ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನ-ಬಿಗುಮಾನದ ನಡುವೆ...!

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಶ್ವಕಪ್ ಕ್ರಿಕೆಟ್ ಸಮರ ಆರಂಭವಾಗಿದೆ. ಎಲ್ಲ ಕಡೆಯೂ ಕ್ರಿಕೆಟ್ ಬಗ್ಗೆಯೇ ಮಾತು. ಬೆಂಗಳೂರಿನಲ್ಲಂತೂ ಒಂದೇ ಪ್ರಶ್ನೆ-ಫೆಬ್ರುವರಿ 27 ರ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಟಿಕೆಟ್ ಸಿಗುತ್ತದೆಯೇ? ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಮತ್ತು ಕ್ರೀಡಾ ಪತ್ರಕರ್ತರನ್ನು ಎಲ್ಲರೂ ಕಾಡುತ್ತಿದ್ದಾರೆ.
ಮಾತು ಆರಂಭವಾಗುವುದೇ ಒಂದು ಪಾಸ್ ಕೊಡಿಸಿ ಅಥವಾ ನಾಲ್ಕು ಟಿಕೆಟ್ ಕೊಡಿಸಿ ಎಂದು. ಕ್ರಿಕೆಟ್ ಗೆಳೆಯರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರಿಗೆ ಈಗಾಗಲೇ ಸಾಕಾಗಿ ಹೋಗಿರಬಹುದು. ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾದ ಇಬ್ಬರೂ ಇವನ್ನೆಲ್ಲ ಸಹಿಸಿಕೊಳ್ಳಬೇಕಾಗುತ್ತದೆ.

ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಿಂದ ಈ ಪಂದ್ಯ ಬೆಂಗಳೂರಿಗೆ ಬದಲಾದ ಮೇಲೆ ಇವರಿಬ್ಬರಿಗೂ ದೊಡ್ಡ ಸವಾಲು ಎದುರಾಗಿದೆ. ಇದು ಇವರಿಬ್ಬರ ಆಡಳಿತಾತ್ಮಕ ಸಾಮರ್ಥ್ಯದ ಸತ್ವಪರೀಕ್ಷೆಯೂ ಹೌದು. ಸಭ್ಯರೆನಿಸಿಕೊಂಡವರಿಗಿದು ಪರೀಕ್ಷೆಯ ಕಾಲ. ಢಾಕಾದಲ್ಲಿ ಶನಿವಾರ ನಡೆದ ಭಾರತ - ಬಾಂಗ್ಲಾದೇಶ ಪಂದ್ಯಕ್ಕೆ ಬಂದಿದ್ದ ಕೋಲ್ಕತ್ತದ ಹಲವು ಮಂದಿ ಪತ್ರಕರ್ತರಿಗೆ ಪಂದ್ಯವನ್ನು ಈಡನ್ ಗಾರ್ಡನ್ಸ್‌ನಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದ್ದು ಬಹಳ ಸಿಟ್ಟು ಮೂಡಿಸಿದೆ.

ಕೋಲ್ಕತ್ತದ ಕ್ರಿಕೆಟ್ ’ದಾದಾ’ ಜಗಮೋಹನ್ ದಾಲ್ಮಿಯ ಅವರನ್ನು ಎಲ್ಲರೂ ದೂರುತ್ತಿದ್ದಾರೆ. ದಾಲ್ಮಿಯ ಮೂಲ ಬಂಗಾಲಿ ಅಲ್ಲದಿದ್ದರೂ ಪವಾರ್ ವಿರುದ್ಧದ ರಾಜಕೀಯದಲ್ಲಿ ಅವರನ್ನು ಹೊಗಳುತ್ತಿದ್ದ ಜನರೇ ಅವರನ್ನೀಗ ಖಳನಾಯಕನಂತೆ ನೊಡುತ್ತಿದ್ದಾರೆ. ’ಇದು ಕೋಲ್ಕತ್ತಕ್ಕೆ ಅವಮಾನ. ಐಸಿಸಿ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿರುವ ದಾಲ್ಮಿಯ ಅವರಿಗೆ ವಿಶ್ವ ಕಪ್ ಕ್ರಿಕೆಟ್‌ಗೆ ಕ್ರೀಡಾಂಗಣವನ್ನು ಹೇಗೆ ಸಿದ್ಧಗೊಳಿಸಬೇಕೆಂದು ಗೊತ್ತಿಲ್ಲವೇ? ಈಗಿನ ಐಸಿಸಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಅವರ ರಾಜಕೀಯ ಏನೇ ಇದ್ದರೂ ಅದು ಪಂದ್ಯವನ್ನೇಕೆ ಹಾಳುಮಾಡಬೇಕು’ ಎಂದು ಅವರೆಲ್ಲ ಆಕ್ರೋಶದಿಂದ ನುಡಿಯುತ್ತಾರೆ.

ಹೌದು, ಇದು ಕೋಲ್ಕತ್ತಕ್ಕೆ ಆದ ಅವಮಾನ, ಭಾರತಕ್ಕೇ ಆದ ಅವಮಾನ. ಕೋಲ್ಕತ್ತದ ಜನರಿಗೆ ಯಾವಾಗಲೂ ತಮ್ಮ ಭಾಷೆ, ರಾಜಕೀಯ, ಸಾಹಿತ್ಯದ ಬಗ್ಗೆ ಬಹಳ ಅಭಿಮಾನ. ’ಕೋಲ್ಕತ್ತ ಇಂದು ಏನು ಮಾಡುತ್ತದೆಯೋ ಭಾರತ ಅದನ್ನು ನಾಳೆ ಮಾಡುತ್ತದೆ’ ಎಂದೇ ಅವರ ನಂಬಿಕೆ. ಆದರೆ ಕ್ರಿಕೆಟ್‌ಗೆ ಅವರು ಅವಮಾನ ಮಾಡಿದಂತೆ ಭಾರ ತದ ಇತರ ಯಾವುದೇ ನಗರ ಮಾಡಿಲ್ಲ. ಈಡನ್ ಗಾರ್ಡನ್ಸ್ ಪೂರ್ಣವಾಗಿ ಸಿದ್ಧವಾಗಿಲ್ಲವೆಂದು ಭಾರತ-ಇಂಗ್ಲೆಂಡ್ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದು ಅವರಿಗೆಲ್ಲ ಕಪಾಳಕ್ಕೆ ಹೊಡೆದಂತಾಗಿದೆ. ವಿಶ್ವ ಕಪ್ ’ಬಿ’ ಗುಂಪಿನಲ್ಲಿ ಈ ಲೀಗ್ ಪಂದ್ಯ ಬಹಳ ಮಹತ್ವದ್ದು. ಸಹಜವಾಗಿಯೇ ಎಲ್ಲರ ಕುತೂಹಲವನ್ನು ಕೆರಳಿಸಿದೆ.

ಈಡನ್ ಗಾರ್ಡನ್ಸ್‌ನಲ್ಲಿ 80 ಸಾವಿರ ಜನ ಪಂದ್ಯ ನೋಡಬಲ್ಲರು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 45 ಸಾವಿರ ಜನ ಮಾತ್ರ ಹಿಡಿಸುತ್ತಾರೆ. ಕೋಲ್ಕತ್ತ ಪಂದ್ಯಕ್ಕೆ ಟಿಕೆಟ್ ತೆಗೆದುಕೊಂಡವರಲ್ಲಿ ಬಹಳ ಜನ ಬೆಂಗಳೂರಿಗೆ ಬರುತ್ತಾರೆ. ಐಸಿಸಿ ಮತ್ತು ಭಾರತ ಕ್ರಿಕೆಟ್ ಮಂಡಳಿ ಅಧಿಕಾರಿಗಳು, ಅವರ ಸ್ನೇಹಿತರು, ಪ್ರಾಯೋಜಕರು, ಕಾರ್ಪೊರೇಟ್ ಬಾಕ್ಸ್‌ಗಳು, ರಾಜಕಾರಣಿಗಳು, ಪೊಲೀಸರು ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು ಹೀಗೆ ವಿವಿಧ ಇಲಾಖೆಗಳ ಜನರಿಗೆ 30 ರಿಂದ 35 ಸಾವಿರ ಪಾಸುಗಳು, ಟಿಕೆಟ್‌ಗಳು ಖರ್ಚಾಗುತ್ತವೆ. ಇದರಿಂದಾಗಿ ಬೆಂಗಳೂರಿನ ಜನರಿಗೆ ಹೆಚ್ಚು ಟಿಕೆಟ್‌ಗಳು ಲಭ್ಯವಾಗುವುದಿಲ್ಲ. ಅವರಿಗೆ ತಮ್ಮ ಊರಿನ ಕ್ರೀಡಾಂಗಣದಲ್ಲೇ ಪಂದ್ಯ ನೋಡುವ ಅವಕಾಶ ತಪ್ಪಿಹೋಗುತ್ತದೆ.

ಕೋಲ್ಕತ್ತದಲ್ಲಿ ಹೀಗೆ ಭಾರತದ ಕ್ರಿಕೆಟ್‌ಗೆ ಅವಮಾನವಾಗುತ್ತಿರುವುದು ಇದೇ ಮೊದಲೇನಲ್ಲ. 1996 ರ ವಿಶ್ವಕಪ್ ಆರಂಭೋತ್ಸವದಲ್ಲಿ ವ್ಯವಸ್ಥಾಪಕರು ಎಡವಿದ್ದರು. ಕಾರ್ಯಕ್ರಮ ನಡೆಸಬೇಕಾಗಿದ್ದ ಮುಖ್ಯ ವ್ಯಕ್ತಿಯೇ ಗುಂಡು ಹಾಕಿ ಮರ್ಯಾದೆ ತೆಗೆದಿದ್ದ.

ಆನಂತರ ಭಾರತ ಮತ್ತು ಶ್ರೀಲಂಕಾ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಗಲಾಟೆ ಆಯಿತು. ಭಾರತ ಸೋಲುವುದನ್ನು ಸಹಿಸದ ಪ್ರೇಕ್ಷಕರು ಬೆಂಕಿ ಹಚ್ಚಿ ಗಲಾಟೆ ಮಾಡಿದ್ದರು. ಪಂದ್ಯ ನಿಂತು ಶ್ರೀಲಂಕಾ ತಂಡ ವಿಜಯಿ ಎಂದು ಪ್ರಕಟಿಸಲಾ ಗಿತ್ತು. ವಿಶ್ವ ಕಪ್ ಇತಿಹಾಸದಲ್ಲೇ ಇಂಥ ಘಟನೆ ನಡೆದದ್ದು ಅದೇ ಮೊದಲು. ಮತ್ತೆ ಅಂಥ ಘಟನೆ ಎಲ್ಲೂ ಸಂಭವಿಸಿಲ್ಲ.

1999ರಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಣ ಏಷ್ಯನ್ ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯದಲ್ಲೂ ಜನರು ಗಲಾಟೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ ರನ್ ಔಟ್ ಆಗಿದ್ದರು. ಆದರೆ ಜನರಿಗೆ ಇದು ಹಿಡಿಸಲಿಲ್ಲ. ದೊಡ್ಡ ಗಲಾಟೆ ಆಯಿತು. ಜನರನ್ನೆಲ್ಲ ಹೊರಹಾಕಿ ಖಾಲಿ ಕ್ರೀಡಾಂಗಣದಲ್ಲಿ ಆಟ ಮುಂದುವರಿದು ಪಾಕಿಸ್ತಾನ ಜಯ ಗಳಿಸಿತ್ತು.

ಕೋಲ್ಕತ್ತದ ಜನರು ಕ್ರೀಡಾಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ಫುಟ್‌ಬಾಲ್ ಮತ್ತು ಕ್ರಿಕೆಟ್ ಎರಡರಲ್ಲೂ ಅವರಿಗೆ ವಿಪರೀತ ಹುಚ್ಚು. ಅದು ಯಾವಾಗಲೂ ಕೆರಳುತ್ತಲೇ ಇರುತ್ತದೆ. ಆಟಗಾರರಲ್ಲೂ ಅದೇ ರೀತಿಯ ಸ್ವಭಾವ ಕಂಡುಬರುತ್ತದೆ. ಕ್ರಿಕೆಟ್‌ನ ’ದಾದಾ’ ಎಂದೇ ಹೆಸರಾದ ಸೌರವ್ ಗಂಗೂಲಿ ಅವರನ್ನು ಈ ಸಲದ ಐಪಿಎಲ್ ಹರಾಜಿನಲ್ಲಿ ಯಾವ ತಂಡವೂ ಖರೀದಿಸಲಿಲ್ಲ. ಸೌರವ್ ಅವರ ಸ್ವಭಾವ ಯಾವ ತಂಡಕ್ಕೂ ಇಷ್ಟವಿರಲಿಲ್ಲ.

ದಾಲ್ಮಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಶರದ್ ಪವಾರ್ ಪಂದ್ಯದ ಸ್ಥಳಾಂತರಕ್ಕೆ ಸೂಚಿಸಿರಬಹುದು ಎಂಬ ಅನುಮಾನ ಜನರಲ್ಲಿದ್ದರೂ ಅದರಲ್ಲಿ ಸತ್ಯಾಂಶ ಕಡಿಮೆ. ಯಾಕೆಂದರೆ ಐಸಿಸಿ ಪರಿಶೀಲನಾ ಸಮಿತಿ ಈಡನ್ ಗಾರ್ಡನ್ಸ್‌ಗೆ ಭೇಟಿ ಕೊಟ್ಟಾಗ ಅಲ್ಲಿ ಯಾವ ಕೆಲಸವೂ ಪೂರ್ಣಗೊಂಡಿ ರಲಿಲ್ಲ. ಕ್ರೀಡಾಂಗಣ ಪೂರ್ಣಗೊಳಿಸಲು ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಆದರೆ ಕೆಲಸ ಹಿಂದೆ ಬಿದ್ದಿತ್ತು.

ಪರಿಶೀಲನಾ ಸಮಿತಿ ಪಂದ್ಯವನ್ನು ಸ್ಥಳಾಂತರಿ ಸದೇ ಬೇರೆ ದಾರಿಯೇ ಇರಲಿಲ್ಲ. ಭಾರತ-ಇಂಗ್ಲೆಂಡ್ ಪಂದ್ಯವೊಂದನ್ನು ಮಾತ್ರ ಬದಲಿಸಲಾಗಿದ್ದು ಉಳಿದ ಕೆಲವು ಪಂದ್ಯಗಳು ನಿಗದಿಯಂತೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಆದರೆ ಇದು ಕೋಲ್ಕತದ ಜನರಿಗೆ ಸಮಾಧಾನ ತಂದಿಲ್ಲ. ಅವರಿಗೆ ಬೇಕಾಗಿದ್ದು ದೊಡ್ಡ ಪಂದ್ಯ.

ಭಾರತದಲ್ಲಿ ಹಣ, ಜನಬಲ ಎಲ್ಲವೂ ಇದ್ದರೂ ಕೆಲವು ವಿಷಯಗಳಲ್ಲಿ ಅಶಿಸ್ತು, ಸೊಕ್ಕು, ಭ್ರಷ್ಟಾಚಾರ ಎದ್ದು ಕಾಣುವುದರಿಂದಲೇ ಅವ್ಯವಸ್ಥೆ ತಾಂಡವವಾಡು ತ್ತದೆ. ಕಾಮನ್‌ವೆಲ್ತ್ ಕ್ರೀಡೆಗಳಿಗೆ ಮೊದಲು ಕ್ರೀಡಾಂಗಣಗಳ ಗುಣಮಟ್ಟದ ಬಗ್ಗೆ ದೊಡ್ಡ ವಿವಾದ ಎದ್ದಿತ್ತು. ಕೆಲವು ಕ್ರೀಡಾಂಗಣಗಳ ಕೆಲಸ ನಿಧಾನವಾಗಿ ನಡೆದಿತ್ತು. ಆದರೆ ಅಂತಿಮ ವಾಗಿ ಎಲ್ಲವೂ ಸಕಾಲಕ್ಕೆ ಸಿದ್ಧವಾಗಿ, ಕ್ರೀಡೆಗಳು ಚೆನ್ನಾಗಿಯೇ ನಡೆದವಾದರೂ ಸುರೇಶ್ ಕಲ್ಮಾಡಿ ಕೊರಳಿನ ಸುತ್ತ ಭ್ರಷ್ಟಾಚಾರದ ಹಗ್ಗ ಬಿಗಿಯಾಗುತ್ತಿದೆ.
 
ವಿಶ್ವ ಕಪ್ ಕ್ರಿಕೆಟ್ ನಂತರ ಎಂಥ ಹಗರಣ ಗಳು ಹೊರಬೀಳುತ್ತವೆ ಎಂಬುದು ಗೊತ್ತಿಲ್ಲ. ಆಟದ ಹುಚ್ಚಿನಲ್ಲಿ ಜನ ಕೆಲವು ವಿಷಯಗಳನ್ನು ಮರೆತು ಬಿಡುತ್ತಾರೆ. ಆದರೆ ವಿಶ್ವ ಕಪ್ ಕ್ರಿಕೆಟ್ ಬಂದಾಗಲೆಲ್ಲ ಕೋಲ್ಕತ್ತದ ಘಟನೆಗಳೂ ನೆನಪಿಗೆ ಬರುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT