ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಳಿಗೆ ನಾಲ್ಕೂ ಜನ ಬಾಯ್ ಫ್ರೆಂಡ್ಸಾ?

Last Updated 14 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಾವೆಲ್ಲಾ ಹರೆಯದ ಹುಡುಗಿಯರು ಇಲ್ಲಿ ಇರುವಾಗಲೂ ಮೇಲಿನ ಮನೆ ಹುಡುಗರಲ್ಲಿ ಒಬ್ಬ ಬೇರೆ ಹುಡುಗಿಯನ್ನು ಮೆಚ್ಚಿದ್ದ ಎನ್ನುವುದು ಗಂಟಲಲ್ಲಿ ಸಿಕ್ಕಿಕೊಂಡ ಮುಳ್ಳಿನಂತಾಗಿತ್ತು. ಕೂಗಿದರೆ ನೋವು ಜಾಸ್ತಿ, ಸುಮ್ಮನಿದ್ದರೆ ಸಂಕಟ ಎದೆಯೊಳಕ್ಕೆ ಇಳಿಯುತ್ತಿತ್ತು. ಆ ಹುಡುಗರು ತಮ್ಮನ್ನು ನೋಡಲಿಲ್ಲ ಎನ್ನುವುದು ಹೆಣ್ತನದ ಅಸ್ಮಿತೆಯ ಪ್ರಶ್ನೆಯಾಗಿ; ಇನ್ನೂ ಸರಿಯಾಗಿ ಹೇಳಬೇಕೆಂದುಕೊಂಡರೆ ಈ ಹರೆಯದ ಹುಡುಗಿಯರ ಸ್ವಾಭಿಮಾನದ ಪ್ರಶ್ನೆಯಾದರೂ ಸೂಸನ್ ವ್ಯಕ್ತಪಡಿಸಿದಷ್ಟು ದಿಗ್ಭ್ರಮೆಯನ್ನು ಚಿತ್ರಾ ಅಥವಾ ವಿಜಿ ವ್ಯಕ್ತಪಡಿಸಲಿಲ್ಲ. ಅದಕ್ಕೆ ಅವರವರ ಸಾಮಾಜಿಕ ನೆಲೆಯೂ ಕಾರಣವಿರಬಹುದು.

ಆ ವಾತಾವರಣವೇ ವಿಚಿತ್ರವಾಗಿತ್ತು. ಹರೆಯದ ಹುಡುಗಿಯರಿಗೆ ಪ್ರಣಯದ ಚೂರೂ ಪಲ್ಲಟಗಳಿಲ್ಲದೆ ತಮ್ಮ ಹರೆಯ ಸೋರಿ ಹೋಗುತ್ತಿರುವ ಚಿಂತೆ. ಇತ್ತ ಸರಳಾ-ಜಯಾ ಥರದ ಹೆಣ್ಣುಮಕ್ಕಳಿಗೆ ಪ್ರಣಯವೆಂಬ ‘ಸುಂದರ ಕಲ್ಪನೆ’ ವಾಸ್ತವದಲ್ಲಿ ಹೆಚ್ಚು ಬಾಳಿಕೆ ಬಾರದ, ಆದರೆ ಅತೀ ಹೆಚ್ಚು ಬೆಲೆ ಬೇಡುವ ವಸ್ತುವಿದ್ದಂತೆ ಎನ್ನುವ ಅಭಿಪ್ರಾಯ.

‘ಹಾಗ್ನೋಡಿದ್ರೆ ರೊಮಾನ್ಸು ಪಿಚ್ಚರಲ್ಲೇ ಸರಿ ಕಣ್ರೀ. ನಿಜಜೀವನದಲ್ಲಿ ಹೀಗೆಲ್ಲಾ ಆಗಲ್ಲ ಅಂತ ಗೊತ್ತಾದಾಗ ಎಂಥಾ ಡಿಸಪಾಯಿಂಟ್‌ಮೆಂಟ್ ಆಗುತ್ತಲ್ಲ! ಸುಮ್ನೆ ಕಷ್ಟ ಪಟ್ಟು ಕಾಸು ಕೂಡಿಟ್ಟು ತಗೊಂಡ ಬಂಗಾರ-ವಜ್ರ ಬಾಂಡು-ಶೇರು ಬ್ಯಾಂಕಿನಲ್ಲಿಟ್ಟು ಸಮಾಧಾನ ಪಡ್ತೀವಲ್ಲ, ಹಾಗೆ. ಮದುವೆ ಆದ ಮೇಲೆ ರೊಮಾನ್ಸೂ-ವಯಸ್ಸೂ ಎರಡೂ ಬೆಳಿಗ್ಗೆದ್ದು ಈರುಳ್ಳಿ ಕತ್ತರಿಸೋದ್ರಲ್ಲೇ ಕರಗಿ ಹೋಗುತ್ತೆ.

ಇವಕ್ಕೇನು ಗೊತ್ತು ಚಿಕ್ ಹುಡುಗೀರಿಗೆ’ ತಮ್ಮ ವಯಸ್ಸಿನ ಭ್ರಮನಿರಸನವನ್ನೂ ಅತೃಪ್ತಿಯನ್ನೂ ಒಂಥರಾ ಪ್ರೌಢಿಮೆಯ ಸಂಕೇತವಾಗಿ ಬಳಸಿ-ಬೆಳೆಸುತ್ತಾ ಉಸಿರೆಳೆದುಕೊಂಡು ದಿನಗಳನ್ನು ಕಳೆಯುತ್ತಿದ್ದರು. ನಡುವಯಸ್ಸಿನ ವಾಸ್ತವ ದರ್ಶನಕ್ಕೆ ಒಂಥರಾ ತೂಕ, ಅಸಹಾಯಕತೆ, ವಯಸ್ಸಿನ ಇತ್ತಲೂ ಇಲ್ಲದ, ಅತ್ತಲೋ ಅಲ್ಲದ ಡೋಲಾಯಮಾನ ಸ್ಥಿತಿ. ಹರೆಯದ ‘ಡೋಂಟ್ ಕೇರ್’ ಮನಃಸ್ಥಿತಿ ಈಗೊಂಥರ ತಾನೇ ಸೃಷ್ಟಿಸಿಕೊಂಡ ಚಕ್ರವ್ಯೂಹವಾಗಿ, ಒಂದು ಪರ್ಯಾಯ ಸಾಮಾಜಿಕ ವ್ಯವಸ್ಥೆಯಾಗಿ ಅದರಿಂದಲೂ ಹೊರಬರಲು ಒಂದು ಒದ್ದಾಟ ನಿರಂತರವಾಗಿ ನಡೆಯುವಂತೆ ಕಾಣುತ್ತಿತ್ತು.

ಸರಳಾ, ಜಯಾ ಇತ್ತ ಸಮಾಜದ ಕಟ್ಟುಪಾಡುಗಳನ್ನು ಒಪ್ಪದೆ ಅತ್ತ ತಮ್ಮ ಕಲ್ಪನೆಯ ಜೀವನವನ್ನೂ ಮಾಡಲಾಗದೆ ದಿನಗಳು ಉರುಳಿ ಹೋಗುತ್ತಿರುವುದನ್ನು ಕಂಡು ಆತಂಕಕ್ಕೆ ಒಳಗಾಗುತ್ತಿದ್ದರು. ತಮಗಿಂತ ಚಿಕ್ಕ ಹುಡುಗಿಯರು ಎಷ್ಟು ಬಿಡುಬೀಸಾಗಿ ಹುಡುಗರು, ರೊಮಾನ್ಸು, ಲವ್ವು, ಸೆಕ್ಸು ಅಂತೆಲ್ಲ ಯೋಚಿಸುತ್ತಿದ್ದರೆ ತಮ್ಮ ಕಾಲದಲ್ಲಿ ಯಾಕಷ್ಟು ಸ್ವಾತಂತ್ರ್ಯ ಇರಲಿಲ್ಲ ಅಂತ ಬೇಸರ ಪಟ್ಟುಕೊಳ್ಳುತ್ತಿದ್ದರು. ಆದರೆ ತಮ್ಮ ಈ ಅಸಹನೆ ತಮಗಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಎಂದೂ ಉರುಳಾಗದಿರಲಿ ಅಂತ ಕೊಂಕು ಮಾತುಗಳನ್ನು ಮಾತ್ರ ಎಂದಿಗೂ ಆಡುತ್ತಿರಲಿಲ್ಲ.

ಇತ್ತ, ಅದೇ ಮಟ್ಟದ್ದಲ್ಲದಿದ್ದರೂ ಇನ್ನೊಂದು ಮಟ್ಟದ ಆತಂಕ ಈ ಚಿಕ್ಕ ಹುಡುಗಿಯರನ್ನು ಬಾಧಿಸುತ್ತಿದ್ದುದು ಸುಳ್ಳಲ್ಲ. ತಮ್ಮ ಮುಂದಿದ್ದ ಇಂಗ್ಲೀಷು ಬಲ್ಲ, ಅಮೆರಿಕ-ಫ್ರಾನ್ಸು-ಯುರೋಪು ಕಂಡ ಹುಡುಗಿಯರು. ಬೆಂಗಳೂರಿನ ಮಲ್ಲೇಶ್ವರಂ-ಸದಾಶಿವನಗರ-ಕೋರಮಂಗಲ-ಜಯನಗರ-ಬಸವನಗುಡಿಯ ಸ್ಥಿರವಾದ ‘ಕ್ಲಾಸ್’ ಬದುಕಿನ ‘ಸ್ಮಾರ್ಟ್’ ಹುಡುಗಿಯರು.

ಅತ್ತ ಮದರಾಸಿನ ಕಾಲೇಜುಗಳಿಂದ ಬಂದ ಚಿತ್ರಾ ಥರದವರಿಗೆ ಬೆಂಗಳೂರು ಒಂಥರಾ ಇತ್ತ ದರಿ-ಅತ್ತ ಪುಲಿ ಎನ್ನುವ ಭೂಮಿಕೆಯಾಗಿತ್ತು. ಇತ್ತ ಕರ್ನಾಟಕದ ಸಣ್ಣ ಸಣ್ಣ ಊರುಗಳಿಂದ ಬಂದು ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಬಂದ ಹುಡುಗಿಯರಿಗೆ ಮೊದಲಿಗೆ ತಮ್ಮನ್ನು ಹಿಡಿದಿಟ್ಟ ಆ ‘ನಮ್ಮೂರು’ ಎಂಬ ಆತ್ಮೀಯತೆಯೇ ಕಾಲಿಗೆ ಕಟ್ಟಿದ ಉಕ್ಕಿನ ಗುಂಡು, ಮೂಗಿಗೆ ಕಟ್ಟಿದ ಕವಡೆ, ಎದೆಯ ಮೇಲಿಟ್ಟ ಮಮತೆಯ ಭಾರ. ಉಸಿರೆಳೆದುಕೊಳ್ಳಲೂ ಆಗದು, ಮುಂದಕ್ಕೆ ಕಾಲಿಡಲೂ ಆಗದು, ಹಾಗಂತ ಸುಮ್ಮನೆ ಜೀವನ ಮುಗಿಸಲೂ ಆಗದು.

ದುಡಿಯುವ ಅನಿವಾರ್ಯತೆಯನ್ನು ಆಯ್ಕೆಯ ವಿಷಯವಾಗಿಯೋ ಅಥವಾ ಅನಿವಾರ್ಯವಾಗಿಯೋ ಅಪ್ಪಿಕೊಂಡು ಬಂದ ಹುಡುಗಿಯರಿಗೆ ಮೊದಲು ಕಣ್ಣಿಗೆ ರಾಚುತ್ತಿದ್ದುದು ತಮ್ಮಲ್ಲಿದ್ದ ಆತ್ಮವಿಶ್ವಾಸದ ಕೊರತೆ. ಹಾಗಂತಲೇ ಸ್ವಚ್ಛಂದವಾಗಿ ತೋಳಿಲ್ಲದ ಬಟ್ಟೆ ತೊಟ್ಟು ಎದೆ ಸೆಟೆಸಿ ಖುಲ್ಲಂ ಖುಲ್ಲಾ ನಕ್ಕು ಕಣ್ಣಿಗೆ ರಾಚುವಂತೆ ಹುಡುಗರ ಜೊತೆ ‘ಮಚಾ’ ‘ವಾಟ್ ಡಾ’ ಎನ್ನುತ್ತಾ ಓಡಾಡಿಕೊಂಡಿರುತ್ತಿದ್ದ ಹುಡುಗಿಯರು ಬೆರಗು ಹುಟ್ಟಿಸುತ್ತಿದ್ದರು.

ತಮ್ಮೂರಲ್ಲಾದರೆ ಬರೀ ಧೈರ್ಯ ಮಾತ್ರ ಪೈಪೋಟಿ. ಅಂದರೆ, ಒಂದು ಲೈನ್ ಆಫ್್ ಕಂಟ್ರೋಲ್ ದಾಟಿ ಬಿಟ್ಟರೆ ಮತ್ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ‘ಅಕಿ ಬಿಡಪಾ... ಅಂಕಿ ಇಲ್ಲ... ಆಜ್ಞಿ ಇಲ್ಲ... ಒಂದರ ಮಾತ್ ಕೇಳಂಗೈತಾ ಅವ್ರ್ ಅಪ್ಪ ಅವ್ವಂದು? ಅವ್ರೂ ಪಾಪ್ ಹೇಳಿ ಹೇಳಿ ಸಾಕಾಗ್ಯಾರ... ಇಂತಾ ಮಕ್ಳು ಹುಟ್ಟಿದ್ರ ಅವ್ರರೆ ಏನ್ ಮಾಡಾಕಾಕತಿ?’ ಅಂತ ಹುಡುಗಿಯರನ್ನು ಬೈಯುತ್ತಲೇ ಅವರಪ್ಪ ಅಮ್ಮನನ್ನು ಆ ಬೈಗುಳದಿಂದ ಕಾಪಾಡುವ ಒಂದು ಕ್ಷಮಾಪ್ರಧಾನ ಸ್ಥಿತಿಯೂ ಇರುತ್ತಿತ್ತೆನ್ನಿ.

ಆದರೆ ಬೆಂಗಳೂರಿನ ಲೆಕ್ಕದಲ್ಲಿ ತಮ್ಮೂರಿನಲ್ಲಿ ಮಾಡಿದ ಯಾವುದೇ ಸಾಹಸವು ಬಕಾಸುರನ ಹೊಟ್ಟೆಗೆ ಲೋಟ ತುಂಬಾ ಮಜ್ಜಿಗೆಯಂತಾಗಿ ಯಾವ ಲೆಕ್ಕಕ್ಕೂ ಸಾಲುತ್ತಿರಲಿಲ್ಲ. ಪಬ್ಬಿಗೆ ಹೋಗಿ ಬಿಯರ್ ಕುಡಿತೀನಿ ಅನ್ನೋದನ್ನೇ ಪ್ರತಿರೋಧದ ಒಂದು ಹಂತ ಎನ್ನುವ ಪ್ರಾರಂಭಿಕ ಸ್ಕೇಲು ಇಟ್ಟುಕೊಂಡರೆ ಆರಾಮಾಗಿ ಗ್ರಾಸ್ (ಮರಿಉವನ/ಮಾರಿಜುವಾನ/ಟೊಮಟೊ/ಕ್ಯಾನಬಿ) ಹೊಡೆದು ಒಬ್ಬೊಬ್ಬರೇ ಊರೂರು ತಿರುಗೋ ಹುಡುಗಿಯರು ಕಂಡು ತಮ್ಮ ಧೈರ್ಯ ಯಾವ ಮೂಲೆಗೂ ಸಾಕಾಗುವುದಿಲ್ಲ ಎನ್ನುವ ಸತ್ಯದ ಅರಿವಾಗಿ ಬಹಳ ಖೇದವಾಗುತ್ತಿತ್ತು.

ಪಟ ಪಟ ಇಂಗ್ಲೀಷ್ ಉದುರಿಸುತ್ತಾ, ತೋಳುಗಳ ತೊನೆಸುತ್ತಾ, ಎದೆಯ ಸೀಳಿನ ತನಕ ಬರುವ ಬಟ್ಟೆಗಳ ಎಗ್ಗಿಲ್ಲದೆ ತೊಡುತ್ತಾ ಕೂದಲು ಹರಡಿಕೊಂಡು ಜಗತ್ತಿನ ಮುಖ್ಯವಾದ ಕೆಲಸದಲ್ಲಿರುವಂತೆ ಮಗ್ನರಾಗಿ ಕಾಣುತ್ತಲೇ, ಸಂಜೆಗೆ ಎಲ್ಲಿಗೆ ಹೋಗಬೇಕು ಅಂತ ಪ್ಲಾನ್ ಮಾಡುತ್ತಾ ಹುಡುಗರ ಕೈಗೆ ಬಿಟ್ಟಿ ಸಿಗದಂತೆ ಬಹಳ ಪ್ರೊಫೆಶನಲ್ ಆಗಿ ನಡೆದುಕೊಳ್ಳುವ ಕಲೆ ಬೆಂಗಳೂರಿನ ಹುಡುಗಿಯರಿಗೆ ಅವರ ಮೈ ಚರ್ಮದಷ್ಟೇ ಸಹಜವಾಗಿತ್ತು ಅಂತ ವಿಜಿಗೆ ಆಗಾಗ ಅನ್ನಿಸುತ್ತಿತ್ತು.

ತಾನು ಸಾಗಬೇಕಾದ ದಾರಿ ಬಹಳ ದೂರ ಇದೆ, ಅಷ್ಟರಲ್ಲಿ ತಾನು ಕಲಿಯಬೇಕಾದದ್ದು ಐದು ಜನ್ಮಕ್ಕೆ ಆಗುವಷ್ಟಿದೆ ಎನ್ನುವ ಅರಿವು ಮೂಡಿದಾಗಲೆಲ್ಲ ವಿಜಿ ಬಹಳ ಖಿನ್ನಳಾಗುತ್ತಿದ್ದಳು.

‘ನನಗೆ ಇಂಗ್ಲೀಷ್ ಬರೋದ್ಯಾವಾಗ. ಬಂದ್ರೂ ಎಲ್ರ ಥರಾ ಮಾತಾಡೋಕಾಗೋದು ಯಾವಾಗ?’ ಅಂತೆಲ್ಲಾ ಯೋಚಿಸುತ್ತಾ ಹುಡುಗರ ಜೊತೆ ಆರಾಮಾಗಿ ಓಡಾಡುವ ಹುಡುಗಿಯರನ್ನು ಕಂಡಾಗಲೆಲ್ಲ ತಾನು ಹೇಗೆ ತನ್ನ ಊರಲ್ಲಿ ‘ಗಂಡುಬೀರಿ’ ಎನ್ನಿಸಿಕೊಂಡಿದ್ದೆ ಎಂದು ನೆನಪಾಗುತ್ತಲೂ ಕಾಲ ಬಾಯಿ ತೆರೆದು ತನ್ನನ್ನು ನುಂಗಬಾರದೇ ಅನ್ನಿಸಿಬಿಡುತ್ತಿತ್ತು.

ತನ್ನ ಊರಲ್ಲಿ ತಾನೇ ಡಾನ್ ಎಂದುಕೊಂಡು ಬದುಕುವಾಗ ಬೆಂಗಳೂರಂಥಾ ಬೃಹತ್ ಊರಲ್ಲಿ ತಾನೊಂದು ದೂಳಿನ ಕಣವೂ ಅಲ್ಲ ಎನ್ನಿಸಿ ದುಗುಡ ಜಾಸ್ತಿಯಾಗುತ್ತಿತ್ತು. ಹೀಗೆಲ್ಲ ಆಲೋಚನೆಯಲ್ಲಿ ಮುಳುಗಿರುವಾಗಲೇ ಒಂದು ಸುದ್ದಿ ತಂದಳು ಸೂಸನ್.

‘ಮೇಲಿನ್ ಮನೇಲಿ ಚಡ್ಡಿ ಬ್ರಾ ಸಿಕ್ಕಿತ್ತಲ್ಲ? ಆ ಹುಡುಗಿ ಫಾರಿನರ್ ಅಂತೆ!’
ಅರೆರೆ! ಇಂಪೋರ್ಟೆಡ್ ಸೆಂಟು ಸಿಗುವಾಗ ಬಳೆ ಅಂಗಡಿಯ ಅತ್ತರ್ ಯಾವನು ಮೂಸ್ತಾನೆ? ಮನೆಯ ಶ್ರೀಗಂಧಕ್ಕೆ ಯಾವನು ಬೆಲೆ ಕಟ್ತಾನೆ? ಅಲ್ವೇ ಮತ್ತೆ!
ತಮಾಷೆ ಅಂದರೆ ಆ ಹುಡುಗಿಗೂ ಒಂದು ಹೆಸರಿತ್ತೇನೋ. ಆದರೆ ಆ ಹೆಸರಿನ ಹುಡುಕಾಟವೇ ಆಗಲಿಲ್ಲ. ಅವಳು ಬರೀ ‘ಚಡ್ಡಿ-ಬ್ರಾ’ ಹುಡುಗಿಯಾಗಿಬಿಟ್ಟಳು.
ಎಲ್ಲರ ಮಾತಿನಲ್ಲೂ ಆ ಕಲ್ಪನೆಯ ಸುಂದರಿಯ ಹೊಸ ನಾಮಧೇಯ ಕೇಳಿದವರಿಗೆ ಇದು ಯಾವುದೋ ಪ್ರಾಣಿಯೇನೋ ಎನ್ನುವಂತಾಯಿತು. ‘ಝೀಬ್ರಾ’ ಅನ್ನೋ ಥರ ‘ಚಡ್ಡಿಬ್ರಾ’ ಎನ್ನುವ ಹೊಸತೊಂದು ಜಂತುವಿನ ಉಗಮವಾಗಿ ಎಲ್ಲರ ಮಾತಿನಲ್ಲಿ ಶಾಶ್ವತವಾಗಿ ನೆಲೆಯೂರಿತು.

ಇಂತಿಪ್ಪ ಹುಡುಗಿ ಹೇಗಿದ್ದಾಳೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ನಾಲ್ಕು ಜನ ಹುಡುಗರಿರುವ ಮನೆಗೆ ಒಂದು ಹುಡುಗಿ ಬರುವುದೆಂದರೇನು? ಅವಳ ಧೈರ್ಯವೇನು? ಅವಳ ಗಮ್ಮತ್ತೇನು? ಅವಳ ವ್ಯಕ್ತಿತ್ವವೇನು?

‘ಬರೋದಷ್ಟೇ ಅಲ್ಲಮ್ಮಾ...ಇಲ್ಲೇ ಸ್ನಾನ ಕೂಡ ಮಾಡುತ್ತಂತೆ ಆ ಹುಡುಗಿ’ ಅಂತ ವಾಚ್‌ಮನ್ ಹೇಳಿದ್ದು ಕೇಳಿ ಬಹುತೇಕ ಮಧ್ಯಮ ವರ್ಗದ ಜನರೇ ವಾಸಿಸುತ್ತಿದ್ದ ಅಪಾರ್ಟ್‌ಮೆಂಟಿನ ಸಕಲ ಜನಸಂಖ್ಯೆಯೂ ಬಾಯಿಯ ಮೇಲೆ ಬೆರಳಿಟ್ಟುಕೊಂಡಿತ್ತಾದರೂ ನಮ್ಮ ಹುಡುಗಿಯರಿಗೆ ಇದು ಹರಾಮಿ ಕೆಲಸ ಅನ್ನಿಸದೆ ಬಲು ಮೋಜಿನ ವಿಷಯವಾಗಿ ಪರಿವರ್ತಿತಗೊಂಡಿತು.

‘ನಾಲ್ಕು ಜನ ಹುಡುಗರಲ್ಲಿ ಒಬ್ಬ ಬಾಯ್ ಫ್ರೆಂಡ್ ಇರಬಹುದಾ ಅಥವಾ ಎಲ್ರೂ ಬಾಯ್ ಫ್ರೆಂಡ್ಸಾ?’ ಸೂಸನ್ ಸೋಜಿಗ ಪಡುತ್ತಿರುವಾಗ ವಿಜಿ ಅವಳ ತಲೆ ಮೇಲೆ ಮೊಟಕಿದಳು.

‘ದ್ರೌಪದಿಯ ರೆಕಾರ್ಡನ್ನು ಇಲ್ಲೀವರೆಗೆ ಯಾರೂ ಬ್ರೇಕ್ ಮಾಡ್ದಂಗಿಲ್ಲ. ಫೈವ್ ಹಸ್ಬೆಂಡ್ಸ್. ಐದು ಜನ ಗಂಡದಿರಿದ್ರು ಅವಳಿಗೆ ಗೊತ್ತಾ?’
‘ಅಯ್ಯೋ ಪಾಪ! ಅವಳ ಕಷ್ಟ ನಿನಗೇನು ಗೊತ್ತು? ಇರೋ ಒಬ್ಬ ಗಂಡ ದೂರ ದೇಶದಲ್ಲಿದ್ದರೂ ಅವನ ಕಾಟ ಹೇಳೋಕಾಗಲ್ಲ...ಅಂಥಾದ್ರಲ್ಲಿ ಐದು ಜನರ ಜೊತೆ ಏಗೋದು ಅಂದ್ರೆ? ಒಬ್ಬೊಬ್ಬರೂ ಒಂದೊಂದು ಥರ ಮನೆ ಗಲೀಜ್ ಮಾಡಿದ್ದನ್ನ ಕ್ಲೀನ್ ಮಾಡಕ್ಕೇ ಜೀವನ ಮುಗಿದಿರಬೇಕು ಅವಳಿಗೆ’ ಅಂತ ನಡುವಯಸ್ಸಿನ ಜಯಾ ತಮ್ಮ ಜೀವನದ ಸತ್ಯಕ್ಕೆ ಪಾಂಚಾಲಿಯ ದುಃಖ ಆವಾಹಿಸಿಕೊಂಡು ಮರುಗಿದರು.

‘ಜಯಕ್ಕಾ... ಅವ್ಳು ರಾಣಿ ಅಲ್ವೇನ್ರೀ? ಕೆಲ್ಸದೋರ್ ಹತ್ರ ಕೆಲಸ ಮಾಡ್ಸಿರ್ತಾಳೆ’ ವಿಜಿಯ ಪಾಳೇಗಾರಿಕೆಯ ವಾಸನೆಯುಳ್ಳ ಮಾತು.
‘ಥೂ! ನಿಂಗೇನು ಗೊತ್ತು ಕೆಲಸದೋರ ಹತ್ರ ಕೆಲಸ ಮಾಡ್ಸೋದು ಅಂದ್ರೆ? ತಲೆ ಕೆಟ್ಟು ಯಕ್ಕುಟ್ಟೋಗುತ್ತೆ’
‘ಹಂಗಾ?’
‘ಪ್ಲೀಸ್ ಸ್ಟೇ ಆನ್ ದ ಟಾಪಿಕ್’ ಸೂಸನ್ ಎಚ್ಚರಿಸಿದಳು. ರಾಮಾಯಣ, ಮಹಾಭಾರತ, ಬೈಬಲ್ಲಿನ ಉಪಕಥೆಗಳು, ಖುರಾನಿನ ಬಗ್ಗೆ ಚರ್ಚೆ ಶುರುವಾದರೆ ಸ್ವತಃ ದೇವರೇ ಬಂದು ‘ನಾನು ಹೀಗೆ ಎಲ್ಲೂ ಹೇಳಲಿಲ್ಲ, ಮಾಡಲಿಲ್ಲ’ ಅಂತ ಹೇಳಿದರೂ ಕೇಳದ ಜನ ಇದ್ದಾರೆ ಎನ್ನುವ ನಂಬಿಕೆ ಅವಳದ್ದಾಗಿತ್ತು. ಯಾಕೆಂದರೆ ದೇವರ ಬಗ್ಗೆ ವಿಚಿತ್ರ ಕಲ್ಪನೆಗಳನ್ನು ಹೊಂದಿದವಳಲ್ಲಿ ಅವಳೂ ಒಬ್ಬಳಾಗಿದ್ದಳು.

ಕೆಲವೊಮ್ಮೆ ಹೀಗೂ ಆಗುತ್ತದಲ್ಲವೇ? ಕಲ್ಪನೆಯ ರಮಣೀಯತೆಯ ಮುಂದೆ ವಾಸ್ತವವೇ ಘೋರ ಎನ್ನಿಸುವುದುಂಟು. ಅದಕ್ಕೇ ಅಲ್ಲವೇ ನಾವು ಸಿನಿಮಾ, ಟೀವಿಗಳ ಮೊರೆ ಹೋಗುವುದು, ಹಗಲುಗನಸಿನ ಮರಿ ಹಾಕುತ್ತಾ ಮಾಡಬೇಕಿರುವ ಕೆಲಸ ಮುಂದೂಡುತ್ತಾ ಕಾಲ ಕಳೆಯುವುದು? ಅಂತ ಯೋಚಿಸುತ್ತಾ ವಿಜಿ ತನ್ನ ಜೀವನದ ಸವಾಲುಗಳನ್ನೆಲ್ಲಾ ಮನಸ್ಸಿನಲ್ಲೇ ಕೊಚ್ಚಿ ಕೊಚ್ಚಿ ಪೀಸ್ ಪೀಸ್ ಮಾಡಿ ಹಾಕುತ್ತಿರುವಾಗ ಸೂಸನ್ ಬಹುತೇಕ ಕಿರಿಚುತ್ತಾ ಓಡಿ ಬಂದಳು.

‘ಹೇ ಹೇ ಹೇ! ಆ ಹುಡುಗಿ ಈಗ ಮನೆಗೆ ಬರ್ತಾಳಂತೆ!’
ಯಾವುದೋ ದೇಶದ ದೊರೆ ಮಗಳು ಬರುತ್ತಾಳೆನ್ನುವಂತೆ ಎಲ್ಲರಿಗೂ ಅವಳನ್ನು ನೋಡಲು ತವಕ!
‘ಅಲ್ಲಾ ಈ ನಾಲ್ಕು ಜನರಲ್ಲಿ ಒಬ್ಬ ಮಾತ್ರ ಬಾಯ್ ಫ್ರೆಂಡಾ ಇವಳಿಗೆ?’ ವಿಜಿ ಕೇಳಿದಳು. ಸೂಸನ್ ಸ್ವಲ್ಪ ಚಕಿತಳಾಗಿ ‘ಹೌದಲ್ಲಾ! ಈ ಪಾಯಿಂಟು ಯೋಚಿಸಿಯೇ ಇರಲಿಲ್ಲ ನಾನು!’ ಎಂದಳು. ಚಿತ್ರಾಗೆ ಇದು ‘ಇನ್ನೂ ಮೂರು ವೇಕೆನ್ಸಿ ಇವೆ’ ಎಂದು ಹೇಳಲು ಉಪಯೋಗಿಸಿದ ಎಕ್ಸ್ ಪ್ರೆಷನ್ನು ಎನ್ನುವುದು ತಿಳಿಯಿತು.

ಚಿತ್ರಾ, ಸೂಸನ್ ಮತ್ತು ವಿಜಿ ಆ ಹುಡುಗಿಯನ್ನು ಕಾಯುತ್ತಾ ಗೇಟಿನ ಬಳಿಯೇ ನಿಂತುಬಿಟ್ಟರು. ವಾಚ್‌ಮನ್ ಇವರನ್ನು ಕಂಡು ಮಾತನಾಡಿಸಿದ. ‘ಯಾಕಮ್ಮಾ? ಇಲ್ಲೇ ನಿಂತಿದ್ದೀರಿ?’
‘ಆ ಮೇಲಿನ ಮನೆ ಹುಡುಗಿ ಬರ್ತಾಳಂತಲ್ಲ ಅಂಕಲ್? ನೋಡಣಾ ಅಂತ ನಿಂತಿದ್ದೀವಿ’
‘ಅಯ್ಯೋ ಅದಾ? ಆಗ್ಲೇ ಬಂತು. ಮನೆ ಒಳ್ಗೆ ಪೊಲೀಸರು ಇದಾರೆ. ಅಲ್ಲೇ ಎನ್‌ಕ್ವೈರಿ ನಡೀತಾ ಐತೆ. ಅಲ್ಲೀಗೆ ವೋಗಬ್ಯಾಡಿ. ಸುಮ್ಕೆ ನಿಮಗೇ ತೊಂದ್ರೆ. ಪೊಲೀಸ್ರು ಸಿಕ್ಕೋರು ಸಿಗ್ದಿದ್ದೋರು ಎಲ್ರುನೂ ವಿಚಾರಸ್ತಾ ಅವರೆ’
‘ಯಾಕಜ್ಜಾ?’ ಅನಾಯಾಸವೆಂಬಂತೆ ಬಂದ ಮಾತಿಗೆ ಫಿಲ್ಟರ್ ಹಾಕಲಿಲ್ಲ ವಿಜಿ. ಕತ್ತಿನಲ್ಲಿ ಕರಿಮಣಿ ತೂಗುತ್ತಿರುವ ಯಾವುದೇ ಹೆಂಗಸನ್ನು ‘ಆಂಟೀ’ ಅಂತ ಕರೆದುಬಿಡಬಹುದು. ಅದಕ್ಕೆ ಅವರು ತೋರುವ ಪ್ರತಿರೋಧವನ್ನು ಲೇವಡಿ ಮಾಡಿ ದಕ್ಕಿಸಿಕೊಳ್ಳಲೂಬಹುದು. ಆದರೆ ನಿಮ್ಮ ಮುತ್ತಾತನಷ್ಟು ವಯಸ್ಸಾಗಿರುವ ಬಹುತೇಕ ಗಂಡಸರು ‘ಅಂಕಲ್’ ಅಂತ ಕರೆಸಿಕೊಳ್ಳಲೂ ಹಿಂಜರಿಯುತ್ತಾರೆ. ಇನ್ನು ‘ತಾತ’ ಅಂದರೆ ಅವರ ವ್ಯಕ್ತಿತ್ವಕ್ಕೆ ನೀವು ಎಂಥಾ ಧಕ್ಕೆ ತರುತ್ತೀರಿ ಎನ್ನುವುದು ನಿಮಗೆ ಅರ್ಥವೇ ಆಗುವುದಿಲ್ಲ. ಗಂಡಸುತನ ಎನ್ನುವ ಆ ಒಂದು ‘ಅಹಂ ಬ್ರಹ್ಮಾಸ್ಮಿ’ಗೆ ನೀವು ಗಮನವಿದ್ದೋ ಇಲ್ಲದೆಯೋ ಕೊಟ್ಟ ಏಟು ದಿನಗಟ್ಟಲೆ ಕುಟುಕುತ್ತದೆ.

ಬೊಚ್ಚು ಬಾಯಿಯಾಗಿದ್ದ ತಾತ ವಾಚ್‌ಮನ್ನಿಗೆ ವಿಜಿ ‘ಅಜ್ಜ’ ಅಂತ ಕರೆದದ್ದು ರುಮ್ಮನೆ ಸಿಟ್ಟು ತರಿಸಿ ಮಾತನಾಡದೆ ಅವ ಮುಖ ತಿರುಗಿಸಿಕೊಂಡ. ಗಾಸಿಪ್ಪು ಹುಟ್ಟೋ ಸಮಯದಲ್ಲಿ ಇವಳೊಬ್ಬಳು ಕಲ್ಲು ಹಾಕಿದಳಲ್ಲ ಅಂತ ಸೂಸನ್‌ಗೆ ಸಿಟ್ಟು ಬಂದು, ‘ಮುಚ್ಚೇ ಬಾಯಿ! ಅವರು ನಿನ್ ಅಜ್ಜನ ಥರ ಇದಾರಾ? ಇವರು ಇಲ್ಲಿ ಇದ್ದಾರೆ ಅಂತಲೇ ನಾವೆಲ್ಲಾ ಸೇಫ್ ಆಗಿ ಇರೋದು’ ಅಂತ ಆ ಗಂಡಸು ಅಹಮ್ಮಿಗೆ ಸ್ವಲ್ಪ ಕುಮ್ಮಕ್ಕು ಕೊಟ್ಟು ವಿಷಯ ಹೊರಡಿಸಲು ನೋಡಿದಳು.
‘ಸರಿ...ಆ ಹುಡುಗಿನ್ನ ಏನ್ ಎನ್‌ಕ್ವೈರಿ ಮಾಡ್ತಿದಾರೆ ಪೊಲೀಸ್ನೋರು?’
‘ವಿಷಯ ಗೊತ್ತಾಗಲಿಲ್ವಾ?’
‘ಏನು?’
‘ಆ ಮನೇಲಿ ಚೆಕ್ ಮಾಡುವಾಗ ಡ್ರಗ್ಸ್ ಸಿಕ್ಕಿದೆಯಂತೆ. ಅದಕ್ಕೇ ಪೊಲೀಸ್ನೋರು ಇದನ್ನೆಲ್ಲಾ ಸೀರಿಯಸ್ ಆಗಿ ತಗೊಂಡಿದಾರೆ. ಮನೆಗೆ ಯಾರ್‍್ಯಾರು ಬರ್ತಿದ್ರು ಎಲ್ಲರನ್ನೂ ವಿಚಾರಿಸ್ತಿದಾರೆ’
ಇದನ್ನು ಕೇಳಿದ ಚಿತ್ರಾಗೆ ಆತಂಕವಾದರೆ, ಸೂಸನ್ ಮತ್ತು ವಿಜಿಗೆ ರೋಮಾಂಚನವಾದ ಘಳಿಗೆಯಲ್ಲೇ ತಾವಿದ್ದ ಸೂರಿನ ಮೇಲೆ ಯಾರೋ ಲೈಫ್ ಎಂಜಾಯ್ ಮಾಡ್ತಿದ್ದರೆ ತಾವು ಇಡ್ಲಿ ಚಟ್ನಿ ತಿನ್ನೋಕೆ ಕಷ್ಟಪಡುತ್ತಿದ್ದೆವಲ್ಲ ಎನ್ನುವ ದ್ರಾಬೆ ಸತ್ಯವೊಂದು ಸಾಕ್ಷಾತ್ಕಾರವಾಯಿತು.

ಅಷ್ಟರಲ್ಲಿ ಆ ಹುಡುಗಿ ಗಾಳಿಯಂತೆ ಆಹ್ಲಾದ ಮೂಡಿಸುತ್ತಾ ಅಪಾರ್ಟ್‌ಮೆಂಟಿನಿಂದ ಹೊರಕ್ಕೆ ಹೋದಳು. ಅಂಥ ವಿಶೇಷವೇನೂ ಇರದಿದ್ದರೂ ಅವಳ ಸ್ವತಂತ್ರ ಜೀವನದ ಎದೆಗಾರಿಕೆ ಯಾಕೋ ಅವಳ ಬಗ್ಗೆ ಅವಿರತ ಆಕರ್ಷಣೆಗೆ ಕಾರಣವಾಯಿತು.

‘ನೆಕ್ಸ್ಟ್ ಟೈಮ್ ಬಂದಾಗ ಇವಳನ್ನ ಫ್ರೆಂಡ್ ಮಾಡ್ಕೋಬೇಕು ಕಣ್ರೆಮಾ’ ಸೂಸನ್ ಮೆಚ್ಚುಗೆಯ ದನಿಯಲ್ಲಿ ಹೇಳಿದಳು. ವಿಜಿಯಾಗಲೇ ಬೆಂಗಳೂರಿನ ಜೀವನಕ್ಕೆ ‘ಚಡ್ಡಿಬ್ರಾ’ನೇ ತನ್ನ ಗುರುವಾಗಬೇಕು ಅಂತ ನಿರ್ಧರಿಸಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT