ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸರದ ಮಾರ್ಗ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಸೂಫೀ ಪರಂಪರೆಯಲ್ಲಿ ಸುಹ್ರಾವರ್ದಿ ತಂಡಕ್ಕೊಂದು ವಿಶೇಷ ಸ್ಥಾನವಿದೆ. ಸೂಫೀಸಂತ ಜುನೈಯಾದನಿಂದ ಪ್ರೇರೇಪಿತವಾದ ಈ ತಂಡದ ಸಂಸ್ಥಾಪಕ ಶೇಖ್ ಝಿಯಾಸುದ್ದೀನ್ ಜಾಹಿಬ್ ಸುಹ್ರಾವರ್ದಿ. ಈ ಸುಹ್ರಾವರ್ದಿ ಪರಂಪರೆಗೆ ಸೇರಿದ ಸಂತರದೊಂದು ವಿಶೇಷ. ಅವರು ಆಧ್ಯಾತ್ಮಿಕ ಚಿಂತನೆಯನ್ನು ಬಹುಸುಂದರವಾದ ಪುಟ್ಟ ಕಥೆ ಕವನಗಳಲ್ಲಿ ತಿಳಿಸುತ್ತಾರೆ. ಅಂಥದೊಂದು ಕಥೆ ಯುಸೂಫ್‌ನೆಂಬ ಬಡಗಿಯದು.

ನಝರ ಬೆನ್ ಯುಸೂಫ್ ಒಬ್ಬ ಬಡಗಿ. ಅವನು ಮರಗೆಲಸ ಮಾಡುವುದರೊಂದಿಗೆ ಪ್ರಾಚೀನವಾದ ಪುಸ್ತಕಗಳನ್ನು ಓದುವುದರಲ್ಲಿ ತುಂಬ ಆಸಕ್ತಿ ವಹಿಸುತ್ತಿದ್ದ. ಅವನು ಎಲ್ಲಿಂದಲೋ ತುಂಬ ಹಳೆಯದಾದ ಗ್ರಂಥಗಳನ್ನು ತಂದು ತಂದು ಇಟ್ಟುಕೊಳ್ಳುತ್ತಿದ್ದ. ಅವನ ಕೆಲಸಕ್ಕೆ ಸಹಾಯವಾಗಲೆಂದು ಒಬ್ಬ ಆಳನ್ನು ಇಟ್ಟುಕೊಂಡಿದ್ದ. ತನ್ನ ಯಜಮಾನ ಈ ವಿಚಿತ್ರವಾದ ಪುಸ್ತಕಗಳನ್ನು ಓದುವುದನ್ನು ಕಂಡು ಸೇವಕನಿಗೆ ಆಶ್ಚರ್ಯವಾಗುತ್ತಿತ್ತು.

ಒಂದು ದಿನ ಯುಸೂಫ್ ತನ್ನ ಸೇವಕನನ್ನು ಕರೆದು ಹೇಳಿದ,  ನನಗೆ ಈಗ ವಯಸ್ಸಾಗುತ್ತಿದೆ. ನಾನು ಇಷ್ಟು ದಿನ ಓದಿ ತಿಳಿದುಕೊಂಡದ್ದನ್ನು ಪ್ರಯೋಗಿಸಲು ಇದು ಸಕಾಲ. ಈಗ ನಾನೊಂದು ಪ್ರಯೋಗ ಮಾಡಲು ನಿರ್ಧರಿಸಿದ್ದೇನೆ. ಅದಕ್ಕೆ ನಿನ್ನ ಸಂಪೂರ್ಣ ಸಹಕಾರ ಅಗತ್ಯ. ಈ ಪ್ರಯೋಗ ಫಲಕಾರಿಯಾದಾಗ ನನಗೆ ಮತ್ತೆ ತಾರುಣ್ಯ ಬರುವುದಲ್ಲದೇ ನಾನು ಚಿರಂಜೀವಿಯೂ ಆಗಿಬಿಡುತ್ತೇನೆ .  ಆಯ್ತು ಸ್ವಾಮಿ, ನಾನೇನು ಮಾಡಬೇಕು ?  ಎಂದು ಸೇವಕ ಕೇಳಿದಾಗ ಯುಸೂಫ್ ಪ್ರಯೋಗವನ್ನು ವಿವರಿಸಿದ.

ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೋ. ಹೆಚ್ಚು ಕಡಿಮೆಯಾದರೆ ಅನಾಹುತವಾಗುತ್ತದೆ. ಈ ಖಡ್ಗವನ್ನು ತೆಗೆದುಕೋ. ನನ್ನ ದೇಹವನ್ನು ತುಂಡುತುಂಡಾಗಿ ಕತ್ತರಿಸು. ಆ ತುಂಡುಗಳನ್ನೆಲ್ಲ ಈ ದೊಡ್ಡ ಡಬ್ಬಿಯಲ್ಲಿ ಹಾಕಿಬಿಡು. ಅದರಲ್ಲಿ ನಾನೊಂದು ಮಾಂತ್ರಿಕ ದ್ರವವನ್ನು ತುಂಬಿ ಇಟ್ಟಿದ್ದೇನೆ. ಆ ಡಬ್ಬಿಯನ್ನು ಗಟ್ಟಿಯಾಗಿ ಮುಚ್ಚಿ ನೀನು ಅದರ ಪಕ್ಕದಲ್ಲೇ ಇರತಕ್ಕದ್ದು. ಯಾವ ಕಾರಣಕ್ಕೂ ಅದರ ಮುಚ್ಚಳವನ್ನು ಇಪ್ಪತ್ತೆಂಟು ದಿನಗಳ ಕಾಲ ತೆರೆಯಕೂಡದು. ನನ್ನನ್ನು ಯಾರು ಕೇಳಿದರೂ ಊರಿನಲ್ಲಿಲ್ಲ ಎಂದು ಹೇಳಿಬಿಡು. ಈ ವಿಷಯದ ಬಗ್ಗೆ ಬಾಯಿ ಬಿಡಬೇಡ. ಇಪ್ಪತ್ತೊಂಭತ್ತನೇ ದಿನ ನಾನು ಡಬ್ಬಿಯಲ್ಲಿ ಶಬ್ದ ಮಾಡಿದಾಗ ಮುಚ್ಚಳ ತೆಗೆ. ಆಗ ನಾನು ನವತಾರುಣ್ಯದಿಂದ ಹೊರಬಂದು ಶಾಶ್ವತನಾಗುತ್ತೇನೆ. ಆಗ ನಿನಗೆ ಅಪರಿಮಿತವಾದ ಐಶ್ವರ್ಯವನ್ನು ಕೊಡಿಸುತ್ತೇನೆ . ಎಂದ ಯೂಸಫ್. ಸೇವಕ ಗಾಬರಿಯಾದ. ತನ್ನಿಂದ ಕೊಲ್ಲುವುದು ಸಾಧ್ಯವಿಲ್ಲವೆಂದು ಗೋಗರೆದ. ಆದರೆ ಕೊನೆಗೆ ಯುಸೂಫ್ ಅವನನ್ನು ಒಪ್ಪಿಸಿದ.

ಯಜಮಾನ ಹೇಳಿದಂತೆ ಸೇವಕ ಅವನನ್ನು ಕತ್ತರಿಸಿ ಚೂರು ಚೂರು ಮಾಡಿ ಅವುಗಳನ್ನು ಡಬ್ಬಿಯಲ್ಲಿಯ ದ್ರವದಲ್ಲಿ ಹಾಕಿ ಮುಚ್ಚಳ ಮುಚ್ಚಿ ಕಾಯುತ್ತ ಕುಳಿತ. ಬಡಗಿಯನ್ನು ಕೇಳಿಕೊಂಡು ಯಾರಾದರೂ ಬಂದರೆ ಅವರು ಮನೆಯಲ್ಲಿಲ್ಲ ಎಂದು ಹೇಳಿಬಿಡುತ್ತಿದ್ದ. ಮೊದಮೊದಲು ಜನ ನಂಬಿದರು. ನಂತರ ಕೆಲವರಿಗೆ ಸಂಶಯ ಬರಲು ಪ್ರಾರಂಭವಾಯಿತು. ಸೇವಕ ಮನೆಯಲ್ಲಿಯೇ ಇದ್ದಾನೆ, ಯಾವ ಕೆಲಸವನ್ನು ಮಾಡುತ್ತಿಲ್ಲ. ಅದಲ್ಲದೇ ಯುಸೂಫ್ ಹೀಗೆಲ್ಲ ಬಹುದಿನ ಊರುಬಿಟ್ಟು ಹೋದವನೇ ಅಲ್ಲ.
ಏನಾದರೂ ಅಚಾತುರ್ಯವಾಗಿರಬಹುದೇ? ಈ ಸೇವಕನೇ ಅವನನ್ನು ಕೊಂದು ಹಾಕಿರಬಹುದೇ? ಹೀಗೆಲ್ಲ ಅನುಮಾನಪಟ್ಟು ಜನ ಊರ ಹಿರಿಯರ ಬಳಿಗೆ ಹೋದರು. ಅವರೆಲ್ಲ ಯುಸೂಫ್‌ನ ಮನೆಗೆ ಬಂದು ಸೇವಕನನ್ನು ಬೆದರಿಸಿ ಕೇಳಿದರು. ಆತ ಗಾಬರಿಯಿಂದ ಅವರನ್ನೊಂದು ಬಾರಿ ಡಬ್ಬಿಯನ್ನೊಂದು ಬಾರಿ ನೋಡತೊಡಗಿದ.

ಅವರಿಗೆ ಇವನ ನಡತೆಯಿಂದ ಸಂದೇಹ ಬಂದು ಆ ಡಬ್ಬಿಯನ್ನು ತೆರೆಯಲು ಒತ್ತಾಯಿಸಿದರು. ಅವನಿಗೆ ಏನೂ ತೋಚಲಿಲ್ಲ. ಇಂದಿಗೆ ಕೇವಲ ಇಪ್ಪತ್ತೊಂದು ದಿನಗಳಾಗಿವೆ. ಅವರು ಹೊಡೆಯಲು ಬಂದಾಗ ಗಾಬರಿಯಿಂದ ಮುಚ್ಚಳ ತೆಗೆದ. ಆಗ ಅದರೊಳಗಿಂದ ಅಂಗೈಯಾಕಾರದ ಪುಟ್ಟ ಮನುಷ್ಯನೊಬ್ಬ ಹೊರಗೆ ಹಾರಿಕೊಂಡ. ಅವನು ಯುಸೂಫ್‌ನನ್ನೇ ಹೋಲುತ್ತಿದ್ದ. ಆ ಕುಳ್ಳ ವ್ಯಕ್ತಿ,  ಬಹಳ ಬೇಗವಾಯಿತು, ಬಹಳ ಬೇಗವಾಯಿತು  ಎನ್ನುತ್ತ ದು:ಖದಿಂದ ತಲೆ ಅಲ್ಲಾಡಿಸಿ ಹಾರಾಡುತ್ತ ಕ್ಷಣದಲ್ಲಿ ಗಾಳಿಯಲ್ಲಿ ಕರಗಿಯೇ ಹೋಗಿಬಿಟ್ಟ. ಮುಂದೆ ಯಾರೂ ಯುಸೂಫ್‌ನನ್ನು ನೋಡಲೇ ಇಲ್ಲ.

ಸುಹ್ರಾವರ್ದಿ ಹೇಳುತ್ತಿದ್ದರು,  ಜ್ಞಾನದ ಸಾಧನೆಯಲ್ಲಿ, ಭಕ್ತಿಯ ಗುರಿ ತಲುಪುವಲ್ಲಿ ಯಾವ ಅವಸರವೂ ಬೇಡ. ಅವಸರದಿಂದ ಧ್ಯೇಯ ಅಸಫಲವಾಗುವುದು ಮಾತ್ರವಲ್ಲ ಮಾಡಿದ ಸಾಧನೆಯೂ ಕರಗಿಹೋಗುತ್ತದೆ. ತಾಳ್ಮೆ ಅತ್ಯಂತ ಅವಶ್ಯಕ .
ಹೌದು, ಯಾವ ಸಾಧನೆಗೂ ಅವಸರದ ಮಾರ್ಗ ಸರಿಯಾದದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT