ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಗೆ ಮೊದಲೇ ಜನಾದೇಶ ಕೋರುವರೇ ಮೋದಿ?

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ದೇಶಕ್ಕೆ ಒಳಿತು ಎನ್ನುತ್ತಲೇ ಬಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ಅವರ ಪ್ರತಿಪಾದನೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರಭಸ ದೊರೆಯತೊಡಗಿದೆ. ಚುನಾವಣಾ ಆಯೋಗದ ಜೊತೆಗೆ ನೀತಿ ಆಯೋಗ ಕೂಡ ಈ ಸಂಭವನೀಯ ನಡೆಯನ್ನು ಬೆಂಬಲಿಸಿದೆ. ತನ್ನ ಇರಾದೆಯನ್ನು ಮೊನ್ನೆ ರಾಷ್ಟ್ರಪತಿ ಬಾಯಿಯಲ್ಲೂ ಹೇಳಿಸಿದೆ ಮೋದಿ ನೇತೃತ್ವದ ಸರ್ಕಾರ. ಅಂದಿನಿಂದ ಈ ಮಾತಿಗೆ ಹೊಸ ತಿರುವು ದೊರೆತಿದೆ.

ಲೋಕಸಭಾ ಚುನಾವಣೆಗಳು ಅವಧಿಗೆ ಮುನ್ನವೇ ನಡೆಯಲಿವೆಯೇ ಎಂಬ ಮಾತಿಗೆ ರಾಜಕೀಯ ವಲಯಗಳು ಕಿವಿ ನಿಮಿರಿಸಿವೆ. ಊಹಾಪೋಹಗಳು ರೆಕ್ಕೆಪುಕ್ಕ ಧರಿಸಿ ಹಾರತೊಡಗಿವೆ. ಮೋದಿ-ಅಮಿತ್ ಶಾ ಜೋಡಿ ಕಳೆದ ನಾಲ್ಕು ವರ್ಷಗಳಿಂದ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಇಡುತ್ತ ಬಂದಿರುವ ಅನೇಕ ರಾಜಕೀಯ ಹೆಜ್ಜೆಗಳು ಅನಿರೀಕ್ಷಿತ. ರಾಜಕೀಯ ಎದುರಾಳಿಗಳನ್ನು ಚಕಿತಗೊಳಿಸಿವೆ ಕೂಡ.

2019ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಗಳನ್ನು ಈ ವರ್ಷದ ಕಡೆಯ ತಿಂಗಳುಗಳಲ್ಲಿ ನಡೆಸುವುದೂ ಇಂತಹ ಅನಿರೀಕ್ಷಿತಗಳ ಸರಣಿಗೆ ಸೇರಲಿದೆಯೇ ಎಂಬ ಕುತೂಹಲ ಮೂಡಿಸಿದೆ. ಎಡೆಬಿಡದೆ ಒಂದರ ನಂತರ ಮತ್ತೊಂದರಂತೆ ನಡೆಯುತ್ತಲೇ ಇರುವ ಚುನಾವಣೆಗಳು ಅಭಿವೃದ್ಧಿಯ ವೇಗವನ್ನು ತಗ್ಗಿಸುವುದೇ ಅಲ್ಲದೆ ಹಣಕಾಸಿನ ಹೊರೆ ಹೆಚ್ಚಿಸುತ್ತವೆ ಎಂಬ ವಾದ ಸರಿ ಎನ್ನಿಸಬಹುದು. ಆದರೆ ಈ ಇರಾದೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಚತುರ ರಾಜಕಾರಣದ ಗೂಢ ಕಾರ್ಯಸೂಚಿಯೊಂದು ಅಡಗಿದೆ ಎಂಬ ಗುಮಾನಿ ರಾಜಕೀಯ ವಲಯಗಳಲ್ಲಿ ವ್ಯಕ್ತವಾಗಿದೆ.

2014ರಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಮರವನ್ನು ರೂಪಿಸಿದ್ದ ರಾಜೇಶ್ ಜೈನ್ ಕೂಡ ಅವಧಿಪೂರ್ವ ಲೋಕಸಭಾ ಚುನಾವಣೆಗಳ ಊಹೆಯನ್ನು ಬಡಿದೆಬ್ಬಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರವನ್ನು ಬೇಷರತ್ತಾಗಿ ಬೆಂಬಲಿಸುವ ಖಾಸಗಿ ಸುದ್ದಿವಾಹಿನಿಯೊಂದು ಚುನಾವಣಾ ಸಮೀಕ್ಷೆ ನಡೆಸಿ ಲೋಕಸಭಾ ಚುನಾವಣೆಗಳು ಈಗ ನಡೆದರೆ ಬಿಜೆಪಿಗೆ 335 ಸೀಟುಗಳ ಗೆಲುವು ಖಚಿತ ಎಂದು ಸಾರಿತು. ಜೈನ್ ಮತ್ತು ಬಾಲಬಡುಕ ಸುದ್ದಿವಾಹಿನಿಯ ಪ್ರಕಾರ ಲೋಕಸಭಾ ಚುನಾವಣೆಗಳು ಏಪ್ರಿಲ್‌ನಲ್ಲೇ ನಡೆಯಬೇಕಿತ್ತು.

ಆದರೆ ಅಳೆದೂ ಸುರಿದೂ ಬರಲಾಗಿರುವ ಲೆಕ್ಕಾಚಾರದ ಪ್ರಕಾರ ಅವಧಿಪೂರ್ವ ಲೋಕಸಭಾ ಚುನಾವಣೆಗಳನ್ನು ಮುಂಬರುವ ಒಟ್ಟು ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳೊಂದಿಗೆ ತಳಕು ಹಾಕಲಾಗುತ್ತಿದೆ. ಇದೇ ವರ್ಷದ ಅಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡ, 2019ರ ಮೇ ತಿಂಗಳಲ್ಲಿ ಚುನಾವಣೆಗೆ ಹೋಗಲಿರುವ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾ, 2019ರಲ್ಲಿ ಚುನಾವಣೆ ಎದುರಿಸಬೇಕಿರುವ ಮಹಾರಾಷ್ಟ್ರ, ಹರಿಯಾಣ ಹಾಗೂ ಅಲ್ಲಿಂದ ತಿಂಗಳೊಪ್ಪತ್ತಿನ ನಂತರ ಚುನಾವಣೆಗೆ ಕಾದಿರುವ ಜಾರ್ಖಂಡ್ ರಾಜ್ಯಗಳಿಗೂ ಈ ಉದ್ದುದ್ದ ಬಾಹುಗಳನ್ನು ಚಾಚಲಾಗುತ್ತಿದೆ. ಈ ಎಲ್ಲ ರಾಜ್ಯಗಳು ಲೋಕಸಭೆಗೆ ಆರಿಸಿ ಕಳಿಸುವ ಸದಸ್ಯರ ಸಂಖ್ಯೆ 200. ಇಂತಹ ದೊಡ್ಡ ಸಂಖ್ಯೆಯನ್ನು ನಿಯಂತ್ರಿಸುವ ಮಹತ್ವಾಕಾಂಕ್ಷೆ ಮೋದಿ-ಅಮಿತ್ ಶಾ ಜೋಡಿಯದು.

ಈ ತಿಂಗಳು ಈಶಾನ್ಯದ ಮೂರು ಪುಟ್ಟ ರಾಜ್ಯಗಳ ನಂತರ ಏಪ್ರಿಲ್ –ಮೇ ತಿಂಗಳಲ್ಲಿ ಕರ್ನಾಟಕದ ಸರದಿ. ವರ್ಷದ ಕೊನೆಯಲ್ಲಿ ಚುನಾವಣೆಗೆ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ತಾನ ಕಾದು ನಿಂತಿವೆ.

ಒಂಬತ್ತು ರಾಜ್ಯಗಳನ್ನು ಎಳೆದುಕೊಂಡು ಅವಧಿಪೂರ್ವ ಲೋಕಸಭೆ ಚುನಾವಣೆ ಜೊತೆಗೆ ಜೋಡಿಸುವ ಏಕಕಾಲದ ಚುನಾವಣೆಯ ತಂತ್ರದ ಹಿಂದಿನ ಮರ್ಮವಾದರೂ ಏನು?

ಲೋಕಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತ ಹೊಂದುವುದು ಬಿಜೆಪಿಯ ಬಯಕೆ. ಜೊತೆಗೆ ದೇಶದ ಅರ್ಧಕ್ಕರ್ಧ ರಾಜ್ಯಗಳು ತನ್ನ ತೆಕ್ಕೆಗೆ ಬಂದರೆ ಸಂವಿಧಾನ ತಿದ್ದುಪಡಿ ನೀರು ಕುಡಿದಷ್ಟು ಸಲೀಸು ಎಂಬುದು ಕಮಲ ಪಕ್ಷದ ಲೆಕ್ಕಾಚಾರ. ಮುಂದಿನ ಚುನಾವಣೆಯಲ್ಲಿ 360ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಅದರ ಗುರಿ. ಈ ದಿಸೆಯಲ್ಲಿ ‘ಮಿಷನ್ 360 ಪ್ಲಸ್’ಗೆ ಅಮಿತ್ ಶಾ ಈಗಾಗಲೇ ಚಾಲನೆ ನೀಡಿದ್ದಾರೆ. ಆದರೆ ಗುಜರಾತ್ ಚುನಾವಣೆ ಫಲಿತಾಂಶದ ನಂತರ ಈ ಗುರಿ ಭಾರೀ ದೂರದ್ದಾಗಿ ತೋರತೊಡಗಿದೆ. ರಾಜ್ಯಗಳಲ್ಲಿ ತಾನು ಹೊಂದಿರುವ ಭಾರೀ ಸಂಖ್ಯೆಯ ಲೋಕಸಭಾ ಸ್ಥಾನಗಳನ್ನು ಅದೇ ಸಂಖ್ಯೆಯಲ್ಲಿ ಉಳಿಸಿಕೊಳ್ಳುವುದೂ ದುಸ್ತರವಾಗಿ ಕಾಣತೊಡಗಿದೆ.

2013ರಲ್ಲಿ ಕರ್ನಾಟಕದ ಜನ ಕಾಂಗ್ರೆಸ್ ಆಡಳಿತವನ್ನು ಆರಿಸಿಕೊಂಡರು. ಮರುವರ್ಷ ನಡೆದ ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿಯವರದೇ ಆರ್ಭಟ. ಜನಪ್ರಿಯತೆಯ ತುತ್ತತುದಿಯಲ್ಲೂ ಕರ್ನಾಟಕದ 28 ಸೀಟುಗಳ ಪೈಕಿ ಅವರು ಗೆದ್ದದ್ದು 17 ಮಾತ್ರ. ಮುಂಬರುವ ವರ್ಷ ಈ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಮತ್ತು ಬೆಳೆಸಿಕೊಳ್ಳುವುದು ಒಂದಕ್ಕಿಂತ ಒಂದು ಕಷ್ಟದ ಸವಾಲೇ ಸರಿ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯ ತನಕ ಒಟ್ಟು 15 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆದಿವೆ. ಫಲಿತಾಂಶಗಳಲ್ಲಿ ಬಿಜೆಪಿಯ ಸೀಟು ಗಳಿಕೆ ಕುಗ್ಗಿದೆಯೇ ವಿನಾ ಹಿಗ್ಗಿಲ್ಲ. ವೋಟು ಗಳಿಕೆಯಲ್ಲಿ ಶೇ 10ರಷ್ಟು (ಶೇ 39ರಿಂದ ಶೇ 29) ಕುಸಿತ ಕಂಡು ಬಂದಿದೆ.

ಮೇಲೆ ಕಾಣಿಸಲಾಗಿರುವ ಒಂಬತ್ತು ರಾಜ್ಯಗಳ ಪೈಕಿ ಆರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸಿದೆ. ಎರಡು ರಾಜ್ಯಗಳಲ್ಲಿ ಬಿಜೆಪಿಯ ಮಿತ್ರ ಪಕ್ಷಗಳು (ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ) ಮತ್ತು ಒಂದರಲ್ಲಿ ಮಾಜಿ ಮಿತ್ರಪಕ್ಷ (ಬಿಜೆಡಿ) ಅಧಿಕಾರದಲ್ಲಿವೆ. ಆರೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳ ಜನಪ್ರಿಯತೆ ಕುಂದಿದೆ. ರಾಜಸ್ಥಾನದಲ್ಲಿ ಸೋಲು ಬಾಗಿಲು ಬಡಿಯುತ್ತಿರುವ ಸೂಚನೆಗಳಿವೆ. ಇತರೆ ರಾಜ್ಯಗಳಲ್ಲಿ ಗೆಲುವಿನ ಹಾದಿ ಕಡುಕಷ್ಟದ್ದು. ಖುದ್ದು ಮೋದಿಯವರ ಜನಾನುರಾಗದ ಹೊಳಪು ತುಸು ತುಸುವೇ ಮಾಸತೊಡಗಿದೆ. ಆದರೂ ಬಿಜೆಪಿಯ ಬತ್ತಳಿಕೆಯಲ್ಲಿರುವ ಏಕೈಕ ಬ್ರಹ್ಮಾಸ್ತ್ರ ಅವರು ಎಂಬುದರಲ್ಲಿ ಎರಡು ಮಾತಿಲ್ಲ.

ಲೋಕಸಭೆ ಚುನಾವಣೆಯ ಜೊತೆಗೆ ತಳಕು ಹಾಕದೆ ಪ್ರತ್ಯೇಕ ಚುನಾವಣೆಗಳು ನಡೆದರೆ ಗೆಲ್ಲಲು ಇತ್ತೀಚೆಗೆ ಗುಜರಾತಿನಲ್ಲಿ ತಿಣುಕಿದಂತೆಯೇ ತಿಣುಕಬೇಕಾದೀತು. ಹೀಗಾಗಿ ರಾಜ್ಯ ಸರ್ಕಾರಗಳ ಹುಳುಕುಗಳ ಮೇಲೆ ತೆರೆ ಎಳೆಯಲು ಲೋಕಸಭಾ ಚುನಾವಣೆಗಳು ಮತ್ತು ನರೇಂದ್ರ ಮೋದಿಯವರ ಮುಖವಾಡ ಬಿಜೆಪಿಗೆ ಬೇಕೇ ಬೇಕು. ಪ್ರಧಾನಿ ಹುದ್ದೆಗೆ ಮೋದಿ ಬೇಕೇ ಬೇಡವೇ ಎಂಬುದೇ ಮತದಾರರ ಮುಂದಿನ ಬಹುದೊಡ್ಡ ಚುನಾವಣಾ ವಿಷಯ ಆಗಿಸುವುದು ಬಿಜೆಪಿಯ ತಂತ್ರ. ದೇಶವನ್ನು ಉಳಿಸಲು ತಮ್ಮಂತಹ ಪ್ರಧಾನ ಸೇವಕನೇ ಸೂಕ್ತ ವ್ಯಕ್ತಿ ಎಂಬ ತಮ್ಮ ಅಪ್ರತಿಮ ಮಾತಿನ ಮೋಡಿಯಲ್ಲಿ ಮತದಾರರನ್ನು ಈಗಲೂ ಬಂಧಿಸಬಲ್ಲರು ಮೋದಿ.

ಮಾಸಿದ ಹೊಳಪಿನ ನಷ್ಟವನ್ನು ತುಂಬಿಕೊಳ್ಳಲು ಹೂಡಿರುವ ಉಪಾಯವೇ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದು. ಲೋಕಸಭಾ ಚುನಾವಣೆಗಳು ಜೊತೆ ಜೊತೆಯಲ್ಲಿ ನಡೆದರೆ ಈ ರಾಜ್ಯಗಳೂ ದಡ ಸೇರುವ ಅವಕಾಶ ಹೆಚ್ಚು. ಅಧ್ಯಯನಗಳ ಪ್ರಕಾರ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಾಗಲೆಲ್ಲ ಶೇ 77ರಷ್ಟು ಮತದಾರರು ವಿಧಾನಸಭೆ ಮತ್ತು ಲೋಕಸಭೆಗೆ ಒಂದೇ ಪಕ್ಷಕ್ಕೆ ಮತ ನೀಡಿರುವುದು ಕಂಡು ಬಂದಿದೆ.

ಕಮಲಪಕ್ಷ ಕರ್ನಾಟಕಕ್ಕಿಂತ ದೊಡ್ಡ ಕಷ್ಟಗಳನ್ನು ಎದುರಿಸಬೇಕಿರುವುದು ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನದಲ್ಲಿ. ಮೂರೂ ರಾಜ್ಯಗಳಲ್ಲಿ ಮೋದಿ ಭಾರೀ ಗೆಲುವು ಕಂಡಿದ್ದರು. 65 ಸೀಟುಗಳ ಪೈಕಿ 63 ಬಿಜೆಪಿ ಪಾಲಾಗಿದ್ದವು. ಮಧ್ಯಪ್ರದೇಶದ 29 ಸೀಟುಗಳ ಪೈಕಿ 27, ಛತ್ತೀಸಗಡದ 11ರಲ್ಲಿ 10 ಹಾಗೂ ರಾಜಸ್ಥಾನದ ಎಲ್ಲ 25 ಸೀಟುಗಳನ್ನು ಮೋದಿ ಬಾಚಿಕೊಂಡಿದ್ದರು. ಪ್ರಧಾನಿ ನಾಲ್ಕು ವರ್ಷಗಳ ಹಿಂದಿನಷ್ಟೇ ಈಗಲೂ ಜನಪ್ರಿಯರು ಎಂಬ ಮಾತನ್ನು ಅವರ ಕಟ್ಟಾ ಬೆಂಬಲಿಗರೂ ಒಪ್ಪಿಕೊಳ್ಳಲಾರರು.

ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಸತತ 14 ವರ್ಷಗಳಿಂದ ಅಧಿಕಾರ ಹಿಡಿದಿರುವ ಬಿಜೆಪಿ ಈಗಲೂ ಜನಪ್ರಿಯತೆಯ ಆಕಾಶದಲ್ಲಿ ತೇಲುತ್ತಿದೆ ಎಂದು ಹೇಳುವುದು ಸಾಧ್ಯವಿಲ್ಲ. ರಾಜಸ್ಥಾನದ ಮತದಾರರ ಇರಾದೆಯಲ್ಲಿ ರಹಸ್ಯವೇನೂ ಉಳಿದಿಲ್ಲ. ಮೊನ್ನೆ ಅಲ್ಲಿ ನಡೆದ ಉಪಚುನಾವಣೆಗಳಲ್ಲಿ ಮೂರಕ್ಕೆ ಮೂರೂ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಸೋಲಿಗಿಂತ ಹೆಚ್ಚಾಗಿ ಸೋಲಿನ ಭಾರೀ ಅಂತರ ಮೋದಿ-ಅಮಿತ್ ಶಾ ಜೋಡಿಯನ್ನು ಚಿಂತೆಗೆ ಕೆಡವಿದೆ. ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ರೈತ ಆಂದೋಲನಗಳನ್ನು ಕಂಡಿದೆ ಮಧ್ಯಪ್ರದೇಶ. ರಾಜಸ್ಥಾನದಲ್ಲಿ ಜಾಟ್‌ ಮತ್ತು ರಜಪೂತರ ಅತೃಪ್ತಿ ಭುಗಿಲೆದ್ದಿದೆ. ಉತ್ತರಪ್ರದೇಶದಲ್ಲಿ ಘನವಾಗಿ ಗೆದ್ದ ಬಿಜೆಪಿ, ಅಲ್ಲಿ ಪ್ರತಿಪಕ್ಷವಾಗಿತ್ತು.

ಹೀಗಾಗಿ ಆಡಳಿತವಿರೋಧಿ ಅನನುಕೂಲ ಎದುರಿಸುವ ಪ್ರಮೇಯ ಇರಲಿಲ್ಲ. ಮತದಾರರ ಮುಂದೆ ಹಳಿಯಲು ಅಖಿಲೇಶ್ ನೇತೃತ್ವದ ಸರ್ಕಾರದ ವೈಫಲ್ಯಗಳಿದ್ದವು, ಕೋಮುವಾದಿ ಕಾರ್ಯಸೂಚಿಯಿತ್ತು.

ಆದರೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಬಿಜೆಪಿಯೇ ಆಡಳಿತ ನಡೆಸಿರುವ ಕಾರಣ ದೂಷಿಸುವುದಾದರೂ ಯಾರನ್ನು? ಜಗದ್ವಿಖ್ಯಾತ 'ಗುಜರಾತ್ ಮಾದರಿ'ಯನ್ನು ನೀಡಿದ ‘'ಅತಿಮಾನವ’ ಮೋದಿಯವರ ತವರು ರಾಜ್ಯ ಗುಜರಾತಿನಲ್ಲೇ ಆತಂಕದ ಕ್ಷಣಗಳನ್ನು ಎದುರಿಸಿದ ಬಿಜೆಪಿಯ ಗೆಲುವು ಎರಡಂಕಿಯ ಸದಸ್ಯಬಲಕ್ಕೆ ಕುಸಿಯಿತು. ಇನ್ನು ಶಿವರಾಜ್ ಸಿಂಗ್, ರಮಣ್ ಸಿಂಗ್, ವಸುಂಧರಾ ರಾಜೇ ಅವರಂತಹ ಹುಲುಮಾನವರ ಗತಿಯೇನು? ಭಾರತ-ಪಾಕಿಸ್ತಾನ ಯುದ್ಧದಂತಹ ಅಸಾಧಾರಣ ಬೆಳವಣಿಗೆಯಾಗಿ ದೇಶಭಕ್ತಿಯ ಹುಚ್ಚು ಹೊಳೆ ಹರಿಯದೆ ಹೋದರೆ, ಕೋಮು ಆಧಾರದ ಧ್ರುವೀಕರಣ ನಡೆಯದೆ ಇದ್ದರೆ ಮೂರು ರಾಜ್ಯಗಳ 63ರ ಈ ಸಂಖ್ಯೆ ಮಾತ್ರವೇ ಅಲ್ಲ, ಬಿಜೆಪಿಗೆ ಅಧಿಕಾರ ಗಳಿಸಿಕೊಟ್ಟ 282ರ ಸಂಖ್ಯೆಯೂ ಸವೆಯುವುದು ನಿಶ್ಚಿತ. ಈ ಮಾತನ್ನು ಹೇಳಲು ರಾಜಕೀಯ ಪಾಂಡಿತ್ಯದ ಅಗತ್ಯವೇನೂ ಇಲ್ಲ. 63 ಸೀಟುಗಳು ಎಂದರೆ ಬಿಜೆಪಿಯ ಹಾಲಿ ಸಂಸದೀಯ ಬಲದ ಶೇ 25ಕ್ಕಿಂತ ತುಸು ಕಡಿಮೆ. 63 ಸೀಟುಗಳಲ್ಲಿ ಭಾರೀ ಕುಸಿತದ ಮಾತು ಹಾಗಿರಲಿ, ತುಸುವೇ ಕುಸಿತ ಕೂಡ ಮೋದಿಯವರ ಎರಡನೆಯ ಅವಧಿಯ ಓಟಕ್ಕೆ ತೊಡಕಾಗಬಲ್ಲದು.

ಈ ರಾಜ್ಯಗಳ ಪೈಕಿ ಯಾವುದೇ ಸೋಲು ಬಿಜೆಪಿಯ ಪಾಲಿಗೆ ಹೋಗುತ್ತಲೂ ಬರುತ್ತಲೂ ಕೊಯ್ಯುವ ಗರಗಸ ಆಗಬಹುದು. ನೆಲಕಚ್ಚಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನೈತಿಕ ಸ್ಥೈರ್ಯ ತುಂಬಬಹುದು. ಲೋಕಸಭೆಗೆ ಎಂಬತ್ತು ಸದಸ್ಯರನ್ನು ಆರಿಸಿ ಕಳಿಸುವ ಉತ್ತರಪ್ರದೇಶದಲ್ಲಿ ಪ್ರತಿಪಕ್ಷಗಳ ಮೈತ್ರಿಯ ದಾರಿಯನ್ನು ತೆರೆದುಬಿಡಬಹುದು. ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುವ ಬಿಜೆಪಿಯ ಗುರಿ ಕೈಗೆಟುಕದಷ್ಟು ದೂರ ದೂರ ಸಾಗಿ ಹೋಗಬಹುದು.

ಇನ್ನು ಆಂಧ್ರದಲ್ಲಿ ಬಿಜೆಪಿಯ ಮಿತ್ರಪಕ್ಷ ತೆಲುಗುದೇಶಂ ಅಧಿಕಾರದಲ್ಲಿದೆ. ಒಂದು ವೇಳೆ ಚಂದ್ರಬಾಬು ನಾಯ್ಡು ಕೈಬಿಟ್ಟರೂ, ಬಿಜೆಪಿಯ ಕೈ ಹಿಡಿಯಲು ವೈಎಸ್ಆರ್ ಕಾಂಗ್ರೆಸ್‌ನ ಜಗನ್ಮೋಹನರೆಡ್ಡಿ ಅವರಿಗೆ ಯಾವ ಹಿಂಜರಿಕೆಯೂ ಇಲ್ಲ. ತೆಲಂಗಾಣದಲ್ಲಿ ಅಧಿಕಾರ ನಡೆಸಿರುವ ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರಸಮಿತಿ ಗಾಳಿ ಬಂದತ್ತ ತೂರಿಕೊಳ್ಳುವ ಮತ್ತೊಂದು ಪಕ್ಷ. ಬಿಜೆಪಿಗೂ ಒಲಿದೀತು, ಕಾಂಗ್ರೆಸ್ ಜೊತೆಗೂ ನಿಂತೀತು. ತನ್ನ ಅನುಕೂಲ ಮುಖ್ಯ ಅಷ್ಟೇ. ಇನ್ನು ಒಡಿಶಾದ ಬಿಜು ಜನತಾದಳ ಬಿಜೆಪಿಯ ಮಾಜಿ ಗೆಣೆಕಾರ. ಮತ್ತೆ ಮಾತಾಡಿಸುವುದೇ ಇಲ್ಲ ಎಂದು ಹೇಳಲು ಬರುವುದಿಲ್ಲ. ಈ ರಾಜ್ಯಗಳಲ್ಲಿನ ಲೋಕಸಭಾ ಕ್ಷೇತ್ರಗಳ ಒಟ್ಟು ಸಂಖ್ಯೆ 63. ಬಿಜೆಪಿ ಆಡಳಿತದ ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡದಲ್ಲಿನ ಒಟ್ಟು ಲೋಕಸಭಾ ಸ್ಥಾನಗಳು 72.

ನೋಟು ರದ್ದತಿಯ ಹಿಂದೆ ಯಾವ ಕಾರಣಗಳಾದರೂ ಇರಲಿ, ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳ ಹೊತ್ತಿನಲ್ಲಿ ಪ್ರತಿಪಕ್ಷಗಳ ಜೇಬುಗಳನ್ನು ಅದು ಖಾಲಿ ಮಾಡಿ ಅವುಗಳನ್ನು ಪರದಾಡಿಸಿದ್ದಂತೂ ಹೌದು. ಈಗಲೂ ಬಿಜೆಪಿಗೆ ಹೋಲಿಸಿದರೆ ಪ್ರತಿಪಕ್ಷಗಳ ಬೊಕ್ಕಸ ಬರಿದೋ ಬರಿದು. ಜೊತೆಗೆ ಚೆದುರಿದ ಚೆಲ್ಲಾಪಿಲ್ಲಿ ಸ್ಥಿತಿಯಿಂದ ಅವುಗಳು ಇನ್ನೂ ಮೇಲೆ ಎದ್ದಿಲ್ಲ. ದೇಶವಿಡೀ ಚುನಾವಣೆ ನಡೆದರೆ ಎದುರಿಸಲು ಕಾಂಗ್ರೆಸ್ ಬಳಿ ಅಷ್ಟು ಹಣ ಇಲ್ಲ.

ಎಲ್ಲ ರಾಜ್ಯಗಳು ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದು ಅಷ್ಟು ಸುಲಭವಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಪಾಸು ಮಾಡಿಸುವಷ್ಟು ಬಹುಮತ ಬಿಜೆಪಿಗೆ ಈಗ ಇಲ್ಲ. ಲೋಕಸಭೆ ಚುನಾವಣೆಯನ್ನು ಹಿಂದಕ್ಕೆ ಇದೇ ಡಿಸೆಂಬರ್‌ಗೆ ಹಿಂದೆ ಹಾಕಿದರೆ ಸಂವಿಧಾನಕ್ಕೆ ತಿದ್ದುಪಡಿ ತರುವ ಕಷ್ಟವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT