ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೆಂಬ್ಲಿ ಹಾಡು ತಂದ ಸ್ಫೂರ್ತಿ!

ಅಕ್ಷರ ಗಾತ್ರ

‘ಸಾರ್, ನನಗೆ ಚಳಿ ಜ್ವರ ಬಂದಿದೆ ಒಂದು ವಾರ ರಜಾ ಬೇಕು’ ಎಂದು ಪೆಕರ ಕಚೇರಿಗೆ ಅರ್ಜಿ ಗುಜರಾಯಿಸಿದ.
‘ಬೆಳಗಾವಿಯಲ್ಲಿ ಅಧಿವೇಶನಕ್ಕೆ ಹೋಗಿ ಕವರೇಜ್ ಮಾಡಿ ಎಂದಕೂಡಲೇ ನಿಮಗೆ ಚಳಿಜ್ವರ ಬಂದು ಬಿಡುತ್ತೆ, ಚಳಿಜ್ವರ ಬರಬೇಕಾದ್ದು ಅಯ್ಯ ಅವರಿಗೆ, ನಿಮಗೇನ್ರೀ ಹೆದರಿಕೆ?’ ಎಂದು ಸಂಪಾದಕರು ನಯವಾಗಿಯೇ ಪೆಕರನನ್ನು ದಬಾಯಿಸಿದರು.

‘ಸಾರ್, ಅವರೂ ಚಳಿಜ್ವರದಿಂದ ಮಲಗಿದ್ದಾರೆ. ಮೂರು ದಿನ ಆಯ್ತು, ನೀವು ಹೇಳಿದಂತೆಯೇ ಆಗಿದೆ ಸಾರ್’ ಎಂದು ಪೆಕರ ಮತ್ತೊಂದು ಮಾಹಿತಿ ಕೊಟ್ಟ.

‘ಈಗ ಜ್ವರ ಹೋಗಿರಬೇಕಲ್ಲ! ಇದುವರೆಗೆ ಅಯ್ಯ ಅವರಿಗೆ ನೀರಿಳಿಯದ ಗಂಟಲೊಳ್ ಲಾಡು ತುರುಕಿಕೊಂಡಂತಾಗಿತ್ತು. ಈ ಲಾಡು, ಗಣಿಮಣ್ಣಿನೊಳಗೆ ಉರುಳಾಡಿ, ಅದಕ್ಕೆ ಗಣಿ­ಮಣ್ಣು ಮೆತ್ತಿಕೊಂಡಿದೆ ಎನ್ನುವುದು ಗೊತ್ತಿದ್ದರೂ ಅಯ್ಯ ಅವರು ನುಂಗಲೂ ಆಗದೆ, ಉಗಿಯಲೂ ಆಗದೆ, ಪರದಾಡು­ತ್ತಿದ್ದರು. ಅಂತೂ ಇಂತೂ ಲಾಡು ಔಟ್ ಆದ ಮೇಲೆ ಅಯ್ಯ ಅವ­ರು ನಿರಾಳರಾಗಿರಬೇಕಲ್ಲಾ?’ ಎಂದು ಸಂಪಾದಕರು ವಿವರಿಸಿದರು.

‘ಲಾಡು ರಾಜೀನಾಮೆ ಕೊಡಲಿ, ಕೊಡಲಿ ಎಂದು ಪದೇ ಪದೇ ಕೊಡಲಿಪೆಟ್ಟು ಹಾಕಿ ಒತ್ತಾಯಿಸುತ್ತಿದ್ದ ಆಪೋಸಿಷನ್ ಪಾರ್ಟಿಗಳು ಸುಸ್ತಾಗಿ ಬಿಟ್ಟಿವೆ ಸಾರ್. ಬೆಳಗಾವಿ ಅಧಿವೇಶನ­ದಲ್ಲಿ ಬೇಜಾನ್ ಪ್ರಶ್ನೆಗಳನ್ನು ಕೇಳಿ, ಅಯ್ಯ ಅವರನ್ನು ಚಕ್ರ­ವ್ಯೂಹ­ದಲ್ಲಿ ಕೆಡವಿಕೊಳ್ಳಬೇಕು ಎಂದು ಕಾಯುತ್ತಿದ್ದ ಮಾರ­ಸ್ವಾಮಿ, ರಪ್ಪ, ಶೆಟ್ಟರ್, ಭಟ್ಟರ್‌ ಪಾರ್ಟಿಗಳೆಲ್ಲಾ ಯುದ್ಧಕ್ಕೆ ಮುನ್ನವೇ ಎದುರು ಪಾರ್ಟಿ ಶಸ್ತ್ರತ್ಯಾಗ ಮಾಡಿ ಕ್ಲೀನಾಗಿ ಬಿಟ್ಟರೆ ನಮಗೆ ಬೇರೆ ವಿಷಯ ಎಲ್ಲಿಂದ ತರೋದು? ಎಂದು ಕೈಕೈ ಹಿಸುಕಿಕೊಳ್ತಾ ಇವೆಯಂತೆ ಸಾರ್’  ಪೆಕರ ವಿರೋಧ ಪಕ್ಷಗಳ ಪ್ರತಿಕ್ರಿಯೆಯನ್ನು ಮಂಡಿಸಿದ.

‘ಕಳಂಕಿತರನ್ನು ದೂರ ಇಟ್ಟಿರೋದು ದೊಡ್ಡ ವಿಷಯ ಬಿಡಿ. ಆದರೆ ಅಯ್ಯ ಅವರನ್ನು ಕೇಳಲು ಇನ್ನೂ ಹಲವಾರು ಪ್ರಶ್ನೆ­ಗಳು ಇದ್ದೇ ಇವೆಯಲ್ಲ. ‘ಶಾದಿಭಾಗ್ಯ’ದ ತಕರಾರು ಎತ್ತಿ ರಪ್ಪ ಅವರು ಗಾಂಧಿನಗರದಲ್ಲಿ ರಸ್ತೆಯಲ್ಲಿ ಮಲಗಿದ್ದರೂ ಅಯ್ಯ ಅವರು ಕೇರ್ ಮಾಡಲಿಲ್ಲ. ಹಲವಾರು ‘ಭಾಗ್ಯ’ಗಳಿಗೆ ಸಚಿವ ಸಂಪುಟದಲ್ಲೇ ಅಪಸ್ವರ ಇದೆಯಂತೆ. ಟ್ರಾನ್ಸ್‌ಫರ್ ಹಗರಣ ಏನು? ಇವೆಲ್ಲಾ ಪ್ರತಿಪಕ್ಷಗಳಿಗೆ ಸದಾಸಿದ್ಧ ಅಸ್ತ್ರ. ಇಂಥಾ ರಾಜಕಾರಣ ಬಿಟ್ಟು ಪ್ರತಿಪಕ್ಷ ನಾಯಕರು ಯಾವತ್ತಾದ್ರೂ ಅಭಿವೃದ್ಧಿ ಕೆಲಸ ಕಾರ್ಯಗಳ ಬಗೆಗ ವಿವರ ಕೇಳಿದ್ದಾರಾ? ಸಲಹೆ ಸೂಚನೆ ನೀಡಿದ್ದಾರಾ?’  ಸಂಪಾದಕರು ಪ್ರಶ್ನಿಸಿದರು.

‘ಕಳಂಕಿತರನ್ನು ದೂರ ಇಡಬೇಕು ಎಂದು ಅಯ್ಯ ಅವರು ಮೇಲಿಂದ ಮೇಲೆ ಹೇಳ್ತಾನೇ ಇದಾರೆ. ಆದರೆ ಡಿಕುಶಿಮಾರ ಅವರು ‘ಬೇಗ’ ಬೇಗ ಸಂಪುಟ ಸೇರಬೇಕೆಂದು ಒತ್ತಡ ಹೇರತಾ ಇದಾರೆ. ಲೋಕಸಭೆ ಚುನಾವಣೆಯ ಗಂಟೆ ಹೊಡೀತಾ ಇದೆ.  ಇಂಥ ಸಮಯದಲ್ಲಿ ರಾಮನಗರ ಗೆಲ್ಲಿಸಿ­ಕೊಟ್ಟವರನ್ನು ಬಿಡುವಂತಿಲ್ಲ. ಕಟ್ಟಿಕೊಳ್ಳುವಂತೆಯೂ ಇಲ್ಲ. ಇಂಥ ಸಮಯದಲ್ಲಿ ಒಂದು ವಿಕೆಟ್ ಪತನವಾಗಿದ್ದು ಕ್ಯಾಪ್ಟನ್‌­ಗೆ ಖುಷಿ ಆಗಿದೆ ಸಾರ್’- ಪೆಕರ ತನ್ನದೇ ಆದ ವಿಶ್ಲೇಷಣೆಯನ್ನು ಸಂಪಾದಕರ ಮುಂದೆ ಇಟ್ಟ.

‘ಒಂದು ವಿಕೆಟ್ ಉರುಳಿಸಿದ್ದಕ್ಕೆ ಆಪೋಸಿಷನ್ ಪಾರ್ಟಿ­ಯವರು ಖುಷಿ ಪಡೋದೇನಿಲ್ಲಾರೀ, ಅಯ್ಯ ಅವರು ಹಿರೇಮಠ­ರಿಗೂ, ದೊರೆಸ್ವಾಮಿಗಳಿಗೂ ಥ್ಯಾಂಕ್ಸ್ ಹೇಳಬೇಕೂರೀ’ ಎಂದು ಸಂಪಾದಕರು ಸ್ಪಷ್ಟೀಕರಿಸಿದರು.

‘ಆದರೂ ಕೊನೇ ಗಳಿಗೆಯಲ್ಲಿ ಲಾಡೂಜೀ, ಡಾಜಿಪಜೀ ಅವರ ಮನೆಗೆ ತೆರಳಿದ ಮೇಲೆ ಬ್ರೇಕಿಂಗ್‌ನ್ಯೂಸ್ ಬರೋತರಾ ಇತ್ತು ಸಾರ್, ಮೊನ್ನೆ ತಾನೇ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಗೆ ‘ಅಸ್ತು’ ತಂದ ಡಾಜಿಪಜೀ ಅವರಿಗೆ ಅಯ್ಯ ಅವ­ರು, ಆ ವಿಷಯ ಯುವರಾಜರು ಪ್ರಸ್ತಾಪಿಸಲೇ ಇಲ್ಲ ಎಂದು ಹೇಳುವ ಮೂಲಕ ಜಾಪಾಳ ಕೊಟ್ಟಿದ್ದರು. ಇಂಥ ಸನ್ನಿವೇಶ­ದಲ್ಲಿ ಲಾಡು, ಡಾಜಿಪಜೀ ಅವರ ಮನೆಗೆ ಹೋದರೆ ಜ್ವರ ಏರದೇ ಇರುತ್ತಾ?’

‘ಲೋಕಸಭೆ ಚುನಾವಣೆ ಆಗೋವರೆಗೆ ಡಾಜಿಪಜೀ ಅವರಿಗೆ ಬೇರೆ ದಾರಿ ಇಲ್ಲ. ಅಲ್ಲೀವರೆಗೂ ನಿಗಮ, ಮಂಡಳಿ ಅಂದ್ಕೊಂಡು ಎಲ್ರೂಕಾಯ್ರಿ ಅಂತ ಹೇಳಿಯಾಗಿದೆ. ಆದರೂ ನಮ್ಮ ಅಯ್ಯ ಅವರು, ಎದುರು ನಿಂತ ಕಂಟಕವನ್ನು ಯಶಸ್ವಿ­ಯಾಗಿ ನಿವಾರಿಸಿಕೊಂಡು, ಬೆಳಗಾವಿ ಕಡೆ ಹೊರಟಿರು­ವುದನ್ನು ಕಂಡರೆ ಜಟ್ಟಿ ಜಾರಿಬಿದ್ದರೂ ಅದೂ ಒಂದು ಪಟ್ಟು ಎನ್ನುವಂತಿದೆ. ಭಲೇ, ಭೇಷ್’ ಎಂದು ಸಂಪಾದಕರು ಹೊಗಳಿದರು.

‘ಅಯ್ಯೋ, ಬಿಡಿ ಸಾರ್, ಈ ರಾಜಕಾರಣಿಗಳು, ನಮ್ಮ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಅಧಿವೇಶನ ಮಾಡಿದ್ರೂ ಮಾಡೋದು ಅಷ್ಟರಲ್ಲೇ ಇದೆ. ಬೆಳಗಾವಿಯಲ್ಲಿ ಅಧಿವೇಶನ ಮಾಡಿದ್ರೂ ಮಾಡೋದು ಅಷ್ಟರಲ್ಲೇ ಇದೆ. ಅಸೆಂಬ್ಲಿಗೆ  ಅಂಥ ಬಂದೋರು ಒಳಗೆ ನಿದ್ದೆ ಮಾಡೋದು, ಮೊಗಸಾಲೆ­ಯಲ್ಲಿ ಹರಟೆ ಹೊಡೆಯೋದು, ಕೆಲವು ಸಲ ಅಸೆಂಬ್ಲಿ ಒಳಗೇ ನೀಲಿಚಿತ್ರ ವೀಕ್ಷಿಸೋದು... ಇಂಥವರಿಗೆಲ್ಲಾ ಏಕೆ ಬೇಕು ಸಾರ್, ಎಮ್‌ಎಲ್‌ಎಗಿರಿ?’ - ಪೆಕರ ದುಃಖಾರ್ತನಾಗಿ ಕೇಳಿದ.

‘ಬಿಡು, ಬಿಡು ಅದನ್ನೆಲ್ಲಾ ನಾವು ಮಾತನಾಡಬಾರದು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುವಂತಾ­ಗುತ್ತದೆ. ನಮ್ಮ ಕೈಲಾಸಂ ಬರೆದ ಹಾಡು ಓದಿದ್ದೀಯಾ? ಸ್ವಲ್ಪ ಕೇಳು ಇಲ್ಲಿ’ ಎಂದು ಸಂಪಾದಕರು ಕೈಲಾಸಂ ಬರೆದ ಡ್ರಿಂಕ್ಸಿನ ಹಾಡನ್ನು ಓದಿದರು.

ಮನುಷ್ಯ ಹುಟ್ಟಿದ ಆರೇಳುವರ್ಷ ಕುಡಿಯೋದು
ಬೇಗ ಜೀರ್ಣವಾಗ್ಲೀಂತ...ತಾಯೀ ಹಾಲು
ನಂತರ ಹತ್ತುಹನ್ನೆರಡು ವರ್ಷದವರೆಗೆ
ಬುದ್ಧಿ ಬಲೀಲೀಂತ... ಹಸುಹಾಲು
ಆಮೇಲೆ ಹದಿನೈದು ಇಪ್ಪತ್ತು ವರ್ಷದವರೆಗೆ
ಮೈಕೈ ಗಟ್ಟಿಯಾಗಲೀಂತ... ಎಮ್ಮೆಹಾಲು
ಏತನ್ಮಧ್ಯೆ ಕಜ್ಜೀ ಕುರು, ತುರಿ ಆದ್ರೆ
ಬೇಗ ವಾಸಿಯಾಗ್ಲೀಂತ ಹಚ್ತಾರೆ... ಕಳ್ಳೀಹಾಲು

ಅಪರೂಪಕ್ಕೆ ನಮ್ಮ ಗಾಂಧೀಯಂತವರು
ಮನಸ್ಸು ಶಾಂತವಾಗಿರಲೀಂತ... ಮೇಕೆ ಹಾಲು
ಇದೆಲ್ಲಾದ್ರಲ್ಲೂ ನಂಬ್ಕೆ ಕಳ್ಳೊಂಡು
ಮುಂಡ್ಮೋಚ್ಕೊಂಡ್ಮೇಲೆ
ನಮ್ಮಂಥೋರ್ಗೆ ಸಿಕ್ಕೋದು ಆಲ್ಕೋಹಾಲು.
ಮಾನಮರ್ಯಾದೆನೆಲ್ಲಾ ಬಿಟ್ಟು ಬದುಕೋ
ಪುಢಾರಿಗಳಿಗೆ ಕೊನೇವರ್ಗೂ ಛಿ
ಬೇಕೇಬೇಕು... ಅಸೆಂಬ್ಲಿಹಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT