ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನು ಡ್ರಗ್ಸ್ ತಗೊಂಡ್ರೆ ಇವಳು ಹೊಣೆನಾ?

Last Updated 27 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಅಣ ಎನ್ನುವ ಕ್ರಿಮಿ ಇನ್ನೊಮ್ಮೆ ತನಗೆ ಫೋನು ಮಾಡದಂತೆ, ತಾನು ಕಂಡರೂ ಮಾತಾಡಿಸದಂತೆ ಜಾಪಾಳ ಮಾತ್ರೆ ಕೊಟ್ಟು ಬಂದ ಮೇಲೆ ವಿಜಿಯ ಮನಸ್ಸು ಬಹಳ ಸಮಾಧಾನ ಸ್ಥಿತಿಯನ್ನು ತಲುಪಿತು. ವಿಜಿ ಪೀಕೋಸ್ ಒಳಕ್ಕೆ ವಾಪಸು ಬಂದಾಗ ಕತ್ತಲಲ್ಲೂ ಅವಳ ಮುಖ ಉರಿಯುತ್ತಿದ್ದುದನ್ನು ಚಿತ್ರಾ ಮತ್ತು ಸೂಸನ್ ಗಮನಿಸಿ ಬೇಗ ಹೋಗೋಣ ಅಂತ ಅವಸರ ಮಾಡಿದರು.

ವಿಜಿಯೂ ಸುಮ್ಮನೆ ಅವರ ಜೊತೆ ಹೊರಟಳು. ಪೀಜಿಗೆ ಹೋದಾಗ ಇವರ ಪಾಲಿನ ಯಾರೋ ಪುಣ್ಯಾತ್ಮರು ಊಟ ಹಾಗೇ ಇಟ್ಟಿದ್ದು ಗಮನಕ್ಕೆ ಬಂತು. ಊಟ ಮಾಡಿ ಮಲಗಿದರು. ಮರುದಿನ ಭಾನುವಾರ. ಹೇಗೂ ಪೀಜಿಯಲ್ಲಿ ತಿಂಡಿ ಇದ್ದೇ ಇರುತ್ತೆ. ಮಧ್ಯಾಹ್ನ ಊಟ ಮಾತ್ರ ಖೋತಾ. ಹಂಗಾಗಿ ತಿಂಡಿಯನ್ನೇ ಲೇಟಾಗಿ ತಿಂದರೆ ಹೊರಗೆ ಹೋಗಿ ರೈಸ್ ಬಾತು ತಿನ್ನೋದು ತಪ್ಪುತ್ತೆ ಅಂತ ಲೆಕ್ಕ.

ರೈಸ್ ಬಾತಿಗೆ ಏನಿಲ್ಲವೆಂದರೂ ಹದಿನೈದು ಇಪ್ಪತ್ತು ರೂಪಾಯಿ ಇರುತ್ತಿತ್ತು. ನಾಲ್ಕು ಕ್ಯಾರೆಟ್ ಮತ್ತು ಆಲೂಗಡ್ಡೆ ತುಂಡು, ಎಂಟು ಬೀನ್ಸಿನ ತುಂಡು, ಅಲ್ಲಲ್ಲಿ ಟೊಮೆಟೊ ಸಿಪ್ಪೆ, ಒಂದಿಷ್ಟು ಈರುಳ್ಳಿ ತುಂಡು, ಹೆಸರೇ ಗೊತ್ತಿಲ್ಲದ ಒಂದೆರಡು ತರಕಾರಿ ಹಾಕಿದ ಅನ್ನಕ್ಕೆ ರೈಸ್ ಬಾತು ಎಂದು ಹೆಸರು.

ವಿಜಿಗೆ ಮೊದಮೊದಲಿಗೆ ಈ ಪಲಾವಿನ ಥರದ ಅನ್ನವೆಲ್ಲಾ ‘ಬಾತು’ ಹೆಂಗಾಗುತ್ತೆ ಅಂತ ಅರ್ಥವಾಗಿರಲಿಲ್ಲ. ಯಾವ ದರ್ಶಿನಿ, ಮಧ್ಯಮ ವರ್ಗೀಯ ಹೋಟೆಲ್ಲಿಗೆ ಹೋದರೂ ರೈಸು ಎಲ್ಲಾ ಸಮಯದಲ್ಲೂ ‘ಬಾತುಕೊಂಡೇ’ ಇರುತ್ತಿತ್ತು. ಈ ಬಾತು ಎನ್ನುವುದು ಯಾವ ಮೂಲದ ಪದ ಅಂತ ಬಹಳ ಜಿಜ್ಞಾಸೆ ಆಗುತ್ತಿತ್ತು. ಏಕೆಂದರೆ ಅವಳ ಊರಿನ ಕಡೆ ‘ಬಾತು’ ಅಂದರೆ ಒಂದೋ ಬಾತುಕೋಳಿ ಅಥವಾ ಪೆಟ್ಟು ಬಿದ್ದಾಗ ಬರುವ ಬಾವು. ಅಂದರೆ ‘ಬಿದ್ದು ಅವಳ ಕೈ ಬಾತುಕೊಂಡಿದೆ’ ಅನ್ನೋ ಹಾಗೆ ಬಳಕೆ. 

‘‘ಹೀಂಗೆ ಗುಪ್ಪೆ ಹಾಕಿ ಕೊಡ್ತಾರಲ್ಲ, ಅದಕ್ಕೇ ‘ಬಾತು’ ಅಂತಾರೇನೋ’’ ಅಂತ ತನಗೆ ತಾನೇ ಹೇಳಿಕೊಳ್ಳುತ್ತಿದ್ದಳು. ಸೂಸನ್ ತಮಿಳು ನಾಡಿನವಳಾದರೆ ಚಿತ್ರಾ ಕುಟುಂಬ ಬಹು ಕಾಲ ಮುಂಬೈಲಿದ್ದು ಸ್ವಲ್ಪ ವರ್ಷಗಳ ಹಿಂದೆ ಹೈದರಾಬಾದಿಗೆ ಬಂದು ನೆಲೆಸಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿಕೊಂಡಿದ್ದ ಚಿತ್ರಾ ಸಾಫ್ಟ್‌ವೇರ್ ಹವಾ ಶುರುವಾದದ್ದನ್ನ ಬಹಳ ಮೊದಲೇ ಗ್ರಹಿಸಿ ಅಂತಹಾ ಕೆಲಸ ಹಿಡಿಯಲು ಅನುಕೂಲವಾದಂತಹ ಕೆಲವು ಕೋರ್ಸುಗಳನ್ನೂ ಮಾಡಿಕೊಂಡು ಒರೇಕಲ್ ಎನ್ನುವ ಕಂಪೆನಿಯಲ್ಲಿ ಕೆಲಸಕ್ಕಿದ್ದಳು.

ಚಿತ್ರಾ ಒಮ್ಮೆ, ಸೂಸನ್ ಮತ್ತು ವಿಜಿಯನ್ನು ತನ್ನ ಆಫೀಸು ನೋಡಲು ಕರೆದುಕೊಂಡು ಹೋಗಿದ್ದಳು. ಸಾಫ್ಟ್‌ವೇರ್ ಜಗತ್ತು ಎಂದರೇನು? ಆಗಿನ ಕಾಲಕ್ಕೆ ಸ್ವರ್ಗಕ್ಕೆ ಎರಡೇ ಹೆಜ್ಜೆ ಅನ್ನುವಂತೆ ಇರುತ್ತಿತ್ತು.

ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಾ ದೂಳಿಲ್ಲದ ಆಫೀಸಿನಲ್ಲಿ, ಕಾಫೀ ಟೀ ಎಲ್ಲವನ್ನೂ ಪುಕ್ಕಟೆಯಾಗಿ ಕೊಡುವ ಆ ಹವಾ ನಿಯಂತ್ರಿತ ಸುಂದರ ಜಾಗ ಎಲ್ಲಿ, ತಾನು ಕೆಲಸ ಮಾಡುತ್ತಿದ್ದ ಯಾವುದೋ ಪತ್ರಿಕೆಯ ಆಫೀಸು ಎಲ್ಲಿ! ವಿಜಿಗಂತೂ ತಾನೂ ಯಾವುದಾದರೂ ಕೋರ್ಸು ಮಾಡಿಕೊಂಡು ಸಾಫ್ಟ್‌ವೇರು ಮಾಡಬಾರದಾ ಎಂದು ಆಗಾಗ ಅನ್ನಿಸುತ್ತಿದ್ದರೂ ಅದೆಲ್ಲ ತಮ್ಮಂತಹವರಿಗೆ ಲಾಯಕ್ಕಾದ ಜಾಗವಲ್ಲ ಎನ್ನುವುದೂ ಗೊತ್ತಿತ್ತು.

ಕಂಪ್ಯೂಟರಿನ ಕಪ್ಪು ಪರದೆಯನ್ನೇ ನೋಡುತ್ತಾ ಪುಟ್ಟ ಹುಳಗಳಂತಹ ಕ್ಯಾರೆಕ್ಟರುಗಳನ್ನು ಸೇರಿಸುತ್ತಾ, ಆ ಕೀ ಬೋರ್ಡ್ ಎನ್ನುವ ಪಾಪದ ಕೀಲಿ ಮಣೆ ಮೇಲೆ ಸಮಯವಿದ್ದಾಗ ಪ್ರೀತಿಯಿಂದಲೂ, ಸಮಯವಿಲ್ಲದಾಗ ರೌದ್ರದಿಂದಲೂ ಸ್ವಾಮ್ಯತ್ವವನ್ನು ಸಾಧಿಸಲು ನೋಡುವಾಗ ಹಗಲೂ ರಾತ್ರಿ ಸಾಫ್ಟ್‌ವೇರ್ ಬರೆಯುವ ಜನರ ಕಷ್ಟಗಳು ಅರ್ಥವಾಗದಿದ್ದರೂ,

‘ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ’ ಎಂದು ಅಕ್ಕಮಹಾದೇವಿ ಹೇಳಿದ್ದು ಸಾಫ್ಟ್‌ವೇರಿನ ಬಗ್ಗೆಯೇ ಇರಬೇಕು ಎನ್ನಿಸುವಷ್ಟು ಮಮತೆ ಈ ಕಂಪ್ಯೂಟರ್ ದೇವತೆ ಮೇಲೆ ಹುಟ್ಟುತ್ತಿತ್ತು. ಅದು ತರುವ ಆರ್ಥಿಕ ಸಬಲತೆಯಿಲ್ಲದೆ ಅಷ್ಟಿಲ್ಲದೆ ಚಿತ್ರಾಳಂತಹ ಹುಡುಗಿಗೆ ಮನೋಸ್ಥೈರ್ಯ ಹೊಂದುವುದು ಸಾಧ್ಯವಿತ್ತೆ?

ಅವಳ ತಂದೆ ತಾಯಿ ಬಹಳ ವರ್ಷ ಸರ್ಕಾರಿ ನೌಕರಿಯಲ್ಲಿ ಮುಂಬೈಯಲ್ಲಿ ಇದ್ದವರು. ಅಲ್ಲಿನ ಜೀವನ ಅಷ್ಟಕ್ಕಷ್ಟೇ. ಉಳಿತಾಯ ಹೆಚ್ಚೇನಿಲ್ಲ. ಹೈದರಾಬಾದಿನ ಹೊಸ ಜೀವನ ಸ್ವಲ್ಪ ದುಬಾರಿಯೇ ಅನ್ನಿಸಿತ್ತು. ಮಗಳನ್ನು ಇಂಜಿನಿಯರಿಂಗ್ ಓದಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರು. ಚಿತ್ರಾಳ ಅಣ್ಣ ಮುಂಬೈಯಲ್ಲಿ ಮೆಡಿಕಲ್ ಓದುತ್ತಿದ್ದ.

ಅವನು ಇವಳಷ್ಟು ಚುರುಕಿರಲಿಲ್ಲ. ಹಾಗಾಗಿ ಒಂದಕ್ಕೆರಡು ಹಣ ಪೀಕಿ ಒಂದು ವರ್ಷ ಓದುವಲ್ಲಿ ಮೂರು ವರ್ಷ ಓದುವ ಮಗನ ಖರ್ಚನ್ನೆಲ್ಲಾ ತಂದೆ ತಾಯಿಯೇ ನಿಭಾಯಿಸುತ್ತಿದ್ದರು. ವಯಸ್ಸಿನಲ್ಲಿ ಚಿತ್ರಾ ಚಿಕ್ಕವಳಾದರೂ ಐದು ವರ್ಷ ದೊಡ್ಡವನಾದ ಅಣ್ಣನಿಗಿಂತ ಮೊದಲೇ ದುಡಿವ ಜವಾಬ್ದಾರಿ ಕೈಗೆತ್ತಿಕೊಂಡಿದ್ದಳು.

ಸಾಫ್ಟ್‌ವೇರಿನ ಭರ್ಜರಿ ಸಂಬಳ ಆಕೆಗೆ ಸಾಕಷ್ಟು ಆತ್ಮವಿಶ್ವಾಸವನ್ನೂ ತಂದುಕೊಟ್ಟಿತ್ತು. ಅಷ್ಟಷ್ಟು ಖರ್ಚು ಮಾಡಿ ಉಳಿದಿದ್ದನ್ನು ಬ್ಯಾಂಕಿಗೆ ಹಾಕುತ್ತಿದ್ದಳು. ಕೆಲವೊಮ್ಮೆ ಅವಳ ಅಣ್ಣ ಫೋನು ಮಾಡಿ ದುಡ್ಡು ತರಿಸಿಕೊಳ್ಳುತ್ತಿದ್ದ. ಅವನು ಕೇಳಿದಷ್ಟು ಅಲ್ಲದಿದ್ದರೂ ಸಾಕಷ್ಟು ದುಡ್ಡನ್ನು ಅವನಿಗೆ ಕಳಿಸುತ್ತಿದ್ದಳು. ಆನ್ ಲೈನ್ ಟ್ರಾನ್ಸ್‌ಫರ್ ಇಲ್ಲದ ಕಾಲದಲ್ಲಿ ಪೋಸ್ಟ್ ಆಫೀಸಿನ ನಿರಂತರ ಸಂಪರ್ಕ ಅನಿವಾರ್ಯವಾಗಿತ್ತು – ದುಡ್ಡು ಕಳಿಸಲು ಅಥವಾ ಪಡೆಯಲು. ಹಾಗಾಗಿ ಮಾಮೂಲಿ ಅಂಚೆಯಣ್ಣನಿಗೂ ನಮ್ಮ ಆರ್ಥಿಕ ಸ್ವಾಸ್ಥ್ಯ ತಿಳಿದೇ ಇರುತ್ತಿತ್ತು.

ಇದ್ದಕ್ಕಿದ್ದಂತೆ ಚಿತ್ರಾಳ ಅಣ್ಣನ ಕರೆಗಳು ಬಂದ್ ಆದವು. ಚಿತ್ರಾ ಹೆಚ್ಚೇನೂ ಯೋಚಿಸದಿದ್ದರೂ ದುಡ್ಡು ಕೇಳದೆ ಸುಮ್ಮನಿರುವ ಅಣ್ಣನ ಬಗ್ಗೆ ಯಾಕೋ ಕಳವಳ ಉಂಟಾಗಿತ್ತು. ಅದನ್ನು ಒಮ್ಮೆ ಸ್ನೇಹಿತೆಯರ ಹತ್ತಿರ ಮಾತಾಡಿಯೂ ಇದ್ದಳು. ‘ಅಯ್ಯೋ ಫೋನ್ ಮಾಡ್ಲಿಲ್ಲಾಂದ್ರೆ ಕತ್ತೆ ಬಾಲ. ದುಡ್ಡು ಉಳೀತು ಅಂದ್ಕೋ’ ಅಂತ ಸೂಸನ್ ಹೇಳಿದ್ದರೂ ಚಿತ್ರಾಗೆ ಯಾಕೋ ಅಣ್ಣನ ಪರಿಸ್ಥಿತಿ ಸರಿ ಇಲ್ಲ ಎನ್ನಿಸುತ್ತಿತ್ತು. ಕೆಲವು ಸಾರಿ ಫೋನ್ ಮಾಡಿ ಅವನ ಹತ್ತಿರ ಮಾತಾಡಲು ಪ್ರಯತ್ನ ಪಟ್ಟಿದ್ದರೂ ಅವನು ಫೋನಿಗೆ ಸಿಕ್ಕಿರಲಿಲ್ಲ. ಅವನ ಸ್ನೇಹಿತರನ್ನು ಕೇಳಲು ಅವಳಿಗೆ ಅವರ್‍್ಯಾರ ನಂಬರೂ ಗೊತ್ತಿರಲಿಲ್ಲ.

ಹೀಗೆ ಕೆಲವು ದಿನಗಳು ಕಳೆದವು. ಆಫೀಸಿನಲ್ಲೇ ಹೆಚ್ಚು ಹೊತ್ತು ಇರುತ್ತಿದ್ದರಿಂದ ಚಿತ್ರಾಗೆ ಅಣ್ಣನ ಬಗ್ಗೆ ಯೋಚಿಸಲು ಪುರುಸೊತ್ತು ಸಿಗುತ್ತಿದ್ದುದೂ ಕಡಿಮೆಯೇ. ಆದರೆ ಇದ್ದಕ್ಕಿದ್ದಂತೆ ಅವಳ ಅಮ್ಮ ಒಮ್ಮೆ ಚಿತ್ರಾಗೆ ಕರೆ ಮಾಡಿ ‘ಅವನಿಗ್ಯಾಕೆ ದುಡ್ಡು ಕೊಡ್ತಿದ್ದೆ’ ಅಂತ ಬೈದರಂತೆ. ಮನೆಗೆ ಬರಬೇಡ ಅಂತಲೂ ಹೇಳಿದರಂತೆ. ಇದನ್ನು ಕೇಳಿ ಚಿತ್ರಾ ಭೂಮಿಗಿಳಿದುಬಿಟ್ಟಳು.

ಇಷ್ಟೆಲ್ಲ ನಡೆಯಲು ಕಾರಣ ಅವಳ ಅಣ್ಣ ವ್ಯಸನಿಯಾಗಿದ್ದ. ದೂರದ ಮುಂಬೈನಲ್ಲಿ ಇರುವವ ಯಾಕೆ ದುಡ್ಡು ಕೇಳುತ್ತಾನೆ, ಅದರಿಂದ ಏನು ಮಾಡುತ್ತಾನೆ ಎನ್ನುವ ವಿಚಾರ ಇವಳಿಗಾದರೂ ಹೇಗೆ ತಿಳಿಯಬೇಕು? ಹೊಸ ದುಡಿಮೆ ಹುಮಸ್ಸಲ್ಲವೇ? ಅಲ್ಲದೆ ಅಣ್ಣನಿಗಿಂತ ಮೊದಲೇ ದುಡಿಮೆಗೆ ನಿಂತ ಉತ್ಸಾಹ, ಒಂಥರಾ ತಾನೇ ಹೇರಿಕೊಂಡ ಹುಸಿ ಜವಾಬ್ದಾರಿ, ತಾನೇ ಅಣ್ಣನಿಗೆ ದುಡ್ಡು ಕೊಡುವಾಗ ಉಂಟಾಗುತ್ತಿದ್ದ ಅಧಿಕಾರೀ ಭಾವನೆ– ಎಲ್ಲವೂ ಸೇರಿತ್ತು.

ಆ ದಿನವೆಲ್ಲಾ ಪೀಜಿಯಲ್ಲಿ ಇದ್ದರೂ ಚಿತ್ರಾ ಅಳುತ್ತಲೇ ಇದ್ದಳು. ಏನಾಯಿತು ಅಂತ ಕೇಳಿ ತಿಳಿದುಕೊಳ್ಳುವ ಹೊತ್ತಿಗೆ ಸಾಕಾಯಿತು ಸೂಸಿಗೆ. ಚಿತ್ರಾ ಅತ್ಯಂತ ಸೂಕ್ಷ್ಮ ಮನಸ್ಸಿನ ಹುಡುಗಿ. ಮನೆಯಲ್ಲಿ ಯಾರಾದರೂ ಹೊಸಬರ ಧ್ವನಿ ಕೇಳಿದರೂ ಮಾತಾಡದೇ ತನ್ನ ಚಿಪ್ಪಿನೊಳಗೆ ಹುದುಗಿ ಬಿಡುವ ಸ್ವಭಾವ. ಕೆಲವೊಮ್ಮೆ ಇದು ಅಹಂಕಾರ ಎನ್ನಿಸುತ್ತಿದ್ದುದೂ ಉಂಟು.

ಚಿತ್ರಾಳ ಈ ಕಷ್ಟ ಶುರುವಾದ ಹೊತ್ತಲ್ಲೇ ಅವಳ ರೂಮಿಗೆ ಹೊಸಬರೊಬ್ಬರ ಸೇರ್ಪಡೆಯಾಯಿತು. ಮಧ್ಯ ವಯಸ್ಸಿನ ಸರಳಾ ಎನ್ನುವ ಪ್ರಬುದ್ಧ ಸುಂದರಿಯೊಬ್ಬರು ರೂಮಿಗೆ ಬಂದರು. ವಯಸ್ಸು ನಲವತ್ತರ ಮೇಲಿದ್ದಿರಬೇಕು. ಸೊಂಟದ ತನಕ ಬೀಳುತ್ತಿದ್ದ ಕಪ್ಪು ಸಪೂರ ಜಡೆ, ಡಿಂಪಲ್ ಕೆನ್ನೆ, ಅಷ್ಟಿಷ್ಟು ನಾಚಿಕೆಯ ನಗು ಇತ್ಯಾದಿ ಇತ್ಯಾದಿ.

ಹೆಣ್ಣನ್ನು ವರ್ಣಿಸಲು ಕಾಳಿದಾಸನ ಕವನವೊಂದನ್ನು ನೀವೇ ಮನಸ್ಸಿಗೆ ತಂದುಕೊಳ್ಳಿ; ಅದರಲ್ಲಿದ್ದ ಎಲ್ಲಾ ಅಂಶಗಳನ್ನೂ ಸೇರಿಸಿ ಹಸಿ ಹಸಿ ಷೋಡಶಿ ಎನ್ನುವ ಮಾತನ್ನು ತೆಗೆದು ಆತ್ಮವಿಶ್ವಾಸವುಳ್ಳ ವಯಸ್ಸಿನ ಹದವನ್ನು ಬೆರೆಸಿದರೆ ಸರಳಾ ರೆಡಿ!

ನರಹುಲಿಗಳು ಬೆಳೆಯುತ್ತಿದ್ದ ಕತ್ತಿನಲ್ಲಿ ಹೌದೋ ಅಲ್ಲವೋ ಎಂಬಂತಿದ್ದ ಬೆಳ್ಳಿ ಕರಿಮಣಿ ಸರ. ಅದಕ್ಕೆ ಏಳೆಂಟು ಪದಕಗಳು. ಶಿರಡಿ ಸಾಯಿ ಬಾಬ, ಯಾವುದೋ ಸನ್ಯಾಸಿ, ಗಣೇಶ ಹೀಗೆ ಹತ್ತು ಹಲವಾರು ಅಂಶಗಳನ್ನು ಅದಕ್ಕೆ ಸೇರಿಸಿಕೊಂಡಿದ್ದರು. ಆಶ್ಚರ್ಯವೆಂದರೆ ಈ ಎಲ್ಲದರ ಜೊತೆ ಧುಮ್ಮಿಕ್ಕುವ ಹಾಲಿನ ಜಲಪಾತದಂತೆ ಗಡ್ಡ ಮೀಸೆ ಏಕವಾಗಿ ಬಿಟ್ಟುಕೊಂಡಿದ್ದ ತೇಲುಗಣ್ಣಿನ ರಜನೀಶ್ ಪದಕವೂ ಇತ್ತು!

ಬಹಳ ವರ್ಷಗಳ ಕಾಲ ಹೊರಗೆ ಇದ್ದುದರಿಂದಲೋ ಏನೋ ಎಲ್ಲಿ ಮಲಗಿದರೂ ಸುಲಭವಾಗಿ ನಿದ್ದೆ ಬರುತ್ತಿತ್ತು ಅವರಿಗೆ. ಬಂದ ದಿನ ಎಷ್ಟೂ ತಡ ಮಾಡದೆ ತಮ್ಮ ಸಾಮಾನುಗಳನ್ನು ಅಚ್ಚುಕಟ್ಟಾಗಿ ಹೊಂದಿಸಿಕೊಂಡು, ಕುಂಕುಮ ಹಚ್ಚಿದ ತಮ್ಮ ಪುಟ್ಟ ಸ್ಟವ್ ಅನ್ನು ಅಡುಗೆ ಮನೆಯಲ್ಲಿ ಪ್ರತಿಷ್ಠಾಪಿಸಿ, ದೊಡ್ಡ ಕಾಫೀ ಮಗ್ಗಿನಲ್ಲಿ ಬೆಳೆದಿದ್ದ ಗಂಟು ಗಂಟಾದ ತುಳಸಿ ಗಿಡವನ್ನು ಮುಂಬಾಗಿಲ ಎದುರಿನ ಕಟ್ಟೆಯ ಮೇಲೆ ಇಟ್ಟು ಬಂದರು.

ಯಾರಿಗೂ ತೊಂದರೆ ಕೊಡದೆ ತಮ್ಮ ಪಾಡಿಗೆ ತಾವು ಮೂಗಿನ ಮೇಲೆ ಕನ್ನಡಕ ಏರಿಸಿಕೊಂಡು ಪುಸ್ತಕ ಓದುವುದರಲ್ಲಿ, ರಾಮ ಕೋಟಿ ಬರೆಯುವುದರಲ್ಲಿ ಅಥವಾ ಲೆಡ್ಜರಿನಲ್ಲಿ ಇನ್ಯಾವುದೋ ಲೆಕ್ಕ ಬರೆಯುವುದರಲ್ಲಿ ಮಗ್ನರಾಗಿರುತ್ತಿದ್ದರು.

ಮನಃಸ್ಥಿತಿಯಲ್ಲಿ ಬಹಳ ವ್ಯತ್ಯಾಸವುಳ್ಳ ರೂಮ್ ಮೇಟುಗಳು ಸಿಕ್ಕರೆ ಗಂಡಸರಿಗೆ ಯಾವ ವ್ಯತ್ಯಾಸವೂ ಆಗದೇ ಹೋಗಬಹುದೇನೋ. ಮೂಲತಃ ಗಂಡು ‘ದ್ವೀಪ’ ವಾದರೆ, ಹೆಂಗಸರನ್ನ ‘ಸೇತುವೆ’ಗೆ ಹೋಲಿಸಬಹುದು. ಮಾತಾಡದೇ, ಇನ್ನೊಬ್ಬರ ವೈಯಕ್ತಿಕ ಜೀನವದ ಬಗ್ಗೆ ಕುತೂಹಲ ತಾಳದೆ, ರಾಗದ್ವೇಷಗಳ ನೆಲೆಯಿಂದ ಪ್ರತಿಕ್ರಿಯಿಸದೆ ಬದುಕಲು ಹೆಣ್ಣು ಮಕ್ಕಳಿಗಂತೂ ಸಾಧ್ಯವಿಲ್ಲ.

ಚಿತ್ರಾ ಆಗಾಗ ಮುಸು ಮುಸು ಅಳುವುದು ಅವರ ಗಮನಕ್ಕೆ ಬಂದು ಅವಳನ್ನು ಕಾರಣ ಕೇಳಿದರಂತೆ. ಆದರೆ ಗುರುತು ಪರಿಚಯವಿಲ್ಲದ, ಒಂಥರಾ ತನ್ನೊಳಗೆ ತಾನೇ ಕಳೆದುಹೋಗಿರುವ, ವಯಸ್ಸಿನ ಅಂತರ ಬಹಳವೇ ಇರುವ ಈ ಹೊಸ ಮುಖದ ಹತ್ತಿರ ಚಿತ್ರಾ ಏನನ್ನೂ ಹೇಳಲಿಲ್ಲ. ಸೂಸನ್ ಮತ್ತು ವಿಜಿಗೆ ಕಾರಣ ಗೊತ್ತಿತ್ತಾದರೂ ಸರಳಾ ಹತ್ತಿರ ಯಾರೂ ಮಾತಾಡುತ್ತಿರಲಿಲ್ಲವಾದ್ದರಿಂದ ಏನನ್ನೂ ಹೇಳುವ ಪ್ರಮೇಯವೇ ಬರಲಿಲ್ಲ.

ಆದರೆ ಚಿತ್ರಾ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಅವಳ ತಂದೆ ತಾಯಿ ಮತ್ತೆ ಫೋನ್ ಮಾಡಿದರು. ಅವಳ ಅಣ್ಣನನ್ನು ಪುನರ್ವಸತಿ ಕೇಂದ್ರಕ್ಕೆ ಹಾಕಿದ್ದರು. ಅವನ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಇದ್ದಕ್ಕಿದ್ದಂತೆ ಡ್ರಗ್ಸ್ ಬಿಟ್ಟಿದ್ದರಿಂದ ಅವನ ದೇಹಸ್ಥಿತಿ ಹಾಗೂ ಮಾನಸಿಕ ಸಮತೋಲನ ಏರುಪೇರಾಗಿತ್ತು. ಅವಳ ಅಪ್ಪ ಅಮ್ಮನದ್ದು ಮತ್ತದೇ ಹಾಡು.

‘ನೀನೇ ಎಲ್ಲದಕ್ಕೂ ಕಾರಣ. ದುಡ್ಡು ಗಳಿಸ್ತೀಯ ಅಂತ ಕೊಬ್ಬು ಏರಿ ಹೋಗಿದೆ. ಅವನಿಗೆ ಕೊಡುವ ಮುಂಚೆ ನಮ್ಮನ್ನ ಯಾಕೆ ಕೇಳಲಿಲ್ಲ? ಈಗ ನೋಡು, ಅವನು ಸಾಯೋ ಸ್ಥಿತಿಗೆ ಬಂದಿದ್ದಾನೆ. ವಯಸ್ಸಿನ ಮಗನನ್ನು ಹೀಗೆ ಕೈ ಜಾರಿ ಹೋಗೋದನ್ನ ನೋಡೋಕೆ ನಾವಾದ್ರೂ ಏನ್ ಪಾಪ ಮಾಡಿದ್ವಿ?’ ಅಂತ ಕೊನೆಗೆ ನಿಂದಿಸಿದರಂತೆ.

ಇಂತಹ ಮಾತುಗಳನ್ನ ಕೇಳಿದ ಚಿತ್ರಾಳ ತಲೆ ರುಮ್ ಎಂದಿತು. ಸಾಮಾನ್ಯವಾಗಿ ಮರು ಮಾತಾಡದ ಹುಡುಗಿ ವಾಪಸು ಹೇಳಿದಳು. ‘ಅವನು ಡ್ರಗ್ಸ್ ಮಾಡಲಿ ಅಂತ ಕೊಟ್ಟಿದ್ದಲ್ಲ ನಾನು. ಅವನ ಓದಿಗೆ ಅನುಕೂಲ ಆಗುತ್ತೇನೋ ಅಂತ ಕೊಟ್ಟೆ.

ಅಲ್ಲದೆ ಯಾವಾಗಲೂ ನಮಗೆ ವಿದ್ಯೆ ಕೊಟ್ಟದ್ದು, ಅದಕ್ಕೆ ಮಾಡಿದ ಖರ್ಚೆಲ್ಲ ನಮಗೆ ಮಾಡಿದ ದೊಡ್ಡ ಉಪಕಾರ ಅನ್ನೋ ಥರಾ ಮಾತಾಡ್ತೀರಲ್ಲ? ಅದಕ್ಕೇ ನಾನು ದುಡಿಯೋಕೆ ಶುರು ಮಾಡಿದ ತಕ್ಷಣ ಅವನಿಗೆ ಸಹಾಯ ಮಾಡಿದೆ ಅಥವಾ ನಾನು ಕಳಿಸೋ ದುಡ್ಡಲ್ಲಿ ಅವನು ತನಗೆ ಬೇಕಾದ ಸಾಮಾನು, ಪುಸ್ತಕ ಕೊಂಡ್ಕೋತಾ ಇದಾನೆ ಅಂದುಕೊಂಡೆ. ಅವನು ನನ್ನನ್ನ ದುಡ್ಡು ಕೇಳುವಾಗ ಇಂಥದ್ದೇ ಯಾವುದೋ ಕಾರಣಕ್ಕೆ ಅಂತಲೇ ಕೇಳುತ್ತಿದ್ದ’ ಅಂತ ಸ್ವಲ್ಪ ಜೋರಾಗೇ ಹೇಳಿದಳು.

‘ನಾವಿರಲಿಲ್ವೇನೆ? ನಮ್ಮನ್ನ ಕೇಳದೆ ಯಾಕೆ ಕೊಟ್ಟೆ ನೀನು? ಹೀಗೆ ಇರೋ ದುಡ್ಡೆಲ್ಲಾ ಖರ್ಚು ಮಾಡ್ಕೊಂಡಿದ್ದೂ ಅಲ್ಲದೆ ನಮ್ಮ ಕುತ್ತಿಗೆಗೆ ಬರೋ ಅಂಥಾ ಕೆಲಸ ಮಾಡಿ ಕೂತಿದ್ದೀ... ಈಗ ನೋಡು, ಅವನು ಆಸ್ಪತ್ರೇಲಿ ಇರೋವರೆಗೂ ನಿನ್ನ ಮದ್ವೆ ಮಾಡೋದೂ ಕಷ್ಟ. ದುಡ್ಡೆಲ್ಲಾ ಅಲ್ಲಿಗೇ ಖರ್ಚಾಗ್ ಹೋಗುತ್ತೆ’ ಅಂತ ಚಿತ್ರಾಳ ಅಮ್ಮ ಅಸಹಾಯಕತೆಯಿಂದ ಹೇಳಿದರು.

ಏನೋ ಒಂದು ಮಾತಾಡಿ ಫೋನ್ ಇಟ್ಟ ನಂತರ ಚಿತ್ರ ಯೋಚಿಸಲು ಕೂತಳು. ಹೌದಲ್ಲ, ಖರ್ಚುಗಳನ್ನು ನಿಭಾಯಿಸುವುದರಲ್ಲಿ ಅಪ್ಪ ಅಮ್ಮ ಹೈರಾಣಾಗಿ ಹೋಗಿದಾರೆ. ತಮ್ಮ ವಿದ್ಯಾಭ್ಯಾಸ ದೊಡ್ಡ ಖರ್ಚು. ನಂತರ ತಮ್ಮಿಬ್ಬರನ್ನು ಮದುವೆಯಾಗೋ ತನಕ ನಡೆಸೋದೂ ಕಷ್ಟವೇ, ಆಮೇಲೆ ಆ ಮದುವೆ ಖರ್ಚು, ಆ ಸಂಬಂಧ ಹೇಗೆ ಮುಂದೆ ಸೆಟಲ್ ಆಗುತ್ತೆ ಎನ್ನೋ ಚಿಂತೆ – ಒಟ್ಟಿನಲ್ಲಿ ಚಿಂತೆ ಖರ್ಚುಗಳ ನಡುವೆ ಜೀವನದ ಸೂರ್ಯಾಸ್ತಮಾನ– ಸೂರ್ಯೋದಯಗಳು ಸೋರಿ ಹೋಗುತ್ತವೆ.

ಇದ್ದಕ್ಕಿದ್ದ ಹಾಗೆ ಚಿತ್ರಾಗೆ ಸರಳಾ ಹೆಸರಿಗೆ ತಕ್ಕಂತೆ ಬದುಕುತ್ತಿರುವ ಹೆಣ್ಣು ಅನ್ನಿಸಿಬಿಟ್ಟಿತು. ‘ಇನ್ನೇನ್ ಬೇಕು ಜೀವನಕ್ಕೆ? ದಿನದ ಖರ್ಚು ನೀಗಲು ಒಂದು ನೌಕರಿ, ನಿದ್ದೆ, ಸ್ನಾನ, ಶೌಚ ಸಾಂಗವಾಗಿ ನಡೆಯಲು ಒಂದು ಡೀಸೆಂಟ್ ಜಾಗ, ಬೇಕಾದ ಒಂದಿಷ್ಟು ಜನ ಸ್ನೇಹಿತರು, ತನ್ನ ಆಸಕ್ತಿಯ ವಿಷಯಗಳು. ಅಷ್ಟೇ ಅಲ್ವಾ!’ ಅಂತ ತನಗೆ ತಾನೇ ಹೇಳಿಕೊಂಡಳು.

ರೂಮಿನಲ್ಲಿ ಚಿತ್ರಾ ತನ್ನ ಸ್ನೇಹಿತಯರ ಹತ್ತಿರ ಈ ಮಾತನ್ನು ಹೇಳ್ತಾ ಇದ್ದುದು ಸರಳಾಗೆ ಕೇಳಿಸಿತು. ಒಳಗೆ ಬಂದು ಚಿತ್ರಾಳನ್ನು ಉದ್ದೇಶಿಸಿ ‘ಈ ಥರದ ಆಲೋಚನೆಗಳನ್ನು ಇಟ್ಟುಕೊಳ್ಳೋದು ಒಳ್ಳೇದೇ. ಆದರೆ ಮದುವೆ ಬಗ್ಗೆ ಅಷ್ಟೊಂದು ತಾತ್ಸಾರ ಬೇಡ. ಜೀವನದ ಬಗ್ಗೆ ಸ್ವಲ್ಪ ಕುತೂಹಲ ಉಳಿಸಿಕೋ’ ಎಂದರು. ಒಂಟಿ ಹೆಣ್ಣು ಈ ಮಾತನ್ನು ಹೇಳುತ್ತಿರುವುದು ಕೇಳಿ ಚಿತ್ರಾಗೆ ವಿಚಿತ್ರ ಎನ್ನಿಸಿತು.

‘ಹಾಗಾದ್ರೆ ನೀವು ಯಾಕೆ ಒಂಟಿ ಜೀವನ ಬದುಕ್ತಾ ಇದೀರಾ?’
‘ನನ್ನ ಹಣೆಬರಹ ಬೇರೆ. ನಿನ್ನದು ಬೇರೆ. ನಾನು ಅರ್ಧ ದಾರಿ ನಡೆದಾಗಿದೆ. ಯಾವಾಗಲಾದರೂ ನನ್ನ ಕಥೆ ಹೇಳ್ತೀನಿ. ಟ್ರಾಜಿಡಿಯೇನಲ್ಲ ನನ್ನ ಜೀವನ. ಆದರೆ ನಿನ್ನ ವಯಸ್ಸಿನ ಹುಡುಗೀರು ಭವಿಷ್ಯದ ಬಗ್ಗೆ ಕನಸು ಕಾಣದೇ ಹೋದರೆ ನೀವು ಗಳಿಸಿದ ಈ ಎಲ್ಲಾ ಸ್ವಾತಂತ್ರ್ಯಗಳಿಗೂ ಅರ್ಥವೇ ಇರಲ್ಲ’

‘ಅಂದ್ರೆ? ಮದುವೆ ಅನಿವಾರ್ಯಾನಾ?’
‘ಅನಿವಾರ್ಯವಲ್ಲ ಅಂತ್ಲೇ ಇಟ್ಕೋ. ಆದರೆ, ಅದಕ್ಕೆ ಪರ್ಯಾಯ ಏನು? ಮುಂದಿನ ದಿನಗಳನ್ನ ಹೀಗೇ ನಿಮ್ಮಣ್ಣನಿಗೆ ದುಡ್ಡು ಕೊಡ್ತಾ ಏಸಿ ಆಫೀಸಿನಲ್ಲಿ

ಕೂತು ಸವೆಸಿಬಿಡ್ತೀಯೇನು?’
ಚಿತ್ರಾಗೆ ತಾನು ಕಾಣದ ಜಗತ್ತೊಂದು ತನ್ನ ಮುಂದೆ ಬ್ರಹ್ಮಾಂಡದ ಸೀಕ್ರೆಟ್ಟುಗಳನ್ನು ಪ್ರಶ್ನೆಯ ರೂಪದಲ್ಲಿ ಕೇಳಿದಂತಾಯಿತು. ಹೌದಲ್ಲ? ತನ್ನ ಆರ್ಥಿಕ ಸಬಲತೆಗೆ, ಸ್ವಾತಂತ್ರ್ಯಕ್ಕೆ ಒಂದು ಆಯಾಮ ಇಲ್ಲದಿದ್ದರೆ ತನಗೆ ಯಾವ ಬಲವೂ ಇಲ್ಲ.

ಅಣ್ಣ ಡ್ರಗ್ಸ್ ತಗೊಂಡಿದ್ದಕ್ಕೆ ತನ್ನನ್ನು ದೂರುವ ತಂದೆ ತಾಯಿ ತನ್ನ ಬಗ್ಗೆ ಯಾವ ಕನಸು ಕಟ್ಟಿದ್ದಾರೆ? ಅವನು ಓದಿದರೆ ಸಂಭ್ರಮ, ತಾನು ನೌಕರಿ ಮಾಡುತ್ತಿದ್ದರೂ ಅವರಿಗೆ ಒಂದು ರೀತಿ ಆತಂಕ. ಹೀಗೇಕೆ ಇದೆ ಈ ವ್ಯವಸ್ಥೆ? ಈ ಸಮಾಜ, ಇದರ ರೀತಿ ನೀತಿಗಳು ಅಂತ ಯೋಚಿಸತೊಡಗಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT