ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ಸಮಾನ ಪಾಲುದಾರಿಕೆಯ ನೀತಿ ಬೇಕು

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

2017-18ನೇ ಸಾಲಿಗಾಗಿ ರಾಜ್ಯ ಬಜೆಟ್ ಮಂಡನೆಯ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ನುಡಿಗಳಿವು: ‘ಯಾವ ನಾಡಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಅಭಿವೃದ್ಧಿಯ ಕೇಂದ್ರಕ್ಕೆ ಬರಮಾಡಿಕೊಳ್ಳಲಾಗುತ್ತದೋ ಆ ನಾಡಿನ ಭವಿಷ್ಯಕ್ಕೆ ಅಂಧಕಾರವೆನ್ನುವುದು ಸುಳಿಯುವುದಿಲ್ಲ. ಇದು ನಾನು ಅನುಭವದಿಂದ ಕಂಡುಕೊಂಡಿರುವ ಸರಳ ಸತ್ಯ. ಇಂದು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ಸಹ ರಾಜ್ಯವು ಮಹಿಳಾ ಸಬಲೀಕರಣದಲ್ಲಿ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಕ್ತವಾಗಿ ಪ್ರಶಂಸಿಸುತ್ತಿವೆ. ಇತ್ತೀಚೆಗಷ್ಟೇ, ಅಂತರರಾಷ್ಟ್ರೀಯ ಸಂಸ್ಥೆಯೊಂದು ಕರ್ನಾಟಕ ಸರ್ಕಾರವು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವಲ್ಲಿ ಹಾಗೂ ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸಲು ಇಟ್ಟಿರುವ ಹೆಜ್ಜೆಗಳಿಗಾಗಿ ‘ಅತ್ಯಂತ ಬೆಂಬಲ ನೀಡುವ ರಾಜ್ಯ ಸರ್ಕಾರ -2017 ಪ್ರಶಸ್ತಿ’ಯನ್ನು ನೀಡಿದೆ ಎನ್ನುವುದನ್ನು ಸದನದ ಗಮನಕ್ಕೆ ತರಲು ಬಯಸುತ್ತೇನೆ. ಇದುವೇ ನಮ್ಮ ಅಭಿವೃದ್ಧಿಯ ಚಹರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಈ ನಾಡನ್ನು, ಸಮಾಜವನ್ನು ಜತನದಿಂದ ಕಟ್ಟುವಲ್ಲಿ ಮಗಳಾಗಿ, ತಾಯಿಯಾಗಿ, ಅಕ್ಕತಂಗಿಯರಾಗಿ ಹೆಣ್ಣುಮಕ್ಕಳಿಗಿರುವ ಬದ್ಧತೆ ಪ್ರಶ್ನಾತೀತವಾದುದು. ಹಾಗಾಗಿಯೇ ನಮ್ಮ ವಿತ್ತೀಯ ನೀತಿ ನಿರೂಪಣೆಗಳ ವಿಷಯದಲ್ಲಿ ಲಿಂಗಾಧಾರಿತ  ಅಸಮಾನತೆಯನ್ನು ತೊಡೆದು ಸಮಾನ ಆಯ್ಕೆ ಅವಕಾಶಗಳನ್ನು ನೀಡುವ ಲಿಂಗಸಂವೇದಿ ಗುಣ ಗಾಢವಾಗಿ ಕಂಡುಬರುತ್ತದೆ.’

ನಾಡಿನ ಅಭಿವೃದ್ಧಿಗೆ ಜನಸಂಖ್ಯೆಯ ಅರ್ಧದಷ್ಟಿರುವ  ಹೆಣ್ಣುಮಕ್ಕಳ ಪಾತ್ರವೂ ಮುಖ್ಯ ಎಂಬುದನ್ನು ಗುರುತಿಸಿರುವ ಮುಖ್ಯಮಂತ್ರಿಯವರ ನಿಲುವು ಶ್ಲಾಘನೀಯ. ಈ ನಾಡನ್ನು, ಸಮಾಜವನ್ನು ಜತನದಿಂದ ಕಟ್ಟುವಲ್ಲಿ ಮಗಳಾಗಿ, ತಾಯಿಯಾಗಿ, ಅಕ್ಕತಂಗಿಯರಾಗಿ ಹೆಣ್ಣುಮಕ್ಕಳಿಗಿರುವ ಬದ್ಧತೆ ಪ್ರಶ್ನಾತೀತವಾದುದು ಎಂದು ಹೇಳಿರುವುದೂ ಸರಿಯಾದದ್ದೇ. ಆದರೆ ಬಹಳ ಸಂದರ್ಭಗಳಲ್ಲಿ   ಈ ಸೀಮಿತ ಪರಿಧಿಯೊಳಗೇ ಹೆಣ್ಣುಮಕ್ಕಳನ್ನು ಕಟ್ಟಿಹಾಕುತ್ತಾ ಉಪಚಾರದ ಮಾತುಗಳಲ್ಲಿ, ಯೋಜನೆಗಳಲ್ಲಿ  ಹೆಣ್ಣುಮಕ್ಕಳ ಸಬಲೀಕರಣವಾಗಿದೆ ಎಂದು ಬಿಂಬಿಸಿಕೊಳ್ಳಲಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಸಾರ್ವಜನಿಕ ಬದುಕು ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆಯ ಪ್ರಾತಿನಿಧ್ಯದ ಕೊರತೆ ಈಗಲೂ ಮುಂದುವರಿದಿರುವುದು ಇದಕ್ಕೆ ದ್ಯೋತಕ.

ಮಹಿಳೆಯರ ಅಭಿವೃದ್ಧಿ ವಿಷಯ ಸರ್ಕಾರಗಳ ಗಮನ ಸೆಳೆದುಕೊಂಡಿರುವುದು ಇಂದು ನಿನ್ನೆಯದಲ್ಲ. 1951ರಿಂದಲೂ ರಾಷ್ಟ್ರದಲ್ಲಿ  ಈ ವಿಚಾರದ ಚರ್ಚೆ ನಡೆಯುತ್ತಲೇ ಇದೆ. ಆದರೆ ಆಗ ಇದನ್ನು ಮಹಿಳಾ ಕ್ಷೇಮಾಭಿವೃದ್ಧಿ ಅಥವಾ ಕಲ್ಯಾಣ ವಿಷಯ ಎಂದು ಪರಿಗಣಿಸಲಾಗುತ್ತಿತ್ತು. ಆ ನಂತರ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಮಾನ ಪಾಲುದಾರರು ಎಂಬ ಮಟ್ಟಿಗೆ ಚಿಂತನಾಕ್ರಮದಲ್ಲಿ ಬದಲಾವಣೆ ಆಗಿದೆ. ಹೀಗಿದ್ದೂ  ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳ ಫಲಾನುಭವಿಗಳಾಗಿಯಷ್ಟೇ ಮಹಿಳಾ ಅಭಿವೃದ್ಧಿಯನ್ನು ಗುರುತಿಸುವ ಚಿಂತನೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಿಲ್ಲ. ಮಹಿಳಾ ಸಮಾನತೆಯ ಮಾತುಗಳು  ಮೇಲ್ಪದರಗಳ ಗ್ರಹಿಕೆಯಾಗಷ್ಟೇ ಉಳಿಯುತ್ತಿವೆ. ಸಾಮಾಜಿಕ ಪೂರ್ವಗ್ರಹಗಳನ್ನು ದಾಟುವುದು ನಮ್ಮ ನೀತಿನಿರೂಪಕರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ  ಕಳೆದ ತಿಂಗಳು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಸದನ ಸಮಿತಿಯೊಂದರ  ವರದಿ ಮತ್ತೊಮ್ಮೆ ಸಾಕ್ಷ್ಯ ಒದಗಿಸಿದೆ.

‘ಐಟಿ, ಬಿಟಿ ಕಂಪೆನಿಗಳಲ್ಲಿ ದುಡಿಯುವ ಮಹಿಳಾ ಉದ್ಯೋಗಿಗಳ ರಕ್ಷಣೆಯ ದೃಷ್ಟಿಯಿಂದ ಅವರಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನದ ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ರಾತ್ರಿ ಪಾಳಿಗೆ ಪುರುಷರನ್ನೇ ಕಾರ್ಯನಿರ್ವಹಿಸಲು ನಿಯೋಜಿಸಬೇಕು’ ಎಂದು ವಿಧಾನಸಭೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. ಕಾಂಗ್ರೆಸ್‌ ಶಾಸಕ ಎನ್.ಎ. ಹ್ಯಾರಿಸ್ ನೇತೃತ್ವದ ಈ ಸಮಿತಿಯಲ್ಲಿ  21 ಶಾಸಕರಿದ್ದು (ಇವರಲ್ಲಿ ಏಳು ಮಂದಿ ಮಹಿಳೆಯರು),  ಇನ್ಫೊಸಿಸ್‌ ಮತ್ತು ಬಯೋಕಾನ್ ಸಂಸ್ಥೆಗಳಿಗೆ ಈ ಸಮಿತಿ ಇತ್ತೀಚೆಗೆ ಭೇಟಿ ನೀಡಿತ್ತು. ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಇದೆಯೇ ಮತ್ತು ಸರೋಜಿನಿ ಮಹಿಷಿ ವರದಿ ಅನ್ವಯ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆಯೇ ಎಂಬ ವಿಷಯದ ಕುರಿತು  ಈ ಕಂಪೆನಿಗಳ  ಆಡಳಿತ ವರ್ಗ, ಸಿಬ್ಬಂದಿ ಜೊತೆ ಚರ್ಚೆ ನಡೆಸಿದ ನಂತರ ಅವರ ಅಭಿಪ್ರಾಯಗಳನ್ನು ಆಧರಿಸಿ  ಈ ಶಿಫಾರಸುಗಳನ್ನು  ಮಾಡಿರುವುದಾಗಿ ಸಮಿತಿ ಹೇಳಿದೆ.

ರಾತ್ರಿ ವೇಳೆ ಮಹಿಳೆಯರು ಕೆಲಸ ಮಾಡಲು ರಾಜ್ಯದ ಈಗಿನ ಕಾನೂನುಗಳಲ್ಲಿ ಅವಕಾಶವಿದೆ. ಹೀಗಾಗಿ ಸದನ ಸಮಿತಿಯ ಈ ಶಿಫಾರಸು ಹಿನ್ನಡೆ ಎನ್ನದೇ ವಿಧಿ ಇಲ್ಲ.  ರಾಜ್ಯ ಸರ್ಕಾರದ ಕಾರ್ಮಿಕ ಹಾಗೂ ಕೈಗಾರಿಕಾ ನೀತಿಗಳಿಗೂ ಇದು ವಿರೋಧವಾದದ್ದು. 2000 ದಶಕದಲ್ಲೇ ಮಹಿಳೆಯರಿಗೆ ರಾತ್ರಿ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಐಟಿ, ಐಟಿ ಆಧರಿತ ವಲಯ  ಹಾಗೂ ಬಿಪಿಓ ಕಂಪೆನಿಗಳಲ್ಲಿ ಅವಕಾಶ ನೀಡಲಾಯಿತು. ಈಗ ಐಟಿ, ಬಿಟಿ ವಲಯಗಳಲ್ಲಿ  ಮಹಿಳೆಯರಿಗೆ ರಾತ್ರಿ ಪಾಳಿ ಬೇಡ ಎಂಬಂತಹ ಸದನ ಸಮಿತಿಯ ಶಿಫಾರಸು  ಅಚ್ಚರಿ ಮೂಡಿಸುವಂತಹದ್ದು. ಈ ಶಿಫಾರಸನ್ನು ಕೆಲವರು  ಸ್ವಾಗತಿಸಬಹುದು. ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗಾಗಿ ಹಗಲಿನ ಪಾಳಿಯೇ ಮಹಿಳೆಗೆ ಒಳ್ಳೆಯದು ಎಂಬ ವಾದ ಮಂಡಿಸಬಹುದು. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದು ಎನ್ನಬಹುದು. ಆದರೆ ಆರೋಗ್ಯ ಕಾರಣಗಳು ಪುರುಷರಿಗೂ ಇರಬಹುದು. ಇನ್ನು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದಾಗಿ ಇದು ಒಳ್ಳೆಯದು ಎಂಬ ವಾದವನ್ನೂ ಮಂಡಿಸಬಹುದು. ಆದರೆ ಮಹಿಳೆ ಮೇಲಿನ  ಅಪರಾಧ ಪ್ರಕರಣಗಳು ಹಗಲಿನ ವೇಳೆಯೂ ಘಟಿಸುತ್ತವೆ. ಹಾಗೆಂದು ಹಗಲಿನಲ್ಲಿ  ಮನೆಯಿಂದ ಮಹಿಳೆ ಹೊರಗೆ ಬರಬಾರದು ಎನ್ನಲಾಗುತ್ತದೆಯೆ? ಹಾಗೆಯೇ ಮನೆಗಳಲ್ಲೂ ಮಹಿಳೆ ಮೇಲೆ ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ.  ಹೀಗಾಗಿ ರಾತ್ರಿಪಾಳಿಗಳಲ್ಲಿ ಮಹಿಳೆ ದುಡಿಮೆಯಿಂದ ಎದುರಾಗಬಹುದಾದಂತಹ  ‘ಸಮಸ್ಯೆಯೇ ಬೇಡ’ ಎನ್ನುವುದು ಪರಿಹಾರವಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಈಗಾಗಲೇ ಐಟಿ ಹಾಗೂ ಬಿಪಿಓ  ಉದ್ಯಮಗಳಲ್ಲಿ ಗಣನೀಯ ಸಂಖ್ಯೆಯ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಶಿಫಾರಸು ಮಹಿಳೆಯ  ಉದ್ಯೋಗಕ್ಕೂ ಸಂಚಕಾರ ತರಬಹುದಾದದ್ದು. ಐಟಿ ವಲಯದಲ್ಲಿ 14 ಲಕ್ಷ  ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶೇ 38ರಷ್ಟು ಮಂದಿ ಕರ್ನಾಟಕದಲ್ಲಿ ಅದರಲ್ಲೂ  ಹೆಚ್ಚಿನವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎನ್ನುತ್ತವೆ ಅಂಕಿಅಂಶಗಳು.

ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವುದು ಮಹಿಳೆಯರಲ್ಲಿ ಅಸುರಕ್ಷಿತ ಭಾವ ಹೆಚ್ಚಿಸುತ್ತದೆ. ಕಿರುಕುಳ, ಹಿಂಸಾಚಾರಗಳಿಗೂ ಒಳಗಾಗುವ ಅಪಾಯ ಇರುತ್ತದೆ ಎಂಬುದನ್ನು ಈ ಸಮಿತಿ ಹೇಳಿದೆ. ಆದರೆ ‘ಎಲ್ಲಾ ರೀತಿಯ ಕಾರ್ಯಗಳನ್ನು ಕೈಗೊಳ್ಳಲು ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳಿರಬೇಕು.  ಇದಕ್ಕಾಗಿ ಅವರಿಗೆ ಸಮಾನ ಸೌಲಭ್ಯಗಳು ಸಿಗಬೇಕು. ಆ ಮೂಲಕ ವೃತ್ತಿಗಳು ಹಾಗೂ ಸಾರ್ವಜನಿಕ ಸೇವೆಗಳಿಗೆ ಅವರ ಪ್ರವೇಶ ಯಾವ ರೀತಿಯಲ್ಲೂ ಪೂರ್ವಗ್ರಹಗಳಿಗೆ ಒಳಗಾಗಬಾರದು’ ಎಂದು ನಮ್ಮ ಮೊದಲ ಪಂಚವಾರ್ಷಿಕ ಯೋಜನೆಯಲ್ಲೇ  (1951-55) ಪ್ರತಿಪಾದಿಸಲಾಗಿದೆ. ಹೀಗಿದ್ದೂ ಪದೇ ಪದೇ ಅದೇ ಹಳೆಯ  ಪೂರ್ವಗ್ರಹಗಳನ್ನು ನಮ್ಮ ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿರುವುದಾದರೂ ಏಕೆ?

2007ರಲ್ಲಿ ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ ಅಂದಿನ ಕಾರ್ಮಿಕ ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ ಅವರೂ ಸಹ ರಾತ್ರಿ ಪಾಳಿಯಲ್ಲಿ ಮಹಿಳೆ ಕೆಲಸ ಮಾಡುವುದು ಭಾರತೀಯ ಸಂಸ್ಕೃತಿಯಲ್ಲ ಎಂದು ವ್ಯಾಖ್ಯಾನಿಸಿದ್ದರು.

ಸಮಾಜದಲ್ಲಿ ಪತ್ನಿ ಹಾಗೂ ತಾಯಿಯ ಸ್ಥಾನದಲ್ಲಿ ಮಹಿಳೆಯನ್ನು ಹೆಚ್ಚಾಗಿ ಗುರುತಿಸಲಾಗುತ್ತದೆ. ಇದರಿಂದಾಗಿ ಮಹಿಳೆಯ ಸಾಮರ್ಥ್ಯ,  ಪ್ರತಿಭೆಗಳು ಕುಗ್ಗಿ ಹೋಗಿವೆ. ಸಾಮಾಜಿಕವಾಗಿ ಅಸಮಾನತೆಯನ್ನು ಸೃಷ್ಟಿಸುವ ಈ  ವ್ಯವಸ್ಥೆಯನ್ನು ಸರಿಪಡಿಸಲು  ಆರಂಭದಿಂದಲೂ ಭಾರತೀಯ ಸಂವಿಧಾನ ಮಹಿಳಾ ವರ್ಗಕ್ಕೆ ಸಾಕಷ್ಟು ಗಮನ ನೀಡುತ್ತಲೇ ಬಂದಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಜೊತೆಗೆ 1993ರಲ್ಲಿ  ‘ಮಹಿಳೆ ವಿರುದ್ಧದ ಎಲ್ಲಾ  ತಾರತಮ್ಯ ನಿವಾರಣೆ ನಿರ್ಣಯ’ವನ್ನು  (ಸೀಡಾ) ರಾಷ್ಟ್ರ ಅಂಗೀಕರಿಸಿದೆ. ಈ ಪ್ರಕಾರ, ಮಹಿಳೆಯರು ತಮ್ಮ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಅನುವಾಗುವಂತಹ  ಅಭಿವೃದ್ಧಿಗೆ ಪೂರಕವಾದ  ಸಕಾರಾತ್ಮಕ ಪರಿಸರ ಸೃಷ್ಟಿಯೂ  ಸರ್ಕಾರದ ಕರ್ತವ್ಯ ಎಂಬುದನ್ನು ಮರೆಯಲಾಗದು.

ಹೀಗಾಗಿಯೇ ಕಳೆದ ವರ್ಷ ಡಿಸೆಂಬರ್‌ನಲ್ಲಷ್ಟೇ  ಐಟಿ ಕ್ಷೇತ್ರ ಮಾತ್ರವಲ್ಲದೆ ಎಲ್ಲಾ ವಲಯದಲ್ಲೂ ಲಿಂಗತ್ವ ಸಮಾನತೆಗೆ ಅವಕಾಶ ಮಾಡಿಕೊಡುವುದಕ್ಕಾಗಿ  ರಾಜ್ಯದ 1961ರ  ಕರ್ನಾಟಕ ಅಂಗಡಿ ಮತ್ತು ಮುಂಗಟ್ಟು ಕಾಯಿದೆ ಹಾಗೂ 1848ರ ಕಾರ್ಖಾನೆ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ.  ಇದರಿಂದ ಉದ್ಯಮಗಳಲ್ಲಿ ರಾತ್ರಿಪಾಳಿಗಳಲ್ಲಿ ಮಹಿಳೆಯರ ನಿಯೋಜನೆಗೆ ಉದ್ಯೋಗದಾತರಿಗೆ ಆಯ್ಕೆಯನ್ನು ನೀಡಿರುವುದಲ್ಲದೆ ಮಹಿಳೆಯರ ಹಿತರಕ್ಷಣೆಗೆ 15 ಷರತ್ತುಗಳನ್ನೂ ಕಾರ್ಮಿಕ ಇಲಾಖೆ ವಿಧಿಸಿದೆ. ನಿಜ.  ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚು ಮಹಿಳೆಯರನ್ನು ಕರೆ ತರಲು ರಾತ್ರಿ ಪಾಳಿಗಳು ಉತ್ತರವಾಗದು. ಹೀಗಿದ್ದೂ  ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚಿನ ಮಹಿಳೆಯರನ್ನು ಕರೆತರುವುದಕ್ಕಾಗಿ  ರಾತ್ರಿಪಾಳಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವುದು ಅಗತ್ಯವಾದ ಹಾಗೂ ಅವಶ್ಯಕವಾದ ಕ್ರಮ ಎಂಬುದರಲ್ಲೂ ಎರಡು ಮಾತಿಲ್ಲ.

ಈಗಾಗಲೇ ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ಮಹಿಳೆಗೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಅವಕಾಶ ಇದೆ. ಬಾಂಗ್ಲಾದೇಶದಲ್ಲಿ ಮಹಿಳೆಗೆ ಒಪ್ಪಿಗೆ ಇದ್ದಲ್ಲಿ ಮಾಡಬಹುದು. ಆದರೆ ಭಾರತದಲ್ಲಿ ಎಲ್ಲಾ ವಲಯಗಳಲ್ಲೂ ಈ ಅವಕಾಶವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸುಧಾರಣೆಯತ್ತ ಮುಂದಡಿ ಇಡುತ್ತಿರುವಾಗಲೇ ಸದನ ಸಮಿತಿಯ ಶಿಫಾರಸು ಹಿನ್ನಡೆಯದಾಗಿದೆ. ಸಮಾನ ನೆಲೆಯಲ್ಲಿ ಮಹಿಳೆ  ಉದ್ಯೋಗದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದಾದಲ್ಲಿ ಇದು ಬೀರಬಹುದಾದ ಪರಿಣಾಮದ ಬಗ್ಗೆ ಎಚ್ಚರ ಇರಬೇಕು.

1975ರ ಮೇ 18ರಂದು ಮಹಿಳೆಯರ ಸ್ಥಾನಮಾನ ಕುರಿತ ಸಮಿತಿಯ ವರದಿಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಭಾರತದ ದಿವಂಗತ ಪ್ರದಾನಿ ಇಂದಿರಾ ಗಾಂಧಿ ಅವರ ಮಾತುಗಳನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದು. ಇಂದಿಗೂ ಇದು ಪ್ರಸ್ತುತವಾದದ್ದು:

‘ಯಾವುದೇ ಸಮಾಜದ ಮಟ್ಟವನ್ನು ಆ ಸಮಾಜದ ಮಹಿಳೆಯರು ಹೊಂದಿರುವ ಮಟ್ಟದಿಂದಲೇ ಅಳೆಯಲಾಗುತ್ತದೆ. ಮಹಿಳೆಯರಿಗೆ ಅವಕಾಶ ಸಿಕ್ಕಲ್ಲಿ ಅವರು ಅಭಿವೃದ್ಧಿ ಸಾಧಿಸಬಹುದು. ಪುರುಷರು, ಹಾಗೆಯೇ ದುರದೃಷ್ಟವಶಾತ್ ಮಹಿಳೆಯರೂ ಕೂಡ ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳಿಗೆ ಒಳಗಾಗಿರುತ್ತಾರೆ. ಅವರ ಹುಟ್ಟಿನಿಂದಲೇ, ನಂತರ ಶಾಲೆ, ಸಮಾಜ, ಸಂಸ್ಥೆ ಹೀಗೆ ಎಲ್ಲಾ ಮಟ್ಟಗಳಲ್ಲೂ ಪೂರ್ವ ನಿಶ್ಚಿತ ನಿರ್ಧಾರಗಳು ಹಾಗೂ ಮನೋಧರ್ಮಗಳಿಂದಲೇ ಅವರ ಬದುಕು  ಸಾಗುತ್ತದೆ. ಮಹಿಳೆಯ ಕಡಿಮೆ ಸ್ಥಾನಮಾನ, ಕಡಿಮೆ ಅವಕಾಶಗಳು, ಮನುಷ್ಯ ಜನಾಂಗದ ಬೆಳವಣಿಗೆಗೇ ತೊಡಕು. ಇದು ಪುರುಷರ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ತಮ್ಮ ಪೂರ್ಣ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಮಹಿಳೆಯರಿಗೆ ಅವಕಾಶ ನೀಡದೇ ಇರುವವರೆಗೆ ಪುರುಷರಿಗೂ ತಮ್ಮ ನಿಜ ಸಾಮರ್ಥ್ಯದ ಅರಿವು ಆಗುವುದು ಕಷ್ಟ. ಮಹಿಳೆಯರು ವೇತನ ಮತ್ತಿತರ ವಿಚಾರಗಳಲ್ಲಿ ಸಮಾನತೆ ಹೊಂದುವುದು ಅಗತ್ಯ.’

ಆರೋಗ್ಯ, ಶಿಕ್ಷಣ, ಉದ್ಯೋಗ  ಹಾಗೂ ರಾಜಕಾರಣ ಕ್ಷೇತ್ರಗಳಲ್ಲಿ ಮಹಿಳೆಯರ ಸ್ಥಾನಮಾನದ ಕುಸಿತ ರಾಷ್ಟ್ರದ ಒಟ್ಟಾರೆ ಅಭಿವೃದ್ಧಿ ಪ್ರಕ್ರಿಯೆ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ನಮಗೆ ಗೊತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT