ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ವ್ಯವಸ್ಥೆ: 90ರ ದಶಕದತ್ತ ಹಿಮ್ಮುಖ ಚಲನೆ?

Last Updated 27 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ದೇಶಿ ಅರ್ಥವ್ಯವಸ್ಥೆಯಲ್ಲಿ ಇತ್ತೀಚೆಗೆ ಕಂಡುಬಂದ ನಿರಾಶಾದಾಯಕ ಬೆಳವಣಿಗೆಗಳು ಶೀಘ್ರದಲ್ಲಿಯೇ ಕೊನೆಗೊಳ್ಳುವ ಲಕ್ಷಣಗಳೇನೂ ಕಾಣುತ್ತಿಲ್ಲ. ಡಾಲರ್ ಎದುರು ರೂಪಾಯಿ ವಿನಿಮಯ ದರದ ದಾಖಲೆ ಅಪಮೌಲ್ಯ ಮತ್ತು ಷೇರುಪೇಟೆ ವಹಿವಾಟು ನಿರಂತರವಾಗಿ ಮುಗ್ಗರಿಸುತ್ತಿರುವುದು ಪ್ರತೀ ದಿನದ ವಿದ್ಯಮಾನವಾಗಿದ್ದು, ಯಾರಲ್ಲೂ ಆಶ್ಚರ್ಯ ಉಂಟು ಮಾಡುತ್ತಿಲ್ಲ. ಆರ್ಥಿಕ ಬೆಳವಣಿಗೆಗಳು ಅದೆಷ್ಟರಮಟ್ಟಿಗೆ ಕಳವಳಕಾರಿಯಾಗಿವೆ ಎನ್ನುವುದರತ್ತಲೇ ಆರ್ಥಿಕ ತಜ್ಞರ ಚರ್ಚೆ ಗಿರಕಿ ಹೊಡೆಯುತ್ತಿದೆ.

ಈ ವಿದ್ಯಮಾನಗಳಿಂದ ಅರ್ಥ ವ್ಯವಸ್ಥೆಗೆ ಆಗಿರುವ ನಷ್ಟದ ತೀವ್ರತೆ ಮತ್ತು ಅದರ ಇತರ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೊಂಚಮಟ್ಟಿಗೆ ಭಿನ್ನಾಭಿಪ್ರಾಯ ಇದ್ದರೂ ಬಿಕ್ಕಟ್ಟು ಇದೆ ಎಂಬುದರ ಕುರಿತು ಆರ್ಥಿಕ ಪರಿಣತರು ಮತ್ತು ವಿಶ್ಲೇಷಕರಲ್ಲಿ ಯಾವುದೋ ಭಿನ್ನಾಭಿಪ್ರಾಯ ಇಲ್ಲ. ಸರ್ಕಾರದ ಧೋರಣೆ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಅರ್ಥವ್ಯವಸ್ಥೆಯ ಮೂಲಾಧಾರಗಳು ಗಟ್ಟಿಯಾಗಿದ್ದು, ಪರಿಸ್ಥಿತಿ ಅಪಾಯದ ಹಂತ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಇವೆ.


ಕೆಲಸದ ನಿಮಿತ್ತ ನಾನು ಕಳೆದ ವಾರ ವಿದೇಶಗಳಲ್ಲಿ ಪ್ರಯಾಣಿಸುತ್ತಿದ್ದೆ. ವಿಮಾನಗಳನ್ನು ಬದಲಿಸುವ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳಲ್ಲಿ ನಾನು ಸಾಕಷ್ಟು ಸಮಯ ಕಳೆಯಬೇಕಾಗಿ ಬಂದಿತ್ತು. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳ ಲಾಂಜ್‌ಗಳಲ್ಲಿ ಉದ್ಯಮ, ಹಣಕಾಸಿಗೆ ಸಂಬಂಧಿಸಿದಂತೆ ವಿಶ್ವದ ಎಲ್ಲ ಭಾಗಗಳ ದಿನಪತ್ರಿಕೆಗಳು, ನಿಯತಕಾಲಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯ ಇರುತ್ತವೆ.
ಇಂತಹ ಲಾಂಜ್‌ಗಳಲ್ಲಿ ಭಾರತೀಯರಿಗೆ ಇಷ್ಟವಾದ ಆಹಾರ ಸಿಗದಿರುವುದು ಬೇರೆ ಮಾತು. ಅಂತರರಾಷ್ಟ್ರೀಯ ವಿಮಾನಗಳಿಗೆ ಸಂಪರ್ಕ ಕಲ್ಪಿಸುವ ವಿಮಾನ ನಿಲ್ದಾಣಗಳಲ್ಲಿ ದಿನದ ಎಲ್ಲ ಹೊತ್ತಿನಲ್ಲಿ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬಂದರೂ ಅವರಿಗೆ ಇಷ್ಟವಾದ ಆಹಾರ, ತಿಂಡಿ ತಿನಿಸುಗಳು ಮಾತ್ರ ದೊರೆಯುವುದಿಲ್ಲ.

ಓದುವ ಹವ್ಯಾಸ ರೂಢಿಸಿಕೊಂಡಿರುವ ನಾನು ಅಲ್ಲಿ ಲಭ್ಯ ಇರುವ ನಿಯತಕಾಲಿಕೆಗಳನ್ನೆಲ್ಲ ತಿರುವಿ ಹಾಕುತ್ತಿದ್ದಂತೆ, ಹಣಕಾಸು ವಹಿವಾಟಿಗೆ ಸಂಬಂಧಿಸಿದ ಪ್ರತಿಯೊಂದು ನಿಯತಕಾಲಿಕೆಯೂ ಭಾರತದ ನಿರಾಶಾದಾಯಕ ಅರ್ಥ ವ್ಯವಸ್ಥೆ ಮತ್ತು ಹಣಕಾಸು ಮಾರುಕಟ್ಟೆಯಲ್ಲಿನ ತಲ್ಲಣದ ಸುದ್ದಿಗಳನ್ನು ಪ್ರಮುಖವಾಗಿ ಪ್ರಕಟಿಸಿದ್ದವು.

ಭಾರತದಲ್ಲಿ ಸರ್ಕಾರವೇ ಕುಸಿದು ಬಿದ್ದಿದೆ ಎಂಬರ್ಥದಲ್ಲಿಯೂ ಅನೇಕ ವಿಶ್ಲೇಷಕರು ಲಘುವಾಗಿ ಹೇಳಿಕೆ ನೀಡಿರುವುದು ಕಂಡು ನನಗೆ ಸಂಕಟವಾಯಿತು. ಎಲ್ಲರಿಗೂ ಗೊತ್ತಿರುವಂತಹ ಅಸಂಖ್ಯ ಭ್ರಷ್ಟಾಚಾರ ಪ್ರಕರಣಗಳು,  ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅನುಕೂಲಗಳನ್ನು ಕಲ್ಪಿಸದಿರುವುದು ಮುಂತಾದವುಗಳು ಅವರ ಹೇಳಿಕೆಗಳಿಗೆ ಪೂರಕವಾಗಿರುವುದು ಸುಳ್ಳಲ್ಲ. ಆದರೂ, ವಿಶ್ಲೇಷಕರು ದೇಶದ ಅರ್ಥ ವ್ಯವಸ್ಥೆ ಬಗ್ಗೆ ಉತ್ಪ್ರೇಕ್ಷಿತ ರೀತಿಯಲ್ಲಿ ಪ್ರತಿಕ್ರಿಯಿಸಿರುವುದು ನನ್ನ ಅನುಭವಕ್ಕೆ ಬಂದಿತು.

ಎಲ್ಲ ಲೇಖನಗಳಲ್ಲಿ, ನಮ್ಮ ಕರೆನ್ಸಿಯು ಡಾಲರ್ ಎದುರು ನಿರಂತರವಾಗಿ ಮುಗ್ಗರಿಸುತ್ತಿರುವುದು ಮತ್ತು ಸರ್ಕಾರ ಇದನ್ನು ಅಸಹಾಯಕತೆಯಿಂದ ನೋಡುತ್ತಾ ಇರುವುದನ್ನೇ ಪ್ರಮುಖವಾಗಿ ಬಿಂಬಿಸಲಾಗಿತ್ತು. ವಿದೇಶಿ ವಿನಿಮಯ ಹಣ ರವಾನೆ ಮೇಲಿನ ಮಿತಿಯನ್ನು ತೆಗೆದುಹಾಕಲು ಸರ್ಕಾರ ಅವಸರದಲ್ಲಿ ತೆಗೆದುಕೊಂಡ ನಿರ್ಧಾರವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತಲ್ಲದೇ, ಹಣಕಾಸು ಮಾರುಕಟ್ಟೆಯಲ್ಲಿ ಅಪಾಯದ ಗಂಟೆಯನ್ನೂ ಬಾರಿಸಿತ್ತು.

ಎರಡು ದಶಕಗಳ ಕಾಲ ಶ್ರಮವಹಿಸಿ ಗಟ್ಟಿಯಾಗಿ ನಿರ್ಮಿಸಿದ್ದ ಆರ್ಥಿಕ ಸದೃಢ ಸೌಧ, ದಿನ ಬೆಳಗಾಗುವುದರೊಳಗೆ ಕುಸಿದು ಬಿದ್ದಂತೆ ಅನುಭವವಾಗುತ್ತಿರುವುದು ನಿಜಕ್ಕೂ ವಿಷಾದಪಡುವ ಸಂಗತಿ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ಲೇಷಕರೊಬ್ಬರು, ದೇಶದ ಅರ್ಥವ್ಯವಸ್ಥೆಯ ಸದ್ಯದ ಸ್ಥಿತಿಗತಿಯು 1991ರಲ್ಲಿ ಇದ್ದ ಆರ್ಥಿಕ ದುಃಸ್ಥಿತಿಗಿಂತ ಕೆಟ್ಟದಾಗಿದೆ ಎಂದು ವಿಶ್ಲೇಷಿಸಿರುವುದು ಗಮನಾರ್ಹ.

1991ರಲ್ಲಿ ದೇಶದ ಅರ್ಥ ವ್ಯವಸ್ಥೆ ಯಾವ ಸ್ಥಿತಿಯಲ್ಲಿತ್ತು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳೋಣ. ವಿದೇಶಿ ವಿನಿಮಯ ವಿಷಯದಲ್ಲಿ ಪರಿಸ್ಥಿತಿ ತೀವ್ರವಾಗಿ ವಿಷಮಿಸಿತ್ತು. ವಿದೇಶಿ ವಿನಿಮಯ ಮೀಸಲು ಸಂಗ್ರಹವು ಕೇವಲ 5 ಸಾವಿರ ಕೋಟಿ ಡಾಲರ್‌ಗಳಷ್ಟಿತ್ತು. ಇದು ಎರಡು ವಾರಗಳ ಆಮದಿಗೆ ಮಾತ್ರ ಸಾಕಾಗುವಂತಿತ್ತು. ಸಾಲ ಪಡೆಯಲು ಕೇಂದ್ರ ಸರ್ಕಾರ, ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಚಿನ್ನ ಒತ್ತೆ ಇಡಲು ಮುಂದಾಗಿತ್ತು. ಆದರೆ, ಚಾಲ್ತಿ ಖಾತೆ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 2.5ರಷ್ಟು ಅಂದರೆ ಸಾಕಷ್ಟು ಕಡಿಮೆ ಪ್ರಮಾಣದಲ್ಲಿಯೇ ಇತ್ತು. ಆ ಸಂದರ್ಭದಲ್ಲಿ ಒಟ್ಟು ಆಂತರಿಕ ಉತ್ಪನ್ನವೂ 5000 ಕೋಟಿ ಡಾಲರ್‌ಗಳಷ್ಟಿತ್ತು. ಡಾಲರ್ ಎದುರು ರೂಪಾಯಿ ವಿನಿಮಯ ದರವು 18 ರಷ್ಟಿತ್ತು.

ದೇಶದ ಹಣಕಾಸು ಮಾರುಕಟ್ಟೆಯು ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವಕ್ಕೆ ಒಳಗಾಗದೇ ಸುರಕ್ಷಿತವಾಗಿತ್ತು. ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಸಂಪೂರ್ಣ ಹಿಡಿತ ಹೊಂದಿದ್ದವು. ಲೈಸನ್ಸ್ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದರಿಂದ ಆರ್ಥಿಕ ವೃದ್ಧಿ ದರವೂ ಕಡಿಮೆ ಮಟ್ಟದಲ್ಲಿತ್ತು.

ಈಗ ಮತ್ತೆ ವಾಸ್ತವಕ್ಕೆ ಮರಳೋಣ. ಎರಡು ದಶಕಗಳ ಅವಧಿಯಲ್ಲಿ ದೇಶಿ ಅರ್ಥ ವ್ಯವಸ್ಥೆಯು ಹತ್ತಾರು ಪಟ್ಟು ಬೆಳವಣಿಗೆ ಕಂಡಿದೆಯಲ್ಲದೇ, ವಿಶ್ವದ ಮಾರುಕಟ್ಟೆ ಮತ್ತು ಆರ್ಥಿಕತೆ ಜತೆ ಸಂಪೂರ್ಣವಾಗಿ ತಳಕೂ ಹಾಕಿಕೊಂಡಿದೆ. ಚಾಲ್ತಿ ಖಾತೆ ಕೊರತೆ ಮತ್ತು ಹಣದುಬ್ಬರ ಹೊರತುಪಡಿಸಿ ದೇಶದ ಅರ್ಥವ್ಯವಸ್ಥೆಯ ಎಲ್ಲ ಸೂಚಕಗಳು ಆರೋಗ್ಯಕರವಾಗಿವೆ. ವಿದೇಶಿ ವಿನಿಮಯ ಮೀಸಲು ಸಂಗ್ರಹವು ತೃಪ್ತಿದಾಯಕವಾಗಿದೆ. ಇದು ಮಾರುಕಟ್ಟೆಯಲ್ಲಿ ತನ್ನಿಷ್ಟದಂತೆ ಆಟವಾಡಲು ಆರ್‌ಬಿಐಗೆ ಅವಕಾಶವನ್ನೂ ಮಾಡಿಕೊಟ್ಟಿದೆ.

ಆದರೆ, ಪೇಟೆಯಲ್ಲಿ ಹಣದ ಹರಿವು ಮತ್ತು ಅಲ್ಪಾವಧಿ ಸಾಲದ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದ್ದು, ರೂಪಾಯಿ ಮೌಲ್ಯ ಏರಿಳಿತಕ್ಕೆ ಕಾರಣವಾಗಿ ಆತಂಕ ಮೂಡಿಸಿವೆ. ಇದಕ್ಕೆ ಪೂರಕವಾಗಿ ಜಾಗತಿಕ ವಿದ್ಯಮಾನಗಳೂ ದೇಶಿ ಅರ್ಥವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ನಮ್ಮ ಹಣಕಾಸು ಮತ್ತು ಷೇರು ಮಾರುಕಟ್ಟೆಗಳು ಜಾಗತಿಕ ಮಾರುಕಟ್ಟೆ ಜತೆಗೆ ಚೆನ್ನಾಗಿ ತಳಕು ಹಾಕಿಕೊಂಡಿರುವುದೇ ಇದಕ್ಕೆ ಕಾರಣ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಒಂದು ಪ್ರಮುಖ ಸಂಗತಿ ಮಾತ್ರ ಹೆಚ್ಚು ಚರ್ಚೆಗೆ ಒಳಗಾಗುತ್ತಿಲ್ಲ. ನಾಯಕತ್ವದ ಗುಣಮಟ್ಟ ಮತ್ತು ಕಾಳಜಿ ಬಗ್ಗೆ ಯಾರೊಬ್ಬರೂ ಹೆಚ್ಚಾಗಿ ಮಾತನಾಡುತ್ತಿಲ್ಲ. ಹೀಗಾಗಿ ನಾನು ಇಲ್ಲಿ  ಓದುಗರ ಜತೆ ಸಮರ್ಥ ನಾಯಕತ್ವದ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ದೇಶದ ಅರ್ಥ ವ್ಯವಸ್ಥೆಯು ಉದಾರೀಕರಣದ ಹೊಸ್ತಿಲಲ್ಲಿ ಇದ್ದಾಗ ನರಸಿಂಹ ರಾವ್ ಅವರು ಪ್ರಧಾನಿ ಪೀಠದಲ್ಲಿ ಇದ್ದದ್ದು ದೇಶದ ಅದೃಷ್ಟ ಎಂದೇ ಹೇಳಬಹುದು. ಅರ್ಥವ್ಯವಸ್ಥೆಯನ್ನು ಲೈಸನ್ಸ್ ಮತ್ತು `ನಿಯಂತ್ರಣ ರಾಜ್'ದಿಂದ ಮುಕ್ತಗೊಳಿಸುವ ಅವರ ದೂರದೃಷ್ಟಿಯು, ನಂತರದ ವರ್ಷಗಳಲ್ಲಿ ನಮ್ಮ ಅರ್ಥವ್ಯವಸ್ಥೆಯ ಹಣೆಬರಹವನ್ನೇ ಬದಲಿಸಿತು.

ಅಲ್ಲಿಯವರೆಗೆ ದೇಶದ ಅರ್ಥವ್ಯವಸ್ಥೆಯು ಸಮಾಜವಾದದಲ್ಲಿ ನಂಬಿಕೆ ಇಟ್ಟಿದ್ದ  ನೆಹರೂ ಅವರ ತತ್ವಜ್ಞಾನದ ಮಾರ್ಗದರ್ಶನದಲ್ಲಿಯೇ ಮುನ್ನಡೆದಿತ್ತು. ಸಮಾಜವಾದವು ನಿರೀಕ್ಷಿತ ಬದಲಾವಣೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಆದರೂ, ಅದನ್ನು ಬದಲಿಸಲು ಯಾವೊಬ್ಬ ನಾಯಕನೂ ಗಟ್ಟಿ ಧೈರ್ಯ ಮಾಡಿರಲಿಲ್ಲ.

ನೀತಿ ನಿರೂಪಣೆಯಲ್ಲಿ ಅಧಿಕಾರಶಾಹಿ ಬಿಗಿ ಹಿಡಿತ ಹೊಂದಿತ್ತು. ಸಣ್ಣ ಪುಟ್ಟ ಯಂತ್ರಗಳ ತಯಾರಿಕೆಗೂ ಲೈಸನ್ಸ್ ಪಡೆಯಲೂ ಹರಸಾಹಸ ಪಡಬೇಕಾಗಿತ್ತು. ಪರಿಸ್ಥಿತಿ ಬದಲಾಯಿಸಲು ರಾಜೀವ್ ಗಾಂಧಿ ಅವರು ಕೆಲ ಮಟ್ಟಿಗೆ ಪ್ರಯತ್ನಿಸಿದರೂ, ನರಸಿಂಹ ರಾವ್ ಅವರ ಅಧಿಕಾರಾವಧಿಯಲ್ಲಿಯೇ ನಿಜವಾದ ಆರ್ಥಿಕ ಬದಲಾವಣೆ ಸಾಧ್ಯವಾಯಿತು.

ನರಸಿಂಹ ರಾವ್ ಅವರು ಅರ್ಥವ್ಯವಸ್ಥೆ ಬದಲಾವಣೆಗೆ ಕೈಗೊಂಡ ಪ್ರತಿಯೊಂದು ನಿರ್ಧಾರವನ್ನು ದೇಶದ ವಾಣಿಜ್ಯ ಸಮುದಾಯ ಸ್ವಾಗತಿಸಿತು. `ಲೈಸನ್ಸ್ ರಾಜ್'ದಿಂದಲೂ ಮುಕ್ತವಾಯಿತು. ಇದರಿಂದ ಅರ್ಥ ವ್ಯವಸ್ಥೆಯಲ್ಲಿ ಹೊಸ ಉತ್ಸಾಹದ ವಾತಾವರಣ ಕಂಡು ಬಂದಿತು. ಭಾರೀ ಪ್ರಮಾಣದಲ್ಲಿ ಬಂಡವಾಳವೂ ಹರಿದು ಬಂದಿತು. ಇದರಿಂದ ಅರ್ಥ ವ್ಯವಸ್ಥೆಯ ಒಟ್ಟಾರೆ ಚಿತ್ರಣವೇ ಬದಲಾಯಿತು.
ಸದ್ಯಕ್ಕೆ ದೇಶವು ಅತ್ಯಂತ ದುರ್ಬಲ  ನಾಯಕತ್ವ ಹೊಂದಿದೆ ಎನ್ನದೇ ವಿಧಿ ಇಲ್ಲ. ಹತ್ತಾರು ಬಿಕ್ಕಟ್ಟುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳದ ಪ್ರಧಾನಿ ಸುತ್ತ ಲೂಟಿಕೋರರ ಗುಂಪು ಸುತ್ತುವರೆದಿದೆ. ಆರು ದಶಕಗಳ ಅವಧಿಯಲ್ಲಿ ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುವ ಕೃತ್ಯದಲ್ಲಿ ಈ ಬಣ ತೊಡಗಿಕೊಂಡಿದೆ.

ಕೇಂದ್ರ ಸರ್ಕಾರವು ಪ್ರತೀ ದಿನ ಒಂದಲ್ಲ ಒಂದು ಹೊಸ ಬಿಕ್ಕಟ್ಟಿನಲ್ಲಿ ಸಿಲುಕುತ್ತಲೇ ಹೊರಟಿದೆ. ರಾಷ್ಟ್ರೀಯ ಭದ್ರತೆಯೂ ಅಪಾಯಕ್ಕೆ ಸಿಲುಕಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಪರಿಸ್ಥಿತಿ ಮೇಲೆ ತಮ್ಮ ಹಿಡಿತ ಕಳೆದುಕೊಂಡಂತೆ ಮತ್ತು ಪರಿಸ್ಥಿತಿಯು ಕುಸಿತದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿರುವಂತೆ ಭಾಸವಾಗುತ್ತದೆ.

ಸ್ವಾತಂತ್ರ್ಯಾನಂತರ ದೇಶದ ನಾಯಕತ್ವದ ಗುಣಮಟ್ಟವು ಕಡಿಮೆಯಾಗುತ್ತಲೇ ಸಾಗಿದೆ. ದೇಶವು ಬೆಳವಣಿಗೆಗೆ ಹಪಹಪಿಸುತ್ತಿರುವಾಗ, ದೇಶಿ ಬೃಹತ್ ಉದ್ದಿಮೆ ಸಂಸ್ಥೆಗಳು ಭ್ರಮನಿರಸನಗೊಂಡು ವಿದೇಶಗಳಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಎದುರು ನೋಡುತ್ತಿರುವುದು ಅರ್ಥವ್ಯವಸ್ಥೆಯ ನಿರಾಶಾದಾಯಕ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಇಂತಹ ಅನಿಶ್ಚಿತ ಸ್ಥಿತಿ ತಳಮಳಕ್ಕೆ ಕಾರಣವಾಗಿದೆ. ಆಂತರಿಕ ಬಂಡವಾಳ ಹೂಡಿಕೆಯು ಸ್ಥಗಿತಗೊಂಡಿರುವುದು ಇನ್ನೊಂದು ಕಳವಳಕಾರಿ ಸಂಗತಿಯಾಗಿದೆ. ಹಣಕಾಸು ಸಚಿವಾಲಯವು ಬಂಡವಾಳ ಹೂಡಿಕೆ ಉತ್ತೇಜಿಸಲು ಇತ್ತೀಚೆಗೆ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹವಾಗಿದ್ದರೂ ಕೊಂಚ ತಡವಾಯಿತು ಎನ್ನುವುದನ್ನೂ ಮರೆಯಬಾರದು.

ಅರ್ಥವ್ಯವಸ್ಥೆಯಲ್ಲಿನ ನಿರಾಶಾಭಾವ ದೂರ ಮಾಡುವ ಪವಾಡಸದೃಶ ಪ್ರಚೋದನೆ ಎಲ್ಲಿಯಾದರೂ ಘಟಿಸೀತೆ ಎನ್ನುವುದನ್ನು ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದೆ. ನಮ್ಮ ನಾಯಕ ಗಣವು ಕನಿಷ್ಠಪಕ್ಷ ವಸ್ತುಸ್ಥಿತಿ ಒಪ್ಪಿಕೊಂಡು ಇನ್ನಷ್ಟು ಆರ್ಥಿಕ ಅನಾಹುತ ಸಂಭವಿಸದಂತೆ ಆದಷ್ಟು ಬೇಗ ಕಾರ್ಯಪ್ರವೃತ್ತವಾಗಲಿ ಎಂದು ಆಶಿಸುವೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT