ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಕರಾಳ ಮುಖ

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಗಣಿಗಾರಿಕೆ ಯೋಜನೆ ಶುರುಮಾಡಿದ ಮಾತ್ರಕ್ಕೆ ಒಂದು ಊರು ಉದ್ಧಾರವಾಗಲು ಸಾಧ್ಯ ಎನ್ನುವುದು ತಪ್ಪು ಕಲ್ಪನೆ. 50 ವರ್ಷಗಳ ಇತಿಹಾಸವನ್ನು ಕೆದಕಿದರೆ ಈ ಸತ್ಯ ನಮಗೆ ಅರಿವಾಗುತ್ತದೆ.
 
ಇಂಥ ಯೋಜನೆಗಳಿಂದ ಅದೆಷ್ಟೋ ಮಂದಿ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಪಾರಂಪರಿಕ ಕೌಶಲವನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದ ಇವರೆಲ್ಲ ಇದೀಗ `ಅಭಿವೃದ್ಧಿಯ~ ಕಾರಳ ಮುಖವನ್ನು ನೋಡುತ್ತಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿರುವುದರ ವ್ಯತಿರಿಕ್ತ ಪರಿಣಾಮ ಬಹುಶಃ ನಗರವಾಸಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಉದ್ದಿಮೆದಾರರ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ.

ನಮ್ಮ ನದಿಗಳು ಹೂಳು ತುಂಬಿಕೊಂಡಿವೆ...ನಿಧಾನವಾಗಿ ಬತ್ತಿ ಹೋಗುತ್ತಿವೆ...ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ. ನಮ್ಮಂಥ `ಸುಶಿಕ್ಷಿತರಿಗೆ~  ಇದೆಲ್ಲ ಅರ್ಥವೇ ಆಗುತ್ತಿಲ್ಲ. ಗಣಿಗಾರಿಕೆಯಂಥ ಯೋಜನೆಗಳಲ್ಲಿ ದಿನಗೂಲಿ ಕೆಲಸ ಮಾಡುವ ಜನರು ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ.ಕೆಲಸ ಸಿಗದ ಕೆಲವರು ಊರು ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಅಲ್ಲಿ ಮತ್ತೆ ಉದ್ಯೋಗಕ್ಕಾಗಿ ಪರದಾಟ! ಇಷ್ಟೆಲ್ಲ ಹೇಳುತ್ತಲೇ ನಾನು ಶ್ರೀಕಾಂತ್ ಮುಖವನ್ನು ನೋಡಿದೆ. ಅವರು ಯೋಚನಾಮಗ್ನರಾಗಿದ್ದಂತೆ ತೋರಿತು.

ಮತ್ತೆ ನಾನು ನನ್ನ ಮಾತನ್ನು ಮುಂದುವರೆಸಿದೆ:  ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ? ನಮಗೆ ಹೆಚ್ಚು ಹೆಚ್ಚು ವಿದ್ಯುತ್ ಹಾಗೂ ನೀರು ಬೇಕು. ಇದಕ್ಕೆ ನಾವು ಪರಿಸರವನ್ನು ಆಪೋಶನ ತೆಗೆದುಕೊಳ್ಳುತ್ತೇವೆ.
 
ಹೀಗೆ ಮಾಡುವುದರಿಂದ ಒಂದಲ್ಲ ಒಂದು ದಿನ ನಮ್ಮ ಬದುಕು ಬರಡಾಗುತ್ತದೆ. ಅಭಿವೃದ್ಧಿ ಯೋಜನೆಯ ಸುತ್ತಮುತ್ತಲ ಪ್ರದೇಶವನ್ನು ನಾವು ಲೂಟಿ ಮಾಡುವುದರಿಂದ ಆ ಭಾಗದ ಜನಸ ಜೀವನ ನರಕವಾಗುತ್ತದೆ. ಪ್ರತಿ ಬಾರಿ ಲೈಟ್ ಸ್ವಿಚ್, ಟಿವಿ, ಎಸಿ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು  ಆನ್ ಮಾಡುವಾಗಲೂ ನಾವು ಇದನ್ನು ನೆನಪಿಸಿಕೊಳ್ಳಬೇಕು.

ಈಗ ಇನ್ನೊಂದು ನಿಟ್ಟಿನಲ್ಲಿ ಯೋಚಿಸೋಣ. ನಮ್ಮ ರೈತರು ಅನಕ್ಷರಸ್ಥರಾಗಿರಬಹುದು, ಆದರೆ  ಅವರಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿ ಗೊತ್ತಿದೆ. ಬಡರೈತರು ಸುಸ್ಥಿರ ಕೃಷಿಗೆ ಪರಿಸರವನ್ನೇ ನೆಚ್ಚಿಕೊಳ್ಳಬೇಕು.

ಹೌದು, ಸರ್ಕಾರವು ಇನ್ನೊಂದು ಹಸಿರು ಕ್ರಾಂತಿಗೆ ಏನು ಮಾಡಬಹುದು ಎಂದು ಯೋಚಿಸಬೇಕಾಗುತ್ತದೆ. 60ರ ದಶಕದಲ್ಲಿ ಆದ ಹಸಿರು ಕ್ರಾಂತಿಯಿಂದ  ನಮ್ಮ ಸೂಕ್ಷ್ಮ ಪರಿಸರ ನಾಶವಾಯಿತು. ದೇಶದ ಜೀವವೈವಿಧ್ಯಕ್ಕೆ ಧಕ್ಕೆಯಾಯಿತು.

ಆದರೆ, ಇನ್ನೊಂದು ಹಸಿರುಕ್ರಾಂತಿ ನಮ್ಮ ಜೀವವೈವಿಧ್ಯವನ್ನು ಉಳಿಸುವ ಕೆಲಸ ಮಾಡಲಿ. ಕೃಷಿ ಭೂಮಿ ಉಳಿಯುವಂತೆ ಮಾಡಲಿ. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ನಿಲ್ಲಿಸಿ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವಂತಾಗಲಿ. ಹೀಗೆ ಮಾಡುವುದರಿಂದ ಮೂರು ವರ್ಷಗಳ ಅವಧಿಯಲ್ಲಿ ಕೃಷಿ ಭೂಮಿ ಫಲವತ್ತಾಗಿ ಉತ್ತಮ ಇಳುವರಿ ಸಾಧ್ಯವಾಗುತ್ತದೆ.

ಸರ್ಕಾರದ ನೆರವಿಲ್ಲದೇ ಕೃಷಿಕರು ನೈಸರ್ಗಿಕ ಕೃಷಿ  ಮಾಡಲು ಸಾಧ್ಯವಿಲ್ಲ. ರೈತರಿಗೆ ತಾಂತ್ರಿಕ ನೆರವು ಬೇಕಾಗುತ್ತದೆ. ಕೃಷಿ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಇನ್ನಷ್ಟು ತರಬೇತಿ ನೀಡಬೇಕಾಗುತ್ತದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಮಾಡಬೇಕಾಗುತ್ತದೆ.

ನಗರವಾಸಿಗಳು ಆಹಾರಕ್ಕಾಗಿ ಗ್ರಾಮೀಣ ಪರಿಸರವನ್ನೇ ಅವಲಂಬಿಸ್ದ್ದಿದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮೀಣ ಪರಿಸರಕ್ಕೆ ಧಕ್ಕೆಯಾದರೆ, ಗ್ರಾಮವಾಸಿಗಳು ಮಾತ್ರವಲ್ಲ; ನಗರದವರೂ ಸಂಕಷ್ಟ ಎದುರಿಸಬೇಕಾಗುತ್ತದೆ.

ನಮ್ಮ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಬೇಕಾಗಿದೆ. ಶಿಕ್ಷಣಕ್ಕೆ ನೆರವು ಕೊಡಬೇಕಾಗಿದೆ. ಸಾಂಪ್ರದಾಯಿಕ ಜ್ಞಾನ ಪದ್ಧತಿಯನ್ನು ಇನ್ನಷ್ಟು ಸುಧಾರಿಸಬೇಕಾಗಿದೆ.ರೈತರ ಮಕ್ಕಳು ತಮ್ಮ ಹೆತ್ತವರಿಂದಲೇ ಪ್ರಾಯೋಗಿಕ ಕಲಿಕೆ ಪಡೆಯುವಂತಾಗಬೇಕು. ಶಿಕ್ಷಣ ಎನ್ನುವುದು ನಾಲ್ಕು ಗೋಡೆಗಳಿಗೆ ಸೀಮಿತವಾಗುವ ಬದಲು ಆದಷ್ಟು ಬಾಹ್ಯ ಪ್ರಪಂಚಕ್ಕೆ ತೆರೆದುಕೊಳ್ಳಬೇಕು.

ನಡುವೆ ಶ್ರೀಕಾಂತ್ ನನ್ನ ಮಾತನ್ನು ತಡೆದರು.  ನಾನು ಅವರ ಮುಖವನ್ನೇ ನೋಡಿದೆ. `ನೀವು ಹೇಳುವುದು ನನಗೆ ಅರ್ಥವಾಗುತ್ತಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಜನರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ~ ಎಂದು ನುಡಿದರು. ಅವರತ್ತ ಪ್ರಶ್ನಾರ್ಥಕ ನೋಟ ಬೀರಿದ ನಾನು ಮತ್ತೆ ಮುಂದುವರೆಸಿದೆ.

`ಇದನ್ನು ಈ ರೀತಿ ನೋಡಬೇಕು. ನಮ್ಮಂತಹ ನಗರವಾಸಿಗಳಂತೆಯೇ ರೈತರು ಇದನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ನಮ್ಮ ಪೂರ್ವಿಕರು  ಗ್ರಾಮಗಳಲ್ಲಿ ಹಾಗೂ ಚಿಕ್ಕ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಇಂದಿನಂತೆ ಸಾರಿಗೆ ಸಂಪರ್ಕಕ್ಕೆ ಆಗ ಯಾವುದೇ ತಂತ್ರಜ್ಞಾನವೂ ಇರಲಿಲ್ಲ.

ಉತ್ಪನ್ನ, ನೀರು, ಇಂಧನ...ಹೀಗೆ ಯಾವುದೇ ವಸ್ತುವಿಗೂ ಅವರು ದೂರ ಪ್ರದೇಶಕ್ಕೆ ತೆರಳುತ್ತಿರಲಿಲ್ಲ. ಸ್ಥಳೀಯವಾಗಿಯೇ ಎಲ್ಲವನ್ನೂ ನಿರ್ವಹಿಸಿಕೊಂಡು ಹೋಗುತ್ತಿದ್ದರು.
ಅಂದರೆ, ಎಲ್ಲ ಅಗತ್ಯಗಳನ್ನು ಸ್ಥಳೀಯವಾಗಿಯೇ ಪೂರೈಸಿಕೊಂಡರೆ ನಗರದ ಆಡಳಿತಯಂತ್ರವನ್ನು  ನೆಚ್ಚಿಕೊಳ್ಳುವುದು ತಪ್ಪುತ್ತದೆ.
 
ತ್ಯಾಜ್ಯ ವಸ್ತುಗಳ ವಿಲೇವಾರಿಗೂ ಇದೇ ಮಾತು ಅನ್ವಯಿಸುತ್ತದೆ~ ಎಂದು ಹೇಳುತ್ತ ಶ್ರೀಕಾಂತ್ ಕಣ್ಣನ್ನೇ ದಿಟ್ಟಿಸಿದೆ. ನನ್ನ ಮಾತುಗಳನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡ ಬಗ್ಗೆ ನನಗೆ ಅನುಮಾನಗಳು ಇದ್ದವು.

ಈ ಎಲ್ಲ ಚಿಂತನೆಗಳನ್ನು ಸರ್ಕಾರಗಳು ಕಾರ್ಯರೂಪಕ್ಕೆ ತರುವ ಬಗ್ಗೆ ನನಗೆ ನಂಬುಗೆ ಇಲ್ಲ. ಅಲ್ಲದೇ ಇದಕ್ಕೆ ಇಚ್ಛಾಶಕ್ತಿ ಹಾಗೂ ಬದ್ಧತೆ ಇದೆಯೇ ಎನ್ನುವುದೂ ತಿಳಿದಿಲ್ಲ.

ಅಂದಹಾಗೆ ಇಂಥದ್ದೊಂದು ಬದಲಾವಣೆಯು ಕೇವಲ ಅಗತ್ಯವಲ್ಲ; ಆಗಲೇಬೇಕಾದ ಅನಿವಾರ್ಯತೆ. ಒಂದು ವೇಳೆ ನಾವು ಇದರಲ್ಲಿ ವಿಫಲವಾದರೆ ನಮ್ಮ ಗೋರಿಯನ್ನು ನಾವೇ ತೋಡಿಕೊಂಡಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT