ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೂಯೆಯ ಬೆಂಕಿ

Last Updated 21 ಜನವರಿ 2015, 19:30 IST
ಅಕ್ಷರ ಗಾತ್ರ

ಒಬ್ಬ ರಾಜ ಪರಿವಾರ ಸಮೇತನಾಗಿ ಕಾಡಿಗೆ ಬೇಟೆಯಾಡಲು ಹೋದ.  ಇಡೀ ದಿನ ಕಾಡಿನಲ್ಲಿ ತಿರುಗಾಡಿದ ಮೇಲೆ ಹತ್ತಿರವೇ ಇದ್ದ ತನ್ನ ಉದ್ಯಾನ­ವನದ ಅರಮನೆಗೆ ಬಂದ.  ಸಾಯಂಕಾಲ ಉದ್ಯಾನವನದಲ್ಲಿದ್ದ ಸುಂದರ ಕೊಳದಲ್ಲಿ ಜಲಕ್ರೀಡೆ­ಯಾಡುವ ಮನಸ್ಸಾಗಿ ನೀರಿಗಿಳಿದ. ತನ್ನ ಹೆಂಡತಿಯರನ್ನು ಕರೆದ.

ಅವರು ತಮ್ಮ ಬಟ್ಟೆಗಳನ್ನು ಬದಲಿಸಿ, ಆಭರಣಗಳನ್ನು ಕೊಳದ ದಂಡೆಯ ಮೇಲಿರಿಸಿ ಜಲಕ್ರೀಡೆಗಿಳಿದರು. ಆಭರಣ ಹಾಗೂ ವಸ್ತ್ರಗಳನ್ನು ನೋಡಿಕೊಳ್ಳುವ ದಾಸಿ ಹತ್ತಿರದಲ್ಲೇ ಇದ್ದಳು. ಆ ಸಮಯದಲ್ಲಿ ತೋಟದಲ್ಲಿ ನೂರಾರು ಕೋತಿ­ಗಳು ಮರದ ಮೇಲೆ ಹಾರಾಡುತ್ತಿದ್ದವು.  ಒಂದು ಹೆಣ್ಣು ಕೋತಿ, ಸ್ತ್ರೀಯರು ಆಭರಣಗಳನ್ನು ತೆಗೆದಿಡುವುದನ್ನು ನೋಡಿತು. ಒಂದು ರತ್ನಹಾರ ಅದರ ಮನ ಸೆಳೆಯಿತು.  ದಾಸಿ ಒಂದು ಕ್ಷಣ ಅತ್ತ ಕಡೆಗೆ ಹೋದಾಗ ಛಕ್ಕನೇ ಬಂದು ಅದನ್ನು ಎತ್ತಿ­ಕೊಂಡು ಮರದ ಮೇಲೆ ಹೋಯಿತು.

ಮನತಣಿಯುವಂತೆ ನೀರಿನಲ್ಲಿ ಆಟ­ವಾಡಿ ರಾಜ ಹೊರ­ಬಂದ.  ಅವನ ಹೆಂಡತಿಯರು ಬಂದು ತಮ್ಮ ಆಭರಣ­ಗಳನ್ನು ಹಾಕಿಕೊಳ್ಳುತ್ತಿ­ರುವಾಗ ಪಟ್ಟದ ರಾಣಿಗೆ ತನ್ನ ರತ್ನಹಾರ ಕಾಣಲಿಲ್ಲ.  ಎಲ್ಲಿ ಹೋಯಿತು ಎಂದು ಗದರಿ ಸೇವಕಿಯನ್ನು ಕೇಳಿದಾಗ ಆಕೆ ಏನೂ ತೋಚದೆ, ‘ಅಮ್ಮಾ, ಇದೇ ಈಗ ಒಂದು ಕ್ಷಣದ ಹಿಂದೆ ಒಬ್ಬ ಮನುಷ್ಯ ಒಳಗೆ ನುಗ್ಗಿ ನನ್ನನ್ನು ತಳ್ಳಿ ಹಾರವನ್ನು ತೆಗೆದುಕೊಂಡು ಹೋದ’ ಎಂದಳು. ತಕ್ಷಣ ರಾಜ ತನ್ನ ಅಂಗರಕ್ಷಕರಿಗೆ ಕಳ್ಳನನ್ನು ಹಿಡಿಯುವಂತೆ ಆಜ್ಞೆ ಮಾಡಿದ.

ಅವರು ‘ಕಳ್ಳನನ್ನು ಹಿಡಿ­ಯಿರಿ, ಹಿಡಿಯಿರಿ’ ಎಂದು ಕೂಗುತ್ತ ಉದ್ಯಾನವನದಲ್ಲೆಲ್ಲ ಓಡಾಡತೊ­ಡಗಿದರು. ಅಲ್ಲಿ ಕೆಲಸ ಮಾಡುತ್ತಿದ್ದ ತೋಟಗಾರ ಗಾಬರಿಯಿಂದ ಓಡತೊಡ­ಗಿದ.  ಅವನೇ ಕಳ್ಳನಿರಬೇಕೆಂದು ಸೈನಿ­ಕರು ಅವನನ್ನೇ ಹಿಡಿದು ತಂದು ರಾಜನ ಮುಂದೆ ನಿಲ್ಲಿಸಿದರು. ಅವನು ಗೋಗರೆದು ತಾನು ನಿರಪರಾಧಿ ಎಂದು ಹೇಳಿಕೊಂಡರೂ ಯಾರೂ ನಂಬಲಿಲ್ಲ. ಯಾಕೆಂದರೆ ಆ ಸಮಯದಲ್ಲಿ  ತೋಟದಲ್ಲಿ ಮತ್ತಾರೂ ಇರಲಿಲ್ಲ.

ಆ ತೋಟಗಾರನನ್ನು ಹಾಗೂ ಬೇಜ­ವಾಬ್ದಾರಿಯಿಂದ ವರ್ತಿಸಿದ ದಾಸಿ­ಯನ್ನು ಒಟ್ಟಿಗೇ ಜೈಲಿನಲ್ಲಿ ಹಾಕಿದರು. ಮರುದಿನ ಅವರಿಗೆ ಶಿಕ್ಷೆ ನೀಡುವುದಾಗಿ ರಾಜ ಹೇಳಿದ. ರಾಜನ ಮಂತ್ರಿ ಬಹಳ ಬುದ್ಧಿವಂತ. ಅವನಿಗೇಕೋ ಇಬ್ಬರೂ ಅಪರಾಧಿಗಳು ಎನ್ನಿಸಲಿಲ್ಲ. ತೋಟಗಾರ ನಿಜವಾಗಿಯೂ ಕಳ್ಳತನ ಮಾಡಿದ್ದರೆ ಅಂಗರಕ್ಷಕರು ಬರುವವರೆಗೆ ತೋಟ­ದಲ್ಲೇ ಏಕೆ ಉಳಿಯುತ್ತಿದ್ದ? ಹೀಗೆ ಯೋಚಿಸಿ ತನಗೆ ಒಂದು ದಿನದ ಅವಧಿ ಕೊಡುವಂತೆ ರಾಜನನ್ನು ಬೇಡಿದ.

ಮರುದಿನ ಬೆಳಿಗ್ಗೆ ತೋಟದಲ್ಲಿ ಸುತ್ತಾಡುತ್ತಿದ್ದಾಗ ಮರದ ಮೇಲಿನ ನೂರಾರು ಕೋತಿಗ­ಳನ್ನು ನೋಡಿದ. ಅವನಿಗೇನೋ ಯೋಜನೆ ಹೊಳೆಯಿತು. ತಕ್ಷಣ ಅರಮನೆ­ಯವರಿಗೆ ಹೇಳಿ ಅರಗಿನ, ಕಡಿಮೆ ಬೆಲೆಯ ಅನೇಕ ಹಾರಗಳನ್ನು ತರಿಸಿದ. ತೋಟದ ಎಲ್ಲ ಹೆಣ್ಣು ಕೋತಿಗಳನ್ನು ಹಿಡಿಸಿ ಅವುಗಳ ಕತ್ತಿಗೆ ಈ ಹಾರಗಳನ್ನು ತೊಡಿಸಿ ಬಿಟ್ಟ. ಅವೆಲ್ಲ ಸಂಭ್ರಮದಿಂದ ಮರ ಏರಿ ಕುಳಿತವು. ಎಲ್ಲ ಹೆಣ್ಣು­ಕೋತಿ­ಗಳು ತಮ್ಮ ಹಾರಗಳನ್ನು ನೋಡಿಕೊಳ್ಳುತ್ತಿದ್ದಾಗ ರತ್ನಹಾರ ಕದ್ದು ಹೋಗಿದ್ದ ಕೋತಿ ಮರವನ್ನೇರಿ ಪೊಟರೆಯಲ್ಲಿ ಇಟ್ಟಿದ್ದ ಆ ಹಾರವನ್ನು ತೆಗೆದುಕೊಂಡಿತು. 

ಎಲ್ಲ ಹೆಣ್ಣು ಕೋತಿಗಳ ಕತ್ತಿನಲ್ಲಿ ಒಂದೇ ತರಹದ ಹಾರವಿದೆ. ಆದರೆ ತನ್ನ ಹತ್ತಿರ ವಿಶೇಷವಾದದ್ದಿದೆ ಎಂದು ತೋರಿಸಬೇ­ಕಲ್ಲವೇ? ತಕ್ಷಣ ಅದು ತನ್ನ ಕೊರಳಿನಲ್ಲಿದ್ದ ಅರಗಿನ ಹಾರವನ್ನು ಬಿಸಾಕಿ ರತ್ನಹಾರವನ್ನು ಹಾಕಿಕೊಂಡು ಉಳಿದ ಕೋತಿಗಳ ಮುಂದೆ ತೋರ­ತೊಡಗಿತು. ಅವರಿಗಿಂತ ತನ್ನ ಹಾರ ಸುಂದರವಾಗಿದ್ದನ್ನು ತೋರುತ್ತ ಹೆಮ್ಮೆ­ಪಟ್ಟಿತು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿ­ಸುತ್ತಿದ್ದ ರಾಜನ ಸೈನಿಕರು ಈ ಕೋತಿ­ಯನ್ನು ಹಿಡಿದು ರತ್ನಹಾರವನ್ನು ಬಿಡಿಸಿ­ಕೊಂಡರು.  ನಂತರ ದಾಸಿಯ ಹಾಗೂ ತೋಟಗಾರನ ಬಿಡುಗಡೆ­ಯಾಯಿತು. 

ಎಲ್ಲರಿಗೂ ಇದ್ದದ್ದು ನನಗೂ ಇದ್ದರೆ ಏನು ವಿಶೇಷ? ಎಲ್ಲರಿಗಿಂತ ತಾನು ದೊಡ್ಡವನು, ಶ್ರೀಮಂತ, ವಿಶೇಷ ಎಂದು ತೋರಿಸಿ­ಕೊಳ್ಳುವುದರಲ್ಲಿಯೇ ಸಂತೋಷ. ಅದೇ ಅಹಂಕಾರದ ಮೊರೆತ.  ಅದೇ ನಮ್ಮ ತೊಂದರೆಗೆ ಮೂಲ ಕಾರಣ.  ತಾನು ಸಂತೋಷ­ವಾಗಿದ್ದರೆ ಸಾಲದು.  ಪಕ್ಕದ ಮನೆ­ಯವರ ಸಂತೋಷ ನಮ್ಮನ್ನು ಸುಡು­ತ್ತದೆ, ಅವರಿಗಿಂತ ದೊಡ್ಡವರಾಗ­ಬೇಕೆಂಬ ಬೆಂಕಿ ದಹಿಸತೊಡಗುತ್ತದೆ. ಹೊಟ್ಟೆಯಲ್ಲಿನ ಬೆಂಕಿ ನಮ್ಮನ್ನು ಸುಡುವುದಲ್ಲದೇ ಯಾವುದೇ ಒಳಿತನ್ನೂ ಮಾಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT