ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಏನಾಗುತ್ತಿದೆ? ಸೌಖ್ಯ ತಾನೇ?

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಈ ಎರಡು ಪ್ರಶ್ನೆಗಳನ್ನು ದಾಟಿಯೇ ಮಾತು ಮುಂದು ವರಿಸಬೇಕಾದ ಸಂದರ್ಭ ಇದು. ಬಹುಶಃ ಅಮೆರಿಕದಲ್ಲಿ ವಾಸಿಸುತ್ತಿರುವ ಪ್ರತೀ ಭಾರತೀಯನೂ ಕೆಲ ದಿನಗಳಿಂದ ಈ ಪ್ರಶ್ನೆಗಳನ್ನು ತನಗೇ ತಾನೇ ಕೇಳಿಕೊಳ್ಳುತ್ತಿದ್ದಾನೆ. ಉಭಯ ಕುಶಲೋಪರಿಗೆಂದು ಭಾರತಕ್ಕೆ ಕರೆ ಮಾಡಿ ತಂದೆ ತಾಯಿ, ಸ್ನೇಹಿತರೊಂದಿಗೆ ಮಾತನಾಡುವಾಗಲೂ ಈ ಪ್ರಶ್ನೆಗಳು ಮರುಕಳಿಸುತ್ತಿವೆ. ಅಮೆರಿಕ ಎಂಬ ‘ಲ್ಯಾಂಡ್ ಆಫ್ ಆಪರ್ಚುನಿಟಿ’ಯತ್ತ ಕಣ್ಣರಳಿಸಿ ಬಂದು, ಮನಸ್ಸಿನಲ್ಲೇ 1 x 18 ಎಂದು ಗುಣಿಸಲು ಆರಂಭಿಸಿದ ಪೀಳಿಗೆಯಿಂದ ಹಿಡಿದು ಇತ್ತೀಚೆಗೆ 1 x 66 ಮಗ್ಗಿ ಕಲಿತವರ ತನಕ ಎಲ್ಲರನ್ನೂ ಈ ಪ್ರಶ್ನೆಗಳು ಕಾಡುತ್ತಿವೆ. ಎದೆಯಾಳದಲ್ಲಿ ಸಣ್ಣದೊಂದು ಅಧೀರತೆ ಢವಗುಟ್ಟುತ್ತಿದೆ.

ಹಾಗಂತ ಬಂದೂಕು ಆಟಿಕೆಯಾಗಿರುವ ಅಮೆರಿಕದಲ್ಲಿ ಆತಂಕ ಹೊಸದೇನಲ್ಲ. ‘ಕತ್ತಲಾದ ಮೇಲೆ ಒಬ್ಬರೇ ಹೊರಗೆ ತಿರುಗುವುದು ಬೇಡ. ಒಂದಷ್ಟು ಪುಡಿಕಾಸನ್ನು ಅಂಗಿಯ ಮೇಲಿನ ಕಿಸೆಯಲ್ಲಿ ಇಟ್ಟುಕೊಂಡಿರಿ, ಆಗಂತುಕರು ಎದುರಾಗಿ ಹಣಕ್ಕೆ ಒತ್ತಾಯಿಸಿದರೆ ಮೇಲ್ಜೇಬಿನ ಹಣವನ್ನು ಕೈಗಿತ್ತು ಮಾತು ಬೆಳೆಸದೇ ಹೆಜ್ಜೆಹಾಕಿ. ಸಾರ್ವಜನಿಕ ವಾಹನಗಳಲ್ಲಿ, ಮಾರುಕಟ್ಟೆ ಮುಂತಾದ ಪ್ರದೇಶಗಳಲ್ಲಿ ಯಾರೊಂದಿಗೂ ವಾದಕ್ಕೆ ಇಳಿಯುವುದು ಬೇಡ’ ಎಂಬ ಕಿವಿಮಾತನ್ನು ಅಂದಿನಿಂದಲೂ ಭಾರತದ ಕಂಪೆನಿಗಳು ಅಮೆರಿಕಕ್ಕೆ ಹೊರಟ ತನ್ನ ನೌಕರರಿಗೆ ಹೇಳಿ ಕಳುಹಿಸುತ್ತಿವೆ. ಆದರೆ ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ಆತಂಕ ಹೆಚ್ಚಿದೆಯಷ್ಟೆ. 

ಹಾಗಾದರೆ ಅಮೆರಿಕದಲ್ಲಿ ಏನಾಗುತ್ತಿದೆ? ಉತ್ತರ ನೇರವಾಗಿದೆ ಮತ್ತು ಸ್ಪಷ್ಟವಾಗಿದೆ. ‘ಅಮೆರಿಕ ಬದಲಾಗುತ್ತಿದೆ’. ಹೇಗೆ ಎಂಬುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿನ ಮೂಲಕ ಅರ್ಥಮಾಡಿಕೊಳ್ಳಬಹುದು. ತಮ್ಮ ಪ್ರಮಾಣವಚನ ಭಾಷಣದಲ್ಲಿ ಹಲವು ನಕಾರಾತ್ಮಕ ಸಂಗತಿಗಳನ್ನು ಕೆದಕಿದ್ದ ಟ್ರಂಪ್, ಜಂಟಿ ಸದನ ಉದ್ದೇಶಿಸಿ ಮಾಡಿದ ತಮ್ಮ ಮೊದಲ ‘ಸ್ಟೇಟ್ ಆಫ್ ಯೂನಿಯನ್’ ಭಾಷಣದಲ್ಲಿ ‘ಅಮೆರಿಕನ್ನರ ಅಗ್ಗಳಿಕೆ’ ಕುರಿತು ಮಾತನಾಡಿದರು. ಹಲವು ಸಾಧಕರನ್ನು ಭಾಷಣದುದ್ದಕ್ಕೂ ಪ್ರಸ್ತಾಪಿಸಿದ ಟ್ರಂಪ್, ಸಾಕಷ್ಟು ಕರತಾಡನವನ್ನು ಬಾಚಿಕೊಂಡರು. ಅಂದು ಟ್ರಂಪ್ ಹೊಸ ಬಗೆಯಲ್ಲಿ ಕಾಣಿಸಿಕೊಂಡರು. ಎಂದಿನಂತೆ ಕೆಂಪು ಬಣ್ಣದ ಟೈ ಅವರ ಕೊರಳನ್ನು ಬಿಗಿದಿರಲಿಲ್ಲ. ಮಾತಿನಲ್ಲಿ ಕಾಠಿಣ್ಯ ಇರಲಿಲ್ಲ. ಉದ್ವೇಗವಿಲ್ಲದ ನಯವಾದ ಧ್ವನಿಯಲ್ಲಿ ಅಮೆರಿಕ ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸಿದರು.

ಬಹುಶಃ ಅಮೆರಿಕದ ಅಧ್ಯಕ್ಷರಾರೂ ಆಡಿರದ ಮಾತೊಂದನ್ನು ಟ್ರಂಪ್ ಆಡಿದರು. ‘My Job is not to represent the world, My Job is to represent the United States of America’. ಇಷ್ಟು ದಿನ ಜಗತ್ತಿನ ಹಿರಿಯಣ್ಣ ಎಂದು ಬೀಗುವುದರಲ್ಲೇ ಸಂತೋಷ ಪಡುತ್ತಿದ್ದ, ಜಗತ್ತಿನ ಆಗುಹೋಗುಗಳಲ್ಲಿ ಮೂಗು ತೂರಿಸುತ್ತಿದ್ದ ಅಮೆರಿಕದ ಅಧ್ಯಕ್ಷರ ಈ ಮಾತು ತೀರಾ ಮಹತ್ವದ್ದು. ಇದು ಟ್ರಂಪ್ ಆಡಳಿತದ ಆದ್ಯತೆ ಏನು ಎಂಬುದನ್ನು ಹೇಳುವ ಜೊತೆಗೆ ಅಮೆರಿಕ ಯಾವ ದಿಕ್ಕಿನತ್ತ ಹೊರಟಿದೆ ಎಂಬುದನ್ನೂ ಸೂಚಿಸುತ್ತಿದೆ. ಈ ಮಾತಿನ ನೆರಳಲ್ಲೇ ಟ್ರಂಪ್ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಿದರು. ‘ಅಮೆರಿಕದ ಅಗ್ಗಳಿಕೆಯ ಅಧ್ಯಾಯವೊಂದು ಇದೀಗ ಆರಂಭವಾಗಿದೆ. ರಾಷ್ಟ್ರಾಭಿಮಾನ ಎಲ್ಲೆಡೆ ಪಸರಿಸುತ್ತಿದೆ. ಕನಸುಗಳನ್ನು ಬೆನ್ನತ್ತುವ ಹುರುಪು ಮೂಡಿದೆ. ಜಾಗತಿಕ ಯೋಜನೆಗಳನ್ನು ರೂಪಿಸುವ ಭರದಲ್ಲಿ ನಮ್ಮ ದೇಶದ ಮಕ್ಕಳು ಸೊರಗುತ್ತಿದ್ದುದನ್ನು ನಾವು ಗಮನಿಸಲಿಲ್ಲ. ಇತರ ದೇಶಗಳನ್ನು ರಕ್ಷಿಸಲು ಹಣ ಹೂಡಿದೆವೇ ಹೊರತು ನಮ್ಮ ಗಡಿಗಳು ತೆರೆದೇ ಇದ್ದವು. ಅದು ಸಾಕಷ್ಟು ಅಪಾಯ ಒಡ್ಡಿತು. ಮಾದಕ ವಸ್ತುಗಳು ದೇಶದೊಳಗೆ ಸರಾಗವಾಗಿ ಬರತೊಡಗಿದವು. ಲಕ್ಷಾಂತರ ಡಾಲರ್ ಮೊತ್ತವನ್ನು ಇತರ ದೇಶಗಳಿಗೆ ಅನುದಾನದ ರೂಪದಲ್ಲಿ ನೀಡಿದ್ದೇವೆ, ಆದರೆ ಅಮೆರಿಕದಲ್ಲಿ ಮೂಲಸೌಕರ್ಯ ಹದಗೆಟ್ಟಿದೆ. ಈ ಎಲ್ಲದನ್ನೂ ಸರಿ ಮಾಡಬೇಕಿದೆ’. ಹೀಗೆ ಮುಂದುವರಿದ ಒಂದು ತಾಸಿನ ಭಾಷಣದ ಸಾರಾಂಶ ಇಷ್ಟೆ ‘ಜಗತ್ತಿನ ಉಸಾಬರಿ ಸಾಕು, ಅಮೆರಿಕನ್ನರ ಬಗ್ಗೆ ಯೋಚಿಸೋಣ’.  

ಟ್ರಂಪ್ ಭಾಷಣದ ಅರ್ಧ ಭಾಗ ಚುನಾವಣಾ ವೇದಿಕೆಯ ಬಣ್ಣದ ಮಾತಿನಂತೆ ಕೇಳಿಸಿದರೂ, ಅವರು ಇದುವರೆಗೆ ಹೊರಡಿಸಿದ ಆದೇಶ ಮತ್ತು ಕೈಗೊಂಡ ಕ್ರಮಗಳನ್ನು ನೋಡಿದರೆ, ಟ್ರಂಪ್ ತಮ್ಮ ಚುನಾವಣಾ ಪ್ರಣಾಳಿಕೆಯನ್ನೇ ಆಡಳಿತದ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಂತೆ ಕಾಣುತ್ತಿದೆ. ಅಮೆರಿಕದಲ್ಲಿ ಇದರಿಂದ ಸಂತೋಷಪಟ್ಟಷ್ಟೇ ಸಂಖ್ಯೆಯ ಜನ ಆತಂಕಕ್ಕೂ ಒಳಗಾಗಿದ್ದಾರೆ. ಟ್ರಂಪ್ ಸರ್ಕಾರದ ಮೊದಲ ವಲಸೆ ನಿರ್ಬಂಧ ಆದೇಶ ಟೀಕೆಗೆ ಗುರಿಯಾಯಿತು ನಿಜ, ಆದರೆ ಟ್ರಂಪ್ ಕೈಗೊಂಡ ಹಲವು ನಿರ್ಧಾರಗಳು ಪ್ರಶಂಸೆಗೆ ಕೂಡ ಒಳಗಾಗಿವೆ. ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಟ್ರಂಪ್ ಇಡುತ್ತಿರುವ ಹೆಜ್ಜೆಗಳನ್ನು ಬಹುತೇಕ ಅಮೆರಿಕನ್ನರು ಮೆಚ್ಚಿಕೊಳ್ಳುತ್ತಿದ್ದಾರೆ. ಪೂರಕವಾಗಿ ಷೇರು ಮಾರುಕಟ್ಟೆ ಏರಿಕೆಯನ್ನು ದಾಖಲಿಸಿದೆ.

ಯುವಪೀಳಿಗೆಯನ್ನು ಮಾದಕ ವ್ಯಸನದಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು, ಹಿಂಸೆ ಮತ್ತು ಅಪರಾಧ ತಡೆಯುವ ನಿಟ್ಟಿನಲ್ಲಿ, ವಿಶೇಷ ಕಾರ್ಯನಿರ್ವಹಣಾ ತಂಡ ರಚಿಸುವ ಅಗತ್ಯ ಇದೆ ಎಂಬ ಬಗ್ಗೆ ಯಾರ ತಕರಾರೂ ಇದ್ದಂತಿಲ್ಲ. ಆದರೆ ಟ್ರಂಪ್ Make America Great Again ಘೋಷಣೆಯ ಮುಂದುವರಿಕೆಯಾಗಿ ಪದೇ ಪದೇ ಆಡುತ್ತಿರುವ ಮಾತು ‘ಅಮೆರಿಕ ಮೊದಲು ತನ್ನವರಿಗೆ ಆದ್ಯತೆ ನೀಡಬೇಕು. ಆ ಮೂಲಕ ಅಮೆರಿಕದ ಶ್ರೇಷ್ಠತೆಯನ್ನು ಪುನರ್‌ಸ್ಥಾಪಿಸಬಹುದು’ ಎನ್ನುವುದು. ಈ ಮಾತು ಇಂದು ಎಷ್ಟು ಹಿಗ್ಗಿದೆ ಎಂದರೆ ಗರ್ವ, ಹಗೆ, ಅಸೂಯೆ ಎಲ್ಲವನ್ನೂ ಆವಾಹಿಸಿಕೊಂಡು ಸಮಾಜದಲ್ಲಿ ಅಸಹಿಷ್ಣುತೆ, ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ‘You go back to your Country’ ಎನ್ನುತ್ತಾ ನಶೆಯಲ್ಲಿ ಅಮೆರಿಕನ್ನನೊಬ್ಬ ವಲಸಿಗನತ್ತ ಗುಂಡು ಹಾರಿಸಲು ಪ್ರೇರೇಪಿಸುತ್ತಿದೆ.

ನಿಜ, ಅಮೆರಿಕ ಮೊದಲು ತನ್ನವರಿಗೆ ಆದ್ಯತೆ ನೀಡಬೇಕು. ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕಬೇಕು. ಆದರೆ ಮಾರ್ಗ ಯಾವುದು? ಮೊನ್ನೆ ತಮ್ಮ ಭಾಷಣದಲ್ಲಿ ಟ್ರಂಪ್ ‘ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳು ವಲಸೆಗೆ ಪ್ರತಿಭೆಯನ್ನು ಮಾನದಂಡವಾಗಿಸಿಕೊಂಡಿವೆ. ನಮ್ಮ ದೇಶವನ್ನು ಪ್ರವೇಶಿಸುವವರು ಆರ್ಥಿಕ ಸ್ವಾವಲಂಬಿಗಳಾಗಿ ಬದುಕುವಂತಿರಬೇಕು’ ಎಂದಿದ್ದಾರೆ. ಈ ಮಾತಿನ ಬಗ್ಗೆ ಯಾರ ತಕರಾರೂ ಇದ್ದಂತಿಲ್ಲ. ಅಮೆರಿಕದ ಸಡಿಲಗೊಂಡ ವಲಸೆ ನೀತಿಯನ್ನು ಎಲ್ಲ ದೇಶಗಳೂ ದುರುಪಯೋಗ ಪಡಿಸಿಕೊಂಡಿವೆ. ಭಾರತವೂ ಅದಕ್ಕೆ ಹೊರತಲ್ಲ. ಭಾರತದ ಕೆಲವು ಪ್ರತಿಷ್ಠಿತ ಕಂಪೆನಿಗಳು ವೀಸಾ ನೀತಿಯನ್ನು ಉಲ್ಲಂಘಿಸಿ ನಂತರ ದಂಡ ತೆತ್ತ ಉದಾಹರಣೆಗಳಿವೆ. ಆದರೆ ಟ್ರಂಪ್ ತಾವು ಅಂದುಕೊಂಡದ್ದನ್ನು ಜಾರಿಗೆ ತರುವಲ್ಲಿ ಇರುವ ಸವಾಲನ್ನು ಮನಗಂಡಿದ್ದಾರೆಯೇ? ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕಾನೂನಾತ್ಮಕ ಆದೇಶ ಹೊರಬಿದ್ದಿಲ್ಲದಿದ್ದರೂ, ಇದಾಗಲೇ ಹಲವು ಮಾಹಿತಿ ತಂತ್ರಜ್ಞಾನ ಕಂಪೆನಿಗಳು ‘ಲೋಕಲ್ ರಿಸೋರ್ಸ್ ಪೂಲ್’ ಎಂಬ ‘ಸ್ಥಳೀಯರತ್ತ ಮೊದಲು ನೋಡುವ’ ಕ್ರಮ ಅಳವಡಿಸಿಕೊಂಡಿವೆ. ಆದರೆ ಕೌಶಲ ಬೇಡುವ ಕೆಲಸಗಳಿಗೆ ಸ್ಥಳೀಯರನ್ನು ಹುಡುಕುವುದು ಮತ್ತು ಅವರನ್ನು ಸಂಸ್ಥೆಯಲ್ಲಿ ದೀರ್ಘಾವಧಿ ಉಳಿಸಿಕೊಳ್ಳುವುದು ಸವಾಲಾಗಿದೆ. ಹಾಗಾಗಿ ಟ್ರಂಪ್ ಆಡಳಿತವು ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ, ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಇಡಬೇಕಿದೆ. ಒಬಾಮ ಅವರಿಗೆ ಈ ಬಗ್ಗೆ ಸ್ಪಷ್ಟತೆ ಇತ್ತು. ಟ್ರಂಪ್ ಅವರಲ್ಲಿ ಆತುರ ಮಾತ್ರ ಇದೆ.

ಇನ್ನು ಎರಡನೆಯ ಪ್ರಶ್ನೆ, ಭಾರತೀಯರ ಮಟ್ಟಿಗೆ ಎಲ್ಲವೂ ಸೌಖ್ಯವೇ? ಹಾಗನ್ನಿಸುತ್ತಿಲ್ಲ. ವೀಸಾ ನೀತಿ, ಉದ್ಯೋಗ ಆದ್ಯತೆಯ ವಿಷಯ ಬಿಡಿ. ಅದರ ಜಾರಿಗೆ ಸಾಕಷ್ಟು ಅಡೆತಡೆಗಳಿವೆ. ಎಲ್ಲ ಭಾರತೀಯರೂ ಗಂಟು ಮೂಟೆ ಕಟ್ಟಿ ಹೊರಡಿ ಎನ್ನುವ ಸ್ಥಿತಿಯಲ್ಲಿ ಅಮೆರಿಕ ಸದ್ಯಕ್ಕಂತೂ ಇಲ್ಲ. ಭಾರತದ ಮೇಲೆ, ಭಾರತೀಯ ತಂತ್ರಜ್ಞರು/ ವೈದ್ಯರ ಮೇಲೆ ಸಾಕಷ್ಟು ಅವಲಂಬನೆ ಇದೆ. ಹೆಚ್ಚೆಂದರೆ ವೀಸಾ ಮಾನದಂಡ ಬಿಗಿಯಾಗಬಹುದು. ನಾಲ್ಕು ಜನ ಕೆಲಸ ಮಾಡುವ ಕಡೆ, ಇಬ್ಬರನ್ನು ಮುಂದುವರಿಸಿ ಮತ್ತಿಬ್ಬರನ್ನು ಬೆಂಗಳೂರಿನಿಂದಲೋ, ಪುಣೆಯಿಂದಲೋ ಕೆಲಸ ಮಾಡಿ ಎನ್ನಬಹುದು. ಆದರೆ ಜನಾಂಗೀಯ ದಾಳಿಗಳನ್ನು ಎದುರಿಸಲು ಅನಿವಾಸಿ ಭಾರತೀಯರು ಸಮರ್ಥರೇ ಎನ್ನುವುದು ಮುಖ್ಯ ಪ್ರಶ್ನೆ. ಆ ಬಗ್ಗೆ ಅನುಮಾನಗಳಿವೆ. ಬಹುಶಃ ಅಮೆರಿಕದಲ್ಲಿ ಜನಾಂಗೀಯ ದ್ವೇಷಕ್ಕೆ ಪದೇ ಪದೇ ಗುರಿಯಾಗುವ ಸಮುದಾಯ ಎಂದರೆ ಯಹೂದಿಗಳದ್ದು. ಇತ್ತೀಚೆಗೆ ಭಾರತೀಯರು ಕಳವಳಗೊಂಡಂತೆ ಯಹೂದಿಗಳೂ ಆತಂಕಗೊಂಡಿದ್ದರು. ಕಳೆದ ಜನವರಿಯಿಂದ ದೇಶದ ವಿವಿಧ ಭಾಗಗಳಲ್ಲಿ ಯಹೂದಿ ಸಮುದಾಯ ಕೇಂದ್ರಗಳಿಗೆ ಬಾಂಬ್ ದಾಳಿಯ ಕರೆ ಬರುತ್ತಿರುವುದು ವರದಿಯಾಯಿತು. ಕೂಡಲೇ ಯಹೂದಿ ಸಂಘಟನೆಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜಕೀಯ ಒತ್ತಡ ಹೇರುವ ಪ್ರಯತ್ನ ಮಾಡಿದವು. ಟ್ರಂಪ್ ಪುತ್ರಿ ಇವಾಂಕ ‘ಮತೀಯ ಸಾಮರಸ್ಯ ಎಂಬ ತತ್ವದ ಮೇಲೆ ಅಮೆರಿಕದ ನಿರ್ಮಾಣವಾಗಿದೆ. ಪ್ರಾರ್ಥನಾ ಸ್ಥಳ ಮತ್ತು ಧಾರ್ಮಿಕ ಕೇಂದ್ರಗಳ ಭದ್ರತೆಗೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಟ್ವೀಟ್ ಮಾಡಿದರು. ಚುನಾವಣೆ ನಂತರ ಹೆಚ್ಚು ಸಕ್ರಿಯರಾಗಿರದ ಹಿಲರಿ ಕ್ಲಿಂಟನ್ ಬೆದರಿಕೆ ಕರೆಗಳನ್ನು ಖಂಡಿಸಿದರು. ಹಲವು ಸೆನೆಟ್ ಪ್ರತಿನಿಧಿಗಳು ಯಹೂದಿ ಸಮುದಾಯದ ಪರ ಮಾತನಾಡಿದರು. ನಂತರ ಟ್ರಂಪ್ ಕೂಡ ತಮ್ಮ ಭಾಷಣದಲ್ಲಿ ಘಟನೆ ಉಲ್ಲೇಖಿಸಿ ‘ಇಂತಹದಕ್ಕೆ ಪ್ರೋತ್ಸಾಹ ಇಲ್ಲ’ ಎಂದರು. ಜೊತೆಗೆ ಕನ್ಸಾಸ್ ಘಟನೆಯನ್ನು ಸೇರಿಸಿಕೊಂಡರು.

ಇದಷ್ಟೇ ಅಲ್ಲ, ಇಸ್ರೇಲ್- ಪ್ಯಾಲೆಸ್ಟೀನ್, ಇಸ್ರೇಲ್- ಇರಾನ್ ಜಟಾಪಟಿ ನಡೆದಾಗ ಕೂಡ ಯಹೂದಿ ಹಿತಾಸಕ್ತಿ ಗುಂಪುಗಳು ಸಕ್ರಿಯವಾಗಿ ಅಮೆರಿಕ ಆಡಳಿತದ ಮೇಲೆ ಒತ್ತಡ ಹೇರಲು ಆರಂಭಿಸುತ್ತವೆ. ಆದರೆ ಇದೇ ಮಾತನ್ನು ಹಲವು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಬಗ್ಗೆ ಹೇಳಲು ಸಾಧ್ಯವಾಗುವುದಿಲ್ಲ. ನಿಜ, ನ್ಯೂಯಾರ್ಕ್, ವಾಶಿಂಗ್ಟನ್, ಇಲಿನಾಯ್‌, ಕ್ಯಾಲಿಪೋರ್ನಿಯಾದಂತಹ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಉಂಟುಮಾಡುವಷ್ಟು ಭಾರತೀಯರು ಸಂಘಟಿತರಾಗಿದ್ದಾರೆ ಮತ್ತು ಸಮುದಾಯವನ್ನು ಹಿಗ್ಗಿಸಿದ್ದಾರೆ. ಹಾಗಾಗಿಯೇ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು ಟ್ರಂಪ್ ಜಾಹೀರಾತು ಬಿಡುಗಡೆ ಮಾಡಿದ್ದು, ಇವಾಂಕ ದೇವಸ್ಥಾನದಲ್ಲಿ ಸುರುಸುರು ಬತ್ತಿ ಹಚ್ಚಿದ್ದು. ಜೊತೆಗೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದ ಪ್ರತಿಷ್ಠಿತ ಕಂಪೆನಿಗಳ ಉನ್ನತ ಹುದ್ದೆಗಳಲ್ಲೂ ಭಾರತೀಯರು ಇದ್ದಾರೆ. ಶ್ರೀಮಂತಿಕೆಯಲ್ಲಿ ಯಾರಿಗೂ ಕಡಿಮೆಯಿಲ್ಲ. ಆದರೆ ರಾಜಕೀಯವಾಗಿ ಸರ್ಕಾರವನ್ನು ಬಗ್ಗಿಸುವಷ್ಟು ಶಕ್ತಿ, ಒತ್ತಡ ಹೇರುವಷ್ಟು ಸಾಮರ್ಥ್ಯ ಅನಿವಾಸಿ ಭಾರತೀಯ ಸಮುದಾಯಕ್ಕಿನ್ನೂ ಬಂದಂತಿಲ್ಲ. ಭಾರತೀಯರಿಗೆ ಸಮಸ್ಯೆಯಾದರೆ, ಭಾರತದ ಮೂಲಕ ರಾಜತಾಂತ್ರಿಕವಾಗಿಯೇ ಅಮೆರಿಕ ಆಡಳಿತದ ಮೇಲೆ ಒತ್ತಡ ಹೇರುವ ಪರಿಸ್ಥಿತಿ ಇದೆ. ಅನಿವಾಸಿ ಭಾರತೀಯ ಸಮೂಹ ಈ ನಿಟ್ಟಿನಲ್ಲಿ ಚಿಂತಿಸುವ ಜರೂರು ಇದೆ.

ಒಟ್ಟಿನಲ್ಲಿ, ಹತ್ತು ದಿನಗಳ ಒಳಗೆ ನಡೆದ ಮೂರು ಘಟನೆಗಳು, ಅದರಲ್ಲೂ ಕನ್ಸಾಸ್ ನಗರದಲ್ಲಿ ಶ್ರೀನಿವಾಸ್ ಕೂಚಿಬೊಟ್ಲಾ ಮೇಲೆ ಆದ ದಾಳಿ ಭಾರತೀಯರ ಆತಂಕ ಹೆಚ್ಚಿಸಿರುವುದು ಸತ್ಯ. ಆದರೆ ಇಂತಹ ದಾಳಿ ಇದೇ ಮೊದಲಲ್ಲ ಎಂಬುದೂ ದಿಟ. 9/11 ಘಟನೆಯ ತರುವಾಯ ಸಿಖ್ ಸಮುದಾಯದ ಮೇಲೆ ಹಲವು ದಾಳಿಗಳಾಗಿವೆ. ಬಲಬೀರ್ ಸಿಂಗ್ ಸೋಂದಿ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಅಂದಿಗೆ ದೊಡ್ಡ ಸುದ್ದಿ. ಎರಡು ವರ್ಷಗಳ ಕೆಳಗೆ ದೇವಾಲಯವೊಂದರ ಮೇಲೆ ದಾಳಿಯಾದಾಗ ಒಂದಷ್ಟು ಚರ್ಚೆ ನಡೆದಿತ್ತು. ಉಳಿದಂತೆ ಶೂಟೌಟ್ ಪ್ರಕರಣಗಳು ಅಮೆರಿಕದಲ್ಲಿ ದಿನದ ವಾರ್ತೆಯಾಗಿರುವುದರಿಂದ ಯಾವ ಚರ್ಚೆಯೂ ತುದಿ ಮುಟ್ಟುವುದಿಲ್ಲ. ತಕ್ಷಣಕ್ಕೆ ಆಗಬೇಕಾದ್ದಿಷ್ಟೆ, ‘ಅಗ್ಗಳಿಕೆಯ ಅಧ್ಯಾಯ’ದ ಬಗ್ಗೆ ಮಾತನಾಡುತ್ತಿರುವ ಟ್ರಂಪ್, ಆ ಅಧ್ಯಾಯದೊಳಗೆ ‘ಜನಾಂಗೀಯ ದ್ವೇಷ’ ನುಸುಳದಂತೆ ನೋಡಿಕೊಳ್ಳಬೇಕಿದೆ. ಬಂದೂಕು ಲಾಬಿ, ಮಾದಕ ವ್ಯಸನ, ನಿರುದ್ಯೋಗದ ಖಿನ್ನತೆ ಮತ್ತು ಮಾನಸಿಕ ಸ್ವಾಸ್ಥ್ಯದ ಕೊರತೆ ಈಗಾಗಲೇ ಅಮೆರಿಕದಲ್ಲಿ ಅಪರಾಧ ಪ್ರಕರಣ ಹೆಚ್ಚಲು ಕಾರಣವಾಗಿವೆ. ಈ ಎಲ್ಲದರ ಜೊತೆ ‘Make America Great Again’ ಎಂಬ ಉನ್ಮಾದವೂ ಸೇರಿದರೆ ಬಂದೂಕನ್ನು ಆಟಿಕೆಯಂತೆ ಹಿಡಿದವರ ತಿಕ್ಕಲು ಮತ್ತಷ್ಟು ಉಲ್ಬಣಿಸುತ್ತದೆ. ಟ್ರಂಪ್ ಆಡಳಿತ ಅದಕ್ಕೆ ಆಸ್ಪದ ನೀಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT