ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕವನ್ನೂ ಕಾಡುತ್ತಿದೆಯೇ ಸಾಮಾಜಿಕ ಅಸಮತೋಲನ?

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

1. ಎಂ. ಬಿ.ನರಸಿಂಹಲು ವಡವಾಟಿ, ರಾಯಚೂರು
ಭಾರತದ ಜಾತಿ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಇತ್ಯಾದಿ ಮೇಲು ಕೀಳು ವ್ಯವಸ್ಥೆ ಹೆಚ್ಚಾಗಿ ಕಂಡು ಬರುತ್ತದೆ. ಜಾತಿ ವ್ಯವಸ್ಥೆಯಂಥ ಸಾಮಾಜಿಕ ಅಸಮತೋಲನ ಅಮೆರಿಕಾದಲ್ಲಿನ ಸಮುದಾಯಗಳನ್ನೂ ಪೀಡಿಸುತ್ತಿದೆಯೇ?

ವೈವಿಧ್ಯಮಯ ಹಿನ್ನೆಲೆಯ ನಾಗರಿಕ ಸಮೂಹವೂ ಸೇರಿದಂತೆ, ಅಮೆರಿಕಾ ಹಾಗೂ ಭಾರತಗಳು ಹಲವಾರು ಸಾಮ್ಯಗಳನ್ನು ಹೊಂದಿವೆ. ವಿಶ್ವದ ಎಲ್ಲ ದೇಶಗಳಿಂದ ವಲಸೆ ಬಂದಿರುವ ವಿವಿಧ ಜನಾಂಗ, ಧರ್ಮ, ಸಂಸ್ಕೃತಿ, ಬುಡಕಟ್ಟುಗಳನ್ನು ಪ್ರತಿನಿಧಿಸುವವರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಈ ಪರಿಯ ಅಪಾರ ವೈವಿಧ್ಯ ಹೊಂದಿರುವ ದೇಶದಲ್ಲಿ ಸಾಮಾಜಿಕ ಅಸಮತೋಲನ ಹಾಗೂ ವ್ಯತ್ಯಾಸ ಕಂಡುಬಂದಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಈ ಬಗೆಯ ತಾರತಮ್ಯಗಳನ್ನು ಹೋಗಲಾಡಿಸುವ ಪ್ರಯತ್ನಗಳನ್ನು, ನಮ್ಮ ದೇಶದ ಎರಡು ಶತಮಾನಕ್ಕೂ ಹೆಚ್ಚಿನ ಇತಿಹಾಸದುದ್ದಕ್ಕೂ ಕಾಣಬಹುದು. ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರ ವಿಮೋಚನಾ ಘೋಷಣೆಯಿಂದ ಮೊದಲುಗೊಂಡು, ಜೀತ ವಿಮುಕ್ತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೂ ಸಮಾನ ಅವಕಾಶಗಳ ಖಾತರಿ ನೀಡುವ ಈಚಿನ ನಾಗರಿಕ ಹಕ್ಕುಗಳ ಕಾಯ್ದೆಯವರೆಗೆ, ಅಮೆರಿಕ ಸಾಕಷ್ಟು ಗಮನಾರ್ಹವಾದ ಪ್ರಗತಿ ಸಾಧಿಸಿದೆ.

ನಮ್ಮ ದೇಶದ ಸ್ವಾತಂತ್ರ್ಯ ಘೋಷಣೆಯಲ್ಲಿ ನಿರೂಪಿಸಲಾಗಿರುವಂತೆ ``ಎಲ್ಲ ಮನುಷ್ಯರೂ ಸೃಷ್ಟಿಯಲ್ಲಿ ಸಮಾನರೇ. ಜೀವಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಹಾಗೂ ನೆಮ್ಮದಿಯನ್ನು ಕಂಡುಕೊಳ್ಳುವ ಹಕ್ಕುಗಳಂಥ, ಕೆಲ ಪರಭಾರೆ ಮಾಡಲಾಗದ ಹಕ್ಕುಗಳನ್ನು ಸೃಷ್ಟಿಕರ್ತನು ಮನುಷ್ಯನಿಗೆ ದಯಪಾಲಿಸಿದ್ದಾನೆ~~. ಈ ಮೌಲ್ಯಗಳನ್ನು ಎತ್ತಿ ಹಿಡಿಯಲು ಅಮೆರಿಕಾ ಸದಾ ಬದ್ಧವಾಗಿರುತ್ತದೆ.

ಅಮೆರಿಕಾದಲ್ಲಿನ ನಾಗರಿಕ ಹಕ್ಕುಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ನಿಟ್ಟಿನಲ್ಲಿ ಅಧ್ಯಕ್ಷ ಒಬಾಮ ಅವರ ಪ್ರಯತ್ನಗಳಿಗಾಗಿ ದಯವಿಟ್ಟು, ಈ ಮುಂದಿನ ವೆಬ್ ಸೈಟಿಗೆ ಭೇಟಿ ನೀಡಿ: http://www.whitehouse.gov/issues/civil-rights.

2. ಎಸ್. ಪಿ. ಧನ್ಯಕುಮಾರ, ಬೆಂಗಳೂರು
ಭಾರತದ ಸಂಬಾರ ಪದಾರ್ಥಗಳಿಗೆ ಅಮೇರಿಕಾದಲ್ಲಿ ಯಾವ ರೀತಿಯ ಬೇಡಿಕೆಯಿದೆ? ಭಾರತದಲ್ಲಿ ಅಮೆರಿಕಾಕ್ಕೆ ಸಂಬಾರ ಪದಾರ್ಥಗಳನ್ನು ರಫ್ತು ಮಾಡುವ ಖಾಸಗಿ ಕಂಪನಿಗಳ ಪರಿಸ್ಥಿತಿ ಯಾವ ರೀತಿಯಲ್ಲಿದೆ?

ವಿಶ್ವದಲ್ಲಿ ಹೆಚ್ಚು ಸಂಬಾರ ಪದಾರ್ಥಗಳನ್ನು ಅಮದು ಮಾಡಿಕೊಳ್ಳುವ ಹಾಗೂ ಬಳಸುವ ರಾಷ್ಟ್ರ ಎಂದರೆ ಅಮೆರಿಕವೇ. ಸಂಬಾರ ಪದಾರ್ಥಗಳನ್ನು ಅಮೆರಿಕಾಕ್ಕೆ ಅಮದು ಮಾಡುವ ಪ್ರಮುಖ ಐದು ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತ ಹಾಗೂ ಅಮೆರಿಕಾದ ಸಂಬಂಧಗಳು ಸದೃಢಗೊಳ್ಳುತ್ತಿರುವ ಕ್ಷೇತ್ರಗಳಲ್ಲಿ ಈ ವಲಯವೂ ಒಂದು.

3. ಸುರೇಶ ಕುಲ್ಕರ್ಣಿ
ಅಮೆರಿಕದಲ್ಲಿ ಎಂ.ಎಸ್. ಅಧ್ಯಯನ ಮಾಡಿದ ನನ್ನ ಮಗ, ಅಶೋಕ, ಕಳೆದ ಮೂರು ವರ್ಷಗಳಿಂದ ಎಚ್1ಬಿ ವಿಸಾದ ಮೇಲೆ, ಕೆಲಸ ಮಾಡುತ್ತಿದ್ದಾರೆ. ಈಚೆಗಷ್ಟೇ ವಿವಾಹವಾಗಿದ್ದಾನೆ. ಅತನ ಹೆಂಡತಿ ರಾಧಾ `ಅವಲಂಬಿತ ವಿಸಾ~ದ ಮೇಲೆ ಆತನೊಂದಿಗೆ ವಾಸಿಸುತ್ತಿದ್ದಾಳೆ. ಅಮೆರಿಕೆಯಲ್ಲಿ ಆಕೆಗಿರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿ. ಅಲ್ಲದೇ, ಈ ಸಂಬಂಧದ ಕಾನೂನಿನ ಮಾಹಿತಿಯನ್ನೂ ನೀಡಿ. ಆಕೆಯೂ ಭಾರತದಲ್ಲಿ ಜಿ.ಆರ್.ಇ. ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಅಮೆರಿಕೆಯಲ್ಲಿ ಎಂ.ಎಸ್. ಶಿಕ್ಷಣವನ್ನು ಮುಂದುವರಿಸಲು ಬಯಸುತ್ತಿದ್ದಾಳೆ. ಆಕೆ ಶಿಕ್ಷಣ ಮುಂದುವರಿಸಲು ಕಾನೂನು ಅವಕಾಶ ನೀಡುತ್ತದೆಯೇ?

ಎಚ್-4 ಅವಲಂಬಿತ ವಿಸಾವಾದ್ದರಿಂದ ರಾಧಾ ಅಮೆರಿಕಾದಲ್ಲಿ ನೌಕರಿ ಮಾಡುವಂತಿಲ್ಲ. ಆದರೆ, ಅವರು ತಮ್ಮ ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರಿಸಬಹುದು. ಅಲ್ಲದೆ, ಅಮೆರಿಕಾ ನಾಗರಿಕತ್ವ ಹಾಗೂ ವಲಸೆ ಸೇವೆ (USCIS --United States Citizenship and Immigration Service)  ಇಲಾಖೆಗೆ ಅರ್ಜಿ ಸಲ್ಲಿಸಿ, ತಮ್ಮ ವಿಸಾ ದರ್ಜೆಯನ್ನು ಎಚ್-4ನಿಂದ ಎಫ್-1ಗೆ ಬದಲಿಸುವ ಅವಕಾಶವೂ ಉಂಟು. ಈ ಬದಲಾವಣೆಯಿಂದ ಅವರಿಗೆ ಎಫ್-1 ವಿಸಾ ಹೊಂದಿದವರಿಗೆ ದೊರಕುವ ಎಲ್ಲ ಸೌಕರ್ಯಗಳೂ (ವಿಶೇಷವಾಗಿ ಓಪಿಟಿ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್) ಇವರಿಗೂ ಲಭ್ಯವಾಗುತ್ತವೆ. ಅಮೆರಿಕಾದಲ್ಲಿಯೇ ಈ ಬಗೆಯ ವಿಸಾ ದರ್ಜೆ ಬದಲಾವಣೆ ಮಾಡಿಕೊಂಡು, ಭಾರತಕ್ಕೆ ವಾಪಸು ಬಂದಲ್ಲಿ, ಅವರು ಭಾರತದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿ ಅಥವಾ ದೂತಾವಾಸಕ್ಕೆ ಎಫ್-1 ವಿಸಾ ಅರ್ಜಿಯನ್ನು ಸಲ್ಲಿಸಬೇಕು. ಇದರಿಂದಾಗಿ, ಸರಿಯಾದ ವಿಸಾದ ಮೇಲೆ ಅಮೆರಿಕಾ ಪುನಃ ಪ್ರವೇಶ ಸಾಧ್ಯ. ವಿದ್ಯಾರ್ಥಿ ವಿಸಾ ಎಫ್-1 ಕುರಿತ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ: http://chennai.usconsulate.gov/academicstudents/academic-visas.html

4. ಮಂಜುನಾಥ ಬಿ. ಹಿಂಡಿ, ಬೆಟಗೇರಿ-ಗದಗ
ನಮಗೆ ತಿಳಿದಂತೆ ಅಮೆರಿಕಾದ ಮೂಲ ನಿವಾಸಿಗಳು ರೆಡ್-ಇಂಡಿಯನ್ನರಾಗಿದ್ದು, ಪ್ರಸ್ತುತ ಅವರ ಸ್ಥಿತಿಗತಿಗಳ ಬಗ್ಗೆ (ಅಂದರೆ, ಅವರ ಜನಸಂಖ್ಯೆ, ಪಂಗಡಗಳು, ಭಾಷೆಗಳು, ಸಂಸ್ಕೃತಿ, ಧರ್ಮ) ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿ.

ಅಮೆರಿಕಾದ ಮೂಲ ನಿವಾಸಿಗಳನ್ನು ಸಾಮಾನ್ಯವಾಗಿ `ಅಮೆರಿಕನ್ ಇಂಡಿಯನ್ಸ್~ ಅಥವಾ `ನೇಟಿವ್ ಅಮೆರಿಕನ್ಸ್~ ಎಂದು ಗುರುತಿಸಲಾಗುತ್ತದೆ. ಈ ಮೂಲ ನಿವಾಸಿಗಳ ಅಧಿಕೃತ ಜನಸಂಖ್ಯೆ 45 ಲಕ್ಷ ಅಂದರೆ, ಅಮೆರಿಕಾದ ಒಟ್ಟು ಜನಸಂಖ್ಯೆಯ ಶೇ. 1.5ರಷ್ಟು. ಅಮೆರಿಕಾದ ಮೂಲ ನಿವಾಸಿಗಳದು ಕೇವಲ ಒಂದೇ ಒಂದು ಸಮೂಹವಲ್ಲ. ಹಲವು ನೂರು ಬುಡಕಟ್ಟುಗಳು, ಸಂಸ್ಕೃತಿಗಳು ಹಾಗೂ ಅಷ್ಟೇ ಸಂಖ್ಯೆಯ ಬಾಷೆಗಳು ಸೇರಿ, ನೇಟಿವ್ ಅಮೇರಿಕನ್ ಸಮುದಾಯ ರೂಪಿತವಾಗಿದೆ.

``ರಿಸರ್ವೇಷನ್ಸ್~~ ಎಂದು ಕರೆಯಲಾಗುವ ಸರ್ಕಾರ ನಿಗದಿ ಪಡಿಸಿದ ಜಮೀನಿನಲ್ಲಿ ಕೆಲ ಅಮೆರಿಕನ್ ಮೂಲನಿವಾಸಿಗಳು ವಾಸಿಸುತ್ತಾರೆ. ಆದರೆ, ಅನೇಕ ಮೂಲನಿವಾಸಿಗಳು ನಗರವಾಸಿಗಳಾಗಿ, ತಮ್ಮ ಸಂಸ್ಕೃತಿಯ ಸೌರಭದ ಮೂಲಕ ಅಮೆರಿಕದ ವೈವಿಧ್ಯವನ್ನು ಹೆಚ್ಚಿಸಿದ್ದಾರೆ.

ತಮ್ಮನ್ನು ತಾವೇ ಆಳುವ ಹಕ್ಕೂ ಸೇರಿದಂತೆ ಬುಡಕಟ್ಟು ಜನರ ಹಕ್ಕುಗಳನ್ನು ಅಮೆರಿಕಾ ಸರ್ಕಾರ ಗೌರವಿಸುತ್ತದೆ. ಅಲ್ಲದೇ, ಕ್ಯಾಸಿನೋ ಜೂಜಿನಂಥ (ಬೇರೆಡೆಯಲ್ಲಿ ಅದು ಕಾನೂನು ಬಾಹಿರ) ಹಲವಾರು ಚಟುವಟಿಕೆಗಳನ್ನೂ ಬುಡಕಟ್ಟು `ರಿಸರ್ವೇಷನ್~ ನೆಲದಲ್ಲಿ ನಡೆಸಬಹುದು. ಇಂಥ ಚಟುವಟಿಕೆಗಳಿಂದ ಬಂದ ಉತ್ಪನ್ನವನ್ನು ಬಳಸಿ, ಅನೇಕ ಬುಡಕಟ್ಟುಗಳು ತಮ್ಮ ಪಾರಂಪರಿಕ ಸಂಸ್ಕೃತಿಯನ್ನು ಮ್ಯೂಸಿಯಂ ನಿರ್ಮಾಣ, ಭಾಷಾ ತರಗತಿಗಳ ಮೂಲಕ, ಪುನಶ್ಚೇತನಗೊಳಿಸಲು ಯತ್ನಿಸುತ್ತಿವೆ.

ಅಮೆರಿಕಾ ಮೂಲ ನಿವಾಸಿಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://www.bia.gov ವೆಬ್ ಸೈಟಿಗೆ ಭೇಟಿ ನೀಡಿ.

5. ಎಸ್. ಸೋಮಶೇಖರ್, ಭದ್ರಾವತಿ
ಇದುವರೆಗೂ ಎಷ್ಟು ಅಮೆರಿಕ ಪ್ರಜೆಗಳು ಭಾರತವನ್ನು ಸಂದರ್ಶಿಸಿದ್ದಾರೆ? ಭಾರತದ ಬಗ್ಗೆ ಅವರ ಅಭಿಪ್ರಾಯವೇನು?

ಪ್ರತಿ ವರ್ಷ ಸುಮಾರು 8 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಭಾರತಕ್ಕೆ ಭೇಟಿ ನೀಡುತ್ತಾರೆ ಮತ್ತು ಈ ಸಂಖ್ಯೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಭಾರತದ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಹಾಗೂ ಸುಂದರವಾದ ಭೂಪ್ರದೇಶವನ್ನು ಕಾಣಲು ಅಮೆರಿಕಾ ಪ್ರವಾಸಿಗಳು ಇಚ್ಛಿಸುತ್ತಾರೆ. ಗಡಿಬಿಡಿಯ ನಗರಗಳೇ ಇರಬಹುದು, ಐತಿಹಾಸಿಕ ಸ್ಮಾರಕಗಳೇ ಇರಬಹುದು ಅಥವಾ ಸುಂದರವಾದ ಕಡಲ ಕಿನಾರೆಗಳು, ವನ್ಯಜೀವಿ ತಾಣಗಳೇ ಇರಬಹುದು, ಒಟ್ಟಿನಲ್ಲಿ ಅಮೆರಿಕನ್ನರಿಗೆ ಭಾರತ ಒಂದು ಉಲ್ಲಾಸದಾಯಕ ಗಮ್ಯಸ್ಥಾನ. ಭಾರತ ಹಾಗೂ ಭಾರತೀಯರ ಸೌಂದರ್ಯ ಮತ್ತು ಕ್ರಿಯಾಶೀಲತೆಯನ್ನು ಪ್ರಸ್ತಾಪಿಸುವ ಮೂಲಕ ಅನೇಕ ಅಮೆರಿಕನ್ನರ ಅನುಭವವನ್ನು ಅಧ್ಯಕ್ಷ ಒಬಾಮ ಒಟ್ಟು ಮಾಡಿದ್ದರು. ಅಲ್ಲದೇ, ಕಳೆದ ವರ್ಷದ ತಮ್ಮ ಭೇಟಿಯ ಸಂದರ್ಭದಲ್ಲಿ ಭಾರತೀಯರ ಆತಿಥ್ಯದ ಹರವನ್ನೂ ವಿಶೇಷವಾಗಿ ಪ್ರಶಂಸಿದರು.

ಬರೀ ಪ್ರವಾಸಿಗಳಷ್ಟೇ ಅಲ್ಲ, ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳೂ ಭಾರತಕ್ಕೆ ಬರುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಭಾರತಕ್ಕೆ ಆಗಮಿಸುವ ಅಮೆರಿಕಾ ವಿದ್ಯಾರ್ಥಿಗಳ ಸಂಖ್ಯೆ ಶೇ. 300ರಷ್ಟು ಹೆಚ್ಚಿದೆ. ವೈದ್ಯವಿಜ್ಞಾನ, ಇಂಜಿನಿಯರಿಂಗ್ ಹಾಗೂ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ನಿನಂತಹ ಕೋರ್ಸುಗಳ ಲಾಭವನ್ನು ಅಮೆರಿಕಾ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ``ಭಾರತದ ಬದುಕಿಗೆ ಹೊಂದಿಕೊಳ್ಳುವುದು ಅತಿ ಸರಳ ಏಕೆಂದರೆ, ಇಲ್ಲಿನ ಜನ ಸ್ನೇಹಪರರು. ನನಗೆ ಇಲ್ಲಿನ ಆಹಾರ ಎಂದರೆ ಬಲು ಪ್ರೀತಿ~~ ಎಂದು ಈಚೆಗಷ್ಟೇ ಪುಲ್ ಬ್ರೈಟ್ ಶಿಷ್ಯವೇತನದ ಮೇಲೆ ಭಾರತಕ್ಕೆ ಬಂದಿದ್ದ ಅಮೆರಿಕನ್ ವಿದ್ಯಾರ್ಥಿ ಹೇಳಿರುವುದು ಅರ್ಥಪೂರ್ಣ. ಅಲ್ಲದೇ, ಅಮೆರಿಕಾದ ಅಕಾಡೆಮಿಕ್ ಮಂದಿಗೂ ಭಾರತ ಆಕರ್ಷಣೆಯ ಕೇಂದ್ರ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಉತ್ಕೃಷ್ಟ ಸಂಸ್ಥೆಗಳ ಸಹಯೋಗ ಬಯಸುವ ಅಮೆರಿಕಾ ವಿದ್ವಾಂಸರಿಗೆ ಹಾಗೂ ವೃತ್ತಿಪರರಿಗೆ ಅಮೆರಿಕಾ-ಭಾರತ ಶೈಕ್ಷಣಿಕ ಪ್ರತಿಷ್ಠಾನ ಬೆಂಬಲಿತ ಫುಲ್ ಬ್ರೈಟ್ ಯೋಜನೆ ಅತಿ ದೊಡ್ಡ ಆಕರ್ಷಣೆ. ಅತಿ ದೊಡ್ಡ ಫುಲ್ ಬ್ರೈಟ್ ಯೋಜನೆ ಹೊಂದಿರುವ ಹೆಗ್ಗಳಿಕೆಯೂ ಭಾರತದ್ದೇ.

ಪ್ರಿಯ ಓದುಗರೇ,
ನಮಸ್ಕಾರ. ಪ್ರತಿಬಾರಿಯಂತೆ ಈ ಬಾರಿಯೂ ಹಲವು ಮಹತ್ವದ ಪ್ರಶ್ನೆಗಳನ್ನು ಕಳುಹಿಸಿದ್ದಕ್ಕಾಗಿ ಅಭಿನಂದನೆಗಳು. ದಕ್ಷಿಣ ಭಾರತದ ಎರಡು ಮಹತ್ವದ ಸ್ಥಳಗಳಿಗೆ ಭೇಟಿ ನೀಡುವ ಅದ್ಭುತ ಅವಕಾಶ ಕಳೆದ ತಿಂಗಳು ದೊರೆತಿತ್ತು. ಬಂದರು ನಗರ ಕೊಚ್ಚಿಯ ಸೌಂದರ್ಯವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಸವಿದೆ. ಕೊಚ್ಚಿಯಲ್ಲಿರುವ 4 ಶತಮಾನಗಳಷ್ಟು ಹಳೆಯದಾದ ಯೆಹೂದಿಗಳ ಪೂಜಾ ಮಂದಿರ, ಪೋರ್ಚುಗೀಸ್ ನಾವಿಕ ವಾಸ್ಕೋಡಾಗಾಮ ಅವರ ಸಮಾಧಿಯಿರುವ ಸೇಂಟ್ ಫ್ರಾನ್ಸಿಸ್ ಚರ್ಚಿಗೆ ಭೇಟಿ ನೀಡಿದ್ದೆ. ನಂತರದ ವಾರ ಹಂಪಿಗೆ ಭೇಟಿ ನೀಡಿ, 14ರಿಂದ 16ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ವಿಜಯನಗರ ಹಿಂದೂ ಸಾಮ್ರೋಜ್ಯದ ಅದ್ಭುತ ದೇವಾಲಯಗಳನ್ನು ನೋಡಿದೆ. ಭಾರೀ ಗಾತ್ರದ ಗಣೇಶ ವಿಗ್ರಹಗಳು ಮನಸೆಳೆದವು. ಗಣೇಶ ವಿಗ್ರಹದಲ್ಲಿ ಅಡಕವಾಗಿರುವ ಸಂಕೇತಗಳನ್ನು ವಿಶೇಷವಾಗಿ ಒಂದು ಕೈಯಲ್ಲಿ ಭಗ್ನ ದಂತ, ಮತ್ತೊಂದರಲ್ಲಿ ಮೋದಕಗಳು, ನನ್ನ ಮಾರ್ಗದರ್ಶಕ ವಿವರಿಸಿದ್ದು ಮಾಹಿತಿಪೂರ್ಣವಾಗಿತ್ತು. ಅಲ್ಲದೇ, ರಾಮಾಯಣ ಮಹಾಕಾವ್ಯದಲ್ಲಿ ಪ್ರಸ್ತಾಪವಾಗುವ ಹಲವಾರು ಘಟನೆಗಳಿಗೆ ಈ ಸ್ಥಳವೇ ವೇದಿಕೆಯಾಗಿತ್ತು ಹಾಗೂ ಅದಕ್ಕೆ ಕಿಷ್ಕಿಂಧೆ ಎಂಬ ಹೆಸರಿತ್ತು ಎಂಬುದನ್ನು ತಿಳಿದೆ. ಮಾರನೇ ದಿನ ಬಾದಾಮಿಯ ಆರನೇ ಶತಮಾನದ ಗುಹಾಂತರ ದೇವಾಲಯಗಳನ್ನು ನೋಡಿ, ಬೆರಗಾದೆ. ಅಲ್ಲಿನ ಕೋಡುಗಲ್ಲುಗಳ ಮೇಲೆ ನೆಗೆದಾಡುವ ಮಂಗಗಳ ಆಟ ಮೋಜು ನೀಡಿತು. ಆನೆಗುಂದಿಗೆ ಭೇಟಿ ನೀಡಿ, ಆ ಗ್ರಾಮದ ಸೊಗಸನ್ನು ಸವಿಯುವುದರ ಜೊತೆಗೆ, ಅಲ್ಲಿ ಸ್ಥಳೀಯ ಪಾರಂಪರಿಕ ಕಲಾ ಪ್ರಕಾರಗಳ ಕುರಿತ ಹೆಚ್ಚಿನ ಮಾಹಿತಿಯನ್ನು ಪಡೆಯುವುದರೊಂದಿಗೆ ನನ್ನ ಪ್ರವಾಸ ಮುಕ್ತಾಯಗೊಂಡಿತ್ತು.
ಈ ಮೋಹಕ ದೇಶವನ್ನು ಮತ್ತಷ್ಟು ಸುತ್ತುವ ಅವಕಾಶಕ್ಕಾಗಿ ಇದಿರು ನೋಡುತ್ತಿರುವೆ. ಅಂದ ಹಾಗೆ, ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
 ತಮ್ಮ ವಿಶ್ವಾಸಿ
ಜೆನಿಫೆರ್ ಮ್ಯಾಕ್‌ಇನ್ಟೈರ್
ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT