ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮ ಸ್ಪರ್ಧೆ

Last Updated 18 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಆ  ಶಾಲೆಯ ಸಮಾಜಶಾಸ್ತ್ರದ ಶಿಕ್ಷಕ ತುಂಬ ಬುದ್ಧಿವಂತ. ಅವನು ಕಲಿಸುವ ವಿಧಾನಗಳೇ ವಿಚಿತ್ರವಾಗಿದ್ದವು. ಆದರೆ ಅವನ ಪ್ರತಿಯೊಂದು ಪ್ರಯೋಗವೂ ಮಕ್ಕಳ ಮನಸ್ಸಿನಲ್ಲಿ ಧೃಡವಾಗಿ ನಿಲ್ಲುತ್ತಿದ್ದವು. ಒಂದು ಬಾರಿ ಆತ ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಮಾಡುತ್ತಿದ್ದ.  ತರಗತಿಯ ಮಕ್ಕಳು ತಮ­ತಮಗೆ ತಿಳಿದಂತೆ ವಾದ ಮಾಡುತ್ತಿದ್ದರು. ಆಗ ಆತ ಒಂದು ಪ್ರಯೋಗ ಮಾಡು-ವು-ದಾಗಿ ಘೋಷಿ-ಸಿದ. ಮಕ್ಕಳೆಲ್ಲ ಉತ್ಸಾಹದಿಂದ ಕುಳಿತರು. ಶಿಕ್ಷಕ ಗ್ರಂಥಾಲಯದಿಂದ ಹಳೆಯ ಪತ್ರಿಕೆ­ಗಳನ್ನು ತರಿಸಿದ. ಎಲ್ಲ ಮಕ್ಕಳಿಗೂ ಒಂದೊಂದು ಪುಟವನ್ನು ಹರಿದು ಕೊಟ್ಟ. 

ಪ್ರತಿಯೊಬ್ಬ ವಿದ್ಯಾರ್ಥಿಯೂ ಆ ಹಳೆಯ ಕಾಗದವನ್ನು ಹಿಸುಕಿ ಚೆಂಡಿನಂತೆ ಮುದ್ದೆ ಮಾಡಲು ಹೇಳಿದ. ಅವರೆಲ್ಲ ಹಾಗೆಯೇ ಮಾಡಿದರು. ನಂತರ ಆತ ಕೊಠಡಿಯ ಮೂಲೆ­ಯಲ್ಲಿದ್ದ ಕಸದ ಬುಟ್ಟಿಯನ್ನು ತಂದು ಕಪ್ಪು ಹಲಗೆಯ ಮುಂದಿದ್ದ ಮೇಜಿನ ಮೇಲಿಟ್ಟ. ಮಕ್ಕಳು ಅವನ ಚಟುವಟಿಕೆ­ಯನ್ನು ಗಮನಿಸು-ತ್ತಿದ್ದರು. ಆಮೇಲೆ ಆತ ಹೇಳಿದ, ‘ಮಕ್ಕಳೇ, ನಿಮಗೆ ಈಗೊಂದು ಸ್ಪರ್ಧೆ. ನೀವು ಈಗ ಎಲ್ಲಿ ಕುಳಿತಿದ್ದೀರೋ ಅಲ್ಲಿಂದಲೇ ನಿಮ್ಮ ಕೈಯಲ್ಲಿದ್ದ ಕಾಗದದ ಮುದ್ದೆ-ಯನ್ನು ಈ ಕಸದ ಬುಟ್ಟಿಯಲ್ಲಿ ಎಸೆಯಬೇಕು. ನೀವು ಎಸೆದದ್ದು ಬುಟ್ಟಿಯ ಒಳಗೇ ಬೀಳಬೇಕು. ಹೊರಗೆ ಬಿದ್ದರೆ ಅಂಕವಿಲ್ಲ. ಚೆನ್ನಾಗಿ  ಗುರಿಯಿಟ್ಟು ಎಸೆಯಿರಿ’.

ಮುಂದಿನ ಸಾಲಿನ ಮಕ್ಕಳು ‘ಹೋ’ ಎಂದು ಸಂಭ್ರಮಿಸಿದರೆ ಹಿಂದಿನ ಸಾಲಿನ ಮಕ್ಕಳು, ‘ಸಾರ್, ಇದು ಅನ್ಯಾಯ. ನಮಗೆ ಬುಟ್ಟಿ ಬಲು ದೂರ.ಅದಲ್ಲದೇ ನಡುವೆ ಇಷ್ಟು ಸಾಲು ಸ್ನೇಹಿತರು ಕುಳಿತಿದ್ದಾರಲ್ಲ. ಅವರನ್ನೆಲ್ಲ ದಾಟಿ ನಮ್ಮ ಕಾಗದ ಬುಟ್ಟಿ ತಲುಪುವುದು ಹೇಗೆ ಸಾಧ್ಯ?’ ಎಂದು ತಕರಾರು ಮಾಡಿ-ದರು. ಆದರೆ ಶಿಕ್ಷಕ ಅದಾವುದನ್ನು ಕೇಳಿಸಿಕೊಳ್ಳದೇ ಕಾಗದದ ಉಂಡೆ-ಗಳನ್ನು ಎಸೆಯಲು ಅಪ್ಪಣೆ ಮಾಡಿದ. ಮಕ್ಕಳೆಲ್ಲ ಉತ್ಸಾಹದಿಂದ ಗುರಿ­ಯಿಟ್ಟು ಎಸೆ-ಯಲು ಪ್ರಯತ್ನಿ­ಸಿದರು. ಮುಂದಿನ ಸಾಲಿನ ಬಹುತೇಕ ಮಕ್ಕಳು ಬುಟ್ಟಿ-ಯಲ್ಲೇ ಉಂಡೆಯನ್ನು ಹಾಕಿ­ದರು. ಅವರಲ್ಲಿಯೂ ಕೆಲವರಿಂದ ಸಾಧ್ಯ-ವಾಗ-ಲಿಲ್ಲ, ಎರಡನೆಯ ಸಾಲಿನ ಕೆಲವು ಮಕ್ಕಳೂ ಯಶಸ್ವಿಯಾದರು.  ಹಿಂದಿನ, ಅದರ ಹಿಂದಿನ ಸಾಲಿನ ಮಕ್ಕಳು ಮಾತ್ರ ನಿರಾಸೆಪಟ್ಟರು. ಎಲ್ಲೋ ಒಂದಿಬ್ಬರ ಕಾಗದದ ಉಂಡೆ­ಗಳು ಮಾತ್ರ ಬುಟ್ಟಿಯನ್ನು ಸೇರಿದವು. 

‘ಈ ಪ್ರಯೋಗದ ನಂತರ ನಿಮಗೆ ಏನು ಅರ್ಥವಾಯಿತು?’ ಎಂದು ಶಿಕ್ಷಕ ಕೇಳಿದ. ಒಬ್ಬ ಹುಡುಗಿ ಹೇಳಿದಳು, ‘ಸರ್, ಇದು ಸರಿಯಾದ ಪ್ರಯೋಗ­ವಲ್ಲ. ಎಲ್ಲರಿಗೂ ಒಂದೇ ನಿಯಮ ವಿರಬೇಕಲ್ಲವೇ? ಎಲ್ಲರಿಗೂ ಸಮಾನ ಅವಕಾಶ ಇರಬೇಕಿತ್ತಲ್ಲ?. ಮುಂದಿ­ದ್ದವರಿಗೆ ಇದು ಅನುಕೂಲವಾಗಿತ್ತು. ಹಿಂದೆ ಇದ್ದವರ ಗತಿ ಏನು ಸರ್? ಎಲ್ಲರೂ ಒಂದೇ ದೂರದಲ್ಲಿ ನಿಂತಿದ್ದರೆ ಅವರ ನಿಜವಾದ ಗುರಿ ಪರೀಕ್ಷೆಯಾ­ಗುತ್ತಿತ್ತು’. ಶಿಕ್ಷಕ ಭಾವಪೂರಿತನಾಗಿ ಹೇಳಿದ, ‘ಮಕ್ಕಳೇ ನನ್ನ ಇಂದಿನ ಪಾಠ ಇದೇ.  ನಮ್ಮ ಸಮಾಜದಲ್ಲಿ ಹೀಗೆ ಆಗಿದೆ. ಕೆಲವರು ಶತಶತಮಾನಗಳಿಂದ ಮುಂದಿನ ಸಾಲು ಹಿಡಿದು ಕುಳಿತಿದ್ದಾರೆ.

ಅವರಿಗೆ ಗುರಿ ಕಣ್ಣಮುಂದೆ ಕಾಣುತ್ತಿದೆ, ಮತ್ತು ಹತ್ತಿರವೂ ಇದೆ. ಅವರಿಗೆ ಗುರಿ ತಲುಪುವುದು ಸುಲಭ ಹಾಗೂ ಸಾಧ್ಯ. ಆದರೆ ಹಿಂದೆ, ಹಿಂದಿನ ಸಾಲಿನಲ್ಲಿ ಶತಮಾನಗಳಿಂದ ಉಳಿದೇ ಬಿಟ್ಟವರಿಗೆ ಗುರಿ ಕಾಣದಿರುವುದು ಮಾತ್ರವಲ್ಲ, ಗುರಿ ಇದೆ ಎನ್ನುವುದೂ ತಿಳಿದಿಲ್ಲ. ಎಲ್ಲರೂ ಗುರಿ ತಲುಪಬೇಕು ಎನ್ನುವ ಆಶಯವೇ ಸಮಾನತೆಯ ಸ್ಪರ್ಧೆ ಅಲ್ಲವೇ? ನೀವು ಈಗ ಶಿಕ್ಷಣ ಪಡೆದ ಮಕ್ಕಳು. ಸಮಾಜದ ಮುಂದಿನ ಸಾಲಿನಲ್ಲಿ ಕುಳಿತು-ಕೊಳ್ಳು-ತ್ತೀರಿ. ನಿಮಗೆ ಬದುಕಿನ ಗುರಿ ಕಾಣುತ್ತದೆ, ತಲುಪು­ವುದು ಸುಲಭವೆನ್ನಿಸುತ್ತದೆ. ಈಗ ನೀವು ದಯವಿಟ್ಟು ಹಿಂದಿನ ಸಾಲಿನಲ್ಲಿರುವ, ಶಿಕ್ಷಣ ಪಡೆಯದ, ಅವಕಾಶ-ಗಳಿಂದ ವಂಚಿತರಾದ ಜನರ ಬಗ್ಗೆ ಯೋಚಿಸ­ಬೇಕು. ಅವರನ್ನು ಮುಂದಿನ ಸಾಲಿಗೆ ತರುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾ­ನರ ನಡುವೆ ಸ್ಪರ್ಧೆ ಸಾಧ್ಯ. ಈ ಸಮಾ­ನತೆಯನ್ನು ತರುವ ಪ್ರಯತ್ನ ನಿಮ್ಮ­ದಾಗಬೇಕು.  ಆಗಲೇ ಶಿಕ್ಷಣ ಪಡೆದದ್ದು ಸಾರ್ಥಕವಾಗುತ್ತದೆ’. ಶಿಕ್ಷಕನ ಮಾತು ಮತ್ತು ಪ್ರಯೋಗ ಮಕ್ಕಳ ಹೃದಯ ತಟ್ಟಿತು. ಸಮಾನತೆಯ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ ಶಿಕ್ಷಣ, ಅವಕಾಶಗಳನ್ನು ಪಡೆದ ಜನ ಅದರಿಂದ ವಂಚಿತ-ರಾದವರಿಗೆ ಸಹಾಯ ಮಾಡುವ ನಿಜವಾದ, ಪ್ರಾಮಾಣಿಕ ಪ್ರಯತ್ನ ಮಾಡಿ-ದಾಗ ಮಾತ್ರ ಅವರು ಸಮಾಜದ ಋಣವನ್ನು ಸ್ವಲ್ಪವಾದರೂ ತೀರಿಸಿ­ದಂತಾಗುತ್ತದೆ. ಹಾಗೆ ಇಲ್ಲದೇ ಸ್ವಾರ್ಥಿ­ಗಳಾದರೆ ಸ್ವಾಮಿ ವಿವೇಕಾ­ನಂದರು ಹೇಳಿದಂತೆ, ‘ಅವ­ರಂಥ ದೇಶದ್ರೋಹಿ­ಗಳು ಮತ್ತಾರೂ ಇರಲಾರರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT