ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥದ ಇಡಿತನ: ಭರ್ತೃಹರಿ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಎರಡೂ ಕೈ ಮೇಲೆ ಎತ್ತಿ ಕೂಗುತಿದ್ದೇನೆ- ಪರೋಪಕಾರದಿಂದ ಪುಣ್ಯ, ಪರಪೀಡನೆಯಿಂದ ಪಾಪ. ಆದರೂ ಯಾರೂ ಕೇಳುತ್ತಿಲ್ಲ~. ಇದು ವ್ಯಾಸನ ಮಾತು.`ಎರಡೂ ಕೈಯಲ್ಲಿ ಮಗುವನ್ನು ಮೇಲೆ ಎತ್ತಿ ಹಿಡಿದು ಇದು ಯಾರ ಮಗು ಎಂದು ಕೂಗಿದೆ. ಬಸ್‌ಸ್ಟ್ಯಾಂಡಿನಲ್ಲಿದ್ದ ಯಾರೂ ತಮ್ಮದೆಂದು ಹೇಳಲಿಲ್ಲ~. ಇದು ಕತೆಯೊಂದರಲ್ಲಿ ಬರಬಹುದಾದ ಮಾತು.

`ಗಿಡಗಂಟೆಯ ಕೊರಳೊಳಗಿಂದ ಹೊರಟಿತು ಹಕ್ಕಿಗಳ ಹಾಡು~ ಇದು ಬೇಂದ್ರೆಯವರ ಬೆಳಗು ಕವಿತೆಯ ಸಾಲು.ಬಿಎಸ್‌ವೈ ಕೊರಳಿಗೆ ಗಣಿ ಹಗರಣದ ಉರುಳು~ ಇದು ಪತ್ರಿಕೆಯೊಂದರಲ್ಲಿ ಕಂಡ ತಲೆಬರಹ.

ಇಬ್ಬರು ಹೀಗೇ ನಡೆದುಕೊಂಡು ಹೋಗುತಿದ್ದರು. ಅಲ್ಲೊಂದು ಕೊಳ. ಕೊಳದಲ್ಲೊಂದು ಮೀನು ಈಜುತಿತ್ತು. ಒಬ್ಬಾತ `ಆಹಾ, ಅಲ್ಲಿ ನೋಡು! ಮೀನು ಎಷ್ಟು ಸಂತೋಷವಾಗಿ ಈಜುತ್ತಿದೆ~ ಅಂದ. ಜೊತೆಗೆ ಇದ್ದವನು `ನಿನಗೆ ಹೇಗೆ ಗೊತ್ತು, ಅದು ಸಂತೋಷವಾಗಿದೆ ಅಂತ? ನೀನೇನು ಮೀನೇ?~ ಎಂದು ಕೇಳಿದ. `ನನಗೆ ಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತು ನೀನು ನಾನಲ್ಲವಲ್ಲ?~ ಅಂತ ಕೇಳಿದನಂತೆ ಮೊದಲಿನವನು. ಇದು ನಾನು ಕೇಳಿದ ಝೆನ್ ಕಥೆ.

`ನಾನು ಎಷ್ಟು ಹೇಳಿದರೂ ನಿನಗೆ ಅರ್ಥವೇ ಆಗುವುದಿಲ್ಲವಲ್ಲಾ! ನಾನು ಕನ್ನಡದಲ್ಲೇ ಅಲ್ಲವಾ ಹೇಳಿದ್ದು!~ ಇದು ಸಿಟ್ಟು ಬಂದಾಗ ನಾವೆಲ್ಲ ಬಳಸಿರಬಹುದಾದ ಮಾತು.
ಈಗ ತಾನೇ ನೀವು ಓದಿ   ುುಗಿಸಿದ ಐದು ಉದಾಹರಣೆಗಳು ನಿಮಗೆ ಅರ್ಥವಾದವೇ? ಆಗಿರುತ್ತದೆ ಅಂದುಕೊಳ್ಳುತ್ತೇನೆ.

ಸ್ವಲ್ಪ ತಾಳಿ, ಅರ್ಥ ಹೇಗೆ ಆಗುತ್ತದೆ? ಅರ್ಥ ಎಲ್ಲಿದೆ ಈ ಮಾತುಗಳಲ್ಲಿ? ಈ ಪ್ರಶ್ನೆ ನಿಮಗೆ ಎಂದಾದರೂ ಮೂಡಿದೆಯೇ? ಮೂಡಿಲ್ಲದಿದ್ದರೆ ಪುಣ್ಯವಂತರು. ಮನಸ್ಸಿನ ನೆಮ್ಮದಿ ಕಳೆದುಕೊಳ್ಳದೆ ಇರುವವರು. ಅರ್ಥವಾಗಿದ್ದನ್ನು ಒಪ್ಪಿ, ಅಥವ ಒಪ್ಪದೆ, ಆಚರಣೆಗೆ ತಂದು, ಅಥವ ತರದೆ ನೆಮ್ಮದಿಯಾಗಿ ಇರುವಂಥವರು. ಆದರೂ ತುಘಲಕ್ ನಾಟಕದಲ್ಲಿ `ದೇವರೇ ಇದೆಲ್ಲದರ ಅರ್ಥವೇನು?~ ಎಂದು ತುಘಲಕ್ ಕೇಳಿದ ಹಾಗೆ ಒಮ್ಮೆಯಲ್ಲ ಒಮ್ಮೆ ಕೇಳಿಕೊಂಡಿದ್ದರೆ ಆಶ್ಚರ್ಯವೇನೂ ಇಲ್ಲ.

ಅರ್ಥ ಎಂದರೇನು, ಅರ್ಥ ಹೇಗೆ ಆಗುತ್ತದೆ ಅನ್ನುವ ಪ್ರಶ್ನೆ ಬಹಳ ಪ್ರಾಚೀನ ಕಾಲದ್ದು. ಎಲ್ಲ ಭಾಷೆಗಳ ಎಲ್ಲ ಚಿಂತಕರನ್ನೂ ಕಾಡಿರುವ ಪ್ರಶ್ನೆಗಳು ಇವು. ಭಾರತದ ಹಳಬರು ಈ ಪ್ರಶ್ನೆಗೆ ಕಂಡುಕೊಂಡ ಉತ್ತರಗಳನ್ನು ಸ್ವಲ್ಪ ತಿಳಿಯೋಣ.

ಅರ್ಥವನ್ನು ಕುರಿತ ನಮ್ಮ ದೇಶದ ಹಳಬರ ಚಿಂತನೆಗಳು ಎರಡು ಬೇರೆ ಬೇರೆಯ ದಾರಿಗಳಲ್ಲಿ ಸಾಗಿವೆ. ಅರ್ಥ ಅನ್ನುವುದು ಇಡೀ ವಾಕ್ಯದಿಂದ ಸ್ಫುರಿಸುತ್ತದೆ ಅನ್ನುವ ಅಖಂಡ ಧೋರಣೆಯ ದಾರಿ ಒಂದು, ವಾಕ್ಯದ ಪ್ರತಿಯೊಂದು ಪದಕ್ಕೆ ಇರುವ ಪ್ರತ್ಯೇಕ ಅರ್ಥಗಳ ಸಂಯೋಜನೆಯಿಂದ ಅನ್ನುವ ಖಂಡ ಧೋರಣೆಯ ದಾರಿ ಇನ್ನೊಂದು.

ಅರ್ಥ ಅಖಂಡವಾದದ್ದು, ಅರ್ಥವನ್ನು ವ್ಯಕ್ತಪಡಿಸುವ ವಾಕ್ಯ ಅಖಂಡವಾದದ್ದು ಅನ್ನುವ ಇಡಿತನದ ಬಗ್ಗೆ ಹೇಳಿದ ಪ್ರಮುಖ ಚಿಂತಕ ಭರ್ತೃಹರಿ. `ವಾಕ್ಯಪದೀಯ~ ಅನ್ನುವುದು ಅವನ ಕೃತಿಯ ಹೆಸರು. ಅದರಲ್ಲಿ ಬ್ರಹ್ಮಕಾಂಡ, ಕಾಲ ಸಮುದ್ದೇಶ, ಕ್ರಿಯಾ ಸಮುದ್ದೇಶ ಅನ್ನುವ ಮೂರು ಅಧ್ಯಾಯಗಳಿವೆ. ಭರ್ತೃಹರಿ ಸುಮಾರಾಗಿ ಕ್ರಿ.ಶ. 5ನೆಯ ಶತಮಾನದವನು.

ಚೀನೀ ಯಾತ್ರಿಕ ಯೀ-ಜಿಂಗ್ ಕ್ರಿ.ಶ. 670ರ ವೇಳೆಗೆ ಭರ್ತೃಹರಿಯ ವ್ಯಾಕರಣ ಕೃತಿ ಪ್ರಸಿದ್ಧವಾಗಿತ್ತು ಅನ್ನುತ್ತಾನೆ. ಪ್ರಸಿದ್ಧವಾದ ಶೃಂಗಾರ, ನೀತಿ, ವೈರಾಗ್ಯ, ಶತಕಗಳನ್ನು ಬರೆದವನು ಕೂಡ ಇವನೇ ಇರಬಹುದು ಅನ್ನುವುದು ಒಂದು ಊಹೆ.

ಈ ಅಂಕಣದ ಮೊದಲಲ್ಲಿ ನೀವು ಓದಿದ ಉದಾಹರಣೆಗಳನ್ನು ನೆನಪು ಮಾಡಿಕೊಳ್ಳಿ. ನಿಮಗೆ ಒಂದೊಂದೂ ಪದ ಅರ್ಥವಾಯಿತೋ ಅಥವ ಇಡಿಯಾಗಿ ಅರ್ಥವಾಯಿತೋ? ನಿಮ್ಮ ಮನಸ್ಸಿನಲ್ಲಿ ಬಿಡಿ ಬಿಡಿ ಪದಗಳ `ಅರ್ಥಗಳು~ ಉಳಿದಿವೆಯೋ ಇಡಿಯಾದ ಅರ್ಥ ಉಳಿದಿದೆಯೋ? ವಾಕ್ಯವು ಅರ್ಥದ ಮೂಲ ಘಟಕ, ಪದವಲ್ಲ.

ಸಂವಹನ ಯಾವಾಗಲೂ ವಾಕ್ಯದ ಮೂಲಕವೇ ನಡೆಯುತ್ತದೆ ಅನ್ನುವುದು ಭರ್ತೃಹರಿಯ ನಿಲುವು. `ಎರಡೂ ಕೈ~, `ಮೇಲೆತ್ತಿ~ ಅನ್ನುವ ಪದಗಳು ಮೊದಲ ಎರಡು ವಾಕ್ಯಗಳಲ್ಲಿವೆ. `ಯಾರೂ~ ಅನ್ನುವುದೂ ಇದೆ. ಹಾಗೆಯೇ `ಕೊರಳು~ ಅನ್ನುವ ಪದ ಮುಂದಿನ ಎರಡು ವಾಕ್ಯಗಳಲ್ಲೂ ಇವೆ.

ಆದರೆ ಆಯಾ ಪದಗಳು ಒಂದೊಂದು ವಾಕ್ಯದಲ್ಲೂ ಪಡೆಯುವ ಅರ್ಥವೇ ಬೇರೆ. ಪದಗಳಿಗೆ ಮಾತ್ರ ಖಚಿತವಾದ ಅರ್ಥವಿದ್ದಿದ್ದರೆ `ಗಿಡಗಂಟೆಯ ಕೊರಳು~, `ಬಿಎಸ್‌ವೈ ಕೊರಳು~ ಅನ್ನುವಲ್ಲ್ಲ್ಲೆಲ ಒಂದೇ ಅರ್ಥ ಹುಟ್ಟಬೇಕಾಗಿತ್ತು! ವಾಕ್ಯದಲ್ಲಿ ಬಳಕೆಯಾದಾಗ ಮಾತ್ರ ಪದಕ್ಕೆ ಅರ್ಥ.

ನಿಘಂಟುಗಳು ಪದಗಳ ಅರ್ಥಗಳನ್ನು ಪಟ್ಟಿ ಮಾಡಿದರೂ ಹೊಸ ವಾಕ್ಯವೊಂದರಲ್ಲಿ ಬಳಕೆಯಾದಾಗ ಪದಕ್ಕೆ ದೊರೆಯಬಹುದಾದ ಅರ್ಥಗಳನ್ನೆಲ್ಲ ಎಂದಿಗೂ ಹೇಳಲಾರವು. ಅಲ್ಲದೆ ಮನುಷ್ಯರು ವಾಕ್ಯಗಳಲ್ಲಿ ಮಾತಾಡುತ್ತಾರೆಯೇ ಹೊರತು ಪದಗಳಲ್ಲಿ ಅಲ್ಲ.

ಆದ್ದರಿಂದಲೇ ಭಾಷೆಯೊಂದರ ಪದಗಳು ಗೊತ್ತಿದ್ದ ಮಾತ್ರಕ್ಕೆ ಆ ಭಾಷೆಯ ವಾಕ್ಯಗಳೆಲ್ಲ ಅರ್ಥವಾಗುತ್ತವೆ ಅನ್ನುವಂತಿಲ್ಲ. ಕನ್ನಡದ ಪದಗಳು ಗೊತ್ತಿದ್ದ ಮಾತ್ರಕ್ಕೆ ಕನ್ನಡದ ಎಲ್ಲ ವಾಕ್ಯಗಳೂ, ಬರವಣಿಗೆಯೂ ಅರ್ಥವಾಗುತ್ತದೆ ಅನ್ನುವಂತಿಲ್ಲ!

ಅರ್ಥ ಮತ್ತು ಭಾಷೆ ಅಖಂಡವೆನ್ನುವ ಚಿಂತಕರು ಭಾಷೆ ಎಂದರೆ ಅರ್ಥಪೂರ್ಣ ಸಂಕೇತಗಳ ವ್ಯವಸ್ಥೆ ಅನ್ನುತ್ತಾರೆ. ಯಾವುದೇ ಒಂದು ಪದ ಅಥವ ವಾಕ್ಯವನ್ನು ಪ್ರತ್ಯೇಕವಾಗಿ ಎತ್ತಿಕೊಂಡು ಅರ್ಥವನ್ನು ಹುಡುಕಲು ಆಗುವುದಿಲ್ಲ ಅನ್ನುತ್ತಾರೆ.

ಪಶ್ಚಿಮದ ಕೆಲವು ಚಿಂತಕರಲ್ಲೂ ಈ ಧೋರಣೆ ಇದೆ. ಭರ್ತೃಹರಿ ಮಂಡಿಸಿದ ಸಿದ್ಧಾಂತವನ್ನು `ಸ್ಫೋಟ ಸಿದ್ಧಾಂತ~ ಅನ್ನುತ್ತಾರೆ. ಸ್ಫೋಟ ಅನ್ನುವುದನ್ನು `ಸ್ಫುಟ~ವಾಗುವುದು, ಅಥವ ಆಸ್ಫೋಟಿಸುವುದು ಅನ್ನುವ ಎರಡು ಅರ್ಥಗಳಲ್ಲು ಗ್ರಹಿಸಬಹುದೇನೋ. ಭಾಷೆ ಅಖಂಡವಾದದ್ದು, ಶಬ್ದ ಸಂಕೇತಗಳು ಅರ್ಥವನ್ನು ಅಂತರ್ಗತವಾಗಿ ಹೊಂದಿರುತ್ತವೆ.

ಭಾಷೆಗೆ ಹೊರ ರೂಪವೂ ಇದೆ, ಒಳರೂಪವೂ ಇದೆ. ಹೊರಗಿನ ಶಬ್ದ ರೂಪ, ಒಳಗಿನ ಅರ್ಥರೂಪವನ್ನು ವ್ಯಕ್ತಪಡಿಸುತ್ತದೆ. ನಮ್ಮ ಕಾಲದ ಚಾಮ್ಸಕಿ ಸುಮಾರಾಗಿ ಇದೇ ಥರದ ಮಾತು ಆಡುತ್ತಾನೆ. ಒಳಗಿನ ರೂಪವೂ ಹೊರಗಿನ ರೂಪವೂ ಬೇರೆ ಬೇರೆಯಲ್ಲ. ಅರ್ಥದ ಸ್ಫೋಟಕ್ಕೆ ತನ್ನದೇ ಆದ ಖಚಿತವಾದ ರೂಪವಿಲ್ಲ. ಭಾಷೆಯು ಗರ್ಭ, ಅರ್ಥದ ತಿರುಳು ಗರ್ಭದೊಳಗಿನ ಭ್ರೂಣ. `

ಅರ್ಥಗರ್ಭಿತ ಅನ್ನುವ ಮಾತು ನೆನೆದುಕೊಳ್ಳಿ!~. ಶಿಶು ಬೆಳೆದು ರೂಪ ತಳೆಯುವ ಹಾಗೇ ಅರ್ಥದ ತಿರುಳು ಕೂಡ ಬೆಳೆದು ನಾದದ ರೂಪದಲ್ಲಿ ಹೊಮ್ಮಿದಾಗ ಮಾತ್ರ ಅದು ಸ್ಫುಟವಾಗುತ್ತದೆ. ಅರ್ಥದ ತಿರುಳಿಗೆ ಮಾತಿನ ಶರೀರ ದೊರೆಯುತ್ತದೆ. ಅರ್ಥಪೂರ್ಣವಾದ ಮಾತು ಕಾಲ ಮತ್ತು ದೇಶಕ್ಕೆ ಬದ್ಧ. ಅರ್ಥದ ಸ್ಫೋಟ ಮಾತ್ರ ಕಾಲ ದೇಶಗಳ ಹಂಗಿಲ್ಲದ್ದು. ಸ್ಫೋಟ ವಸ್ತುವಲ್ಲ, ರಚನೆಯಲ್ಲ, ಅಮೂರ್ತವೂ ಅಲ್ಲ. ಅದು ಕಾಲ ದೇಶಗಳನ್ನು ಮೀರಿದ ತಿರುಳು.

ಅರ್ಥದ ತಿರುಳು ಭಾಷೆಯಲ್ಲಿ ಹೇಗೆ ವ್ಯಕ್ತವಾಗುತ್ತದೆ ಅನ್ನುವುದು ಮುಖ್ಯ ಪ್ರಶ್ನೆ. ಸ್ಫೋಟಕ್ಕೂ ನಾದಕ್ಕೂ ಇರುವ ಸಂಬಂಧದ ಪ್ರಶ್ನೆ ಇದು. ಅರ್ಥ ಭಾಷೆಯ ಆಚೆ, ಎಲ್ಲದರ ಆಚೆ ಇರುತ್ತದೆ. ಅದು ಬುದ್ಧಿಗೆ ಹೊಳೆಯುತ್ತದೆ, ಕಾಣುತ್ತದೆ. ಬುದ್ಧಿಯೊಳಗೆ ಸುಪ್ತವಾಗಿ ಇರುವ ಅರ್ಥ, ಬುದ್ಧಿಗೆ ಮಾತ್ರ ಕಾಣುವ ಅರ್ಥ ಅದು.

ಅದನ್ನು ಪಶ್ಯಂತೀ, ಕಾಣುತ್ತದೆ ಅನ್ನುತ್ತಾನೆ ಭರ್ತೃಹರಿ. ಅದು ರೂಪ ಪಡೆಯುತ್ತ ವಾಕ್ಯ ರಚನೆಗೊಳ್ಳುವ ಸ್ಥಿತಿ ಮಧ್ಯಮಾ. ಮಧ್ಯಮಾ ಮಾಧ್ಯಮವೂ ಆದೀತು. ಅರ್ಥವನ್ನು ವ್ಯಕ್ತಪಡಿಸುವುದೆಲ್ಲ ಮಾಧ್ಯಮವೇ. ಮಧ್ಯಮ ರೂಪ ತಳೆದ ಅಂಥ ಮಾತಿನಲ್ಲಿ ವ್ಯಕ್ತವಾಗುವುದು ವೈಖರೀ. ಹೀಗೆ ಮೂರು ಹಂತಗಳನ್ನು ಅರ್ಥ ದಾಟಿ ಬಂದರೂ ಅರ್ಥದ ತಿರುಳು ಇಡಿಯಾಗೇ ಇರುತ್ತದೆ ಅನ್ನುತ್ತಾನೆ ಭರ್ತೃಹರಿ.

ಅದು ಹೇಗೆ ಅನ್ನುವುದಕ್ಕೆ ಎರಡು ವಿವರಣೆಗಳಿವೆ. ಅರ್ಥದ ತಿರುಳು ವಾಸ್ತವದ ಪಾತಳಿಯದ್ದಲ್ಲ, ಅದು ವಾಸ್ತವವನ್ನು ಮೀರಿದ ಸತ್ಯ. ಅಭಿವ್ಯಕ್ತಿಯ ಹೊರಗಿನ ರೂಪಗಳಲ್ಲಿ ಏನೇ ಬದಲಾವಣೆಗಳಾದರೂ ಅರ್ಥ ತನ್ನ ಚಹರೆ ಉಳಿಸಿಕೊಂಡಿರುತ್ತದೆ. ಇನ್ನೊಂದು ವಿವರಣೆ ಇದು. ಅರ್ಥವೆನ್ನುವುದು ರಾಚನಿಕವಾದ, ತಾರ್ಕಿಕವಾದ ಘಟಕ.

ಯಾವ ಭಾಷೆಯಲ್ಲಿ ಯಾವ ಸಂಕೇತಗಳ ವ್ಯವಸ್ಥೆಯಲ್ಲಿ ವ್ಯಕ್ತವಾಗುತ್ತದೆ ಅನ್ನುವುದರಿಂದ ಅದಕ್ಕೇನೂ ಬಾಧೆ ಇಲ್ಲ. ಭಾಷೆಗಳು ಬೇರೆ ಬೇರೆಯಾದರೂ ಅರ್ಥ ಒಂದೇ ಆಗಿರಬಲ್ಲದು. ಇಂಥ ನಂಬಿಕೆ ಇದ್ದಾಗ ಮಾತ್ರ ಭಾಷಾಂತರ ಸಾಧ್ಯವಾಗುತ್ತದೆ. ಯಾವ ಕಾಲದ್ದೋ ಯಾವ ಭಾಷೆಯದೋ ಝೆನ್ ಕತೆ ಮೇಲಿನ ಉದಾಹರಣೆಯಲ್ಲಿ ನಿಮಗೆ ಅರ್ಥವಾದದ್ದು ಹೇಗೆ ಅನ್ನುವುದನ್ನು ಯೋಚಿಸಿ ನೋಡಿ.

`ದೇವನೊಬ್ಬ ನಾಮ ಹಲವು~, `ಭಾರತೀಯ ಸಾಹಿತ್ಯ ಒಂದೇ, ಹಲವು ಭಾಷೆಗಳಲ್ಲಿ ವ್ಯಕ್ತವಾಗಿದೆ~, `ಮನುಷ್ಯ ಕುಲ ಎಷ್ಟೇ ವಿವಿಧವಾಗಿದ್ದರು ಒಂದೇ~ ಅನ್ನುವಂಥ ಮಾತುಗಳೆಲ್ಲದರ ಹಿಂದೆ ಇರುವ ನಿಲುವು ಇದೇ.

ಅರ್ಥವನ್ನು ತಿಳಿಸುವುದಕ್ಕೆ ಭಾಷೆಯ ಮಾಧ್ಯಮ ಬೇಕು. ಇಲ್ಲಿ ಒಂದು ಪ್ರಶ್ನೆ ಹುಟ್ಟುತ್ತದೆ. ಅವಿನಾಶಿಯಾದ ಅಖಂಡವಾದ ಅರ್ಥ ಅದು ಹೇಗೆ ಕ್ಷಣಿಕವಾದ ವರ್ಣ ಮತ್ತು ಶಬ್ದ ಸಂಕೇತಗಳಿಂದ ವ್ಯಕ್ತವಾಗುತ್ತದೆ? ಬಿಡಿಬಿಡಿಯಾದ ಭಾಷಿಕ ಅಂಶಗಳ ಸಂಯೋಜನೆಯಿಂದ ಅರ್ಥ ಹುಟ್ಟುವುದಿಲ್ಲ.

ಅರ್ಥವನ್ನು ಹೊತ್ತಿರುವ ಇಡೀ ವಾಕ್ಯದ ಅಖಂಡತೆ ಮುಖ್ಯ. ಅಖಂಡವಾದ ಅರ್ಥ ಅಖಂಡವಾದ ವಾಕ್ಯದಿಂದ ಮಾತ್ರ ವ್ಯಕ್ತವಾಗುತ್ತದೆ. ಒಂದೊಂದು ಭಾಷೆಯಲ್ಲು ಆಯಾ ಭಾಷೆಯ ವ್ಯಾಕರಣ ಅಂದರೆ ಅರ್ಥವಂತಿಕೆಯ ನಿಯಮಗಳಿಗೆ ಅನುಸಾರವಾಗಿ ಅರ್ಥ ಮೂಡುತ್ತದೆ. ಕಣ್ಣು, ಕಿವಿ ಜೀವಂತ ಶರೀರದಲ್ಲಿರುವಾಗ ಮಾತ್ರ ಕಾಣಬಲ್ಲದು, ಕೇಳಬಲ್ಲದು. ಹಾಗೆಯೇ ವಾಕ್ಯದೊಳಗಿರುವ ಪದಕ್ಕೆ ಮಾತ್ರ ಅರ್ಥ.
 
ಅರ್ಥ ಸ್ವತಂತ್ರ, ವಾಕ್ಯ ಆಯಾ ಭಾಷೆಯ ನಿಯಮಗಳಿಗೆ ಬದ್ಧ. ಆದ್ದರಿಂದ ಅರ್ಥ ಅನ್ನುವುದು ವ್ಯಾಕರಣಕ್ಕೆ ಸಂಬಂಧಿಸಿದ್ದು. ಇದನ್ನು ವಿಟ್‌ಗನ್‌ಸ್ಟೀನ್, ಫ್ರೀಜ್‌ರಂಥ ಪಾಶ್ಚಾತ್ಯ ಚಿಂತಕರೂ ಹೀಗೇ ಹೇಳುತ್ತಾರೆ. ಪದಗಳು ಇವೆ, ಪದದ ಅರ್ಥಗಳನ್ನು ವಿವರಿಸುವ ನಿಘಂಟುಗಳು ಇವೆ.

ಆದರೆ ಯಾವುದೇ ಪದಕ್ಕೆ ಅರ್ಥದ ಜೀವ ಬರುವುದು ಅದು ವಾಕ್ಯದಲ್ಲಿ ಐಕ್ಯವಾದಾಗಲೇ. ಅರ್ಥ ಅನ್ನುವುದು ಮನುಷ್ಯರ ಸಂಪ್ರದಾಯಗಳಿಗೆ, ರೂಢಿಗಳಿಗೆ ಬದ್ಧವಲ್ಲ. ಅರ್ಥವು ನಿತ್ಯ. ಭಾಷೆ ಕ್ಷಣಿಕ. ಭಾಷೆ ಎಂದರೆ ಪದಗಳು ಅರ್ಥದ ಪೂರ್ಣತೆ ತಮ್ಮದೇ ಎಂದು ಪೈಪೋಟಿ ನಡೆಸುವ, ಅರ್ಥ ಬಹುಳತೆಯ ವಲಯ.

ಈ ಅರ್ಥ ಬಹುಳತೆಯಲ್ಲಿ `ಸರಿ~ಯಾದ ಅರ್ಥ ಯಾವುದು? ಅರ್ಥವೆನ್ನುವುದು ವ್ಯಾಖ್ಯಾನದ ಫಲಿತಾಂಶ, ವಾಕ್ಯದಲ್ಲಿ ವ್ಯಕ್ತವಾಗುವ ಅರ್ಥ ಸಮಂಜಸವೇ ಅಲ್ಲವೇ ಅನ್ನುವುದನ್ನು ತಿಳಿಯುವುದಕ್ಕೆ ವ್ಯಾಕರಣದ ತಿಳಿವಳಿಕೆ, ಸುತ್ತಲ ಸಮಾಜದ ಪದ್ಧತಿಗಳ ಅರಿವು ಬೇಕು. ವ್ಯಾಕರಣವು ವಾಸ್ತವವನ್ನು ಭಾಷೆ ಹೇಗೆ ವ್ಯಕ್ತಪಡಿಸುತ್ತದೆ ಅನ್ನುವ ತಿಳಿವು ಕೊಡುತ್ತದೆ. ತೀರ ಸ್ಥೂಲವಾಗಿ ಇದು ಭರ್ತೃಹರಿಯ ಪ್ರತಿಪಾದನೆ.

ಭರ್ತೃಹರಿಯ `ವಾಕ್ಯಪದೀಯ~ದ ಕನ್ನಡ ಅನುವಾದವನ್ನು ವಿದ್ವಾನ್ ಎನ್. ರಂಗನಾಥ ಶರ್ಮಾ ಅವರು ಮಾಡಿದ್ದು, ಅದರ ಭಾಗಗಳನ್ನು `ಅಕ್ಷರ ಪ್ರಕಾಶನ~, ಇಡಿಯ ಗ್ರಂಥವನ್ನು `ಸಂಸ್ಕೃತ ವಿಶ್ವವಿದ್ಯಾಲಯ~ 2011ರಲ್ಲಿ ಪ್ರಕಟಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT