ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರ ಹೊಟ್ಟೆ ಉರಿಸೋಕೆ ಏರೋಪ್ಲೇನೇ ಹತ್ತಬೇಕು!

Last Updated 30 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಅಂಥಿಂಥಾ ಬೆಂಗಳೂರಲ್ಲ ಅದು. ಹೊಸ ಮಿಲೆನಿಯಮ್ಮಿನ ಪ್ರಾರಂಭದ ತುತ್ತತುದಿಗೆ ನಿಂತ ಊರು. ತನ್ನವರನ್ನು ಹೊರಗಿನವರನ್ನಾಗಿಸಿ, ಹೊರಗಿನವರನ್ನು ಒಳಕ್ಕೆ ಕರೆದು ಆತಿಥ್ಯ ಮಾಡುತ್ತಿದ್ದ, ಯಾರ ಹಿಡಿತಕ್ಕೂ ಒಳಗಾಗದೆ ದುಡ್ಡಿನ ಚೀಲ ಇಟ್ಟವರ ವಾಸನೆಯಿಂದಲೇ ಗುರುತಿಸಿ ಅವರ ಕಡೆ ಮಾತ್ರ ಆಸಕ್ತಿ ತೋರುತ್ತಿದ್ದ ನಾಜೂಕಯ್ಯನಂಥಾ ಊರದು. ಸಂಬಂಧಿಗಳಿದ್ದರೂ ಆ ಸಂಬಂಧವನ್ನು ನೆಚ್ಚಿಕೊಳ್ಳದೆ ತನ್ನ ದಾರಿಯನ್ನು ತಾನು ಕಂಡುಕೊಳ್ಳಲು ಕಲಿಸುತ್ತಿದ್ದ ಮಹಾನ್ ‘ನಗರ’.

ಊರ ಮಧ್ಯ ಪ್ರತಿಷ್ಠಾಪನೆಯಾಗಿದ್ದ ಕಸದ ರಾಶಿಯ ಪಕ್ಕವೇ ಇದ್ದ ಕಿಷ್ಕಿಂಧೆಯಲ್ಲಿ, ಗಾಂಧೀನಗರ ಹುಟ್ಟಿಸುತ್ತಿದ್ದ ಪೊಳ್ಳು ಅಹಂಕಾರದ ನಡುವೆ ಇಕ್ಕಟ್ಟಾಗಿ ನಿಂತಿದ್ದ ನ್ಯಾಷನಲ್ ಮಾರ್ಕೆಟ್ಟೇ ಪ್ರತಿಷ್ಠೆ ಹಾಗೂ ಚಾಣಾಕ್ಷತನದ ದ್ಯೋತಕವಾಗಿದ್ದ ಕಾಲ. ಜಾಗತೀಕರಣ ಇನ್ನೂ ಕಣ್ಣು ಬಿಡುತ್ತಿತ್ತು.

ರೈತ ಚಳವಳಿಯ ಹರಿಕಾರ ಕೆಂಡದಂತಹ ಸುಡು ಸುಡುವ ವಿಚಾರಗಳುಳ್ಳ ಪ್ರೊ.ನಂಜುಂಡಸ್ವಾಮಿಯವರು ಬಹಳ ಆಳವಾದ ವಿಚಾರದಲ್ಲಿ ಮುಳುಗಿದಷ್ಟು ಸೈಲೆಂಟಾಗಿಬಿಟ್ಟಿದ್ದರು. ಅವರು ಉಗ್ರವಾಗಿ ವಿರೋಧಿಸಿದ್ದ ಕೆಂಟಕಿ ಫ್ರೈಡ್ ಚಿಕನ್ ಬ್ರಿಗೇಡು ರೋಡಿನಲ್ಲಿ ಮೀಸೆ ಮೂಡಿದ ಹುಡುಗನಂತೆ, ಎದೆ ಮೂಡಿದ ಹುಡುಗಿಯಂತೆ ಎಲ್ಲರ ಕಣ್ಗಳಿಗೂ ರಾಚುತ್ತಾ ವಿನಾಕಾರಣ ತೊನೆತೊನೆದು ಎಲ್ಲರನ್ನೂ ಕೈಬೀಸಿ ಕರೆಯುತ್ತಿತ್ತು.

ಇನ್ಫೋಸಿಸ್ಸು ಇನ್ನೂ ದೊಡ್ಡ ಸುದ್ದಿಯಲ್ಲದ ದಿನಗಳು. ಬೆಂಗಳೂರಿನ ಯೌವನ ಎಂ.ಜಿ ರೋಡಿನಲ್ಲಿ ಸೊಕ್ಕಿನಿಂದ ಅಭಿವ್ಯಕ್ತಿಗೊಳ್ಳುತ್ತಿತ್ತು. ದೇವೇಗೌಡರು ಪ್ರಧಾನಿಯಾಗಿ ಕೆಲವು ತಿಂಗಳುಗಳ ಕಾಲ ಕಿರೀಟವ ತೊಟ್ಟುಕೊಂಡ ವೈಭವದಲ್ಲಿ ಕನ್ನಡದ ಮನಸ್ಸುಗಳು ಎರವಲು ಪಡೆದ ಭಾಗ್ಯದಲ್ಲಿ ಧನ್ಯತಾ ಭಾವ ಅನುಭವಿಸುತ್ತಿದ್ದರು.

ಪಟೇಲರ ‘ಮದ್ಯ ಮಾನಿನಿ’ಯ ಚರ್ಚೆ ಎಲ್ಲೆಲ್ಲೂ ಮೊಳಗುತ್ತಿತ್ತು. ಅವರ ಸಮಾಜವಾದ ಹೊಳಪು ಕಳೆದುಕೊಂಡು ಪಟೇಲರು ಚಾಮರಾಜನಗರ ಜಿಲ್ಲೆಯನ್ನು ಮಹದೇಶ್ವರ ಬೆಟ್ಟದಿಂದ ವಿದ್ಯುಕ್ತ ಚಾಲನೆ ನೀಡಿ ಊರಿನ ‘ಶನಿ ದೆಸೆ’ಯ ಮಾತನ್ನು ಅಲ್ಲಗೆಳೆಯಲು ಸಾಧ್ಯವಾಗದೆ ಸುಮ್ಮನಾಗಿದ್ದರು.

ಅಲ್ಲದೆ, ಶಬರಿಮಲೈಗೆ ಹೋಗಿ ಬಂದ ವಿಚಾರ ಜಗಜ್ಜಾಹೀರಾಗಿ ವೈರುಧ್ಯಗಳೇ ತುಂಬಿದ್ದ ಕಾಲದಲ್ಲಿ ಒಂದು ವಿಚಾರಧಾರೆಯ ಪಕ್ಕಾ ಅನುಯಾಯಿ ಯಾರಾದರೂ ಇದ್ದರೆ ತನಗೊಂದು ದೀಪ ಕಂಡೀತು, ಉದಾಹರಣೆಯ ಮೂಲಕ ನಡೆವ ವ್ಯಕ್ತಿತ್ವ ಕಂಡರೆ ಅನುಸರಿಸುವ, ಅನುಕರಿಸುವ ಬೆಳಕು ಕಂಡೀತು, ಈ ನಾಡಿನ ನಾಳೆ ಕಂಡೀತು;

ಅದೂ ಇದೂ ಅಂತ ನೆನೆಸಿಕೊಳ್ಳುತ್ತಾ ತಮಿಳು, ತೆಲುಗು, ಮಲಯಾಳಂ ರೂಂಮೇಟುಗಳುಳ್ಳ ಕಿಷ್ಕಿಂಧೆಯಂಥ ಪಿ.ಜಿಯಲ್ಲಿ ವಿಜಿ ಬಂದು ತನ್ನನ್ನು ತಾನೇ ಪರೀಕ್ಷೆಗೆ ಒಳಪಡಿಸಿಕೊಳ್ಳಲು ನಿಂತಿದ್ದು ರಾಹುಕಾಲವೋ, ಗುಳಿಕಕಾಲವೋ ಅಥವಾ ಯಮಗಂಡಕಾಲವೋ ಹೇಳುವವರಾರು?

ಅಲ್ಲಿ ಬೆಳಗಿನ ಇಡ್ಲಿ, ಮಧ್ಯಾಹ್ನದ ‘ರೈಸ್ ಬಾತು’ ರಾತ್ರಿಯ ಕಾರ್ತಿಕ್ ಚಾಟ್ಸು – ಇವೆಲ್ಲಕ್ಕೂ ಪುಟವಿಟ್ಟಂತೆ ಬೆಂಗಳೂರಿನ ಭಾಗವಾಗಿದ್ದರೂ ತಾನೇ ಬೇರೆ, ತನ್ ಸ್ಟೈಲೇ ಬೇರೆ ಎನ್ನುವಂತೆ ಮೆರೆಯುತ್ತಿದ್ದ, ಬೆಳೆಯುತ್ತಿದ್ದ ಧಿಮಾಕಿನ ಇಂದಿರಾನಗರಕ್ಕೆ ವಿಜಿ ಬಂದು ತನ್ನ ಜೀವನದ ಇನ್ನೊಂದು ಮಜಲು ಶುರು ಮಾಡಿಕೊಂಡಿದ್ದು ಮಾತ್ರ ಬಲು ವಿಚಿತ್ರವಾದ ಮನಃಸ್ಥಿತಿಯಲ್ಲಿ.

ಅವಳಿಗಿದ್ದ ನಂಬಿಕೆ ಎಂದರೆ ಸ್ನೇಹಿತರು ದಾರಿ ತೋರಿಸುತ್ತಾರೆನ್ನುವುದು. ಅದಕ್ಕೆ ತಕ್ಕಂತೆ ಆಗೊಬ್ಬರು ಈಗೊಬ್ಬರು ಸಿಕ್ಕರೂ ಯಾರ ಮೇಲೂ ಅವಲಂಬನೆ ಸಾಧ್ಯವಿಲ್ಲ ಎಂದು ಕಾಲಾಂತರದಲ್ಲಿ ಮನದಟ್ಟಾದದ್ದು. ಅವರು ‘ಸಿಗ್ತೀವಿ’ ಅಂತ ಹೇಳುತ್ತಿದ್ದ ಮಾತು ಬುಡುಬುಡಿಕೆಯವರ ಭವಿಷ್ಯದಷ್ಟೇ ನಿಖರ ಮತ್ತು ಸತ್ಯ! ಸಿಗುವ ಪ್ರಯತ್ನವಿರಲಿ, ಇವಳನ್ನು ಹತ್ತಿರ ಬಿಟ್ಟುಕೊಂಡರೆ ಎಲ್ಲಿ ಜವಾಬ್ದಾರಿ ಮೈಮೇಲೆ ಬರುತ್ತದೋ ಎಂಬ ಆತಂಕ ಬೇರೆ.

ಸಂಬಂಧವನ್ನು ತಾವರೆ ಎಲೆಯ ಮೇಲಿನ ಜಲಬಿಂದುವಿನಂತೆ ಕಾಣುವುದು ಪೇಟೆಗೆ ಸಹಜವಾದ ಗುಣ ಎನ್ನುವ ಅರಿವು ಮೂಡುವ ಮುನ್ನ ನೋವ ಹಾದಿ ಅನಿವಾರ್ಯವಲ್ಲವೆ? ಬೆಂಗಳೂರಿನಲ್ಲಿ ‘ಅಡ್ರೆಸ್’ ಕೇಳುವುದಕ್ಕೂ ತನ್ನ ಪುಟ್ಟ ಊರಿನಲ್ಲಿ ದಾರಿ ದಿಕ್ಕು ಹುಡುಕುವುದಕ್ಕೂ ಇರುವ ಅಗಾಧವಾದ ವ್ಯತ್ಯಾಸ ಗುರುತಾಗುವುದು ಇಲ್ಲಿಗೆ ಬಂದು ಬದುಕಲು ತೊಡಗಿದ ಮೇಲೇ. 

‘ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ’ ಎನ್ನುವ ಮಾತಿನ ಅಕ್ಷರಶಃ ಅನುಭವ ಮೈಗೂಡಿದ ಮೇಲೆ ಅನುಭವಗಳು ದಟ್ಟವಾಗತೊಡಗಿದವು. ಕಲಿತ ಪಾಠಗಳು ಗಟ್ಟಿಯಾಗತೊಡಗಿದವು.

ವಿಜಿ ಬೆಂಗಳೂರಿಗೆ ಬಂದಳೇನೋ ಸರಿ. ಬಿಟ್ಟು ಬಂದ ಊರ ಹೊಕ್ಕುಳ ಬಳ್ಳಿಯ ತುದಿ ಇನ್ನೂ ಹಸಿಯಾಗೇ ಇತ್ತು. ಸ್ನೇಹದ ಪರಿಭಾಷೆ ಬೇರೆಯಾಗಿತ್ತು. ಪುನರ್ಮನನ ಮಾಡಿಕೊಳ್ಳುವಾಗ ಅತಿ ಭಾವುಕತೆ ಬಹಳ ಅಪಾಯಕಾರಿ ಎನ್ನುವ ಅರಿವು ಬೇಗನೇ ಮೂಡಿದ್ದರಿಂದ ಹೆಚ್ಚು ಗಾಯಗಳೇನೂ ಆಗಲಿಲ್ಲ. 

ಮೈಸೂರಿನ ಸಂಬಂಧಗಳಲ್ಲಿ ಕೆಲವು ಇಲ್ಲಿಯೂ ಮುಂದುವರೆದಿದ್ದರಿಂದ ವಿಜಿಗೆ ಅವು ಗಟ್ಟಿಯೋ ಟೊಳ್ಳೋ ಗೊತ್ತಾಗದೆ ಯಥಾಸ್ಥಿತಿಯನ್ನು ಒಪ್ಪಿಕೊಂಡು ಸುಮ್ಮನಿದ್ದಳು. ಆದರೆ ಯಾವಾಗ ರಶ್ಮಿ ಇಂದುಮತಿಯ ಫೋಟೊ ಫ್ರೇಮಿನಲ್ಲಿ ಕೂತು ನ್ಯೂಸ್ ಪೇಪರಿನಲ್ಲಿ ಬಂತು ಅಂದಳೋ ಆಗ ವಿಜಿಗೆ ಕೈ ಕಾಲೇ ಆಡದಂತೆ ಆಯಿತು.

ರಶ್ಮಿಯ ಮನೆಗೆ ಹೋಗಲು ಸಂಕೋಚ. ಆಟೊಗೆ ಓಡಾಡಲು ಕೈಯಲ್ಲಿ ದುಡ್ಡಿಲ್ಲ. ಬಸ್ಸಿನ ಕತೆ ಗೊತ್ತೇ ಇಲ್ಲ. ಹೋಗದೇ ಇರಲು ಸಾಧ್ಯವೂ ಇಲ್ಲ. 

‘ನಿಮ್ಮನೆಗೆ ಬರಕ್ಕೆ ಬಸ್ ಎಲ್ಲಿಂದ ಹತ್ತಬೇಕೇ?’ ರಶ್ಮಿಯನ್ನು ಕೇಳಲು ಫೋನ್ ಮಾಡಿದಳು.

‘ಬಸ್ಸಾ? ಐ ಡೋಂಟ್ ನೋ ಮ್ಯಾನ್!’

‘ಆಟೋಗೆ ಬರಕ್ಕೆ ಗೊತ್ತಾಗಲ್ಲ ರಶ್ಮೀ. ಹೆಂಗೆ ಬರೋದು ನಾನು?’

‘ನಮ್ಮಮ್ಮ ಬರಲಿ, ಕೇಳಿ ಹೇಳ್ತೀನಿರು’

ರಶ್ಮಿಯ ಅಮ್ಮ ಸಂಜೆ ಬಂದು ಬಸ್ ನಂಬರು, ಸ್ಟಾಪಿನ ಹೆಸರು ಎಲ್ಲಾ ಹೇಳುವ ಹೊತ್ತಿಗೆ ಇನ್ನೊಂದು ದಿನ ಕಳೆದಿತ್ತು.

‘ಬೇಗ ಬಾರೇ! ಇದ್ಯಾಕೋ ಟೆನ್ಶನ್ ಜಾಸ್ತಿ ಆಗೋ ಥರಾ ಇದೆ’

‘ಅಲ್ಲ ಕಣೇ ಆ ಪೇಪರ್ ಕಟಿಂಗ್ ಅನ್ನ ನಿಮ್ಮಮ್ಮನಿಗೇ ತೋರಿಸೋದಲ್ವಾ? ಅವ್ರೇ ಹೇಳ್ತಿದ್ರು!’

‘ನಿಂಗೊತ್ತಾಗಲ್ಲ ವಿಜಿ. ಅಕಸ್ಮಾತ್ ಅದು ಬ್ಯಾಡ್ ನ್ಯೂಸ್ ಆಗಿದ್ರೆ ನಮ್ಮಮ್ಮನೇ ಮೊದಲು ಹೆದರಿಕೊಂಡು ಕೂತು ಬಿಡ್ತಾರೆ. ಆಮೇಲೆ ಅವರನ್ನ ಸಮಾಧಾನ ಮಾಡೋದು ಕಷ್ಟ!’

‘ಅಯ್ಯೋ! ಅಷ್ಟೊಂದು ಸೆನ್ಸಿಟಿವಾ?’

‘ಸೆನ್ಸಿಟಿವ್ ಅಂತ ಕೇಳ್ತೀಯಲ್ಲ! ನಾವ್ ಚಿಕ್ಕೋರಿದ್ದಾಗ ಪಿಚ್ಚರಿಗೆ ಕರ್ಕೊಂಡು ಹೋಗ್ತಿದ್ರು. ಸಿನಿಮಾ ಶುರು ಆಗೋ ಮೊದಲು ದೇವರ ಫೋಟೊ ಬರುತ್ತಲ್ಲ? ಆ ಟೈಮಲ್ಲಿ ನಾವೇನಾದ್ರೂ ನಮಸ್ಕಾರ ಮಾಡದೇ ಹೋದ್ರೆ ಮನೆಗೆ ಬಂದ ತಕ್ಷಣ ಒದೇನೇ! ಆ ಭಯಕ್ಕೆ ದೇವರಿಗೆ ನಮಸ್ಕಾರ ಮಾಡೋದು ನನಗೆ ಎಷ್ಟು ಅಭ್ಯಾಸ ಆಗಿದೆ ಅಂದ್ರೆ, ಪಾನ್ ಪರಾಗ್ ಚೀಟಿ ಮೇಲೆ ದೇವರ ಫೋಟೊ ಕಂಡ್ರೂ ನಮಸ್ಕಾರ ಮಾಡ್ತೀನಿ’

‘ಎಲ್ಲಿ ಬೇಕಲ್ಲಿ ದೇವರ ಫೋಟೊ ನೋಡಿದ್ರೆ ಭಕ್ತಿ ಬರುತ್ತಾ?’

‘ಕೇರ್ ಮಾಡೋರು ಯಾರು? ತರ್ಕಕ್ಕಿಂತ ಅಭ್ಯಾಸ ಬಲವಾದದ್ದಲ್ವಾ... ಆ ಮಾತೆಲ್ಲಾ ಇರಲಿ. ನೀನು ಬಿಟ್ಟದ್ದು ಬಿಟ್ಟು ಮನೆಗೆ ಬಾ. ನನಗ್ಯಾಕೋ ಭಯವಾಗ್ತಿದೆ’

‘ಅವಳ ಮನೆ ಫೋನ್ ನಂಬರ್ ಇದೆ ಅಲ್ವಾ ನಮ್ಮ ಹತ್ರ? ಫೋನ್ ಮಾಡಿ ಕೇಳ್ಬೇಕಿತ್ತು?’

‘ವಿಜೂ, ತಪ್ಪು ತಿಳ್ಕೋಬ್ಯಾಡ. ಅವಳು ಎಷ್ಟೇ ತಮಾಷೆ ಮಾಡ್ತಿದ್ರೂ ಒಳಗೆ ಒಂದು ಥರಾ ಸಫರ್ ಮಾಡ್ತಾ ಇದ್ಲು ಗೊತ್ತಲ್ವಾ? ಅವಳ ಬೆಂಬಲಕ್ಕೆ ಮನೇಲಿ ಯಾರೂ ಇಲ್ಲ. ಅಲ್ಲದೆ ಅಕಸ್ಮಾತ್ ಅವಳು ಮಾಡಬಾರದ ನಿರ್ಧಾರವನ್ನೇ ಮಾಡಿದ್ಲು ಅಂತ ಇಟ್ಕೋ. ನನ್ನೊಬ್ಬಳ ಕೈಲಿ ಕೇಳಕ್ಕೆ ಆಗಲ್ಲ ಕಣೆ. ಪ್ಲೀಸ್ ಬಾರೇ’

‘ಬರ್ತೀನಿ ಕಣೆ. ಬರಲ್ಲ ಅಂತ ಹೇಳಲಿಲ್ಲ. ನೀನೇ ಮೊದಲು ಕೇಳಿಕೊಂಡಿದ್ರೆ ಒಳ್ಳೇದಿತ್ತು ಅಂತ ಹಂಗೆ ಹೇಳಿದೆ. ಇರ್ಲಿ ಬಿಡು. ಸಾಯಂಕಾಲವೇ ಅಲ್ಲಿ ಇರ್ತೀನಿ’

‘ಹೆಂಗೂ ಬರ್ತೀಯಲ್ಲ, ರಾತ್ರಿ ಇಲ್ಲೇ ಉಳಕೋ’

‘ನೋಡೋಣ. ನಿನ್ನ ಮನೆಯಿಂದ ಹೊರಡೋಕೆ ಹೊತ್ತಾಯ್ತು ಅಂದ್ರೆ ಹಂಗೇ ಮಾಡ್ತೀನಿ’

ವಿಜಿಗೆ ತಲೆ ತುಂಬ ಪ್ರಶ್ನೆಗಳು. ರಶ್ಮಿಗೆ ಸಂಜೆ ಯಾವ ಸತ್ಯ ಅನಾವರಣ ಆಗುತ್ತೋ ಅಂತ ಆತಂಕ. ಧೈರ್ಯಗೆಡುವ ಹುಡುಗಿಯಲ್ಲ ಇಂದುಮತಿ. ಆದರೂ ಜೀವನದ ಸವಾಲುಗಳು ಯಾರನ್ನ, ಯಾವ ಕೆಲಸಕ್ಕೆ ಪ್ರೇರೇಪಿಸುತ್ತದೋ ಯಾರಿಗೆ ಗೊತ್ತು?

ವಿಜಿ ಸಾಯಂಕಾಲ ಬೆಂಗಳೂರಿನ ವಿಶ್ವರೂಪ ದರ್ಶನ ಮಾಡಿಕೊಂಡೇ ರಶ್ಮಿಯ ಮನೆಗೆ ಹೋದಳು. ರಶ್ಮಿ ಚಹಾ ಇತ್ಯಾದಿ ಕೊಟ್ಟು ಉಪಚಾರ ಮಾಡುವ ಗೋಜಿಗೆ ಹೋಗಲಿಲ್ಲ. ಚಪ್ಪಲಿ ಬಿಟ್ಟು ಒಳಗೆ ಹೋಗುತ್ತಿದ್ದಂತೆಯೇ ಮೇಜಿನ ಮೇಲೆ ಇಂದುಮತಿಯ ಫೋಟೊ ಇದ್ದ ಪೇಪರ್ ತುಂಡು ಇವಳನ್ನೇ ಕಾಯುವಂತೆ ತಯಾರಾಗಿ ಕೂತಿತ್ತು.

ಅದು ಮಾತ್ರಾ ಇಂದುಮತಿಯ ಒಂದು ಅಪರೂಪದ ಫೋಟೊ ಅಂತಲೇ ಹೇಳಬೇಕು. ‘ಅಪರೂಪ’ ಯಾಕೆಂದರೆ ಆ ಫೋಟೊದಲ್ಲಿ ಇಂದುಮತಿ ನಗುತ್ತಿದ್ದಳು! ಪೇಪರಿನಲ್ಲಿ ಸ್ವಲ್ಪ ಚಂದಕ್ಕೆ ಅಂತ ಫ್ರೇಮ್ ಹಾಕಿದ್ದೇನೋ ನಿಜವೇ, ಆದರೆ ಅದು ಒಂಥರಾ ಅಲಂಕಾರಕ್ಕೆ ಅಂತ ಹಾಕೋ ಹಾಗೆ ಇತ್ತು.

ಅದರ ಕೆಳಗೆ ದೊಡ್ಡ ಅಕ್ಷರಗಳಲ್ಲಿ ‘ವಿದೇಶ ಪ್ರಯಾಣ’ ಅಂತ ಬರೆದಿತ್ತು. ಬಹಳ ಹಳೇ ಪೇಪರೇನಲ್ಲ ಅದು. ಜಾಸ್ತಿ ಅಂದ್ರೆ ಹದಿನೈದು ದಿನ ಆಗಿರಬೇಕಷ್ಟೆ. ಶುಭ ಹಾರೈಸುವವರ ಪಟ್ಟಿಯಲ್ಲಿ ಅವಳ ಅಪ್ಪ, ಅಮ್ಮನ ಹೆಸರು, ತಂಗಿ ಹಾಗೂ ಅವಳ ಗಂಡನ ಹೆಸರು ಎಲ್ಲವೂ ವಿಶದವಾಗಿ ಪ್ರಿಂಟ್ ಆಗಿತ್ತು. ‘ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ...’ ಅಂತೆಲ್ಲ ಭರ್ಜರಿ ವಿವರಗಳಿದ್ದ ಅಡ್ವರ್ಟೈಸ್‍ಮೆಂಟು ಅದು!

ಅರೆರೆರೆ! ಇಂದುಮತಿ ಫಾರಿನ್ನಿಗೆ ಹೋಗಿದಾಳೆ ಕಣೇ!! ಎಂದು ರಶ್ಮಿ ವಿಜಿ ಇಬ್ಬರೂ ಕೂಗಿ ಕುಣಿದಾಡಿ ಖುಷಿ ಪಟ್ಟರು.

‘ಅವಳು ಹೇಳ್ತಾ ಇರಲಿಲ್ವಾ? ಏನ್ ಬೇಕಾರೂ ಆಗ್ಲಿ. ನಾನ್ ಮಾತ್ರ ಪ್ರಾಣ ಕಳ್ಕೊಳಲ್ಲ ಅಂತ!’ ಸ್ನೇಹಿತೆ ಜೀವಂತವಾಗಿದಾಳೆ ಎನ್ನುವ ನಿರಾಳತೆ ಅನುಭವಿಸುತ್ತಾ ರಶ್ಮಿ ಹುರಿಕಟ್ಟಾಗಿ ಚಹಾ ಮಾಡಲು ಒಳಗೆ ನಡೆದಳು. ಇತ್ತ ವಿಜಿಯ ಕೈಲಿ ಪೇಪರಿನ ತುಂಡು ಇನ್ನೂ ಇತ್ತು. ಅದರಲ್ಲಿ ಇಂದುಮತಿಯ ಮನೆಯ ಫೋನ್ ನಂಬರ್ ಇತ್ತು.

‘ರಶ್ಮಿ! ಒಂದು ಫೋನ್ ಮಾಡ್ತೀನೇ’ ಅಂತ ಕೂತಲ್ಲಿಂದಲೇ ಕೂಗು ಹಾಕಿದಳು. ‘ಧಾರಾಳವಾಗಿ ಮಾಡು’ ಮರು ಉತ್ತರ ಅಷ್ಟೇ ವೇಗವಾಗಿ ಬಂತು. ಇಂದುಮತಿಯ ಮನೆಗೆ ಫೋನ್ ಮಾಡಿದರೆ ಅವಳ ಅಪ್ಪನೇ ಕಾಲ್ ರಿಸೀವ್ ಮಾಡಿದರು.

‘ಅಂಕಲ್, ನಾನು ಇಂದೂ ಫ್ರೆಂಡು. ಅವಳ ಬಗ್ಗೆ ಸ್ವಲ್ಪ ಕೇಳ್ಬೇಕಿತ್ತು’

‘ಕೇಳಮ್ಮ!’

‘ಅಂಕಲ್, ಅವಳು ಯಾವ ದೇಶಕ್ಕೆ ಹೋದ್ಲು?’

‘ಅಮೆರಿಕಾಕ್ಕೆ. ಹೋದರೆ ಅಲ್ಲಿಗೇ ಹೋಗ್ತೀನಂತ ಹಟ ಹಿಡಿದು ಹೋದ್ಲು’

‘ಅಲ್ಲಿ ಯಾರಾದ್ರೂ ಇದಾರಾ ಅಂಕಲ್?’

‘ಇಲ್ಲಮ್ಮ. ಅವಳೇ ಅದೇನೋ ವ್ಯವಸ್ಥೆ ಮಾಡಿಕೊಳ್ತೀನಂತ ಹೋಗಿದಾಳೆ. ನನಗೆ ಬರೀ ದುಡ್ಡು ಕೊಡು ಸಾಕು, ಉಳಿದದ್ದೆಲ್ಲಾ ನಾನು ನೋಡಿಕೋತೀನಂತ ಹೇಳಿದ್ಲು’

‘ಮತ್ತೆ ಹೆಚ್ಚಿನ ವಿದ್ಯಾಭ್ಯಾಸ ಅಂತ ಪೇಪರಲ್ಲಿ ಹಾಕಿಸಿದೀರಾ?’

‘ಅಯ್ಯೋ ಅದನ್ನೂ ಅವಳೇ ಹೇಳಿದ್ದು. ಹೆಚ್ಚಿನ ವಿದ್ಯಾಭ್ಯಾಸ ಅಂತ ಹಾಕಿಸಪ್ಪಾ, ಸ್ವಲ್ಪ ವೆಯ್ಟೇಜ್ ಇರುತ್ತೆ! ಇಲ್ಲಾಂದ್ರೆ ಸುಮ್ನೆ ಟೈಮ್ ಪಾಸಿಗೆ ಹೋಗಿದಾಳೆ ಅನ್ಕೋತಾರೆ ಅಂದ್ಲು’

‘ಓದೋ ಆಸಕ್ತಿ ಇತ್ತಾ ಅವಳಿಗೆ?’

‘ಒಟ್ನಲ್ಲಿ ಇಲ್ಲಿಂದ ಹೋಗಬೇಕಂತ ಇತ್ತು. ನನ್ನ ಕೈಲಾಗಿದ್ದು ನಾನ್ ಮಾಡಿದೀನಿ. ಅವಳ ಹಣೆ ಬರಹ ಇದ್ದಂಗೆ ಅವಳ ಜೀವನ’ ಅಂದರು ಅವಳ ತಂದೆ.

‘ಇರಲಿ ಬಿಡಿ ಅಂಕಲ್. ಅಲ್ಲಿ ಆರಾಮಾಗೇ ಇರ್ತಾಳೆ, ನೀವೇನು ಯೋಚನೆ ಮಾಡಬೇಡಿ’

‘ಆಯ್ತಮ್ಮಾ... ಅವಳು ನನ್ನ ಬಗ್ಗೆ ಕೆಟ್ಟೋನು ಹಂಗೆ ಹಿಂಗೆ ಅಂತೆಲ್ಲಾ ಹೇಳಿರಬೇಕಲ್ಲ? ಅಷ್ಟೆಲ್ಲಾ ಕೆಟ್ಟೋನಲ್ಲಮ್ಮ ನಾನು. ನನ್ನ ಕೈಲಿ ಅವಳಿಗೆ ಬೇಕಾದ ಜೀವನವನ್ನ ಕಟ್ಟಿ ಕೊಡಕ್ಕೆ ಸಾಧ್ಯ ಇಲ್ಲಮ್ಮ. ಮದುವೆ ಆಗ್ತೀನಿ ಅಂದ್ಲು, ಆದರೆ ನಮ್ ಜಾತಿ ಗಂಡು ಬೇಡ ಅಂತಾಳೆ. ನನಗೆ ಡಯಾಬಿಟೀಸು, ಬೀಪಿ ಎಲ್ಲಾ ಇದೆ.

ನನ್ನ ಬಿಸಿನೆಸ್ಸು ಲಾಸಿನಲ್ಲಿ ನಡೀತಿದೆ. ಎಲ್ಲಿಂದ ಜಾತ್ಯಾತೀತ ವರನನ್ನ ತರಲಿ? ಹಂಗೂ ಹುಡುಕ್ಕೊಂಡು ಹೋದೆ. ಸಿಕ್ಕಾಪಟ್ಟೆ ವರದಕ್ಷಿಣೆ ಕೇಳಿದ್ರು...’ ಇಷ್ಟು ಹೇಳುತ್ತಾ ಅವಳ ತಂದೆ ಗದ್ಗದಿತರಾದರು. ಮಗಳ ಜೀವನದ ಆಯ್ಕೆಗಳ ಬಗ್ಗೆ ತಮ್ಮ ಅಸಹಾಯಕತೆ ಅವರನ್ನು ತಿನ್ನಲು ಶುರು ಮಾಡಿತ್ತು.

‘ಈಗೇನು ಬಿಡಿ ಅಂಕಲ್. ಎಲ್ಲಿದಾಳೋ ಚೆನ್ನಾಗೇ ಇರ್ತಾಳೆ’

‘ನಿನ್ ಬಾಯಿ ಹರಕೆಯಿಂದ ಹಂಗೇ ಆಗಲಮ್ಮ. ವಿದೇಶಕ್ಕೆ ಹೋಗೋ ಪ್ಲಾನೂ ಅವಳದ್ದೇ. ವರದಕ್ಷಿಣೆ ದುಡ್ಡು ನನಗೇ ಕೊಡು. ನಾನೇ ಜೀವನ ಸೆಟ್ಲ್ ಮಾಡ್ಕೋತೀನಿ. ಯಾವನದ್ದೋ ಬಾಯಿಗೆ ಹಾಕೋದಕ್ಕಿಂತಾ ನನ್ ಕೈಗೆ ಕೊಡೋದೇ ವಾಸಿ ಅಂತ ಬಹಳ ವಾದಿಸಿ ತೆಗೆದುಕೊಂಡ್ಲು’

‘ಬಹಳ ಒಳ್ಳೆ ಕೆಲಸ ಅಂಕಲ್. ಈಗ ನೀವು ಆರಾಮಾಗಿರಿ... ಆದರೆ ಅದೇನು ಪೇಪರ್ ಅಡ್ವರ್ಟೈಸ್ಮೆಂಟು ಕೊಟ್ಟಿದೀರಿ?’

‘ಅವಳೇ ಒತ್ತಾಯ ಮಾಡಿದ್ಲು. ಕನ್ನಡ ಪೇಪರಿಗೇ ಕೊಡಬೇಕು ಅನ್ನೋದು ಅವಳದ್ದೇ ಹಟ. ಅವಳನ್ನ ರಿಜೆಕ್ಟ್ ಮಾಡಿರೋ ಗಂಡುಗಳೆಲ್ಲಾ ಅದನ್ನ ಓದಿ ಹೊಟ್ಟೆ ಉರ್ಕೊಳ್ಳೀ ಅಂತ ಪ್ಲಾನು ಅವಳದ್ದು. ಈ ನನ್ ಮಕ್ಕಳ ಹೊಟ್ಟೆಗೆ ಬೆಂಕಿ ಹಾಕಕ್ಕೇ ನಾನ್ ಏರೋಪ್ಲೇನ್ ಹತ್ತುತ್ತೀನಪ್ಪಾ ಅಂತಿದ್ಲು’

‘ಓಹೋ! ಹಾಗಾ!’ 

ತನ್ನ ದಾರಿ ತಾನು ನೋಡಿಕೊಳ್ಳುವಾಗಲೂ ಆ ಹುಡುಗಿ ತನ್ನದೊಂದು ಪುಟ್ಟ ಸೇಡನ್ನು ಇಟ್ಟುಕೊಂಡೇ ಮುಂದಿನ ದಾರಿ ನೋಡಿಕೊಂಡಿದ್ದಳು.

ಮಾತು ಮುಗಿದು ಫೋನು ಇಡುವುದಕ್ಕೂ ಚಹಾ, ಬಿಸ್ಕೆಟ್ಟು ರಶ್ಮಿ ವಿಜಿಯ ಹತ್ತಿರ ಬರುವುದಕ್ಕೂ ಸರಿಯಾಯಿತು. ‘ಯಾರಿಗ್ ಮಾಡಿದ್ದೆ ಫೋನು?’ ಅಂತ ರಶ್ಮಿ ಕೇಳಿದಳು.

ಮದುವೆಗೆ ಸಿದ್ಧಳಾಗಿ ನಿಂತಿರುವ ಈ ಹುಡುಗಿ ಮುಂದೆ ಇಂದುಮತಿ ವರದಕ್ಷಿಣೆ ದುಡ್ಡಲ್ಲಿ ಅಮೆರಿಕಾಕ್ಕೆ ಹೋದಳು ಅಂದರೆ ಪರಿಣಾಮ ಏನಾಗಬಹುದು ಅಂತ ಖಚಿತವಾಗಿ ಊಹಿಸೋಕೆ ಆಗದೆ ವಿಜಿ ‘ನಮ್ ಆಫೀಸಿಗೆ. ನಾಳೆ ಲೇಟಾಗ್ ಬರ್ತೀನಿ ಅಂತ ಹೇಳಕ್ಕೆ’ ಅಂತಷ್ಟೇ ಹೇಳಿ ಸುಮ್ಮನಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT