ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವನ್ನು ಹೊಸತುಗೊಳಿಸುವ ನುಡಿಗೆಟ್ಟ ನುಡಿ

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

`ಅರಿವಂ ಪೊಸಯಿಸುವುದು ಧರ್ಮಂ' ಅರಿವನ್ನು ಹೊಸತುಗೊಳಿಸುವುದೇ ಧರ್ಮ ಅನ್ನುವುದು ಪಂಪನ ಮಾತು. ಆದಿಪುರಾಣದಲ್ಲಿ ಬರುತ್ತದೆ. ಅರಿವನ್ನು ಹೊಸತಾಗದಂತೆ ತಡೆಯುವುದೇ ಅಧರ್ಮ ಎಂದೂ ಹೇಳುತ್ತಾನೆ. ಧರ್ಮವು ಸಂಸ್ಥೆಯ ರೂಪ ತಾಳಿದಾಗ ಅರಿವನ್ನು ಜಡಗೊಳಿಸುವ ಕೆಲಸವೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಪಂಪ ತನ್ನ ಭಾಷೆಯ ಮೂಲಕವೇ ಧರ್ಮವನ್ನೂ ಲೌಕಿಕವನ್ನೂ ಬೆಳಗಿದವನು.

ನುಡಿಗೆಟ್ಟ ನುಡಿ ಅನ್ನುವುದು ಅಲ್ಲಮನ ಮಾತು. ಮಾತನ್ನು ಬೆಳಕಿನ ಲಿಂಗವಾಗಿಸಿದವನು, ಮುಂದಿನ ಕವಿಗಳೆಲ್ಲ ನನ್ನ ಕರುಣೆಯ ಕಂದಗಳು ಅಂದವನು ಅಲ್ಲಮ. ನುಡಿಗೆಟ್ಟ ನುಡಿ ಅರಿವನ್ನು ಹೊಸತುಗೊಳಿಸುವ ಕಾವ್ಯದ, ಅನುಭಾವದ, ಜಂಗಮರೂಪಿಯಾದ ಧರ್ಮದ ಭಾಷೆ.

ನಮ್ಮನ್ನು, ನಮ್ಮ ಮನಸ್ಸನ್ನು, ಚಿರಪರಿಚಿತವಾದ ಲೋಕಾರ್ಥಗಳಿಂದ ಬಿಡಿಸಿ ಹೊಸತು ಮಾಡಿಕೊಳ್ಳಲು ನುಡಿಯನ್ನು ಒಂದಿಷ್ಟು ಕೆಡಿಸಿ ಬಳಸುವುದು ಅಗತ್ಯವೇನೋ. ಅಲ್ಲಮ `ಕೆಡಿಸಿ' ಅನ್ನುವ ಮಾತನ್ನು ಇನ್ನೂ ಬೇರೆಯ ಅರ್ಥದಲ್ಲೂ ಬಳಸುತ್ತಾನೆ: ಬೆಳಕಿನ ಬಲದಿಂದ ಕತ್ತಲಿನ ಕೇಡು, ಸತ್ಯದ ಬಲದಿಂದ ಅಸತ್ಯದ ಕೇಡು ಅನ್ನುವ ಬಳಕೆಗಳೂ ಇವೆ. ಕತ್ತಲನ್ನು ಕೆಡಿಸಿದರೆ ಅದು ಬೆಳಕಾಗುತ್ತದೆ, ಅಸತ್ಯವನ್ನು ಕೆಡಿಸಿದರೆ ಸತ್ಯವಾಗುತ್ತದೆ, ಅಂತೆಯೇ ನುಡಿಯನ್ನು ಕೆಡಿಸಿದರೆ ನುಡಿ ಇಲ್ಲದ ಮೌನ ಎದುರಾಗುತ್ತದೆ.

ಪಂಪ `ಕವಿ' ಅಲ್ಲಮ `ಅನುಭಾವಿ' ಎಂದು ಸ್ಥೂಲವಾದ ಲೇಬಲ್ಲು ಹಚ್ಚಿ `ಸರಿ, ಇಬ್ಬರೂ ಅರ್ಥವಾದರು' ಅನ್ನುವ ತೃಪ್ತಿಗೆ ಒಳಗಾಗುತ್ತೇವೆ. ಆದರೆ ಕವಿ ಮತ್ತು ಅನುಭಾವಿ ಇಬ್ಬರೂ ಬಳಸುವ ಭಾಷೆ ಮಾಡುವ ಕೆಲಸ ಒಂದೇ. ಸ್ಥಾವರವಾದ ಅರ್ಥಗಳಲ್ಲಿ ಸಿಕ್ಕಿ ಬಿದ್ದಿರುವ ಮನಸ್ಸನ್ನು ತಬ್ಬಿಬ್ಬು ಮಾಡುವುದು. ಅದರಿಂದ ನಮಗೆಲ್ಲ ಪರಿಚಿತವಾಗಿರುವ ನೋಟದ ಕ್ರಮ, ಗ್ರಹಿಕೆಯ ಕ್ರಮಗಳು ಸ್ವಲ್ಪ ಕಾಲದ ಮಟ್ಟಿಗಾದರೂ ಬದಲಾಗುತ್ತವೆ.

ಧರ್ಮವನ್ನು ಸಂಪ್ರದಾಯದ ಆಚರಣೆಗಳಿಗೆ, ಕಾವ್ಯವನ್ನು ಅರ್ಥದ ಗೂಟಕ್ಕೆ ಅನುಭಾವವನ್ನು ಮಾತಿಗೆ ಮೀರಿದ್ದು ಅನ್ನಲಾಗುವ ಮೌನಕ್ಕೆ ಬಿಗಿದು ಕಟ್ಟಿಹಾಕಿದ್ದೇವೆ; ಲೌಕಿಕ-ಅಲೌಕಿಕ, ಧಾರ್ಮಿಕ-ಸಾಮಾಜಿಕ ಅನ್ನುವಂಥ ಸುಳ್ಳು ವಿಭಜನೆಗಳನ್ನು ಮಾಡಿಕೊಂಡಿದ್ದೇವೆ. ನಿಜವಾಗಿ ನೋಡಿದರೆ ಈ ವಿಭಜನೆಗಳಿಗೆ ಕಾರಣವಾಗಿರುವುದು ಭಾಷೆಯ ಎರಡು ಬಗೆಯ ಬಳಕೆಗಳು- ತರ್ಕ ಮುಖ್ಯವಾದ, ತೋರಿಕೆಯ ವ್ಯತ್ಯಾಸಗಳನ್ನು ಖಚಿತವೆಂದು ತಿಳಿಯುವ, ಮನುಷ್ಯ ಕಟ್ಟಿಕೊಂಡ ಸಂಸ್ಥೆಗಳು ಯಾವುದನ್ನು ಮೌಲ್ಯವೆಂದು ನಂಬುತ್ತವೋ ಅವನ್ನಷ್ಟೇ ಒಪ್ಪುವ ಖಚಿತ ಅರ್ಥದ ಭಾಷೆ ಒಂದು; ಅರ್ಥವೆನ್ನುವುದು ನಾವು ಕಟ್ಟಿಕೊಂಡದ್ದು, ಮೌಲ್ಯವೆನ್ನುವುದು ಸಂದರ್ಭ ಅಗತ್ಯಗಳಿಂದಷ್ಟೆ ನಿರ್ಣಯವಾಗುತ್ತದೆ, ವ್ಯತ್ಯಾಸಗಳು ಕೂಡ ಕಲ್ಪಿತವೇ ಎಂದು ವ್ಯವಹರಿಸುವ ಭಾಷೆ ಇನ್ನೊಂದು. ಅದು ಅನುಭಾವದ ಭಾಷೆ, ಕಾವ್ಯದ ಭಾಷೆ. ಸಮಾನತೆಯು ನಮ್ಮ ಸಮಾಜದ ಆದರ್ಶ, ನಿಜವಾಗಬೇಕಾದದ್ದು ಅನ್ನುವುದು ನಮ್ಮ ನಿಲುವಾಗಿದ್ದರೆ ಭಾಷೆಯ ಇಂಥ ಬಳಕೆಗೂ ಹೆಚ್ಚಿನ ಗಮನಕೊಡಬೇಕು.

ಸರಳವಾದ ಉದಾಹರಣೆ ನೋಡಿ. ಬೆಳಕು-ಹಗಲು, ಕತ್ತಲು-ರಾತ್ರಿ ಇವು ಬೇರೆ ಬೇರೆ ಅನ್ನುವ ತರ್ಕ; ಒಂದು ಎಚ್ಚರ, ಜ್ಞಾನ ಇನ್ನೊಂದು ಮರೆವು, ಅಜ್ಞಾನ ಅನ್ನುವ ಮೌಲ್ಯಮಾಪನ; ಹಗಲು ಭಯವಿಲ್ಲದ ಅಪೇಕ್ಷಣೀಯ ಸಂಗತಿ, ಇರುಳು ಭಯಹುಟ್ಟಿಸುವ, ಸಾವಿನಂಥದು ಅನ್ನುವ ವ್ಯಾಖ್ಯಾನ ಇವೆಲ್ಲ ನಮಗೆ ಚಿರಪರಿಚಿತ. `ಹಗಲಿನ ಮುಖ ಇರುಳೆಂದರಿಯರು, ಇರುಳಿನ ಮುಖ ಹಗಲೆಂದರಿಯರು' ಅಂದು ಬಿಡುತ್ತಾನೆ ಅಲ್ಲಮ. ಸುಖವಾಗಿರುವವನು ಸುಖಿ, ದುಃಖಪಡುತ್ತಿರುವವನು ದುಃಖಿ ಅನ್ನುವುದು ನಮ್ಮ ಸಾಮಾನ್ಯ ಜ್ಞಾನ.

`ಸುಖವ ಬಲ್ಲಾತ ಸುಖಿಯಲ್ಲ, ದುಃಖವ ಬಲ್ಲಾತ ದುಃಖಿಯಲ್ಲ' ಅನ್ನುತ್ತಾನೆ ಅಲ್ಲಮ. ಇವೆಲ್ಲ ಹೇಗೆ ಸಾಧ್ಯ, ಇವುಗಳ ಅರ್ಥವೇನು ಅನ್ನುವ ಪ್ರಶ್ನೆಗಿಂತ ಹೌದೇ, ಹೀಗೂ ನೋಡಬಹುದೇ, ಹೀಗೂ ಗ್ರಹಿಸಬಹುದೇ? ಹಗಲು-ಇರುಳು, ಸುಖ-ದುಃಖಗಳನ್ನು ಹೀಗೆ ಕಂಡ ಮನಸು ಎಂಥದಿರಬಹುದು? ನಮ್ಮ ಮನಸ್ಸೂ ಕ್ಷಣಮಾತ್ರವಾದರೂ ಅಂಥ ಮನಸು ಆಗುವಂತೆ, ಆ ಮನಸ್ಸಿನ ಗ್ರಹಿಕೆಯನ್ನು ನಮ್ಮಳಗೇ ಅಭಿನಯಿಸಿಕೊಳ್ಳುವಂತೆ, ಅರ್ಥಗಳ ಸಿಕ್ಕಿಲ್ಲದ ಮೌನದಲ್ಲಿ ಅಲ್ಲಮನ ಭಾಷೆ ನಮ್ಮ ಅರಿವನ್ನು ಹೊಸತುಗೊಳಿಸುತ್ತದೆ.

ಜೈನಧರ್ಮ, ವೈರಾಗ್ಯ ಇತ್ಯಾದಿಗಳನ್ನು ಕುರಿತದ್ದೆಂದು ನಾವು ಅಂದುಕೊಂಡಿರುವ ಪಂಪನ ಆದಿಪುರಾಣದಲ್ಲಿ ಬದುಕೇ ನಿತ್ಯೋತ್ಸವ (ಇದು ಪಂಪನದೇ ಮಾತು)- ಹುಟ್ಟು, ನಾಮಕರಣ, ಮದುವೆ, ಯುದ್ಧ, ವೈರಾಗ್ಯ ಕೂಡ ಪಂಪನಿಗೆ ಉತ್ಸವವೇ. ಆ ಕಾವ್ಯದ ಉದ್ದಕ್ಕೂ ನರ್ತನದ ಪ್ರತಿಮೆಗಳ ಮೆರವಣಿಗೆ ಇದೆ. ಪ್ರತಿ ಆಶ್ವಾಸದಲ್ಲೂ ಹತ್ತು ಬಾರಿಯಾದರೂ `ಹೊಸತು' ಎಂಬ ಪದ ಕಾಣುತ್ತದೆ.

ನಿತ್ಯವೂ ಹೊಸತಾಗಿ ಕಾಣುವ ಕಡಲೂ ಕಾವ್ಯದ ಉದ್ದಕ್ಕೂ ಹಲವು ಅನುಭವಗಳಿಗೆ ರೂಪಕವಾಗುವ ಮಾವಿನ ಮರವೂ ಕಾಮವನ್ನು, ಸ್ಮರಣೆಗಳನ್ನು, ಸಾವನ್ನು, ವೈರಾಗ್ಯವನ್ನು ಕೂಡ ಹೊಸತಾಗಿ ಕಾಣಿಸುತ್ತವೆ. ತಾನು ತೀರ್ಥಂಕರನ ಕಥೆಯಲ್ಲಿ ತನ್ಮಯನಾಗಿರುವ ಹಾಗೆಯೇ ಓದುಗರೂ ತನ್ಮಯವಾಗಿ ಕಥೆಯನ್ನು ಅನುಭವಿಸಿ, ಆ ಅನುಭವದ ಮೂಲಕವೇ ಹೊಸಬರಾಗಿ ಎಂದು ಪಂಪನ ಭಾಷೆ ನಮ್ಮನ್ನು ಹಿಗ್ಗಿಸುತ್ತದೆ.

ಶರಣ, ಧರ್ಮಸ್ಥಾಪಕರಲ್ಲಿ ಒಬ್ಬ ಎಂದೆಲ್ಲ ಭಾವಿಸಿರುವ ಅಲ್ಲಮ ಶ್ರೇಷ್ಠತೆ, ಜಾತಿಯ ಮೇಲರಿಮೆಗಳನ್ನು ಉಳ್ಳವರು ಮೆಟ್ಟಿಬೀಳುವ ಹಾಗೆ ಗುಹೇಶ್ವರನನ್ನು ತಳವಾರನೆನ್ನುತ್ತಾನೆ. ದೇವರು ಬಂದರೆ ದೇಗುಲ ಓಡಿದ್ದು ಕಂಡೆ ಅನ್ನುತ್ತಾನೆ. ಭಕ್ತರಿಗೆ ದಿಗ್ಭ್ರಮೆಯಾಗುವ ಹಾಗೆ ಗುಹೇಶ್ವರನು ಸತ್ತ ಸುದ್ದಿಯ ಬಗ್ಗೆ ಹೇಳುತ್ತಾನೆ. ಗಂಗೆ ಗೌರಿಯರು ಮುಂಡೆಯರಾಗಿ ರಂಡೆಗೂಳು ಉಣ್ಣುವ ಬಗ್ಗೆ ಹೇಳುತ್ತಾನೆ.

ಗುಹೇಶ್ವರ ಅಂದೂ ಇಲ್ಲ, ಇಂದೂ ಅನ್ನುತ್ತಾನೆ. ಕೊನೆಗೆ ಗುಹೇಶ್ವರನೆಂಬ ಪದವೇ `ಸೊನ್ನೆ ಬಂಜೆ' ಅನ್ನುತ್ತಾನೆ. ಎಲ್ಲ ಧಾರ್ಮಿಕ ಕುರುಹುಗಳನ್ನೂ ನಿರಾಕರಿಸುತ್ತಾನೆ. ಜ್ಞಾನದ, ತರ್ಕದ ಬೆಂಬಲವಿಲ್ಲದ, ಕೇವಲ ಭಾವುಕತೆಯೂ ಅಲ್ಲದ, ಯಾವ ಅವಲಂಬನೆಗಳೂ ಇಲ್ಲದ ಈ ಕ್ಷಣದ ಮಿಂಚಿನಷ್ಟೆ ಸ್ವತಂತ್ರವಾದ ಅರಿವನ್ನು ನಿಮ್ಮದಾಗಿಸಿಕೊಳ್ಳಿ ಅನ್ನುತ್ತಾನೆ. ಧರ್ಮವು ಸಂಸ್ಥೆ ರೂಪಿಸಿದ ದೇಗುಲ, ಸಂಪ್ರದಾಯ ರೂಪಿಸಿದ ಆಚರಣೆ ಅಲ್ಲದಿದ್ದರೆ ಒಲವಿನ ಕೂಟದಂಥ ಅನುಭವವಾದರೆ ಅದಕ್ಕೆ ಸಮನಾದದ್ದು ಬೇರೆ ಇಲ್ಲ. ಅರಿವನ್ನು ಬಲ ಅಂದುಕೊಂಡು ಅದಿಲ್ಲದವರನ್ನು ಗೆಲ್ಲಬೇಕೆಂದು ಮಾತಿನ ಉಯ್ಯಲೆ ಏರಿ ಒರಲಿ ಕೆಡುವ ದರಿದ್ರರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ, ಧರ್ಮವನ್ನು `ಸೋಂಕಿನ ಸೋಜಿಗ'ವಾಗಿಸಿಕೊಳ್ಳುವ `ಪರಿಣತೆ ಫಲಿಸಬೇಕು' ಅನ್ನುತ್ತಾನೆ. ಅನುಭವ ರೂಪದ ಧರ್ಮ ಕೂಡ ಅವನಿಗೆ ಒಲವಿನ ಕೂಟ. ಒಲವಿನ ಕೂಟಕ್ಕೆ ಹಾಸಿಗೆಯ ಹಂಗು ಅನಗತ್ಯ, ನಿಜವಾಗಿ ಧರ್ಮಿಷ್ಠರಾಗುವುದಕ್ಕೆ ಸಂಸ್ಥೆಯಾಗಿ ಜಡವಾಗಿರುವ ಧರ್ಮ ಅನಗತ್ಯ ಅನ್ನುತ್ತಾನೆ.

ಇದನ್ನೆಲ್ಲ ನಾನು ಇಷ್ಟು ಸ್ಪಷ್ಟವಾಗಿ ಹೇಳುತ್ತಿರುವುದೇ ವಿಪರ್ಯಾಸ. ಪಂಪನನ್ನು ಸ್ವಲ್ಪ ಮುಂಚೆ ಅಷ್ಟೇ ಸ್ಪಷ್ಟವಾಗಿ ಹೇಳಿದ್ದೂ ವಿಪರ್ಯಾಸವೇ. ಯಾಕೆಂದರೆ ಕವಿ ಮತ್ತು ಅನುಭಾವಿಗಳು ಅರ್ಥವನ್ನು ಕಟ್ಟುತ್ತಿರುವಾಗಲೇ ಅದನ್ನು ಬಿಚ್ಚಿ ಮುಕ್ತಗೊಳಿಸುತ್ತಲೂ ಇರುತ್ತಾರೆ. `ಗುಹೇಶ್ವರನಿದ್ದಾನೆ ಇಲ್ಲದಂತೆ' ಅನ್ನುವ ಮಾತು ನೆನಪಾಗುತ್ತಿದೆ. ಫ್ರೆಂಚ್ ಭಾಷೆಯ ಸಿಮಿಯೋನ್ ವೀಲ್ ಎಂಬ ಲೇಖಕಿ  `ದೇವರು ತನ್ನ ಸೃಷ್ಟಿಯಲ್ಲಿ ಇಲ್ಲದಂತೆ ಮಾತ್ರ ಇರಬಲ್ಲ' ಅನ್ನುವಾಗಲೂ ನುಡಿಯನ್ನು ಹೀಗೇ ಬಳಸಿದ್ದಾಳೆ.

`ಇಲ್ಲದಂತೆ ಇರುವುದು' ಬಲು ದೊಡ್ಡ ವಿರೋಧಾಭಾಸ. ಅನುಭಾವದ ನುಡಿಗಳ ವಿರೋಧಾಭಾಸವನ್ನು ಸಾವಧಾನವಾಗಿ ಮೆಲುಕುಹಾಕುವುದೊಂದೇ ನಮಗಿರುವ ದಾರಿ. ಕನಕದಾಸರ ಮುಂಡಿಗೆಗಳು, ಶರೀಫರಂಥವರು ಕೋಡಗನ ನುಂಗಿದ ಕೋಳಿ ಇತ್ಯಾದಿಯಾಗಿ ಬಳಸುವ ರೂಪಕಗಳು, ಅಲ್ಲಮನದೇ ಹಲವು ಬೆಡಗಿನ ವಚನಗಳು ಇವೆಲ್ಲ ನುಡಿಗೆಡಿಸುವ ನುಡಿಗಳು. ಇಂಥ ನುಡಿಗೆಟ್ಟ ನುಡಿಯನ್ನು ಧರ್ಮದ ಸಂಸ್ಥೆಯ ಒಳಗು ಮಾಡಿಕೊಳ್ಳುವುದಕ್ಕೆ ಅರ್ಥವಿವರಣೆಗಳೂ ಟೀಕುಗಳೂ ಇವೆ. ಅವನ್ನು ನಂಬಿ ಹೊರಟರೆ ಎಲ್ಲ ಮುಂಡಿಗೆಗಳೂ, ಎಲ್ಲ ವಚನಗಳೂ ಒಂದೇ ಉತ್ತರದ ಒಗಟುಗಳು ಅನ್ನಿಸಿಬಿಡುತ್ತವೆ. ಕೋತಿಯನ್ನು ನುಂಗಿದ ಕೋಳಿ ನಮ್ಮ ಸುಪ್ತ ಮನಸ್ಸು ಮೇಲಕ್ಕೆ ತೇಲಿಸಿದ ಕನಸಿನಂಥ ಚಿತ್ರ ಅಂದುಕೊಂಡು ಅನುಭವಕ್ಕೆ ತಂದುಕೊಂಡರೆ ಆಗ ಆಗುವ ಅನುಭವವೇ ಬೇರೆ.

ಪುತಿನ ಅವರು ಒಂದೆಡೆಯಲ್ಲಿ `ಅರ್ಥದಲ್ಲಿ ರಮಿಸಿ ವಿರಮಿಸದೆ' ಅನ್ನುತ್ತಾರೆ. ನಮಗೆ ಅರ್ಥವಾಗಿರುವ ಅರ್ಥಗಳಿಗೆ ದುಡುಕದೆ ನುಡಿಯನ್ನೇ ಮನಸ್ಸಿಗೆ ಇಳಿಸಿಕೊಂಡು ಇನ್ನೊಂದು ಪ್ರಜ್ಞೆ ಬದುಕನ್ನು ಹೇಗೆ ಕಂಡಿತೋ ಅದನ್ನು ನಮ್ಮದಾಗಿಸಿಕೊಳ್ಳುವುದು ಅರಿವನ್ನು ಹೊಸದಾಗಿಸಿಕೊಳ್ಳುವ ದಾರಿ. ಯಾಕೆಂದರೆ ನುಡಿಗೆಟ್ಟ ನುಡಿಯನ್ನು ಬೇರೆ ಮಾತುಗಳಲ್ಲಿ ಹೇಳಲು ಸಾಧ್ಯವೇ ಇಲ್ಲ.

ಸುಮ್ಮನೆ ಈ ಉದಾಹರಣೆಗಳನ್ನು ನೋಡಿ: `ಭೃಂಗದಾ ಬೆನ್ನೇರಿ ಬಂದು ಕಲ್ಪನಾವಿಲಾಸ', `ಇದು ಬರಿ ಬೆಳಗಲ್ಲೋ ಅಣ್ಣಾ'- ಇಂಥ ಸಾಲುಗಳ ಪ್ರತಿ ಪದಕ್ಕೂ ಅರ್ಥ ಹೇಳಲು ಪ್ರಯತ್ನಿಸಿ ನೋಡಿ. ಕವಿತೆ ಮತ್ತು ಅನುಭಾವ ಎರಡೂ ಮನಸ್ಸು ಲೋಕವನ್ನು ಕಂಡ ಗ್ರಹಿಕೆಯೊಂದಿಗೆ ಬಿಡಿಸಲಾಗದಂತೆ ಬೆಸುಗೆಯಾಗಿ ರೂಪತಳೆದಿರುತ್ತವೆ. ಬೇರೆ ಮಾತಿನಲ್ಲಿ ಅರ್ಥ ವಿವರಿಸಬಹುದಾದ ಕವಿತೆ ಭಾಷೆಗೆ ಋಣಿಯಾದದ್ದು, ಅನುಭವಕ್ಕೆ ತೊಡಿಸಿದ ಅಂಗಿಯಂತೆ ಇರುವಂಥದ್ದು. ಈ ಅಂಗಿಯಲ್ಲದಿದ್ದರೆ ಇನ್ನೊಂದು ಅನ್ನುವ ಹಾಗೆ ಅದರ ಬದುಕು. ನುಡಿಗೆಟ್ಟ ನುಡಿಯನ್ನು ಹಾಗೇ ಬಳಸಬೇಕೇ ಹೊರತು ಬೇರೆ ಅರ್ಥಕ್ಕೆ ಹೊಂದಿಸಿ ಮತ್ತಷ್ಟು ಕೆಡಿಸುವುದಕ್ಕೆ ಆಗುವುದಿಲ್ಲ! ಅದರೊಂದಿಗೇ ಸಾಗಿ, ಆ ನುಡಿಯನ್ನು ನಮ್ಮಳಗೇ ಬೆಳೆಯಲು ಬಿಟ್ಟು ನಾವು ಹೊಸತಾಗಬೇಕು ಅಷ್ಟೆ.

ಮೇರಿ ಆನ್ ಮೂರ್ ಎಂಬ ಅಮೆರಿಕನ್ ಕವಿಯೊಬ್ಬಳು ಬೆಕ್ಕಿನ ಬಾಯಲ್ಲಿದ್ದ ಇಲಿಯ ಬಾಲ ಶೂ ಲೇಸಿನ ಹಾಗೆ ಕಂಡಿತು ಅನ್ನುತ್ತಾಳೆ. ಬೆಕ್ಕು ಇದೆ, ಇಲಿ ಇದೆ, ಶೂ ಲೇಸು ಇದೆ. ಅವೆಲ್ಲ ಹೊಸ ರೀತಿಯಲ್ಲಿ ಸಂಬಂಧಗೊಂಡು ಆ ಕವಿತೆಯ ಸಾಲು ಆಗಿದೆ. ನಮ್ಮ ಮನಸಿನಲ್ಲೂ ಬೆಕ್ಕು, ಇಲಿ, ಶೂ ಎಲ್ಲ ಬೇರೆ ಥರ ಜೀವಂತವಾಗುವಂತೆ ಮಾಡುತ್ತದೆ.

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತಣ ಸಂಬಂಧವಯ್ಯ
ಬೆಟ್ಟದ ನೆಲ್ಲಿಯಕಾಯಿ ಸಮುದ್ರದ ಉಪ್ಪು
ಎತ್ತಣಿಂದೆತ್ತಣ ಸಂಬಂಧವಯ್ಯ
ಗುಹೇಶ್ವರಲಿಂಗಕ್ಕೆಯು ಎನಗೆಯು
ಎತ್ತಣಿಂದೆತ್ತಣ ಸಂಬಂಧವಯ್ಯ

ಈ ಸುಪ್ರಸಿದ್ಧ ವಚನವನ್ನೇ ಹೊಸದಾಗಿ ಒಮ್ಮೆ ಗಮನಿಸಿ ನೋಡಿ. ಎತ್ತಣಿಂದೆತ್ತಣ ಸಂಬಂಧ ಅನ್ನುವ ಮಾತು ರಿಪೀಟ್ ಆಗಿದೆಯಲ್ಲ, ಇಲ್ಲಿ ಕೋಗಿಲೆ-ಮಾವಿನ ಮರ, ಬೆಟ್ಟದ ನೆಲ್ಲಿಕಾಯಿ-ಸಮುದ್ರದ ಉಪ್ಪು, ಗುಹೇಶ್ವರ-ನಾನು ಸಂಬಂಧ ಎಲ್ಲಿಂದೆಲ್ಲಿಗೆ? ಸಂಬಂಧ ಇದೆಯೋ? ಇಲ್ಲವೋ? ಅಥವಾ ಸಂಬಂಧ ಕಲ್ಪಿತವೋ? ಲೇಖನ ಚಿಹ್ನೆಗಳಿಲ್ಲದ ಸಾಲುಗಳನ್ನು ಹೇಗೆ `ಅರ್ಥ' ಮಾಡಿಕೊಳ್ಳುವುದು? ಇಲಿ, ಶೂ, ಲೇಸು, ಬಾಲ, ಇಲಿ ಎತ್ತಣಿಂದೆತ್ತಣ ಸಂಬಂಧ? ಅರ್ಥದ ಗೂಟ ಭದ್ರವಾದ ಮನಸ್ಸಾಗಿದ್ದರೆ ಸಂಬಂಧ ಇದೆ ಎಂದೋ ಇಲ್ಲವೆಂದೋ ಅಥವಾ ಇಂಥದೆಂದೋ ಹೇಳುತಿತ್ತು.

ನುಡಿಗೆಟ್ಟ ನುಡಿಯ ಅನುಭಾವ ಮತ್ತು ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳಷ್ಟು ಅಲ್ಪ ಪ್ರಮಾಣದಲ್ಲೇ ಇರುವ `ಒಳ್ಳೆ'ಯ ಕಾವ್ಯ ಅರ್ಥವನ್ನು ಕಟ್ಟಿಕೊಳ್ಳಲು ನೆರವು ನೀಡುತ್ತಾ, ಕಟ್ಟಿಕೊಂಡ ಅರ್ಥವನ್ನು ನಿರಾಕರಿಸಿ ಮತ್ತೂ ಬೇರೆ ಕೋನಗಳಿಂದ ನೋಡಿ ಎಂದು ಪ್ರಚೋದಿಸುತ್ತ ನಮ್ಮ ಅರಿವನ್ನು ಹೊಸತಾಗಿಸುತ್ತದೆ. ಈ ಹೊಸತಾಗುವ ಕೆಲಸ ಕೇವಲ ವೈಯಕ್ತಿಕ ಮಾತ್ರವಲ್ಲ, ಕೌಟುಂಬಿಕ, ಸಾಮಾಜಿಕ, ರಾಜಕೀಯ ಇತ್ಯಾದಿ ಎಲ್ಲ ಸಂಬಂಧಗಳಿಗೂ ಅನ್ವಯವಾಗುತ್ತದೆ. ಅರ್ಥವು ಸ್ಥಾವರವಾದರೆ ಮೈಯೆಲ್ಲ ಕಾಲಾದ ನದಿಯ ಹಾಗೆ, ಮೈಯೆಲ್ಲ ಕೈಯಾದ ಗಾಳಿಯ ಹಾಗೆ ಸದಾ ಹೊಸತಾಗುತ್ತಲೇ ಇರುವ ಅನುಭವ ಜಂಗಮ. ನುಡಿಗೆಟ್ಟ ನುಡಿಯ ಧರ್ಮ, ಮತ್ತು ಕಾವ್ಯ ಅದಕ್ಕೇ ನಮ್ಮ ಬದುಕಿಗೆ ಅಗತ್ಯ. 

ಈಮೇಲ್ ವಿಳಾಸ : olnswamy@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT