ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರ್ಯದ ಕರೆಗೆ ಓಗೊಡುವ ಹರಿಕಾರರಿವರು

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಅಮೆರಿಕದಲ್ಲಿದ್ದ ಉತ್ತಮ ವೃತ್ತಿ ಬದುಕನ್ನು ಬದಿಗೊತ್ತಿ ಭಾರತಕ್ಕೆ ಮರಳಿ ಬಂದಿದ್ದರು. ಉನ್ನತ ಶಿಕ್ಷಣ ಪಡೆದಿದ್ದ ಮತ್ತು ಇನ್ನೂ ಚಿಕ್ಕ ವಯಸ್ಸಿನವರಾಗಿದ್ದ ಅವರು ಹೀಗೆ ವಾಪಸ್ ಬರಲು ಎಷ್ಟೆಲ್ಲವನ್ನೂ ತ್ಯಜಿಸಬೇಕಾಯಿತು ಎಂದು ಯೋಚಿಸಿದಾಗ ಅವರ ಈ ನಿರ್ಧಾರ ನನ್ನನ್ನು ಚಕಿತನನ್ನಾಗಿಸಿತ್ತು.
 
ಆ ಬಗ್ಗೆ ಇತರರಂತೆಯೇ ಶಂಕೆ ಹೊಂದಿದ್ದ ನಾನು `ಹೀಗೆ ಮರಳಿ ಬಂದದ್ದೇಕೆ?~ ಎಂದು ಒಮ್ಮೆ ಅವರನ್ನು ಕೇಳಿದ್ದೆ. `ನನ್ನ ಆಂತರ್ಯದ ಕರೆಗೆ ಓಗೊಟ್ಟು ವಾಪಸ್ ಬಂದೆ~ ಎಂದು ಅವರು ಸರಳವಾಗಿ ಉತ್ತರಿಸಿದ್ದರು.
 
ರಾಷ್ಟ್ರೀಯ ಸೇವೆಯಲ್ಲಿ ತೊಡಗಿಕೊಳ್ಳಲು ಉದ್ದೇಶಿಸಿದ್ದ ಅವರು, ತಮ್ಮ ಜ್ಞಾನ ಮತ್ತು ಕೌಶಲವನ್ನು ದೇಶದ ಪ್ರಗತಿಗೆ ಧಾರೆ ಎರೆಯ ಬಯಸಿದ್ದರು. ಇದರಿಂದ ನಾನು ಪ್ರಭಾವಕ್ಕೆ ಒಳಗಾದೆನಾದರೂ ನಿಜವಾಗಲೂ ಅವರು ಈ ಕಾರ್ಯದಲ್ಲಿ ಹೇಗೆ ತೊಡಗಿಕೊಳ್ಳುತ್ತಾರೆ ಎಂಬುದು ನನಗೆ ಖಚಿತವಾಗಿರಲಿಲ್ಲ.

ಕಳೆದ ಹಲವು ವರ್ಷಗಳಿಂದಲೂ ಅವರು ಇಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೋಧಿಸುತ್ತಿರುವುದಷ್ಟೇ ಅಲ್ಲ, ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ತಾವು ರಾಜಕೀಯವಾಗಿ ಕ್ರಿಯಾಶೀಲರಾಗ ಬಯಸಿದ್ದು, ರಾಜ್ಯ ವಿಧಾನ ಪರಿಷತ್ತಿನ ಮೂಲಕ ಇಂತಹದ್ದೊಂದು ಪರೀಕ್ಷೆ ಎದುರಿಸಲು ನಿರ್ಧರಿಸಿರುವುದಾಗಿ ಇತ್ತೀಚೆಗೆ ಅವರು ಹೇಳಿದಾಗ ನನಗೆ ಅಚ್ಚರಿಯೇನೂ ಆಗಲಿಲ್ಲ. ದೇಶದ ರಾಜಕೀಯ ಭೂಮಿಕೆಯಲ್ಲಿ ಏನಾದರೂ ಬದಲಾವಣೆ ಮಾಡಬಲ್ಲ ಸಾಮರ್ಥ್ಯ ತಮಗಿದೆ ಎಂಬ ಪ್ರಾಮಾಣಿಕ ನಂಬಿಕೆ ಅವರಲ್ಲಿದೆ.
 
ಈ ವಿಷಯದಲ್ಲಿನ ಅವರ ಬದ್ಧತೆ ಮತ್ತು ಗಂಭೀರವಾದ ಚಿಂತನೆ ಸಹ ನನ್ನ ಮೇಲೆ ಪರಿಣಾಮ ಬೀರಿದೆ. ಅವರ ಈ ರಾಜಕೀಯ ಪ್ರವೇಶದ ಉದ್ದೇಶವನ್ನು `ದಿಕ್ಕು ತಪ್ಪಿದ ಆಕಾಂಕ್ಷೆ~ ಎಂದು ಕೆಲವರು ಸಂಕುಚಿತ ಮನೋಭಾವದಿಂದ ಕಾಣಬಹುದು ಅಥವಾ ಇದೊಂದು ದುಸ್ಸಾಹಸ ಎಂದು ಸಹ ಕೆಲವರಿಗೆ ಅನಿಸಬಹುದು.
 
ಯಾರು ಏನೇ ಅಂದುಕೊಂಡರೂ ನಾನು ಮಾತ್ರ, ಕ್ಷೀಣಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಅವರ ಈ ನಿರ್ಧಾರ ಒಂದು ಆಶಾಕಿರಣದಂತೆ ಎಂದೇ ಭಾವಿಸುತ್ತೇನೆ.

ವಿಧಾನ ಪರಿಷತ್ತು, ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ ಕೆಲ ಸ್ಥಾನಗಳಿಗೆ ಈಗಷ್ಟೇ ಚುನಾವಣೆ ನಡೆದಿದೆ. ಈ ಚುನಾವಣೆಗಳಿಗೆ ಪ್ರಮುಖ ರಾಜಕೀಯ ಪಕ್ಷಗಳು ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಕಂಡಾಗ ವಿಷಾದ ಭಾವನೆ ಮೂಡುತ್ತದೆ. ಜಾತಿ, ಹಣ ಬಲ ಮತ್ತು ಪಕ್ಷದ ಪ್ರಮುಖರಿಗೆ ಅವರು ಎಷ್ಟು ನಿಕಟವರ್ತಿಗಳು  ಎಂಬ ವಿಚಾರಗಳೇ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳಾಗಿವೆ.

ಮೇಲ್ಮನೆಯಲ್ಲಿ `ಮೇಲ್ಮಟ್ಟ~ದವರನ್ನು ಕಾಣುವ ದಿನಗಳು ಎಂದೋ ಮುಗಿದುಹೋಗಿವೆ. ಸಾಮರ್ಥ್ಯ, ಮೌಲ್ಯಗಳು, ಆಡಳಿತ ನಿರ್ವಹಣೆ ಬಗೆಗಿನ ಜ್ಞಾನ ಅಭ್ಯರ್ಥಿಗಳ ಆಯ್ಕೆಗೆ ಪ್ರಮುಖ ಅಂಶಗಳೇ ಆಗಿಲ್ಲ.

ತಮ್ಮ ಕ್ಷೇತ್ರಗಳ ಕಷ್ಟ ಸುಖಗಳನ್ನು ಬದಿಗೊತ್ತಿ, ಐಶಾರಾಮಿ ರೆಸಾರ್ಟ್‌ಗಳಲ್ಲಿ ಕುಳಿತು ರಾಜ್ಯ ರಾಜಕೀಯದ ಹಣೆಬರಹ ನಿರ್ಧರಿಸಲು ಹೊರಡುವ ಈಗಿನ ಶಾಸಕರಿಂದ ನಾವು ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಪ್ರಸಕ್ತ ಚುನಾವಣಾ ವ್ಯವಸ್ಥೆಯನ್ನು ಸಮೀಪದಿಂದ ಅವಲೋಕಿಸಿದವರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಭ್ರಮನಿರಸನ ಉಂಟಾಗುತ್ತದೆ.

ನಮ್ಮ ರಾಜ್ಯ ಅಥವಾ ದೇಶವನ್ನು ಯಾರು ಆಳುತ್ತಾರೆ ಎಂಬ ಬಗ್ಗೆ ಸಾಮಾನ್ಯ ನಾಗರಿಕರಾದ ನಾವು ಎಷ್ಟರ ಮಟ್ಟಿಗೆ ತಲೆ ಕೆಡಿಸಿಕೊಳ್ಳುತ್ತೇವೆ? ನಮ್ಮ ಚುನಾಯಿತ ಪ್ರತಿನಿಧಿಗಳ ಪಾತ್ರ ಹಾಗೂ ಹೊಣೆಗಾರಿಕೆಯ ಅರಿವು ಎಷ್ಟು ಜನರಿಗಿದೆ?
 
ಅವರ ಪ್ರಮುಖ ಪಾತ್ರ ಕಾನೂನು ಮತ್ತು ನೀತಿ ನಿರೂಪಣೆ, ಕಾರ್ಯಾಂಗದ ಮೇಲ್ವಿಚಾರಣೆ, ರಾಜ್ಯ ಬಜೆಟ್‌ಗೆ ಅಂಗೀಕಾರ ನೀಡುವುದು ಎಂಬ ವಿಷಯ ನಮಗೆಲ್ಲರಿಗೂ ಗೊತ್ತಿದೆಯೇ? ತಮ್ಮ ತಮ್ಮ ಶಾಸಕರ ನಿವಾಸಗಳ ಎದುರು ಪ್ರತಿ ದಿನ ಬೆಳಿಗ್ಗೆ ಸಾಕಷ್ಟು ಜನರೇನೋ ನೆರೆದಿರುತ್ತಾರೆ.

ಆದರೆ ಅವರೆಲ್ಲಾ ಸಾಮಾನ್ಯವಾಗಿ ಅಲ್ಲಿ ಸೇರುವುದು ತಮ್ಮ ವೈಯಕ್ತಿಕ ಹಿತ ಸಾಧನೆಗಾಗಿ, ವರ್ಗಾವಣೆ ಮಾಡಿಸಿಕೊಳ್ಳುವ ಅಥವಾ ಇನ್ಯಾವುದೋ ಕೆಲಸಕ್ಕೆ ಶಿಫಾರಸು ಪಡೆದುಕೊಳ್ಳುವ ಸಲುವಾಗಿ. ಸಾಮಾಜಿಕ ಕಾರಣಗಳ ಬಗ್ಗೆ ಚರ್ಚಿಸಲು ನಾವೆಷ್ಟು ಜನ ಶಾಸಕರು ಅಥವಾ ಸಂಸದರ ಬಳಿ ಹೋಗುತ್ತೇವೆ?

ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಇನ್ನು ಒಂದು ವರ್ಷವೂ ಉಳಿದಿಲ್ಲ. ನಾವು ಎಂತಹ ವ್ಯಕ್ತಿಗಳನ್ನು ಆರಿಸುತ್ತೇವೆ ಎಂಬುದರ ಮೇಲೆ ಆಡಳಿತದ ಗುಣಮಟ್ಟ ಅವಲಂಬಿಸಿರುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. 2009ರಲ್ಲಿ ಲೋಕಸಭೆಗೆ ನಡೆದದ್ದು ರಾಜ್ಯದ ಹಿಂದಿನ ಪ್ರಮುಖ ಚುನಾವಣೆ.
 
ಈ ಸಂದರ್ಭದಲ್ಲಿನ ಕೆಲ ವಿಷಯಗಳ ಬಗ್ಗೆ ನಾವು ಸರಿಯಾಗಿ ಅರಿತುಕೊಂಡು ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ. ಈ ಚುನಾವಣೆ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ಪ್ರಜಾಸತ್ತಾತ್ಮಕ ಸುಧಾರಣಾ ಸಂಸ್ಥೆಯ ಪ್ರಕಾರ, ರಾಜ್ಯದ 28 ಕ್ಷೇತ್ರಗಳಿಗೆ 427 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
 
ಇವರಲ್ಲಿ 47 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಶೇ 22ರಷ್ಟು ಮಂದಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದವರು. ಶೇ 6ರಷ್ಟು ಮಂದಿ ತಮ್ಮ ಬಳಿ ಯಾವುದೇ ಆಸ್ತಿಪಾಸ್ತಿ ಇಲ್ಲ ಎಂದು ಘೋಷಿಸಿಕೊಂಡಿದ್ದರು.

ರೈಲ್ವೆ ಇಲಾಖೆ ಸಹ ಸೀಟು ಮೀಸಲಿಡಲು ಆದಾಯ ತೆರಿಗೆ ಪ್ಯಾನ್ ಸಂಖ್ಯೆ ಕೇಳುವ ಈ ಕಾಲದಲ್ಲಿ, ಶೇ 62ರಷ್ಟು ಅಭ್ಯರ್ಥಿಗಳ ಬಳಿ ಪ್ಯಾನ್‌ಕಾರ್ಡೇ ಇರಲಿಲ್ಲ. ರಾಷ್ಟ್ರ ಮಟ್ಟದಲ್ಲಿ 543 ಲೋಕಸಭಾ ಸ್ಥಾನಗಳಿಗೆ 8070 ಮಂದಿ ಸ್ಪರ್ಧಿಸಿದ್ದರು.

 ಇವರಲ್ಲಿ ಶೇ 15ರಷ್ಟು ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದರೆ, ಶೇ 16ರಷ್ಟು ಮಂದಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದರು. ಶೇ 3ರಷ್ಟು ಜನರಲ್ಲಿ  ಘೋಷಿಸಿಕೊಳ್ಳಲು ಆಸ್ತಿಪಾಸ್ತಿ ಇರಲಿಲ್ಲ. ಶೇ 62ರಷ್ಟು ಮಂದಿ ಬಳಿ ಪ್ಯಾನ್‌ಕಾರ್ಡ್ ಇರಲಿಲ್ಲ.

ಈಗ ಕರ್ನಾಟಕದ ಸಂಸದರ ವಿಷಯಕ್ಕೆ ಬರೋಣ. ಇವರಲ್ಲಿ 9 ಮಂದಿ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, ಈ ಪೈಕಿ 5 ಮಂದಿಯ ಮೇಲಂತೂ ಗಂಭೀರವಾದ ಅಪರಾಧ ಪ್ರಕರಣಗಳೇ ಇವೆ. ನಮ್ಮ 28 ಸಂಸದರಲ್ಲಿ 25 ಮಂದಿ ಕೋಟ್ಯಧೀಶರು. ನಾವು ಗಂಭೀರವಾಗಿ ಪರಿಶೀಲಿಸಬೇಕಾದ ಮತ್ತೊಂದು ಅಂಶವೆಂದರೆ ದೇಶದಲ್ಲಿ ಯಾವುದೇ ಪಕ್ಷವೂ ಎಲ್ಲೂ ಶೇ 50ರಷ್ಟು ಮತಗಳನ್ನು ಪಡೆದುಕೊಂಡಿಲ್ಲ ಎಂಬುದು.

ಪರಿಸ್ಥಿತಿ ಹೀಗಿರುವಾಗ ನಮ್ಮ ಚುನಾಯಿತ ಪ್ರತಿನಿಧಿಗಳನ್ನು ನಾವು ನಿಜಕ್ಕೂ ಜನಪ್ರತಿನಿಧಿಗಳು ಎಂದು ಕರೆಯಲು ಸಾಧ್ಯವೇ?! ನಮ್ಮ ಸಂಸದರ ಸಾಧನೆಯ ಮಟ್ಟ ಸಹ ನಾವು ಚಿಂತಿಸಬೇಕಾದ ವಿಷಯವೇ ಆಗಿದೆ. ಇವರೆಲ್ಲ ಉತ್ತಮ ಚರ್ಚೆಯಲ್ಲಿ ಪಾಲ್ಗೊಂಡು ಪ್ರಶ್ನೆಗಳನ್ನು ಕೇಳುವುದು ಒತ್ತಟ್ಟಿಗಿರಲಿ, ಸಂಸತ್ತಿನಲ್ಲಿ ಇವರ ಸರಾಸರಿ ಹಾಜರಿ ಪ್ರಮಾಣ ಕೇವಲ ಶೇ 40ರಿಂದ 86ರಷ್ಟಿದೆ.

ಇವರಲ್ಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಾಜರಿ ಪ್ರಮಾಣ ಅತ್ಯಂತ ಕಡಿಮೆ ( ಶೇ 40) ಈಗಿನ ಮುಖ್ಯಮಂತ್ರಿ ಸದಾನಂದ ಗೌಡ ಅವರು ಸಂಸದರಾಗಿದ್ದಾಗ ಅವರ ಹಾಜರಾತಿ ಪ್ರಮಾಣ ಸಹ ಬರೀ ಶೇ 42ರಷ್ಟಿತ್ತು.

ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ತು ಯಾವುದರ ಆಡಳಿತವೇ ಇರಲಿ ಅದಕ್ಕೂ ನಾವು ಆರಿಸಿ ಕಳುಹಿಸುವ ಪ್ರತಿನಿಧಿಗಳಿಗೂ ನೇರವಾದ ಸಂಪರ್ಕ ಇರುತ್ತದೆ ಎಂಬುದನ್ನು ವಿಶ್ವದಾದ್ಯಂತ ನಡೆದ ಅನೇಕ ಸಮೀಕ್ಷೆಗಳು ದೃಢಪಡಿಸಿವೆ.
 
ಇಂದಿಗೂ ರಾಜಕೀಯವನ್ನು ಒಳ್ಳೆಯ ಜನರ ಕಟ್ಟಕಡೆಯ ಆಯ್ಕೆ ಎಂದೇ ಪರಿಗಣಿಸಲಾಗುತ್ತಿದೆ. ಮಾತ್ರವಲ್ಲ ಜಾತಿ, ಹಣ ಬಲ ಮತ್ತು ಭ್ರಷ್ಟಾಚಾರದಿಂದ ಮಾತ್ರ ಗೆಲುವು ಸಾಧ್ಯ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಭಾರತದ ರಾಜಕೀಯಕ್ಕೆ ಸಿನಿಮಾ ಮತ್ತು ಕ್ರಿಕೆಟ್ ನಂಟೂ ಬೆಸೆದುಕೊಳ್ಳುತ್ತಿದೆ.

ಆದರೆ ನಿಜಕ್ಕೂ ಇದರ ಅಗತ್ಯ ಇದೆಯೇ? ರಾಜಕೀಯ ಕ್ಷೇತ್ರದಲ್ಲಿನ ಉತ್ತಮ ಮತ್ತು ಮೌಲ್ಯಾಧಾರಿತ ಜನರ ಬಗ್ಗೆ ಮಾತನಾಡುವಾಗಲೆಲ್ಲಾ, ಹಲವು ವರ್ಷಗಳ ಹಿಂದೆ ಚುನಾವಣೆಗೆ ನಿಂತು ಹೀನಾಯ ಸೋಲು ಕಂಡ ಶಿವರಾಮ ಕಾರಂತರ ಅನುಭವವನ್ನು ಸ್ಮರಿಸದೇ ಇರಲಾಗದು.

ಅದು ಆಗಿನ ವಿಷಯ ಎಂದುಕೊಂಡರೂ ಈಗಿನ ಚಿತ್ರಣ ತಾನೇ ಏನು ಬದಲಾಗಿದೆ? ನಮ್ಮ ರಾಜ್ಯ ಮತ್ತು ದೇಶಕ್ಕೆ ಯಾವುದಾದರೂ ಭರವಸೆ ಕಾಣುತ್ತಿದೆಯೇ?

ಆದರೆ ಇದೆಲ್ಲದರ ನಡುವೆಯೂ ಇದೀಗ ಬದಲಾವಣೆಯ ಚಕ್ರ ತಿರುಗಲಾರಂಭಿಸಿದೆ ಎಂದು ನನಗನಿಸುತ್ತಿದೆ. ಸಾಮಾನ್ಯ ನಾಗರಿಕರು ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ.

ಯಥಾಸ್ಥಿತಿಯನ್ನು ಸಹಿಸಲಾಗದ ಅವರಲ್ಲಿ ಅಸಹನೆ ಮೂಡುತ್ತಿದೆ. ರಾಜಕೀಯ ಕ್ಷೇತ್ರದವರ ಅಸಾಮರ್ಥ್ಯ ಮತ್ತು ಭ್ರಷ್ಟಾಚಾರವನ್ನು ಹೆಚ್ಚು ದಿನ ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.
 
ರಾಷ್ಟ್ರೀಯ ಸಂಪತ್ತು ಕೊಳ್ಳೆ ಹೋಗುವುದನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಲ್ಲಲು ಬಯಸದ ಸಮೂಹವನ್ನು ಇತ್ತೀಚಿನ ಭ್ರಷ್ಟಾಚಾರ ವಿರೋಧಿ ಆಂದೋಲನ ಹುರಿದುಂಬಿಸಿದೆ. ಈಗ ಪ್ರಶ್ನೆ ಕೇಳಲು ಆರಂಭಿಸಿರುವ ಅವರು, ಉತ್ತರ ನೀಡುವಂತೆ ವ್ಯವಸ್ಥೆಯನ್ನು ತಾಕೀತು ಮಾಡತೊಡಗಿದ್ದಾರೆ.

ಇಂತಹ ಕೆಲವರು ಖುದ್ದಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಈ ಕಾರ್ಯವನ್ನು ಮುಂದಿನ ಹಂತಕ್ಕೂ ತೆಗೆದುಕೊಂಡು ಹೋಗಬಯಸಿದ್ದಾರೆ. ಇಂಥವರು   ರಾಜಕೀಯ ಮುಖ್ಯವಾಹಿನಿಗೆ ಬರಲು ವಾಸ್ತವದಲ್ಲಿ ಬಹಳಷ್ಟು ಅಡೆತಡೆಗಳು ಇರಬಹುದು.

ಆದರೆ ಇವರು ಬದಲಾವಣೆಯ ಆಕಾಂಕ್ಷಿಗಳಾಗಿದ್ದಾರೆ ಮತ್ತು ಬದಲಾವಣೆ ತಾನೇತಾನಾಗಿ ಆಗಲಿ ಎಂದು ಒಂದೆಡೆ ಕಾಯುತ್ತಾ ಕುಳಿತುಕೊಳ್ಳುವ ಜಾಯಮಾನದವರಲ್ಲ. ಯುದ್ಧ ಭೂಮಿಗೆ ಖುದ್ದಾಗಿ ನೆಗೆದು ಬದಲಾವಣೆ ಆಗುವಂತೆ ಮಾಡುವ ಮನೋಭಾವ ಹೊಂದಿದವರು.

ಇಂತಹವರ ಸಂಖ್ಯೆ ಇನ್ನೂ ಬೆರಳೆಣಿಕೆಯಷ್ಟಿರುವುದರಿಂದ ಪ್ರತ್ಯೇಕವಾಗಿ ಅವರು ಏನಾದರೂ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸುವವರೂ ಹಲವರಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಇದು ನಿಜವೂ ಆಗಿರಬಹುದು. ಆದರೆ ಮುಂದೆ ನಾವು ಕಾಣಲಿರುವ ಬೃಹತ್ ಅಲೆಗೆ ಇದು ಆರಂಭವಷ್ಟೇ ಎಂಬುದು ನನ್ನ ಬಲವಾದ ನಂಬಿಕೆ.

ದೇಶದಲ್ಲಿ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿರುವ ಯುವ ಸಮುದಾಯದ ಅಗಾಧ ಸಾಮರ್ಥ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದೀಗ ಅವರು ನಾವೆಲ್ಲಾ ಬಯಸುತ್ತಿರುವ ಬದಲಾವಣೆಗೆ ಕ್ರಿಯಾಶೀಲ ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ.

ಮುಖ್ಯವಾಹಿನಿಯ ಭವಿಷ್ಯ ಅರಸಿ ಹೋಗಬಹುದಾದ ಅತ್ಯುನ್ನತ ಶಿಕ್ಷಣ ಪಡೆದ ಹಲವರು, ರಾಜಕೀಯವನ್ನು ಗಂಭೀರ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ. ಬಹಳಷ್ಟು ಮಂದಿ ಪ್ರಮುಖ ಪಕ್ಷಗಳ ಜೊತೆ ಗುರುತಿಸಿಕೊಳ್ಳಲು ಆರಂಭಿಸಿದ್ದರೆ, ಕೆಲವರು ಪಕ್ಷೇತರರಾಗಿ ರಾಜಕೀಯ ಸೇರುವ ಚಿಂತನೆ ನಡೆಸಿದ್ದಾರೆ.

ವೈಯಕ್ತಿಕವಾಗಿ ಇವರಲ್ಲಿ ಹಲವರಿಗೆ ಭಾರತದ ರಾಜಕೀಯ ಸಂಕೀರ್ಣತೆಯನ್ನು ಅರಗಿಸಿಕೊಳ್ಳುವುದು ಕಷ್ಟವಾಗಲೂಬಹುದು. ಆದರೆ ಒಂದು ವ್ಯವಸ್ಥೆ ಮತ್ತು ದೇಶ ಜಯ ಸಾಧಿಸಲು ಕೇವಲ ಅವರ ಪಾಲ್ಗೊಳ್ಳುವಿಕೆ ಇದ್ದರೂ ಸಾಕು ಎಂಬ ವಿಶ್ವಾಸ ನನ್ನದು.

ನಿಸ್ಪೃಹ ರಾಜಕೀಯ ಹಿತಾಸಕ್ತಿಯನ್ನು ಹೊಂದಿರುವ ನನ್ನ ಸ್ನೇಹಿತರಂತಹ ಹಲವರು ಮುಂದೆ ಬಂದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿ ಎಂದು ನಾವು ಆಶಿಸೋಣ.

ಇದಕ್ಕೆ ಪೂರಕವಾಗಿ, ಕನಿಷ್ಠ ನಾವೆಲ್ಲರೂ ಮಾಡಬಹುದಾದ ಕೆಲಸವೆಂದರೆ ನಮ್ಮ ಸುತ್ತಮುತ್ತ ಇರುವುದೆಲ್ಲವೂ ಕೊಳಕು ಎಂದು ಸದಾ ದೂರುವುದನ್ನು ಮೊದಲು ಬಿಡೋಣ. ಎಲ್ಲರಿಗೂ ಅತ್ಯಗತ್ಯವಾದ ಬದಲಾವಣೆ ತರಬಯಸಿರುವವರಿಗೆ ಬೆಂಬಲ ಮತ್ತು ಉತ್ತೇಜನ ಕೊಡಲು ಮುಂದಾಗೋಣ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT