ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀನಾ ಎಲ್ಲಿ ?

Last Updated 4 ಮೇ 2013, 19:59 IST
ಅಕ್ಷರ ಗಾತ್ರ

ಸ್ತಮಾ ರೋಗದ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ವಿಶ್ವ ಆರೋಗ್ಯ ಸಂಸ್ಥೆ ಮತ್ತು ರಾಷ್ಟ್ರೀಯ ಹೃದಯ ಶ್ವಾಸಕೋಶ ಹಾಗೂ ರಕ್ತನಿಧಿ ಸಂಸ್ಥೆಯ ಸಹಾಯದಿಂದಾಗಿ 1993ರಲ್ಲಿ `ಗೀನಾ' ಜನ್ಮ ಪಡೆಯಿತು.

ಆಸ್ತಮಾ ಗಂಭೀರವಾದ ಜಾಗತಿಕ ರೋಗ. ಜಗತ್ತಿನ ವಿವಿಧ ದೇಶಗಳ ಎಲ್ಲ ವಯೋಮಾನದ ಜನ ಈ ರೋಗದಿಂದಾಗಿ ಸಹಜ ಬದುಕಿನಿಂದ ದೂರವಾಗಿದ್ದಾರೆ. ಕೆಲವರು ದುರಂತ ಎದುರಿಸಿದ್ದಾರೆ. ಇತ್ತೀಚೆಗೆ ಮಕ್ಕಳು ಹೆಚ್ಚಾಗಿ ಆಸ್ತಮಾಕ್ಕೆ ಬಲಿಯಾಗುತ್ತಿದ್ದಾರೆ. ಜಗತ್ತಿನಲ್ಲಿ ಇಂದು 30 ಕೋಟಿ ಮಕ್ಕಳು ಆಸ್ತಮಾ ಪೀಡಿತರಾಗಿದ್ದಾರೆ. 2005ರಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ ಎರಡೂವರೆ ಲಕ್ಷ.

`ನೀವು ಆಸ್ತಮಾವನ್ನು ನಿಯಂತ್ರಿಸಬಹುದು' ಎಂಬ ಧ್ಯೇಯವಾಕ್ಯದೊಂದಿಗೆ ಮೇ 7ರಂದು ಆಚರಿಸಲಾಗುತ್ತಿರುವ `ವಿಶ್ವ ಆಸ್ತಮಾ ದಿನ'ಕ್ಕೂ ಈಗ ನಾನು ಹೇಳಲು ಹೊರಟಿರುವ ಅಮೀನಾಳ ಕತೆಗೂ ಪರಸ್ಪರ ಸಂಬಂಧವಿದೆ.

1988ರಲ್ಲಿ `ಗೀನಾ' ಮೊದಲ ಬಾರಿಗೆ ಆಸ್ತಮಾ ದಿನಾಚರಣೆ ಆರಂಭಿಸಿತು. ಆಸ್ತಮಾಕ್ಕೆ ಸಂಬಂಧಿಸಿದಂತೆ ಪುರಾತನ ಈಜಿಪ್ಟ್‌ನಲ್ಲಿ ಪುರಾವೆಗಳು ದೊರೆತಿದ್ದು, ಆಗ `ಕೈಫಿ' ಎಂಬ ಕಷಾಯ ಅದಕ್ಕೆ ಮದ್ದಾಗಿತ್ತು. ಏಳು ಗಂಭೀರ ಕಾಯಿಲೆಗಳಲ್ಲಿ ಆಸ್ತಮಾ ಕೂಡ ಒಂದು ಎಂದು ಪರಿಗಣಿಸಲಾಗಿತ್ತು. ಆಸ್ತಮಾ ಪೀಡಿತ ಹೆಣ್ಣುಮಗಳಿಂದ ಬರುವ ಗೊಗ್ಗರು ದನಿಯನ್ನು ಭ್ರೂಣಾವಸ್ಥೆಯಲ್ಲಿರುವ ಮಗುವಿನ ಕೂಗು ಎಂದು ನಂಬಲಾಗಿತ್ತು. `ಆಹ್ಮಾ' ಎಂದು ಕರೆಯಲಾಗುತ್ತಿದ್ದ ಆ ಕಾಯಿಲೆ ಖಿನ್ನತೆಯಿಂದ ಬರುತ್ತದೆ ಎಂದು ಭಾವಿಸಲಾಗಿತ್ತು. ಅದು ಇತಿಹಾಸ. ಈಗ `ಗೀನಾ' ಮುಂಚೂಣಿಯಲ್ಲಿ ನಿಂತು ಆಸ್ತಮಾ ಪೀಡಿತರಿಗೆ ಕ್ರಾಂತಿಕಾರಿ ಚಿಕಿತ್ಸೆ ನೀಡುತ್ತಿದೆ.

1982ರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಪ್ಪಾಜಿ ನನ್ನನ್ನು ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆಂದು ಕರೆದೊಯ್ದರು. ಫಿಲಿಪ್ಪೀನ್ಸ್‌ನಲ್ಲಿ ನಡೆಯುತ್ತಿದ್ದ ಆ ಅಂತರರಾಷ್ಟ್ರೀಯ ಸಮಾವೇಶ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ್ದು. ಜಠರಕ್ಕೆ ಸಂಬಂಧಿಸಿದಂತೆ ಅಪ್ಪಾಜಿ  ಪ್ರಬಂಧವೊಂದನ್ನು ಮಂಡಿಸಿದರು. ಆ ದಿನಗಳಲ್ಲಿ ಅಪ್ಪಾಜಿ ಬಹಳ ಬಿಜಿಯಾಗಿದ್ದ ಶಿಶುರೋಗತಜ್ಞರಾಗಿದ್ದು ತಮ್ಮ ಮಕ್ಕಳೊಂದಿಗೆ ಒಡನಾಡುವುದೇ ಅಪರೂಪವಾಗಿತ್ತು. ಆರು ವಾರಗಳ ಕಾಲ ಅಲ್ಲಿದ್ದ ಸಂದರ್ಭದಲ್ಲಿ ಅವರು ಆಗಾಗ `ನನ್ನ ಮಗಳನ್ನು ಕಂಡುಕೊಂಡೆ' ಎಂದು ಹೇಳುತ್ತಿದ್ದರು. ಈಗಲೂ ನನಗೆ ನೆನಪಿದೆ. ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಪ್ರೊ. ಪಿ.ಎಂ. ಕೃಷ್ಣಮೂರ್ತಿ ಅಪ್ಪಾಜಿ ಜೊತೆ ಮಾತನಾಡುತ್ತಾ `ನಿಮ್ಮ ಮಗಳು ವಿನಯವೇ ಮೂರ್ತಿವೆತ್ತಂತಿದ್ದಾರೆ. ನೀವು ಅವರನ್ನು ಬೆಳೆಸಿರುವ ರೀತಿ ಬಗ್ಗೆ ಹೆಮ್ಮೆ ಎನಿಸುತ್ತದೆ' ಎಂದಿದ್ದರು. ನಾನಾಗ ಭಾರತಕ್ಕೆ ಮರಳುವ ಮುನ್ನ ರೋಗಿಗಳಿಗೆ ಔಷಧಗಳನ್ನು ಖರೀದಿಸುವಲ್ಲಿ ಮಗ್ನಳಾಗಿದ್ದೆ. ಕೆಲವು ಗೆಳೆಯರು ಔಷಧಗಳ ಪಟ್ಟಿಯನ್ನೇ ನಮಗೆ ನೀಡಿದ್ದರು. ಹಣದ ಕೊರತೆ ಇದ್ದುದರಿಂದ ಯಾವ ಔಷಧ ಅತಿಮುಖ್ಯ ಎಂಬುದನ್ನು ಪಟ್ಟಿಮಾಡಿಕೊಳ್ಳುವಂತೆ ಸೂಚಿಸಿದ್ದರು. ಮಧುಮೇಹದಿಂದ ಬಳಲುತ್ತಿದ್ದ ದಿ. ಟಿ.ಎಸ್. ಮಲ್ಲೇಶ್ ಅವರಿಗೆ ಇನ್ಸುಲಿನ್ ಸಿರಂಜ್‌ಗಳ ಅಗತ್ಯವಿತ್ತು. ಆಸ್ತಮಾ ರೋಗಿಯಾಗಿದ್ದ ಡಾ. ಎನ್‌ಎಂ ಅವರು ಇನ್‌ಹೇಲರ್ ಬಯಸಿದ್ದರು. ಅದು 1982. ಶ್ರೀಮಂತ ಆಸ್ತಮಾ ರೋಗಿಗಳು ವಿದೇಶದಿಂದ ಇನ್‌ಹೇಲರ್‌ಗಳನ್ನು ತರಿಸುತ್ತಿದ್ದ ಕಾಲ. ಈಗ ದೇಶದಲ್ಲಿ ಅವು ಸುಲಭದಲ್ಲಿ ದೊರೆಯುತ್ತಿವೆ.

ಅಮೀನಾಳ ತಂದೆ ಧೂಮಪಾನದಿಂದ ಶ್ವಾಸಕೋಶ ತೊಂದರೆಗೆ ತುತ್ತಾಗಿ ಸಾವಿಗೀಡಾಗಿದ್ದರು. ಅಮೀನಾ ನಾಲ್ಕು ವರ್ಷದವಳಿದ್ದಾಗ ಆಸ್ತಮಾಕ್ಕೆ ತುತ್ತಾಗಿ ಆಕೆಯನ್ನು ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಆಕೆ ಮುಂದೆ ಎರಡು ಮೂರು ತಿಂಗಳಿಗೆ ಒಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮೊದಲು ಆಕೆಯ ತಾಯಿ ತುಂಬಾ ಕಾಳಜಿ ಮಾಡುತ್ತಿದ್ದರು. ಆದರೆ ಬಹುತೇಕ ಬಡ ಮಹಿಳೆಯರು ದಿನಗಳೆದಂತೆ ರೋಗಗ್ರಸ್ತ ಮಕ್ಕಳ ಆರೈಕೆಯನ್ನು ತೊರೆಯುತ್ತಾರೆ. ಅಮೀನಾ ಹಾಗೂ ಆಕೆಯ ತಾಯಿ ನಂತರ ಮಾವನ ಮನೆಯಲ್ಲಿ ದಿನದೂಡಬೇಕಾಯಿತು. ಅಮೀನಾಳ ಕಾಯಿಲೆ, ಗಂಡನ ಸಾವು, ಸಹೋದರನನ್ನೇ ಅವಲಂಬಿಸಬೇಕಾದ ಅವಸ್ಥೆ ಆ ತಾಯಿಯನ್ನು ಮೂಲೆಗುಂಪಾಗಿಸಿತು. ತನ್ನ ಸೋದರಿಯನ್ನೂ ಆಕೆಯ ಇಬ್ಬರು ಮಕ್ಕಳನ್ನೂ ಸಲಹುವುದು ಮಾವನಿಗೆ ಕೂಡ ಖುಷಿಯ ಸಂಗತಿಯಾಗಿರಲಿಲ್ಲ. ರೋಗಗ್ರಸ್ತೆ ಅಮೀನಾಳನ್ನು ಅವರು ಇಷ್ಟಪಡಲಿಲ್ಲ.

ಕಾಡುತ್ತಿದ್ದ ರೋಗ, ಪದೇ ಪದೇ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿ ಹಾಗೂ ಶಾಲೆಯಿಂದ ದೂರ ಉಳಿದಿದ್ದು ಅಮೀನಾಳ ಬದುಕಿಗೂ ಮಾರಕವಾಯಿತು. ಆಕೆಯ ತಾಯಿಗೆ ಮಗಳನ್ನು ಓದಿಸುವಷ್ಟು ಚೈತನ್ಯ ಇರಲಿಲ್ಲ. ಹದಿಹರಯಕ್ಕೆ ಕಾಲಿಟ್ಟ ಆ ಹುಡುಗಿ ಖಿನ್ನತೆ ಅನುಭವಿಸತೊಡಗಿದಳು. ಆಕೆ ಎಂಥ ಖಿನ್ನತೆಗೆ ತುತ್ತಾದಳೆಂದರೆ ಕಡೆಗೆ ಬ್ಲೇಡ್‌ನಿಂದ ತನ್ನ ಮುಂಗೈ ಕತ್ತರಿಸಿಕೊಳ್ಳತೊಡಗಿದಳು. ಆಕೆಯ ರೋಗ ಉಲ್ಬಣವಾದಾಗಲಷ್ಟೇ ಪ್ರತ್ಯಕ್ಷವಾಗುತ್ತಿದ್ದ ತಾಯಿ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ನೀಡಿ ಆಸ್ಪತ್ರೆಯಿಂದ ಮಾಯವಾಗುತ್ತಿದ್ದಳು. ನನ್ನ ವಿದ್ಯಾರ್ಥಿಗಳು, ನರ್ಸ್‌ಗಳು ಹಾಗೂ ನಾನು ಹೆಚ್ಚೂ ಕಡಿಮೆ ಆಕೆಯ ಆರೈಕೆ ಮಾಡಿದ್ದಾಯಿತು. ಪ್ರತಿ ಬಾರಿ ದಾಖಲಾದಾಗಲೂ ಮುಂದೆ ಆಕೆಗೆ ಏನಾಗಬಹುದು ಎಂಬ ಒತ್ತಡದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆಕೆಯನ್ನು ನೋಡಿಕೊಳ್ಳಲು ಯಾರಾದರೂ ಇರಲೇಬೇಕು ಎಂಬ ನಿಯಮ ಹೇರಿದೆವು. ಯಾವಾಗಲಾದರೂ ಸಾಯುವ ಸ್ಥಿತಿಯಲ್ಲಿದ್ದ ಆಕೆಯನ್ನು ಮನೆಗೆ ಕರೆದೊಯ್ಯಲಿ ಎಂಬುದು ಅದರ ಹಿಂದಿನ ಉದ್ದೇಶವಾಗಿತ್ತು. ಸುಮಾರು ಹನ್ನೊಂದು ವರ್ಷಗಳಿಂದ ಅಮೀನಾ ಸಂಕಷ್ಟವನ್ನು ಹತ್ತಿರದಿಂದ ಅರಿತಿದ್ದೆವು.

2012ರ ಡಿಸೆಂಬರ್‌ನಲ್ಲಿ ದಾಖಲಾದಾಗ ಆಕೆ ಬದುಕಿನ ಬಹಳಷ್ಟನ್ನು ಕಳೆದುಕೊಂಡಿದ್ದಳು. ಹಿಂದೆಂದಿಗಿಂತಲೂ ಹೆಚ್ಚು ಖಿನ್ನಳಾಗಿದ್ದಳು. ನನ್ನ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಅನಿತಾ ಅವರು ಅಮೀನಾಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಮನೋವೈದ್ಯರ ಬಳಿ ಕರೆದೊಯ್ದರು. ಖಿನ್ನತೆ ಹಾಗೂ ಆಕೆ ಕೈ ಕುಯ್ದುಕೊಂಡಿದ್ದ ಕಾರಣ ಕಂಡುಕೊಂಡು ಸೂಕ್ತ ಔಷಧ ನೀಡಲಾರಂಭಿಸಿದೆವು. ಅನಿತಾ ಅವರು ಆಕೆಯ ಒಂದು ತಿಂಗಳ ಚಿಕಿತ್ಸೆಗಾಗುವಷ್ಟು ಔಷಧವನ್ನು ತಂದರು. ಸಾಮಾನ್ಯವಾಗಿ ಮನೋರೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಇರುವುದರಿಂದ ಅವರಿಗೆ ನೇರವಾಗಿ ಔಷಧ ನೀಡದೆ ಅವರ ಆರೈಕೆ ಮಾಡುವವರಿಗೆ ಅದರ ಜವಾಬ್ದಾರಿ ಒಪ್ಪಿಸಲಾಗಿರುತ್ತದೆ. ಈ ಔಷಧಗಳು ಅಪ್ಪಿತಪ್ಪಿಯೂ ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಲಾಗಿರುತ್ತದೆ.

ಆಸ್ತಮಾಕ್ಕೆ ತುತ್ತಾದ ವಯಸ್ಕ ಹೆಣ್ಣುಮಕ್ಕಳು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುವುದಿಲ್ಲ. ಆದ್ದರಿಂದ ಈ ಬಾರಿ ನಾನು ಆಕೆಯನ್ನು ಬಹಳ ದಿನಗಳವರೆಗೆ ಅಡ್ಮಿಟ್ ಮಾಡಿಕೊಂಡು ಆಸ್ತಮಾ ನಿಯಂತ್ರಣಕ್ಕೆ ತರಲು ಚಿಂತಿಸಿದ್ದೆ. ನಾನು ಗಂಭೀರ ರೋಗಕ್ಕೆ ತುತ್ತಾದ ಏಕಾಂಗಿ ಹುಡುಗಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ವಾರ್ಡ್ ನರ್ಸ್‌ಗಳು ದೂರಿದರು. ನನ್ನ ಭಾವನೆಗಳು ನಿಯಮಗಳನ್ನು ಮುರಿದಿದ್ದವು. ಆದಾಗ್ಯೂ ಆಕೆಯ ಮಾವನಿಗೆ ಹಾಗೂ ಸಂಬಂಧಪಟ್ಟವರಿಗೆ ಚಿಕಿತ್ಸೆಯ ವಿಷಯ ತಿಳಿಸಲಾಗಿತ್ತು.

ಪಕ್ಕದ ರೋಗಿಗಳಿಂದ ಹಣ ಮತ್ತಿತರ ಸಣ್ಣಪುಟ್ಟ ವಸ್ತುಗಳನ್ನು ಅಮೀನಾ ಕದಿಯುತ್ತಿರುವ ಬಗ್ಗೆ ಒಂದು ದಿನ `ಬಿ' ಯುನಿಟ್‌ನಲ್ಲಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಶಿವಶಂಕರ್ ಹೇಳಿಕೊಂಡರು. ಕಫಾ, ಗೂರಲು ಕೆಮ್ಮು ಹಾಗೂ ಎದೆ ಬಿಗಿತದಿಂದ ಬಳಲುತ್ತಿದ್ದ ಆಕೆಯನ್ನು ಡಿಸ್‌ಚಾರ್ಜ್ ಮಾಡಲೇಬೇಕಾದ ಸ್ಥಿತಿ ಎದುರಾಯಿತು. ಆಕೆಯನ್ನು ಡಿಸ್‌ಚಾರ್ಜ್ ಮಾಡಿದ್ದರ ಬಗ್ಗೆ, ಯಾರೂ ಸರಿಯಾಗಿ ನೋಡಿಕೊಳ್ಳದ ಮನೆಗೆ ಆಕೆ ತೆರಳುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲದಂತೆಯೇ ಬೇಸರ ಮೂಡಿತು. ನೈರ್ಮಲ್ಯವನ್ನೇ ಕಾಣದ ಕೊಳಗೇರಿಯಲ್ಲಿದ್ದ ಆಕೆಯ ಮನೆ ಹಾಗೂ ಕುಟುಂಬದ ಬಹುತೇಕ ಧೂಮಪಾನಿ ಸದಸ್ಯರು ಆಕೆಯ ಆರೋಗ್ಯಕ್ಕೆ ಮುಳುವಾಗಬಹುದು ಎನ್ನುವ ಆತಂಕ ಕಾಡುತ್ತಿತ್ತು. ಡಿಸ್‌ಚಾರ್ಜ್ ಮಾಡಿದ ಕೆಲ ದಿನಗಳ ತರುವಾಯ ಆಕೆ ಬಳಸುತ್ತಿದ್ದ ಖಾಲಿ ಇನ್‌ಹೇಲರ್‌ಗಳನ್ನು ಪಕ್ಕದ ರೋಗಿಗಳು ನನ್ನ ರೂಮಿಗೆ ತಂದಿಟ್ಟರು.

ವಂಶವಾಹಿಗಳು ಆಸ್ತಮಾ ಬೆಳವಣಿಗೆಗೆ ಕಾರಣವಾದರೆ ಸುತ್ತಲಿನ ಪರಿಸರ ಅದಕ್ಕೆ ಇನ್ನಷ್ಟು ತಿದಿ ಒತ್ತುತ್ತದೆ. ಅಲರ್ಜಿಕಾರಕಗಳು (ದೂಳು, ಪ್ರಾಣಿಗಳ ತುಪ್ಪಳ, ಜಿರಲೆಗಳಿಂದ ಉಂಟಾಗುವ ಅಲರ್ಜಿ), ವೈರಾಣು ಸೋಂಕು, ತಂಬಾಕು ಸೇವನೆ, ವಾಯುಮಾಲಿನ್ಯ ಮುಂತಾದವುಗಳು ರೋಗಿಯನ್ನು ಇನ್ನಷ್ಟು ಹಿಂಸಿಸಬಹುದು.

ಆಸ್ತಮಾ ಪೀಡಿತ ಚಿಕ್ಕ ವಯಸ್ಸಿನ ಮಕ್ಕಳಿಗೆ ಚಿಕಿತ್ಸೆ ನೀಡುವಾಗ ಪೋಷಕರು ಅದೊಂದು ಮಾರಣಾಂತಿಕ ಕಾಯಿಲೆ ಎಂದು ಭಾವಿಸುತ್ತಾರೆ. ವಾಸ್ತವವಾಗಿ ಪೋಷಕರು ಸತತವಾಗಿ ಔಷಧ ನೀಡುತ್ತ ಬಂದರೆ ಆಸ್ತಮಾ ಸುಲಭದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಸಿರಪ್, ಮಾತ್ರೆ ಚುಚ್ಚುಮದ್ದುಗಳಂತಲ್ಲದೆ ಆಸ್ತಮಾ ಮದ್ದನ್ನು ವಿಶೇಷ ಉಪಕರಣವೆಂದು ಕರೆಯಲಾಗುವ ಇನ್‌ಹೇಲರ್ ಬಳಸಿ ಶ್ವಾಸಕೋಶಕ್ಕೆ ನೇರವಾಗಿ ನೀಡಲಾಗುತ್ತದೆ. `ಇನ್‌ಹೇಲರ್ ಬಳಸಿ' ಎಂದಾಗ ಮಾತ್ರ ರೋಗಿಗಳು ಹಾಗೂ ಅವರ ಸಂಬಂಧಿಕರು ಕಂಗಾಲಾಗುತ್ತಾರೆ. ಮಕ್ಕಳಿಗೆ ರೋಗವಿದೆಯೆಂದು ಸುತ್ತಲಿನವರಿಗೆ ಗೊತ್ತಾದರೆ ಎಂಬ ಭೀತಿ ಅವರನ್ನು ಕಾಡುತ್ತದೆ. ಹೆಣ್ಣುಮಕ್ಕಳು ರೋಗಿಗಳಾಗಿದ್ದರಂತೂ ಅವರ ಮದುವೆ, ಸಂಸಾರದಂಥ ವಿಚಾರಗಳು ಪೋಷಕರನ್ನು ಖಿನ್ನರಾಗಿಸುತ್ತವೆ. ಕಣ್ಣಿಗೆ ತೊಂದರೆಯಾದಾಗ ಐ ಡ್ರಾಪ್ ಹಾಕುವಂತೆ, ಕಿವಿಗೆ ತೊಂದರೆಯಾದಾಗ ಇಯರ್‌ಡ್ರಾಪ್ ಹಾಕುವಂತೆ ಇದನ್ನೂ ಬಳಸಿ ಎಂದು ಎಷ್ಟೋ ಬಾರಿ ಪೋಷಕರನ್ನು ನಾನು ಮನವೊಲಿಸಿದ್ದೇನೆ. ಇನ್‌ಹೇಲರ್‌ನಷ್ಟು ಶ್ವಾಸಕೋಶಕ್ಕೆ ಹತ್ತಿರವಾಗಿ ಬೇರಾವ ಸಾಧನವೂ ಪರಿಣಾಮಕಾರಿಯಾಗಿ ಕೆಲಸ  ಮಾಡದು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಮಗುವಿನ ಕಾಯಿಲೆಯನ್ನಾಗಲಿ ಅಥವಾ ಆ ಸಾಧನವನ್ನಾಗಲಿ ಬಚ್ಚಿಡುವ ಅಗತ್ಯವಿಲ್ಲ. ಸುಲಭವಾಗಿ ನಿಯಂತ್ರಣಕ್ಕೆ ತರಬಹುದಾದ ಈ ಕಾಯಿಲೆ ಬಗ್ಗೆ ಹೆಚ್ಚು ಧೈರ್ಯದಿಂದ ಇರುವುದು ಹಾಗೂ ತಪ್ಪು ಕಲ್ಪನೆಗೆ ಒಳಗಾಗದಿರುವುದು ಮುಖ್ಯ. `ಗೀನಾ' ಅದಾಗಲೇ ಇನ್‌ಹೇಲರ್‌ಗೆ ಪರ್ಯಾಯವಾದ ಔಷಧೋಪಕರಣದ ಹುಡುಕಾಟದಲ್ಲಿ ತೊಡಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ಆಸ್ತಮಾ ಪೀಡಿತ ಮಕ್ಕಳಿಗೆ ಚಿಕಿತ್ಸೆ ಕಟ್ಟಿಟ್ಟ ಬುತ್ತಿ. ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಬೇಕು. ಅಪ್ಪಾಜಿ ಹೇಳಿದ ಒಂದು ಘಟನೆ ನೆನಪಾಗುತ್ತಿದೆ. ಐಪಿಎಸ್ ಅಧಿಕಾರಿಯೊಬ್ಬರ ಆಸ್ತಮಾ ಪೀಡಿತ ಮಗಳಿಗೆ ಮಧ್ಯರಾತ್ರಿಯಲ್ಲಿ ತೊಂದರೆ ಕಾಣಿಸಿಕೊಂಡಿತು. ನಿದ್ದೆಗಣ್ಣಿನಲ್ಲಿದ್ದ ಪೋಷಕರು ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದರಾಯಿತು ಎಂದು ಸುಮ್ಮನಾದರು. ಆದರೆ ಬೆಳಗಾಗುವುದರೊಳಗೆ ಆಕೆ ಜೀವಂತವಾಗಿರಲಿಲ್ಲ. ಹಗಲು ಉಪಟಳ ನೀಡುವುದು. ದಿನನಿತ್ಯದ ಚಟುವಟಿಕೆಗಳಿಗೆ ಮಾರಕವಾಗುವುದು, ರಾತ್ರಿಯಿಡೀ ಕೆಮ್ಮುವುದು, ರಾತ್ರಿಯಿಡೀ ನಿದ್ದೆ ಬಾರದಿರುವುದು ಇವೆಲ್ಲಾ ಆಸ್ತಮಾದ ಲಕ್ಷಣಗಳಾಗಿದ್ದು ಶ್ವಾಸಕೋಶದ ಪರೀಕ್ಷೆ ಹಾಗೂ ಚಿಕಿತ್ಸೆ ಅಗತ್ಯ.

ಯಾವುದೇ ವ್ಯಕ್ತಿ ರಾತ್ರಿಯಿಡೀ ಕೆಮ್ಮುತ್ತಿದ್ದರೆ ಆತ ಆಸ್ತಮಾಗೆ ತುತ್ತಾಗಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳುವುದು ಒಳಿತು ಎಂದು ನನ್ನ ವೃತ್ತಿ ಅನುಭವ ಹೇಳುತ್ತದೆ. ಇನ್‌ಹೇಲರ್‌ಗಳಲ್ಲಿ ಎರಡು ಬಗೆ. ಒಂದು ರೋಗವನ್ನು ನಿಯಂತ್ರಣಕ್ಕೆ ತರುತ್ತದೆ. ಮತ್ತೊಂದು ಸದ್ಯದ ಆರಾಮ ನೀಡುತ್ತದೆ. ವಾಯುನಾಳದ ಸ್ನಾಯುಗಳು ಸಂಕುಚಿತಗೊಳ್ಳುವುದರಿಂದ ಉಂಟಾಗುವ ಆಸ್ತಮಾಕ್ಕೆ ರಿಲೀವರ್‌ಗಳೆಂದು ಕರೆಯಲಾಗುವ ಇನ್‌ಹೇಲರ್‌ಗಳು ತಾತ್ಕಾಲಿಕ ಆರಾಮ ನೀಡುತ್ತವೆ. ಮತ್ತೊಂದು ಇನ್‌ಹೇಲರ್ ವಾಯುನಾಳವನ್ನು ಹಿಂಜಿ ಸೂಕ್ತ ಉಸಿರಾಟಕ್ಕೆ ದಾರಿ ಮಾಡಿಕೊಡುತ್ತದೆ.

ಈಗ `ಗೀನಾ' (GINA)ಎಂದರೇನೆಂದು ತಿಳಿಯೋಣ. ಅದು ಗ್ಲೋಬಲ್ ಇನಿಷಿಯೇಟಿವ್ ಫಾರ್ ಆಸ್ತಮಾ ಸಂಸ್ಥೆ. ಅದರ ವೆಬ್‌ಸೈಟ್ ವಿಳಾಸ: http://www.ginasthma.orgಇಲ್ಲಿಗೆ ತೆರಳಿ ನೀವು ಆಸ್ತಮಾಕ್ಕೆ ಸಂಬಂಧಿಸಿದ ಔಷಧ ಹಾಗೂ ಉಪಕರಣಗಳ ಮಾಹಿತಿ ಪಡೆಯಬಹುದು.

ಈ ವಾರದ ಸಿಹಿ ಸುದ್ದಿ ಮಹದೇವ ಅವರಿಗೆ ಸಂಬಂಧಿಸಿದ್ದು. `ಅಂತಃಕರಣ'ದ ಓದುಗರಾದ ಅವರು ಮೆಟ್ರೊ ಕಾಮಗಾರಿಯಿಂದ ಗೊಂದಲಮಯವಾಗಿದ್ದ ಆಸ್ಪತ್ರೆಯ ದಾರಿಗಳಲ್ಲಿ ಸಾಗಿ ನನ್ನನ್ನು ಅರಸಿ ಬಂದಿದ್ದರು. ಅವರು ಕಾರ್ಡಿಯೋಮಿಯೋಪಥಿ ಅವಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ ಸಹಾಯ ಮಾಡಲು ಬಂದಿದ್ದರು. ನಾನವರಿಗೆ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದೆ. ನನ್ನಂಥವರಿಗೆ ನಿಮ್ಮನ್ನು ಈಮೇಲ್ ಮೂಲಕ ಸಂಪರ್ಕಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಮುಖತಃ ಭೇಟಿಯಾಗಬೇಕಾಯಿತು ಎಂದರು. ಅವರಂಥ ಹಿರಿಯ ಓದುಗರಿಗೆ ಅನುಕೂಲವಾಗಲೆಂದು ಪೋಸ್ಟ್‌ಬಾಕ್ಸ್ ನಂಬರ್ ಒಂದನ್ನು ಹೊಂದಲು ಚಿಂತಿಸುತ್ತಿದ್ದೇನೆ. ಇದನ್ನು ಅವರಿಗೂ ಹೇಳಿದೆ.

ಪತ್ರಿಕೆಗಳಲ್ಲಿ ಕೂಡ ಪ್ರಕಟವಾದ ಕೆಟ್ಟ ಸುದ್ದಿ ಎಂದರೆ, ಏಪ್ರಿಲ್ 22ರಂದು ನನ್ನ ಆತ್ಮೀಯ ಗೆಳತಿ, ವೈದ್ಯೆ ಡಾ. ಚಿತ್ರಾ ನರಸಿಂಹನ್ ಅವರ ತಾಯಿ ಕೊಲೆಗೀಡಾದದ್ದು. ಮನೆಯ ಹಿರಿಯ ಜೀವಗಳನ್ನು ನೋಡಿಕೊಳ್ಳುವ ಚಿತ್ರಾ ಅವರದು ತುಂಬಾ ಮೆದು ಮನಸ್ಸು. ಹೃದ್ರೋಗಗಳಿಂದ ಬಳಲುತ್ತಿದ್ದ ನನ್ನ ಬಡ ರೋಗಿಗಳಿಗೆ ಕೂಡ ಅವರು ಅನೇಕ ವರ್ಷಗಳಿಂದ ಸಹಾಯ ಮಾಡುತ್ತಿದ್ದರು. ಘಟನೆಯಿಂದ ಸಾಕಷ್ಟು ನೊಂದಿದ್ದರೂ ಅದನ್ನೆಲ್ಲಾ ತಹಬಂದಿಗೆ ತಂದುಕೊಂಡು ಅಂಕಣ ಬರೆಯುತ್ತಿರುವ ನಾನು ಚಿತ್ರಾರ ಮನಸ್ಸನ್ನು ದೇವರು ಸಂತೈಸಲಿ, ಅವರ ತಾಯಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹಾರೈಸುತ್ತೇನೆ.

ಮತ್ತೊಂದು ದಿನ ನನ್ನ ದಾನಧರ್ಮದ ಬಗ್ಗೆ ಅಮ್ಮ ಇದ್ದಕ್ಕಿದ್ದಂತೆ ಎಚ್ಚರಿಕೆ ನೀಡಿದರು. ನಿವೃತ್ತಿಯ ಹೊಸ್ತಿಲಿನಲ್ಲಿರುವ, ಮಧುಮೇಹದಿಂದ ಬಳಲುತ್ತಿರುವ ನನ್ನ ಬಗ್ಗೆ ಅವರಿಗೆ ಆತಂಕ. `ಯಾರು ನಿನ್ನನ್ನು ನೋಡಿಕೊಳ್ಳುತ್ತಾರೆ. ಹಣ ಬೇಕೆಂದಾಗ ಸಿಗುವುದಿಲ್ಲ. ಸ್ವಲ್ಪ ಎಚ್ಚರದಿಂದಿರು. ನನ್ನ ಮಗಳು ಹಾಗೂ ಆಕೆಯ ಪ್ರಾಮಾಣಿಕ ಸಂಪಾದನೆಯ ಬಗ್ಗೆ ನಾನು ಚಿಂತಿತಳಾಗಿದ್ದೇನೆ' ಎಂದರು. ಇದನ್ನು ನನ್ನ ವಿದ್ಯಾರ್ಥಿಗಳಿಗೆ ಹೇಳಿದ್ದೆ. ಆಗಿನಿಂದ ಅವರು ನನ್ನ ಬಳಿ ಅಮೀನಾಳ ಹಣದ ಅಗತ್ಯವನ್ನಾಗಲಿ, ಅವಳು ಸುಮಾರು 200-300 ರೂಪಾಯಿ ಬೆಲೆ ಬಾಳುವ, ಮೂರು ತಿಂಗಳ ಕಾಲ ಬಳಸಲು ಸಾಧ್ಯವಿರುವ, ಇನ್‌ಹೇಲರ್ ಖರೀದಿಸಲು ಪಕ್ಕದ ರೋಗಿಗಳಿಂದ ಹಣ ಕದಿಯುತ್ತಿರುವುದನ್ನಾಗಲೀ ಹೇಳಲಿಲ್ಲ.  

ಕಳೆದ ನಾಲ್ಕು ತಿಂಗಳಿನಿಂದ ಅಮೀನಾ ಆಸ್ಪತ್ರೆಗೆ ಬಾರದಿರುವುದು ಹಾಗೂ ಆಕೆಯ ಮಾವನ ಫೋನ್ ನಂಬರ್ ಅಸ್ತಿತ್ವದಲ್ಲಿ ಇಲ್ಲದಿರುವ ಕುರಿತಂತೆ ಸಿಸ್ಟರ್ ಅಲೈಸ್ ಇದ್ದಕ್ಕಿದ್ದಂತೆ ಆತಂಕ ವ್ಯಕ್ತಪಡಿಸಿದರು.

ಅಮೀನಾ ಎಲ್ಲಿ? ಖಿನ್ನತೆಯಿಂದ ಬಳಲುತ್ತ, ಮುಂಗೈ ಕತ್ತರಿಸಿಕೊಂಡಿದ್ದ, ಇನ್‌ಹೇಲರ್‌ಗಳನ್ನು ಖರೀದಿಸಲಾಗದ ಸ್ಥಿತಿಯಲ್ಲಿದ್ದ, ಮನೆಯಲ್ಲೇ ಕಾಳಜಿ ವಹಿಸುವವರಿಲ್ಲದೆ ಆಗಂತುಕ ವಾತಾವರಣ ಅನುಭವಿಸುತ್ತಿದ್ದ ಅಮೀನಾಳ ಬಗ್ಗೆ ಕಳವಳಗೊಂಡಿದ್ದೆ. ಮನೆಯಲ್ಲಿಯೇ ಸುಲಭವಾಗಿ ಇನ್‌ಹೇಲರ್ ಬಳಸಬಹುದಾದ ಸೌಲಭ್ಯ ಇರುವಾಗ ಕಾಯಿಲೆ ಗಂಭೀರವಾಗುವವರೆಗೂ ಕಾದು ಆನಂತರ ಆಸ್ತಮಾ ಪೀಡಿತರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಇನ್‌ಹೇಲರ್ ಬಳಸುವುದು ಗೊತ್ತಿಲ್ಲದ ತುರ್ತು ಸಂದರ್ಭದಲ್ಲಿ ಅವರು ದಾಖಲಾದರೆ ಸಾಕು.

ಇನ್‌ಹೇಲರ್‌ನಂಥ ಔಷಧೋಪಚಾರದಿಂದ ಆಸ್ತಮಾವನ್ನು ಸುಲಭವಾಗಿ ನಿಯಂತ್ರಣಕ್ಕೆ ತರಬಹುದು ಹಾಗೂ ಆಸ್ತಮಾ ಪೀಡಿತ ಮಗುವಿನ ಬಗ್ಗೆ ಕಂಗಾಲಾಗಬೇಕಿಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ ಹಾಗೂ ಉಳಿದವರಿಗೂ ಹೇಳಿ. (ರೋಗಿಯ ಹೆಸರು ಬದಲಿಸಲಾಗಿದೆ)
-ಡಾ.ಆಶಾ ಬೆನಕಪ್ಪ.
ashabenakappa@yahoo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT