ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ

ಅಕ್ಷರ ಗಾತ್ರ

ನಿನ್ನ ಬಾಯಿಗೆ ಮಣ್ಣಾಕ
ನಿನ್ನ ಆಸೆಗೆ ನನ್ನ ದ್ವಾಸೆ ಹುಯ್ಯ
ಎಕ್ಕುಟ್ಟೋಗ, ನಾಲಿಗೆ ಸೇದೋಗ...

ಹಿರಿಯ ವರದಿಗಾರ ಯಂಕಣ್ಣ ಉರು ಹಾಕುತ್ತಲೇ ಇದ್ದುದನ್ನು ಕೇಳಿ, ಪೆಕರ ಕುತೂಹಲ ದಿಂದ ಅವರ ಸನಿಹಕ್ಕೆ ಹೋದ. ‘ಇದೇನ್‌ ಸ್ವಾಮಿ?! ಯೋ.ರಾ. ಭಟ್ಟರ ಹೊಸ ಸಿನಿಮಾ ಹಾಡಾ?! ಬಹಳ ಪ್ರಾಸಬದ್ಧವಾಗಿದೆ, ಕೇಳೋಕೂ ಒಂಥರಾ ಮಜಾ ಇದೆ’ ಎಂದು ಪ್ರಶ್ನಿಸಿದ.

‘ಇನ್ನೂ ಇದೆ, ಸ್ವಲ್ಪ ಕೇಳಿ
ನಿನ್ನ ಬಾಯಿಗೆ ಎಳ್ಳು ನೀರು ಬಿಡ
ನಿನ್ನ ಕುರ್ಚಿ ಸಮೇತ ಎತ್ಕೊಂಡು ಹೋಗ
ನಿನ್ನ ಗಾದಿ ರಾತ್ರಿ ಕಳೆಯೋದ್ರೊಳಗೆ ಬೀಳ...’
‘ಇವತ್ತಿನ ಎಕ್ಸಕ್ಲೂಸಿವ್‌ ನ್ಯೂಸ್‌ ಕಂಡ್ರೀ ಇದು. ಗೊತ್ತಾಗಲಿಲ್ವ ನಿಮಗೆ?’ ಎಂದು ಯಂಕಣ್ಣ ಉಸುರಿದ.

‘ಇವತ್ತು ಫಿಲಂ ಚೇಂಬರ್‌ನಲ್ಲಿ ನಿರ್ಮಾ ಪಕರು, ವಿತರಕರು, ಕಲಾವಿದರು ಹಿಗ್ಗಾಮುಗ್ಗಾ ಕೂಗಾಡಿ, ಕಿತ್ತಾಡಿದ್ರು... ನಾನು ಅಲ್ಲೂ ಈ ರೀತಿ ಬೈಗುಳ ಕೇಳ್ಲಿಲ್ಲ. ‘ಜಿ’ ಕೆಟಗರಿಯಲ್ಲಿ ಸೈಟು ಹೊಡ್ಕೊಂಡ ಮಹಾಶಯರಿಂದ ನಿವೇಶನ ವಾಪಸು ಪಡೆಯುವಂತೆ ಶಿಫಾರಸು ಆಗಿದೆ. ಬಹುಶಃ ಸೈಟು ಕಳಕೊಂಡವರೇ ಹೀಗೆ ಬೈಗುಳ ಗಳ ಸರಮಾಲೆಯನ್ನೇ ಪೋಣಿಸುತ್ತಿದ್ದಾರೆ ಅಂತ ಕಾಣುತ್ತೆ’ ಎಂದು ಪೆಕರ ತನ್ನದೇ ವ್ಯಾಖ್ಯಾನ ಕೊಟ್ಟ.

‘ಮುಖ್ಯಮಂತ್ರಿಗಳ ವಿವೇಚನಾ ಕೋಟಾದಿಂದ ಅವಿವೇಚನೆಯ ವಿತರಣೆ ಆಗಿದೆ ಅಂಥ ದೂರು ಇತ್ತು. ಧರ್ಮಕ್ಕೆ ಹೆಸರಾದ ಸಿಂಗ್‌ ಸಾಹೇಬರು ಮನೆ ಕೆಲಸದವಳಿಗೆ, ಕೈಶಾಸ್ತ್ರ ಹೇಳುವವರಿಗೆ, ಪರ್ಸನಲ್‌ ಕಾರ್‌ ಡ್ರೈವರ್‌ಗೆ... ಹೀಗೆ ಬೇಕಾ ಬಿಟ್ಟಿ ವಿವಂಚನೆಯ ಆದೇಶ ಹೊರಡಿಸಿದ್ರಂತೆ, ರಪ್ಪ ಅವರ ಕಾಲದಲ್ಲಿ 141 ಶಾಸಕರು ಆ ಪಕ್ಷ, ಈ ಪಕ್ಷ ಎನ್ನದೆ ಒಳ್ಳೊಳ್ಳೆ ಏರಿಯಾದಲ್ಲಿ ದೊಡ್ಡ ದೊಡ್ಡ ಬಿಡಿಎ ಸೈಟು ಹೊಡ್ಕಂಡ್ರು. ಪ್ರತಿಯೊಬ್ಬ ಮುಖ್ಯಮಂತ್ರಿ ಕೈಯಿಂದ್ಲೂ ಒಂದೊಂದು ಸೈಟು ತೆಗೆದುಕೊಳ್ಳುವುದೇ ನಮ್ಮ ಶಾಸಕರ, ಸಂಸದರ ಕೆಲಸ ಆಗಿಬಿಟ್ಟಿದೆ.

ನಮ್ಮ ಬಿಡಿಎ ಕೂಡ ಮಹಾ ಸೋಂಬೇರಿ, ಮೂವತ್ತು ವರ್ಷದಿಂದ ಶ್ರೀಸಾ ಮಾನ್ಯನಿಗೆ ಒಂದು ಸೈಟೂ ಕೊಟ್ಟಿಲ್ಲ. ಆದರೆ ಇರುವವರಿಗೇ ವಿವೇಚನಾ ಕೋಟಾದ ಸೈಟನ್ನು ಹಂಚುತ್ತಲೇ ಇದೆ. ನಮ್ಮ ಮಾರಸ್ವಾಮಿಗಳೂ ವಿವೇಚನಾ ಕೋಟಾ ವಿತರಣೆಯಲ್ಲಿ ಹಿಂದೆ ಬಿದ್ದಿಲ್ಲ. ‘ನಾಗರಿಕನ ಮಾನ ನಾಡಲ್ಲಿ ಹೋಯ್ತು’ ಅನ್ನೋ ಹಾಗಾಯ್ತು 313 ಮಂದಿ ‘ಜಿ’ ಕೆಟಗರಿ ನಿವೇಶನ ಪಡೆದ ಮಹಾನುಭಾವರ ಗತಿ’ ಯಂಕಣ್ಣ, ಪೆಕರನ ಮುಂದೆ ತನಗೆ ಗೊತ್ತಿದ್ದ ವಿಷಯ ಇಟ್ಟ.

‘ಇನ್ನೂ ನೋಡ್ತಾ ಇರಿ, ಈಗ ಜಿ ಕೆಟಗರಿ ಯಲ್ಲಿ ಶಾಸಕರ, ಸಂಸದರ, ಮರ್ಯಾದಸ್ಥರ ಮಾನ ಹೋಯ್ತು, ನವೆಂಬರ್‌ ಒಂದು ಬರ್‍ಲಿ, ಆರು ಸಾವಿರ ಜನ ರಾಜ್ಯೋತ್ಸವ ಪ್ರಶಸ್ತಿ ಕ್ಯೂ ನಲ್ಲಿದ್ದಾರಂತೆ, ಅಲ್ಲೂ ಎಷ್ಟು ಜನರ ಮರ್ಯಾದೆ ಮಣ್ಣು ಪಾಲಾಗುತ್ತೋ ನೋಡೋಣ’ ಎಂದು ಪೆಕರ ಮುಂದಿನ ದಿನದ ಭವಿಷ್ಯ ಹೇಳಿದ.

‘ಅದಿರಲಿ, ಇವತ್ತಿನ ಬ್ರೇಕಿಂಗ್‌ ನ್ಯೂಸ್‌ ಏನೋ ಇದೆ ಅಂದ್ರಲ್ಲಾ ಏನು?’ ಎಂದು ಪೆಕರ ಕೆದಕಿದ.
‘ನಮ್ಮ ರಪ್ಪ ಅವರು, ಅಯ್ಯ ಅವರನ್ನು ಏಕ ವಚನದಲ್ಲಿ ಬೈದದ್ದು ಗೊತ್ತಿಲ್ಲವೇನಯ್ಯ ಪೆಕರ, ನಿಜವಾಗ್ಲೂ ನೀನು ಗುಗ್ಗು ನನ್ಮಗ ಕಣಯ್ಯ’ ಎಂದು ಯಂಕಣ್ಣ, ಪೆಕರನನ್ನು ಚುಡಾಯಿಸಿದ.

‘ಏನ್‌ ಯಂಕಣ್ಣ, ನಾಲಿಗೆ ಹರಿಯ ಬಿಡುತ್ತಿ ದ್ದೀಯಾ? ನಿಮ್ಮೂರಲ್ಲಿ ನೀನು ಏನ್‌ ಕಡೆದು ಕಟ್ಟೆ ಹಾಕಿದ್ದೀಯ ಎನ್ನುವುದು ಗೊತ್ತಿದೆ; ನಿನ್ನ ನಾಲಿಗೆ ಹೇಗೆ ಕಿತ್ತುಕೊಳ್ಳಬೇಕು ಎಂದು ಗೊತ್ತು, ನನ್ನ ಏಳಿಗೆ ಕಂಡು ನೀನು ಸಂಕಟಪಡುತ್ತಿದ್ದೀಯಾ? ಸುಮ್ಮನಿದ್ದವನನ್ನು ಕೆಣಕಿದ್ದೀಯಾ, ಇನ್ನು ಸುಮ್ಮನೆ ಇರುವುದಿಲ್ಲ, ನಿನ್ನ ಬೆನ್ನು ಹತ್ತುತ್ತೇನೆ’ ಎಂದು ಪೆಕರ ಥೇಟ್‌ ಅಯ್ಯ ಅವರ ರೀತಿಯಲ್ಲೇ ಗುಡುಗಿದ.

‘ನೂರು, ರಪ್ಪ ಬಂದರೂ ನನ್ನ ಅಧಿಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅಯ್ಯ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರಪ್ಪಾ’ ಎಂದು ಯಂಕಣ್ಣ ಸಮಾಧಾನಿಸಿದ.

‘ಆದರೂ ಮೈಸೂರು ದಸರಾದಲ್ಲಿ ಕುಸ್ತಿ ಬಹಳ ಜೋರಾಗಿತ್ತಂತೆ. ಹಳೆಯ ಕಾಲದ ಗರಡಿ ಉಸ್ತಾದರು ಒಳ್ಳೊಳ್ಳೆ ಪಟ್ಟು ಹಾಕಿದರಂತೆ. ಅದಾದ ಮೇಲೆ ನಮ್ಮ ಅಯ್ಯ ಅವರ ಮೇಲೆ ಬಹಳ ಜನ ಕುಸ್ತಿಗಿಳಿದು ಬಿಟ್ಟಿದ್ದಾರೆ. ಪಾಪ, ಆಸ್ಥಾನ ಸಾಹಿತಿಗಳು ಹೇಗೆ ಬಗೆಹರಿಸ್ತಾರೋ ನೋಡಬೇಕು. ಸಂಲಾಡರನ್ನು ಕಾಪಾಡೋದೇ ಈಗ ಅಯ್ಯ ಅವರಿಗೆ ದೊಡ್ಡ ತಲೆನೋವಾಗಿದೆ. ಮಠಾಧೀಶರಿಂದ ಅಯ್ಯ ಅವರು ದೂರವಿದ್ರೂ, ಇರೇಮಠರು ಒಂದೇ ಸಮನೆ ದಾಖಲೆಗಳ ಮೇಲೆ ದಾಖಲೆಗಳನ್ನು ತೂರುತ್ತಾ ಇರೋದನ್ನ ನೋಡಿದ್ರೆ, ಎಂಟನೇ ಶನಿ ಅಯ್ಯ ಅವರ ಹೆಗ ಲೇರಿಕಂಡಂಗಾಗಿದೆ’ ಎಂದು ಪೆಕರ ಅಯ್ಯ ಅವರ ಸಂಕಷ್ಟಗಳ ಪಟ್ಟಿ ಕೊಟ್ಟ.

‘ವರ್ಗಾವಣೆ ದಂಧೆಯಲ್ಲಿ ಹಣ ಮಾಡುತ್ತಿ ದ್ದೀಯಾ, ರೈತರ ತಲೆ ಬೋಳಿಸಿ ಅನ್ನಭಾಗ್ಯ ಯೋಜನೆಯಲ್ಲಿ ಒಂದು ರೂಪಾಯಿಗೆ ಅಕ್ಕಿ ಕೊಡುತ್ತಿದ್ದೀಯಾ ಎಂದು ರಪ್ಪ ಅವರು ರೋಡಲ್ಲಿ ನಿಂತುಕೊಂಡು ಕೂಗಾಡಿದರೆ, ಮಾರ ಸ್ವಾಮಿಗಳು ತಲೆದೂಗುತ್ತಾ, ಹೌದೌದು ಎಂದು ರಿದಮಿಕ್ಕಾಗಿ ಹೇಳಿದರಂತೆ’ ಎಂದು ಯಂಕಣ್ಣ ಸ್ವಲ್ಪ ಒಗ್ಗರಣೆ ಸುರಿದ.

‘ಹೀಗೆಲ್ಲಾ ‘ಹಳ್ಳಿ ಹೆಂಗಸಿನ’ ತರಹ ಮಾತ ನಾಡಬಾರದು. ಜಂಟಲ್‌ಮನ್‌ ತರಹ ಮಾತ ನಾಡಬೇಕು. ‘ಅಯ್ಯಾ ಅಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂಬ ನಾಣ್ಣುಡಿ ಹೇಳಿದ ನಾಡಿ ನಲ್ಲಿ ನಮ್ಮ ಲೀಡರ್‌ಗಳೇ ಹೀಗೆ ಎಲೆಎಲೆವೊ ಎಂದು ಕೂಗಾಡುವುದು ತರವೇ? ಮಾತು ಆಡಿದ್ರೆ ಹೋಯ್ತು, ಮುತ್ತು ಉದುರಿದ್ರೆ ಹೋಯ್ತು ಎನ್ನುವುದು ಇವರಿಗೆಲ್ಲಾ ನಿಜಕ್ಕೂ ಗೊತ್ತಿಲ್ಲವೇ? ಇವರೆಲ್ಲಾ ‘ಬೈಗುಳ ದೀಕ್ಷೆ’ ಪಡೆದು ಕೊಂಡವರಂತೆ ಮಾತನಾಡುವುದು ಏಕೆ?’ ಪೆಕರ ಮುಗ್ಧನಂತೆ ಪ್ರಶ್ನಿಸಿದ.

‘ಇಷ್ಟು ವರ್ಷಗಳ ಕಾಲ ಮನ್ನಾಡೇ ಬೆಂಗ ಳೂರಿನಲ್ಲಿದ್ದುದೇ ಅಯ್ಯ ಅವರಿಗೆ ಗೊತ್ತಿರಲಿ ಲ್ಲವಂತೆ! ಮನ್ನಾಡೇ ಅವರು ಸತ್ತ ಸುದ್ದಿ ಮರು ದಿನ ಪತ್ರಿಕೆ ಓದಿದ ನಂತರವೇ ಮೇಯರ್‌ ಸಾಹೇ ಬರಿಗೆ ಗೊತ್ತಾಯಿತಂತೆ. ಸಾಯುವವರು ಸ್ವಲ್ಪ ಮುಂಚೆಯೇ ಹೇಳಿ ಸತ್ತಿದ್ದರೆ, ನಾನೂ ಸಮಾಧಿ ಸ್ಥಳಕ್ಕೆ ಹೋಗಬಹುದಾಗಿತ್ತು ಎಂದು ಸಾಹೇ ಬರು ಕೈಕೈ ಹಿಸುಕಿ ಕೊಂಡಿದ್ದಾರೆ, ಇನ್ನು ಅಯ್ಯಾ ಅಂದರೆ ಸ್ವರ್ಗ, ಎಲವೋ ಎಂದರೆ ನರಕ ಅನ್ನುವ ವಿಷಯ ಹೇಗೆ ಗೊತ್ತಿರಲಿಕ್ಕೆ ಸಾಧ್ಯ?’ ಯಂಕಣ್ಣ ಪ್ರಶ್ನಿಸಿದ.

‘ಈ ದೇಶದಲ್ಲಿ ಬಹಳಷ್ಟು ರಾಜಕಾರಣಿಗಳಿಗೆ ಕಾಲುಬಾಯಿ ರೋಗ ಬಂದಿದೆ ಅಂಥ ನನಗೆ ಅನುಮಾನವಿದೆ. ರಾಜಕಾರಣದಲ್ಲಿ ನಾನು  ಪರಿ ಶುದ್ಧನಲ್ಲ ಎಂದು ಅಯ್ಯ ಅವರೇ ಒಮ್ಮೆ ಹೇಳಿ ದ್ದಾರೆ, ನಮ್ಮ ಅಯ್ಯ ಅವರು ಮೋದಿ ಇದ್ದಂಗೆ ಅಂಥ ಹಂಬರೀಷಣ್ಣ ಹೇಳಿದ್ದಾರೆ! ನಮ್ಮ ಯುವ ರಾಜ್‌ ರಾಹುಲ್‌ಜೀ ಅವರನ್ನೇ ತೆಗೆದುಕೊಳ್ಳಿ, ನನ್ನ ಅಮ್ಮಾಗೆ ಬೀಮಾರ್‌, ಬೀಮಾರ್‌ ಎಂದು ಕಣ್ಣೀರು ತೊಟ್ಟಿಕ್ಕಿಸುತ್ತಿದ್ದವರು, ಸಡನ್ನಾಗಿ ಅಂದು ಇಂದಿರಾ ಹತ್ಯೆಯಾಯಿತು, ನಂತರ ನನ್ನ ತಂದೆ ಹತ್ಯೆಯಾಯಿತು, ಮುಂದೆ ನನ್ನನ್ನು ಹತ್ಯೆ ಮಾಡಬಹುದು ಎಂದು ಹೇಳಲಾರಂಭಿಸಿದರು. ಈಗ ಇದ್ದಕ್ಕಿದ್ದಂತೆ, ಕೆಲವು ಮುಸ್ಲಿಂ ಯುವಕರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಸಂಪರ್ಕದಲ್ಲಿದ್ದಾರೆ ಎಂದು ಓಳು ಬಿಟ್ಟು ಫಜೀತಿಗೆ ಒಳಗಾಗಿದ್ದಾರೆ. ಏನಾಗಿದೆ, ಈ ದೇಶದಲ್ಲಿ?! ಕಾಲುಬಾಯಿ ರೋಗಕ್ಕೆ ಔಷಧಿ ಇಲ್ಲವೇ?’ ಪೆಕರ ತಲೆ ಚಚ್ಚಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT