ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ, ಸ್ಥಿರ ಸರ್ಕಾರದ ಸುವರ್ಣ ಸಮಯ?

Last Updated 21 ಮೇ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನಾಡಿನ ಅಸಂಖ್ಯಾತ ಜನರು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದು ಪ್ರಜಾಪ್ರಭುತ್ವ ವ್ಯವಸ್ಥೆ ನಿಜವಾಗಿಯೂ ಇನ್ನಷ್ಟು ಬಲಿಷ್ಠಗೊಂಡ ದೇಶದಲ್ಲಿ ನಾವು ವಾಸಿಸುತ್ತಿರುವ ಬಗ್ಗೆ ನಾವೆಲ್ಲ ಸಹಜವಾಗಿಯೇ ಹೆಮ್ಮೆಪಡಬೇಕು. ನಮ್ಮ ಹೊಸ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾನು ಈ ಲೇಖನದ ಮೂಲಕ ಅಭಿನಂದಿಸಲು ಇಷ್ಟಪಡುತ್ತೇನೆ. ಮುಂದಿನ 5 ವರ್ಷಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿಯಲಿರುವ ಸಿದ್ದರಾಮಯ್ಯ, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂದೂ ಹಾರೈಸುವೆ. ಸಿದ್ದರಾಮಯ್ಯ ಅವರು ತಾವು ಸಾಗಬೇಕಾದ ಮಾರ್ಗದ ಬಗ್ಗೆ ಸ್ಪಷ್ಟ ಧೋರಣೆ ತಳೆದಿರುವ ಬಗ್ಗೆ ನನಗಂತೂ ಯಾವುದೇ ಅನುಮಾನಗಳಿಲ್ಲ. 

ಅಧಿಕಾರಶಾಹಿಯ ದುರ್ನಡತೆ, ರಾಜಕೀಯ ಒಳಜಗಳ, ಅದಕ್ಷ ಆಡಳಿತ ಮುಂತಾದವು ರಾಜ್ಯದ ವರ್ಚಸ್ಸಿಗೆ ಸಾಕಷ್ಟು ರೀತಿಯಲ್ಲಿ ಧಕ್ಕೆ ಉಂಟು ಮಾಡಿವೆ. ಮೂಲಸೌಕರ್ಯ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರಾಜ್ಯದ ಹಣಕಾಸು ಪರಿಸ್ಥಿತಿ ಅಧೋಗತಿಗೆ ಇಳಿದಿದೆ, ಕೈಗಾರಿಕೆಗಳಲ್ಲಿ ಹಣ ಹೂಡಿಕೆ ತೀವ್ರ ಹಿನ್ನಡೆ ಕಂಡಿದೆ.

ಬರಗಾಲದಿಂದಾಗಿ ಕೃಷಿ ಆರ್ಥಿಕತೆಯೂ ನಲುಗಿದೆ. 5 ವರ್ಷಗಳ ಅವಧಿಯಲ್ಲಿ ರಾಜ್ಯದ ಒಟ್ಟಾರೆ  ಸಾಧನೆಯು ಕಳಪೆ ಮಟ್ಟದಲ್ಲಿಯೇ ಇತ್ತು.

ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ  ಬಂದಿರುವುದರಿಂದ ಜನರ ನಿರೀಕ್ಷೆಗಳೆಲ್ಲ ಗರಿಷ್ಠ ಮಟ್ಟದಲ್ಲಿ ಇವೆ. ಮುಂದಿನ 5 ವರ್ಷಗಳ ಕಾಲ ಸ್ಥಿರ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ದಕ್ಷ ರೀತಿಯಿಂದ ಕಾರ್ಯ ನಿರ್ವಹಿಸಲಿದೆ ಎಂದು ರಾಜ್ಯದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಾಡು ಎದುರಿಸುತ್ತಿರುವ ಪ್ರಮುಖ ಆರ್ಥಿಕ ವಿಚಾರಗಳತ್ತ ಸಿದ್ದರಾಮಯ್ಯ ಅವರು ತುರ್ತು ಗಮನ ಹರಿಸಿ, ಬೆಂಗಳೂರು ನಗರ ಮತ್ತು  ಒಟ್ಟಾರೆ ರಾಜ್ಯವನ್ನು ತ್ವರಿತ ಗತಿಯ ಬೆಳವಣಿಗೆಯ ಹಾದಿಗೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಒತ್ತಾಯಿಸಲು ನಾನು ಇಲ್ಲಿ ಬಯಸುತ್ತೇನೆ.

ಬೆಂಗಳೂರಿನ ಮೂಲ ಸೌಕರ್ಯ
ಪ್ರಾಮಾಣಿಕವಾಗಿಯೇ ಹೇಳುವುದಾದರೆ, ಬೆಂಗಳೂರಿನ ಮೂಲ ಸೌಕರ್ಯಗಳು ನಿರೀಕ್ಷಿತ ಮಟ್ಟದಲ್ಲೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಒಡೆದು ಚೂರು ಚೂರಾಗಿದ್ದ ಬಿಜೆಪಿ ಸರ್ಕಾರದ ಅದಕ್ಷ ಆಡಳಿತ ಯಂತ್ರದ ಫಲವಾಗಿ ಮೂಲ ಸೌಕರ್ಯಗಳನ್ನೆಲ್ಲ ನಿರ್ಲಕ್ಷಿಸಲಾಗಿದೆ. ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ಕೆಲ ಜವಾಬ್ದಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಗಲ ಮೇಲಿದ್ದರೂ, ಮುಖ್ಯಮಂತ್ರಿಗಳು ನಗರ ಜನತೆಯ ಹಿತದೃಷ್ಟಿಯಿಂದ ಸ್ಪಷ್ಟ ನಿಲುವು ತಳೆದು ಬೆಂಗಳೂರಿನ ಮೂಲ ಸೌಕರ್ಯಗಳ ಸ್ವರೂಪ ಸುಧಾರಿಸಲು ಆದ್ಯತೆ ನೀಡಬೇಕಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಕಾಮಗಾರಿಯನ್ನು ತ್ವರಿತಗೊಳಿಸುವ ಅನಿವಾರ್ಯತೆಯೂ ಇದೆ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರತಿಯೊಬ್ಬರೂ ಈ ಮಾತನ್ನು ಅನುಮೋದಿಸುತ್ತಾರೆ. ಬೆಂಗಳೂರು ಮೆಟ್ರೊ ಯೋಜನೆಯನ್ನೂ ತ್ವರಿತಗೊಳಿಸುವ ಅಗತ್ಯ ಇದೆ.

ವಿದ್ಯುತ್ ಉತ್ಪಾದನೆ
ಮಾಹಿತಿ ತಂತ್ರಜ್ಞಾನ ರಂಗದಲ್ಲಿ ವಿಶ್ವದ ಗಮನವನ್ನೇ ಸೆಳೆದಿರುವ ರಾಜ್ಯದಲ್ಲಿ, ವಿದ್ಯುತ್ ಸಮಸ್ಯೆ ಗಂಭೀರವಾಗಿದೆ ಎಂದು ನಂಬುವುದೂ ಕಷ್ಟದ ಕೆಲಸ. ಮನೆ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆಗಳ ಕಾಲ ಅಡೆತಡೆ ಇಲ್ಲದ ವಿದ್ಯುತ್ ಪೂರೈಕೆ ಬಗ್ಗೆ ಯಾರೊಬ್ಬರೂ ಖಾತರಿ ನೀಡಲಾರರು. ಈ ಪರಿಸ್ಥಿತಿ ಉದ್ಭವಗೊಳ್ಳಲು ವಿದ್ಯುತ್ ಇಲಾಖೆಯಲ್ಲಿ ದೀರ್ಘಾವಧಿ ಯೋಜನೆಯ ಇಲ್ಲದಿರುವುದೇ ಮುಖ್ಯ ಕಾರಣ.

ಶೋಭಾ ಕರಂದ್ಲಾಜೆ ಅವರು ವಿದ್ಯುತ್ ಸಚಿವರಾಗಿದ್ದಾಗ, ವಿದ್ಯುತ್ ಲಭ್ಯತೆ ಪರಿಸ್ಥಿತಿ ಕೊಂಚ ಮಟ್ಟಿಗೆ ಸುಧಾರಣೆ ಕಂಡಿತ್ತು. ಈಗ ರಾಜ್ಯವು ಈ ದಿಸೆಯಲ್ಲಿ ಸಾಕಷ್ಟು ದೂರ ಕ್ರಮಿಸಬೇಕಾಗಿದೆ.

ಮುಖ್ಯಮಂತ್ರಿಗಳು, ವಿದ್ಯುತ್ ಸಚಿವಾಲಯ ಮತ್ತು ಅಧಿಕಾರಿಗಳ ಜತೆ  ಸೇರಿ, 24 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಕೆ ಆಗುವುದನ್ನು ಕಾರ್ಯಗತಗೊಳಿಸಬೇಕಾಗಿದೆ. ಕ್ರಮೇಣ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಹೆಚ್ಚುವರಿ ಉತ್ಪಾದನೆಯನ್ನು ನೆರೆಯ ರಾಜ್ಯಗಳಿಗೆ ಪೂರೈಸುವಂತಾಗಬೇಕು. ದೀರ್ಘಾವಧಿ ಮುನ್ನೋಟ ಮತ್ತು  ಉತ್ತಮ ಯೋಜನೆ  ಮೂಲಕ ಈ  ಚಮತ್ಕಾರ ಮಾಡಿ ತೋರಿಸಲು ಸಾಧ್ಯವಿದೆ.

ಬಂಡವಾಳ ಹೂಡಿಕೆ ಆಕರ್ಷಣೆ
ವಾಣಿಜ್ಯ - ವ್ಯಾಪಾರ ಮತ್ತು  ಹೊಸ ಬಂಡವಾಳ ಹೂಡಿಕೆ ವಿಷಯದ್ಲ್ಲಲಿಯೂ ರಾಜ್ಯದ ಸಾಧನೆ ಕಳಪೆಯಾಗಿದೆ. ಭ್ರಷ್ಟಾಚಾರ ಮತ್ತು ಅಧಿಕಾರಶಾಹಿಯ ಅದಕ್ಷತೆಯು ಕೈಗಾರಿಕಾ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ.

ಮುಖ್ಯಮಂತ್ರಿ ಮತ್ತು ಅವರ ಹೊಸ ತಂಡವು ಬಂಡವಾಳ ಆಕರ್ಷಿಸಲು ಮತ್ತು ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲು ಹಲವಾರು ಹೊಸ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಾನು ನಂಬಿರುವೆ.  ಬೃಹತ್ ಮೂಲ ಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲು ಸಿದ್ದರಾಮಯ್ಯ ಅವರು ಆದ್ಯತೆ ನೀಡಬೇಕಾಗಿದೆ.

ಇದುವರೆಗೆ ನಿರ್ಲಕ್ಷಿಸಲಾಗಿರುವ ಗ್ರಾಮೀಣ ಮತ್ತು 2ನೆ ಹಂತದ ನಗರ ಪ್ರದೇಶಗಳಿಗೆ ಕೈಗಾರಿಕೆಗಳು ಮತ್ತು  ಹೂಡಿಕೆದಾರರನ್ನು ಸೆಳೆಯಲು ಹೊಸ ಉಪಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಂತಹ ಕ್ರಮಗಳಿಂದ  ಕೈಗಾರಿಕಾ ಬೆಳವಣಿಗೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಸಾಧ್ಯವಾಗಲಿದೆ.

ನೀರು ನಿರ್ವಹಣೆ ಮತ್ತು ಕೃಷಿ
ರಾಜ್ಯದಲ್ಲಿ ಸುರಿಯುವ ಮಳೆಯ ಪ್ರಮಾಣದ ಬಗ್ಗೆ ಯಾರೊಬ್ಬರೂ ಖಚಿತವಾಗಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಯಾವಾಗ ಬರಗಾಲ ಪರಿಸ್ಥಿತಿ  ಉದ್ಭವಿಸಲಿದೆ ಎನ್ನುವುದನ್ನೂ ಮುಂಚಿತವಾಗಿ ತಿಳಿಯಲು ಸಾಧ್ಯವಿಲ್ಲ. ನಿಸರ್ಗದ ಅನಿರೀಕ್ಷಿತ ಬೆಳವಣಿಗೆಗಳನ್ನು ಎದುರಿಸುವ ನಿಟ್ಟಿನಲ್ಲಿ  ಸರ್ಕಾರವು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ರೈತರು ಎದುರಿಸುವ ಬರಗಾಲ ಮತ್ತು ನೀರಿನ ಅಭಾವ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕಾಗುತ್ತದೆ.

ಕೃಷಿ ಆರ್ಥಿಕತೆಯು ರಾಜ್ಯದ  ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ)  ಗಮನಾರ್ಹ ಕೊಡುಗೆ ನೀಡುತ್ತಿದ್ದರೂ,  ಕೃಷಿ ಇಲಾಖೆಯಲ್ಲಿನ ವಿದ್ಯಮಾನಗಳೂ ಆಶಾದಾಯಕವಾಗಿಲ್ಲ. ವ್ಯವಸ್ಥಿತಿ ಯೋಜನೆಯ ಕೊರತೆ ಮತ್ತು ದೋಷಪೂರಿತ ನಿರ್ವಹಣಾ ವ್ಯವಸ್ಥೆಯ ಫಲವಾಗಿ ಸಬ್ಸಿಡಿಗಳನ್ನು ಸಮರ್ಪಕವಾಗಿ ವಿತರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ರೈತರ ಆತ್ಮಹತ್ಯೆ ಪ್ರಕರಣಗಳೂ ನಿಲ್ಲುತ್ತಿಲ್ಲ.

ಕೃಷಿ ಉದ್ದೇಶಕ್ಕೆ ನೀರಿನ ಬಳಕೆ ಸಮರ್ಪಕವಾಗಿರದ ಜತೆಯಲ್ಲಿಯೇ ರಾಜ್ಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಉದ್ದೇಶಕ್ಕೂ ನೀರಿನ ಸಾಕಷ್ಟು ಕೊರತೆ ಸಾಕಷ್ಟಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಂಡಿದ್ದೇ ಹೆಚ್ಚು. ಚುನಾವಣೆ ಗೌಜು ಗದ್ದಲಗಳೆಲ್ಲ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕತ್ವವು ನೀರಿನ  ಸಮಸ್ಯೆಯನ್ನು ರಾಜಕೀಯಗೊಳಿಸದೇ ಆದ್ಯತೆ ಮೇರೆಗೆ ಬಗೆಹರಿಸಬೇಕಾಗಿದೆ.

ಭ್ರಷ್ಟಾಚಾರ ಮುಕ್ತ ಸರ್ಕಾರ
ಎಲ್ಲಕ್ಕಿಂತ ಮುಖ್ಯವಾಗಿ, ಹೊಸ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮತ್ತು ಹಗರಣ ಮುಕ್ತ ಸರ್ಕಾರ ನೀಡಲು ಮೊದಲ ಆದ್ಯತೆ ನೀಡಬೇಕಾಗಿದೆ. ಭ್ರಷ್ಟಾಚಾರದಿಂದ ರೋಸಿಹೋಗಿರುವ ರಾಜ್ಯದ ಜನತೆ ಈಗಾಗಲೇ ಬಿಜೆಪಿಗೆ ಚುನಾವಣೆಯಲ್ಲಿ ಒಳ್ಳೆಯ ಪಾಠ ಕಲಿಸಿದ್ದಾರೆ.

ಕಾಂಗ್ರೆಸ್‌ನ ದೆಹಲಿ ಮಟ್ಟದ ಹಲವು ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ, ರಾಜ್ಯದ ಕಾಂಗ್ರೆಸ್ ನಾಯಕರ ಬಗ್ಗೆ ಮತದಾರರು ವಿಭಿನ್ನ ಧೋರಣೆ ತಳೆದು ಅವರನ್ನು ಅಧಿಕಾರಕ್ಕೆ ತಂದಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಮುಖಂಡರು ಯಾವುದೇ ಭ್ರಷ್ಟಾಚಾರ ಹಗರಣಗಳ ಸುಳಿಯಲ್ಲಿ ಸಿಲುಕದಿರುವುದು ರಾಜ್ಯದ ಜನತೆಯ ಅದೃಷ್ಟವೂ ಎನ್ನಬಹುದು.  ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ. ಎಚ್. ಮುನಿಯಪ್ಪ ಮತ್ತು  ಮಾಜಿ ಸಚಿವ ಎಸ್. ಎಂ. ಕೃಷ್ಣ, ಅವರು  ರಾಷ್ಟ್ರ ಮಟ್ಟದ ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ.

ಮುಖ್ಯಮಂತ್ರಿಗಳು  ಭ್ರಷ್ಟಾಚಾರ ನಿಗ್ರಹದ ವಿಷಯದಲ್ಲಿ ದಿಟ್ಟ ನಿಲುವು ತಳೆದು ತಮ್ಮ ಆಡಳಿತಕ್ಕೆ ಯಾವುದೇ ಕಪ್ಪು ಚುಕ್ಕೆ ತಗುಲದಂತೆ ಎಚ್ಚರವಹಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರವು ಈ ಸದವಕಾಶ ಬಳಸಿಕೊಂಡು, ಭ್ರಷ್ಟಾಚಾರ ಮುಕ್ತ, ಬಂಡವಾಳ ಹೂಡಿಕೆದಾರ  ಸ್ನೇಹಿ, ಅಭಿವೃದ್ಧಿ ಉದ್ದೇಶದ  ಉತ್ತಮ ಆಡಳಿತ ಮತ್ತು ಹಣಕಾಸು ವಿವೇಚನೆ ಪಾಲಿಸುವ  ಸರ್ಕಾರವನ್ನು 5 ವರ್ಷಗಳ ಕಾಲ ನೀಡಬೇಕಾಗಿದೆ.

ಲೋಕಸಭೆಗೆ ಚುನಾವಣೆ ನಡೆದು ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ (ಮುಂದಿನ 6ರಿಂದ 9 ತಿಂಗಳುಗಳ ಕಾಲ) ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಲಿದೆ. ಪ್ರಮುಖ ಯೋಜನೆಗಳಿಗೆ ಕೇಂದ್ರದ ಸಮ್ಮತಿ ಪಡೆಯಲು ರಾಜ್ಯ ಕಾಂಗ್ರೆಸ್ ಮುಖಂಡರು  ಈ ಅವಕಾಶ ಬಳಸಿಕೊಳ್ಳಬೇಕು. ಇದರಿಂದ 2014ರ ಲೋಕಸಭಾ ಚುನಾವಣೆಯಲ್ಲಿ  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೂ ಸಾಧ್ಯವಾಗಲಿದೆ.

ಕೆಲ ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಸಚಿವರಾಗಿದ್ದಾಗ, ಬಹುತೇಕ ಎಲ್ಲರೂ ಮೆಚ್ಚುವಂತಹ ಬಜೆಟ್ ಮಂಡಿಸಿ ಗಮನ ಸೆಳೆದಿದ್ದರು. ಆರ್ಥಿಕ ಶಿಸ್ತಿನ ಬಜೆಟ್ ಮಂಡಿಸಿದ್ದ ಅವರ ಪ್ರಯತ್ನಕ್ಕೆ ಜನರಿಂದ ಶ್ಲಾಘನೆಯೂ ವ್ಯಕ್ತವಾಗಿತ್ತು.

ಈಗ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಸ್ವತಂತ್ರವಾಗಿ ನಿಲುವು ತಳೆಯುವ ವ್ಯಕ್ತಿಯಾಗಿದ್ದಾರೆ. ಅವರು ಉತ್ತಮ ಆಡಳಿತ, ಆರ್ಥಿಕ ಬೆಳವಣಿಗೆ ಮತ್ತು 5 ವರ್ಷಗಳ ಸ್ಥಿರ ಸರ್ಕಾರ ನೀಡಲಿದ್ದಾರೆ ಎಂದು ನಾನು ಸಾಕಷ್ಟು ನಿರೀಕ್ಷೆ ಹೊಂದಿದ್ದೇನೆ. ನಾನು ಇನ್ನೊಮ್ಮೆ ಅವರಿಗೆ ಶುಭಾಶಯ ಹೇಳಲು ಬಯಸುತ್ತಿದ್ದು, ಅವರ ಅಧಿಕಾರಾವಧಿಯ ಮುಂದಿನ 5 ವರ್ಷಗಳು  ರಾಜ್ಯದ ಜನತೆಯ ಪಾಲಿಗೆ ಅಭಿವೃದ್ಧಿ ಮತ್ತು ಸ್ಥಿರತೆಯ ಸುವರ್ಣ ಸಮಯವಾಗಿರಲಿ ಎಂದೂ ಆಶಿಸುವೆ.

                        ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT