ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳುವಿಗೂ, ನಗುವಿಗೂ ಕಣ್ಣೀರೊಂದೇ ಫ್ರೆಂಡು!

Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಜೀವನದ ಬಗ್ಗೆ ಬಹಳ ಗಹನವಾದ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಕೆರಳುತ್ತಿರುವಾಗಲೇ ಕೆಲವೊಮ್ಮೆ ಎಷ್ಟು ಅತಿ ಸಾಮಾನ್ಯ ವಿಷಯಗಳು ನಡೆದುಬಿಡುತ್ತವೆಂದರೆ, ಥತ್! ನಾವ್ಯಾವಾಗಪ್ಪಾ ಉದ್ಧಾರ ಆಗೋದು ಅಂತ ಜುಗುಪ್ಸೆ ಹುಟ್ಟಿಬಿಡುತ್ತದೆ.

ಉದಾಹರಣೆಗೆ ಸಲಿಂಗ ಕಾಮದ ಬಗ್ಗೆ ಉನ್ನತ ಜ್ಞಾನಾರ್ಜನೆಯನ್ನು ಮಾಡಿಕೊಂಡ ನಂತರ ನಮ್ಮ ಹುಡುಗಿಯರಿಗೆ ಇನ್ನೂ ಹೆಚ್ಚು ಔಚಿತ್ಯವಿರುವ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದಿತ್ತು. ಹುಡುಗ ಹುಡುಗಿಯರ ರೊಮಾನ್ಸುಗಳ ಬಗ್ಗೆ ಕೇಳುವುದು ಬೋರ್ ಹೊಡೆಯುವ ವಿಷಯವಾಗಿತ್ತು. ಆದರೆ ಆದದ್ದೇ ಬೇರೆ. ನನ್ನಿ ಎನ್ನುವ ಹೆಸರಿನ ಚಂದದ ಹುಡುಗಿಯ ಕಷ್ಟದಲ್ಲಿ ಅವಳಿಗೆ ಎಲ್ಲರೂ ಹೆಗಲು ಕೊಡಬೇಕಾಗಿ ಬಂದದ್ದು ವಿಪರ್ಯಾಸವಾದರೂ, ಅದರಿಂದ ದೊರೆತ ಜೀವನಾನುಭವ ಮಾತ್ರ ‘ಪ್ರೈಸ್ ಲೆಸ್’ ಅಂತಾರಲ್ಲ, ಹಾಗೆ.

ಈ ನನ್ನಿ ಅಥವಾ ‘ನಂದನ’ ಎನ್ನುವ ಹುಡುಗಿ ಫೋಟೊಗ್ರಫಿ ಕಲಿಯುತ್ತಿದ್ದಳು. ಯೂನಿವರ್ಸಿಟಿಯಲ್ಲಿ ಜರ್ನಲಿಸಂ ಸೇರಿಕೊಂಡಿದ್ದರೂ ಅವಳಿಗೆ ಉಳಿದೆಲ್ಲ ವಿಷಯಗಳು ನಗಣ್ಯವಾಗಿ ಬರೀ ಫೋಟೊಗ್ರಫಿಯೊಂದೇ ಮುಖ್ಯವಾಗಿ ಆಕರ್ಷಿಸಿತ್ತು. ಉಳ್ಳವರ ಮನೆ ಹುಡುಗಿಯೇ. ಕಾಲಕ್ಕೆ ತಕ್ಕ ಹಾಗೆ ಮೂರಕ್ಷರದ ಹೆಸರು ಎರಡಕ್ಷರವಾಗಿ ‘ನಂದಾ’ ಆಗದೆ ‘ನನ್ನಿ’ ಆಗಿತ್ತು. ತನ್ನ ಪಾಡಿಗೆ ತಾನಿರುತ್ತಿದ್ದ ಈ ಹುಡುಗಿಯನ್ನು ಕಂಡರೆ ಆಗದ ಕೆಲವರು ಅವಳ ಹತ್ತಿರ ಹೆಚ್ಚಿನ ಮಾಹಿತಿ ಪಡೆಯಲು ಹೋಗಿ ಅವಳಿಂದ ಯಾವ ಪ್ರತಿಕ್ರಿಯೆಯನ್ನೂ ಪಡೆಯಲು ಸಾಧ್ಯವಾಗದೆ ಸುಮ್ಮನಾಗಿದ್ದರು.

ಅರೆ, ತನ್ನ ಪಾಡಿಗೆ ತಾನಿರುವ ಹುಡುಗಿಯ ಬಗ್ಗೆ ಬೇರೆಯವರಿಗೆ ಯಾಕೆ ಆಸಕ್ತಿ ಮೂಡಬೇಕು ಎಂದು ನೀವು ಕೇಳಿದರೆ ನಿಮ್ಮಷ್ಟು ದಡ್ಡರು ಇನ್ನೊಬ್ಬರಿರಲಿಕ್ಕಿಲ್ಲ. ನಿಮಿಷಗಳಲ್ಲಿ ಮುಗಿಯುವ ಬಸ್ ಪ್ರಯಾಣದಲ್ಲೇ ನಮ್ಮ ಜನ ಪಕ್ಕದಲ್ಲಿ ಕೂತವರ ವಂಶಾವಳಿಯನ್ನು ತಿಳಿದುಕೊಳ್ಳದೆ ಬಿಡುವುದಿಲ್ಲ. ಅದು ಹೇಗೋ ಮೊಬೈಲ್ ಬಂದ ಮೇಲೆ ಈ ಚಟ ಕಡಿಮೆಯಾಗಿದೆ. ವಯಸ್ಸಾದವರು ಕೂತರಂತೂ ತಮ್ಮ ಪಕ್ಕದಲ್ಲಿರುವವರ ಜನ್ಮ ಜಾಲಾಡಿ, ತಮ್ಮ ಜನ್ಮವನ್ನೂ ಜಾಲಾಡಿಕೊಂಡು ಬಹಿರಂಗಕ್ಕೆ ತಂದು ಮಗನೋ ಮಗಳೋ ಫಾರಿನ್‌ನಲ್ಲಿದ್ದರೆ ಸಾಕು ಅವರ ಬಗ್ಗೆ ಹೇಳಿ, ಅವರ ಮನೆ ಬಗ್ಗೆ ಹೊಗಳಿ, ಅಲ್ಲಿನ ವೆದರ್ ಬಗ್ಗೆ ಮಾತನಾಡಿ, ತಾವು ಎಷ್ಟು ಸಾರಿ ಹೋಗಿ ಬಂದಿದ್ದೇವೆನ್ನುವ ಬಗ್ಗೆ ಕೊರೆದು ಬೇರೆಯವರ ಪ್ರಾಣ ತೆಗೆದು ತಮ್ಮ ಕರ್ಚೀಪಿನಲ್ಲಿ ಸುತ್ತಿ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ.

ಪಾಪ, ತಾವು ಇನ್ನೊಬ್ಬರಿಗೆ ಅಪ್ರಸ್ತುತವೆನ್ನುವ ಅರಿವೇ ಆಗುವುದಿಲ್ಲ. ನನ್ನಿಯ ಒಳಪ್ರಪಂಚ ಬಹಳ ಸಮೃದ್ಧವಾಗಿತ್ತು. ಬಹಳ ಚೆನ್ನಾಗಿ ಫೋಟೊಗ್ರಫಿ ಬರುತ್ತಿದ್ದರೂ ಕೋರ್ಸ್ ಮಾಡಿಕೊಂಡರೆ ತನ್ನ ಮುಂದಿನ ಹಾದಿಗೆ ಒಂದು ಗಟ್ಟಿತನ ಬರುತ್ತದೆ ಅಂತ ನಂಬಿದ್ದಳು. ತನ್ನ ಪಾಡಿಗೆ ತಾನು ಕ್ಯಾಮೆರಾ ಕುತ್ತಿಗೆಯ ಸುತ್ತ ಹಾಕಿಕೊಂಡು ಬೆಳ್ ಬೆಳಿಗ್ಗೆ ಎತ್ತಲೋ ಹೊರಟುಬಿಡುತ್ತಿದ್ದಳು. ಆಗೆಲ್ಲ ಡಿಜಿಟಲ್ ಇರಲಿಲ್ಲವಾದ್ದರಿಂದ ಫೋಟೊಗ್ರಫಿ ಬಹಳ ದುಬಾರಿ ಹವ್ಯಾಸವಾಗಿತ್ತಾದರೂ, ನನ್ನಿಯ ತಂದೆ ತಾಯಿ ಇಬ್ಬರೂ ಆಗಿನ ಮದರಾಸು (ಚೆನ್ನೈ) ನಲ್ಲಿ ಕೆಲಸದಲ್ಲಿ ಇದ್ದುದರಿಂದ ಅವಳಿಗೆ ಹಣಕಾಸಿನ ಕೊರತೆ ಬಾಧಿಸುತ್ತಿರಲಿಲ್ಲ, ಅವಳಿಗೆ ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇದ್ದಂತಿರಲಿಲ್ಲ. ಅದ್ಯಾವ ಕಾರಣಕ್ಕೋ ನನ್ನಿ ಎನ್ನುವ ಆ ಹುಡುಗಿ ನಿರ್ಮಲಾಗೆ ಬಹಳ ಕ್ಲೋಸ್ ಆಗಿಬಿಟ್ಟಿದ್ದಳು. ನಿರ್ಮಲಾಗೆ ಕಣ್ಣು ಕಾಣುವುದಿಲ್ಲ ಅಂತಲೋ ಅಥವಾ ಅವಳಿಗೆ ಸಹಾಯ ಮಾಡುವುದರಲ್ಲಿ ತನ್ನ ಆತ್ಮವಿಶ್ವಾಸಕ್ಕೂ ಒಂದಷ್ಟು ಕಸುವು ಬರುತ್ತದೆ ಎಂತಲೋ ಒಟ್ಟಿನಲ್ಲಿ ನನ್ನಿ-ನಿರ್ಮಲ ಬಹಳ ಹತ್ತಿರದ ಗೆಳತಿಯರಾಗಿಬಿಟ್ಟಿದ್ದರು.

ಹೀಗೆ ಜೀವನ ನಾಲ್ಕನೇ ಗೇರಿನಲ್ಲಿ ಸಮತಟ್ಟಾದ ರಸ್ತೆಯಲ್ಲಿ ಟ್ರಾಫಿಕ್ಕೇ ಇಲ್ಲದ ಸಮಯದಲ್ಲಿ ಸಾಂಗವಾಗಿ ಸಾಗುತ್ತಿರಲು ಇದ್ದಕ್ಕಿದ್ದ ಹಾಗೆ ಬರಸಿಡಿಲಿನಂತೆ ಬಂದೆರಗಿದ ಅಸಹ್ಯದ ಅಪಾಯವನ್ನು ಕಂಡ ನನ್ನಿ ನಡುಗಿ ಹೋದಳು. ಹೇಳಿಕೊಳ್ಳುವುದಕ್ಕೆ ಇದ್ದವರಾದರೂ ಇನ್ನಾರು? ನಿರ್ಮಲಾ ಒಬ್ಬಳೇ. ಅವಳ ಹತ್ತಿರ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು. ಅವಳ ಜೊತೆ ನಿರ್ಮಲಾನೂ ಅತ್ತಳಾದರೂ ಬರೀ ಅಳುವುದರಿಂದ ಸಮಸ್ಯೆ ಇತ್ಯರ್ಥವಾಗುವಂತಿರಲಿಲ್ಲ.

ಹೆಣ್ಣು ಮಕ್ಕಳ ಕಣ್ಣೀರಿಗೆ ಬಹಳ ತಾಕತ್ತಿದೆ ಎಂದು ವ್ಯಂಗ್ಯಮಿಶ್ರಿತ ಮೆಚ್ಚುಗೆ ಸೂಚಿಸುವವರು ಇದನ್ನೂ ಅರ್ಥ ಮಾಡಿಕೊಳ್ಳಬೇಕು. ಕಣ್ಣೀರಿಗೆ ಆ ಮಟ್ಟಿಗಿನ ತಾಕತ್ತಿದ್ದಿದ್ದರೆ ಈ ಜಗತ್ತಿನಲ್ಲಿ ಯಾವ ಮಗನೂ, ಯಾವ ಗಂಡನೂ ಸೇನೆ ಸೇರುತ್ತಿರಲಿಲ್ಲ.

ನನ್ನಿ ಎದುರಿಸುತ್ತಿದ್ದ ಸಮಸ್ಯೆ ಸ್ವಲ್ಪ ಜಟಿಲವಾಗಿತ್ತು. ಹಾಗಂತ ಅರ್ಥವಾದ ಕೂಡಲೇ ನಿರ್ಮಲಾ ಇದನ್ನು ಇಂದುಮತಿ ಎಂಡ್ ಪಾರ್ಟಿಯ ಮುಂದೆ ಮಂಡಿಸಿ ನೋಡುವ, ಯಾವುದಾದರೂ ದಾರಿ ಕಾಣುವುದೇನೋ ಎಂದು ಸಲಹೆ ನೀಡಿದಳು. ನನ್ನಿ ಎಲ್ಲರನ್ನೂ ನೋಡಿದ್ದಳಾದರೂ ಯಾರ ಪರಿಚಯವೂ ಹೆಚ್ಚಾಗಿ ಇರಲಿಲ್ಲ. ಆದರೆ ಕೆಲವೊಮ್ಮೆ ಸಮಸ್ಯೆಗಳೇ ನಮಗೆ ಹೊಸ ಸ್ನೇಹಿತರನ್ನ ಮಾಡಿಕೊಟ್ಟುಬಿಡುತ್ತವೆ. ಸಹಾಯದ, ಧೈರ್ಯದ ನೆಲೆಯ ಮೇಲೆ ಪ್ರಾರಂಭವಾದ ಸ್ನೇಹ ಸಾಮಾನ್ಯವಾಗಿ ಕಾಲದ ಪರೀಕ್ಷೆಗಳನ್ನೆಲ್ಲ ಮೀರಿ ನಿಲ್ಲುತ್ತವೆ.

ಆಯಿತು, ಎಲ್ಲರ ಹತ್ತಿರ ಮಾತನಾಡೋಣ ಅಂತ ನನ್ನಿ ಒಪ್ಪಿದಳು. ನಿರ್ಮಲಾ, ನನ್ನಿ ಹುಡುಗಿಯರ ರೂಮಿನ ಬಳಿ ಬಂದಾಗ ಪಾಂಡ್ಸ್ ಪೌಡರಿನ ಘಮ ರೂಮಿನ ತುಂಬಾ ಹರಡಿ ರೂಮು ಯಾವುದೋ ಡ್ರೀಂ ಸೀಕ್ವೆನ್ಸಿನ ವೇದಿಕೆಯಂತಾಗಿತ್ತು.

ಉಳಿದವರಿಗೆ ಘಾಟು ಅನ್ನಿಸಿ ಕೆಮ್ಮು ಬರುವಷ್ಟು ಪೌಡರು ರೂಮಿನ ವಾತಾವರಣದಲ್ಲಿ ತೇಲುತ್ತಾ ಹರಡಿಕೊಂಡಿದ್ದರೂ ರಶ್ಮಿ, ವಿಜಿ, ಈಶ್ವರಿ, ಇಂದುಮತಿಯರಿಗೆ ಮಾತ್ರ ಅದು ಸುವಾಸನೆಯಾಗಿಯೇ ಉಳಿದಿತ್ತು. ರಿಂಕಿ ಯಥಾಪ್ರಕಾರ ಯಾವುದೋ ಹೊಸ ಇಸ್ರೇಲ್ ಹುಡುಗನ ನಂಬರ್ ಕುದುರಿಸಿಕೊಂಡು ದೇಶ ದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿದ್ದಳು. ನಿರ್ಮಲಾ ಮತ್ತು ನನ್ನಿಯನ್ನು ಬಾಗಿಲ ಹತ್ತಿರ ನೋಡಿ ಎಲ್ಲರೂ ಚಕಿತರಾದರು.

‘ಬಾ ನಿರ್ಮಲಾ? ಏನಾಯ್ತು? ಇಲ್ಲೀತನಕ ಬಂದಿದೀಯಾ?’ ಎಂದು ವಿಜಿ ನನ್ನಿಯತ್ತ ಅನುಮಾನದಿಂದಲೇ ನೋಡುತ್ತಾ ನಿರ್ಮಲಾಳನ್ನು ಮಾತನಾಡಿಸಿದಳು.
‘ಏನಿಲ್ಲ. ಒಂದ್ ಪ್ರಾಬ್ಲಮ್ ಇತ್ತು. ನಿಮ್ ಹತ್ರ ಡಿಸ್ಕಸ್ ಮಾಡನಾ ಅಂತ ಬಂದ್ವಿ’

‘ಏನ್ ಪ್ರಾಬ್ಲಮ್ಮು?’
‘ಎಲ್ಲಿಗೋ ರೆಡಿ ಆಗ್ತಿರೋ ಹಾಗಿದೆ? ನೀವ್ ಹೋಗ್ ಬನ್ನಿ. ಸಾಯಂಕಾಲ ಸಿಗ್ತೀವಿ’

‘ಸಿಗ್ತೀವಿ ಅಂದ್ರೆ? ಪ್ರಾಬ್ಲಂ ಯಾರದ್ದು?’
‘ನನ್ನಿ-ದು. ನೀವು ಹೋಗ್ ಬನ್ನಿ. ಬಂದ್ ಮೇಲೆ ಎಲ್ಲಾ ತಿಳ್ಕೊಳೋವ್ರಂತೆ’

‘ಸರಿ. ನಾವು ಯಾವುದೋ ಪಿಚ್ಚರ್ ನೋಡಕ್ಕೆ ಹೋಗ್ತಿದೀವಿ. ಆರು ಗಂಟೆಗೆ ಬರ್ತೀವಿ. ತಪ್ಪದೇ ಬನ್ನಿ. ಟೀ ಕುಡಿಯೋಕೆ ನಂ ರೂಮಿಗೇ ಬನ್ನಿ’
‘ಸರಿ...’ ಎಂದು ನಿರ್ಮಲಾ, ನನ್ನಿ ಇಬ್ಬರೂ ತಮ್ಮ ರೂಮುಗಳಿಗೆ ಹೊರಟರು. ಇತ್ತ ಪೌಡರ್ ಪ್ರಸಂಗವನ್ನು ಸಂಪನ್ನಗೊಳಿಸಿ ಹುಡುಗಿಯರೂ ಸಿನಿಮಾದತ್ತ ಹೊರಟರು. ಅದ್ಯಾವುದೋ ಸಲ್ಮಾನ್ ಖಾನ್-ಕರಿಶ್ಮಾ ಕಪೂರ್ ನಟಿಸಿರುವ ಸಿನಿಮಾ ಆಗ ತಾನೇ ವುಡ್ ಲ್ಯಾಂಡ್ಸ್ ಥಿಯೇಟರಿನಲ್ಲಿ ಬಿಡುಗಡೆಯಾಗಿತ್ತು. ಅಲ್ಲಿಯ ತನಕ ತೆರೆ ಮೇಲೆ ಚಿಕ್ಕ ವಯಸ್ಸಿನ ಮುಗ್ಧ ಹುಡುಗನಂತೆ ಕಾಣುತ್ತಿದ್ದ ಕರಿಶ್ಮಾ ಈ ಸಿನಿಮಾದಲ್ಲಿ ಬಹಳ ಚೆಂದವಾಗಿ ಕಾಣ್ತಾಳಂತೆ, ಡ್ರೆಸ್ಸು-ಮೇಕಪ್ಪು ಎಲ್ಲಾ ಸೂಪರ್ ಅಂತೆ ಅಂತ ಯಾವುದೋ ಪೇಪರಲ್ಲಿ ಬಂದದ್ದು ಚರ್ಚೆಯಾಗಿ ರಶ್ಮಿ, ವಿಜಿ, ಇಂದುಮತಿ ಮತ್ತು ಈಶ್ವರಿ ಈ ಸಿನಿಮಾ ನೋಡುವುದು ಅಂತ ನಿರ್ಧರಿಸಿ ಆಪಾಟಿ ಮೂಗಿನಲ್ಲೆಲ್ಲಾ ತುಂಬಿಕೊಳ್ಳುವಂತೆ ಪೌಡರ್ ಹಾಕಿಕೊಂಡು ಹೊರಟಿದ್ದರು.

ಕಡೆಗೆ ಆಟೊದಲ್ಲಿ ಕೂತಾಗ ಇಂದುಮತಿಗೆ ಸೀನು ಶುರುವಾಗಿ ರೇಗುವಂತೆ ಆಯಿತು. ‘ಥತ್ ನಿಮ್ಮಯ್ಯನ್! ಅದೆಷ್ಟು ಪೌಡರ್ ಹಾಕ್ಕೊಂಡಿದೀರ್ರೇ? ಬಾಂಬೆಲಿರೋ ಸಲ್ಮಾನ್ ಖಾನ್ ಮೂಗಿಗೂ ವಾಸನೆ ಹೋಗುವಷ್ಟು!’ ಎಂದಳು.

‘ಮುಚ್ಚೇ ಸಾಕು! ಗರತಿ ಥರಾ ಆಡಬೇಡ! ನೀನೇ ಮೊದಲು ಪೌಡ್ರು ಸುರಕೊಂಡಿದ್ದು’ ಎಂದಳು ವಿಜಿ. ಅಲ್ಲಿಗೆ ವಿಷಯ ಪರಿಸಮಾಪ್ತಿಯಾಗಿ ಉಳಿದ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಟಿಕೆಟ್ಟು ತಗೊಂಡು ಸಿನಿಮಾ ನೋಡಿ ವಾಪಾಸು ಬರುವಾಗ ಯಾಕೋ ಹುಡುಗಿಯರ ಮನಸ್ಸಿನಲ್ಲಿ ಸಲ್ಮಾನ್ ಖಾನ್‌ಗಿಂತ ಕರಿಶ್ಮಾ ಕಪೂರೇ ಜಾಸ್ತಿ ತುಂಬಿದ್ದಳು.

‘ನೀ ಏನೇ ಹೇಳು. ಮೊದಲ್ನೇ ಪಿಚ್ಚರಿನಲ್ಲಿ ಹುಡುಗನ ಥರಾ ಕಾಣ್ತಿದ್ಲು. ಈ ಪಿಚ್ಚರಲ್ಲಿ ನೋಡು ಎಷ್ಟ್ ಚೆನ್ನಾಗಿ ಡ್ರೆಸ್ ಮಾಡ್ಕೊಂಡಿದಾಳೆ! ಪಾಪ ಕಷ್ಟ ಪಟ್ಟಿದಾಳ್ ಕಣೇ’ ಎಂದು ಈಶ್ವರಿ ಒಂಥರಾ ಮೆಚ್ಚುಗೆಯೂ ಅಲ್ಲದ ಇತ್ತ ಟೀಕೆಯೂ ಅಲ್ಲದ ದನಿಯಲ್ಲಿ ಹೇಳಿದರೆ, ಇಂದುಮತಿ ಅಬ್ಸರ್ವೇಷನ್ ಬೇರೆಯದೇ ಇತ್ತು.

‘ಅವ್ಳ್ ಮೇಕಪ್ಪಾ! ರಾಮ್ ರಾಮಾ! ಗೋಡೆಗೆ ಬಣ್ಣ ಬಳ್ದಂಗಿತ್ತು ಆ ಮಕದ್ ಮೇಲೆ ಇದ್ದಿದ್ ಕಲರ್ರು!’
‘ಹೌದಲ್ವಾ? ಆ ಬ್ರೌನ್ ಕಲರ್‌ ಲಿಪ್‌ಸ್ಟಿಕ್ಕು ಕೊಚ್ಚೆ ತಂದು ತುಟಿಗೆ ಹಾಕೊಂಡಂಗಿತ್ತಪ್ಪಾ! ಅದೇನ್ ಚಂದ ಅಂತ ಸಿನಿಮಾದವ್ರು ಇವನ್ನೆಲ್ಲಾ ಮೆಚ್ತಾರೋ! ಆ ಬಣ್ಣ ಬಟ್ಟೆಗೆ ತಾಗಿದ್ರೆ ಇಡೀ ಡ್ರಸ್ಸೇ ವೇಸ್ಟು!’ ಎಂದು ವಿಜಿ ತನ್ನ ಅಪ್ಪಟ ಮಧ್ಯಮ ವರ್ಗೀಯ ಜೀವನದಿಂದ ಹೊರಟ ಆತಂಕವನ್ನು ಹೊರಗೆಡಹಿದಳು. ರಶ್ಮಿ ಮಾತ್ರ ಸ್ಥಿತವಾಗಿದ್ದಳು. ಅವಳಿಗೆ ನಿರ್ಮಲ ಮತ್ತು ನನ್ನಿ ಬಂದು ಹೋಗಿದ್ದು ಯಾವುದೋ ಕಳವಳವನ್ನುಂಟು ಮಾಡಿತ್ತು. ‘ಪಿಚ್ಚರ್ ವಿಚಾರ ಬಿಡಿ. ನಿರ್ಮಲ, ನನ್ನಿ ಯಾಕ್ ಬಂದಿರಬೋದು? ನಾವ್ ಅವರಿಗೆ ಸಹಾಯ ಮಾಡೋ ಅಂಥದ್ದು ಏನಿರಬಹುದು? ದುಡ್ಡ್ ಗಿಡ್ಡ್ ಬೇಕಾಗಿರಬೋದಾ?’

‘ಛೇ! ನನ್ನಿ ಪೇರೆಂಟ್ಸು ಬಹಳ ಸ್ಥಿತಿವಂತರು ಕಣೇ. ಅವ್ಳ್ ಕ್ಯಾಮೆರಾ ನೋಡಿದೀಯಾ? ಅದೇ ಸುಮಾರು ಇಪ್ಪತ್ತೈದರಿಂದ ಐವತ್ತು ಸಾವ್ರ ಆಗುತ್ತೆ!’ ಎಂದು ಇಂದುಮತಿ ಇನ್ನೂ ಮಾತು ಮುಗಿಸುವ ಮುನ್ನವೇ ವಿಜಿ ಮತ್ತು ಈಶ್ವರಿ ಪಕಪಕ ನಗಲಾರಂಭಿಸಿದರು.
‘ಯಾಕ್ರೇ ಹಲ್ಕಾಸ್ ನಗ್ತಿದೀರಾ?’ ಇಂದುಮತಿ ಕನಲಿ ಕೇಳಿದಳು.

‘ಇಂದೂ, ಉಂಡಾಗುತ್ಗೆ ಮಾತಾಡೋಕೂ ಒಂದು ರೇಂಜ್ ಅಂತ ಇರುತ್ತೆ. ಇಪ್ಪತ್ತೈದರಿಂದ ಮೂವತ್ತು ಸಾವ್ರ ಅಂದ್ರೆ ಒಂದ್ ಲೆಕ್ಕಾನಪ್ಪ. ಅಥವಾ ನಲವತ್ತೈದು ಸಾವಿರದಿಂದ ಐವತ್ತು ಅಂದ್ರೂ ಇನ್ನೊಂದು ಲೆಕ್ಕ. ಇದೇನಿದು ಇಪ್ಪತ್ತೈದರಿಂದ ಐವತ್ತು ಅಂದ್ರೆ ಬಸ್ಸು ಶುರುವಾದ ಸ್ಟಾಪಿನಿಂದ ಹಿಡಿದು ಕೊನೇ ಸ್ಟಾಪಿನ ನಡುವೆ ಎಲ್ಲಿಗಾದ್ರೂ ಟಿಕೆಟ್ ಕೊಡಿ ಅಂದಂಗಾಯ್ತು! ಸರಿಯಾಗಿ ವಿಷಯ ಗೊತ್ತಿದ್ರೆ ಹೇಳು ಇಲ್ಲಾಂದ್ರೆ ಮುಚ್ಕೊಂಡು ಕೂರು!’ ಎಂದಳು ವಿಜಿ.

‘ಸರಿ. ನಿನಗೆ ಹೆಚ್ಚಿಗೆ ವಿಷಯ ಗೊತ್ತಿರೋ ಹಾಗಿದೆ ನೀನೇ ಹೇಳು’ ಇಂದು ಮುಖ ಉಬ್ಬಿಸಿ ಕೂತಳು. ಇವರನ್ನು ಹೀಗೇ ಮುಂದುವರೆಯಲು ಬಿಟ್ಟರೆ ಹಾಸ್ಟೆಲ್ ರೀಚ್ ಆಗೋ ಹೊತ್ತಿಗೆ ನಾಲ್ಕು ಜನರ ನಡುವೆ ಮೂರು ಪಾರ್ಟಿ ಆಗುವುದು ಖಚಿತ ಅಂತ ಮನಗಂಡ ರಶ್ಮಿ ಪೀಸ್ ಕೀಪರ್ ಆದಳು.

‘ಲೈ ಇಬ್ರೂ ಸುಮ್ಮನಿರ್ರೆ! ವಿಷಯ ಏನೂಂತ ಅವ್ರೇ ಹೇಳೋ ತನಕಾ ಸುಮ್ಮನಿರೋಣ’ ಎನ್ನುವ ಸಲಹೆಗೆ ಎಲ್ಲರೂ ಸುಮ್ಮನಾದರು. ರೂಮಿಗೆ ವಾಪಾಸಾಗುವ ಹೊತ್ತಿಗೆ ನಿರ್ಮಲಾ ಬಂದಿರಲಿಲ್ಲ. ನನ್ನಿ ಸುಳಿವೂ ಇರಲಿಲ್ಲ. ಗಂಟೆ ಆರಾಯಿತು, ಆರೂ ವರೆಯಾಯಿತು, ಏಳಾಯಿತು... ಉಉಊಹೂಂ. ಯಾರೂ ಬರಲಿಲ್ಲ. ಇಂದುಮತಿ ಊಟ ಮಾಡಲು ಹೋದರೆ ಈಶ್ವರಿ, ರಶ್ಮಿ ಮತ್ತು ವಿಜಿಗೆ ಯಾಕೋ ಏನೋ ಮಿಸ್ ಹೊಡೀತಾ ಇದೆ ಅನ್ನಿಸಲು ಶುರುವಾಯಿತು. ನಿರ್ಮಲಾ ರೂಮಿಗೇ ಹೋಗಿ ಬರೋಣವೆಂದು ಹೊರಟರೆ ರೂಮಿನ ಬಾಗಿಲು ಹಾಕಿತ್ತು. ಮೂರೂ ಜನ ಬಾಗಿಲು ಬಡಿದರು.

‘ಒಂದ್ ನಿಮಿಷ...’ ಅಂತ ಒಳಗಿನಿಂದ ನಿರ್ಮಲಾ ಹೇಳಿದ್ದು ಕೇಳಿಸಿತು. ನಿರ್ಮಲಾ ಬಾಗಿಲು ತೆರೆದಳು. ನನ್ನಿ ಒಳಗೆ ಕೂತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಈಶ್ವರಿ ಒಳಗೆ ಹೋಗಿ ನನ್ನಿಯನ್ನು ಸಮಾಧಾನ ಮಾಡಲು ಬೆನ್ನ ಮೇಲೆ ಕೈ ಇಟ್ಟಳು.

ಅದ್ಯಾವ ದುಃಖದ ಕಟ್ಟೆ ಒಡೆಯಿತೋ ಗೊತ್ತಿಲ್ಲ. ನನ್ನಿ ಇನ್ನೂ ಜೋರಾಗಿ ದನಿ ತೆಗೆದು ಅಳಲು ಶುರು ಮಾಡಿದಳು. ಅದನ್ನು ಕಂಡ ಈಶ್ವರಿಗೂ ಯಾವುದೋ ಒಂದು ಸ್ಥಾಯಿಯ ತಂತಿ ಮೀಟಿದಂತಾಯಿತು. ಕಣ್ಣೀರು ತಡೆಯಲು ಆಗಲೇ ಇಲ್ಲ. ಕಣ್ಣೇ ಕಾಣದ ನಿರ್ಮಲಾ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದುದನ್ನು ನೋಡಿ ರಶ್ಮಿಗೆ ಸೋಜಿಗವಾಗಿ ಒಳಗಿನಿಂದ ಅಳು ಕಟ್ಟಲು ಶುರುವಾಯಿತು. ಅತ್ತ ವಿಜಿಯೂ ಶೋಕರಾಗಕ್ಕೆ ತನ್ನ ದನಿ ಸೇರಿಸಿದಳು.

ಅಂತೂ ಎಲ್ಲರೂ ತಂತಮ್ಮ ದುಃಖಗಳನ್ನು, ತಮಗಾದ ಅನ್ಯಾಯಗಳನ್ನು ನೆನೆ ನೆನೆದು ಕಣ್ಣೀರ ಉತ್ಪತ್ತಿಯಲ್ಲಿ ತೊಡಗಿದ್ದರೆ ಹಳೆಯ ನೆನಪುಗಳೆಲ್ಲಾ ಹಗುರಾಗುತ್ತಾ, ಕೊಚ್ಚಿ ಹೋಗುತ್ತಾ ಅಸ್ತಿತ್ವ ಕಳೆದುಕೊಳ್ಳುತ್ತಾ ಧಾರೆಯಾಗಿ ಹರಿಯುತ್ತಿದ್ದವು.

ಒಂದು ಗಂಟೆಯ ಮುಂದೆ ಮೇಕಪ್ ಮಾತಾಡುತ್ತಿದ್ದ ಹುಡುಗಿಯರಿಗೆ ತಮಗೆ ಪರಿಚಯವೇ ಇಲ್ಲದ ಹುಡುಗಿಯೊಬ್ಬಳು ಮೀಟಿದ ನರದಲ್ಲಿ ಇಷ್ಟು ಕಣ್ಣೀರು ತುಂಬಿಕೊಂಡಿರಬಹುದು ಎಂಬ ಪರಿವೆ ಇರಲೇ ಇಲ್ಲ. ಇವರನ್ನೆಲ್ಲಾ ಹುಡುಕಿಕೊಂಡು ಬಂದ ಇಂದುಮತಿ ಮಾತ್ರ ಎಲ್ಲರೂ ಅಳುತ್ತಿರುವುದನ್ನು ನೋಡಿ ಒಳಗೇ ಮುಕ್ಕಿ ಅಳು ಬರಿಸಿಕೊಳ್ಳಲು ಪ್ರಯತ್ನ ಪಟ್ಟಳು.

ಅವಳು ಹಾಗೆ ಮಾಡಿದಾಗಲೆಲ್ಲ ಮಲರೋಗ ಸಮಸ್ಯೆಯಿಂದ ನರಳುವವಳ ಹಾಗೆ ಭಾಸವಾಯಿತು. ದುಃಖಿಯ ಹಾಗೆ ಕಾಣುವ ಇಂದುಮತಿಯ ಈ ವಿಫಲ ಯತ್ನವನ್ನು ಕಂಡು ಮೊದಲಿಗೆ ವಿಜಿಗೆ ನಗು ಬಂತು. ಕಣ್ಣಿನಲ್ಲಿ ನೀರು ತುಂಬಿಕೊಂಡೇ ನಗಲು ಶುರುಮಾಡಿದಳು ವಿಜಿ. ಅವಳನ್ನು ನೋಡಿ ರಶ್ಮಿಯೂ ನಕ್ಕಳು. ನಂತರ ಈಶ್ವರಿ ನಗುತ್ತಿರಲು ಅತ್ತ ನನ್ನಿಯೂ ನಗಲು ಶುರುಮಾಡಿ ಇಡೀ ರೂಮು ನಗುವಿನಿಂದ ತುಂಬಿತು. ಈಗ ತಬ್ಬಿಬ್ಬಾಗುವ ಸರದಿ ಕಣ್ಣೀರಿನದ್ದು. ತಾನು ಹರಿಯುತ್ತಿರುವುದು ಸಂತೋಷಕ್ಕೋ, ದುಃಖಕ್ಕೋ ಗೊತ್ತಾಗದೆ ಕಣ್ಣೀರೂ ತನ್ನ ಹರಿವನ್ನು ನಿಲ್ಲಿಸಿತು.

‘ಈಗ ಆಯ್ತಲ್ಲ? ನನ್ ಮಕದ್ ಮೇಲೆ ಕೋತಿ ಕುಣೀತಾ ಇತ್ತಾ ಅಂತೆಲ್ಲ ನಾನ್ ಕೇಳಲ್ಲ. ನೀವ್ ಹಲ್ಕಾ ಮುಂಡೇರು ಹೂಂ ಅಂದು ಬಿಡ್ತೀರಿ. ಈಗ ಸೀದಾ ವಿಚಾರಕ್ಕೆ ಬರೋಣ. ಏನಾಯ್ತು ನಿರ್ಮಲಾ? ಯಾಕೆ ಟೆನ್ಷನ್ ಮಾಡ್ಕೊಂಡಿದೀಯಾ?’

‘ಟೆನ್ಷನ್ ನನಗಲ್ಲ. ನನ್ನಿಗೆ ಆಗಿರೋದು. ನನಗೆ ಹೆಲ್ಪ್ ಮಾಡೋಕಾಗಲ್ಲವಲ್ಲ ಅಂತ ದುಃಖ ಅಷ್ಟೇ’ ಎಂದಳು ನಿರ್ಮಲಾ.
‘ಏನಾಯ್ತು ನನ್ನಿ?’

ನನ್ನಿ ಕಣ್ಣೊರೆಸಿಕೊಂಡು ಹೇಳಿದಳು. ಅವಳ ಪ್ರೊಫೆಸರ್ ಒಬ್ಬರು ಅವಳನ್ನು ತನ್ನ ಜೊತೆ ‘ಕಾಂಪ್ರ ಮೈಸ್’ ಮಾಡಿಕೊಂಡರೆ ಒಳ್ಳೆ ಮಾರ್ಕ್ಸ್ ಕೊಡ್ತೀನಿ. ಇಲ್ಲಾಂದ್ರೆ ಫೇಲ್ ಮಾಡ್ತೀನಿ ಅಂದಿದಾರೆ. ‘ನನಗೆ ಪಾಸು ಫೇಲು ಮುಖ್ಯವಲ್ಲ. ಹೆದರಿಕೆ ಆಗ್ತಿದೆ’ ಎಂದಳು.

‘ಹೆದರಿಕೆ ಯಾಕೆ?’ ಇಂದುಮತಿ ಹೇಳಿದಳು.
‘ಇಷ್ಟು ದಿವಸ ಅವರು ಹೇಳಿದ್ದು ಅರ್ಥವೇ ಆಗಲಿಲ್ಲ ಅನ್ನೋ ಥರ ನಟಿಸಿ ಬಚಾವಾಗ್ತಿದ್ದೆ. ಈಗ ನಾಡಿದ್ದು ಪರೀಕ್ಷೆ ಇದೆ. ಹಾಗೇನಾದ್ರೂ ಮಾಡಿಬಿಟ್ರೆ ಅಂತ ಹೆದರಿಕೆ’
‘ಪರೀಕ್ಷೇಲಿ ಏನ್ ಮಾಡೋಕೆ ಸಾಧ್ಯ ನನ್ನಿ? ಎಲ್ಲರೂ ಇರಲ್ವಾ ಅದೇ ಹಾಲ್‌ನಲ್ಲಿ?’

‘ಇಲ್ಲ. ಫೋಟೊಗ್ರಫಿ ಪರೀಕ್ಷೆ ಡಾರ್ಕ್ ರೂಮಲ್ಲಿ ನಡೆಯುತ್ತೆ. ಒಬ್ಬೊಬ್ಬರಿಗೆ ಒಂದೊಂದು ಟೈಮು. ನನಗೆ ಬೇಕಂತ್ಲೇ ಕೊನೆಗೆ ಕೊಟ್ಟಿದಾರೆ. ಕಾರಿಡಾರಲ್ಲಿ ಯಾರೂ ಇರಲ್ಲ. ಕೂಗಿದ್ರೆ ಯಾರಿಗೂ ಕೇಳ್ಸೋದೂ ಇಲ್ಲ’.

ವಿಷಯ ಗಂಭೀರವಾಯಿತು. ಇದಕ್ಕೆ ಪರಿಹಾರ ಕಂಡುಹಿಡಿಯಲು ನಾಳೆ ಮತ್ತೆ ಸಿಗುವುದು ಅಂತ ನಿರ್ಧಾರ ಮಾಡಿಕೊಂಡು ಮೀಟಿಂಗು ಬರಖಾಸ್ತಾ ಯಿತು. ರೂಮಿಗೆ ಹಿಂದಿರುಗುತ್ತಾ ಇಂದುಮತಿ ಸ್ವಗತಕ್ಕೆಂಬಂತೆ ಹೇಳಿದಳು. ‘ಆ ಡಾರ್ವಿನ್ನು ಮಂಗನಿಂದ ಮಾನವ ಅಂತ ಹೇಳ್ತಾನಲ್ಲ? ಕೆಲವು ಮಾನವರು ಇನ್ನೂ ಮಂಗಗಳಾಗೇ ಉಳಿದಿದ್ದಾರೆ ಅನ್ನೋದನ್ನ ಹೇಳೋರು ಯಾರು?’  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT