ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಬೇಕು...

Last Updated 9 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ದತ್ತು ಪಡೆದ ಮಕ್ಕಳು ಮತ್ತು ಪೋಷಕರ ವಿಶಿಷ್ಟ ಕಥೆಗಳು

ಮಾಲಾ ಸತತ ಗರ್ಭಪಾತದಿಂದ ತೀವ್ರ ಖಿನ್ನತೆಗೆ ತುತ್ತಾಗಿದ್ದ ಕಲಾವಿದೆ. ಆಕೆಯ ಆರೋಗ್ಯದ ಕುರಿತು ವಿಚಾರಿಸಲು ಮೃದುಲಾ ಶಂಕರ್ ಕರೆ ಮಾಡುತ್ತಿದ್ದರು. ನಮ್ಮಿಬ್ಬರಿಗೂ ಆಕೆ ಪರಿಚಿತಳು. ಮಾಲಾಳದ್ದು ಅಸಹಜ ಗರ್ಭಕೋಶ. ಭ್ರೂಣವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳಲು ಅದು ಅಸಮರ್ಥವಾಗಿತ್ತು. ಮುಂದೇನು ಎಂಬ ಪ್ರಶ್ನೆ ನಮ್ಮಳಗೆ ಸುಳಿದಾಡಿತು. ಒಂದೋ ಮಗುವನ್ನು ದತ್ತು ತೆಗೆದುಕೊಳ್ಳಬೇಕು ಅಥವಾ `ಬದಲಿ ತಾಯಿ' ಆಗಬೇಕು.

ದತ್ತು ಪ್ರಕ್ರಿಯೆ ಹೆಚ್ಚು ಸುಲಭ. ಕಾನೂನುಬದ್ಧವಾಗಿ ದತ್ತು ಕೇಂದ್ರದಲ್ಲಿ ನೊಂದಾವಣೆ ಮಾಡಿಕೊಂಡಿರುವ ಭವಿಷ್ಯದ ಪೋಷಕರ ಸುದೀರ್ಘ ಪಟ್ಟಿಯೇ ಇದೆ. ಅಲ್ಲಿ ಎದುರಾಗಿರುವುದು ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಸಮತೋಲನ! ಅದು ವೆಚ್ಚ ಮತ್ತು ಕಾನೂನಬದ್ಧ ಪ್ರಕ್ರಿಯೆಯನ್ನೂ ಒಳಗೊಂಡಿರುತ್ತದೆ. ಅಲ್ಲದೆ ಅದು ದೀರ್ಘ ಸಮಯ ನುಂಗುವ ಪ್ರಕ್ರಿಯೆ, ಕೆಲವೊಮ್ಮೆ ವರ್ಷಗಳೂ ಉರುಳಬಹುದು.

ದತ್ತು ಎಂದರೆ, ಮಗುವಿನ ಬಗ್ಗೆ ಆಸಕ್ತಿಯುಂಟಾಗಿ, ಮಗುವಿನ ಜನನಕ್ಕೆ ಸಂಬಂಧಿಸದ ಜನರು ಆ ಮಗುವಿನೊಂದಿಗೆ ಪೋಷಕ-ಮಗು ಸಂಬಂಧವನ್ನು ಸೃಷ್ಟಿಸಿಕೊಳ್ಳುವುದು ಎಂದು ವ್ಯಾಖ್ಯಾನಿಸಬಹುದು. ಇದು ಮಗುವಿನ ಹೆತ್ತ ಪೋಷಕರು ಮತ್ತು ಮಗುವನ್ನು ದತ್ತು ಪಡೆದುಕೊಳ್ಳುವ ಪೋಷಕರ ನಡುವೆ ಆ ಮಗುವಿಗೂ ಅನ್ವಯವಾಗುವಂತೆ ಅಸ್ತಿತ್ವದಲ್ಲಿರುವ ಪರಸ್ಪರ ಹಕ್ಕು ಮತ್ತು ಕರಾರು.\

ಮಾಲಾ ಅವರ ಸಮಸ್ಯೆಯ ಹಿನ್ನೆಲೆಯಲ್ಲಿ ನಾನು ನನ್ನ ದತ್ತು ಪಡೆದುಕೊಂಡ ಮಕ್ಕಳನ್ನು (ನನ್ನ ರೋಗಿಗಳು) ಮತ್ತು ಅವರ ಪೋಷಕರನ್ನು ಸಂಪರ್ಕಿಸಲು ನಿರ್ಧರಿಸಿದೆ. 20-25 ವರ್ಷಗಳ ಬಳಿಕ ನಾನು ಕರೆ ಮಾಡಿದಾಗ ಅವರೆಲ್ಲರಲ್ಲೂ ಹೊಸ ಉತ್ಸಾಹವಿತ್ತು.

ಪೈಲಟ್ ತರಬೇತಿ ಪಡೆಯುತ್ತಿರುವ 24 ವರ್ಷದ ಇಶಾನ್ ಮೊದಲನೆಯವನು. ಆತನ (ದತ್ತು) ಪೋಷಕರು ತಮ್ಮ ಮೂವರ ಕುಟುಂಬದಲ್ಲಿ ಸಮತೋಲನ ಸಾಧಿಸಲು ಮತ್ತು ತಮ್ಮ ಏಳು ವರ್ಷದ ಏಕೈಕ ಮಗಳನ್ನು ಕಾಡುತ್ತಿದ್ದ ಒಂಟಿತನವನ್ನು ನೀಗಿಸಲು ಉದ್ದೇಶಿಸಿದ್ದರು. ಮೊದಲ ಮಗಳ ಜನನದ ಬಳಿಕ ಅಂಡಾಶಯದ ಕಾಯಿಲೆಯಿಂದಾಗಿ ದ್ವಿತೀಯ ಬಂಜೆತನಕ್ಕೆ ತುತ್ತಾಗಿದ್ದ ತಾಯಿ ಮತ್ತೆ ಗರ್ಭ ಧರಿಸಲು ಸಾಧ್ಯವಿರಲಿಲ್ಲ.

ಆ ಕುಟುಂಬ ಕೊನೆಗೂ ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಶಿಶುವೈದ್ಯರ ಸಹಾಯದಿಂದಾಗಿ ಅವರು ಹೈದರಾಬಾದ್ ಆಸ್ಪತ್ರೆಯೊಂದರಿಂದ ಗಂಡು ಮಗುವೊಂದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೆಚ್ಚಿನ ದತ್ತು ಪೋಷಕರು ಅನ್ಯ ರಾಜ್ಯದಿಂದಲೇ ಮಗುವನ್ನು ಪಡೆದುಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ರಹಸ್ಯ ಕಾಪಿಡುವುದು ಇದರ ಉದ್ದೇಶವಿರಬಹುದು.

ಮೂವತ್ತು ದಿನಗಳ ಮಗುವಾಗಿದ್ದ (ಮಗುವನ್ನು ಆರು ವಾರಗಳ ಒಳಗೆ ದತ್ತು ತೆಗೆದುಕೊಳ್ಳುವುದು ಒಳ್ಳೆಯದು) ಇಶಾನ್ ಹೀಗೆ ಆ ಕುಟುಂಬದೊಳಗೆ ಕಾನೂನುಬದ್ಧವಾಗಿ ಪ್ರವೇಶಿಸಿದ. ಇಶಾನ್‌ನ ಅಕ್ಕ ನನ್ನ ಬಾಲ ರೋಗಿ. ಆ ಕುಟುಂಬಕ್ಕೆ ನನ್ನ ಮೇಲೆ ಭರವಸೆ ಮೂಡಿದಂತೆ, ಸುಮಾರು ಎರಡು ವರ್ಷದ ಮಗುವೊಂದನ್ನು ದತ್ತು ತೆಗೆದುಕೊಳ್ಳುವ ವಿಚಾರದ ಬಗ್ಗೆ ನನ್ನ ಬಳಿ ಚರ್ಚಿಸತೊಡಗಿದರು. ಅಂತಿಮವಾಗಿ ಗಂಡು ಮಗುವೊಂದನ್ನು ದತ್ತು ತೆಗೆದುಕೊಂಡ ಬಳಿಕ ಆ ಕುಟುಂಬದ ಚಿಂತೆ ಕಡಿಮೆಯಾಯಿತು. ಆ ಏಕಾಂಗಿ ಮಗಳಿಗೆ ತಮ್ಮನೊಬ್ಬ ಸಿಕ್ಕಿದ.

ಆದರೆ ನಂತರದ ದಿನಗಳು ಅಂದುಕೊಂಡಂತೆ ಇರಲಿಲ್ಲ. ಇಬ್ಬರ ನಡುವೆ ಸದಾ ಜಗಳ. ತಮ್ಮ ನಿರ್ಧಾರ ಸರಿಯಾಗಿತ್ತೇ ಎಂದು ಪೋಷಕರು ಹಲವು ಬಾರಿ ಚಿಂತಿಸುವಂತಾಗಿತ್ತು. ವರ್ಷಗಳು ಉರುಳಿದಂತೆ ನಿಧಾನವಾಗಿ ಮತ್ತು ಸ್ಥಿರವಾಗಿ ಅವರ ಮಗಳು ಹೊಸ ಅತಿಥಿಯನ್ನು ಒಪ್ಪಿಕೊಳ್ಳತೊಡಗಿದಳು. ಸುಮಾರು 24 ವರ್ಷಗಳಾದ ಬಳಿಕ ಇತ್ತೀಚೆಗಷ್ಟೇ ಆಕೆ (ಈಗ ಆಕೆಗೆ ಮದುವೆಯಾಗಿ ಎರಡು ಮಕ್ಕಳು) ಹೇಳಿದ್ದು- `ಆಂಟಿ ನಾನು ಅವನನ್ನು ಸಹೋದರ ಎಂದು ಸ್ವೀಕರಿಸಿದ್ದೇನೆ.'

ಈ ಸುಶಿಕ್ಷಿತ, ಪ್ರತಿಷ್ಠಿತ ಮತ್ತು ಸಿರಿವಂತ ಕುಟುಂಬವೂ ತಮ್ಮ ಮಕ್ಕಳ ವಿಚಾರದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತು. ಇಶಾನ್ ನಾಲ್ಕು ವರ್ಷದವನಿದ್ದಾಗ ಒಮ್ಮೆ ಭೇಟಿಯ ಸಂದರ್ಭದಲ್ಲಿ ಅವನನ್ನು ದತ್ತು ತೆಗೆದುಕೊಂಡಿದ್ದೇವೆ ಎನ್ನುವುದನ್ನು ಈಗಿನಿಂದಲೇ ಆತನ ಮನಸ್ಸಿಗೆ ಬರುವಂತೆ ಮಾಡಿ ಎಂದು ಸೂಚಿಸಿದೆ. ಅವರಿಗದು ಅಚ್ಚರಿ ಉಂಟು ಮಾಡಿತು. `ನಾವು ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಿದ್ದೇವೆ.

ಅವನು ನಾವೇ ಹೆತ್ತ ಮಗನಂತೆ. ಆತನಿಗೆ ಏಕೆ ಆಘಾತ ಉಂಟುಮಾಡಬೇಕು...'- ಹೀಗೆ ಹಲವು ಪ್ರಶ್ನೆಗಳು ಅವರಲ್ಲಿ ಉದ್ಭವಿಸಿದವು. ನಾನು ಎಲ್ಲವನ್ನೂ ಬಿಡಿಸಿ ಹೇಳಿದೆ. ಒಮ್ಮೆ ಈ ಪ್ರಕ್ರಿಯೆ ಶುರುವಾದರೆ, ಆತ ಯೌವನಾವಸ್ಥೆ ಪ್ರವೇಶಿಸಿದಾಗ ಯಾವುದೇ ಚಿಕ್ಕ ಸಮಸ್ಯೆ ಎದುರಾದರೂ ಅದನ್ನು ಅರ್ಥಮಾಡಿಕೊಳ್ಳಬಲ್ಲ.

`ಅಕ್ಕ'ನೂ ಆತನಿಗೆ ಪ್ರೋತ್ಸಾಹ ನೀಡಿದರೆ `ಎಷ್ಟಿದ್ದರೂ ಅವಳು ನಿಮ್ಮ ಮಗಳಲ್ಲವೇ' ಎಂದು ಹೇಳುವ ಸಂದರ್ಭ ಎದುರಾಗುವುದಿಲ್ಲ. ಅದು ಅವರಿಗೆ ಘಾಸಿ ಉಂಟುಮಾಡಿತು. ತೀರ್ಮಾನಗಳನ್ನು ತೆಗೆದುಕೊಳ್ಳುವುದು ಅವರಿಗೆ ಕಷ್ಟವಾಯಿತು. ಮಕ್ಕಳ ಪೋಷಣೆ ಸವಾಲಾಯಿತು. ಮಗುವಿನ ಅನುಕೂಲತೆಗಾಗಿ ಏನೇ ಹೇಳಿದರೂ, ಏನನ್ನೇ ಮಾಡಿದರೂ ಆರಂಭದಿಂದಲೇ ತಾನು ದತ್ತು ಮಗು ಎನ್ನುವುದು ಅವರ ಅರಿವಿಗೆ ಬರುವಂತೆ ಮಾಡಬೇಕು. ಏಕೆಂದರೆ, 2-4 ವರ್ಷದವರೆಗೆ ಈ ಪ್ರೀತಿ ತೀವ್ರವಾಗಿದ್ದರೆ, ಬೆಳೆದಂತೆ ತಿರಸ್ಕಾರದ ಪ್ರಮಾಣವೂ ಹೆಚ್ಚುತ್ತದೆ. ಅದು ಕೊನೆಗೆ ಅನಿರೀಕ್ಷಿತ ಅನಾಹುತಗಳಿಗೆ ತಲುಪಬಹುದು.

ಪೋಷಕರು ಯಾವಾಗ ಬೇಕಾದರೂ ಆಪ್ತಸಲಹೆಗಾರರು/ ಮನೋವೈದ್ಯರು/ ಶಿಶುವೈದ್ಯರ ಸಹಾಯ ಪಡೆಯಬಹುದು. ತಂದೆಯನ್ನು ಹೊರತುಪಡಿಸಿ ನಾನು ಈ ಮೂವರನ್ನೂ ಪ್ರತ್ಯೇಕವಾಗಿ ಮಾತನಾಡಿಸಿದೆ. `ಅಕ್ಕ'ಳನ್ನು ಕರೆದಾಗ ಆಕೆ `ನಾನು 24 ವರ್ಷದ ಬಳಿಕ ಇಶಾನ್‌ನನ್ನು ಒಪ್ಪಿಕೊಂಡಿದ್ದೇನೆ' ಎಂದಳು. ಈ ಮಕ್ಕಳ ತಾಯಿ (ವೈಜ್ಞಾನಿಕ ಹಾಗೂ ದತ್ತು ತಾಯಿ) ಅದೇ ಮಾತನ್ನೇ ಮುಂದುವರಿಸಿದ್ದರು.

ತನ್ನ ಮಗ ಪೈಲಟ್ ತರಬೇತಿಯಲ್ಲಿದ್ದರೂ ಆತನಿಗೆ `ಆತ್ಮಗೌರವ' ಕಡಿಮೆ ಎನ್ನುವುದು ಅವರ ಭಾವನೆ. ತಮ್ಮ ದತ್ತು ಮಗನನ್ನು ಬೆಳೆಸುವಾಗ ಏನಾದರೂ ತಪ್ಪು ಮಾಡಿದ್ದೇನೆಯೇ ಎಂಬ ಅಪರಾಧಿ ಭಾವ ಅವರನ್ನು ಕಾಡುತ್ತಿತ್ತು. ತನ್ನೊಳಗೆ, ಪೋಷಕರು ಮತ್ತು ಅಕ್ಕನೊಂದಿಗೆ (ಈಗ ಆತ ಹೆಚ್ಚು ಆತ್ಮೀಯವಾಗಿರುವುದು) ಇಶಾನ್ ಸಂತೋಷದಿಂದ ಇದ್ದರೂ ತನ್ನ ಹೆತ್ತ ತಾಯಿ ತನ್ನನ್ನು ಯಾಕೆ ತಿರಸ್ಕರಿಸಿದಳು ಎಂಬ ಚಿಂತೆ ಕಾಡುತ್ತಿತ್ತು. ಇದು ಕೆಲವೊಮ್ಮೆ ಆತನ ಅತಿ ಭಾವುಕತೆ `ಅಮ್ಮ ಬೇಕು' ಎಂದು ಕೊರಗುವಂತೆ ಮಾಡುತ್ತಿತ್ತು.

ಇಶಾನ್ ತನ್ನ ಅಮ್ಮನನ್ನು ಬಹುವಾಗಿ ಹಚ್ಚಿಕೊಂಡಿದ್ದ (ಈಡಿಪಸ್ ಮನೋ ಸಂಕೀರ್ಣತೆ-ಅಮ್ಮ ಮತ್ತು ಮಗನ ಪ್ರೀತಿ) ಮತ್ತು ಅಕ್ಕ ಅಪ್ಪನನ್ನು ಹೆಚ್ಚು ಹಚ್ಚಿಕೊಂಡಿದ್ದಳು. ಈಗ ಈ ಸನ್ನಿವೇಶ ಬದಲಾಗಿದೆ. ಮಗನ ದತ್ತು ತೆಗೆದುಕೊಂಡ ಕ್ರಮದ ಬಗ್ಗೆ ಈ ಕುಟುಂಬಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಪ್ರತಿಯೊಬ್ಬರಿಗೂ ಆತ `ದತ್ತು' ಎನ್ನುವುದು ತಿಳಿದಿದೆ. ಅವರು ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಮೊದಲಿನಂತೆ ಮುಕ್ತವಾಗಿ ಬೆರೆಯುತ್ತಿದ್ದಾರೆ.

ಇಪ್ಪತ್ತೊಂದರ ಹರೆಯದ ಸಾರಿಕಾಳದು ಇನ್ನೊಂದು ಕಥೆ. ಆಕೆ ಅತಿ ಸುಂದರಿ. ತನ್ನ 21ನೇ ಜನ್ಮದಿನಕ್ಕೆ ಪೋಷಕರು ದೊಡ್ಡ ಸಮಾರಂಭ ಏರ್ಪಡಿಸಿದ್ದಲ್ಲದೆ, ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ ಸಂತಸವನ್ನು ಆಕೆ ನನ್ನೊಂದಿಗೆ ಹಂಚಿಕೊಂಡಳು. ಆಕೆ ಈ ಶ್ರೀಮಂತ ಕುಟುಂಬದ ಏಕೈಕ (ದತ್ತು) ಮಗಳು. ಆಕೆ ಮನೆಯವರ ಪ್ರೀತಿ - ಕಾಳಜಿಯಲ್ಲಿ ತೋಯ್ದುಹೋಗಿದ್ದಳು.

ಆಕೆಯ ಪೋಷಕರು ತಮ್ಮ ಮಗಳು ದತ್ತು ಪಡೆದಾಕೆ ಎನ್ನುವುದನ್ನು ಸಮಾಜಕ್ಕೆ ತಿಳಿಸಲು ಸಿದ್ಧರಿರಲಿಲ್ಲ. ಅದು ಆಕೆಯ ಪೋಷಕರು ಮತ್ತು ನನ್ನ ನಡುವೆ ಸುರಕ್ಷಿತವಾಗಿದ್ದ ರಹಸ್ಯ. ಜನ ಆಕೆಯ ಪೋಷಕರ ಮುಖಚರ್ಯೆ ಮತ್ತು ಆಕೆಯ ಸೌಂದರ್ಯವನ್ನು ಹೋಲಿಸಿ ಮಾತನಾಡುತ್ತಿದ್ದದ್ದು ಅವಳಲ್ಲಿ ತುಂಬಾ ಖಿನ್ನತೆ ಉಂಟುಮಾಡಿತ್ತು.

`ಆಂಟಿ ಇಷ್ಟೆಲ್ಲಾ ಪ್ರೀತಿ, ಸಿರಿವಂತಿಕೆ ಇದ್ದರೂ, ನನ್ನ ಅಮ್ಮ ಅದ್ಭುತ ಸುಂದರಿ ಇರಬೇಕು ಎಂದು ಹಲವು ಬಾರಿ ಯೋಚಿಸಿದ್ದೇನೆ. ಆಕೆ ಯಾಕೆ ನನ್ನನ್ನು ತಿರಸ್ಕರಿಸಿದಳು ಎಂದು ಆಶ್ಚರ್ಯವಾಗುತ್ತಿದೆ. ನನಗೆ ಅಮ್ಮ ಬೇಕು...'

ಮಧ್ಯಮವರ್ಗದ ಪೋಷಕರು ದತ್ತು ತೆಗೆದುಕೊಂಡ ಮಕ್ಕಳ ಕಥೆ ಏನು? ವಾಣಿವಿಲಾಸ ಆಸ್ಪತ್ರೆಯಲ್ಲಿ ರೂಪಿಸಲಾಗಿರುವ ಸಮಿತಿ ಮೂಲಕ `ಆಕಾಂಕ್ಷಿ  ಪೋಷಕ'ರಿಗೆ ದತ್ತು ಪ್ರಕ್ರಿಯೆಯ ಕಠಿಣ ನಿಯಮಾವಳಿಗಳ ಅಡಿಯಲ್ಲಿ ಮಕ್ಕಳನ್ನು ಹಸ್ತಾಂತರಿಸಲಾಗುತ್ತದೆ. ಅಕಾಲಿಕ ಜನನದ ವಾರ್ಡ್‌ನಲ್ಲಿದ್ದ ನಮ್ಮ ಸಿಬ್ಬಂದಿ ನರ್ಸ್ ಒಬ್ಬರು ಅಲ್ಲಿನ 1.5 ಕೆ.ಜಿ. ತೂಕದ ಹೆಣ್ಣುಮಗುವನ್ನು ಬಹುವಾಗಿ ಹಚ್ಚಿಕೊಂಡಿದ್ದರು.

ಆ ಮಗು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದ್ದರೂ ಆಕೆ ಪ್ರಯತ್ನ ನಿಲ್ಲಿಸಿರಲಿಲ್ಲ. ಬೇರೆ ಮಕ್ಕಳನ್ನು ನೋಡಿಕೊಳ್ಳುವಂತೆ ಅದೇ ಬದ್ಧತೆಯೊಂದಿಗೆ ತುಸು ಹೆಚ್ಚಾಗಿಯೇ ಆ ಮಗುವನ್ನು ಆಕೆ ನೋಡಿಕೊಂಡರು. ಮೂರು ತಿಂಗಳಿಗೂ ಅಧಿಕ ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಆ ಮಗುವಿನ ಪ್ರಾಣ ಉಳಿಯಿತು.

ಸಮಿತಿಯ ಮೂಲಕ ಆಕೆ ಕಾನೂನುಬದ್ಧವಾಗಿ ಮಗುವನ್ನು ದತ್ತು ಪಡೆದರು. ನಾನು ಈ ಲೇಖನ ಬರೆಯುವಾಗ ಮಗುವಿನೊಂದಿಗೆ ಮಾತನಾಡಬೇಕೆಂದು ಬಯಸಿದ್ದೆ. ಅವರು ಗಾಬರಿಗೊಂಡರು. `ಮೇಡಂ, ನಾನು ದತ್ತು ತೆಗೆದುಕೊಂಡಿದ್ದೇನೆ ಎನ್ನುವುದನ್ನು ಆಕೆಗೆ ತಿಳಿಸಿಲ್ಲ' ಎಂದರು. ನಾನು ಎಷ್ಟೇ ಪ್ರಯತ್ನಪಟ್ಟರೂ ಆಕೆ ತನ್ನ ಮಗಳಿಗೆ ದತ್ತು ತೆಗೆದುಕೊಂಡ ವಿಚಾರವನ್ನು ಬಹಿರಂಗಪಡಿಸಲು ಒಪ್ಪಲೇ ಇಲ್ಲ.

ಮಧ್ಯಮ ವರ್ಗದವರಲ್ಲಿ ಹೆಚ್ಚಾಗಿ ಎದುರಾಗುವುದು ನೈತಿಕ ಭಯ! ಮಕ್ಕಳಿಲ್ಲದ ಕೆಲವು ಹತಾಶ ಪೋಷಕರು ದತ್ತು ತೆಗೆದುಕೊಳ್ಳಲು ವಾಮ ಮಾರ್ಗ ಅನುಸರಿಸುತ್ತಾರೆ. ಶ್ರೀನಿವಾಸ್ ಅವರು ನನ್ನ ಕ್ಲಿನಿಕ್‌ಗೆ ಮಾನಸಿಕ ಬೆಳವಣಿಗೆಯಲ್ಲಿ ತೀವ್ರ ಕುಂಠಿತವಾಗಿದ್ದ 10 ವರ್ಷದ ಮಗುವೊಂದನ್ನು ಕರೆತಂದದ್ದು ನೆನಪಾಗುತ್ತಿದೆ.

ಅವರ ಮಾತು ಕೇಳಿ ನನ್ನ ಹೃದಯ ಮಿಡಿಯಿತು. 60ರ ಪ್ರಾಯದ ಆ ದಂಪತಿ ಮಾನಸಿಕವಾಗಿ ವಿಕಸನ ಹೊಂದಿರದ ಮಗುವನ್ನು ಒಂದು `ಬೆಲೆ'ಗೆ ಪಡೆದುಕೊಂಡಿದ್ದರು. ಇಂದು ಅವರ ವಯಸ್ಸು ಮತ್ತು ಮಾನಸಿಕ ಅಸ್ವಸ್ಥ ಮಗುವಿನ ಪರಿಸ್ಥಿತಿ ಅವರ ಜೀವನವನ್ನು ಸಂಕೀರ್ಣ ಹಾಗೂ ಶೋಚನೀಯವಾಗಿಸಿತ್ತು.

ಮಗುವಿನ ಆಗಮನ ಸಂತಸ ತರುವ ಬದಲು ಅವ್ಯಕ್ತ ಸಂಕಟವನ್ನು ವೃದ್ಧ ದಂಪತಿಗೆ ತಂದೊಡ್ಡಿತು. ಅಲ್ಪ ಅಥವಾ ದೀರ್ಘ ಅವಧಿಯ ಸಂಭವನೀಯ ಘಟನೆಗಳ ಲೆಕ್ಕಾಚಾರದಲ್ಲಿ ಕಾನೂನುಬದ್ಧ ದತ್ತು ಪ್ರಕ್ರಿಯೆಯಲ್ಲಿ ಪೋಷಕರ ವಯಸ್ಸು 45 ಮೀರುವಂತಿಲ್ಲ. ಅಲ್ಲದೆ ಮಗು ಎಲ್ಲಾ ರೀತಿಯಲ್ಲೂ ಸಹಜವಾಗಿದೆ ಎನ್ನುವುದನ್ನೂ ತನ್ನ ವ್ಯಾಪ್ತಿಯೊಳಗೆ ಅದು ಖಚಿತಪಡಿಸುತ್ತದೆ.

ಮಣಿಪಾಲದ ಉನ್ನತ ಮಟ್ಟದ ಸುಶಿಕ್ಷಿತ ದಂಪತಿ ದತ್ತು ತೆಗೆದುಕೊಳ್ಳುವ ಮುನ್ನವೇ ಮಗುವೊಂದನ್ನು ನನ್ನ ಬಳಿ ಕರೆತಂದಿದ್ದರು. ಆ ಮಗುವನ್ನು ಹೃದಯ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದೆ. ಆಗ ಮಗು ಪ್ರಮುಖ ಹೃದಯ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದುಬಂದಿತು.

ಏಳು ವರ್ಷದ ದೀರ್ಘ ಸಮಯ ಕಾದಿದ್ದ ಅವರು ಕೊನೆಗೂ ಮಗುವೊಂದನ್ನು ಪಡೆದುಕೊಂಡಿದ್ದರು, ನಾನು ಅದರಲ್ಲೂ ಹೃದಯದ ಸಮಸ್ಯೆ ಪತ್ತೆಹಚ್ಚಿದ್ದೆ. ಅವರ ದುಃಖ ಹೇಳತೀರದು. ಎರಡು ವರ್ಷದ ಬಳಿಕ ಅವರು ಮತ್ತೊಂದು ಮಗುವನ್ನು ದತ್ತು ಪಡೆದುಕೊಂಡರು. `ದಯಾ' ಎಂದು ಹೆಸರಿಡಲು ಬಯಸಿದ್ದ ಮೊದಲ ಮಗು ದತ್ತು ಕೇಂದ್ರದಲ್ಲಿಯೇ ಅಸುನೀಗಿತ್ತು.

ದತ್ತು ಪ್ರಕ್ರಿಯೆಯು ಅತಿ ಆರೋಗ್ಯವಂತ ಮಗು ಹಾಗೂ ಲಿಂಗದ ಆಯ್ಕೆಗೆ ಅವಕಾಶ ನೀಡುತ್ತದೆ. ಜನ್ಮ ನೀಡುವ ಮಗುವಿನಲ್ಲಿ ನಿಮಗೆ ಈ ಆಯ್ಕೆ ಅವಕಾಶಗಳಿರುವುದಿಲ್ಲ!

2001 ಜನವರಿ 8. ನಾನು ವಾಣಿವಿಲಾಸ ಆಸ್ಪತ್ರೆಯ ನವಜಾತ ಶಿಶು ವಿಭಾಗದಲ್ಲಿದ್ದೆ. ಆಗ ಅಚ್ಚರಿಯ ಭೇಟಿ ನಡೆಯಿತು. ಒಬ್ಬರು ಬ್ರಿಟಿಷ್ ವ್ಯಕ್ತಿ ಮತ್ತೊಬ್ಬರು ಭಾರತೀಯರು. ಭಾರತೀಯ ಮಹಿಳೆ ಮಾರ್ಗರೆಟ್ ಸ್ಕಾಟ್ ಮತ್ತು ಆಕೆಯ ಸೋದರ ಸಂಬಂಧಿ ಬ್ರಿಟನ್ನಿನ ಬರ್ಬರಾ ಪೆಕ್. 1960ನೇ ಇಸವಿಯ ಡಿಸೆಂಬರ್ 17 ಇರಬೇಕು.

ಮೈ ನಡುಗಿಸುವ ಚಳಿಯ ರಾತ್ರಿಯಲ್ಲಿ ವಾಣಿವಿಲಾಸ ಆಸ್ಪತ್ರೆಯ ಮೆಟ್ಟಿಲ ಬಳಿ ಹೊಕ್ಕಳು ಬಳ್ಳಿಯ ಸಮೇತ ಆಗ ತಾನೆ ಜನಿಸಿದ ಹೆಣ್ಣುಮಗುವೊಂದು ಪತ್ತೆಯಾಯಿತು. ಮಾಟ್ರನ್ ಎಡಿತ್ ಸ್ಕಾಟ್ ಎನ್ನುವವರು ಆ ಮಗುವನ್ನು ಆರೈಕೆ ಮಾಡಿದ್ದಲ್ಲದೆ ಅದನ್ನು ದತ್ತು ತೆಗೆದುಕೊಂಡರು.

ಎಡಿತ್‌ರ ಕುಟುಂಬ ವಾಸಿಸುತ್ತಿದ್ದದ್ದು ಕೋಲಾರ ಗಣಿಸೀಮೆಯ ಮಾರಿಕುಪ್ಪಮ್‌ನಲ್ಲಿ. ಎಡಿತ್ ಈ ಮಗುವನ್ನು ದತ್ತು ತೆಗೆದುಕೊಳ್ಳುವಾಗ ಆಕೆಗೆ 50 ವರ್ಷ. ಮುಂದಿನ ದಿನಗಳಲ್ಲಿ ತನ್ನನ್ನು ನೋಡಿಕೊಳ್ಳಲು ಸಹಾಯಕರು ಬೇಕಿದ್ದರಿಂದ ಆಕೆ ದತ್ತು ತೆಗೆದುಕೊಂಡಿದ್ದಾರೆ ಎಂದು ಆ ಕುಟುಂಬ ಭಾವಿಸಿತ್ತು.

ಕೆಲ ಕಾಲದ ಬಳಿಕ ಮಾರ್ಗರೆಟ್ ತನ್ನ ತಾಯಿಯೊಂದಿಗೆ ಬೆಂಗಳೂರಿನಿಂದ ಪಂಜಾಬ್‌ನ ನಯನಾ ನಂಗಾ ಆಸ್ಪತ್ರೆ ಹಾಗೂ ನಂತರ ತನ್ನ ಅಮ್ಮನ ಹುಟ್ಟೂರು ಇಂಗ್ಲೆಂಡ್‌ಗೆ ತೆರಳಿದಳು.

ತನ್ನ ತಾಯಿ ತನ್ನನ್ನು ಎತ್ತಿಕೊಂಡ ಜಾಗವನ್ನು ನೋಡಲು ಬರ್ಬರಾ ಪೆಕ್ ಜೊತೆಗೆ ಮಾರ್ಗರೆಟ್ ಭಾರತಕ್ಕೆ ಮರಳಿದ್ದರು. ಆಗ ಆಕೆಗೆ 41 ವರ್ಷ. ವಾಣಿವಿಲಾಸ ಆಸ್ಪತ್ರೆಯ ಸಂಪೂರ್ಣ ಸುತ್ತಾಟದಲ್ಲಿ ನಾನೂ ಆಕೆ ಜೊತೆಗೂಡಿದ್ದೆ. ತಾಯಿ ಶುಶ್ರೂಷೆ ಕೊಠಡಿಯನ್ನು (ತನ್ನ ತಾಯಿ ಇದ್ದದ್ದು) ಮತ್ತು ಅಕಾಲಿಕ ಜನನದ ವಾರ್ಡ್ ಅನ್ನು ನೋಡಲು ಆಕೆ ಬಯಸಿದರು. ಅಲ್ಲಿದ್ದ ಅಕಾಲಿಕ ಜನನದ ಮಕ್ಕಳನ್ನು ನೋಡಿ ಅರೆಕ್ಷಣ ಮೂಕರಾಗಿ ನಿಂತರು. `ನಾನೂ ಅವರಲ್ಲಿ ಒಬ್ಬಳಾಗಿದ್ದೆ.

ಆದರೆ ಅದೃಷ್ಟವಂತೆ. ನನ್ನಮ್ಮ ಆ ಮೆಟ್ಟಿಲ ಬಳಿ ನನ್ನನ್ನು ಯಾಕೆ ಬಿಟ್ಟುಹೋದಳು ಎಂದು ಆಶ್ಚರ್ಯವಾಗುತ್ತಿದೆ.' ಸಾಕು ತಾಯಿಯ ಆರೈಕೆಯಲ್ಲಿ ಬೆಳೆದು 40 ವರ್ಷ ಕಳೆದರೂ ಆಕೆ ತನ್ನ ಬೇರನ್ನು ಹುಡುಕಿಕೊಂಡು, ಹೆತ್ತಮ್ಮನ ಕುರಿತು ಸುಳಿವು ಸಿಕ್ಕೀತೆಂಬ ಭರವಸೆಯಲ್ಲಿ ಬಂದವರು!

ಮಾರ್ಗರೆಟ್ ಭೇಟಿ ನಮ್ಮ ಭಾವನೆಗಳನ್ನು ಕಲಕಿದ್ದು ಮಾತ್ರವಲ್ಲ, ನಾವೆಲ್ಲರೂ ನಮ್ಮ ಮಗುವನ್ನು ಕೆಲವು ನಿಮಿಷಗಳ ಕಾಲ ಸಂಧಿಸಿದಂತಾಯಿತು. ಬರ್ಬರಾ ಅವರು ಬರೆದ ಪತ್ರ ಇನ್ನೂ ನನ್ನ ಹತ್ತಿರವಿದೆ. `ನಾನು ನನ್ನ ಸೋದರ ಸಂಬಂಧಿ ಮಾರ್ಗರೆಟ್‌ಳನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆತಂದಿದ್ದೆ. ನನ್ನ ಚಿಕ್ಕಮ್ಮ ಎಡಿತ್ ಸ್ಕಾಟ್ ಆಕೆಯನ್ನು ದತ್ತು ತೆಗೆದುಕೊಂಡ ಜಾಗವದು.

ಅಲ್ಲಿಯೇ ಆಕೆ ತಾಯ್ತನದ ಆರೈಕೆ ಪಡೆದದ್ದು. ಅಲ್ಲಿನ ಸಿಬ್ಬಂದಿ, ಆಡಳಿತಾಧಿಕಾರಿಗಳು, ದಾದಿಯರು ಮತ್ತು ವೈದ್ಯರ ಆತಿಥ್ಯ ನಮ್ಮ ಹೃದಯವನ್ನು ಸ್ಪರ್ಶಿಸಿದೆ. ಅವರು ಮಾಡುತ್ತಿರುವ ಎಲ್ಲಾ ಅದ್ಭುತ ಕಾರ್ಯಗಳನ್ನು ನೋಡಿದೆವು ಮತ್ತು ಅವರು ತೋರಿದ ಪ್ರೀತಿ ಹಾಗೂ ನಮಗಾಗಿ ಮೀಸಲಿಟ್ಟ ಸಮಯಕ್ಕಾಗಿ ಅವರಿಗೆ ಅಪಾರ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಅವರ ಮಹತ್ವಪೂರ್ಣ ಬದುಕಿಗೆ ಶುಭಾಶಯ ಕೋಡುತ್ತೇವೆ. ಶುಭ ಹಾರೈಕೆ ಮತ್ತು ಹೃತ್ಪೂರ್ವಕ ಅಭಿನಂದನೆಗಳೊಂದಿಗೆ.'

41 ವರ್ಷಗಳ ಬಳಿಕ ಸಾಗರವನ್ನು ದಾಟಿ ಮಾರ್ಗರೆಟ್ ತನ್ನ ಜನನದ (ತಿರಸ್ಕರಿಸಲ್ಪಟ್ಟ) ಜಾಗವನ್ನು ನೋಡಲು ಏಕೆ ಬಂದರು? ಇಶಾನ್ ಅಮ್ಮ ಬೇಕೆಂದು ಮತ್ತೆ ಮತ್ತೆ ಏಕೆ ಹೇಳುತ್ತಾನೆ? ಸಾರಿಕಾ ತನ್ನ ಸೌಂದರ್ಯದ ಕುರಿತು ಏಕೆ ಅಳುತ್ತಾಳೆ ಮತ್ತು ಅಮ್ಮನಿಗಾಗಿ ಹಂಬಲಿಸುತ್ತಾಳೆ? ತಾನು ಜನ್ಮವಿತ್ತ ತಾಯಿ ಅಲ್ಲದಿದ್ದರೂ ಅದನ್ನು ತನ್ನ ಮಗಳಿಗೆ ಹೇಳಲು ನಮ್ಮ ಸಿಬ್ಬಂದಿ ದಾದಿ ಹೆದರುವುದು ಏಕೆ?

ಯಾವ ಯಾವುದೋ ಕಾರಣಕ್ಕೆ ತಾವು ಹೆತ್ತ ಮಕ್ಕಳನ್ನು ತಿರಸ್ಕರಿಸುವಂತಾದ ಅಮ್ಮಂದಿರ ಕಥೆಯೇನು? ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಅವರ ಮಕ್ಕಳು `ಅಮ್ಮಾ' ಎಂದು ಕರೆದಾಗ ಅಥವಾ ಅತ್ತಾಗ ಏನಾಗುತ್ತದೆ? ಅವರ ಹೃದಯ ನೋವಿನಿಂದ ಕಲಕುವುದಿಲ್ಲವೆ? ಅಪರಾಧಿ ಭಾವ ಕಾಡುವುದಿಲ್ಲವೆ? ಈ ಹುಡುಗಿ ಮಾಲಾಳಿಗೆ ನಾನು ಏನೆಂದು ಹೇಳಲಿ, ದತ್ತು ತೆಗೆದುಕೋ ಎಂದೇ?

ದತ್ತು ಪ್ರಕ್ರಿಯೆಯ ವಿವರಗಳಿಗೆ www.adoptionindia.nic.in ಅಥವಾ ಸಿ.ಕೆ. ಮೀನಾ ಪದ್ಮ ಸುಬ್ಬಯ್ಯ ಅವರ ಟಠಿಜಿಟ್ಞ ಪುಸ್ತಕ ನೋಡಬಹುದು.
ಈ ಮೇಲೆ ಉಲ್ಲೇಖಿಸಿರುವ ಎಲ್ಲಾ ವ್ಯಕ್ತಿಗಳ ಮೂಲ ಹೆಸರನ್ನು ಬದಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT