ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ ಉನ್ನತ ಶಿಕ್ಷಣದತ್ತ ಚೀನಾದ ವಿದ್ಯಾರ್ಥಿಗಳು

Last Updated 5 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಕುರಿತ ಅಂಕಿ-ಅಂಶಗಳನ್ನು ಆಮೂಲಾಗ್ರವಾಗಿ ದಾಖಲಿಸುವ `ಓಪನ್ ಡೋರ್ಸ್‌~ ಎಂಬ ವಾರ್ಷಿಕ ವರದಿ ಮೂರು ವಾರಗಳ ಹಿಂದೆ ಬಿಡುಗಡೆಯಾಗಿದೆ.

2009-10ನೇ ಶೈಕ್ಷಣಿಕ ಸಾಲಿನಲ್ಲಿ ಅಮೆರಿಕಾದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಲ್ಲಿ ಶೇಕಡ 18ರಷ್ಟು ಚೀನಾ ದೇಶದವರು ಎಂದು ದಾಖಲಿಸಿರುವ ಈ ವರದಿ, ಕಳೆದ ಒಂದು ದಶಕದಲ್ಲಿ ಅಮೆರಿಕಾಗೆ ಶಿಕ್ಷಣಾವಕಾಶಗಳನ್ನರಸಿ ಬಂದ ಚೀನಾದ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇಕಡ 80ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಚೀನಾದಿಂದ ಅಮೆರಿಕಾದತ್ತ ಉನ್ನತ ಶಿಕ್ಷಣಾಕಾಂಕ್ಷಿಗಳು ಬೃಹತ್ ಅಲೆಗಳೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ ಎಂಬುದು ಈ ದೇಶದ ಉನ್ನತ ಶಿಕ್ಷಣ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಚೀನಾ ಈ ಹೊತ್ತು ಇಡೀ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊರ ದೇಶಗಳಿಗೆ ಕಳುಹಿಸುತ್ತಿರುವ ರಾಷ್ಟ್ರವೆಂದು ಗುರುತಿಸಲ್ಪಟ್ಟಿದ್ದು, ಅಧಿಕ ಪ್ರಮಾಣದಲ್ಲಿ ಈ `ಹೊರ ವಲಸೆ~ ಅಮೆರಿಕಾದತ್ತ ಧಾವಿಸುತ್ತಿದೆ ಎಂಬುದು `ಓಪನ್ ಡೋರ್ಸ್‌~ ವರದಿಯಲ್ಲಿ ಮೂಡಿ ಬಂದಿರುವ ವಿಚಾರ.

ಕಳೆದ ಒಂದು ವರ್ಷದಲ್ಲೇ ಚೀನಾದಿಂದ ಹೊರ ದೇಶಗಳಿಗೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡ 30ರಷ್ಟು ಹೆಚ್ಚಳ ಉಂಟಾಗಿದ್ದು, ಇವರಲ್ಲಿ ಹೆಚ್ಚಿನವರು ತೆರಳಿರುವುದು ಅಮೆರಿಕಾದತ್ತ.

ಚೀನಾ ವಿದ್ಯಾರ್ಥಿಗಳ ಅಮೆರಿಕಾಭಿಮುಖ ಶೈಕ್ಷಣಿಕ ವಲಸೆಯ ಪರಿಣಾಮವಾಗಿ ಇಂದು ಅಮೆರಿಕಾದ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಯ ವಿದ್ಯಾರ್ಥಿ ಸಮುದಾಯದಲ್ಲಿ ಚೀನಾ ದೇಶಕ್ಕೆ ವಿಶೇಷ ಗೋಚರತೆ ದೊರೆತಿದೆ.

ಇಲ್ಲಿನ ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಯ ದಾಖಲಾತಿಯಲ್ಲಿ ಶೇಕಡ 70ರಿಂದ 80ರವರೆಗೂ ಚೀನಾ ವಿದ್ಯಾರ್ಥಿಗಳದ್ದೇ ಪಾಲು. ಸಹಜವಾಗಿಯೇ `ಅಂತರರಾಷ್ಟ್ರೀಯ~ ಎಂದರೆ `ಚೀನಾ~ ಮಾತ್ರ ಎಂಬ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗುತ್ತಿದೆ.

ತನ್ನ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ `ಚೀನಾ ಸ್ಫೋಟ~ಕ್ಕೆ ಅಮೆರಿಕಾದ `ಪ್ರತ್ಯಕ್ಷ~ ಮತ್ತು `ಪರೋಕ್ಷ~ ಬೆಂಬಲವಿದ್ದು ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ವೀಸಾಗಳನ್ನು ಅಮೆರಿಕಾದಿಂದ ಪಡೆಯುತ್ತಿರುವ ಚೀನಾ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ಇಪ್ಪತ್ತೊಂದನೇ ಶತಮಾನದ ಪ್ರಭಾವಿ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾದೊಡನೆ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲು ಆ ದೇಶದ ವಿದ್ಯಾರ್ಥಿಗಳಿಗೆ ವಿಶೇಷವಾದ ಅವಕಾಶಗಳನ್ನು ಒದಗಿಸುವ ಅಮೆರಿಕಾದ ನಿರ್ಧಾರ ಸಹಜವೇ.
 
ಆದರೆ ತಮ್ಮ ದೇಶದಲ್ಲೇ ಗುಣಮಟ್ಟದ ಉನ್ನತ ಶಿಕ್ಷಣವನ್ನು ಕಡಿಮೆ ಖರ್ಚಿನಲ್ಲಿ ಪಡೆಯಲು ಅವಕಾಶಗಳನ್ನು ಸರ್ಕಾರ ಕಲ್ಪಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದರೂ ಅಮೆರಿಕಾದ `ಸೆಳೆತ~ ಏಕೆ ಎಂಬ ಪ್ರಶ್ನೆ ಆ ದೇಶದಲ್ಲಿ ಆತಂಕಕ್ಕೆ ಎಡೆ ಮಾಡಿದೆ. ಆದರೆ ಚೀನಾದ ಆಂತರಿಕ ಪರಿಸ್ಥಿತಿಯನ್ನು ಅರಿತವರಿಗೆ ಈ ಪ್ರಶ್ನೆಗೆ ಉತ್ತರ ತಿಳಿದಿದೆ.

ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಹೆಚ್ಚು ಆಯ್ಕೆಯ ಸ್ವಾತಂತ್ರ್ಯವನ್ನು ನೀಡದಂಥ ತೀರಾ ಬಿಗಿಯೆನಿಸುವ ಶೈಕ್ಷಣಿಕ ವ್ಯವಸ್ಥೆ, ಬೆಳೆಯುತ್ತಿರುವ ಧ್ಯಮ ವರ್ಗ ಹಾಗೂ ಒಂದು ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಡಿಗ್ರಿಗಳಿಗಿರುವ ಮಾರುಕಟ್ಟೆ `ಅಮೆರಿಕನ್ ಆಕರ್ಷಣೆಗೆ~ ಮೂಲ ಕಾರಣಗಳು,

ಚೀನಾದಲ್ಲಿ ಅಮೆರಿಕಾದ ಡಿಗ್ರಿಗಳನ್ನು ಕುರಿತ ಒಲವು ಯಾವ ಮಟ್ಟವನ್ನು ತಲುಪುತ್ತಿದೆ ಎಂದರೆ ಅನೇಕ ಪೋಷಕರು ಮಗು ಜನಿಸಿದ ಕೂಡಲೆ ಅದನ್ನು ಆ ದೇಶಕ್ಕೆ ಕಳುಹಿಸಲು ತಯಾರಿಗಳನ್ನು ನಡೆಸಲಾರಂಭಿಸುತ್ತಾರಂತೆ.

ಇತ್ತೀಚೆಗೆ ಬಂದ ಒಂದು ಸುದ್ದಿಯನ್ವಯ ಶೇಕಡ 60ರಷ್ಟು ಚೀನಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅಮೆರಿಕಾದಲ್ಲಿ ಪಡೆಯಬೇಕಾದರೆ ತಗಲುವ ಇಡೀ ವೆಚ್ಚವನ್ನು ತಮ್ಮ ಕುಟುಂಬದ ಸಂಪನ್ಮೂಲಗಳಿಂದಲೇ ಭರಿಸಲು ತಯಾರಾಗಿರುವಂಥ ವರ್ಗಕ್ಕೆ ಸೇರಿದವರು!

ತೀರಾ ಕಡಿಮೆ ಖರ್ಚಿನಲ್ಲಿ ಪದವಿ ಮಟ್ಟದ ಶಿಕ್ಷಣವನ್ನು ಮುಗಿಸಬೇಕೆಂದರೂ ಇವರಿಗೆ ತಗಲುವ ಸರಾಸರಿ ವಾರ್ಷಿಕ ವೆಚ್ಚ 10,000 ಡಾಲರುಗಳು, ಎಂದರೆ 5 ಲಕ್ಷ ರೂಪಾಯಿಗಳು.

ಒಟ್ಟು ನಾಲ್ಕು ವರ್ಷಗಳಿಗೆ 20 ಲಕ್ಷ ರೂಪಾಯಿಗಳನ್ನು ಇವರು ಕಾಲೇಜು ಶುಲ್ಕ, ವಸತಿ, ಊಟ ಇತ್ಯಾದಿಗಳ ಮೇಲೆ ವ್ಯಯ ಮಾಡಬೇಕಾಗಿರುತ್ತದೆ. ಈ ಮೊತ್ತ ಕಾಲೇಜಿನಿಂದ ಕಾಲೇಜಿಗೆ, ವಿಶ್ವವಿದ್ಯಾನಿಲಯದಿಂದ ವಿಶ್ವವಿದ್ಯಾನಿಲಯಕ್ಕೆ ಭಿನ್ನವಾಗಿರುವ ಸಾಧ್ಯತೆಗಳನ್ನು ಇಲ್ಲಿ ಸ್ಮರಿಸುತ್ತಾ ಮೇಲೆ ನೀಡಿರುವಂಥ ಮೊತ್ತಗಳು ಅಮೆರಿಕಾದ ಉನ್ನತ ಶಿಕ್ಷಣದ ಒಂದು ಸಾಂಕೇತಿಕ ಚಿತ್ರಣವನ್ನು ಮಾತ್ರ ನೀಡಿದೆ ಎಂದು ಹೇಳಬಹುದು.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯಬೇಕಾದರೆ ವಾರ್ಷಿಕ ಖರ್ಚು ಹದಿನೈದು ಲಕ್ಷ ರೂಪಾಯಿಗಳಷ್ಟಾದರೂ ಆರ್ಶ್ಚಯವಿಲ್ಲ. ಇಂಥ ಪರಿಸ್ಥಿತಿಯಲ್ಲೂ ಅಮೆರಿಕಕ್ಕೆ ಚೀನಾ ದೇಶದ ವಿದ್ಯಾರ್ಥಿಗಳು ಧಾವಿಸುತ್ತಿದ್ದಾರೆ ಎಂದರೆ ಅಲ್ಲಿನ ಆರ್ಥಿಕ ವ್ಯವಸ್ಥೆ ಸಮೃದ್ಧಿಯ ಸ್ಥಿತಿಯತ್ತ ಚಲಿಸುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಚೀನಾದಿಂದ ಅಮೆರಿಕಾದತ್ತ ಬರುತ್ತಿರುವ ಬಹುತೇಕ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಪದವಿ ತರಗತಿಗಳಿಗೆ ಪ್ರವೇಶ ಪಡೆಯುವಂಥವರು. ಕಳೆದ ಒಂದೇ ವರ್ಷದಲ್ಲಿ ಅವರ ಸಂಖ್ಯೆ ಶೇಕಡ 52 ರಷ್ಟು ಹೆಚ್ಚಿದೆ.

ಚೀನಾದ ಅನೇಕ ಪ್ರೌಢಶಾಲೆಗಳಲ್ಲಿ ಅಂತರರಾಷ್ಟ್ರೀಯ ಸಲಹೆಗಾರರನ್ನೇ ನೇಮಕ ಮಾಡಲಾಗಿದ್ದು ಇವರು ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಕಾಲೇಜುಗಳಲ್ಲಿ ತಮ್ಮ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶಗಳನ್ನರಸಿ ನೂರಾರು ಅರ್ಜಿಗಳ ಸಹಿತ ಪ್ರತಿ ವರ್ಷವೂ ಈ ದೇಶಕ್ಕೆ ಪಯಣ ಬೆಳೆಸುತ್ತಾರೆ.
 
ಇಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳೂ ಕೂಡ ಚೀನಾದ ಬೃಹತ್ ನಗರಗಳಲ್ಲಿ ಶೈಕ್ಷಣಿಕ ಉತ್ಸವಗಳನ್ನು ಏರ್ಪಡಿಸುತ್ತಿದ್ದು ಇಲ್ಲಿ ವಿಧಿಸುವ ಪ್ರವೇಶ ಶುಲ್ಕವನ್ನೂ ತೆತ್ತು ಸಾವಿರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಅಮೆರಿಕನ್ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಅಮೆರಿಕಾದತ್ತ ಪಯಣ ಬೆಳೆಸಲು ಮಾನಸಿಕ ತಯಾರಿಯನ್ನೂ ಮಾಡಿಕೊಳ್ಳುತ್ತಾರೆ.

ಅಮೆರಿಕಾದ ಅನೇಕ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಅಂತರರಾಷ್ಟ್ರೀಯ ದಾಖಲಾತಿಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದ್ದು ಚೀನಾದಿಂದ ಬರುವ ವಿದ್ಯಾರ್ಥಿ ವಲಸಿಗರನ್ನೇ ಇವರು ಆಶ್ರಯಿಸಬೇಕಾದಂಥ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.

ಕೆಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಂತೂ ಅಧ್ಯಾಪಕರಿಗೆ ಚೀನಾ ಕುರಿತ ವಿಶೇಷ ಅಭಿವಿನ್ಯಾಸ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗುತ್ತಿದೆಯಂತೆ! ಒಂದೆಡೆ ಉನ್ನತ ಶಿಕ್ಷಣಕ್ಕೆ ಕುಸಿಯುತ್ತಿರುವ ಸರ್ಕಾರಿ ಬೆಂಬಲ, ಮತ್ತೊಂದೆಡೆ ಸ್ವಂತ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣದ ಸವಾಲು-ಇವೆರಡರ ನಡುವೆ ಸಿಲುಕಿ ಹಾಕಿಕೊಂಡಿರುವ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ಅಂತರರಾಷ್ಟ್ರೀಯ ದಾಖಲಾತಿಗಳನ್ನು ಉತ್ತೇಜಿಸಲು ಚೀನಾ ಸಮುದಾಯಕ್ಕೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಸಹಜವೇ ಆಗಿದೆ.

ಅಮೆರಿಕಾದತ್ತ ಧಾವಿಸುತ್ತಿರುವ ಚೀನಾ ವಿದ್ಯಾರ್ಥಿ ಅಲೆಗಳನ್ನು ಕುರಿತಂತೆ ಈ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಮೂಡಿ ಬರುತ್ತಿವೆ. ಯಾವುದೇ ಒಂದು ದೇಶದ ವಿದ್ಯಾರ್ಥಿಗಳನ್ನು ಅವಲಂಬಿಸುವುದು ಅಂತರರಾಷ್ಟ್ರೀಯ ಸಮುದಾಯದ ವೈವಿಧ್ಯತೆಯ ತತ್ವಕ್ಕೆ ವಿರುದ್ಧವಾದ ಪ್ರವೃತ್ತಿ ಎನ್ನುವವರು ಕೆಲವರಾದರೆ, ದೇಶ ಯಾವುದಾದರೇನು, ಆಸಕ್ತಿ ಹಾಗೂ ಆರ್ಥಿಕ ಶಕ್ತಿಗಳೆರಡೂ ಇರುವಂಥ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು ಉನ್ನತ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎನ್ನುತ್ತಿದ್ದಾರೆ ಇನ್ನೂ ಕೆಲವರು.

ಪದವಿ ಶಿಕ್ಷಣ ಪಡೆಯಲೆಂದು ಬಂದ ಅನೇಕರು ಇಲ್ಲೇ ತಮ್ಮ ಇಡೀ ಶಿಕ್ಷಣವನ್ನು ಪೂರೈಸಿ ಉದ್ಯೋಗಗಳನ್ನರಸುತ್ತಿದ್ದಾರೆ; ಇದರಿಂದ ನಮ್ಮ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯುಂಟಾಗುತ್ತಿದೆ ಎಂಬ ಆತಂಕವೂ ಕೆಲವು ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ಚೀನಾದಲ್ಲೂ ಈ `ಪ್ರತಿಭಾ ಪಲಾಯನ~ವನ್ನು ಕುರಿತಂತೆ ಅಸಮಾಧಾನ ಹೆಚ್ಚುತ್ತಿದೆ ಎಂಬ ವರದಿ ಕೂಡ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಮೆರಿಕಾದ ಪ್ರಾಬಲ್ಯವನ್ನು ತಗ್ಗಿಸಲು ಆ ಕ್ಷೇತ್ರಗಳಲ್ಲಿನ ಜ್ಞಾನ ಭಂಡಾರವನ್ನು ಚೀನಾ ಭೇದಿಸಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿದ್ದು, ಇದನ್ನು ಕೆಲವರು `ಅತಿರೇಕದ~ ಪ್ರತಿಕ್ರಿಯೆ ಎಂದು ಟೀಕಿಸಿರುವುದೂ ಉಂಟು.

ಚೀನಾ ಮತ್ತು ಅಮೆರಿಕಾ ದೇಶಗಳೆರಡರಲ್ಲೂ ಈ ವಲಸೆಯ ಅಲೆಯನ್ನು ಕುರಿತಂತೆ ಮೂಡಿ ಬರುತ್ತಿರುವ ಪ್ರತಿಕ್ರಿಯೆಗಳ ಸ್ವರೂಪ ಹೇಗಾದರೂ ಇರಲಿ, ಒಂದು ವಿಷಯವಂತೂ ನಿಜ.
 
ಅದೇನೆಂದರೆ, ಈ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಚೀನಾದ ಇರುವಿಕೆ. ಕೇವಲ ತನ್ನ ವಿದ್ಯಾರ್ಥಿಗಳನ್ನು ಅಧಿಕ ಸಂಖ್ಯೆಯಲ್ಲಿ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುವುದರಲ್ಲಿ ತೃಪ್ತಿಯನ್ನು ಪಡೆಯದ ಚೀನಾ ಇಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಚೀನಾ ಕೇಂದ್ರಿತ ಜ್ಞಾನ ಪ್ರಸರಣಕ್ಕೂ ವಿಶೇಷವಾಗಿ ಗಮನ ಹರಿಸಿದೆ.
 
ಈ ದೇಶದ ಇತಿಹಾಸ, ಭಾಷೆ, ಸಂಸ್ಕೃತಿ, ಅರ್ಥ ವ್ಯವಸ್ಥೆ ಮುಂತಾದ ವಿಷಯಗಳನ್ನು ಕುರಿತಂತೆ ವಿಶ್ವವಿದ್ಯಾನಿಲಯ ಸಮುದಾಯದ ಆಸಕ್ತಿಯನ್ನು ಸೆಳೆಯಲು ನಿರಂತರವಾದ ಪ್ರಯತ್ನಗಳು ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಚೀನೀ ಭಾಷೆಯನ್ನು ಕಲಿಯುವವರ ಹಾಗೂ ಅಮೆರಿಕಾದ ವಿಶ್ವವಿದ್ಯಾನಿಲಯಗಳ `ಸ್ಟಡಿ ಅಬ್ರಾಡ್~ ಕಾರ್ಯಕ್ರಮಗಳ ಆಶ್ರಯದಲ್ಲಿ ಚೀನಾಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಗಳೆರಡರಲ್ಲೂ ಹೆಚ್ಚಳ ಉಂಟಾಗುತ್ತಿದೆ.

ಭಾರತದಿಂದ ಬಹು ಕಾಲದಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಅಮೆರಿಕಾದ ಅನೇಕ ವಿಶ್ವವಿದ್ಯಾನಿಲಯಗಳಿಗೆ ಬರುತ್ತಲೇ ಇದ್ದರೂ ಇಂದಿಗೂ ಭಾರತೀಯ ಭಾಷೆಗಳಲ್ಲಿ ಇಂಥ ಒಂದು ಆಸಕ್ತಿಯನ್ನು ಕೆರಳಿಸಲು ಬಹುತೇಕ ಸಂಸ್ಥೆಗಳಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ.

ವರ್ಷದಿಂದ ವರ್ಷಕ್ಕೆ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಚೀನಾದ ಪ್ರಾತಿನಿಧ್ಯ ಹೆಚ್ಚುತ್ತಿದೆ. ಸಾಧಾರಣವಾಗಿ ತಮ್ಮ ದೇಶವಾಸಿಗಳ ಸಾಂಗತ್ಯದಲ್ಲೇ, ತಮ್ಮ ಭಾಷೆಯಲ್ಲೇ ಸಂಭಾಷಿಸುತ್ತ, ತಮ್ಮದೇ ಆದ ವಿಶಿಷ್ಟ ಬಗೆಯ ಖಾದ್ಯಗಳನ್ನು ಸರಬರಾಜು ಮಾಡುವಂಥ ಉಪಹಾರ ಗೃಹಗಳಲ್ಲಿ ಆಹಾರ ಸೇವನೆ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳು ಇಂದು ಅಮೆರಿಕಾದ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಗೋಚರವಾಗುವ ದೃಶ್ಯಗಳು.

ತಾವು ಆಯ್ಕೆ ಮಾಡಿಕೊಂಡ ಶಿಕ್ಷಣ ವ್ಯವಸ್ಥೆಯ ನಿರೀಕ್ಷೆಗಳನ್ನು ಪೂರೈಸಲು, ಈ ದೇಶದ ರೀತಿ-ರಿವಾಜುಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳಲೂ ಈ ಸಮುದಾಯ ನಿರಂತರವಾಗಿ ಶ್ರಮಿಸುತ್ತಿದೆ.

ಆದರೆ ಇನ್ನೆಷ್ಟು ದಿನಗಳು ಈ ಚೀನಾ ಅಲೆ ಅಮೆರಿಕಾವನ್ನು ಅಪ್ಪಳಿಸಬಹುದು ಎಂಬ ಪ್ರಶ್ನೆ ಈಗಾಗಲೇ ಎದ್ದಿದೆ. ಮುಂಬರುವ ವರುಷಗಳಲ್ಲಿ ಚೀನಾ-ಅಮೆರಿಕಾ ಸಂಬಂಧಗಳು ಹಾಗೂ ತನ್ನದೇ ದೇಶದ ಶಿಕ್ಷಣ ವ್ಯವಸ್ಥೆಯನ್ನು ಎಷ್ಟು ಬೇಗ ಬದಲಾವಣೆಯ ಪ್ರಕ್ರಿಯೆಗೆ ಚೀನಾ ಒಡ್ಡುತ್ತದೆ ಎಂಬ ಎರಡು ಅಂಶಗಳು ಈ ಅಲೆಯ ಏರಿಳಿತಗಳ ಸ್ವರೂಪವನ್ನು ಪ್ರಾಯಶಃ ನಿರ್ಧರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT