುತ್ತಿದ್ದಾರೆ. ಮಾನವೀಯತೆ ಎಂಬ ಭಾವನಾತ್ಮಕ ಅಂಶ ಮೇಲಾಗುತ್ತದೋ, ದೇಶದ ಭದ್ರತೆಯ ಸವಾಲಿರುವುದರಿಂದ ನಿರ್ಣಯವನ್ನು ನ್ಯಾಯಾಲಯ ಕಾರ್ಯಾಂಗಕ್ಕೇ ಬಿಡುತ್ತದೋ ಕಾದು ನೋಡಬೇಕು. ಏನೇ ಆದರೂ ರೋಹಿಂಗ್ಯಾ ಬಿಕ್ಕಟ್ಟನ್ನು ನಿಭಾಯಿಸುವುದು ಭಾರತದ ಮಟ್ಟಿಗೆ ಅಲಗಿನ ಮೇಲಿನ ನಡಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT