ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ರಾಜಕಾರಣದಲ್ಲಿ ನಗಣ್ಯರಾದ ಮಹಿಳೆಯರು

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಅಯೋವಾ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಭಾರತದ ರಾಜಕಾರಣದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತಂತೆ ಏರ್ಪಡಿಸಿದ್ದ ನನ್ನ ಉಪನ್ಯಾಸದ ಮುಂದುವರೆದ ಭಾಗವಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಡನೆ ಸಂವಾದ ನಡೆದಿತ್ತು. ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡುವ ಮೂಲಕ ನಮ್ಮ ದೇಶ ಅವರ ಸಶಕ್ತೀಕರಣದ ಹಾದಿಯಲ್ಲಿ ವಿಶೇಷವಾದ ಹೆಜ್ಜೆಯನ್ನಿಟ್ಟಿದೆ ಎಂಬ ಅಭಿಪ್ರಾಯ ಚರ್ಚೆಯಲ್ಲಿ ಮೂಡಿ ಬಂದಿದ್ದು, ಸಹಜವಾಗಿಯೇ ನಮ್ಮ ಗಮನ ಅಮೆರಿಕದ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯದತ್ತ ಹರಿದಿತ್ತು.

ಈ ಹಂತದಲ್ಲಿ ಮಾತನಾಡಿದ ವಿಭಾಗದ ಹಿರಿಯ ಪ್ರಾಧ್ಯಾಪಕರೊಬ್ಬರು ಅಯೋವಾ ರಾಜ್ಯದ ಬಗ್ಗೆಯೇ ಪ್ರಸ್ತಾಪ ಮಾಡುತ್ತಾ, ಈ ರಾಜ್ಯ ತನ್ನ ಇತಿಹಾಸದಲ್ಲಿಯೇ ಒಬ್ಬ ಮಹಿಳಾ ಪ್ರತಿನಿಧಿಯನ್ನು ಅಮೆರಿಕದ ಸಂಸತ್ತಿಗಾಗಲಿ ಅಥವಾ ರಾಜ್ಯದ ರಾಜ್ಯಪಾಲರ ಹುದ್ದೆಗಾಗಲಿ ಆಯ್ಕೆ ಮಾಡಿಲ್ಲ ಎಂದಾಗ ನನಗೆ ಆಶ್ಚರ್ಯವಾಗಿತ್ತು. ಮಹಿಳೆಯರೇ ಹೆಚ್ಚಾಗಿರುವ ಜನಸಂಖ್ಯೆಯನ್ನು ಹೊಂದಿರುವ ಈ ರಾಜ್ಯದಲ್ಲಿ ಸಾರ್ವಜನಿಕ ಅಭಿಪ್ರಾಯ ಸಕ್ರಿಯ ರಾಜಕಾರಣದಲ್ಲಿ ಮಹಿಳೆಯರು ಭಾಗವಹಿಸುವುದರ ಪರವಾಗಿಲ್ಲ ಎಂಬ ವಿಷಯವೂ ಈ ಚರ್ಚೆಯ ಸಮಯದಲ್ಲಿ ಹೊರಬಿತ್ತು.

ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ನೀಡಬೇಕೆಂಬ ಚಳವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಯೋವಾ ರಾಜ್ಯದಲ್ಲೇ ಮಹಿಳೆಯರಿಗೆ ರಾಷ್ಟ್ರ ರಾಜಕಾರಣದಲ್ಲಿ ಭಾಗವಹಿಸಲು ಅವಕಾಶ ದೊರೆತಿಲ್ಲವೆಂದರೆ ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಕುತೂಹಲ ನನ್ನಲ್ಲಿ ಅರಳಿತ್ತು. ಅಮೆರಿಕದ ರಾಜಕಾರಣದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುತ್ತಾ ಹೋದ ಹಾಗೆಲ್ಲ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರ ಅವಗಣನೆ ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಲ್ಲೇ ಈ ಪರಿಸ್ಥಿತಿ ಕಂಡು ಬರುತ್ತದೆ ಎಂಬ ವಿಷಯ ವೇದ್ಯವಾಯಿತು.

ಜಗತ್ತಿನ 188 ದೇಶಗಳ ರಾಷ್ಟ್ರೀಯ ಸಂಸತ್ತುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣವನ್ನು ಕುರಿತಂತೆ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಅಮೆರಿಕ 69ನೇ ಸ್ಥಾನದಲ್ಲಿದೆ. ಈ ದೇಶದ ಸಂಸತ್ತಿನಲ್ಲಿ, ಎಂದರೆ ಕಾಂಗ್ರೆಸ್ಸಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡ 16.8 (ಅಮೆರಿಕದ ಕಾಂಗ್ರೆಸ್ಸಿನ ಒಟ್ಟು ಸದಸ್ಯರ ಸಂಖ್ಯೆ 535 ರಷ್ಟಿದ್ದು, ಇದರಲ್ಲಿ 90 ಮಂದಿ ಮಹಿಳೆಯರು). ಇಲ್ಲಿನ ಸಂಸತ್ತಿನ ಎರಡು ಸದನಗಳಾದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕ್ರಮವಾಗಿ ಶೇ 17 ಹಾಗೂ ಶೇ 16.8ರಷ್ಟಿದೆ. ಇದರಲ್ಲಿ ಆಫ್ರಿಕನ್-ಅಮೆರಿಕನ್ ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಮಹಿಳೆಯರ ಪಾಲು ಶೇ 4 ರಷ್ಟು ಮಾತ್ರವಿದೆ.

ಕಾಲದಿಂದ ಕಾಲಕ್ಕೆ ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಗಮನಾರ್ಹವಾದ ಹೆಚ್ಚಳವಾಗಿಲ್ಲ. ಇದುವರೆಗೂ ಈ ದೇಶದ ಅಧ್ಯಕ್ಷ ಸ್ಥಾನಕ್ಕಾಗಲಿ, ಉಪಾಧ್ಯಕ್ಷ ಸ್ಥಾನಕ್ಕಾಗಲಿ ಮಹಿಳೆಯೊಬ್ಬರು ಆಯ್ಕೆಯಾಗುವುದಿರಲಿ, ಚುನಾವಣೆಗಳಲ್ಲಿ ಸ್ಪರ್ಧಿಸಲು ಕೂಡ ಅವಕಾಶ ದೊರೆತಿಲ್ಲವೆನ್ನುವುದು ಗಮನಾರ್ಹ. ಮುಂದಿನ ವರ್ಷ, ಅಂದರೆ 2012ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಪ್ರಬಲ ಸ್ಪರ್ಧಿ ಎಂದು ಬಿಂಬಿಸಲ್ಪಡುತ್ತಿದ್ದ ಸಾರಾ ಪೆಲಿನ್ ಎಂಬಾಕೆ ತೀರಾ ಇತ್ತೀಚೆಗಷ್ಟೇ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ರಿಪಬ್ಲಿಕನ್ ಪಕ್ಷದ ವಲಯದಲ್ಲಿ ಮಿಷೆಲ್ ಬಾಚ್‌ಮನ್ ಎಂಬ ಮತ್ತೊಂದು ಹೆಸರು ಚಲಾವಣೆಯಲ್ಲಿದ್ದು ಈಕೆಯ ಚುನಾವಣಾ ಕನಸುಗಳು ಕೂಡ ಈ ದೇಶದ ಪುರುಷಕೇಂದ್ರಿತ ರಾಜಕೀಯದಲ್ಲಿ ಹೆಚ್ಚು ಕಡಿಮೆ ಮುಗಿದ ಅಧ್ಯಾಯ ಎನಿಸುತ್ತದೆ.

ಮಹಿಳೆಯರಿಗೆ ಅತಿ ಹೆಚ್ಚಿನ ಆಯ್ಕೆಯ ಸ್ವಾತಂತ್ರ ಸಮಾನತೆಗಳಿವೆ ಎಂದು ಬಿಂಬಿಸಲ್ಪಡುವ ಅಮೆರಿಕನ್ ಸಮಾಜದಲ್ಲಿ  ಲಿಂಗ ಪೂರ್ವಗ್ರಹಗಳು ತೀರಾ ಆಳವಾಗಿ ಬೇರೂರಿರುವುದಕ್ಕೆ ಈ ದೇಶದ ರಾಜಕಾರಣವೇ ಸಾಕ್ಷಿ. ಇಂದಿಗೂ ಮಹಿಳೆಯರ ನಾಯಕತ್ವದ ಪರಿಕಲ್ಪನೆಯನ್ನೇ ಒಪ್ಪಿಕೊಳ್ಳಲು ತಯಾರಿಲ್ಲದಂಥ ಮತದಾರರು ಹಾಗೂ ರಾಜಕೀಯ ಪಕ್ಷಗಳ ಮುಖಂಡರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ಕಾಣುತ್ತದೆ. ಮಹಿಳೆಯರು ಸಮರ್ಥ ನಾಯಕರಾಗಬಲ್ಲರು ಎಂಬ ವಿಷಯವನ್ನು ಮಹಿಳೆಯರೂ ಸೇರಿದಂತೆ ಅನೇಕರು ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರ ಸೀಮಿತ ಪ್ರವೇಶಕ್ಕೆ, ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಅಭ್ಯರ್ಥಿಗಳ ಪರ ಮತಗಳನ್ನು ಚಲಾಯಿಸದಿರುವುದೂ ಒಂದು ಪ್ರಮುಖ ಕಾರಣ ಎಂಬ ಅಭಿಪ್ರಾಯ ಅನೇಕ ರಾಜಕೀಯ ವಿಶ್ಲೇಷಣೆಗಳಲ್ಲಿ ಕಂಡು ಬರುತ್ತದೆ.

`ಪ್ರತಿಭೆ~, `ಸಾರ್ಥ್ಯ~ ಹಾಗೂ `ಸ್ವಶಕ್ತಿ~ ಈ ಮೂರು ಗುಣಗಳಿದ್ದರೆ ಅಮೆರಿಕದಲ್ಲಿ ಯಶಸ್ಸನ್ನು ಸಾಧಿಸಲು ಯಾವ ಅಡ್ಡಿಯೂ ಇರುವುದಿಲ್ಲ ಎಂಬ ಭಾವನೆ ಇದೆ. ಆದರೆ ರಾಜಕಾರಣವೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲಿಗೆ ಇದು ಅನ್ವಯಿಸುವಂತೆ ಕಾಣುವುದಿಲ್ಲ. ಒಬ್ಬ ಮಹಿಳೆ ಸಾರ್ವಜನಿಕ ಬದುಕಿನಲ್ಲಿ ಪ್ರವೇಶ ಪಡೆಯಲು ಹಾಗೂ ಮೇಲ್ಮುಖ ಚಲನೆಯನ್ನು ಸಾಧಿಸಲು ಅನೇಕ ಅಡ್ಡಿ-ಆತಂಕಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದು ಅವರನ್ನು ಕುರಿತ ರಾಜಕೀಯ ಪಕ್ಷಗಳ ಧೋರಣೆ.

ಇತ್ತೀಚೆಗೆ ಪ್ರಕಟವಾದ ವರದಿಯೊಂದರ ಪ್ರಕಾರ ಮಹಿಳೆಯರನ್ನು ಸಕ್ರಿಯ ರಾಜಕಾರಣ ಪ್ರವೇಶಿಸದಂತೆ ತಡೆಯುವಲ್ಲಿ ಪಕ್ಷಗಳ ನಾಯಕತ್ವದ ಸ್ಥಾನದಲ್ಲಿರುವವರ ಸ್ತ್ರೀ ವಿರೋಧಿ ಧೋರಣೆಗಳೇ ಪ್ರಮುಖ ಪಾತ್ರವನ್ನು ವಹಿಸುವುದು. ಚುನಾವಣೆಗಳಲ್ಲಿ ಸ್ಪರ್ಧಿಸಲು ಹಣದ ಬೆಂಬಲ ಮತ್ತೊಂದು ಪ್ರಧಾನ ಅಂಶವಾಗಿದ್ದ, ಈ ಹಣವನ್ನು ಒದಗಿಸುವ `ಶಕ್ತಿ~ ಪುರುಷರ ಕೈಯಲ್ಲಿ ಕೇಂದ್ರಿಕೃತವಾಗಿರುವುದರಿಂದ ಅನೇಕ ಮಹಿಳೆಯರು, ಈ ಬೆಂಬಲ ದೊರೆಯದಿದ್ದಾಗ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ.

ರಾಜಕೀಯ ಪಕ್ಷಗಳ ನಕಾರಾತ್ಮಕ ಧೋರಣೆಗಳು ಒಂದೆಡೆ ಮಹಿಳೆಯರ ರಾಜಕೀಯ ಆಶೋತ್ತರಗಳಿಗೆ ಅಡ್ಡಿಯನ್ನುಂಟು ಮಾಡಿದರೆ, ಮತ್ತೊಂದೆಡೆ ಅಮೆರಿಕನ್ ಸಮಾಜದ ಲಿಂಗ ಪೂರ್ವಗ್ರಹಗಳು ಅವರಿಗೆ ಸವಾಲಾಗಿ ನಿಂತಿವೆ. ಇಂದಿಗೂ ಬಹುಮಂದಿ ಮಹಿಳೆಯನ್ನು `ಮಡದಿ~ ಅಥವಾ `ತಾಯಿ~ ಎಂಬ ಪಾತ್ರ ಮಾದರಿಗಳ ಚೌಕಟ್ಟಿನಲ್ಲಿಯೇ ಬಂಧಿಸಿರುವುದರಿಂದ ಅವರಿಗೆ ಸಂಸತ್ತಿಗಿಂತ ಸಂಸಾರವೇ ಸೂಕ್ತ ಸ್ಥಳ ಎಂಬ ಗುಂಗಿನಲ್ಲೇ ಇದ್ದಾರೆ.

ವಿವಾಹಿತ ಮಹಿಳೆಯರನ್ನು ಕುರಿತ ಧೋರಣೆ ಹೀಗಾದರೆ, ಅವಿವಾಹಿತ ಮಹಿಳೆಯರು ಚುನಾವಣೆಗಳಿಗೆ ಸ್ಪರ್ಧಿಸಿದಾಗ ಅವರು ಎದುರಿಸುವಂಥ ಪರಿಸ್ಥಿತಿಯೇ ಬೇರೆ. ಕುಟುಂಬವನ್ನು ಸುತ್ತುವರೆದಿರುವ ಮೌಲ್ಯಾಚರಣೆಗಳ ಪರಿಚಯವಿಲ್ಲದಿರುವುದರಿಂದ ವಿವಾಹವಾಗದ ಅಥವಾ ವಿವಾಹ ವಿಚ್ಛೇದನವನ್ನು ಪಡೆದಿರುವ ಮಹಿಳೆಯರು ಕುಟುಂಬಸ್ಥರ ಸಮಸ್ಯೆಗಳಿಗೆ ಸ್ಪಂದಿಸುವಂಥ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ತಾವು ಮತ ಹಾಕುವುದಿಲ್ಲ ಎಂಬುದು ಇಲ್ಲಿ ಅನೇಕರ ಮನಃಸ್ಥಿತಿ. ಇಂಥ ವೈರುಧ್ಯಗಳ ನಡುವೆ ಸಿಲುಕಿರುವ ಮಹಿಳೆಯರನೇಕರಿಗೆ ರಾಜಕೀಯ ಪ್ರವೇಶ ದುಸ್ತರವೆನಿಸುವುದು.

ರಾಜಕಾರಣದಲ್ಲಿರುವ ಪತಿಯನ್ನು ನೆರಳಿನಂತೆ ಹಿಂಬಾಲಿಸಿ, ಆತನ ರಾಜಕೀಯ ಅವಧಿ ಪೂರ್ಣಗೊಂಡ ನಂತರವೋ ಅಥವಾ ಅದು ಹಠಾತ್ತನೆ ಕೊನೆಗೊಂಡಾಗ ಪತಿಯ ನಾಮಬಲದ ಮೇಲೆ ಆತನ ಹೆಂಡತಿ ರಾಜಕೀಯ ಪ್ರವೇಶವನ್ನು ಮಾಡುವುದು ಭಾರತದಂಥ ಸಂಪ್ರದಾಯಬದ್ಧ ಸಮಾಜದಲ್ಲಿ ಮಾತ್ರ ಸಾಧ್ಯ ಎಂದು ಹೀಯಾಳಿಸಿದವರುಂಟು. ಆದರೆ ಇಂಥ ಪ್ರವೃತ್ತಿಗಳು `ಪ್ರಗತಿಪರ~ ಎಂದು ಅನೇಕರು ಭಾವಿಸಿರುವಂಥ ಈ ವ್ಯವಸ್ಥೆಯಲ್ಲಿಯೂ ಇದೆ ಎನ್ನುವುದಕ್ಕೆ ಹಾಲಿ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾದ ಹಿಲರಿ ಕ್ಲಿಂಟನ್ ಅವರೇ ಸಾಕ್ಷಿ.

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿಯ ಮೂಲ ನಾಮ ಹಿಲರಿ ರೋಡಾಮ್. ಪತಿ ರಾಜಕೀಯ ವಲಯದಲ್ಲಿ ಮೇಲೆರುತ್ತಾ ಹೋಗಿ ಅಧ್ಯಕ್ಷ ಗಾದಿಯನ್ನೇರುವ ವೇಳೆಗೆ ಹಿಲರಿ ರೋಡಾಮ್ ತನ್ನ ಹೆಸರನ್ನು ಹಿಲರಿ ಕ್ಲಿಂಟನ್ ಎಂದು ಬದಲಿಸಿಯಾಗಿತ್ತು. ಆಕೆ ಇದುವರೆಗೂ ರಾಜಕಾರಣದಲ್ಲಿ ಮುಂದುವರೆದು ಮೇಲೇರಲು ಸಾಧ್ಯವಾಗಿದ್ದು `ಕ್ಲಿಂಟನ್ ನೆಂಟಸ್ತನ~ ಹೊಂದಿದ್ದರಿಂದ ಎನ್ನುವ ಮಾತು ಇಲ್ಲಿನ ರಾಜಕೀಯ ವಲಯಗಳಲ್ಲಿ ಆಗಾಗ್ಗೆ ಕೇಳಿ ಬರುತ್ತದೆ. ಇದೇ ಹಿಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು ಹಾಗೂ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಈಗಿನ ಅಧ್ಯಕ್ಷ ಒಬಾಮಾ ಪರವಾಗಿ ಸ್ಪರ್ಧೆಯಿಂದ ನಿರ್ಗಮಿಸಿದ್ದು ಮೇಲ್ನೋಟಕ್ಕೆ ಆಕೆಯ ವೈಯಕ್ತಿಕ ತೀರ್ಮಾನಗಳಂತೆ ಕಂಡು ಬಂದರೂ ಮಹಿಳೆಯೊಬ್ಬಳು ಈ ದೇಶದ ಅಧ್ಯಕ್ಷಳಾಗಲು ಸಾಧ್ಯವೇ ಎನ್ನುವ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಈ ದೇಶದ ರಾಜಕಾರಣದಲ್ಲಿ ಮಹಿಳೆಯರನ್ನು ಎರಡನೆಯ ದರ್ಜೆಗಳ ಪ್ರಜೆಗಳಂತೆ ನಡೆಸಿಕೊಳ್ಳಲು ಇಲ್ಲಿನ ಮಾಧ್ಯಮಗಳ ನಕಾರಾತ್ಮಕ ಧೋರಣೆಗಳೂ ಒಂದು ಪ್ರಮುಖ ಕಾರಣವೆನ್ನಲಾಗಿದೆ. ಮಹಿಳಾ ಅಭ್ಯರ್ಥಿಗಳನ್ನಾಗಲಿ, ಮಹಿಳಾ ರಾಜಕಾರಣಿಗಳನ್ನಾಗಲಿ ಮಾಧ್ಯಮಗಳಲ್ಲಿ, ಅದರಲ್ಲೂ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಂಬಿಸುವಾಗ ಅವರ ಆಂತರಿಕ ಶಕ್ತಿಗಳಿಗಿಂತ ಬಾಹ್ಯನೋಟಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತದೆ ಎಂಬುದು ಇಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಅಭಿಪ್ರಾಯ. ನಾನು ಕಂಡ ಹಾಗೆ ಕೂಡ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಇಚ್ಛೆಯನ್ನು ಪ್ರಕಟಿಸಿರುವ ಮಹಿಳಾ ಅಭ್ಯರ್ಥಿಗಳನ್ನು ಅನೇಕ ಟಿ.ವಿ ಕಾರ್ಯಕ್ರಮಗಳಲ್ಲಿ ಸಂದರ್ಶಿಸುವಾಗ ಅಥವಾ ಅವರ ಚುನಾವಣಾ ಪ್ರಚಾರದ ವೈಖರಿಯನ್ನು ಪ್ರದರ್ಶಿಸುವಾಗ ಗಾಂಭೀರ‌್ಯದ ಅಭಾವ ಎದ್ದು ಕಾಣುತ್ತದೆ.

ಇತ್ತೀಚೆಗೆ ಟಿ.ವಿ ವಾಹಿನಿಯೊಂದರಲ್ಲಿ ಮೂಡಿ ಬಂದ ಸಂದರ್ಶನವೊಂದರಲ್ಲಿ ರಾಷ್ಟ್ರದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂದಿರುವ ಮಹಿಳೆಯೊಬ್ಬರನ್ನು ಸಂದರ್ಶನಕಾರರು `ನೀವು ಜಗಳಗಂಟರೇ?~ ಎಂದು ಕೇಳಿದ ಪ್ರಶ್ನೆಗೆ ಆಕೆ ಪ್ರತಿಕ್ರಿಯಿಸುತ್ತಾ `ನನ್ನ ವಿದ್ಯಾರ್ಹತೆ, ವೃತ್ತಿ ಕೌಶಲ್ಯ, ಸಾಮಾಜಿಕ ಕಳಕಳಿ ಮುಂತಾದ ಯಾವುದೇ ಗುಣಗಳ ಬಗ್ಗೆ ಪ್ರಸ್ತಾಪಿಸದೆ ನನ್ನನ್ನು, ಜಗಳಗಂಟಿಯೆಂದು ಬಿಂಬಿಸಲು ಯತ್ನಿಸುವುದು ಯಾವ ನ್ಯಾಯ?~ ಎಂದು ಕೇಳಿದ್ದು ಈ  ಸಮಾಜದಲ್ಲಿ ಮಹಿಳೆಯರು ಎದುರಿಸಬೇಕಾದಂಥ ಸ್ಥಿತಿಗಳಿಗೆ ಒಂದು ನಿರ್ದಶನವಷ್ಟೆ.

ರಾಜಕೀಯ ಅಧಿಕಾರದ ಸ್ಥಾನಗಳನ್ನು ಪಡೆಯಲಿಚ್ಛಿಸುವ ಮಹಿಳೆಯರ ವೈಯಕ್ತಿಕ ಬದುಕಿನ ಬಗ್ಗೆ ಹಾಗೂ ಅವರ ಉಡುಗೆ ತೊಡುಗೆಗಳ ಬಗ್ಗೆ ಕೆಲವೊಮ್ಮೆ ಸಭ್ಯತೆಯ ಎಲ್ಲೆಯನ್ನು ಮೀರಿದಂಥ ರೀತಿಯಲ್ಲಿ ಅಂತರ್ಜಾಲದಲ್ಲಿ ಟೀಕೆಗಳು ಅಥವಾ ಚಿತ್ರಗಳು ಮೂಡಿ ಬರುತ್ತಿದ್ದು, ಮಹಿಳೆಯರನ್ನು ಕುರಿತ ದುರ್ಭಾವನೆಗಳು ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಆಧುನಿಕತೆಯ ತುತ್ತತುದಿಯಲ್ಲಿದೆ ಎಂದು ಬಿಂಬಿಸಲ್ಪಡುತ್ತಿರುವ ಅಮೆರಿಕದಲ್ಲಿ ಮಹಿಳೆಯರು ಅಧಿಕಾರ ವ್ಯವಸ್ಥೆಯೊಳಗೆ ಪ್ರವೇಶ ಪಡೆಯಲು ಪಡಬೇಕಾದ ಬವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಅಮೆರಿಕದಿಂದ ಕಠಿಣ ಕ್ರಮಗಳಿಗೆ ಗುರಿಯಾಗಿರುವ ದೇಶಗಳಲ್ಲಿ ಕೂಡ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯ ಈ ದೇಶಕ್ಕಿಂತ ಹೆಚ್ಚಾಗಿರುವುದು ಕಂಡು ಬರುತ್ತದೆ. ಮಹಿಳಾ ಹಕ್ಕುಗಳೂ ಮಾನವ ಹಕ್ಕುಗಳೇ ಎಂದು ಅಮೆರಿಕಾ ಎಂದು ಒಪ್ಪಿಕೊಳ್ಳುತ್ತದೆಯೋ ಕಾದು ನೋಡಬೇಕು.

(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ:
editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT