ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನಿಗೆ ಟೇಸ್ಟೇ ಇಲ್ಲ

Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸಾರ್ ನಾಳೆ ನಮ್ಮ ಮನೆಯಲ್ಲಿ ಹಬ್ಬವಿದೆ, ನೀವು ಬರಲೇಬೇಕು ಎಂದು ಪುಷ್ಪಲತಾ ಮೇಡಂ ಪ್ರೀತಿಯಿಂದ ಹೇಳಿದರು. ಅವರ ಮಾತಿನಿಂದಲೇ, ಹೊಟ್ಟೆಗೆ ಹಾಲು ಜೇನು ಸುರಿದಂತಾಯಿತು. ಇಂಥ ಉಚಿತ ಆಹ್ವಾನಗಳ ನಿರೀಕ್ಷೆಯಲ್ಲೇ ಕಾಲ ನೂಕುವ ನಾನು ಮತ್ತು ನನ್ನ ಗೆಳೆಯ ಖುಷಿಯಿಂದ ಕತ್ತು ಕುಣಿಸಿದೆವು. ಬ್ರಹ್ಮಚಾರಿಗಳಾಗಿ ಕೆಟ್ಟ ಅನ್ನ ಸಾಂಬಾರು ಬೇಯಿಸಿ ತಿನ್ನುತ್ತಿದ್ದ ನಮ್ಮ ನಾಲಿಗೆಗಳಿಗೆ ಹಬ್ಬಗಳೇ ಸುಗ್ಗಿ ಕಾಲ. ಹೀಗೆ ಪುಕ್ಕಟ್ಟೆ ಊಟಕ್ಕೆ ಕರೆಯುವ ಜನ ನಮ್ಮ ಪಾಲಿಗೆ ದೇವರುಗಳಿದ್ದಂತೆ. 

ಇವತ್ತು ಅಡುಗೆ ಯಾರು ಮಾಡಬೇಕು, ಪಾತ್ರೆ ಯಾರು ತೊಳೆಯಬೇಕು, ರೂಮಿನ ಕಸ ಯಾರು ಗುಡಿಸಬೇಕು ಎಂಬ ವಿಚಾರದಲ್ಲೇ ನನಗೂ ಗೆಳೆಯನಿಗೂ ಸಾಕಷ್ಟು ಸಲ ಜಗಳವಾಗುತ್ತಿತ್ತು. ಅಸಲಿಗೆ ಅವನಿಗೆ ಅಡುಗೆ ಮಾಡುವುದೇ ಗೊತ್ತಿರಲಿಲ್ಲ. ಹೀಗಾಗಿ ಕಸ ಮುಸರೆಯ ಕೆಲಸವನ್ನು ಅವನಿಗೆ ಒಪ್ಪಿಸಿ ಅಡುಗೆ ಕೆಲಸ ನಾನು ಮಾಡುತ್ತಿದ್ದೆ. ಮೊದಮೊದಲು ನಾನು ಹೇಳಿದ್ದೆಲ್ಲಾ ವಿಧೇಯನಾಗಿ ಮಾಡುತ್ತಿದ್ದ ಅವನು ಕೊನೆಗೆ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಮೂರನೆಯ ದರ್ಜೆಯ ಅವಮಾನಕರ ಕೆಲಸವೆಂದು ಭಾವಿಸತೊಡಗಿದ.

ಅಡುಗೆ ಮಾಡುತ್ತಾ ನೀನು ಹೇಳುವ ಕೆಲಸಗಳನ್ನು ಮಾಡುವಾಗ ನಾನು ಸೇವಕನ ಸ್ಥಾನದಲ್ಲಿ ಇರುತ್ತೇನೆ. ನೀನು ಆಜ್ಞೆ ಮಾಡುವವನಂತೆ ಅದನ್ನು ಹೆಚ್ಚಿಕೊಡು, ಇದನ್ನು ತೊಳೆದುಕೊಡು, ಇಲ್ಲಿನ ಕಸ ತುಂಬು ಎನ್ನುವಾಗ ನನ್ನ ಮನಸ್ಸಿಗೆ ಯಾಕೋ ಬೇಸರವೆನಿಸುತ್ತಿದೆ. ಅಡುಗೆಯವನಿಗೆ ಅಡಿಯಾಳಾದೆ ಅಂತನ್ನಿಸುತ್ತಿದೆ. ಹೀಗಾಗಿ ನನಗೆ ತಿಳಿದಂತೆ ನಾನೂ ಒಂದು ವಾರ ಅಡುಗೆ ಮಾಡುತ್ತೇನೆ. ಆಗ ನೀನು ನನ್ನ ಸಹಾಯಕನಾಗಿ ಕಸಮುಸರೆ ಕೆಲಸ ನಿರ್ವಹಿಸು. ಅಲ್ಲಿಗಲ್ಲಿಗೆ ಎಲ್ಲಾ ಸಮವಾಗುತ್ತದೆ. ಭೇದ ಭಾವ ಎಲ್ಲಾ ದೂರಾಗುತ್ತದೆ. ವರ್ಗ ತಾರತಮ್ಯವೂ ಇರುವುದಿಲ್ಲ. ಜೊತೆಗೆ, ಯಾರ ಮನಸ್ಸಿಗೂ ನೋವಾಗುವುದಿಲ್ಲ. ಎಂಬ ಹೊಸ ಸಮಾಜವಾದದ ಸಿದ್ಧಾಂತವೊಂದನ್ನು ಬಹು ಭಾವುಕವಾಗಿ ಮಂಡಿಸಿದ.

ಇಲ್ಲಿ ಮೇಲು ಕೀಳಿನ ಮಾತೆಲ್ಲಿ ಬಂತು ಗೆಳೆಯ. ಅಡುಗೆ ಕೆಲಸ ಶ್ರೇಷ್ಠ, ಕಸಮುಸರೆ ಕನಿಷ್ಠ ಕೆಲಸ ಎಂಬುದೆಲ್ಲೂ ಇಲ್ಲ. ಇದನ್ನು ಯಾವ ಕಾನೂನು ಪುಸ್ತಕದಲ್ಲಿ ಬರೆದಿದ್ದಾರೇನಪ್ಪಾ? ನೀನು ಸುಖಾಸುಮ್ಮನೆ ಯಾಕೆ ಹಾಗೆಲ್ಲ ಅಂದುಕೊಂಡೆಯೋ ನನಗಂತೂ ಗೊತ್ತಾಗುತ್ತಿಲ್ಲ ಎಂದೆ. ಆದರೂ ಅವನು ಸೌಟು ಅಲ್ಲಾಡಿಸುವುದು ಮೇಲ್ವರ್ಗದ ಹುದ್ದೆಯೆಂದೂ, ಕಸಪೊರಕೆ ಹಿಡಿಯುವುದು ಕೆಳ ಹಂತದ ಕೆಲಸವೆಂದು ಸ್ಪಷ್ಟವಾಗಿ ತೀರ್ಮಾನಿಸಿದ್ದ. ಆದ್ದರಿಂದ ನಾನೂ ಹೆಚ್ಚು ವಾದ ಬೆಳೆಸದೆ ಆಯ್ತೆಂದು ಅವನ ಹೊಸ  ಕಮ್ಯುನಿಸ್ಟ್್ ನೀತಿಯನ್ನು ಮನಸಾರೆ ಒಪ್ಪಿಕೊಂಡು ಬಿಟ್ಟೆ.

ಅವನಿಗೆ ಅಡುಗೆ ನೆಟ್ಟಗೆ ಬರದ ಕಾರಣ ಅನ್ನ ಸಾರು ಎರಡೂ ನೆಟ್ಟಾಗಾಗುತ್ತಿರಲಿಲ್ಲ. ಅನ್ನ ಒಂದೋ ಗಂಜಿಯಾಗುತ್ತಿತ್ತು, ಇಲ್ಲ ಮುದ್ದೆಯಾಗುತ್ತಿತ್ತು. ಅವನು ತಯಾರಿಸಿದ ಸಾರು ಗಂಗಾ ತಾಯಿಯಾದ ಕಾರಣ ಅದು ಯಾವತ್ತೂ ಅನ್ನದ ಜೊತೆ ಹೊಂದಿಕೊಳ್ಳುತ್ತಲೇ ಇರಲಿಲ್ಲ. ಅನ್ನದ ಮೇಲೆ ಬಿಟ್ಟರೆ ಮುನಿಸಿಕೊಂಡು ಓಡಿ ಹೋಗುತ್ತಿದ್ದಳು.  ಇನ್ನು ಸಾರಿನ ಉಪ್ಪು ಹುಳಿ ಖಾರಗಳು ಎಂದೂ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ನಾನು ಹೇಳಿಕೊಡಲು ಹೋದರೆ ನಾನು ಸ್ವತಂತ್ರವಾಗಿ ಮಾಡುತ್ತೇನೆ. ಯಾರ ಸಹಾಯದ ಹಂಗೂ ನನಗೆ ಬೇಕಿಲ್ಲ, ನೀನು ಮಾಡುವಾಗ ನಾನೆಂದಾದರೂ ಮೂಗು ತೂರಿಸುತ್ತೇನಾ? ಎಂದು ಮೊಂಡು ಮುಂದೆ ಮಾಡುತ್ತಿದ್ದ. ನಾನೂ ಹಾಳಾಗಿ ಹೋಗು ನನ್ಮಗನೆ ಎಂದು ಶಪಿಸಿ ಸುಮ್ಮನಾಗುತ್ತಿದ್ದೆ.

ಅತ್ಯಂತ ಕೆಟ್ಟ ಅಡುಗೆ ತಯಾರಿಸಿಟ್ಟ ದಿನ ಸ್ವಯಂ ತಯಾರಿಸಿದ ಭೂಪ ಗೆಳೆಯನೇ ಊಟ ಮಾಡುತ್ತಿರಲಿಲ್ಲ. ಹೊರಗೆಲ್ಲಾದರೂ ನುಂಗಿ ಬಂದು ಹಸಿವಿಲ್ಲ, ಆರೋಗ್ಯ ಸರಿಯಿಲ್ಲ ಎಂದು ಕುಂಟು ನೆಪ ತೆಗೆಯುತ್ತಿದ್ದ. ಆಗ ಆ ಊಟವನ್ನು, ನಮ್ಮ ರೂಮನ್ನು ಕಾಯಮ್ಮಾಗಿ ಕಾಯುವ ಎರಡು ಬೀದಿ ನಾಯಿಗಳಿಗೆ ಬಡಿಸುತ್ತಿದ್ದೆ. ಪಾಪ ಅವು ಕಿಮಿಕ್ ಗಿಮಿಕ್ ಎನ್ನದೆ ಸಿಕ್ಕಿದ್ದೇ ಶಿವ ಎಂದು ಬಾರಿಸುತ್ತಿದ್ದವು. ಸದ್ಯ  ನಾಯಿಗಳಿಗೆ ಉಪ್ಪು ಹುಳಿ ಖಾರಗಳ ಹದ ಗೊತ್ತಿಲ್ಲ! ಇದು ಹಳಸಲು, ಇದ್ಯಾಕೋ ಬೆಂದಿಲ್ಲ ಎಂಬ ರಗಳೆಗಳೂ ಇಲ್ಲ.

ಇಷ್ಟೆಲ್ಲಾ ಊಟದ ಜಂಜಡಗಳು ನಮಗೆ ಇದ್ದುದರಿಂದಲೇ ಪುಷ್ಪಲತಾ ಮೇಡಂ ಮಾತು ದೇವವಾಣಿಯಾಗಿ ಕೇಳಿಸಿದ್ದು. ಮೇಡಂ ಅವರು ಹೇಳಿದ ಸಮಯಕ್ಕಿಂತ ಒಂದು ಗಂಟೆ ಮೊದಲೇ ಅವರ ಮನೆ ಮುಂದೆ ಠಳಾಯಿಸಿದೆವು. ಅದು ಮಲೆನಾಡಿನ ಮನೆ. ಸುತ್ತ ಹಸಿರಿನ ಭತ್ತದ ಗದ್ದೆಗಳು. ನೆತ್ತಿಯ ಸುತ್ತ ಎದ್ದು ನಿಂತ ಬೆಟ್ಟಗಳು. ಅದರ ಬುಡದಲ್ಲೇ ಅವಿತು ಕುಳಿತಿರುವ ಮನೆ. ಅಲ್ಲಿಗೆ ಮುಖ್ಯ ರಸ್ತೆಯಿಂದ ಸಿಕ್ಕಾಪಟ್ಟೆ ದೂರ ನಡೆದೇ ಹೋಗಬೇಕು. ಈ ಮಲೆನಾಡಿನ ಜನ ಈ ದಾರಿ ಎಷ್ಟು ದೂರ ಎಂದು ಕೇಳಿದರೆ ಸಹಜವಾಗಿ ಇಲ್ಲೇ ಎನ್ನುತ್ತಾರೆ. ಇಲ್ಲೇ ಎಂಬ ಮಾತಿಗೆ ಲೆಕ್ಕವೂ ಇಲ್ಲ. ಅಳತೆಯೂ ಇಲ್ಲ.  ಒಂದು ಕಿಲೋ ಮೀಟರ್ರೂ ಆದೀತು, ಇಲ್ಲ ಐದಾರು ಕಿಲೋ ಮೀಟರ್ ದೂರವೂ ಆದೀತು. ಎಲ್ಲದಕ್ಕೂ ಒಂದೇ ಉತ್ತರ– ಇಲ್ಲೇ. ಅವರ ಈ ಇಲ್ಲೇ ಉತ್ತರದಲ್ಲಿ ಖಂಡಿತ ದಾರಿಯ ದೂರದ ಅಳತೆ ಗೊತ್ತಾಗುವುದಿಲ್ಲ. ಎಷ್ಟು ದೂರಕ್ಕೂ ಇಲ್ಲೇ ಎನ್ನುವ ಅವರ ಮಾತಿನಲ್ಲಿ ಮೋಸವಿದೆ ಎಂದು ಗೊತ್ತಾಗಿದ್ದು ನಮಗೂ ಪುಷ್ಪಲತಾ ಮೇಡಂ ಮನೆ ಹುಡುಕುತ್ತಾ  ಹೋದಾಗಲೇ. ಇಲ್ಲೇ ಎಂದ ಆ ಮನೆಯೂ ಬರೋಬ್ಬರಿ ನಾಲ್ಕು ಮೈಲಿ ದೂರವಿತ್ತು.

ಮಲೆನಾಡಿನ ಜನ ಉದ್ದನೆಯ ಅಡುಗೆ ಮನೆಯಲ್ಲೇ ಕೂತು ಊಟ ಮಾಡುತ್ತಾರೆ. ಇದು ನೋಡಲು ಖುಷಿ ಎನಿಸುವ ವಿಧಾನ. ಉರಿಯುವ ಒಲೆ ನೋಡುತ್ತಾ ಊಟ ಸವಿಯುವ ರೀತಿಯೇ ಚೆನ್ನ. ಉದ್ದಕ್ಕೆ ಸಾಲು ಪಂಕ್ತಿಯಲ್ಲಿ ಕೂತು ಗೋಡೆಗೆ ಬೆನ್ನು ಕೊಟ್ಟು ಎಷ್ಟು ಬೇಕಾದರೂ ಲೋಡು ಸೆಳೆಯಬಹುದು. ತಿಂದ ಮೇಲೆ ಹಿತ್ತಲಿನ ಮುಖಕ್ಕೆ ನಡೆದು ಎಲೆ ಎಸೆದು ಕೈ ತೊಳೆಯುವುದೂ ಇಲ್ಲಿ ಸುಲಭ ವಿಧಾನ. ಒಂದೇ ತೊಂದರೆ ಎಂದರೆ ಅಲ್ಲಿ ಬೆಳಕು ಸ್ವಲ್ಪ ಮಂದವಾಗಿರುತ್ತದೆ. ಜೊತೆಗೆ ಹೊಗೆ ಸಣ್ಣಗೆ ನುಲಿದಾಡುತ್ತಾ ಕಿರಿಕಿರಿ ಕೊಡುತ್ತದೆ. ಉಳಿದಂತೆ ಎಲ್ಲವೂ ಇಲ್ಲಿ ಸುಭೀಕ್ಷ. ಅಲ್ಲಿ ಕತ್ತಲಿದ್ದ ಕಾರಣ ನನಗೂ ಗೆಳೆಯನಿಗೂ ಹಿತ್ತಲಿನ ಬೆಳಕು ಒಂದಷ್ಟು ಹಾದು ಬಂದು ಬೀಳುವ ದಿಕ್ಕಿಗೆ ಎದುರಾಗಿ ಕೂರಿಸಿದರು. ಕೂತಲ್ಲಿಂದ ಕೆಳಗೆ ಹಸಿರು ತೋಟ ಗದ್ದೆಗಳು ಎದ್ದು ಕಾಣುತ್ತಿದ್ದವು.

ನಾವಿಬ್ಬರೂ, ಕೈ ಕಾಲು ತೊಳೆದುಕೊಂಡು ಸೇಡು ತೀರಿಸಿಕೊಳ್ಳುವವರಂತೆ ಬಾಳೆ ಎಲೆಗಳ ಮುಂದೆ ಕೂತೆವು. ಮೊದಲಿಗೆ ಉಪ್ಪು ನಂತರ ಉಪ್ಪಿನ ಕಾಯಿ ಬಂತು. ಗೆಳೆಯನಿಗೆ ಉಪ್ಪಿನಕಾಯಿ ಎಂದರೆ ಮೊದಲಿನಿಂದಲೂ ಇನ್ನಿಲ್ಲದ ಮೋಹ. ಪಲ್ಯ ಹಾಕಿಸಿಕೊಂಡಂತೆ ಕೇಳಿ ಕೇಳಿ ನಿಂಬೆಯ ಉಪ್ಪಿನಕಾಯಿ ಸುರಿಸಿಕೊಂಡ. ಉಪ್ಪಿನ ಕಾಯಿ ಒಂದಿಷ್ಟು ಉಪ್ಪು ಹಾಕಿ ಹೋದವರು ಐದು ನಿಮಿಷವಾದರೂ ಇತ್ತ ಕಡೆ ಸುಳಿಯಲಿಲ್ಲ. ಬಿಸಿ ಕಡುಬನ್ನು ಒಲೆಯ ಮೇಲಿಂದ ಇಳಿಸಿ ಕೊಡಲು ಕಾಯುತ್ತಿದ್ದರು.

ಇತ್ತ ಹಸಿವಿನಿಂದ ಬರಗೆಟ್ಟ ಗೆಳೆಯ ಉಪ್ಪಿನ ಕಾಯನ್ನು ಪಲ್ಯದಂತೆ ಸವಿಯತೊಡಗಿದ. ನಾನು ಕಡುಬಿನ ದಾರಿಯನ್ನೇ ಕಾಯುತ್ತಿದ್ದವನು ಹಾಗೇ ಸುಮ್ಮನೆ ನನ್ನ ಪಾಲಿನ ಉಪ್ಪಿನಕಾಯನ್ನೇ ಸೂಕ್ಷ್ಮವಾಗಿ ನೋಡತೊಡಗಿದೆ. ಏನೋ ದಿವ್ಯ ಜ್ಞಾನವೊಂದು ಗೋಚರಿಸಿದಂತಾಯಿತು. ಯಾಕೋ ಉಪ್ಪಿನಕಾಯಿಯ ಮೇಲೆ ಸಣ್ಣಗೆ ಅನುಮಾನ ಶುರುವಾಯಿತು. ನಿಂಬೆಯ ದಳಗಳು ಮೊದಲು ಸಣ್ಣಗೆ ಅಲುಗಾಡಿದಂತೆ ಕಂಡವು. ಹತ್ತಿರ ಮುಸುಡಿ ತೂರಿಸಿ ಬಗ್ಗಿ ನೋಡಿದರೆ, ಅಲ್ಲಿ ಸಣ್ಣಗೆ ಚಲನೆಯೊಂದು ಶುರುವಾಯಿತು. ನಿಂಬೆಯ ಒಳಗೆ ತಣ್ಣಗೆ ಮಲಗಿದ್ದ ಮುಲುಮುಲು ಬಿಳಿ ಹುಳಗಳು ಮೈಮುರಿದು ಎದ್ದು ಕೂತು ಆಕಳಿಸುತ್ತಿದ್ದವು. ಆಮೇಲೆ ಅವು ನಿಧಾನವಾಗಿ ನಡೆದು ಬಾಳೆಯ ಎಲೆಯ ಮೇಲೆ ಚಲಿಸತೊಡಗಿದವು. ನನ್ನ ಅನುಮಾನ ನಿಜವಾಗಿತ್ತು. ಹಾಕಿದಾಗ ವೆಜ್ ರೂಪದಲ್ಲಿದ್ದ ನಿಂಬೆಯ ಉಪ್ಪಿನಕಾಯಿ ನಿಧಾನಕ್ಕೆ ನಾನ್ ವೆಜ್ಜಾಗಿ ಪರಿವರ್ತನೆಯಾಗಿತ್ತು. ನನ್ನ ಎಲೆಯ ಸಣ್ಣ ನಾಲ್ಕೈದು ಉಪ್ಪಿನಕಾಯಿಯ ಚೂರಿನಿಂದ ಹಲವಾರು ಹುಳಗಳು ಎದ್ದು ನಿಂತು ನಾಲ್ಕೂ ದಿಕ್ಕಿನೆಡೆಗೆ ಚಲಿಸತೊಡಗಿದ್ದವು. ಆಗ ಗಾಬರಿಯಾಗಿ ಪಕ್ಕದ ಗೆಳೆಯನ ಎಲೆ ನೋಡಿದೆ.

ಅವನು ಎಲ್ಲವನ್ನೂ ತಿಂದು ಮುಗಿಸಿ ಕೈ ನೆಕ್ಕುತ್ತಾ ಉಪ್ಪಿಕಾಯಿ ಬಹಳ ಚೆನ್ನಾಗಿದೆ ಇನ್ನಷ್ಟು ಹಾಕಿ ಎಂದು ಬೇಡಿಕೆ ಮಂಡಿಸತೊಡಗಿದ.
ಅಷ್ಟರಲ್ಲಿ ಬಿಸಿ ಕಡಬು ಬಿಸಿ ಸಾರು ಬಂದಿತು. ಅದರ ಬಿಸಿ ಹಬೆ ತಾಗಲು ಹುಳುಗಳು ನೋವಿನಿಂದ ಮುಖ ತಿರುಗಿಸಿಕೊಂಡವು. ನಾನು ಸಾರಿನೊಟ್ಟಿಗೆ ಬಲು ನಾಜೂಕಿನಿಂದ ಕಡುಬನ್ನು ಕಲೆಸತೊಡಗಿದೆ. ನನ್ನ ಊಟದ ವ್ಯಾಪ್ತಿ ಪ್ರದೇಶದೊಳಗೆ ಆ ದುಷ್ಟ ಹುಳಗಳು ಬರದಂತೆ ಅತಿ ಜಾಗೃತೆ ವಹಿಸಿ ಉಪ್ಪಿನಕಾಯಿಯ ಸುತ್ತ ಉಪ್ಪಿನ ಪುಡಿಯ ಬೇಲಿ ಕಟ್ಟಿದೆ. ಗೆಳೆಯ ಇದ್ಯಾವುದರ ಪರಿವೇ ಇಲ್ಲದೆ ಎಲ್ಲಾ ಕಲೆಸಿ ಬಾರಿಸುತ್ತಿದ್ದ. ಅವನ ಬೇಡಿಕೆ ತಣಿಸಲು ಮತ್ತೊಮ್ಮೆ ಉಪ್ಪಿನಕಾಯನ್ನು ತಂದು ಸುರಿದ ಪುಷ್ಪಲತಾ ಮೇಡಂ, ನಿಮಗೆ ಉಪ್ಪಿನಕಾಯಿ ಬೇಕಾ ಎಂದು ಕೇಳಿದರು. ನಾನು ನಯವಾಗಿ, ನಮ್ರನಾಗಿ, ಬೇಡ ಮೇಡಂ ಎಂದೆ. ಅದಕ್ಕೆ ಗೆಳೆಯ ಅವನಿಗೆ ಟೇಸ್ಟೇ ಇಲ್ಲ. ಉಪ್ಪಿನಕಾಯಿಯ ಜೊತೆ ಕಡುಬನ್ನು ಕಲೆಸಿಕೊಂಡು ತಿಂದರೆ ಪರಮಾನಂದ ಎಂದು ಪಲ್ಯದಂತೆ ದಂಢಿಯಾಗಿ ಬಿದ್ದಿದ್ದ ಉಳಿದ ಉಪ್ಪಿನಕಾಯನ್ನೂ ಮುಖ್ಯ ಊಟಕ್ಕೆ ಕಲೆಸಿಕೊಂಡು ನುರಿಯತೊಡಗಿದ. ನನಗೋ ಒಟ್ಟು ಊಟದ ಶಾಸ್ತ್ರ ಮುಗಿದರೆ ಸಾಕಾಗಿತ್ತು. ರೂಮಿನ ಊಟ ತಿಂದು ನಾಲಿಗೆ ಹದಗೆಟ್ಟಿದೆ ಎಂದು ಬಿಟ್ಟಿ ಊಟಕ್ಕೆ ಬಂದರೆ ಇಲ್ಲೂ ನಸೀಬು ಕೈಕೊಟ್ಟಿತ್ತು.

ಪುಷ್ಪಲತಾ ಮೇಡಂ ಊಟ ಹೇಗಿತ್ತು ಸಾರ್ ಎಂದು ಕೇಳಿದರು. ನಾನು ತುಂಬಾ ಚೆನ್ನಾಗಿತ್ತು ಎಂದೆ. ಗೆಳೆಯ ಉಪ್ಪಿನಕಾಯಿ ಬೊಂಬಾಟಾಗಿತ್ತು. ನಿಮಗೆ ತೊಂದರೆ ಇಲ್ಲದಿದ್ದರೆ ಒಂದಿಷ್ಟು ಪ್ಯಾಕ್ ಮಾಡಿ ಕೊಡ್ತೀರಾ? ಎಂದು ಕೇಳಿ ಪಡೆದುಕೊಂಡ.
ಆ ದಿನದಿಂದ ನಾನು ಯಾರ ಮನೆಗೆ ಊಟಕ್ಕೆ ಹೋದರೂ ಉಪ್ಪಿನಕಾಯಿಯನ್ನು ಅಪ್ಪಿತಪ್ಪಿಯೂ ಹಾಕಿಸಿಕೊಳ್ಳುವುದಿಲ್ಲ. ಒಂದೊಮ್ಮೆ ಗೊತ್ತಾಗದೆ ಹಾಕೇ ಬಿಟ್ಟರೆ ದಿವ್ಯದೃಷ್ಟಿ ಬಳಸಿ ನೋಡುತ್ತಾ ಕೂರುತ್ತೇನೆ. ಅದು ನನ್ನ ನಿಜವಾದ ಧ್ಯಾನದ ಸ್ಥಿತಿ. ಹೀಗೆ ಗೊತ್ತಾಗದೇ ಜೀವನದಲ್ಲಿ ಎಲ್ಲಿ ಏನೇನು ತಿಂದಿರುತ್ತೇವೋ ಗೊತ್ತಿಲ್ಲ. ಒಮ್ಮೆ ಎಣಗಾಯಿಯ ಬದನೆಕಾಯಿಯ ಒಳಗೆ ಬೆಂದು ಮಲಗಿದ್ದ ಜೋಡಿ ಜೀವಗಳ ನೋಡಿದ ಮೇಲೆ ಅದರ ಮೇಲೂ ಗುಮಾನಿ ಮಾಡುತ್ತಿದ್ದೇನೆ. ಇನ್ನು ಹೂಕೋಸಿನ ಕಥೆ ಹೇಳದಿರುವುದೇ ವಾಸಿ. ಹೀಗೆ ಚರಾಚರಗಳಲ್ಲೂ ತುಂಬಿರುವ ಅವುಗಳಿಂದ ಎಷ್ಟು ಸಲ ತಪ್ಪಿಸಿಕೊಂಡು ಓಡಿ ಹೋಗುವುದು. ಕೊನೆಗೆ ಮಣ್ಣಲ್ಲಿ ನಾನೊಂದು ದಿನ ಸಿಕ್ಕಾಗ ಅವು ಬಂದೇ ಬರುತ್ತವೆ. ಆಗ ಹೆದರಿ ಎಲ್ಲಿ ಓಡಲಿ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT