ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಮಣ್ಣಲ್ಲೇ ಅನ್ನವಿತ್ತು

Last Updated 29 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕುಮಾರ ತನ್ನ ಕುಗ್ರಾಮದಿಂದ ಕಾಲೇಜಿಗೆ ಬರುತ್ತಿದ್ದ. ರಜೆ ಸಿಕ್ಕರೆ ಅಪ್ಪನ ಜೊತೆ ಮೀನು ಹಿಡಿಯಲು ಹೋಗುತ್ತಿದ್ದ. ಅವರ ಮನೆ ಮುಂದಿದ್ದ ಹಿನ್ನೀರಿನ ಮೀನುಗಳು ಇವರ ಮನೆಯ ಅನ್ನದ ಅಗುಳುಗಳಾಗಿದ್ದವು. ಅದನ್ನು ಕಂಟ್ರಾಕ್ಟ್ ಹಿಡಿದ ಮಾಲೀಕನಿಗೆ ಮೀನು ಶಿಕಾರಿ ಮಾಡಿಕೊಟ್ಟರೆ ಅವನು ಕೆ.ಜಿ.ಗಿಷ್ಟು ಎಂದು ಕೂಲಿ ದುಡ್ಡು ಕೊಡುತ್ತಿದ್ದ. ಈ ಆದಾಯದಲ್ಲೇ ಕುಮಾರನ ಮನೆ ಜೀವನ ನಡೀತಿತ್ತು.

ಆ ಡ್ಯಾಮಿನ ಕಂಟ್ರಾಕ್ಟ್ ತಾನೇ ವಹಿಸಿಕೊಳ್ಳ ಬೇಕೆಂಬ ಆಸೆ ಕುಮಾರನಿಗಿತ್ತು. ಆದರೆ, ಅಷ್ಟೊಂದು ಬಂಡವಾಳ ಅವನ ಕೈಯಲ್ಲಿರಲಿಲ್ಲ.  ನದಿಯ ಹಿನ್ನೀರು ಇಂಗಿದಾಗ ಹಳ್ಳಿಯಲ್ಲೇ ಕೂಲಿ ಕೆಲಸ ಹುಡುಕಿಕೊಳ್ಳುತ್ತಿದ್ದ. ಅವರಪ್ಪ ನೀರಿಳಿದ ಬಯಲಿನಲ್ಲಿ ಒಂದಿಷ್ಟು ಭತ್ತ, ತರಕಾರಿ ಬೆಳೆಯುತ್ತಿದ್ದರು. ಈ ದುಡಿಮೆ ಕುಟುಂಬದ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ಹಸಿವು, ಬಡತನಗಳ ಜವಾಬ್ದಾರಿ ಹೆಗಲಮೇಲಿಟ್ಟು ಕೊಂಡೇ ಆತ ತನ್ನ ಡಿಗ್ರಿಯ ಓದನ್ನು ಪೂರೈಸಿದ.

ಮುಂದೆ ಓದುವ ಆಸಕ್ತಿ ಇದ್ದರೂ ಮನೆಯ ಬಡತನ ಅವನ ಓದಿಗೆ ಅವಕಾಶ ಕೊಡಲಿಲ್ಲ. ಇರುವ ಡಿಗ್ರಿ ಮಾಕ್ಸ್ ಕಾರ್ಡ್‌ಗಳನ್ನಿಟ್ಟುಕೊಂಡು ಸರ್ಕಾರಿ ಕೆಲಸ ಸಿಗಬಹುದೇನೋ ಎಂದು ಹುಡುಕಾಡಿದ. ಸಾಧ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನೆಲ್ಲಾ  ಎದುರಿಸಿದ. ಆ ಪರೀಕ್ಷೆಗಳಲ್ಲಿ ಸಫಲನಾಗುವಷ್ಟು ಸಾಮಾನ್ಯ ಜ್ಞಾನವಾಗಲಿ, ತರಬೇತಿಯಾಗಲಿ ಅವನಲ್ಲಿರಲಿಲ್ಲ. ಎಲ್ಲಾ ಕಡೆ,  ಇಂಗ್ಲಿಷ್ ಭಾಷೆ ಒಂದು ಭೂತವಾಗಿ ಕಾಡತೊಡ ಗಿತು. ಮತ್ತಷ್ಟು ಇಂಗ್ಲಿಷ್ ಕಲಿಯಲು ಏನೇನೋ ಸರ್ಕಸ್ ಮಾಡಿದ.

ಸಾಕಷ್ಟು ಇಂಗ್ಲಿಷ್ ಪುಸ್ತಕ ಗಳನ್ನು ತಂದು ಉರು ಹೊಡೆದ. ಇಂಗ್ಲಿಷಿನಲ್ಲಿ ಮಾತು, ಬರವಣಿಗೆ ಕಲಿಯಲೆತ್ನಿಸಿ ಹತಾಶನಾದ. ಇದು ಸದ್ಯಕ್ಕೆ ತನ್ನಿಂದ ಸಾಧ್ಯವಾಗದ ಕೆಲಸವೆಂದು ಅರಿತು ಅದನ್ನೂ  ಕೈಬಿಟ್ಟ.  ನನ್ನ ಇನ್ನೊಬ್ಬ ಪ್ರಿಯ ಶಿಷ್ಯ ಲೋಕೇಶನಿಗೂ ಇಂಗ್ಲಿಷ್ ಜೀವ ತಿಂದು ಹಾಕಿತು. ಪಿಯುಸಿಯಲ್ಲಿ ಎಲ್ಲಾ ಪಾಸಾದರೂ ಆಂಗ್ಲರ ಭಾಷೆಯೊಂದು ಅಟಕಾಯಿಸಿಕೊಂಡಿತು. ಅವನೂ ಹಟ ಹಿಡಿದು, ನರನಾಡಿ ಏಕಮಾಡಿಕೊಂಡು ಐದಾರು ಸಲ ಬರೆದೇ ಬರೆದ. 

ಪ್ರತೀ ಸಲದ ಪರೀಕ್ಷೆಯಲ್ಲೂ, ಅವನ ಅಂಕಗಳು ಪಾತಾಳಕ್ಕಿಳಿದು ಕಣ್ಮರೆ ಯಾದವೇ ಹೊರತು ಪಾಸಿನ ತುದಿಯ ತನಕ ಬರಲೇ ಇಲ್ಲ. ಎರಡಂಕೆಯಲ್ಲಿದ್ದ ಅವು ನಿಧಾನಕ್ಕೆ ಒಂದಂಕಿಗೆ ಇಳಿದು, ಕೊನೆಗೆ ಬೇಸರವಾಗಿ ಸೊನ್ನೆಯ ಕಡೆ ಮುಖ ಮಾಡಿದ್ದವು. ಅವನೂ ಸಾಕಾಗಿ ಈ ದರಿದ್ರ ಭಾಷೆ ಕಂಡು ಹಿಡಿದ ನನ್ಮಕ್ಕಳೇ ಸರಿಯಿಲ್ಲ. ನಾವೆಲ್ಲಾ ಮುಂಡಾ ಮೋಚ್ಕೊಂಡು ಹೋಗಲಿ ಅಂತಾನೆ ಪಿತೂರಿ ಮಾಡಿ ಇದನ್ನಿಟ್ಟಿದ್ದಾರೆ. ಇದೊಂದು ಭಾಷೆ ನಮ್ಮನ್ನ ದಡ್ಡರು ಅಂತ ಸಾಬೀತು ಮಾಡ್ಬಿಟ್ತಲ್ಲ ಸಾರ್.

ಎಸ್ಸೆಸ್ಸೆಲ್ಸಿಯಲ್ಲಿ ಗಣಿತ, ಪಿಯುಸಿಯಲ್ಲಿ ಇಂಗ್ಲಿಷ್ ಇವೆರಡೂ ಸಬ್ಜೆಕ್ಟನ್ನ ನಾನು ಮುಖ್ಯಮಂತ್ರಿಯಾದ್ರೆ, ಕಿತ್ತೇ ಹಾಕ್ತೀನಿ ಸಾರ್.  ಕಡೇಪಕ್ಷ ಇವೆರಡು ಅನಿಷ್ಟದ ಸಬ್ಜೆಕ್ಟ್‌ಗಳಿಗೆ ಪುಸ್ತಕ ನೋಡ್ಕೊಂಡು ಬರೆಯೋ ಅವಕಾಶ ನಾದ್ರೂ ಕಲ್ಪಿಸಬೇಕು. ಇಲ್ಲಾಂದ್ರೆ, ಭಾಳ ಹುಡುಗ್ರು ಮಾನ ಮರ್ಯಾದೇನ ಹರಾಜಾಕ್ತಾವೆ ಹಾಳಾದೋವು ಎಂದು ಬೈಕೊಂಡು ಓಡಾಡಿದ್ದ. ಈಗ ಡ್ರೈವರ್ ಕೆಲಸ ಮಾಡಿಕೊಂಡು ಎಲ್ಲಾ ಮರೆತು ಬಿಟ್ಟಿದ್ದಾನೆ. 

ಇತ್ತ, ಕುಮಾರನ ತಂಗಿ ಮದುವೆ ವಯಸ್ಸಿಗೆ ಬಂದು ನಿಂತಿದ್ದಳು. ಮದುವೆ ಮಾಡುವಷ್ಟು ಕಾಸು ಮನೆಯಲ್ಲಿರಲಿಲ್ಲ. ಅಪ್ಪ ಮಗ ಸೇರಿ ಊರಲ್ಲಿ ಸಾಲ ಮಾಡಿ, ತಂಗಿಯ ಮದುವೆ ಪೂರೈಸಿದರು. ಇದಾದ ಮೇಲೆ ಕುಮಾರನ ಕಷ್ಟಗಳು ಮತ್ತೆ ಬೆಟ್ಟದಷ್ಟು ಎತ್ತರವಾದವು. ನಗರಕ್ಕೆ ಹೋಗಿ ದುಡಿಯಬಲ್ಲ ಛಾತಿ ಇದ್ದ ಕುಮಾರ, ಹಲವಾರು ಕಾರಣಗಳ ದೆಸೆಯಿಂದ ತನ್ನ ಹಳ್ಳಿ ಬಿಟ್ಟು ಎಲ್ಲೂ ಹೋಗುವಂತಿರಲಿಲ್ಲ. ದುಡಿಯುವ ಹೊಸ ದಾರಿಗಳು ಕಾಣದೆ, ತಲೆಕೆಟ್ಟು ಹೋದ ಅವನು ಚಿಂತಾಕ್ರಾಂತನಾಗಿ ಒಂದು ದಿನ ನನ್ನ ಹತ್ತಿರ ಬಂದ. ಎರ್ರಾಬಿರಿ ಗಡ್ಡಬಿಟ್ಟುಕೊಂಡಿದ್ದ. ಕಣ್ಣುಗಳು ಸೋತಿದ್ದರೂ, ನಿಶ್ಚಲರಾತ್ರಿಯ ನಕ್ಷತದಂತೆ ಹೊಳೆಯುತ್ತಿದ್ದವು.  

ಮುಂದೇನು ಮಾಡೋದು ಅಂತಾನೆ ತಿಳೀತಿಲ್ಲ ಸಾರ್. ಪೂರಾ ಕಂಗಾಲಾಗಿ ಹೋಗಿ ದ್ದೀನಿ. ಕೂಲಿ ಮಾಡಿ ನನ್ನ ಮನೆ ಕಷ್ಟಗಳನ್ನು ತೀರಿಸೋಕೆ ಹೊರಟ್ರೆ, ಅದು ಈ ಜನ್ಮದಲ್ಲಿ ಮುಗಿಯೋ ಹಂಗಿಲ್ಲ. ‘ನನ್ನ ಮಗನ ಓದು ಪೂರೈಸ್ತು. ಈಗ ಗೌರ್ಮೆಂಟ್ನೋರು ಅವನಿಗೆ ಕರೆದು ಕೆಲ್ಸ ಕೊಡ್ತಾರೆ ಅಂತ, ನಮ್ಮಪ್ಪ ಊರ್ ತುಂಬಾ ಅಡ್ವಾನ್ಸಾಗಿ ಟಾಂಟಾಂ ಹೊಡೆದಿದ್ದಾರೆ.  ಇವತ್ತು ಕೆಲ್ಸ ಸಿಗೋದು ಎಷ್ಟು ಕಷ್ಟ ಇದೆ ಅನ್ನೋ ಸಣ್ಣ ಕಲ್ಪನೆಯೂ ಅವರಿಗಿಲ್ಲ ಸಾರ್. ಇಡೀ ಪ್ರಪಂಚದಲ್ಲಿ ಅವರ ಮಗ ಒಬ್ನೆ ಓದಿರೋನು ಅನ್ನೋ ಸಂಭ್ರಮದಲ್ಲಿದ್ದಾರೆ.

ಈಗ ಓದೋ ಎಲ್ಲಾ ಹುಡುಗ್ರು ಸರ್ಕಾರಿ ಕೆಲಸ ಸಿಗುತ್ತೆ ಅನ್ನೋ ಸುಳ್ಳು ಭ್ರಮೆಯಲ್ಲಿದ್ದಾರೆ ಸಾರ್. ಬುದ್ಧಿವಂತರಿಗೆ, ಕಷ್ಟ ಪಡೋರಿಗೆ, ದುಡ್ಡು ಶಿಫಾರಸು ಇಟ್ಕೊಂಡಿರೋರಿಗೆ ಅವು ಸಿಕ್ರೂ ಸಿಗಬಹುದು. ಆದ್ರೆ ನನ್ನಂಥ ಆವರೇಜ್ ಸ್ಟೂಡೆಂಟ್‌ಗಳ ಕಥೆ ಏನು ಸಾರ್. ಇವತ್ತಿನ ಓದಿಗೆ ಒಂದೊಳ್ಳೆ ಕೈಕಸುಬು ಕಲಿಸೋ ಶಕ್ತಿ ಇಲ್ಲ. ನಮ್ಮ ಬುದ್ಧಿ ಶಕ್ತಿಗನುಸಾರವಾಗಿ ದುಡಿದು ಬದುಕೋದ್ಹೆಂಗೆ ಅಂತ ಮಾರ್ಗದರ್ಶನ ಮಾಡೋ ಗುಣ ಇಲ್ಲ. ಇಷ್ಟು ವರ್ಷ ನಾನ್ ಕಲಿತ ಎಲ್ಲಾ ಸಬ್ಜೆಕ್ಟಗಳೂ ವೇಸ್ಟ್ ಅನ್ನಿಸ್ತಾ ಇದ್ದಾವೆ ಸಾರ್.

ನಿಜವಾಗ್ಲು ಬದುಕಿಗೆ ಏನ್ ಬೇಕೋ ಅದನ್ನು  ನೀವ್ಯಾರೂ ಕಲಿಸ್ತಾ ಇಲ್ಲಾ ಸಾರ್. ಅಲ್ಪಸ್ವಲ್ಪ ಓದ್ಕೊಂಡು, ಪಕ್ಕಾ ಕೈಕಸುಬು ಕಲಿತಿರೋ ನಮ್ಮೂರಿನ ಬಡಗಿಗಳು, ಗಾರೆ ಕೆಲಸದವರು, ಆರಾಮಾಗಿ ತಮ್ಮ ಊಟ ತಾವು ದುಡ್ಕೊಳ್ತಾ ಇದ್ದಾರೆ ಸಾರ್. ಮಳೆ ಬಂದು ಡ್ಯಾಮ್ ತುಂಬಿದ್ರಷ್ಟೇ ನಾನು ಕಲ್ತಿರೋ ಶಿಕಾರಿ ವಿದ್ಯೆ ನಾಲ್ಕು ದಿನ ಅನ್ನ ಹಾಕುತ್ತೆ. ಎರಡು ವರ್ಷದಿಂದ ಮಳೆಯಾಗದೆ ನದಿ ನೀರೂ ಬತ್ತೋಗ್ತಾ ಇದೆ ಸಾರ್. ಸಣ್ಣ ಗುಂಡಿಗೆ ಮೀನಿನ ಮರಿ ತಂದ್ ಬಿಟ್ಟಿದ್ದೆ. ಅವೂ ನೀರು ಕಮ್ಮಿಯಾಗಿ ಬೆಳೀಲೆ ಇಲ್ಲ. ನೀರು ಕಾಗೆ, ಕೊಕ್ಕರೆಗಳೆಲ್ಲಾ ಸೇರಿ ಪುಡಿ ಮೀನನ್ನೆಲ್ಲಾ ಉಡೀಸ್ ಮಾಡಿಬಿಟ್ಟವು.

ಈ ಕಡೆ ಅಮ್ಮನ ಆರೋಗ್ಯ ಬೇರೆ ಸರಿ ಇರಲ್ಲ. ಅದೇನು ಕಾಲಲ್ಲಿ ಕಸ ತುಂಬಿದೆ ಅಂತ ಹೇಳ್ತಾರೆ ಸಾರ್. ನೋವು ಜಾಸ್ತಿಯಾದ್ರೆ ಕಾಲಿಗೆ ಮರಳಚೀಲ ಬಿಗಿದು ಮಲಗಿಸಬೇಕು. ಅವರ ಔಷಧಿ ಮಾತ್ರೆಗೇನೆ ದುಡಿದ ದುಡ್ಡೆಲ್ಲಾ ಬರಖಾಸ್ತಾಗುತ್ತೆ. ಎಂಥ ಬರಗಾಲ ಬಂದ್ರೂ ನಮ್ಮಪ್ಪ ಮಾತ್ರ ಎಣ್ಣೆ ಏರಿಸೋದು ಬಿಟ್ಟಿಲ್ಲ. ಹೆಂಗಾದ್ರೂ ದುಡ್ಡು ಹೊಂದಿಸಿಕೊಂಡು, ಸಂಜೆ ಹೊತ್ತಿಗೆ ಶಿಸ್ತಾಗಿ ಲೋಡಾಗಿ ಬಿಡ್ತಾರೆ. ಇಂಥ ಪರಿಸ್ಥಿತೀಲಿ ಅವರನ್ನ ಬಿಟ್ಟು, ನಾನೆಲ್ಲಿಗೂ ಹೋಗೋ ಹಂಗೇ ಇಲ್ಲ ಸಾರ್. ಸಿಗಾಕ್ಕೊಂಡ್ ಬಿಟ್ಟಿದ್ದೀನಿ. ನಾನಿರೋ ಹಳ್ಳೀಲೇ ಏನಾದ್ರೂ ಮಾಡೋಣಾಂದ್ರೆ ಏನ್ ಮಾಡೋದಂತ ತೋಚ್ತಾಯಿಲ್ಲ.

ಬಡ್ಡಿಗೆ ತಂದಿರೋ ಸಾಲ ನಿದ್ದೆ ಮಾಡೋಕೆ ಕೊಡ್ತಾಯಿಲ್ಲ. ಈ ದರಿದ್ರ  ಜೀವನಾನೇ ಬೇಸರವಾಗಿ ಹೋಗಿದೆ. ಥೂ... ಬಡವರ ಮಕ್ಕಳಾಗಿ ಮಾತ್ರ ಯಾವತ್ತಿಗೂ ಹುಟ್ಟಬಾರದು ಸಾರ್ ಎಂದು ಕಣ್ಣೀರು ತೆಗೆದ. ಅವನಿಗೆ ಯಾವ ರೀತಿ ಸಮಾಧಾನ ಹೇಳುವುದು ಎಂದು ನಾನು ಯೋಚಿಸುತ್ತಾ ಕುಳಿತೆ. ‘ನಾನೊಂದಿಷ್ಟು ಹಣಕಾಸಿನ ಸಹಾಯ ಮಾಡಲೇನೋ’ ಎಂದು ಮೃದುವಾಗಿ ಕೇಳಿದೆ. ಥೂ ಅದೆಲ್ಲಾ ಬ್ಯಾಡ ಸಾರ್. ನೀವು ಎಷ್ಟಂತ ಮಾಡ್ತೀರ? ಅದು ಬಿಟ್ಟು ಏನಾದ್ರೂ ದುಡಿಯೋ ಹೊಸ ಐಡಿಯಾ ಇದ್ರೆ ಹೇಳಿ ಸಾರ್ ಎಂದು ಸ್ವಾಭಿಮಾನದ ಸ್ವರದಲ್ಲಿ ಕೇಳಿದ.

ನಾನೇನು ಐಡಿಯಾಗಳ ಸ್ಟಾಕ್ ಅಂಗಡಿ ಇಟ್ಕೊಂಡಿದ್ದಿ ನೇನೋ ಕುಮಾರ. ನೀನು ಕೇಳಿದ ತಕ್ಷಣ ಎತ್ತಿ ಪಟ್ಣ ಕಟ್ಟಿ ಕೊಡೋಕೆ. ನಂಗೊಂಚೂರು ಟೈಮ್ ಕೊಡು ಮಾರಾಯ, ಯೋಚಿಸಿ ಹೇಳ್ತೀನಿ. ಈಗ ಊಟದ ಟೈಮಾಗಿದೆ. ಏಳು ಹೊಟ್ಟೆಗೆ ಹಾಕ್ಕೊಳ್ಳೋಣ. ನೀನು ಮೊದಲು ಕೈಕಾಲು ಮುಖ ತೊಳಕೋ ಎಂದು ಹೇಳಿದೆ.  ಸೋಫಾದ ಮೇಲೆ ಕುಳಿತಿದ್ದ ಕುಮಾರ ಭಾರವಾದ ಭಾವನೆಗಳಿಂದ ಏಳುತ್ತಿದ್ದವನು ಕಣ್ಣರಳಿಸಿಕೊಂಡು ನನ್ನ ಟೇಬಲ್ ಕಡೆ ನೋಡಿದ. ಅಲ್ಲಿ ನನ್ನ ನಿಕಾನ್ ಕ್ಯಾಮೆರಾವಿತ್ತು.

ಆತ ಕುತೂಹಲದಿಂದ ಅದನ್ನೊಮ್ಮೆ ತಿರುಗಿಸಿ, ತಿರುಗಿಸಿ ನೋಡಿ, ಅದೇನೋ ಸಾರ್, ನಂಗೆ ಚಿಕ್ಕೋನಾಗಿದ್ದಾಗಿಂದ, ಈ ರೇಡಿಯೊ, ಮತ್ತೆ ಈ ಕ್ಯಾಮ್ರಾದ್ ಮೇಲೆ ಸಿಕ್ಕಾಪಟ್ಟೆ ವ್ಯಾಮೋಹ ಸಾರ್. ಇಂಥ ಕ್ಯಾಮ್ರಾ ಈಗ ಎಷ್ಟಾಗಬಹುದು ಸಾರ್ ಎಂದು ಹುರುಪಿನಿಂದ ಕೇಳಿದ. ಹದಿನಾರು ಸಾವ್ರ ಕೊಟ್ಟು ತಗಂಡೆ ಕಣೋ. ಪಕ್ಷಿಗಳ ಫೋಟೊ ತೆಗೆಯೋಕೆ ಅಂತ ತಗಂಡೆ. ಆದ್ರೆ ಇದು ಆ ಕೆಲಸಕ್ಕೆ ಸಾಕಾಗ್ತಿಲ್ಲ. ಹೆಚ್ಚು ಝೂಮ್ ಇರೋ ಒಳ್ಳೆ ಕ್ಯಾಮೆರಾ ತಗೋಬೇಕು ಅನ್ನೋ ಆಸೆ ಇದೆ.

ಇದರಲ್ಲಿ ಸ್ಟ್ಯಾಚು ಥರ ನಿಂತ್ಕೊಳ್ಳೋ ಮನುಷ್ಯರ ಮುಸುಡಿ ಚೆನ್ನಾಗಿ ತಗೀಬಹುದಷ್ಟೆ. ಹಕ್ಕಿಗಳ ಚಿತ್ರಗಳನ್ನು ಕ್ಲೋಸಪ್‌ ಆಗಿ ತೆಗೀಬೇಕು ಅನ್ನೊ ತೆವಲು ಮೊದಲಿಂದ ಇದೆ ಮಾರಾಯ. ಈ ಸಣ್ಣ ಕ್ಯಾಮ್ರ ಹಿಡ್ಕೊಂಡು ಪಕ್ಷಿಗಳ ಹತ್ರ ಹೋಗೋಕ್ಕಾಗುತ್ತಾ? ‘ಯಾವನೋ ಕಿರಾತಕ ನನ್ಮಗ, ಈ ಕಡೆಗೇ ಡಬ್ಬಿ ಹಿಡ್ಕೊಂಡು ಬಂದ ಕಣ್ರೋ, ಓಡ್ರಲೇ ಅಂತ ಅವು ಪುರ್ರಂತ ಹಾರಿ ಹೋಗಿ ಬಿಡ್ತಾವೆ. ನಾನು ಈ ಡಬ್ಬ ಕ್ಯಾಮೆರಾದಲ್ಲಿ ಅಷ್ಟೋ, ಇಷ್ಟೋ ಪಕ್ಷಿಗಳ ಚಿತ್ರ ತೆಗೆದಿದ್ದೀನಿ. ಕಾಗೆ ಬಿಟ್ರೆ ಮತ್ತ್ಯಾವೂ ನೆಟ್ಟಗೆ ಬಂದಿಲ್ಲ. ನೀನು ಮಾತ್ರ ಇದರ ಸವಾಸಕ್ಕೆ ಹೋಗ್ಬೇಡ ಮಾರಾಯ. ಕಾಸು ಕಳೆಯೋ ಕೆಟ್ಟ ಅಭ್ಯಾಸ ಇದು. ಒಂಥರ, ಜೂಜಿದ್ದಂಗೆ ಎಂದೆ. ನಾನಷ್ಟು ಹೇಳಿದರೂ ಅವನು ಕ್ಯಾಮ್ರವನ್ನು ಆಸೆ ಕಂಗಳಿಂದ ನೋಡ್ತಾನೆ ಇದ್ದ.

ಊಟ ಮಾಡುತ್ತಾ ಕುಳಿತಾಗ ನನ್ನ ತಲೆಗೊಂದು ಐಡಿಯಾ ಸುಳಿದು ಬಂತು. ಅನ್ನ ಕಲೆಸುತ್ತಿದ್ದ ಕುಮಾರನಿಗೆ ಲೇ ಕುಮಾರ ನಿಮ್ಮ ಹಳ್ಳಿ ಸುತ್ತಮುತ್ತ ಫೋಟೊ ಸ್ಟುಡಿಯೊ ಏನಾದ್ರೂ ಇದಾವೇನೋ ಎಂದು ಕೇಳಿದೆ. ಅದಕ್ಕವನು ತಾತ್ಸಾರದಿಂದ ಅಯ್ಯೋ ಹಾಳು ಕೊಂಪೆ. ಅಲ್ಲಿ ಯಾವ ನನ್ಮಗ ಸ್ಟುಡಿಯೊ ಮಾಡ್ತಾನೆ ಸಾರ್ ಎಂದು ಹೇಳಿದ. ನೀನು ಯಾಕೆ ಮಾಡಬಾರದು? ಎಂದು ಧೃಡವಾಗಿ ಹೇಳಿದೆ. ನನ್ನ ಮಾತಿನಿಂದ ಅವಕ್ಕಾದ ಅವನು ಗರಬಡಿದಂತೆ ಸುಮ್ಮನೆ ಕೂತು ಬಿಟ್ಟ. ಆಗ ನಾನು ಹೇಳಿದೆ. 

ನೋಡು ನಿಮ್ಮೂರಿನ ಸುತ್ತ ಜನನ, ಮರಣ, ನಾಮಕರಣ, ಎಂಗೇಜ್ಮೆಂಟು, ಮದುವೆ, ಅಂತ ನೂರಾರು ಫಂಕ್ಷನ್‌ಗಳು ನಡೀತಾನೆ ಇರ್ತಾವೆ. ಅವರು ಫೋಟೊಗ್ರಾಫರ್ ಕರೆಯಲು ಪಟ್ಣಕ್ಕೆ ಹೋಗೇ ಹೋಗ್ತಾರೆ. ಜನ ಎಂಥ ಬರಗಾಲ ಬಂದ್ರೂ ಈ ಸಮಾರಂಭಗಳನ್ನು ಸಾಲ ಮಾಡಾದ್ರೂ ಮಾಡೇ ಮಾಡ್ತಾರೆ. ನೀನು ನನ್ನ ಈ ಕ್ಯಾಮೆರಾ ತಗೊಂಡು ಹೋಗು. ಮನುಷ್ಯರ ಫೋಟೊ ತೆಗೆಯೋದು ನೀರು ಕುಡಿದಷ್ಟೇ ಸಲೀಸು. ನಾನು ನಿನಗೆ ಹೇಳಿ ಕೊಡ್ತೀನಿ. ಹೋದ ಕಡೆಗೆಲ್ಲಾ ಒಳ್ಳೆ ಊಟಾನೂ ಸಿಗುತ್ತೆ. ಒಂದಿಷ್ಟು ಕಾಸು ಸಿಗುತ್ತೆ. ನೀನು ಈ ಕೆಲ್ಸ ಮಾಡೋದು ನನ್ನ ಪ್ರಕಾರ ಸರಿ ಅನಿಸ್ತಾ ಇದೆ ನೋಡು ಎಂದೆ. ಅವನ ಕಣ್ಣಲ್ಲೂ ಬೆಳಕು ಮಿಂಚಿತು. ಕ್ಯಾಮೆರಾ ತೆಗೆದುಕೊಂಡು, ಒಂದೇ ಉಸಿರಿಗೆ ಊರ ಬಸ್ಸು ಹತ್ತಿದ.

ಇವತ್ತು ಆ ಹಳ್ಳಿಯಲ್ಲಿ ಅವನ ಸ್ವಂತ ಸ್ಟುಡಿಯೊ ಶುರುವಾಗಿದೆ. ನಾಲ್ಕು ಜನರಿಗೆ ತಾನೇ ಕೆಲಸ ಕೊಡುವಷ್ಟು ಕುಮಾರ ಮೇಲೆ ಬಂದಿದ್ದಾನೆ. ಪುರುಸೊತ್ತಿಲ್ಲದಷ್ಟು ಆರ್ಡರ್‌ ಗಳನ್ನು ಕೈಲಿಟ್ಟುಕೊಂಡು ಓಡಾಡುತ್ತಿರುತ್ತಾನೆ. ಮದುವೆ ಮನೆಯ ಊಟಗಳನ್ನು ಬಾರಿಸಿ ಮೈಕೈ ತುಂಬಿಕೊಂಡಿದ್ದಾನೆ. ಹಿನ್ನೀರಿನ ಕಂಟ್ರಾಕ್ಟ್ ಹಿಡಿದು ಮೀನುಗಳ ಸಾಕುತ್ತಿದ್ದಾನೆ. ಅವನು ಹಿಡಿಸುವ ಗೊಜಳೆ ಮೀನು ಖರೀದಿಸಲು ಜನ ದೂರದ ಊರುಗಳಿಂದ ಬರುತ್ತಾರೆ.

ಬೆಳಗಾಂ, ಮುಂಬೈ ತನಕ ಈ ಮೀನು ಹೋಗುತ್ತೆ ಸಾರ್. ಇದಕ್ಕೆ ಸಖತ್ತು ಡಿಮ್ಯಾಂಡಿದೆ. ಎಷ್ಟು ದುಡ್ಡು ಕೊಟ್ರೂ ಈ ಟೇಸ್ಟಿನ ಮೀನು ಎಲ್ಲೆಲ್ಲೂ ಸಿಗಲ್ಲ ಅಂತ ಜನ ತಾರೀಫ್ ಮಾಡ್ತಾರೆ ಸಾರ್ ಎಂದು ಹೆಮ್ಮೆಯಿಂದ ಬೀಗುತ್ತಾನೆ. ಅಪ್ಪನಿಗೆ ಜಮೀನಿನಲ್ಲಿ ಬೆಳೆ ತೆಗೆಯಲು ಹೇಳಿ ಅವರ ಕೈಗೆ ಹೊನ್ನಾಳಿ ಕಡೆಯ ಎಲಗ ಜಾತಿಯ ಕಂಬ್ಳಿ ಕುರಿ ಕೊಡ್ಸಿದ್ದಾನೆ. ಅಲ್ಲೇ ಕೋಳಿ ಫಾರಂ ಮಾಡಿದ್ದಾನೆ. ನಾನು ಅವನ ಹಳ್ಳಿಗೆ ಹೋದರೂ ಅವನು ನನಗೇ ಸಿಗದಷ್ಟು ಬಿಝಿಯಾಗಿದ್ದಾನೆ.

ಮನಸ್ಸಿದ್ದರೆ ಸಾಧಿಸಿ ಗೆಲ್ಲಬಹುದು ಎನ್ನುವುದಕ್ಕೆ ನನ್ನ ಪ್ರೀತಿಯ ಶಿಷ್ಯ ಮಾದರಿ ಯಾಗಿದ್ದಾನೆ. ಹಳ್ಳಿಯಲ್ಲಿ ಓದುವ ಬಹಳಷ್ಟು ತರುಣರು ನಗರದ ನರಕಗಳಿಗೆ ಬಂದು ಒಂದು ಸಣ್ಣ ನೌಕರಿಯ ಬೆನ್ನುಹಿಡಿದು ತೊಳಲಾಡು ತ್ತಿದ್ದಾರೆ. ಗಟ್ಟಿ ಬದುಕು ಕಟ್ಟಿಕೊಳ್ಳಲಾಗದೆ ಚಡಪಡಿಸುತ್ತಿದ್ದಾರೆ. ತಾನಿರುವ ಹಳ್ಳಿಯಲ್ಲೇ ಬದುಕುವ ದಾರಿಗಳ ಹುಡುಕಿ, ಊರಿನ ಯುವಕ ರಿಗೆ ಉದ್ಯೋಗ ಕೊಡುವಷ್ಟು ಶಕ್ತನಾಗಿರುವ ನಮ್ಮ ಕುಮಾರನನ್ನು ಒಮ್ಮೆ ಗಾಂಧೀಜಿ ನೋಡಿದ್ದರೆ ಭೇಷ್ ಎನ್ನುತ್ತಿದ್ದರೇನೋ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT