ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಭವನದ ಬಿಳಿಯಾನೆಗಳಿಗೆ ಲಕ್ವ ಕಣ್ರೀ!

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಕಳೆದ ಶುಕ್ರವಾರ, ಮಾರ್ಚ್ 3, ‘ವಿಶ್ವ ವನ್ಯಜೀವಿ ದಿನ’ವಾಗಿತ್ತು. ನ್ಯೂಯಾರ್ಕಿನ ಮೃಗಾಲಯದಲ್ಲಿ ‘ಏಪ್ರಿಲ್’ ಹೆಸರಿನ ಗರ್ಭಿಣಿ ಜಿರಾಫ್‌ಗೆ ಅದು ಗೊತ್ತಿರಲಿಲ್ಲ. ಅದು ತನ್ನ ಪಾಡಿಗೆ ಪ್ರಸವದ ಕ್ಷಣದ ನಿರೀಕ್ಷೆಯಲ್ಲಿ ಶತಪಥ ಸುತ್ತುತ್ತಿತ್ತು. ಅಲ್ಲೇ ಎತ್ತರದಲ್ಲಿ ಇಟ್ಟ ಕ್ಯಾಮರಾ ಮೂಲಕ ಗರ್ಭಿಣಿಯ ಕ್ಷಣಕ್ಷಣದ ಚಲನವಲನಗಳು ಯೂಟ್ಯೂಬ್ ಮೂಲಕ ಬಿತ್ತರವಾಗುತ್ತಿತ್ತು. ಹೊರ ಜಗತ್ತಿನ ಲಕ್ಷಾಂತರ ಜನರು ಕಾತರ, ಕುತೂಹಲ, ಆತಂಕ ಎಲ್ಲ ಮೇಳವಿಸಿದಂತೆ ಅದನ್ನು ನೋಡುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುತ್ತಿದ್ದರು. ಗರ್ಭದಲ್ಲಿರುವ ಮರಿ ಒದೆದಿದ್ದು ಕಂಡಿತೆ? ಮರಿಯ ತೂಕ ಎಷ್ಟಿದ್ದೀತು? ಅಷ್ಟೆತ್ತರದ ಪ್ರಾಣಿ ನಿಂತೇ ಪ್ರಸವಿಸುತ್ತದಂತಲ್ಲ! 75  ಕಿಲೊ ತೂಕದ ಮರಿ ಕೆಳಕ್ಕೆ ಬಿದ್ದು ಗೋಣು ಮುರಿದರೆ?

ಅದಾಗಲೇ ಕೆಲವು ತಂಟೆಕೋರರು ‘ನೇರ ಪ್ರಸಾರ ನಿಲ್ಲಿಸಿ- ಮುಗ್ಧಜೀವಿಯ ಪ್ರಸವದ ಬಹಿರಂಗ ಪ್ರದರ್ಶನ ಸರಿಯಲ್ಲ’ ಎಂದು ಗುರ್ರೆಂದರು. ಅವರ ಒತ್ತಾಯಕ್ಕೆ ಮಣಿದು ನೇರ ಪ್ರಸಾರವನ್ನು ನಿಲ್ಲಿಸಿದ್ದೇ ತಡ, ಇನ್ನೂ ಜೋರಾಗಿ ಗಲಾಟೆ ಎದ್ದಿತು. ಟಿ.ವಿ.ಯಲ್ಲಿ, ಟ್ವಿಟ್ಟರ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಅದರ ಕುರಿತೇ ಚರ್ಚೆ, ಟೀಕೆ ಎಲ್ಲ ಆರಂಭವಾದವು. ‘ಇಂಥ ಶೈಕ್ಷಣಿಕ ಮಹತ್ವದ ಸಂಗತಿಯನ್ನು ಸೆನ್ಸಾರ್ ಮಾಡಬೇಡಿ- ಮಕ್ಕಳಿಗೆ ಇವೆಲ್ಲ ಗೊತ್ತಿರಬೇಕು’ ಎಂಬ ಒತ್ತಾಯ ಬಂತು. ಮತ್ತೆ ನೇರ ಪ್ರಸಾರ ಆರಂಭವಾಯಿತು.

ಮಕ್ಕಳಿಗೆ ವನ್ಯಲೋಕದ ವಿಚಾರಗಳು ಆದಷ್ಟೂ ಹೆಚ್ಚು ಗೊತ್ತಿರಬೇಕೆಂದು ಸುಧಾರಿತ ಸಮಾಜಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಕೋಪೆನ್‌ಹೇಗನ್ ಮೃಗಾಲಯದಲ್ಲಿ ಹದಿನೆಂಟು ಅಡಿ ಎತ್ತರದ ಆರೋಗ್ಯವಂತ ಎಳೆ ಜಿರಾಫನ್ನು ಕೊಂದು ಕತ್ತರಿಸಿ, ಮಕ್ಕಳೆದುರೇ ಹಸಿದ ಸಿಂಹಗಳಿಗೆ ತಿನ್ನಿಸಿದ್ದು ನಮಗೆ ಗೊತ್ತಿದೆ. ತಳಿ ಶುದ್ಧಿಯನ್ನು ಕಾಪಾಡಲೆಂದೇ ಈ ಕ್ರಮವನ್ನು ಕೈಗೊಂಡಿದ್ದನ್ನು ಹಾಗೂ ಶಾಲಾ ಮಕ್ಕಳೆದುರೇ ಈ ಬರ್ಬರ ಕೃತ್ಯವನ್ನು ನಡೆಸಿದ್ದನ್ನು ಮೃಗಾಲಯದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು.

ಈ ವರ್ಷದ ‘ವಿಶ್ವ ವನ್ಯಜೀವಿ ದಿನ’ದ ಘೋಷವಾಕ್ಯವೇ ‘ಎಳೆಯರ ಅಭಿಪ್ರಾಯ ಕೇಳೋಣ’ ಎಂದು. ಎಳೆಯರಿಗೆ ಸಹಜವಾಗಿ ವನ್ಯಜೀವಿಗಳ ಬಗ್ಗೆ ಅಕ್ಕರೆ, ಆಸಕ್ತಿ ಇರುತ್ತದೆ. ಹೇಗಿದ್ದರೂ ಅವರೇ ನಾಳಿನ ಅರಣ್ಯಾಧಿಕಾರಿಗಳಾಗಿ, ವನ್ಯಜೀವಿಗಳ ವಾರ್ಡನ್‌ಗಳಾಗಿ, ಕಾಡುಗಳ್ಳರಾಗಿ, ಪುಢಾರಿಗಳಾಗಿ, ಮುತ್ಸದ್ದಿಗಳಾಗಿ ರೂಪುಗೊಳ್ಳುತ್ತಾರೆ. ನಾವು ಹಿರಿಯರು ಮಾಡಿದ, ಮಾಡುತ್ತಿರುವ ತಪ್ಪು ಒಪ್ಪುಗಳನ್ನು ಅವರೆದುರು ಇಡಬೇಕು; ಕಾಡಿನಿಂದ ಅದೆಷ್ಟೇ ದೂರವಿದ್ದರೂ ಅವರು ಪ್ರಕೃತಿಯಿಂದ ವಿಮುಖರಾಗದಂತೆ ನೋಡಿಕೊಳ್ಳಬೇಕು- ಇದು ‘ವನ್ಯಜೀವಿ ದಿನ’ದ ಉದ್ದೇಶ. ವನ್ಯಲೋಕದ ಸ್ಥಿತಿಗತಿ ಈಗಂತೂ ತೀರ ಆತಂಕದ ಸ್ಥಿತಿ ತಲುಪಿದೆ. ಕಳೆದ 40 ವರ್ಷಗಳಲ್ಲಿ ಜಗತ್ತಿನ ವನ್ಯಜೀವಿಗಳ ಸಂಖ್ಯೆ ಶೇ 58ರಷ್ಟು ಕಡಿಮೆಯಾಗಿದೆ. ನಮ್ಮ ವೈಭೋಗದ ಜೀವನ ಹೀಗೇ ವಿಧ್ವಂಸಕ ಮಾರ್ಗದಲ್ಲಿ ಸಾಗುತ್ತಿದ್ದರೆ 40  ವರ್ಷಗಳ ನಂತರ ಮೃಗಾಲಯದ ಪಂಜರಗಳಲ್ಲಿ ಮನುಷ್ಯನೇ ಕೂರಬೇಕಾದ ಸ್ಥಿತಿ ಬರಲಿದೆ. ನಮ್ಮ ಕರ್ನಾಟಕದಲ್ಲಂತೂ ಪ್ರತಿ ದಿನ ಅರಣ್ಯ ಮತ್ತು ವನ್ಯಜೀವಿಗಳ ಮೇಲಿನ ದೌರ್ಜನ್ಯದ ಕರಾಳ ವರದಿಗಳು ಬರುತ್ತಲೇ ಇವೆ. ಇಲ್ಲಿ ಕಾಡಿಗೆ ಬೆಂಕಿ, ಅಲ್ಲಿ ಮರಗಳ ಹನನ, ಇತ್ತ ಮೃಗಗಳಿಗೆ ಗುಂಡು, ಅತ್ತ ವಿಷಪ್ರಾಶನ; ಈ ಕಡೆ ವಿದ್ಯುತ್ ತಂತಿಗೆ ಸಿಕ್ಕು ಆನೆ ಸಾವು, ಆ ಊರಾಚೆ ಉರುಳಿಗೆ ಸಿಕ್ಕು ಚಿರತೆಯ ಮರಣ... ಮನುಷ್ಯರ ಉಪಟಳ ಒಂದೆ, ಎರಡೆ?

ಇಂಥ ದುಷ್ಟಬುದ್ಧಿಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದೆಯಾದರೂ ಕರ್ನಾಟಕದ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಧೋರಣೆ ಮಾತ್ರ ನಾವೆಲ್ಲ ಅಚ್ಚರಿಪಡುವಷ್ಟು ತಟಸ್ಥವಾಗಿದೆ. ಇಡೀ ಅರಣ್ಯ ಇಲಾಖೆಯೇ ಲಕ್ವ ಹೊಡೆದ ಬಿಳಿಯಾನೆಯಂತೆ ಕೊರಡಾಗಿ ಕೂತಿದೆ. ಬೆಂಗಳೂರಿನ ಎಂಟಂತಸ್ತಿನ ‘ಅರಣ್ಯ ಭವನ’ದಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಒಂದಲ್ಲ, ಎರಡಲ್ಲ, ಒಂಬತ್ತು ನಿಗಮ- ಮಂಡಲಿಗಳ ಹೆಜ್ಜೆ ಗುರುತು ಕಾಣುತ್ತದೆ. ಇಲಾಖೆಯ ಜಾಲತಾಣವನ್ನು ನೋಡಿದರೆ ವನಭಕ್ಷಣೆಗೆ ಬೇಕಾದ ಮಾಹಿತಿಗಳೇ ‘ಸೇವೆ’ಯ ಹೆಸರಿನಲ್ಲಿ ಮುಖಕ್ಕೆ ರಾಚುತ್ತವೆ. ಮರ ಕಡಿಯಲು ಅನುಮತಿ ಹೇಗೆ, ಅರಣ್ಯವನ್ನು ಬೇರೆ ಉದ್ದೇಶಕ್ಕೆ ಪರಿವರ್ತಿಸುವುದು ಹೇಗೆ, ಮರಮಟ್ಟು ಖರೀದಿ ಹೇಗೆ, ಅತಿಥಿಗೃಹ ಕಾಯ್ದಿರಿಸುವುದು ಹೇಗೆ, ಖನಿಜ ಸಾಗಾಣಿಕೆ ರಹದಾರಿ ಪಡೆಯುವುದು ಹೇಗೆ, ಗುತ್ತಿಗೆದಾರರಿಗೆ ಟೆಂಡರ್ ಫಾರ್ಮ್ ಇಳಿಸಿಕೊಳ್ಳುವುದು ಹೇಗೆ, ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಹೇಗೆ ಇಂಥವೇ. ಅರಣ್ಯ ಸಂವರ್ಧನೆಯಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರೇರಣೆ ನೀಡುವ ಒಂದೇ ಒಂದು ಮಾಹಿತಿ ಅದರಲ್ಲಿಲ್ಲ. ಅರಣ್ಯಸೇವೆಯಲ್ಲಿ ಹುತಾತ್ಮರಾದವರ ಹೆಸರುಗಳ ಒಂದು ಪಟ್ಟಿ ಇದೆ. ಕಳೆದ ಫೆಬ್ರುವರಿ 17ರಂದು ಬಂಡೀಪುರದ ಕಾಡಿನ ಬೆಂಕಿ ಆರಿಸಲು ಹೋಗಿದ್ದ ಅರಣ್ಯರಕ್ಷಕ ಮುರಿಗೆಪ್ಪ ತಮ್ಮನಗೋಳ ಅವರ ಹೆಸರು ಸೇರ್ಪಡೆ ಆಗಿದೆಯೆ? ಛೆ, ಅದರಲ್ಲಿನ ಮಾಹಿತಿಗಳೆಲ್ಲ ಹತ್ತು ವರ್ಷಗಳ ಹಿಂದಿನವು! ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ಹೋಗಿ ತನ್ನ ಜೀವವನ್ನೇ ಬಲಿಕೊಟ್ಟ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಹೆಸರಿನಲ್ಲಿ ಉತ್ತಮ ಕೆಲಸಕ್ಕೆ ಪ್ರಶಸ್ತಿ ಪಡೆದ ಸಿಬ್ಬಂದಿಯ ಹಳೇ ಪಟ್ಟಿಯೊಂದನ್ನು ಕೊಡಲಾಗಿದೆ. ಅದರಲ್ಲಿ ‘ಶ್ರೀನಿವಾಸುಲು ಅವಾರ್ಡ್’ ಎಂದು ತಪ್ಪಾಗಿ ಬರೆಯಲಾಗಿದೆ. ಐದು ವರ್ಷಗಳೀಚೆ ಯಾವ ಹೆಸರೂ ಸೇರ್ಪಡೆಯಾಗಿಲ್ಲ.    

ಮಾರ್ಚ್ 3ರಂದು ‘ವಿಶ್ವ ವನ್ಯಜೀವಿ ದಿನ’ವನ್ನು ಆಚರಿಸಬೇಕಿತ್ತು. ಅದು ಇಲಾಖೆಗೆ ಗೊತ್ತೇ ಇರಲಿಲ್ಲವೇನೊ. ರಾಜಧಾನಿಯಲ್ಲಿ ಆ ದಿನ ಸಾಂಕೇತಿಕವಾಗಿಯಾದರೂ ಒಂದು ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿರಲಿಲ್ಲ (ಅದೇ ದಿನ ‘ಪ್ರಜಾವಾಣಿ’ಯ ಬೆಂಗಳೂರು ಆವೃತ್ತಿಯೊಂದರಲ್ಲೇ ಅರಣ್ಯಕ್ಕೆ ಸಂಬಂಧಿಸಿದ ಏಳು ಸುದ್ದಿಗಳು ಪ್ರಕಟವಾಗಿದ್ದವು, ನಾಲ್ಕು ಸುದ್ದಿಗಳು ವನ್ಯಜೀವಿಗಳಿಗೆ ಸಂಬಂಧಿಸಿದವೇ ಆಗಿದ್ದವು).  ವಿಶ್ವಸಂಸ್ಥೆಯೇನೊ ಕಳೆದ ನಾಲ್ಕು ವರ್ಷಗಳಿಂದ ವನ್ಯಜೀವಿ ದಿನವನ್ನು ಆಚರಿಸಿರೆಂದು ಕರೆ ಕೊಡುತ್ತಿದೆ. ಪ್ರತಿ ವರ್ಷ ವಿಶೇಷ ಘೋಷವಾಕ್ಯವನ್ನು ಬಿಡುಗಡೆ ಮಾಡುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಲು ಬೇಕಾದ ಭಿತ್ತಿಪತ್ರ, ಛಾಯಾಚಿತ್ರ, ವಿಡಿಯೊ ಸಂದೇಶ, ಘೋಷವಾಕ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಈ ವರ್ಷದ ‘ಎಳೆಯರ ಅಭಿಪ್ರಾಯ ಕೇಳೋಣ’ (ಲಿಸನ್ ಟು ದಿ ಯಂಗ್ ವಾಯ್ಸಸ್) ಎಂಬ ಘೋಷವಾಕ್ಯ ಹೇಗೆ ತಮಗೆ ಪ್ರಸ್ತುತ ಎಂಬುದನ್ನು ವಿವಿಧ ದೇಶಗಳ ಯುವಜನತೆ ತಿಳಿಸುತ್ತಿರುವ ವಿಡಿಯೊ ಕೂಡ ಯೂಟ್ಯೂಬ್‌ನಲ್ಲಿದೆ. ಅತ್ತ ಜಾಗತಿಕ ಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಲು ಅಧಿಕಾರಿಗಳಿಗೆ ಬಿಡುವಿಲ್ಲ; ಇತ್ತ ಅರಣ್ಯದ ಆಕ್ರಂದನಗಳಿಗೆ ಸ್ಪಂದಿಸುವಷ್ಟು ಕಾಳಜಿಯೂ ಇದ್ದಂತಿಲ್ಲ.
ನಿಸರ್ಗದ ಜೀವಸಮುದಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಜನಜಾಗೃತಿ ಮಾಡಲೆಂದು ವಿಶ್ವಸಂಸ್ಥೆ ಹಾಗೂ ನಮ್ಮದೇ ರಾಷ್ಟ್ರ ಎಷ್ಟೊಂದು ವಿಶೇಷ ದಿನಗಳನ್ನು ನಿಗದಿ ಮಾಡಿವೆ: ಕೆರೆಗಳ ರಕ್ಷಣೆಗೆಂದು ತರಿಭೂಮಿ ದಿನ (ಫೆಬ್ರುವರಿ 2), ಅರಣ್ಯ ದಿನ (ಮಾರ್ಚ್ 21) ವಿಶ್ವ ಜಲ ದಿನ (ಮಾರ್ಚ್ 22), ಪಕ್ಷಿಗಳ ವಲಸೆ ದಿನ (ಮೇ 2), ಜೀವಿ ವೈವಿಧ್ಯ ದಿನ (ಮೇ 22), ಪರಿಸರ ದಿನ (ಜೂನ್ 5), ಸಾಗರ ದಿನ (ಜೂನ್ 8), ಮರುಭೂಮಿ ತಡೆಗಟ್ಟುವ ದಿನ (ಜೂನ್ 17), ನದಿ ದಿನ (ಸೆಪ್ಟೆಂಬರ್ ಕೊನೆಯ ಭಾನುವಾರ), ಆವಾಸ ದಿನ (ಅಕ್ಟೋಬರ್ ಮೊದಲ ಸೋಮವಾರ), ಪ್ರಕೃತಿ ವಿಕೋಪ ಜಾಗೃತಿ ದಿನ (ಅಕ್ಟೋಬರ್ 13), ಮಣ್ಣು ದಿನ (ಡಿಸೆಂಬರ್ 5), ಪರ್ವತ ದಿನ (ಡಿಸೆಂಬರ್ 11)- ಈ ಎಲ್ಲ ದಿನಗಳಂದು ಸಾರ್ವಜನಿಕರಿಗೆ, ವಿಶೇಷವಾಗಿ ಎಳೆಯರಿಗೆ ನಿಸರ್ಗದ ಪರಿಚಯ ಮಾಡಿಸಲೆಂದು ಅಕ್ಕಪಕ್ಕದ ರಾಜ್ಯಗಳಲ್ಲಿ, ನೆರೆಯ ದೇಶಗಳಲ್ಲಿ ಅರಣ್ಯ ಮತ್ತು ಜೀವಿಪರಿಸರ ಇಲಾಖೆಗಳು ವಿಧವಿಧದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಅರಣ್ಯ ಇಲಾಖೆಯ ಕ್ಯಾಲೆಂಡರಿನಲ್ಲಾಗಲೀ ಜಾಲತಾಣದಲ್ಲಾಗಲೀ ಇವುಗಳ ಪ್ರಸ್ತಾಪವನ್ನು ಎಂದಾದರೂ ನೋಡಿದ್ದೇವೆಯೆ? ಕೆರೆ ಅಭಿವೃದ್ಧಿ ಪ್ರಾಧಿಕಾರ ಒಮ್ಮೆಯಾದರೂ ಫೆಬ್ರುವರಿ 2ರಂದು ಜನಸಂಪರ್ಕ ಸಭೆಯನ್ನು ಏರ್ಪಡಿಸಿತ್ತೆ?

ತೆರಿಗೆದಾರರ ಖರ್ಚಿನಲ್ಲಿ ಎಷ್ಟೊಂದು ದೇಶಗಳನ್ನು ಸುತ್ತಾಡಿ ಬರುವ ಈ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇದೆಯೆ? ಎಲ್ಲಿ ಹೋದಲ್ಲೆಲ್ಲ ಜನಸಂಪರ್ಕದ ಪಾಠಗಳು ಹೇರಳ ಸಿಗುತ್ತವೆ. ಮಕ್ಕಳನ್ನು, ಯುವಕರನ್ನು ವನ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ನಾನಾ ಬಗೆಯ ಪುಸ್ತಿಕೆಗಳು, ಧ್ವನಿಮುದ್ರಿಕೆಗಳು, ಆಟಗಳು, ಕಾಮಿಕ್ಸ್, ಸ್ಪರ್ಧೆಗಳು, ವಿಡಿಯೊ ಗೇಮ್‌ಗಳ ಮಾದರಿಗಳು ಸಿಂಗಪೂರ್‌ನಿಂದ ಹಿಡಿದು ಮಡಗಾಸ್ಕರ್‌ವರೆಗೆ ಸಿಗುತ್ತವೆ. ಅಲ್ಲಿಗೇ ಹೋಗಬೇಕೆಂದೇನಿಲ್ಲ, ಅಧಿಕಾರಿಗಳ ಲ್ಯಾಪ್‌ಟಾಪ್‌ನಲ್ಲೇ ಕೂತಲ್ಲೇ ಸಿಗುತ್ತವೆ. ಬಿಬಿಸಿ, ಅನಿಮಲ್ ಪ್ಲಾನೆಟ್, ನ್ಯಾಶನಲ್ ಜಿಯಾಗ್ರಫಿಕ್‌ನಂಥ ಅದ್ದೂರಿ ಮಾದರಿಗಳನ್ನು ಪಕ್ಕಕ್ಕೆ ಇಡೋಣ. ಕಡಿಮೆ ದರ್ಜೆಯ ಒಂದಾದರೂ ವಿಡಿಯೊವನ್ನು ಇವರು ಚಾನೆಲ್‌ಗಳಲ್ಲಿ ತೋರಿಸಿ ಚರ್ಚಿಸಿದ್ದನ್ನು ನೋಡಿದ್ದೇವೆಯೆ? ಭಾರತದ್ದೇ ಆದ ‘ಸ್ಯಾಂಕ್ಚುರಿ ಏಷ್ಯ’ದಂಥ ಶ್ರೇಷ್ಠ ದರ್ಜೆಯ ಪ್ರಕಟನೆ ಹೋಗಲಿ, ಕಡಿಮೆ ಗುಣಮಟ್ಟದ ಪುಸ್ತಕ, ಕರಪತ್ರ, ಭಿತ್ತಿಚಿತ್ರಗಳನ್ನಾದರೂ ಶಾಲೆ-ಕಾಲೇಜುಗಳಿಗೆ ತಲುಪಿಸಿದ್ದನ್ನು ನೋಡಿದ್ದೇವೆಯೆ? ಅರಣ್ಯ ಸಂಬಂಧಿ ಕಾರ್ಯಕ್ರಮಗಳನ್ನು ದೂರದ ಊರುಗಳಲ್ಲಿ ಬೇಡ, ಅರಣ್ಯಗಳ ಪಕ್ಕದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದನ್ನು ನಾವು ನೋಡಿಲ್ಲ. ಹಾಗೆ ನೋಡಿದರೆ  ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ವನ್ಯಜೀವಿಗಳಿಗೆ ಸಂಬಂಧಿಸಿದ ಇಂತಿಂಥದ್ದೇ ಪಾಠಗಳು ಇರಬೇಕೆಂದು ಶಿಕ್ಷಣ ಇಲಾಖೆಗೆ ನಿರ್ದೇಶನ ಕೊಡಬೇಕಾದ ಹೊಣೆ ಈ ಇಲಾಖೆಯ ಮೇಲಿದೆ. ಅದನ್ನೂ ನಿರ್ವಹಿಸಿಲ್ಲ. ಕರ್ನಾಟಕದ ಮಟ್ಟಿಗೆ ಪಶ್ಚಿಮ ಘಟ್ಟಗಳ ವಿದ್ಯಾಸಂಸ್ಥೆಗಳಿಗೆಂದೇ ಪ್ರತ್ಯೇಕ ಪಠ್ಯವೊಂದನ್ನು ರಚಿಸಿ ವಿತರಿಸಬೇಕಿತ್ತು. ನಾಡಿನ ಜೀವಿವೈವಿಧ್ಯ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಬಲ್ಲ ಆಕರ್ಷಕ ಪುಸ್ತಕಗಳನ್ನು, ಡಿವಿಡಿಗಳನ್ನು ಸಿದ್ಧಪಡಿಸಿ ಅದರ ಆಧಾರದ ಮೇಲೆ ಮಕ್ಕಳಿಗೆ ರಸಪ್ರಶ್ನೆಯನ್ನೊ, ಪರೀಕ್ಷೆಯನ್ನೊ, ಪ್ರವಾಸವನ್ನೊ ಏರ್ಪಡಿಸಬಹುದಿತ್ತು. ಅದೂ ಇಲ್ಲ. 

‘ಎಳೆಯರ ಅಭಿಪ್ರಾಯಗಳನ್ನು ಕೇಳೋಣ’ ಎಂಬ ಘೋಷವಾಕ್ಯ ಅರಣ್ಯ ಇಲಾಖೆಗೆ ನೇರವಾಗಿ ಅನ್ವಯವಾಗುತ್ತದೆ. ಹೊಸದಾಗಿ ಸೇವೆಗೆ ಸೇರಿದ ಯುವ ಅಧಿಕಾರಿಗಳಲ್ಲಿ ಸಹಜವಾಗಿ ಉತ್ಸಾಹ, ಪ್ರಾಮಾಣಿಕತೆ, ಪರಿಶ್ರಮ ಎಲ್ಲವೂ ಇರುತ್ತವೆ. ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಏಕೆಂಬುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ಮೇಲಿನವರ ಮರ್ಜಿ, ನಿರಾಸಕ್ತಿ, ನಿಧಾನಕ್ರಮ ಎಲ್ಲ ಸೇರಿ ‘ಅರಣ್ಯದ ಹಿತಾಸಕ್ತಿ’ ಎಂಬುದು ಕ್ರಮೇಣ ‘ಇಲಾಖೆಯ ಹಿತಾಸಕ್ತಿ’ಯಾಗಿ ಬದಲಾಗುತ್ತ, ನಂತರ ಅದೂ ಕಡಿಮೆಯಾಗಿ ನಿವೃತ್ತಿಯ ವೇಳೆಗೆ ‘ಸ್ವಂತದ ಹಿತಾಸಕ್ತಿ’ ಮುನ್ನೆಲೆಗೆ ಬರುತ್ತದೆ. ಹಂತಹಂತದ ಇಂಥ ಕುಸಿತ ನಮ್ಮ ಎಲ್ಲ ಸರ್ಕಾರಿ ಇಲಾಖೆಗಳಿಗೂ ಅನ್ವಯಿಸುತ್ತದಾದರೂ ಅರಣ್ಯ ಇಲಾಖೆಯ ನಿರುತ್ಸಾಹದ ಪರಿಣಾಮ ಇಡೀ ಜೀವಲೋಕಕ್ಕೇ ತಟ್ಟುತ್ತದೆ. ಎಳೆಯ ಅಧಿಕಾರಿಗಳ ಅಭಿಪ್ರಾಯವನ್ನು ಕೇಳುವ, ಅದನ್ನು ಗೌರವಿಸಿ ಅವರನ್ನೇ ಮುಂಚೂಣಿಗೆ ಒಡ್ಡುವ ದಿನಗಳು ನಮ್ಮಲ್ಲಿ ಎಂದು ಬರುತ್ತವೊ.

ಮೊನ್ನಿನ ‘ವಿಶ್ವ ವನ್ಯಜೀವಿ ದಿನ’ದಂದು ಥಾಯ್ಲೆಂಡಿನ ಅರಣ್ಯಗಳಲ್ಲಿ ವನ್ಯರಕ್ಷಣೆಯ ಸಂಭ್ರಮಾಚರಣೆ ನಡೆಯಿತು. ಪ್ರಾಣಿಪಕ್ಷಿಗಳ ಗೂಡುಗಳನ್ನು ಕೃತಕವಾಗಿ ನಿರ್ಮಿಸುವ ಪೈಪೋಟಿಯಲ್ಲಿ ಮಕ್ಕಳು ತೊಡಗಿದ್ದರು. ವನಜೀವಿಗಳಿಗಾಗಿ ಉಪ್ಪಿನುಂಡೆ ಮಾಡುವುದು ಹೇಗೆ ಎಂಬುದನ್ನು ಮಹಿಳೆಯರು ಕಲಿತರು. ನಮ್ಮ ಬಿಳಿಯಾನೆಗಳು ತಂತಮ್ಮ ಗೂಡುಗಳನ್ನೇನೊ ಭದ್ರ ಮಾಡಿಕೊಂಡು ಬೆಲ್ಲದುಂಡೆ ನೆಕ್ಕುತ್ತವೆ. ಉಪ್ಪಿನುಂಡೆ ನೆಕ್ಕಿಸಬಲ್ಲವರು ಬೇಕಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT