ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿವಾಹಿತ ಮಹಿಳೆಯರಿಗೆ ಅನುದಾನ ತರುವುದೇ ಆಶ್ರಯ?

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ಆಡಳಿತಾರೂಢ ವ್ಯವಸ್ಥೆಯ ಕೃಪಾಕಟಾಕ್ಷ ಮತ್ತೊಮ್ಮೆ ಮಹಿಳೆಯರ ಮೇಲೆ ಬಿದ್ದ ಹಾಗಿದೆ. ತನ್ನ ಸಹಾಯ ಹಸ್ತವನ್ನು ಚಾಚಲು ಈ ಬಾರಿ ಈ ವ್ಯವಸ್ಥೆ ಆಯ್ಕೆ ಮಾಡಿರುವುದು ಅವಿವಾಹಿತ ಮಹಿಳೆಯರನ್ನು.
 
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ರೇಖೆಯ ಕೆಳಗಿರುವ (ಬಿಪಿಎಲ್) ಕುಟುಂಬಗಳ 45-60 ವಯೋಗುಂಪಿನ ಅವಿವಾಹಿತ ಮಹಿಳೆಯರಿಗೆ ಒಂದು ಸಾವಿರ ರೂಪಾಯಿಗಳ ಮಾಸಿಕ ಸಹಾಯಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂಥ ಬಿಪಿಎಲ್ ಕುಟುಂಬಗಳ ಎಲ್ಲ ಅವಿವಾಹಿತ ಮಹಿಳಾ ಸದಸ್ಯರೂ ಈ ಸಹಾಯಧನವನ್ನು ಪಡೆಯಲು ಯೋಜನೆಯಡಿ ಅವಕಾಶವಿದೆ.
 
ಆದರೆ, ಸರ್ಕಾರಿ ಮೂಲಗಳಿಂದ ಬೇರೆ ಯಾವುದಾದರೂ ಸವಲತ್ತನ್ನು ಪಡೆಯುತ್ತಿರುವ ಅಥವಾ ಸರ್ಕಾರಿ ಇಲ್ಲವೇ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ನಿರಾಶ್ರಿತರ ವಸತಿ ಗೃಹಗಳಲ್ಲಿರುವ ಅವಿವಾಹಿತ ಮಹಿಳೆಯರು ಈ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ರಾಜ್ಯ ಸರ್ಕಾರದ ಇತ್ತೀಚಿನ ಈ ಯೋಜನೆ ಮತ್ತೊಮ್ಮೆ ಸರ್ಕಾರಿ ವ್ಯವಸ್ಥೆಯ ಲಿಂಗ ಅಸೂಕ್ಷ್ಮತೆಯನ್ನು ಬಯಲು ಮಾಡಿದೆ.

`ಸ್ತ್ರೀಶಕ್ತಿ~ `ಸ್ವಶಕ್ತಿ~ `ಉಜ್ವಲ~ `ಬಾನಂಗಳದತ್ತ ಬಾಲೆ~ `ಭಾಗ್ಯಲಕ್ಷ್ಮಿ~ `ತಾಳಿ ಭಾಗ್ಯ~-ಹೀಗೆ ಜನಾಕರ್ಷಕ ಹೆಸರುಗಳನ್ನು ಹೊತ್ತು ಹೆಣ್ಣು ಮಕ್ಕಳು ಅಥವಾ ಮಹಿಳೆಯರ `ಬಾಳನ್ನು ಬೆಳಕಾಗಿಸಲು~ ರಾಜ್ಯ ಸರ್ಕಾರದಿಂದ ಆಗಿಂದಾಗ್ಗೆ ಯೋಜನೆಗಳು ಹೊರ ಬೀಳುತ್ತಲೇ ಇರುತ್ತವೆ.

ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಮಹಿಳಾಪರ ಕಾಳಜಿಗಳನ್ನು ತೋರಿಸಿಕೊಳ್ಳಲು ಇಂಥ ಯೋಜನೆಗಳ ಮೊರೆ ಹೊಕ್ಕಿದ್ದು, ಇವುಗಳ ಹಿಂದಿರುವ ಹುನ್ನಾರ ಅಧಿಕಾರವನ್ನು ಗಳಿಸುವುದು ಅಥವಾ ಉಳಿಸಿಕೊಳ್ಳುವುದು ಎಂಬ ಸ್ಪಷ್ಟ ಸಂದೇಶ ಈಗಾಗಲೇ ನಮಗೆ ಲಭಿಸಿದೆ.
 
ಆದರೂ ಜನರನ್ನು ಮರಳುಗೊಳಿಸಲು ಇಂಥ ಜಾಳು ಜಾಳು ಯೋಜನೆಗಳನ್ನು ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿದಿರುವವರು ಅವರ ಮೇಲೆ ಹೇರುತ್ತಲೇ ಇದ್ದಾರೆ.

ಸರ್ಕಾರದಿಂದ ಮೂಡಿ ಬರುವ ಬಹುತೇಕ ಮಹಿಳಾ ಅಭಿವೃದ್ಧಿ ಯೋಜನೆಗಳು ಹೆಣ್ಣನ್ನು ಸಾಂಪ್ರದಾಯಿಕ ಪಾತ್ರ ಸಂಕೋಲೆಗಳಲ್ಲಿ ಬಂಧಿಸುವ ಪ್ರಯತ್ನಗಳೇ ಹೊರತು ಮಹಿಳೆಯರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ರೂಪುಗೊಂಡವಲ್ಲ.
 
ವಿಶೇಷವಾಗಿ ಈ ಯೋಜನೆಗಳು ಸ್ತ್ರೀಯ `ಪತ್ನಿತ್ವ~ ಮತ್ತು `ತಾಯ್ತನ~ದಂಥ ಪಾತ್ರಗಳನ್ನು ವೈಭವೀಕರಿಸುತ್ತವೆ. ಹೆಣ್ಣಿನ ಜೀವನದ ಸಾರ್ಥಕತೆ ಇರುವುದೇ ಆಕೆ ಮದುವೆಯಾಗುವುದರಲ್ಲಿ ಎಂಬ ಭಾವನೆಯನ್ನು ಬಡಿದೆಬ್ಬಿಸಿ, ಅವಿವಾಹಿತ ಸ್ಥಿತಿಯನ್ನು ಅನುಕಂಪದ ದೃಷ್ಟಿಯಿಂದ ನೋಡುವ ಜಾಯಮಾನದಿಂದ ಪ್ರಜಾಸತ್ತಾತ್ಮಕ  ವ್ಯವಸ್ಥೆಯೂ ಹೊರಬಂದಿಲ್ಲವೆನ್ನುವುದು ವಿಷಾದಕರ.

ಹೆಣ್ಣು ತನ್ನ ಜೀವನದ ವಿವಿಧ ಘಟ್ಟಗಳಲ್ಲಿ ತಂದೆ, ಪತಿ ಅಥವಾ ಮಗ-ಒಟ್ಟಿನಲ್ಲಿ ಯಾರಾದರೂ ಒಬ್ಬ ಪುರುಷ ಸಂಬಂಧಿಯ ಆಶ್ರಯದಲ್ಲಿರಬೇಕು ಎಂದು ಶತಮಾನಗಳ ಹಿಂದೆ ಮನು ಸಾರಿದ್ದ.

ಇಂದಿಗೂ ಆ ಹಾದಿಯಲ್ಲೇ ಚಲಿಸುತ್ತಿರುವ `ಆಧುನಿಕ ಮನುವಾದಿಗಳು~ ಹೆಣ್ಣನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಒಪ್ಪಿಕೊಳ್ಳಲು ತಯಾರಿಲ್ಲ. ಹೆಣ್ಣು ಅವಿವಾಹಿತಳಾಗಿ ಉಳಿಯುವುದು ಆಕೆಯ ಆಯ್ಕೆಯೇ ಇರಲಿ, ಪರಿಸ್ಥಿತಿಗಳು ತಂದೊಡ್ಡಿದ್ದ ನಿರ್ಧಾರವೇ ಆಗಿರಲಿ, ಭಾರತೀಯ ಸಮಾಜದಲ್ಲಿ ಆ ಹೆಣ್ಣನ್ನು ಕುರಿತಂತೆ ಇಂದಿಗೂ ಬಹು ಮಂದಿಯ ಧೋರಣೆ ನಕಾರಾತ್ಮಕವಾದುದು.

ಈ ಮನೋಪ್ರವೃತ್ತಿಯಿಂದ ಅನೇಕ ರಾಜಕಾರಣಿಗಳು ಹಾಗೂ ಅಧಿಕಾರಶಾಹಿ ವರ್ಗ ಕೂಡ ಹೊರ ಬಂದಿಲ್ಲ ಎನ್ನುವುದಕ್ಕೆ ಆಡಳಿತಾರೂಢ ವ್ಯವಸ್ಥೆ ಆಗಾಗ್ಗೆ ರೂಪಿಸುವ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳೇ ನಿದರ್ಶನ.

ಅವಿವಾಹಿತ ಸ್ಥಿತಿ ಎಂದಾಕ್ಷಣ `ಆಶ್ರಯ ಇಲ್ಲದ ಸ್ಥಿತಿ~ ಎಂಬ ಸಾಮಾಜಿಕ ಮನಃಸ್ಥಿತಿಯೇ ವಿವಾಹ ಎನ್ನುವ ಸಂಸ್ಥೆಯ ವೈಭವೀಕರಣಕ್ಕೆ ಪ್ರಮುಖ ಕಾರಣ. ಮಗಳಿಗೆ ಮದುವೆ ಮಾಡಿ ಹೊಸಿಲನ್ನು ದಾಟಿಸಿ ಬಿಟ್ಟರೆ ತಮ್ಮ ಜವಾಬ್ದಾರಿ ಮುಗಿದಂತೆ ಎಂಬ ಭ್ರಮೆಯಲ್ಲಿ ತೇಲುತ್ತಿರುವ ಅನೇಕ ಪೋಷಕರು ವರನಾಗುವವನ ಬಗ್ಗೆ ಸೂಕ್ತ ತಿಳಿವಳಿಕೆಯನ್ನು ಕೂಡ ಪಡೆಯದೆ ವಿವಾಹ ಸಂಬಂಧವನ್ನು ಏರ್ಪಡಿಸಲು ಮುಂದಾಗುತ್ತಾರೆ.

ಹೆಣ್ಣಿನ ಬದುಕನ್ನು ವಿವಾಹ ಎಂಬ ಸಾಂಸ್ಥಿಕ ಚೌಕಟ್ಟಿನಲ್ಲಿ ಬಂಧಿಸಿ ಬಿಟ್ಟರೆ ಆಕೆಯ ಜೀವಕ್ಕೆ ಒಂದು ನೆಲೆ ದೊರೆತ ಹಾಗೆ ಎನ್ನುವುದು ಬಹು ಪ್ರಚಲಿತವಾದ ನಂಬಿಕೆ.
 
ಬಡವ ಶ್ರೀಮಂತರಾದಿಯಾಗಿ ಎಲ್ಲ ವರ್ಗಗಳ ಜನರಲ್ಲೂ ಈ ನಂಬಿಕೆ ಭದ್ರವಾಗಿ ಬೇರೂರಿರುವುದರಿಂದಲೇ ವಿವಾಹಕ್ಕೆ ಅತಿಯಾದ ಪ್ರಾಶಸ್ತ್ಯವನ್ನು ನೀಡಿರುವುದು. `ಹೆಣ್ಣಿನ ಜೀವನದಲ್ಲಿ ಮದುವೆ ಅನಿವಾರ್ಯವಾದ ಒಂದು ಘಟ್ಟ; ಅದರಿಂದ ಆಕೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ~ ಎಂದು ಮಹಿಳೆಯರೂ ಸೇರಿದಂತೆ ಬಹುಸಂಖ್ಯಾತ ಜನ ನಂಬಿದ್ದಾರೆ.

ಈ ಸಮಾಜದಲ್ಲಿ ವಿವಾಹ ಎನ್ನುವ ಸಂಬಂಧಕ್ಕೆ ಎರಡು ಗುರಿಗಳನ್ನು ನಿಗದಿಪಡಿಸಲಾಗಿದೆ. ಮೊದಲನೆಯದು ಹೆಣ್ಣಿನ ಜವಾಬ್ದಾರಿಯನ್ನು ಆಕೆಯ ಪೋಷಕರಿಂದ ಪತಿಗೆ ವರ್ಗಾಯಿಸುವುದು.

ಎರಡನೆಯದು ಆಕೆಗೆ ಗಂಡನ ಆಶ್ರಯವನ್ನು ಒದಗಿಸಿ ತಾನು ಸುರಕ್ಷಿತ ಎಂಬ ಭಾವನೆಯನ್ನು ಬಿತ್ತುವುದು. ದಿನನಿತ್ಯ ನಾವು ಕಾಣುತ್ತಿರುವ, ಕೇಳುತ್ತಿರುವ ಅನೇಕ ವಿವಾಹಿತ ಹೆಣ್ಣು ಮಕ್ಕಳ ಅನುಭವಗಳು ಈ ಎರಡು ಆಶಯಗಳನ್ನು ಹುಸಿ ಮಾಡಿದ್ದರೂ ಗಂಡು ಹೆಣ್ಣಿಗೆ ಆಶ್ರಯದಾತ ಎಂಬ ಮನಃಸ್ಥಿತಿಯಿಂದ ನಮ್ಮ ಸಮಾಜ ಹೊರಬಂದಿಲ್ಲ.

ಮೊನ್ನೆ ತಾನೇ ಮೈಸೂರಿನಲ್ಲಿ ನಡೆದ ಒಂದು ಘಟನೆ ವಿವಾಹ ಎಂಬುದು ಒಂದು ಹೆಣ್ಣಿನ ಜೀವನದಲ್ಲಿ ಎಷ್ಟು ಅನಿವಾರ್ಯ ಎಂದು ಪರಿಗಣಿತವಾಗುತ್ತದೆ ಎಂಬ ಧೋರಣೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು.

ವಿವಾಹದ ಮುನ್ನಾದಿನ ಎಲ್ಲ ವಿಧಿಗಳಲ್ಲೂ ಭಾಗವಹಿಸಿದ್ದ ವರ ಮಧ್ಯರಾತ್ರಿಯ ವೇಳೆ ಮಂಟಪದಿಂದ ಕಾಣೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಹಜವಾಗಿಯೇ ಆ ಹೆಣ್ಣು ಹಾಗೂ ಆಕೆಯ ಕುಟುಂಬದವರಿಗೆ ದೊಡ್ಡ ಆಘಾತವಾಗಿ ಪರಿಣಮಿಸಿತ್ತು.

ಇನ್ನೇನು ಆ ಯುವತಿಯ ಬಾಳು ಅಂಧಕಾರದ ಕೂಪದಲ್ಲಿ ಮುಳುಗೇ ಹೋಯ್ತು ಎಂಬ ತೀರ್ಮಾನಕ್ಕೆ ಎಲ್ಲರೂ ತಲುಪುವಂತೆ ಕಂಡಾಗ ಆಕೆಯ ಬಂಧುವರ್ಗದ ಯುವಕನೊಬ್ಬ ಅವಳನ್ನು ವಿವಾಹವಾಗಲು ಮುಂದೆ ಬಂದದ್ದರಿಂದ ಆ ಸಮಾರಂಭ ದೇವಸ್ಥಾನವೊಂದರಲ್ಲಿ ನಡೆದೇ ಹೋಯ್ತು.

ಈ ಇಡೀ ಪ್ರಕರಣ ಸುಖಾಂತ್ಯ ಕಂಡಿತು ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿತವಾಗಿದ್ದನ್ನು ನೋಡಿದ್ದೇವೆ. ಆ ಯುವಕನಂತೂ ಪದೇ ಪದೇ `ನಾನು ಆಕೆಗೆ ಬಾಳು ಕೊಡಲು ನಿರ್ಧರಿಸಿದೆ~ ಎಂದು ಹೇಳುತ್ತಿದ್ದುದನ್ನು ನೋಡಿದಾಗ `ವಿವಾಹ ಒಂದು ಹೆಣ್ಣಿನ ಜೀವನದ ಅಂತಿಮ ಗುರಿ, ಆಕೆಗೆ ಆ `ಭಾಗ್ಯ~ವನ್ನು ನೀಡುವ ಪುರುಷ ಅವಳಿಗೆ ಒಂದು ದೊಡ್ಡ ಉಪಕಾರವನ್ನು ಮಾಡುತ್ತಿದ್ದಾನೆ~ ಎಂಬ ಭಾವನೆ ಅತ್ಯಂತ ಪ್ರಬಲವಾಗಿದ್ದನ್ನು ಅಲ್ಲಿ ಕಾಣಬಹುದಾಗಿತ್ತು.

ಒಟ್ಟಿನಲ್ಲಿ ಈ ಘಟನೆ ನೀಡಿದ ಸಂದೇಶವೆಂದರೆ, ವರ ಯಾರಾದರೂ ಸರಿ, ಮದುವೆ ಎಂಥ ಸಂದರ್ಭಗಳಲ್ಲಾದರೂ ನಡೆಯಲಿ ಹೆಣ್ಣಿಗೆ `ವಿವಾಹಿತೆ~ ಎಂಬ ಹಣೆಪಟ್ಟಿಯನ್ನು ತಗಲಿಸಿ ಬಿಟ್ಟರೆ ಆಕೆ `ಸುರಕ್ಷಿತೆ~ ಎಂಬುದು.

ಹೆಣ್ಣು ಅವಿವಾಹಿತೆ ಎಂದಾಕ್ಷಣ ಆಕೆಯನ್ನು ಕುರಿತ ಬಹು ಜನರ ಧೋರಣೆ `ಅಯ್ಯೋ ಪಾಪ~ ಎನ್ನುವಂತಹುದು. ಇಲ್ಲ, ಆಕೆಗೆ ಅನುಕಂಪ ತೋರಿಸಲಾಗುತ್ತದೆ ಅಥವಾ ಪಾಪ ಪ್ರಜ್ಞೆಯಿಂದ ಅವಳು ನರಳುವ ಹಾಗೆ ಮಾಡುತ್ತದೆ ಈ ಸಮಾಜ.

ಅವಿವಾಹಿತ ಸ್ಥಿತಿಯ ಜೊತೆಗೆ ಆರ್ಥಿಕ ದುಃಸ್ಥಿತಿಯೂ ಸೇರಿ ಬಿಟ್ಟರೆ ಹೆಣ್ಣನ್ನು ಮತ್ತಷ್ಟು ಅಂಚಿಗೆ ತಳ್ಳಿ ಆಕೆಯನ್ನು ನಿರಾಶ್ರಿತರ ಪಟ್ಟಿಗೆ ಸೇರಿಸಲಾಗುತ್ತದೆ. ಅವಿವಾಹಿತ ಬಡ ಮಹಿಳೆಯರಿಗೆ ಸಹಾಯಧನ ನೀಡುವ ಸರ್ಕಾರದ ನಿರ್ಧಾರವನ್ನು ಕೂಡ ನಾವು ಪ್ರಾಯಶಃ ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.

ಸರ್ಕಾರದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವ್ಯವಸ್ಥೆ ಆಯ್ಕೆ ಮಾಡಿರುವುದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ರಾಜ್ಯದ ವಿವಿಧ ಭಾಗಗಳಲ್ಲಿರುವ ಇಲಾಖಾ ಕಚೇರಿಗಳಲ್ಲಿ ಈಗಾಗಲೇ ಅರ್ಜಿಗಳು ಬಂದು ಸೇರುತ್ತಿವೆ ಎಂದು ತಿಳಿದು ಬಂದಿದೆ. ಯೋಜನೆಯೊಂದು ಘೋಷಿತವಾಯಿತು ಎಂದರೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗುವುದು ಸಹಜವೇ.
 
ಆದರೆ ಇಂಥ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಂಬಂಧಪಟ್ಟವರು ಸ್ಪಷ್ಟ ನಿಯಮಗಳನ್ನಾಗಲಿ, ಕ್ರಿಯಾ - ಯೋಜನೆಯನ್ನಾಗಲೀ ರೂಪಿಸಿದ್ದಾರೆಯೇ? ಇದರ `ಫಲಾನುಭವಿ~ಗಳು ಎಂದು ಕರೆಸಿಕೊಳ್ಳುವ ವ್ಯಕ್ತಿಗಳನ್ನು ಗುರುತಿಸಲು ಮಾನದಂಡಗಳನ್ನು ನಿಗದಿಪಡಿಸಲಾಗಿದೆಯೇ? ರೂಪಿಸಿದ್ದಲ್ಲಿ ಅವುಗಳನ್ನು ದೃಢೀಕರಿಸಲು ಬಳಸುವ ದಾಖಲೆಗಳಾವುವು ಹಾಗೂ ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವವರು ಯಾರು? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವವರು ಯಾರು?

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಮಹಿಳೆಯರು ಮೂರು ಸಂಗತಿಗಳನ್ನು ಸಾಬೀತುಪಡಿಸಬೇಕು. ಅವುಗಳೆಂದರೆ `ವಯಸ್ಸು~, `ಅವಿವಾಹಿತ ಸ್ಥಿತಿ~ ಮತ್ತು `ಬಡತನ~.
 
ಆದರೆ ಎಷ್ಟು ಮಂದಿ ಗ್ರಾಮೀಣ ಮಹಿಳೆಯರು ಸಂಬಂಧಿಸಿದ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ? ವಯಸ್ಸು ಮತ್ತು ಬಿಪಿಎಲ್ ದೃಢೀಕರಣ ಪತ್ರಗಳೇನೋ ಅನೇಕರ ಬಳಿ ಇರುವ ಸಾಧ್ಯತೆಯಿದೆ.
 
ಆದರೆ ವಿವಾಹ ನೋಂದಣಿ ಇಂದಿಗೂ ಕಡ್ಡಾಯವಾಗಿ ಪಾಲಿಸಲ್ಪಡದಿರುವ ಪರಿಸ್ಥಿತಿಯಲ್ಲಿ ಈ ಯೋಜನೆಯ ದುರುಪಯೋಗ ಮಾಡಿಕೊಳ್ಳಲು ವಿವಾಹಿತರನ್ನು ಅವಿವಾಹಿತರು ಎಂದು ಬಿಂಬಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಬಳಸಿಕೊಳ್ಳಲು ಸತ್ತವರನ್ನು ಬದುಕಿರುವಂತೆ ಅಥವಾ ಬದುಕಿರುವವರನ್ನು ಸತ್ತಂತೆ ಬಿಂಬಿಸುವ ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿಸುವ ಭ್ರಷ್ಟ ವ್ಯವಸ್ಥೆಗೆ ವಿವಾಹಸ್ಥಿತಿಯನ್ನು ಕುರಿತಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಸಮಸ್ಯೆಯೇ ಅಲ್ಲ.

ಈ ಯೋಜನೆಯಿಂದ ಮಹಿಳೆಯರು ಎರಡು ಬಗೆಗಳಲ್ಲಿ ಶೋಷಣೆಗೆ ಒಳಗಾಗುವ ಸಾಧ್ಯತೆಯಿದೆ. ಮೊದಲನೆಯದಾಗಿ ಅವರ ಕುಟುಂಬ ಮೂಲಗಳಿಂದಲೇ ಈ ಹಣದ ಆಸೆಗಾಗಿ ವೈವಾಹಿಕ ಸ್ಥಿತಿಯನ್ನು ಮುಚ್ಚಿ ಯೋಜನೆಯ ಫಲವನ್ನು ಪಡೆಯಲು ಮಹಿಳೆಯನ್ನು ಬಲಾತ್ಕಾರಕ್ಕೆ ಒಳಪಡಿಸಬಹುದು.
 
ಎರಡನೆಯದಾಗಿ ತಾನು ಅವಿವಾಹಿತೆ ಎಂದು ಸಾರಿಕೊಂಡು, ಆ ಸ್ಥಿತಿಯನ್ನು ದೃಢೀಕರಣಗೊಳಿಸಲು ಹೆಣ್ಣು ಅನೇಕ ಬಗೆಯ ಹಿಂಸೆಗಳನ್ನು, ಅವಮಾನಗಳನ್ನು ಎದುರಿಸಬೇಕಾದ ಸಂದರ್ಭಗಳು ಸೃಷ್ಟಿಯಾಗಬಹುದು.

ಅವಿವಾಹಿತ ಹೆಣ್ಣು ಮಕ್ಕಳಿಗೆ ಧನಸಹಾಯ ಒದಗಿಸಬೇಕೆನ್ನುವ ಯೋಜನೆಯ ಆಯೋಜಕರು ಮೂಲಭೂತವಾಗಿ ಯೋಚಿಸಬೇಕಾದ  ಮತ್ತೊಂದು ವಿಷಯವಿದೆ. ಹೆಣ್ಣಿಗೆ ಆಶ್ರಯ ಇಲ್ಲದ ಸ್ಥಿತಿ ಎನ್ನುವುದು ಕೇವಲ ಅವಿವಾಹಿತ ಸ್ಥಿತಿ ಸೃಷ್ಟಿಸುವ ಪರಿಸ್ಥಿತಿಯಲ್ಲ.

ಬಡವರೇ ಆಗಲಿ ಶ್ರೀಮಂತರೇ ಆಗಲಿ, ಎಲ್ಲ ವಿವಾಹಿತ ಹೆಣ್ಣುಮಕ್ಕಳೂ ಸುರಕ್ಷಿತವಾಗಿದ್ದಾರೆ ಎಂದು ಯಾರಾದರೂ ತೀರ್ಮಾನಿಸಿದ್ದರೆ ಅದಕ್ಕಿಂದ ಹುಸಿಯಾದ ನಂಬಿಕೆ ಮತ್ತೊಂದಿಲ್ಲ.

ಎಲ್ಲ ಮಹಿಳೆಯರನ್ನೂ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಿ ಸ್ವಾಭಿಮಾನದ ಬದುಕು ನಡೆಸುವಂಥ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಲಿ. ಇಲ್ಲದಿದ್ದರೆ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕಾದರೂ ಆಸ್ಪದ ಮಾಡಿಕೊಡಲಿ.
 
ಮುಂದಾಲೋಚನೆಯಿಲ್ಲದೆ ಕೇವಲ ಜನಪ್ರಿಯತೆಯ ಜಾಡನ್ನು ಹಿಡಿದು ಇಂಥ ಕಾರ್ಯಕ್ರಮಗಳನ್ನು ರೂಪಿಸುತ್ತಾ ಹೋದರೆ ಒಂದೆಡೆ ಸಾರ್ವಜನಿಕ ಬೊಕ್ಕಸ ಬರಿದಾಗುತ್ತದೆ, ಮತ್ತೊಂದೆಡೆ ಮಹಿಳೋದ್ಧಾರದ ಹೆಸರಿನಲ್ಲಿ ಮಹಿಳೆಯರ ಶೋಷಣೆಗೆ ಮತ್ತೊಂದು ಬಾಗಿಲು ತೆರೆದುಕೊಳ್ಳುತ್ತದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT