ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರಕ್ಕೆ ಸಾತ್ವಿಕತೆಯ ಪೆಟ್ಟು

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಹಮ್ಮದ ಗಝನಿ ಭಾರತದ ಮೇಲೆ ಮೇಲಿಂದ ಮೇಲೆ ದಾಳಿ ನಡೆಸಿ ಅಪಾರ ಸಂಪತ್ತನ್ನು ಲೂಟಿ ಮಾಡಿದ, ಅನೇಕ ದೇವಸ್ಥಾನಗಳನ್ನು ಹಾಳುಗೆಡವಿದ ಎಂದು ಇತಿಹಾಸ ದಾಖಲಿಸುತ್ತದೆ. ಮತ್ತೊಬ್ಬರಿಗೆ ತೊಂದರೆಕೊಟ್ಟು ಸಂತೋಷಪಡುತ್ತಿದ್ದ ಕ್ಷುದ್ರ ಜೀವಿ ಆತ ಎಂದೂ ಕೆಲವು ದಾಖಲೆಗಳು ಹೇಳುತ್ತವೆ.

ಅವನಿಗೆ ಸ್ವಲ್ಪ ವಯಸ್ಸಾದ ಮೇಲೆ ಮನಸ್ಸಿಗೆ ಶಾಂತಿಯೇ ಇಲ್ಲದಾಯಿತಂತೆ. ಮತ್ತೊಬ್ಬರಿಗೆ ವಿನಾಕಾರಣ ತೊಂದರೆ ಕೊಟ್ಟ ಯಾರಿಗೂ ಮನಃಶಾಂತಿ ಸಿಗುವುದು ಸಾಧ್ಯವಿಲ್ಲ, ಯಾಕೆಂದರೆ ಅಂತಃಸಾಕ್ಷಿ  ಸದಾ ಚುಚ್ಚುತ್ತಲೇ ಇರುತ್ತದೆ. ಗಝನಿಯನ್ನು ಖಿನ್ನತೆ ಆವರಿಸಿಕೊಳ್ಳುತ್ತಿತ್ತು. ಅವನ ಸ್ಥಿತಿಯನ್ನು ನೋಡಿ ಮಂತ್ರಿಗಳು ಅವನಿಗೊಂದು ಸಲಹೆ ನೀಡಿದರು, `ಪ್ರಭೂ, ನಿಮ್ಮ ಮನಸ್ಸು ಅಂತಃಸಾಕ್ಷಿಯ ಕಾಟದಿಂದ ಪಾರಾಗಬೇಕಾದರೆ ಕೆಲಕಾಲವಾದರೂ ಸಜ್ಜನರ ಸಹವಾಸದಲ್ಲಿರಬೇಕು.

ಯಾವುದಾದರೂ ಶ್ರೇಷ್ಠ ಸಂತರೊಡನೆ ಕಾಲಕಳೆದು ಅವರ ಉದಾತ್ತ ಚಿಂತನೆಗಳನ್ನು ಮನನ ಮಾಡಿಕೊಂಡರೆ ಮನಸ್ಸಿನ ಭಾರ ಹಗುರಾಗುತ್ತದೆ.~ ಗಝನಿಗೂ ಈ ಸಲಹೆ ಸರಿ ಎನ್ನಿಸಿತು. `ಹಾಗಾದರೆ ಯಾವ ಸಂತನ ಬಳಿಗೆ ಹೋಗಲಿ?~ ಎಂದು ಅವರನ್ನೇ ಕೇಳಿದ. ಅವರು ವಿಚಾರ ಮಾಡಿ ಅಂದಿಗೆ ಅತ್ಯಂತ ಶ್ರೇಷ್ಠನಾದ ಅನುಭಾವಿ ಸಂತ ಅಬು ಹಸನ್‌ನೇ ಸರಿಯಾದ ಗುರು ಎಂದು ಹೇಳಿದರು.

`ಹಾಗಾದರೆ ಅವರ ಬಳಿಗೆ ಹೋಗಲು ಸರ್ವಸಿದ್ಧತೆಗಳಾಗಲಿ, ನಾವು ಆಶ್ರಮಕ್ಕೆ ಬರುವ ವಿಷಯವನ್ನು ಹಸನ್‌ರಿಗೆ ಮೊದಲೇ ತಿಳಿಸಿ. ಆಶ್ರಮ ನಮ್ಮ ಇರುವಿಕೆಗೆ ಸಿದ್ಧವಾಗಲಿ~ ಎಂದು ಅಪ್ಪಣೆ ಕೊಟ್ಟ ಗಝನಿ. ವೇಗವಾಗಿ ಓಡುವ ಕುದುರೆಗಳ ಮೇಲೆ ಬಂದ ದೂತರು ಹಸನ್‌ನ ಮುಂದೆ ನಿಂತು ವಿಷಯ ತಿಳಿಸಿದರು. ಆಶ್ರಮದಲ್ಲಿ ಸೂಕ್ತ ಬದಲಾವಣೆ ಮಾಡಲು ಅವನ ಅಪ್ಪಣೆ ಕೇಳಿದರು. ಆಗ ಹಸನ್ ಹೇಳಿದ, `ನಾನೀಗ ರಾಜರೆಲ್ಲರ ರಾಜನಲ್ಲಿ ಮನಸ್ಸನ್ನು ತೊಡಗಿಸಿಕೊಂಡಿದ್ದೇನೆ. ಬೇರೆ ಯಾವ ರಾಜರನ್ನೂ ಸ್ವೀಕರಿಸುವ ಮನಸ್ಸು, ಸಮಯ ಎರಡೂ ನನಗಿಲ್ಲ. ಆಶ್ರಮ ಇರುವುದೇ ಹೀಗೆ. ಯಾವ ಬದಲಾವಣೆಯೂ ಅಗತ್ಯವಿಲ್ಲ. ನಿಮ್ಮ ರಾಜ ಹಾಗೇ ಬಂದು ಇರುವುದಾದರೆ ಸರಿ.~

ದೂತರು ಮರಳಿ ಬಂದು ವಿಷಯವನ್ನು ರಾಜನಿಗೆ ತಿಳಿಸಿದರು. ರಾಜನ ಕೋಪನೆತ್ತಿಗೇರಿತು. ತನ್ನನ್ನು ಇಷ್ಟು ಹಗುರವಾಗಿ ಕಾಣುವಷ್ಟು ಅಹಂಕಾರವೇ ಆ ಬಡಸನ್ಯಾಸಿಗೆ? ಅವನಿಗೊಂದು ತಕ್ಕ ಪಾಠ ಕಲಿಸಬೇಕೆಂದು ಗಝನಿ ತನ್ನ ಪರಿವಾರವನ್ನು ಸಮಸ್ತ ಸಂಭ್ರಮ, ಅಲಂಕಾರಗಳೊಡನೆ ಕರೆದುಕೊಂಡು ಆಶ್ರಮಕ್ಕೆ ನಡೆದ. ಸಂತನ ಮೇಲೆ ಪ್ರಭಾವ ಬೀರಲು ಭಾರೀ ವೇಷಭೂಷಣಗಳನ್ನು ತೊಟ್ಟುಕೊಂಡು ಸಾಧ್ಯವಿದ್ದಷ್ಟು ಬಂಗಾರದ ಆಭರಣಗಳನ್ನು ಹೇರಿಕೊಂಡಿದ್ದ.

ಆಶ್ರಮದ ಮುಖ್ಯದ್ವಾರಕ್ಕೆ ಬಂದಾಗಲೂ ಸಂತ ತನ್ನನ್ನು ಇದಿರುಗೊಳ್ಳಲು ಬರಲಿಲ್ಲವೆಂಬ ಸಿಟ್ಟು ಗಝನಿಗೆ. ಬಹುಶಃ ತನಗೆ ಅಪಮಾನ ಮಾಡಲೆಂದೇ ಹೀಗೆ ಮಾಡಿರಬಹುದೆಂದುಕೊಂಡ. ಸಂತ ಹಸನ್‌ನನ್ನು ಪರೀಕ್ಷಿಸಲು ತನ್ನ ಪೋಷಾಕುಗಳನ್ನು ತೆಗೆದಿಟ್ಟು, ಕೇವಲ ಒಬ್ಬ ಗುಲಾಮನ ಬಟ್ಟೆಗಳನ್ನು ಧರಿಸಿ ಸಂತನ ಮುಂದೆ ಬಂದು ನಿಂತ. `ಓ ದೇವದೂತರಾದ ಸಂತರೇ, ಮಹಾಪ್ರಭುಗಳು ಬಂದಿದ್ದಾರೆ. ತಾವು ಅವರನ್ನು ಮಹಾದ್ವಾರದಲ್ಲಿ ಸ್ವಾಗತಿಸಬಹುದಲ್ಲ?~ ಎಂದು ಕೇಳಿದ. ಹಸನ್ ತಲೆ ಎತ್ತಿ ನೋಡಿ, `ನಿನ್ನ ಮುಖದಲ್ಲಿ ಒಡೆದು ತೋರುವ ಗರ್ವವೇ ನೀನು ಗುಲಾಮನಲ್ಲ, ರಾಜ ಎಂದು ತೋರುತ್ತದೆ. ನನ್ನಿಂದ ಯಾವ ಸಹಕಾರ ನಿನಗೆ ಬೇಕಿದ್ದರೆ ಈ ಅಬ್ಬರದ ಪರಿವಾರವನ್ನೆಲ್ಲ ಕಳುಹಿಸಿ ನೀನೊಬ್ಬನೇ ಇಲ್ಲಿರು~ ಎಂದು ಹೇಳಿದ. ಕೆಲನಿಮಿಷಗಳ ನಂತರ ಗಝನಿ ಸಾವಿರ ಬಂಗಾರದ ಮೊಹರುಗಳನ್ನು ಸಂತನಿಗೆ ಕೊಟ್ಟು, `ನೀವು ಈಗ ನೀಡಿದ ಸಮಯಕ್ಕೆ ಇಷ್ಟು ಬೆಲೆ ಸಾಕೇ?~ ಎಂದು ಹುಬ್ಬೇರಿಸಿ ಕೇಳಿದ. ಆಗ ಹಸನ್ ಎದ್ದು ಒಂದು ಒಣಗಿ ಬಿರುಸಾಗಿದ್ದ ರೊಟ್ಟಿಯ ತುಣುಕೊಂದನ್ನು ಗಝನಿಗೆ ಕೊಟ್ಟು ತಿನ್ನಲು ಹೇಳಿದ.

ಗಝನಿಗೆ ಅದನ್ನು ಕಡಿದು ನುಂಗಲು ಆಗಲೇ ಇಲ್ಲ. ಆಗ ಹಸನ್ ಹೇಳಿದ, `ನಾನು ಕೊಟ್ಟ ಒಂದು ಒಣಗಿದ ರೊಟ್ಟಿಯ ತುಂಡನ್ನೇ ತಿಂದು ಅರಗಿಸಲು ನಿನ್ನಿಂದ ಆಗದಿದ್ದಾಗ ನಿನ್ನಂತಹ ಅಹಂಕಾರಿಯಾದ ರಾಜ ಕೊಟ್ಟ ಬಂಗಾರದ ತುಂಡುಗಳನ್ನು ನಾನು ಹೇಗೆ ಅರಗಿಸಿಕೊಳ್ಳಲಿ?~  ಹೀಗೆ ಹೇಳಿ ನಾಣ್ಯದ ಚೀಲವನ್ನು ಹಿಂತಿರುಗಿಸಿಬಿಟ್ಟ. ಗಝನಿಯ ಅಹಂಕಾರ ನೆಲಕ್ಕಿಳಿಯಿತು.

ಅತಿಯಾದ ಅಹಂಕಾರಕ್ಕೆ ಸಾತ್ವಿಕತೆಯಿಂದ ಕಾಲಕಾಲಕ್ಕೆ ಈ ತರಹದ ಪೆಟ್ಟು ಬಿದ್ದೇ ಬೀಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT