ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವ್ಯವಸ್ಥೆ: ಗೋಡೆ ಬರಹ ನಿರ್ಲಕ್ಷ್ಯ ಬೇಡ

Last Updated 19 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಲೋಕಸಭಾ ಚುನಾ­ವಣಾ ಪೂರ್ವ ಪರಿಸ್ಥಿತಿಯು ಹಠಾತ್ತಾಗಿ ಹೆಚ್ಚು ಆಸಕ್ತಿದಾಯಕವಾಗಿ ಪರಿಣಮಿ­ಸಿದೆ. ಹಲವಾರು ಅಂತರರಾಷ್ಟ್ರೀಯ ಬಂಡವಾಳ ಹೂಡಿಕೆ ಬ್ಯಾಂಕ್‌ಗಳು ಮತ್ತು  ಬೃಹತ್ ಪ್ರಮಾಣ­ದಲ್ಲಿ ಬಂಡವಾಳ ಹೂಡುವ   ವ್ಯಕ್ತಿಗಳು  ಭಾರತದ ಅರ್ಥ ವ್ಯವಸ್ಥೆಯ ಭವಿಷ್ಯದ ಬಗ್ಗೆ ಹಲವು ಊಹಾಪೋಹ ಹರಿ­ಬಿಡುತ್ತ ಕುತೂಹಲ ಮೂಡಿ­ಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ­ಯಾಗು­ತ್ತಿದ್ದಂತೆ, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಿದ್ದು ಮೋದಿ ನೇತೃತ್ವದಲ್ಲಿ  ಸರ್ಕಾರ ರಚನೆ­ಯಾಗಲಿದೆ ಎನ್ನುವ ಅಂದಾಜು ಆಧರಿಸಿ, ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆಯು ಭಾರತದ ಅರ್ಥ ವ್ಯವಸ್ಥೆಯು  ದುರ್ಬಲ ಹಂತದಿಂದ ಗಮನಾರ್ಹ­ವಾಗಿ ಚೇತರಿಸಿಕೊಂಡು ಮಾರು­ಕಟ್ಟೆ ಮೇಲೆ ಹಿಡಿತ ಸಾಧಿಸುವ ಬಗೆಯಲ್ಲಿ ಬಲಿಷ್ಠಗೊಳ್ಳಲಿದೆ ಎಂದು ವರದಿ ನೀಡಿದೆ.

ಈ ವರದಿ ಸಿದ್ಧಪಡಿಸಿರುವ ತಿಮೊಥಿ ಮೊಯ್, ‘ನಮ್ಮ ದೃಷ್ಟಿಕೋನದಲ್ಲಿ ಮಾರ್ಪಾಡು: ಭಾರತದ ಅರ್ಥ ವ್ಯವಸ್ಥೆಯ ಬಲವರ್ಧನೆ’ಯ ಶಿರೋ­ನಾಮೆ­ಯಡಿ ಈ ವರದಿ ಸಿದ್ಧಪಡಿಸಿದ್ದಾರೆ. ಈ ವರದಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಅದರಿಂದ ದೇಶದ ಅರ್ಥ ವ್ಯವಸ್ಥೆ ಮೇಲೆ  ಬೀರಲಿರುವ ಪರಿಣಾಮಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಲಾಗಿದೆ.

ಉದ್ಯಮ ಸ್ನೇಹಿ ಮತ್ತು ಆರ್ಥಿಕ ಸುಧಾರಣೆ­ಗಳ ಪರ ಇರುವ ತಮ್ಮ ನಾಯಕತ್ವದ ಗುಣ ಲಕ್ಷಣಗಳನ್ನು  ನರೇಂದ್ರ ಮೋದಿ ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಗುಜರಾತ್‌ನಲ್ಲಿನ ಇವರ ಕಾರ್ಯವೈಖರಿಯು ವಿದೇಶಗಳ­ಲ್ಲಿನ ಭಾರತದ ರಾಜತಾಂತ್ರಿಕರಿಗೆ ಮೆಚ್ಚುಗೆ­ಯಾಗಿದ್ದು, ಅವರೆಲ್ಲ ಅಲ್ಲಿನ ದೇಶಗಳಿಗೆ ಈ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ.

ಗೋಲ್ಡ್‌ಮನ್ ಸ್ಯಾಚ್ಸ್‌ನ ವರ­ದಿಯು ಭಾರತದ ಅರ್ಥ ವ್ಯವಸ್ಥೆಯ ಹಲವಾರು ಆಯಾಮಗಳನ್ನು ವಿವರ­ವಾಗಿ ಚರ್ಚಿಸಿದ್ದು, ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಸಾಕಷ್ಟು ಮಹತ್ವ ನೀಡಿದೆ.  ವರದಿಯು ಬದಲಾ­ವಣೆಯ ಆರು ಕಾರಣಗಳನ್ನು ಪಟ್ಟಿ ಮಾಡಿದ್ದು, ಅದರಿಂದ ಭಾರತದ ಅರ್ಥ ವ್ಯವಸ್ಥೆಗೆ ಆಗುವ ಲಾಭಗಳನ್ನು ತಾತ್ವಿಕ ನೆಲೆಯಲ್ಲಿ ಪ್ರತಿಪಾದಿಸಿದೆ.

ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಪಕ್ಷವು 2014ರಲ್ಲಿ ನಡೆಯಲಿ­ರುವ ಲೋಕ­ಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸುತ್ತದೆ ಎನ್ನುವ ಅಂದಾಜು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.   ಈ ಹಿಂದಿದ್ದ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಾಧನೆ­ಯನ್ನೂ ವರದಿಯಲ್ಲಿ ಉಲ್ಲೇಖಿಸ­ಲಾಗಿದೆ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮೂಲಸೌಕರ್ಯ ರಂಗಕ್ಕೆ ಸಾಕಷ್ಟು ಉತ್ತೇಜನ ದೊರೆತದ್ದನ್ನು ಮತ್ತು ಎನ್‌ಡಿಎ ಅಧಿಕಾರಕ್ಕೆ ಮರಳಿದರೆ ಬಂಡವಾಳ ಹೂಡಿಕೆ ಪ್ರಮಾಣ ಚೇತರಿ­ಸಿಕೊಳ್ಳಲಿದೆ ಎಂದೂ ಅಭಿಪ್ರಾಯ­ಪಟ್ಟಿದೆ.
ಇಂತಹ ಬೆಳವಣಿಗೆಯಿಂದ ಷೇರು ಹೂಡಿಕೆ­ದಾರರೂ ಲಾಭ ಬಾಚಿಕೊಳ್ಳ­ಲಿದ್ದಾರೆ ಎಂದೂ ವರದಿಯಲ್ಲಿ ಹೇಳಲಾ­ಗಿದೆ. ಐದು ರಾಜ್ಯಗಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಫಲಿ­ತಾಂಶವು ಬಿಜೆಪಿ ಪರವಾಗಿ ಇರಲಿದೆ ಎನ್ನುವುದನ್ನೂ ಈ ವರದಿಯು ಬಲ­ವಾಗಿ ಅವಲಂಬಿಸಿದೆ.

ಬಂಡವಾಳ ನಿಧಿ ನಿರ್ವಾಹಕ ಜಿಮ್ ರೋಜರ್, ಪ್ರಮುಖ ನಿಯತಕಾಲಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಯುಪಿಎ ಸರ್ಕಾರದ ಆರ್ಥಿಕ ಧೋರಣೆಗಳನ್ನು ತೀವ್ರವಾಗಿ ಟೀಕಿ­ಸಿದ್ದು, ಅರ್ಥ ವ್ಯವಸ್ಥೆ­ಯನ್ನು ಇನ್ನಷ್ಟು ಮುಕ್ತ­ಗೊಳಿಸಲು ಧೈರ್ಯ ತೋರದ ರಾಜಕಾರಣಿ­ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಅರ್ಥ ವ್ಯವಸ್ಥೆ ಇನ್ನಷ್ಟು ಮುಕ್ತಗೊಳ್ಳು­ವವರೆಗೆ ತಾವು ಬಂಡ­ವಾಳ ಹೂಡಿಕೆ ಮಾಡುವುದಿಲ್ಲ ಎಂದೂ ಪ್ರಕಟಿಸಿದ್ದಾರೆ.

ಜಾಗತಿಕ ಬಂಡವಾಳ ಹೂಡಿಕೆದಾರ­ರನ್ನು ಆಕರ್ಷಿಸುವ ಭಾರತದ ಸಾಮರ್ಥ್ಯ­­ವನ್ನು ಇತ್ತೀಚೆಗೆ ‘ಅನ್ಹೋಲ್ಟ್ -ಜಿಎಫ್‌ಕೆ ರಾಷ್ಟ್ರೀಯ ಬ್ರಾಂಡ್ ಸೂಚ್ಯಂಕ’  ಆಧರಿಸಿ ಅಳೆಯಲಾಗಿದೆ. ನಿರೀಕ್ಷೆ­ಯಂತೆ, ಭಾರತದ ಸ್ಥಾನ­ಮಾನವು ನಿರಾಶಾ­ದಾಯಕ­ವಾಗಿದ್ದು, ಇತರ ‘ಬ್ರಿಕ್ (ಬ್ರೆಜಿಲ್, ರಷ್ಯಾ, ಚೀನಾ) ದೇಶ’ಗಳಿಗಿಂತ ಕಡಿಮೆ ಹಂತದಲ್ಲಿದೆ. ಇತರ ಅಂತರರಾಷ್ಟ್ರೀಯ ಹೂಡಿಕೆ ಬ್ಯಾಂಕ್‌ಗಳು ಮತ್ತು ಷೇರು ಸಲಹೆ­ಗಾರರು ಕೂಡ ಭಾರತದ ಸಾಧನೆ ಕಳಪೆ ಎಂದು ಗುರುತಿಸಿರುವುದರಿಂದಲೇ 20­11­–­-12ಕ್ಕೆ ಹೋಲಿಸಿದರೆ, 2012–-13ರಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವು ಶೇ 30ರಷ್ಟು ಕಡಿಮೆಯಾ­ಗಿ­ರುವುದು ವೇದ್ಯವಾಗುತ್ತದೆ.

ಭಾರತದ ಅರ್ಥವ್ಯವಸ್ಥೆಯು ಸದ್ಯಕ್ಕೆ ಹಲ­ವು ಸವಾಲುಗಳನ್ನು ಎದುರಿ­ಸುತ್ತಿ­ರು­ವುದು ನಿಜ. ಹಣದುಬ್ಬರ, ಗರಿಷ್ಠ ಪ್ರಮಾಣದ ವಿತ್ತೀಯ ಕೊರತೆ, ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳ, ಗರಿಷ್ಠ ಮಟ್ಟದ ಚಾಲ್ತಿ ಖಾತೆ ಕೊರತೆ, ಅಭಿವೃದ್ಧಿ ಕುಂಠಿತ ಮುಂತಾದವು ಅರ್ಥ ವ್ಯವಸ್ಥೆ­ಯನ್ನು ಕಾಡುತ್ತಿವೆ.

ಆದರೆ, ಈ ನಿರಾಶಾದಾಯಕ ಪರಿ­ಸ್ಥಿತಿಯು ಕ್ರಮೇಣ ದೂರವಾಗು­ತ್ತಿದೆ. ಇತ್ತೀಚಿನ ಕೆಲ ತಿಂಗ­ಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಹರಿವು ಹೆಚ್ಚುತ್ತಿದೆ. ಷೇರುಪೇಟೆ ಮತ್ತು ವಿನಿಮಯ ಮಾರುಕಟ್ಟೆ ಪೂರಕವಾಗಿ ಪ್ರತಿಕ್ರಿಯಿ­ಸುತ್ತಿವೆ. ರೂಪಾಯಿ ಮೌಲ್ಯ ರಕ್ಷಣೆಗೆ ಭಾರ­ತೀಯ ರಿಸರ್ವ್‌ ಬ್ಯಾಂಕ್ ಕೈಗೊಂಡ ದಿಟ್ಟ ಕ್ರಮ­ ಕೆಲಮಟ್ಟಿಗೆ ಸಕಾರಾತ್ಮಕ ಫಲಿತಾಂಶ ನೀಡುತ್ತಿವೆ.

ಈ ಎಲ್ಲ ಬದಲಾವಣೆಗಳು ಅಷ್ಟೇನೂ ಕರಾರು­ವಾಕ್ ಅಲ್ಲದ ವಿದ್ಯಮಾನಗಳಾ­ಗಿದ್ದು, ಇವೆಲ್ಲ ಪುಟ್ಟ ಹೆಜ್ಜೆಗಳು ಎಂದು ಬಣ್ಣಿಸಿರುವ ಅಂತರರಾಷ್ಟ್ರೀಯ ಹಣ­ಕಾಸು ಸಂಸ್ಥೆಗಳು ಇದರಿಂದ ಹೆಚ್ಚು ಪ್ರಭಾವಿತಗೊಂಡಿಲ್ಲ. ಇನ್ನಷ್ಟು ವ್ಯಾಪಕ ಪ್ರಮಾಣದ ಆರ್ಥಿಕ ಬದಲಾವಣೆ­ಗಳತ್ತ ಅವು ದೃಷ್ಟಿ ನೆಟ್ಟಿವೆ.

ಅರ್ಥ ವ್ಯವಸ್ಥೆಯಲ್ಲಿ  ಒಂದರ ಹಿಂದೆ ಒಂದ­ರಂತೆ ಅಪ್ಪಳಿಸಿದ ಹಗರಣಗಳು ಬಂಡವಾಳ ಹೂಡಿಕೆದಾರರನ್ನು ಕಂಗೆ­ಡಿಸಿವೆ. ಪೂರ್ವಾನ್ವಯ­ಗೊಳಿಸಿ ಜಾರಿಗೆ ತಂದ ತೆರಿಗೆ ತಿದ್ದುಪಡಿಗಳು ದೇಶದ ಪ್ರತಿಷ್ಠೆಗೆ ಮತ್ತು ಸ್ಥಿರ ಸ್ವರೂಪದ, ವಿಶ್ವಾಸಾರ್ಹವಾದ ಅರ್ಥ ವ್ಯವಸ್ಥೆಗೆ ಸಾಕಷ್ಟು ಹಾನಿ ಉಂಟು ಮಾಡಿವೆ.

ನಿರ್ಧಾರ ಕೈಗೊಳ್ಳದ ವೈಫಲ್ಯ­ದಿಂದಾಗಿ ಹಲವಾರು ಮೂಲ ಸೌಕರ್ಯ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೊನೆಗೂ  ಎಚ್ಚೆತ್ತುಕೊಂಡಿ­ರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಭಾಗಿಯಾಗು­ವಂತೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದೆ.

ಭೂಸ್ವಾಧೀನ ಕಾಯ್ದೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿಯು ಮೂಲ ಸೌಕರ್ಯ ಯೋಜನೆ­ಗಳ ಜಾರಿಯನ್ನು ಇನ್ನಷ್ಟು ವಿಳಂಬ ಮಾಡಲಿದೆ ಎನ್ನುವ ಅಭಿಪ್ರಾಯ ಉದ್ಯಮ ವಲಯದಲ್ಲಿ ಮೂಡಿದೆ. ಇದುವರೆಗೆ ಸಾಕಷ್ಟು ಬಾರಿ ಚರ್ಚಿಸಿರುವ ಮತ್ತು ಜಾರಿಗೆ ಬಾರದ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್ ಟಿ) ಈಗಲೂ ಮರೀಚಿಕೆಯಾಗಿಯೇ ಉಳಿದಿದೆ.

ಅಮೆರಿಕ ಮತ್ತು ಯೂರೋಪ್ ಈಗಲೂ ಚೇತರಿಕೆ ಹಾದಿಯಲ್ಲಿ ಇರುವಾಗ, ಭಾರತದ ಅರ್ಥ ವ್ಯವಸ್ಥೆ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆ­ಗಳು ಮಾಡಿರುವ ಅಂದಾಜು ಅಷ್ಟೇನೂ ಖಚಿತ ಇರಲಿಕ್ಕಿಲ್ಲವೆಂದೂ ಆಶಿಸ­ಬಹುದು.  ಆದರೆ, ಕೇಂದ್ರ ಸರ್ಕಾರವು ಮಾತ್ರ ಈ ವರದಿಗಳನ್ನೆಲ್ಲ ಸ್ಪಷ್ಟವಾಗಿ ನಿರಾಕರಿಸುತ್ತಿದೆ. ಇಂತಹ ವರದಿ ನೀಡಿದ ಸಂಸ್ಥೆಗಳನ್ನೇ ನೇರವಾಗಿ ಟೀಕಿಸುತ್ತಿದೆ. ವಾಣಿಜ್ಯ ಸಚಿವ ಆನಂದ ಶರ್ಮಾ ಅವರು ಸರ್ಕಾರ­ವನ್ನು ಬಲವಾಗಿ ಸಮರ್ಥಿಸಿಕೊಂಡು ವರದಿ ನೀಡಿದ ಸಂಸ್ಥೆಯ ವಿರುದ್ಧ ಹರಿಹಾಯ್ದು,   ಇಂತಹ ವರದಿಗಳು ಅಸಮರ್ಪಕ ಮತ್ತು ಆಕ್ಷೇಪಾರ್ಹವಾಗಿವೆ ಎಂದು ಟೀಕಿಸಿ­ದ್ದಾರೆ.

ಸರ್ಕಾರದ ಟೀಕೆಗೆ ತಕ್ಷಣಕ್ಕೆ ಪ್ರತಿ­ಕ್ರಿಯಿಸಿರುವ ಗೋಲ್ಡ್‌ಮನ್ ಸ್ಯಾಚ್ಸ್‌ ಸಂಸ್ಥೆಯು ತನ್ನ ಸಂಶೋ­ಧನಾ ವರದಿಗೆ ತಾನು ಪೂರ್ಣವಾಗಿ ಬದ್ಧವಾಗಿ­ರು­ವುದಾಗಿ ತಿಳಿಸಿದೆ.  ರಾಜಕಾರಣವು ಬಂಡ­ವಾಳ ಹೂಡಿಕೆದಾರರ ನಿರ್ಧಾರದ ಮೇಲೆ ಪ್ರಭಾವ ಬೀರುತ್ತದೆ ಎಂದು ಪುನರುಚ್ಚರಿ­ಸಿರುವುದು ಭಾರತದ ಅರ್ಥ ವ್ಯವಸ್ಥೆಯ ಪಾಲಿಗೆ ನಿರಾಶಾದಾಯಕ­ವಾಗಿರುವುದಂತೂ ನಿಜ.

ಕೇಂದ್ರ ಸರ್ಕಾರವು ವಸ್ತುಸ್ಥಿತಿ ಒಪ್ಪಿ­ಕೊಂಡು ಸವಾಲುಗಳನ್ನು ಎದುರಿ­ಸಲು ಮುಂದಾ­­ಗ­ಬೇಕಾ­ಗಿದೆ. ಸದ್ಯಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮತ್ತು ವಿದೇಶಿ ನೇರ ಬಂಡ­ವಾಳ ಹೂಡಿಕೆದಾರರ (ಎಫ್‌ಡಿಐ) ಪಾಲಿಗೆ ಬಾರತ ಹೆಚ್ಚು ಲಾಭದಾ­ಯಕವಾಗಿಲ್ಲ. ಇದರಿಂದ ಅರ್ಥ ವ್ಯವಸ್ಥೆ ಇನ್ನಷ್ಟು ಸೊರಗುತ್ತದೆ.

ಭಾರತದ ಸ್ಪರ್ಧಾತ್ಮಕತೆ ಕುಸಿದಿದ್ದು ವಾಣಿಜ್ಯ ವಹಿವಾಟಿಗೆ ಪೂರಕ ವಾತಾ­ವರಣ ಇಲ್ಲ ಎಂದು ಹೇಳಿರುವ ವಿಶ್ವ ಬ್ಯಾಂಕ್‌ನ ಹೇಳಿಕೆಗೆ ಸರ್ಕಾರದ ಬಳಿ ಉತ್ತರ ಇದೆಯೇ? ಅರ್ಥ ವ್ಯವಸ್ಥೆ­ಯಲ್ಲಿನ ಲೋಪದೋಷಗಳ ಬಗ್ಗೆ ಎಚ್ಚರಿಕೆಯ ಸಂದೇಶ ಕೊಟ್ಟ ಸಂಸ್ಥೆ­ಗಳನ್ನೇ ನಿಂದಿಸುತ್ತ ಕಾಲ­ಹರಣ ಮಾಡುವ ಬದಲಿಗೆ, ಅವುಗಳು ನೀಡಿ­ರುವ ಸಂದೇಶದಿಂದ ಎಚ್ಚೆತ್ತು­ಕೊಂಡು ಸರಿಯಾದ ದಿಸೆಯಲ್ಲಿ ಕಾರ್ಯ­ಪ್ರವೃತ್ತ ಆಗುವುದರಲ್ಲಿಯೇ ಜಾಣತನ ಅಡಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT