ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಉತ್ತರ ಕುಮಾರ, ಈ ಉತ್ತರ ಕೊರಿಯಾ?

Last Updated 25 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಉತ್ತರ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಯುದ್ಧ ಸಂಭವಿಸಬಹುದೇ? ಉತ್ತರ ಕೊರಿಯಾ ತನ್ನ ಮೇಲೆರಗಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ, ಉಗ್ರಗಾಮಿಗಳ ಮೂಲಕ ದಾಳಿ ನಡೆಸಲು ಸಜ್ಜಾಗಿದೆ ಎಂದು ದಕ್ಷಿಣ ಕೊರಿಯಾ ಜಾಗತಿಕ ಸಮುದಾಯದ ಎದುರು ಆರೋಪಿಸಿದೆ. ಇದಕ್ಕೆ ಪೂರಕವಾಗಿ ಉತ್ತರ ಕೊರಿಯಾ, ದಕ್ಷಿಣ ಕೊರಿಯಾಕ್ಕೆ ಹೊಂದಿಕೊಂಡಿರುವ ದ್ವೀಪದಲ್ಲಿ ಸೇನಾ ತಾಲೀಮಿಗೆ ಇಳಿದಿದೆ. ಸಿಡಿಗುಂಡುಗಳನ್ನು ಹಾರಿಸುವ ಮೂಲಕ ಶಂಖನಾದ ಮಾಡಿದೆ.

ಆದರೆ ದಕ್ಷಿಣ ಕೊರಿಯಾದ ಮೇಲೆ ಏಕಾಏಕಿ ಯುದ್ಧಕ್ಕೆ ಇಳಿಯುವುದು ಅಷ್ಟು ಸುಲಭವೇ? ದಕ್ಷಿಣ ಕೊರಿಯಾ ಅಮೆರಿಕದೊಂದಿಗೆ ನಿಕಟ ಸ್ನೇಹ ಹೊಂದಿದೆ. ಜಪಾನ್ ಕೂಡ ಉತ್ತರ ಕೊರಿಯಾವನ್ನು ವೈರಿಯಾಗಿಯೇ ನೋಡುತ್ತದೆ. ಹಾಗಾಗಿ ಯುದ್ಧ ನಡೆದರೆ, ಉತ್ತರ ಕೊರಿಯಾ ದೈತ್ಯ ಶಕ್ತಿಗಳನ್ನು ರಣರಂಗದಲ್ಲಿ ಎದುರಿಸಬೇಕಾಗುತ್ತದೆ. ತಾನು ಬಡಾಯಿ ಕೊಚ್ಚಿಕೊಳ್ಳುವಷ್ಟು ಬಲ ಉತ್ತರ ಕೊರಿಯಾಕ್ಕೆ ಇಲ್ಲ. ತೆರೆಮರೆಯಿಂದ ಚೀನಾ ಎಷ್ಟೇ ಉತ್ತೇಜಿಸಿದರೂ, ಬಹಿರಂಗವಾಗಿ ಜಾಗತಿಕ ಸಮುದಾಯದ ಎದುರು ಉತ್ತರ ಕೊರಿಯಾದ ದುರುಳತನವನ್ನು ಅದು ಸಮರ್ಥಿಸಿಕೊಳ್ಳಲಾರದು.

ಬಿಡಿ, ಉತ್ತರ ಕೊರಿಯಾ ಧೂರ್ತ ರಾಷ್ಟ್ರ ಎನ್ನುವುದು ಕಳೆದ ಕೆಲವು ದಶಕಗಳಲ್ಲಿ ಸಾಬೀತಾಗಿರುವ ಸಂಗತಿ. ಒಂದು ಕುಟುಂಬದ ಸರ್ವಾಧಿಕಾರದ ಹಿಡಿತದಲ್ಲಿರುವ ಈ ದೇಶ, ಆರ್ಥಿಕವಾಗಿ ಕುಗ್ಗಿ ಹೋಗಿದೆ. ಭ್ರಷ್ಟಾಚಾರದಲ್ಲಿ ಸೊಮಾಲಿಯಾ ಜೊತೆ ಪೈಪೋಟಿ ನಡೆಸಿ, ಜಗತ್ತಿನ ಅತಿಭ್ರಷ್ಟ ರಾಷ್ಟ್ರ ಎಂಬ ಕುಖ್ಯಾತಿ ಗಳಿಸಿದೆ. ಮುಖ್ಯವಾಗಿ ತನ್ನ ಭಂಡತನದಿಂದಷ್ಟೇ ಸುದ್ದಿಯಾಗುತ್ತಿರುತ್ತದೆ. ಉತ್ತರ ಕೊರಿಯಾದ ಸಂವಿಧಾನ ತನ್ನ ಪ್ರಜೆಗಳಿಗೆ ಮಾನವ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನೇನೋ ಖಾತ್ರಿಗೊಳಿಸಿದೆ. ಆದರೆ ‘ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ’ದ ನೇತೃತ್ವದಲ್ಲಿರುವ ಸರ್ಕಾರ, ಅದರಲ್ಲೂ ಕಿಮ್ ಇಲ್ ಸುಂಗ್ ಕುಟುಂಬದ ಸರ್ವಾಧಿಕಾರದ ಆಡಳಿತ ಕಳೆದ 65 ವರ್ಷಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಬರ್ಖಾಸ್ತುಗೊಳಿಸಿದೆ.

1948ರಿಂದ ಇದುವರೆಗೂ ಕಿಮ್ ಇಲ್ ಸುಂಗ್, ಕಿಮ್ ಜಾಂಗ್ ಇಲ್ ಮತ್ತು ಕಿಮ್ ಜಾಂಗ್ ಉನ್ ಎಂಬ ತಾತ, ಮಗ, ಮೊಮ್ಮಗನ ಆಡಳಿತದಲ್ಲಿರುವ ಉತ್ತರ ಕೊರಿಯಾ ಸಾಧಿಸಿದ್ದೇನು ಎಂದು ನೋಡಿದರೆ ಹಗೆತನ ಮಾತ್ರ. ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್ ಮೇಲಿನ ಉತ್ತರ ಕೊರಿಯಾದ ಹಗೆತನಕ್ಕೆ ಅರವತ್ತೈದು ವರ್ಷಗಳ ಇತಿಹಾಸ ಇದೆ. ಎರಡನೇ ಮಹಾಯುದ್ಧದ ತರುವಾಯ ಕೊರಿಯಾ ವಿಭಜನೆ ಸಂದರ್ಭದಲ್ಲಿ ಉತ್ತರ ಕೊರಿಯಾ ಪರವಾಗಿ ರಷ್ಯಾ ನಿಂತರೆ, ದಕ್ಷಿಣ ಕೊರಿಯಾ ಪರವಾಗಿ ಅಮೆರಿಕ ನಿಂತಿತು. ಮೂರು ವರ್ಷಗಳ ಕಾಲ ನಡೆದ ಯುದ್ಧದಲ್ಲಿ ಲಕ್ಷಾಂತರ ಜನ ಪ್ರಾಣತೆತ್ತರು. ಕೊನೆಗೆ ಕದನ ವಿರಾಮದೊಂದಿಗೆ ಯುದ್ಧ ಅಂತ್ಯವಾದರೂ ದಕ್ಷಿಣ ಕೊರಿಯಾದ ಅಸ್ತಿತ್ವವನ್ನು ಉತ್ತರ ಕೊರಿಯಾ ಒಪ್ಪಿಕೊಳ್ಳಲಿಲ್ಲ. ದಕ್ಷಿಣ ಕೊರಿಯಾವನ್ನು ಮರಳಿ ಪಡೆಯುವುದನ್ನೇ ತನ್ನ ಗುರಿಯಾಗಿಸಿಕೊಂಡಿತು.

ತನ್ನ ಸಂಪನ್ಮೂಲಗಳನ್ನು ಜನರ ಬವಣೆ ತೊಲಗಿಸಲು ಬಳಸದೇ ಮಿಲಿಟರಿಗೆ, ಯುದ್ಧೋಪಕರಣಗಳ ಅನ್ವೇಷಣೆಗೆ ತೆಗೆದಿರಿಸಿತು. ಗಡಿಯಲ್ಲಿ ಎರಡೂ ದೇಶಗಳ ಯೋಧರು ಸದಾ ಯುದ್ಧ ಸನ್ನದ್ಧರಾಗಿ ನಿಲ್ಲುವಂತಾಯಿತು. ಆದರೆ ಸೋವಿಯತ್ ರಷ್ಯಾದ ಪತನದ ನಂತರ ಉತ್ತರ ಕೊರಿಯಾ ಏಕಾಂಗಿಯಾಯಿತು. ಅಭದ್ರತೆಯಿಂದಾಗಿ ಮಿಲಿಟರಿಗೆ ವ್ಯಯಿಸುವ ಹಣವನ್ನು ಮತ್ತಷ್ಟು ಹೆಚ್ಚಿಸಿತು. ಚೀನಾ ದೊಡ್ಡ ಶಕ್ತಿಯಾಗಿ ಬೆಳೆದಾಗ, ಅದರೊಂದಿಗೆ ಬಾಂಧವ್ಯ ಹೊಂದಲು ಹವಣಿಸಿತು. ಉತ್ತರ ಕೊರಿಯಾ ಮತ್ತು ಚೀನಾ ಸ್ನೇಹದ ತಂತುಗಳು ಮೊದಲು ಹೆಣೆದುಕೊಂಡಿದ್ದು ಮಾವೋನ ಕಾಲದಲ್ಲಿ. ಚೀನಾ- ಜಪಾನ್ ಯುದ್ಧದ ವೇಳೆ ಚೀನಾದ ಬೆಂಬಲಕ್ಕೆ ಕಿಮ್ ಸುಂಗ್ ಪಡೆ ನಿಂತರೆ, ಕೊರಿಯಾ ಯುದ್ಧದಲ್ಲಿ ಚೀನಾ ಉತ್ತರ ಕೊರಿಯಾಕ್ಕೆ ಸಹಾಯ ಹಸ್ತ ಚಾಚಿತ್ತು.

ಸಾವಿರಾರು ಚೀನೀ ಸೈನಿಕರು ಕೊರಿಯಾ ಯುದ್ಧದಲ್ಲಿ ಮಡಿದರು. ಸ್ವತಃ ಮಾವೋ ಮಗ ಕೂಡ ಪ್ರಾಣತೆತ್ತ. ಆತನ ಸಮಾಧಿಯನ್ನು ಉತ್ತರ ಕೊರಿಯಾದ ರಾಜಧಾನಿ ಪ್ಯೋಂಗ್ಯಾಂಗ್‌ನಲ್ಲಿ ನಿರ್ಮಿಸಲಾಯಿತು. ಆದರೆ ನಂತರ ಚೀನಾ ಆರ್ಥಿಕ ಶಕ್ತಿಯಾಗಿ ಎದ್ದು ನಿಲ್ಲಲು ಹವಣಿಸಿದಾಗ, ಅದಕ್ಕೆ ದಕ್ಷಿಣ ಕೊರಿಯಾದೊಂದಿಗಿನ ಗೆಳೆತನ ಹೆಚ್ಚು ಲಾಭದಾಯಕ ಎನಿಸಿತು. ಇದರಿಂದ ಕುಪಿತಗೊಂಡ ಕಿಮ್ ಇಲ್ ಸುಂಗ್, ಮಾರ್ಕ್ಸ್ ಮತ್ತು ಲೆನಿನ್ ವಾದಗಳನ್ನು ಮೂಲೆಗೆ ತಳ್ಳಿ, ತನ್ನದೇ ಹೊಸ ಸಿದ್ಧಾಂತವನ್ನು ಮುಂದಿಟ್ಟರು. ಅದನ್ನು ‘ಜೂಚೆ’ ಎಂದು ಕರೆದರು. ಅಂದರೆ ‘ಆತ್ಮ ವಿಶ್ವಾಸ’ವೇ ಉತ್ತರ ಕೊರಿಯಾವನ್ನು ಮುನ್ನಡೆಸಲಿದೆ ಎಂಬುದನ್ನು ಕಿಮ್ ಸುಂಗ್ ಪ್ರತಿಪಾದಿಸಿದರು. ಆತ್ಮವಿಶ್ವಾಸ ಗಳಿಸಿಕೊಳ್ಳುವುದು ಎಂದರೆ ಸಾಮರಿಕವಾಗಿ ಶಕ್ತಿಶಾಲಿಯಾಗುವುದು ಎಂದಷ್ಟೇ ನಂಬಿದ ಉತ್ತರ ಕೊರಿಯಾ, ‘ಮಿಲಿಟರಿ ಫಸ್ಟ್’ ತತ್ವವನ್ನು ತನ್ನ ನರನಾಡಿಗಳಲ್ಲಿ ತುಂಬಿಕೊಂಡಿತು.

ಸಂವಿಧಾನದಲ್ಲಿದ್ದ ಕಮ್ಯುನಿಸಂನ ಎಲ್ಲ ಉಲ್ಲೇಖಗಳನ್ನು ಅಳಿಸಿಹಾಕಿತು. ಆದರೂ ಆಳುವವರಲ್ಲಿ ಕಮ್ಯುನಿಸಂ ನಶೆ ಇಳಿಯಲೇ ಇಲ್ಲ. ಸರ್ವಾಧಿಕಾರಿ ಧೋರಣೆ ಹೋಗಲಿಲ್ಲ. ಚೀನಾದೊಂದಿಗೆ ವ್ಯವಹರಿಸಲು ಸಣ್ಣ ಕಿಟಕಿಯನ್ನು ಉಳಿಸಿಕೊಂಡು, ಹೊರಜಗತ್ತಿನ ಸಂಪರ್ಕವೇ ಬೇಡ ಎಂಬಂತೆ ತನ್ನ ಎಲ್ಲ ಬಾಗಿಲುಗಳನ್ನೂ ಮುಚ್ಚಿತು. ತನ್ನ ವ್ಯವಹಾರಗಳನ್ನು ಗುಪ್ತವಾಗಿ ನಡೆಸಲು ಆರಂಭಿಸಿತು. ಅಣ್ವಸ್ತ್ರ ತಯಾರಿಸಲು ಉತ್ತರ ಕೊರಿಯಾ ಮುಂದಾದಾಗ ರಷ್ಯಾ ಅದಕ್ಕೆ ಅಗತ್ಯ ನೆರವು ನೀಡಿತು. ಕಿಮ್ ಸುಂಗ್ 1994ರಲ್ಲಿ ತೀರಿಕೊಂಡಾಗ ಮಗ ಕಿಮ್ ಇಲ್ ಅಧ್ಯಕ್ಷರಾದರು. ಕಿಮ್ ಇಲ್ ಕಾಲದಲ್ಲಿ ಸರ್ವಾಧಿಕಾರದ ಹುಚ್ಚಾಟ ತಾರಕಕ್ಕೇರಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯ ತೋರಿದವರನ್ನು ಕೊಲ್ಲಲಾಯಿತು. ಮನೆಯ ಸದಸ್ಯನೊಬ್ಬ ಅಪರಾಧ ಎಸಗಿದರೆ, ಇಡೀ ಕುಟುಂಬವನ್ನೇ ಜೈಲಿಗಟ್ಟುವುದು ಆರಂಭವಾಯಿತು.

ಯಾವುದೇ ಚಳವಳಿ, ಹೋರಾಟಕ್ಕೂ ಆಸ್ಪದವಿಲ್ಲದಾಯಿತು. ಉತ್ತರ ಕೊರಿಯಾದ ಜನರಿಗೆ ಹೊರಜಗತ್ತಿಗೆ ಇಣುಕಲು ಸಾಧ್ಯವಾಗಲಿಲ್ಲ. ಉತ್ತರ ಕೊರಿಯಾದ ಮಿಲಿಟರಿ ತನ್ನ ಭದ್ರಕೋಟೆಯಲ್ಲಿ ಜನರನ್ನು ಬಂಧಿಸಿಟ್ಟಿತು. ಕಿಮ್ ಇಲ್ ಮರಣಾ ನಂತರ 2012ರಲ್ಲಿ ಕಿಮ್ ಉನ್ ಉತ್ತರ ಕೊರಿಯಾದ ಸರ್ವೋಚ್ಚ ನಾಯಕನ ಪದವಿಗೆ ಏರಿದಾಗ, ಉತ್ತರ ಕೊರಿಯಾ ಬದಲಾವಣೆಗೆ ತೆರೆದುಕೊಳ್ಳುವುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಕಿಮ್ ಉನ್ ತನ್ನ ತಂದೆಯ ಹಾದಿಯನ್ನೇ ತುಳಿದರು. ‘ಅಮೆರಿಕವನ್ನು ಧ್ವಂಸ ಮಾಡುತ್ತೇವೆ’ ಎಂಬ ಆಕ್ರೋಶದ ಮಾತನ್ನು ಆಡುತ್ತಲೇ ಬಂದರು. ಸರ್ವಾಧಿಕಾರ ಮುಂದುವರೆಯಿತು. ಈ ಹಿಂದೆ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ, ಉತ್ತರ ಕೊರಿಯಾದಲ್ಲಿನ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ವಿಶೇಷ ವರದಿಯೊಂದನ್ನು ಸಿದ್ಧಪಡಿಸಿತ್ತು. ಅದರಲ್ಲಿ ಉಲ್ಲೇಖಿಸಿದಂತೆ ಉತ್ತರ ಕೊರಿಯಾದ ಆಡಳಿತ ಇಂದಿಗೂ ತನ್ನ ಪ್ರಜೆಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ನೋಡುತ್ತದೆ.

ಸರ್ವಾಧಿಕಾರದ ಪರ ಇರುವ ವರ್ಗಕ್ಕೆ ವಿಶೇಷ ಸೌಲಭ್ಯಗಳು ದೊರೆಯುತ್ತವೆ. ಉತ್ತಮ ಶಾಲೆ, ಆಸ್ಪತ್ರೆಗಳಿಗೆ ಇವರಿಗೆ ಪ್ರವೇಶವಿದೆ. ಖಾಸಗಿಯಾದ ದೂರವಾಣಿ, ಅಂತರ್ಜಾಲ ಬಳಸಲು ಅನುಮತಿ ಇದೆ. ಎರಡನೆಯದು, ಆಡಳಿತದ ಬಗ್ಗೆ ತಟಸ್ಥ ನಿಲುವು ಹೊಂದಿರುವ ರೈತ ಮತ್ತು ಕಾರ್ಮಿಕ ವರ್ಗ. ಸಾಮಾನ್ಯ ಸೌಲಭ್ಯಗಳು ಈ ವರ್ಗಕ್ಕೆ ದೊರೆಯುತ್ತವೆ. ಮೂರನೆಯದು, ಸರ್ವಾಧಿಕಾರದ ವಿರುದ್ಧ ನಿಲುವು ಹೊಂದಿರುವ ವರ್ಗ. ಈ ವರ್ಗದ ಜನ ಕೊರಿಯಾ ಯುದ್ಧದ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಪರ ನಿಲುವು ತಳೆದವರು, ಕಮ್ಯುನಿಸಂ ವಿರೋಧಿಸಿದ ಧಾರ್ಮಿಕರು. ಇವರನ್ನು ಆಡಳಿತ ತನ್ನ ವೈರಿಗಳೆಂದೇ ಪರಿಗಣಿಸಿದೆ. ಶಾಲೆ, ಆಸ್ಪತ್ರೆ, ವಸತಿ ಎಲ್ಲವುಗಳಿಂದ ದೂರ ಇಟ್ಟಿದೆ. ಹೀಗೆ ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಬಂಧಿತರಾಗಿರುವ ಜನರ ಬದುಕು ತೀರ ದುಃಸ್ಥಿತಿಯಲ್ಲಿದೆ. ಬಡತನ ಮತ್ತು ಆಹಾರದ ಕೊರತೆ ಉತ್ತರ ಕೊರಿಯಾವನ್ನು ಕಾಡುತ್ತಿದೆ.

‘ಉತ್ತರ ಕೊರಿಯಾದಲ್ಲಿ ಮನುಷ್ಯನ ಮೃತದೇಹ ಕೆಲವರಿಗೆ ಆಹಾರವಾಗುತ್ತಿದೆ’ ಎಂದು ‘ನ್ಯೂಯಾರ್ಕ್ ಟೈಮ್ಸ್’ ಎರಡು ವರ್ಷಗಳ ಕೆಳಗೆ ಉತ್ತರ ಕೊರಿಯಾ ಭೀಕರ ಬರಕ್ಕೆ ತುತ್ತಾದಾಗ ವರದಿ ಮಾಡಿತ್ತು. ಪರಿಸ್ಥಿತಿ ಹಾಗಿತ್ತು! ಶುದ್ಧ ಕುಡಿಯುವ ನೀರು, ವಿದ್ಯುತ್, ಸಾರಿಗೆ ವ್ಯವಸ್ಥೆ ಇನ್ನೂ ಉತ್ತರ ಕೊರಿಯಾದಲ್ಲಿ ಕನಸಾಗಿಯೇ ಉಳಿದಿವೆ. ಉದ್ಯಮಗಳು, ಕೈಗಾರಿಕೆಗಳು ಬೆಳೆಯದ ಕಾರಣ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೂ ಉತ್ತರ ಕೊರಿಯಾ ಅಣ್ವಸ್ತ್ರ, ಖಂಡಾಂತರ ಕ್ಷಿಪಣಿ, ಹೈಡ್ರೋಜನ್ ಬಾಂಬ್ ಎಂದು ಹಣವನ್ನು ಬತ್ತಳಿಕೆಗೆ ಅಸ್ತ್ರ ತುಂಬಿಕೊಳ್ಳಲು ಬಳಸುತ್ತಿದೆ. ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಯೋಚನೆ ಬಿಡುವುದಾದರೆ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ಮಿಸಿಕೊಡುವುದಾಗಿ ಯುರೋಪ್ ಒಕ್ಕೂಟ ಹೇಳಿದಾಗಲೂ ಉತ್ತರ ಕೊರಿಯಾ ಅದಕ್ಕೆ ಒಪ್ಪಲಿಲ್ಲ.

ಉತ್ತರ ಕೊರಿಯಾದ ಈ ನಿಲುವು ಇತರ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮುಖ್ಯವಾಗಿ ಅಮೆರಿಕ ಕಳವಳಗೊಂಡಿದೆ. ಅಮೆರಿಕದ ಮೇಲೆ ದಾಳಿ ಮಾಡಬೇಕು ಎಂಬುದು ಉತ್ತರ ಕೊರಿಯಾದ ಬಹುದಿನದ ಕನಸು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಚ್ಚರಿಕೆಯನ್ನು ಧಿಕ್ಕರಿಸಿ ಪರಮಾಣು ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಖಂಡಾಂತರ ಕ್ಷಿಪಣಿಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಇಳಿದದ್ದು ಎಲ್ಲವೂ ಆ ಕನಸನ್ನು ನನಸು ಮಾಡಿಕೊಳ್ಳುವ ಉದ್ದೇಶದಿಂದಲೇ. ಹಾಗಂತ ನಿಜಕ್ಕೂ ಉತ್ತರ ಕೊರಿಯಾದ ಬತ್ತಳಿಕೆಯಲ್ಲಿ ಈ ಎಲ್ಲ ಅಸ್ತ್ರಗಳು ಇವೆಯೇ? ಅದು ಮಾತ್ರ ಯಾರಿಗೂ ನಿಖರವಾಗಿ ಗೊತ್ತಿಲ್ಲ. ಉತ್ತರ ಕೊರಿಯಾ ಮಾತ್ರ ಬೊಬ್ಬಿರಿಯುತ್ತಲೇ ಇದೆ.

ಆದರೆ ಈ ಹಿಂದೆ ಹಲವು ಹತ್ತು ಬಾರಿ ಜಪಾನ್ ಮತ್ತು ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡುವ ಬೆದರಿಕೆ ಒಡ್ಡಿ ಕೊನೆಗೆ ಸಂಧಾನಕ್ಕೆ ಕೂತು ಅಷ್ಟೋ ಇಷ್ಟೋ ಆರ್ಥಿಕ ನೆರವು ಪಡೆದುಕೊಂಡು ಸುಮ್ಮನಾದ ಉದಾಹರಣೆಗಳಿವೆ. ಹಾಗಾಗಿ ರಣರಂಗಕ್ಕಿಳಿದರಷ್ಟೇ ಅದರ ಅಸಲಿ ಬಂಡವಾಳ ತಿಳಿದೀತು. ಹಾಗಂತ ಉತ್ತರ ಕೊರಿಯಾದ ಬೆದರಿಕೆಗಳನ್ನು ನಿರ್ಲಕ್ಷಿಸಬಹುದೇ? ಅದೂ ಕಷ್ಟವೆ. ಸಮಸ್ಯೆಗಳಿಂದ ಹೈರಾಣಾಗಿರುವ ದೇಶ, ತಾನೂ ನಾಶವಾಗಿ ಇತರರನ್ನೂ ನಾಶ ಮಾಡುವ ಮನಸ್ಥಿತಿ ಹೊಂದಿದ್ದರೆ ಅಪಾಯಕಾರಿ, ಹೀಗಾಗಿ ಉತ್ತರ ಕೊರಿಯಾದೊಂದಿಗೆ ಮಾತುಕತೆಗೆ ಮುಂದಾಗಿ ಪರಿಸ್ಥಿತಿ ತಹಬಂದಿಗೆ ತರುವುದು ಮೇಲು ಎಂಬ ಮಾತುಗಳೂ ಕೇಳಿಬರುತ್ತಿವೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಉಗ್ರಗಾಮಿಗಳಿಗೆ ಅಣ್ವಸ್ತ್ರ ಮಾರಲು ಉತ್ತರ ಕೊರಿಯಾ ಮುಂದಾದರೆ ಎಂಬ ಆತಂಕವೂ ಮಾತುಕತೆಯ ಅನಿವಾರ್ಯವನ್ನು ಒತ್ತಿ ಹೇಳುತ್ತಿದೆ.

ಒಟ್ಟಿನಲ್ಲಿ ಆಳುವವರ ಭಂಡತನ, ಹಗೆ, ಸರ್ವಾಧಿಕಾರಿ ಧೋರಣೆಯಿಂದ ನಲುಗಿರುವುದು ಉತ್ತರ ಕೊರಿಯಾದ ಜನ. ಕಾಲೇಜು ಕ್ಯಾಂಪಸ್ಸುಗಳಲ್ಲಿ ರಾಜಕೀಯ ಗುಂಪು ಕಟ್ಟಿಕೊಂಡು, ದೇಶದ ಅಖಂಡತೆಯ ವಿರುದ್ಧ ಘೋಷಣೆ ಕೂಗುವ, ಉಗ್ರನನ್ನು ಬೆಂಬಲಿಸಿ ಮೆರವಣಿಗೆ ಹೊರಡುವ, ಬೇಕಾದ್ದು ಮಾತನಾಡುವ ಮುಕ್ತ ಸ್ವಾತಂತ್ರ್ಯವಿದ್ದಾಗಿಯೂ ನಾವು ಉಸಿರುಗಟ್ಟಿದ ವಾತಾವರಣ ಎಂದು ಬೊಬ್ಬೆ ಹೊಡೆಯುತ್ತೇವೆ. ಇನ್ನು ಉತ್ತರ ಕೊರಿಯಾದ ಜನರ ಪಾಡು ಏನಿದ್ದೀತು ಊಹಿಸಿ. ಹೆಚ್ಚುಕಡಿಮೆ ಭಾರತ ವಿಭಜನೆಯಾದ ಸಮಯದಲ್ಲೇ ಕೊರಿಯಾ ಕೂಡ ವಿಭಜನೆಯಾಯಿತು.

ಉತ್ತರ ಕೊರಿಯಾ ಹಗೆತನವನ್ನೇ ಉಸಿರಾಡುತ್ತಾ, ಮೈಪೂರ ನಂಜು ತುಂಬಿಕೊಂಡು ಕುಸಿಯುವಾಗ, ದಕ್ಷಿಣ ಕೊರಿಯಾ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸ್ನೇಹ ಸಾಧಿಸಿ, ಮುಂದುವರಿದ ರಾಷ್ಟ್ರವಾಗುವ ಕನಸು ಕಂಡು ಆ ದಿಕ್ಕಿನಲ್ಲಿ ಹೆಜ್ಜೆ ಇರಿಸಿತು. ಎಲೆಕ್ಟ್ರಾನಿಕ್ಸ್, ಟೆಲಿ ಕಮ್ಯುನಿಕೇಷನ್, ಆಟೊಮೊಬೈಲ್ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತನ್ನು ಸಾಧಿಸಿತು. ಇಂದು ದಕ್ಷಿಣ ಕೊರಿಯಾ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಜಗತ್ತಿನೆದುರು ನಿಂತಿದೆ. ಮಿಲಿಟರಿ ಸರ್ವಾಧಿಕಾರಕ್ಕೆ ಒಪ್ಪಿಸಿಕೊಂಡ ಉತ್ತರ ಕೊರಿಯಾ ಹಲ್ಲು ಮಸೆಯುವುದನ್ನಷ್ಟೇ ಮಾಡುತ್ತಿದೆ. ನಮ್ಮ ಆದ್ಯತೆಗಳು ನಮ್ಮನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಭಾರತ, ಪಾಕಿಸ್ತಾನದಂತೆಯೇ ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಕೂಡ ಉದಾಹರಣೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT