ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕೆ, ಬಾಬಾ ಮತ್ತು ನಾನು

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ವೈಲ್ಡ್ ಸ್ಕ್ರೀನ್’ ಅಥವ ‘ಗ್ರೀನ್ ಆಸ್ಕರ್’ ಪ್ರತಿ ಎರಡು ವರ್ಷಕ್ಕೊಮ್ಮೆ ಇಂಗ್ಲೆಂಡ್‌ನ ಬ್ರಿಸ್ಟಲ್ ನಗರದಲ್ಲಿ ಜರುಗುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಕೃತಿ ಚಲನಚಿತ್ರೋತ್ಸವ. ಖ್ಯಾತ ಚಿತ್ರ ನಿರ್ಮಾಪಕರು, ಬಿ.ಬಿ.ಸಿ., ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಆರ್ತೆ ಮುಂತಾದ ಹೆಸರಾಂತ ಸಂಸ್ಥೆಗಳು, ವನ್ಯಜೀವಿ ಕ್ಷೇತ್ರದ ದಿಗ್ಗಜರು ಅಲ್ಲಿ ಹಾಜರಿರುತ್ತಾರೆ.

ಇದರ ಹೊರತಾಗಿ ಸಾಕ್ಷ್ಯಚಿತ್ರಗಳು ಸಾಗಿರುವ ದಿಕ್ಕು, ಅಲೆ ಹಾಗೂ ಮಾರುಕಟ್ಟೆಯ ಬೇಡಿಕೆಗಳನ್ನು ಅರಿಯಲು ಇಲ್ಲಿ ಅವಕಾಶಗಳಿರುತ್ತವೆ. ಅಷ್ಟೇಅಲ್ಲ, ಯೋಜನೆಗಳನ್ನು ನಿರ್ಮಾಪಕರ ಮುಂದಿಟ್ಟು, ಕೆಲಸ ಗಿಟ್ಟಿಸಲು ಇಲ್ಲಿ ವಿಪುಲ ಅವಕಾಶವಿರುತ್ತದೆ.

ಕ್ಷೇತ್ರಕ್ಕೆ ಹೊಸದಾಗಿ ಕಾಲಿರಿಸಲು ಪ್ರಯತ್ನಿಸುವವರೆಲ್ಲ ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಹಾತೊರೆಯುತ್ತಾರೆ. ಆದರೆ, ಚಿತ್ರ ನಿರ್ಮಾಣ ಸಂಸ್ಥೆಗಳು ಯೋಜನೆಗಳನ್ನು ಹೊಸಬರಿಗೆ ನೀಡಲು ಸಿದ್ಧವಿರುವುದಿಲ್ಲ. ಅದರಲ್ಲೂ ಬ್ರಿಟಿಷ್ ಅಥವ ಅಮೆರಿಕಾ ದೇಶದ ಬಿಳಿಯರಲ್ಲದಿದ್ದರೆ ಈ ಪ್ರಯತ್ನ ಮತ್ತಷ್ಟು ಕಷ್ಟವಾಗುತ್ತದೆ.

ಹೊಸಬರ ಪ್ರತಿಭೆ, ವೃತ್ತಿಪರತೆಗಳನ್ನು ಸಂಶಯದಿಂದಲೇ ನೋಡುವ ವಾತಾವರಣವಿರುತ್ತದೆ. ಅದಲ್ಲದೆ ಕತೆಯ ಸ್ವರೂಪ, ಜೀವ ವಿಜ್ಞಾನದ ತಿಳಿವಳಿಕೆ, ತಾಂತ್ರಿಕ ನಿಪುಣತೆ ಮತ್ತು ಯೋಜನೆಗಳನ್ನು ನಿರ್ವಹಿಸುವ ಸಾಮರ್ಥ್ಯಗಳೆಲ್ಲ ಅಲ್ಲಿ ಪರೀಕ್ಷೆಗೆ ಒಳಗಾಗುತ್ತವೆ.

ಇದರಿಂದ ಸಾಕ್ಷ್ಯಚಿತ್ರ ನಿರ್ಮಾಣದ ವಿಶ್ವ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದು ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಹೊಸದಾಗಿ ಅಸ್ತಿತ್ವವನ್ನು ಕಂಡುಕೊಳ್ಳಲು ಹೊಸಬರು ಮತ್ತೆ ಮತ್ತೆ ಈ ಚಿತ್ರೋತ್ಸವಕ್ಕೆ ಮರಳಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಾ ಸಾಗುತ್ತಾರೆ. ನಿಜಕ್ಕೂ ಇದೊಂದು ಅಗ್ನಿಪರೀಕ್ಷೆ.

ಸುಮಾರು ಎರಡು ದಶಕಗಳಿಗೂ ಹಿಂದೆ ನಾನೂ ಸಹ ಈ ದಿವ್ಯ ಪರೀಕ್ಷೆಗೆ ಒಳಗಾಗಿದ್ದೆ. ನನ್ನ ಅಂತರಾಳದ ಕನಸುಗಳನ್ನು ಈಡೇರಿಸಿಕೊಳ್ಳಲು ಇಂಗ್ಲೆಂಡ್‌ಗೆ ತೆರಳಿ ‘ವೈಲ್ಡ್ ಸ್ಕ್ರೀನ್ ಚಿತ್ರೋತ್ಸವ’ದಲ್ಲಿ ಭಾಗವಹಿಸಲು ನಿರ್ಧರಿಸಿದೆ.

ಅಂದಿನ ದಿನಗಳಲ್ಲಿ ಸಂವಹನ ಮಾಧ್ಯಮ ಇಂದಿನಂತೆ ವಿಕಸಿಸಿರಲಿಲ್ಲ. ಎಲ್ಲವೂ ಸಾವಧಾನವಾಗಿ ಮುಂದುವರೆಯುತ್ತಿತ್ತು. ಬ್ರಿಟಿಷ್ ವೀಸಾ ಪಡೆಯಲು, ನಿರ್ಮಾಪಕರಿಗೆ ಮಾತುಕತೆಯ ದಿನಾಂಕಗಳನ್ನು ಗೊತ್ತುಪಡಿಸಿಕೊಳ್ಳಲು ಹರಸಾಹಸ ಮಾಡಬೇಕಿತ್ತು.

ಪತ್ರವ್ಯವಹಾರಗಳಿಗಷ್ಟೇ ಸೀಮಿತವಾಗಿದ್ದ ಅಂದಿನ ಸಂವಹನ ವ್ಯವಸ್ಥೆಯಿಂದಾಗಿ ಬರೆದ ಪತ್ರಗಳಿಗೆ ಉತ್ತರ ಬರುವಾಗ ತಿಂಗಳೇ ಮುಗಿದಿರುತ್ತಿತ್ತು. ಭರವಸೆ ಮೂಡಿಸುವ ಯೋಜನೆಗಳೆಂದು ಕಂಡಾಗ ಮಾತ್ರ ಫ್ಯಾಕ್ಸ್ ಮೂಲಕ ಕೆಲವೊಮ್ಮೆ ಉತ್ತರಗಳು ಆಗಮಿಸುತ್ತಿದ್ದವು.

ಇ-ಮೇಲ್, ಮೊಬೈಲ್, ವಿಡಿಯೊ ಕಾನ್ಫರೆನ್ಸ್‌ಗಳು ಇಲ್ಲದ್ದಿದ್ದರಿಂದ ಪರಸ್ಪರ ಎದುರು ಕುಳಿತೇ ಮಾತನಾಡಿ ಯೋಜನೆಗಳನ್ನು ಮನವರಿಕೆ ಮಾಡಿಕೊಡಬೇಕಾದ ಪರಿಸ್ಥಿತಿ ಇತ್ತು.

ಆಗಿನ್ನೂ ಚಿಕ್ಕವನಾಗಿದ್ದ ನನಗೆ ಪ್ರಪಂಚ ಜ್ಞಾನ ಬಹಳ ಸೀಮಿತವಾಗಿತ್ತು. ನನ್ನ ಸ್ನೇಹಿತರಲ್ಲಿ ಅನೇಕರು ವನ್ಯಜೀವಿ, ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹಾನ್ ಪ್ರತಿಭಾವಂತರೆಂದು, ಅವರ ಸಲಹೆ ಸಹಕಾರಗಳಿಂದ ಅದ್ಭುತವಾದ ಸೃಜನಾತ್ಮಕ ಪ್ರಕೃತಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಬಲ್ಲನೆಂದು, ಆದರೆ ಪೂರಕವಾದ ಅವಕಾಶಗಳು ಲಭಿಸುತ್ತಿಲ್ಲ ಎಂದಷ್ಟೇ ನಾನು ಭಾವಿಸಿದ್ದೆ.

ಆ ಗುಣಮಟ್ಟದ ಕೃತಿಗಳನ್ನು ಸೃಷ್ಟಿಸಲು ಅಗತ್ಯವಿರುವ ಶಿಸ್ತು ಮತ್ತು ಕೌಶಲ್ಯ ಬೇರೆಯದೇ ಆಗಿರುತ್ತದೆಂದು ಅರಿಯಲು ನನಗೆ ಹಲವು ವರ್ಷಗಳೇ ಹಿಡಿಯಿತು. ಅದೇನೆ ಇರಲಿ, ಕಾಡಿನಲ್ಲಿ ಕಂಡಿದ್ದ ಕತೆಗಳನ್ನು ದೃಶ್ಯರೂಪಕ್ಕೆ ತಂದು ಜಗತ್ತಿಗೆಲ್ಲ ಹೇಳಬೇಕೆಂಬ ಅದಮ್ಯ ಬಯಕೆ ನನ್ನನ್ನು ಇಂಗ್ಲೆಂಡ್‌ಗೆ ಹೊರಡಲು ಪ್ರೇರೇಪಿಸಿತ್ತು.

ಮೊದಲ ಬಾರಿಗೆ ಇಂಗ್ಲೆಂಡ್‌ಗೆ ಹೋಗುತ್ತಿದ್ದುದರಿಂದ ನಾನು ಸ್ವಲ್ಪ ವಿಚಲಿತಗೊಂಡಿದ್ದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕುಳಿತಿರುವಾಗ ನನ್ನ ಆಲೋಚನೆಗಳು ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿದ್ದವು. ಇಂಗ್ಲೆಂಡ್‌ನ ಚಾರಿತ್ರಿಕ, ಸಾಂಸ್ಕೃತಿಕ ಹಿರಿಮೆಗಳನ್ನೆಲ್ಲಾ ಓದಿಕೊಂಡಿದ್ದ ನಾನು ಅಲ್ಲಿ ಬೇರೂರಿರುವ ವರ್ಣಭೇದದ ಬಗೆಗೆ ತಿಳಿದುಕೊಂಡಿದ್ದೆ.

ಅಲ್ಲಿ ಎದುರಾಗಬಹುದಾದ ಮುಜುಗರಗಳನ್ನೆಲ್ಲ ಕಡೆಗಣಿಸಿ ಸಾಕ್ಷ್ಯಚಿತ್ರ ನಿರ್ಮಿಸುವ ನನ್ನ ಕನಸಿಗೆ ಅನುಮೋದನೆ ಪಡೆದುಕೊಳ್ಳುವುದಷ್ಟೆ ಮುಖ್ಯವೆಂದು ತೀರ್ಮಾನಿಸಿ ಒಬ್ಬಂಟಿಗನಾಗಿ ಹೊರಟಿದ್ದೆ.

ವಿಮಾನ ನಿಲ್ದಾಣದಲ್ಲಿ ಕುಳಿತಿರುವಾಗ ಚಿತ್ರೋತ್ಸವದಲ್ಲಿ ಎದುರಾಗುವ ಮಂದಿಯೊಂದಿಗೆ ಹೇಗೆ ವರ್ತಿಸಬೇಕು, ಹೇಗೆ ಮಾತನಾಡಬೇಕೆಂದು ಆಲೋಚಿಸುತ್ತಿದ್ದೆ. ನಡುವೆ ಹೇಗೆ ಕೆಲವರು ಮೊದಲ ನೋಟದಲ್ಲೇ ಎಲ್ಲರಿಗೂ ಇಷ್ಟವಾಗಬಲ್ಲ ಆಕರ್ಷಕ ವ್ಯಕ್ತಿತ್ವನ್ನು ರೂಪಿಸಿಕೊಂಡಿರುತ್ತಾರೆಂದು ಯೋಚಿಸುತ್ತಾ ಕುಳಿತೆ.

ಆಗ ತಟ್ಟನೆ ಹೊಳೆಯಿತು. ಬಹುಶಃ, ಆತ್ಮವಿಶ್ವಾಸದ ನಗೆಯೊಂದಿಗೆ ಮಾತನಾಡುವುದಷ್ಟೆ ಇದರ ಒಳಗುಟ್ಟು, ಎಂದು ಅರಿತಾಗ ನನ್ನ ಆತಂಕಗಳೆಲ್ಲಾ ಮಾಯವಾಗಿ ಮನಸ್ಸು ಹಗುರಗೊಂಡಿತು.

ಸ್ವಲ್ಪ ಹೊತ್ತಿನಲ್ಲೆ ಮತ್ತೆ ನನ್ನಲ್ಲಿ ಗೊಂದಲ ಮೂಡಿತು. ಅಪರಿಚಿತರೊಂದಿಗೆ ಕಾರಣಗಳಿಲ್ಲದೆ ನಗುತ್ತಾ ನಿಲ್ಲುವುದು ಹೇಗೆ? ಪೂರಕ ಸಂದರ್ಭಗಳಿಲ್ಲದೆ ನಗಬಹುದೆ? ಅಂತಹ ನಗು ಮತ್ತೇನನ್ನೋ ಪ್ರತಿನಿಧಿಸಬಹುದು, ಅದು ಅಪಾರ್ಥಗಳಿಗೆ ಕಾರಣವಾದರೆ ಏನು ಗತಿ? ನಗುವುದಷ್ಟಕ್ಕೆ ಗಮನವನ್ನು ಕೇಂದ್ರೀಕರಿಸಿದಾಗ ಮಾತನಾಡಬೇಕಿರುವ ವಿಷಯಗಳು ಹಾದಿ ತಪ್ಪಬಹುದು. ಏಕೆಂದರೆ ನಗೆ ಬೀರುವುದು ನನ್ನ ಸಹಜ ಸ್ವಭಾವವಲ್ಲ.

ಈ ಪ್ರಯತ್ನದಲ್ಲಿ ವಿದೂಷಕನಂತೆ ಕಂಡರೆ ಏನು ಮಾಡುವುದು ಎಂದೆಲ್ಲಾ ಯೋಚಿಸಿದೆ. ಕಡೆಗೆ, ಏನಾದರಾಗಲಿ ವಿಶ್ವಾಸದಿಂದ ನಗುತ್ತ ವ್ಯವಹರಿಸುವುದೇ ಸರಿಯಾದ ಮಾರ್ಗ ಎಂದು ಮತ್ತೆ ಗಟ್ಟಿಯಾಗಿ ನಿಶ್ಚಯಿಸಿದೆ.

ಮೊದಲಿಗೆ ಯಾರಾದರು ಅಪರಿಚಿತರೊಡನೆ ಇದನ್ನು ಪ್ರಯೋಗಿಸಿನೋಡಬೇಕು, ಆಗಷ್ಟೇ ಈ ಪ್ರಯತ್ನ ಪರಿಣಾಮಕಾರಿಯೇ ಅಲ್ಲವೇ ಎಂಬುದು ಮುಂಚಿತವಾಗಿ ತಿಳಿಯುತ್ತದೆ, ಅದರಲ್ಲೂ ಬಿಳಿಯರು ಸಿಕ್ಕರೆ ಇಂಗ್ಲೆಂಡ್‌ನಲ್ಲಿ ಎದುರಿಸಬೇಕಿರುವ ಪರೀಕ್ಷೆಗೆ ಪೂರ್ವ ಸಿದ್ಧತೆಯಂತಾಗಬಹುದೆಂದು ಯೋಚಿಸಿದೆ.

ವಿಮಾನ ಹೊರಡಲು ಇನ್ನೂ ಎರಡು ತಾಸು ಸಮಯವಿದ್ದುದ್ದರಿಂದ ಯೋಜನೆಯನ್ನು ಪ್ರಯೋಗಿಸಲು ಜನರಿಗಾಗಿ ಅತ್ತಿತ್ತ ನೋಡಿದೆ. ಅಲ್ಲಿ ಕಾದು ಕುಳಿತಿದ್ದ ಹೆಚ್ಚಿನ ಪ್ರಯಾಣಿಕರೆಲ್ಲಾ ಅರೆ ನಿದ್ರೆಯಲ್ಲಿ ಕಳೆದುಹೋಗಿದ್ದರು. ಕೈ ಗಡಿಯಾರ ನೋಡಿದೆ. ಮುಂಜಾನೆ ನಾಲ್ಕು ಗಂಟೆಯಾಗಿತ್ತು. ನನ್ನ ಪ್ರಯೋಗಕ್ಕೆ ಇದು ಪೂರಕ ಸನ್ನಿವೇಶವಲ್ಲ, ಸೂಕ್ತ ಅವಕಾಶಕ್ಕಾಗಿ ಕಾಯುವುದು ಲೇಸೆಂದು ಸುಮ್ಮನಾದೆ.

ಆದರೆ ನನ್ನ ದುರದೃಷ್ಟ, ವಿಮಾನ ಏರಿ ಕುಳಿತುಕೊಳ್ಳುವವರೆಗೆ ನನ್ನ ಪ್ರಯೋಗಕ್ಕೆ ಅವಕಾಶಗಳೇ ತೆರೆದುಕೊಳ್ಳಲಿಲ್ಲ. ವಿಮಾನ ಹಾರಲು ಕೆಲವೇ ನಿಮಿಷಗಳಿದ್ದಾಗ ನಿರಾಶೆ ಮತ್ತೆ ನನ್ನನ್ನು ಆವರಿಸಿತು. ನನ್ನ ಮಗ್ಗುಲಿನ ಆಸನ ಖಾಲಿಯಾಗಿ ಉಳಿದಿತ್ತು.

ಯಾವಾಗಲೂ ವಿಮಾನದಲ್ಲಿ ದೀರ್ಘಕಾಲ ಪ್ರಯಾಣಿಸುವಾಗ ನಾನು ಬಯಸುತ್ತಿದ್ದದ್ದು ಖಾಲಿ ಆಸನಗಳನ್ನೆ. ಯಾವ ನಿರ್ಬಂಧಗಳಿಲ್ಲದೆ ಕೈಗಳನ್ನು ವಿಸ್ತರಿಸಿ ಸುಖಾಸೀನವಾಗಿ ಪ್ರಯಾಣಿಸಬಹುದೆಂಬ ಕಾರಣದಿಂದ. ಆದರೆ ಈ ಹೊತ್ತಿನಲ್ಲಿ ಅದು ಮುಖ್ಯವಾಗಿರಲಿಲ್ಲ.

ನಾನು ಕಂಡುಕೊಂಡ ಹೊಸ ತತ್ವವನ್ನು ಪ್ರಯೋಗಿಸಿ ನೋಡುವುದು ನನ್ನ ಗುರಿಯಾಗಿತ್ತು. ಅದರಲ್ಲೂ ವಿದೇಶಿ ಬಿಳಿಯರೊಬ್ಬರು ನನ್ನ ಮಗ್ಗುಲಲ್ಲಿದ್ದರೆ ನನ್ನ ಪ್ರಯೋಗದ ಪೂರ್ವಾಭ್ಯಾಸಕ್ಕೆ ನೆರವಾಗಬಹುದೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಗಗನ ಸಖಿಯರು ಲಗೇಜ್ ಕ್ಯಾಬಿನ್‌ಗಳ ಬಾಗಿಲುಗಳನ್ನು ಸರಸರನೆ ಮುಚ್ಚುತ್ತಾ ವಿಮಾನ ಹೊರಡುವ ಸೂಚನೆ ಕೊಡುತ್ತಿದ್ದರು.

ಇನ್ನೇನು ವಿಮಾನದ ಬಾಗಿಲುಗಳನ್ನು ಮುಚ್ಚಬೇಕೆನ್ನುವಾಗ ವಯಸ್ಸಾದ ಬಿಳಿ ಮಹಿಳೆಯೊಬ್ಬಳು ಗಡಿಬಿಡಿಯಿಂದ ಒಳಬಂದಳು. ತನಗೆ ನಿಗದಿಯಾಗಿರುವ ಆಸನದ ಸಂಖ್ಯೆಯನ್ನು ಹುಡುಕುತ್ತಾ ನನ್ನ ಬಳಿ ಬಂದು ನಿಂತಳು.

ಆ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದಂತೆ ನಾನು ಎದ್ದು ನಿಂತು ನಗುಮುಖದಿಂದ ಆಕೆಯ ಸೂಟ್‌ಕೇಸ್‌ಗಳನ್ನು ಮೇಲಿರಿಸಿ, ಆಸೀನಳಾಗುವಂತೆ ನಮ್ರತೆಯಿಂದ ಸೂಚಿಸಿದೆ. ಆಕೆಗೆ ನನ್ನ ನಡವಳಿಕೆ ಬಹಳವಾಗಿ ಇಷ್ಟವಾದಂತೆ ಕಂಡಿತು. ಸೌಮ್ಯದಿಂದ ನಮಿಸಿ ನಗುತ್ತಾ ಪಕ್ಕದಲ್ಲಿ ಕುಳಿತಳು.

ಬೆಳ್ಳಿಯಂತೆ ಸುರುಳಿಸುತ್ತಿ ಇಳಿಬಿದ್ದ ಕೇಶ, ವಯಸ್ಸಾದರೂ ಹೊಳಪನ್ನು ಕಳೆದುಕೊಳ್ಳದ ಕಣ್ಣುಗಳು, ಮುಖದಲ್ಲಿ ಹರಿದಾಡಿದ್ದ ನೆರಿಗೆಗಳನ್ನು ಮರೆಸಿಬಿಡುವ ಚೆಲುವಾದ ನಗು. ಬಹುಶಃ ನನ್ನ ಬದುಕಿನಲ್ಲಿ ಅಷ್ಟು ಶೋಭಾಯಮಾನವಾದ ಮಹಿಳೆಯನ್ನು ನೋಡಿರಲಿಲ್ಲ. ಆ ಕ್ಷಣ ಪರಮಾನಂದವಾಯಿತು.

ಇಡೀ ಸನ್ನಿವೇಶ ನನ್ನ ನೆರವಿಗೆ ಸಜ್ಜಾದಂತೆ ಕಂಡು ಒಳಗೊಳಗೆ ಖುಷಿಪಟ್ಟೆ. ಮತ್ತೊಮ್ಮೆ ಅವಳತ್ತ ನೋಡಿ ಮಂದಹಾಸ ಬೀರಿದೆ. ಪ್ರತಿಯಾಗಿ ಆಕೆ ಕಿರುನಗೆ ನಕ್ಕಳು. ಆತ್ಮವಿಶ್ವಾಸದ ನಗೆಯೊಂದಿಗಿನ ನನ್ನ ಪ್ರಯೋಗ ಮೊದಲ ಯತ್ನದಲ್ಲೇ ಶುಭಾರಂಭ ಪಡೆದಿತ್ತು.

ಕೆಲ ನಿಮಿಷಗಳಲ್ಲೇ ಬಿಳಿ ಮಹಿಳೆಯೊಬ್ಬಳ ಮನಗೆದ್ದಂತಾಗಿ ಹಿಗ್ಗಿದೆ. ದಕ್ಕಿದ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಪ್ರಯಾಣದುದ್ದಕ್ಕೂ ಆಕೆಯೊಂದಿಗೆ ಮಾತನಾಡುತ್ತಾ ನನ್ನ ಹೊಸ ನಡವಳಿಕೆಯನ್ನು ಇನ್ನಷ್ಟು ರೂಢಿಮಾಡಿಕೊಳ್ಳಬೇಕೆಂದು ನಿಶ್ಚಯಿಸಿದೆ.

ಆದರೆ ಆದದ್ದೇ ಬೇರೆ, ವಿಮಾನವು ಮೇಲೇರಿದ ಸ್ವಲ್ಪ ಹೊತ್ತಿನಲ್ಲಿ ನನ್ನತ್ತ ತಿರುಗಿದ ಮಹಿಳೆ ‘Gentleman, could you please inform the airhostess not to disturb me?’ ಎಂದು ಆಸನಕ್ಕೆ ಒರಗಿ ನಿದ್ರೆಯಲ್ಲಿ ಕರಗಿಹೋದಳು!

ಆಕೆ ಮತ್ತೆ ಎಚ್ಚರಗೊಂಡಾಗ ಲಂಡನ್‌ನ ಹಿತ್ರೊ ವಿಮಾನ ನಿಲ್ದಾಣ ತಲುಪಲು ಕೆಲವೇ ಗಂಟೆಗಳು ಬೇಕಿತ್ತು. ಎಚ್ಚರಗೊಂಡ ಆಕೆ ಸ್ವಚ್ಛತಾ ಕೋಣೆಗೆ ಹೋಗಿ ಹಿಂದಿರುಗಿದಳು. ಆಯಾಸದಿಂದ ಚೇತರಿಸಿಕೊಂಡಿದ್ದ ಅವಳು ಉಜ್ವಲವಾಗಿ ಹೊಳೆಯುತ್ತಿದ್ದಳು. ನನ್ನ ಪ್ರಯೋಗವನ್ನು ಮುಂದುವರೆಸಲು ಮತ್ತೆ ಆಕೆಯತ್ತ ನಗೆ ಬೀರಿದೆ.

ಸಾಂಪ್ರದಾಯಿಕವಾಗಿ ಯೋಗಕ್ಷೇಮಗಳನ್ನು ವಿಚಾರಿಸಿದೆ. ಆಕೆ ತನ್ನ ಹೂನಗೆಯೊಂದಿಗೆ ಮಾತುಕತೆ ಆರಂಭಿಸಿದಳು. ಔಪಚಾರಿಕವಾಗಿ ಮಾತುಕತೆ ಸಾಗಿತ್ತು. ನಡುನಡುವೆ ನಾನು ನನ್ನ ನಗುವನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾ ಮಂದಹಾಸ ಬೀರುತ್ತಿದ್ದೆ.

ಹಾಗಾಗಿ ಕೆಲವೊಮ್ಮೆ ವಿಷಯ ಮರೆತುಹೋಗುತ್ತಿತ್ತು. ಆಕೆ ಬೇಜಾರು ಮಾಡಿಕೊಳ್ಳದೆ ಮತ್ತೆ ತನ್ನ ನಗುವನ್ನು ಚೆಲ್ಲಿ ಮುಂದುವರೆಯುತ್ತಿದ್ದಳು.

ಬಹುಶಃ ಅರ್ಧ ಗಂಟೆ ಕಳೆದಿರಬಹುದು. ಆಕೆ ತನ್ನ ಎಲ್ಲಾ ಬಿಗುಮಾನಗಳಿಂದ ಆಚೆ ಬಂದಂತೆ ನಿರಾಳವಾಗಿ ಮಾತನಾಡತೊಡಗಿದಳು. ದಕ್ಷಿಣ ಇಂಗ್ಲೆಂಡ್‌ನಲ್ಲಿರುವ ತನ್ನ ತೋಟದಮನೆ, ತನ್ನ ಕುಟುಂಬ, ಮತ್ತಿತರ ಖಾಸಗಿ ವಿಷಯಗಳ ಬಗ್ಗೆ ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿದಳು. ನಾನು ಎಣಿಸಿದ್ದಕ್ಕಿಂತ ಪರಿಣಾಮಕಾರಿಯಾಗಿ ನನ್ನ ಪ್ರಯೋಗ ಕೆಲಸ ಮಾಡಿತ್ತು.

ಮುಂದುವರೆದ ಆಕೆ, ತನ್ನ ನಲ್ಮೆಯ ಮಕ್ಕಳು, ಸದಾ ಪ್ರೀತಿಸುವ ಪತಿಯ ಕುರಿತು ಹೆಮ್ಮೆಯಿಂದ ಇನ್ನಷ್ಟು ವಿವರವಾಗಿ ಮಾತನಾಡಿದಳು. ತನ್ನ ಮಕ್ಕಳು ಬೆಳೆದು ಸ್ವತಂತ್ರರಾಗಿ ದೂರ ಸರಿದಾಗ ಆಕೆ ಮಾನಸಿಕ ಖಿನ್ನತೆಗೆ ಒಳಗಾದಳಂತೆ.

ಇಂಗ್ಲೆಂಡ್‌ನ ವೈದ್ಯರ ಸಲಹೆಗಳು ನೆರವಿಗೆ ಬಾರದಾಗ ಸ್ನೇಹಿತೆಯೊಬ್ಬಳು ಭಾರತದ ಬಾಬಾ ಒಬ್ಬರ ಬಗೆಗೆ ತಿಳಿಸಿದಳಂತೆ. ಹಾಗಾಗಿ ಆ ಬಾಬಾರವರ ಮೂರು ವಾರಗಳ ರಿಟ್ರೀಟ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದಳು.

ಸಂತೋಷಗೊಂಡಿದ್ದ ಆಕೆ ಶಿಬಿರದಲ್ಲಿ ಬಾಬಾರವರು ಮಾಡಿದ ಉಪದೇಶಗಳ ಬಗೆಗೆ ಬಹಳ ಉತ್ಸಾಹದಿಂದ ವಿವರಿಸುತ್ತಿದ್ದಳು. ಹಾಗಾಗಿ ಆ ವಿಷಯಗಳ ಬಗೆಗೆ ನನಗಿದ್ದ ಉದಾಸೀನತೆಯನ್ನು ತೋರಗೊಡದೆ ನಡುನಡುವೆ ನನ್ನ ಮಂದಹಾಸವನ್ನು ಅಭ್ಯಾಸಮಾಡುತ್ತಾ ಕುಳಿತಿದ್ದೆ.

ಬಾಬಾರವರ ಕಡೆಯ ಉಪದೇಶ ಅವಳ ಮೇಲೆ ಬಹಳ ಪ್ರಭಾವ ಬೀರಿತಂತೆ. ಯಾವ ನಿರೀಕ್ಷೆಯಿಲ್ಲದೆ ಎಲ್ಲರನ್ನೂ ಪ್ರೀತಿಯಿಂದ ನೋಡು, ಪ್ರತಿಯೊಬ್ಬರನ್ನು ಮಂದಹಾಸದೊಂದಿಗೆ ಮಾತನಾಡಿಸು.

ಪ್ರತಿಯಾಗಿ ಎಲ್ಲರೂ ನಿನ್ನನ್ನು ವಿಶ್ವಾಸದಿಂದ ನೋಡುತ್ತಾರೆ, ಪ್ರಪಂಚವೇ ನಿನ್ನನ್ನು ಇಷ್ಟಪಡುತ್ತದೆ ಎಂದು ಬೋಧಿಸಿದ್ದರಂತೆ.
ಆ ಸುಂದರ ಬ್ರಿಟಿಷ್ ಮಹಿಳೆ ತನ್ನ ಹೊಳೆವ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಾ ಮುಂದುವರೆದಳು.

‘ನಾನು ಇದನ್ನು ನಿನಗೆ ಹೇಳಲೇಬೇಕು. ಬಾಬಾರವರ ಈ ಉಪದೇಶವನ್ನು ಮೊದಲ ಬಾರಿಗೆ ಪ್ರಯೋಗಮಾಡಲು ನಾನು ಅವಕಾಶಕ್ಕಾಗಿ ಎದಿರುನೋಡುತ್ತಿದ್ದೆ. ನನ್ನ ಅದೃಷ್ಟ, ನಿನ್ನನ್ನು ಭೇಟಿಯಾದೆ...’ ಎಂದಾಗ ಭೂಮಿಯೆ ಕುಸಿದಂತಾಯಿತು.

ಆಕೆ ಮುಂದುವರೆದು ‘ನಾನು ಪ್ರಜ್ಞಾಪೂರ್ವಕವಾಗಿ, ಪ್ರಾಮಾಣಿಕವಾಗಿ ಮೊದಲ ಬಾರಿಗೆ ಆ ತತ್ವವನ್ನು ನಿನ್ನ ಮೇಲೆ ಪ್ರಯೋಗಿಸಿದೆ. ಎಷ್ಟು ಅದ್ಭುತ... ಬಾಬಾ ಒಬ್ಬ ಅಸಾಧಾರಣ ವ್ಯಕ್ತಿ...

ಆತನ ಉಪದೇಶ ಅದೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿತು! ನಾನು ತೋರಿದ ಒಲುಮೆಯನ್ನು ನೀನೆಷ್ಟು ಪ್ರೀತಿಯಿಂದ ಹಿಂದಿರುಗಿಸಿದೆ ನೋಡು’ ಎಂದು ಹೇಳುವಾಗ ಆಕೆಯ ಕಣ್ಣುಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು.

ಸಮುದ್ರದಲ್ಲಿ ತೇಲಿಬರುವ ಅಲೆಗಳ ಸ್ಪರ್ಶಕ್ಕೆ ಕಾಲೊಡ್ಡಿ ನಿಂತಿದ್ದ ನನಗೆ ಒಮ್ಮೆಲೆ ಜೀವ ನುಂಗುವ ಹುಸಿನೆಲದಲ್ಲಿದ್ದಂತಹ ಅನುಭವವಾಯಿತು. ಅಲ್ಲಿಯವರೆಗೆ ವಿಶ್ವಾಸದಿಂದ ಮಂದಹಾಸ ಬೀರುತ್ತಿರಬೇಕೆಂಬ ನನ್ನ ಪ್ರಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಂತೆ ಭಾವಿಸಿದ್ದೆ. ಆದರೆ ಅದೇ ಬಗೆಯ ಪ್ರಯೋಗವನ್ನು ಆಕೆ ನನ್ನ ಮೇಲೆ ಪ್ರಯೋಗಿಸಿದ್ದುದನ್ನು ತಿಳಿದಾಗ ಸಂಪೂರ್ಣವಾಗಿ ಕುಸಿದುಬಿದ್ದಿದ್ದೆ.

ಆಕೆ ಹುಮ್ಮಸ್ಸಿನಿಂದ ಮಾತನಾಡುತ್ತಿದ್ದಳು. ನಾನು ಕ್ರಮೇಣ ಚೇತರಿಸಿಕೊಂಡು ಮಾತುಕತೆ ಮುಂದುವರೆಸಿದೆ. ಕನಿಷ್ಟ ಆಕೆಯಾದರೂ ಸಂತೋಷದಿಂದ, ಸಂತೃಪ್ತಿಯಿಂದ ಮನೆ ಸೇರಲೆಂಬ ಆಶಯ ನನ್ನದಾಗಿತ್ತು. ಮಾತು ನನ್ನ ಬ್ರಿಸ್ಟಲ್ ಪ್ರವಾಸದತ್ತ ತಿರುಗಿತು.

ಜನಾಂಗೀಯ ಭೇದದ ಬಗ್ಗೆ ಮಾತನಾಡುತ್ತಾ ಇಂಗ್ಲೆಂಡ್ ನನ್ನನ್ನು ಹೇಗೆ ಸ್ವೀಕರಿಸಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದೆ. ಆಕೆ ‘ಇಂಗ್ಲೆಂಡ್ ನೀನು ತಿಳಿದಿರುವಂತಲ್ಲ’ ಎಂದು ಹೇಳಿದಳು. ಆದರೆ ಆ ದನಿಯಲ್ಲಿ ದೃಢತೆ ಇರಲಿಲ್ಲ. ಬಳಿಕ ಸ್ವಲ್ಪ ಭಾವಾವೇಶಕ್ಕೊಳಗಾದಂತೆ ಕಂಡಳು.

ತುಸು ಸಮಯದ ಬಳಿಕ ಏನನ್ನೋ ಯೋಚಿಸಿದಂತೆ, ಲಂಡನ್‌ನಲ್ಲಿ ಮಧ್ಯರಾತ್ರಿಗಳು ಅಷ್ಟು ಸುರಕ್ಷಿತವಲ್ಲವೆಂಬುದರ ಸುಳಿವು ನೀಡಿದಳು. ಆಕೆ ನನ್ನ ಕ್ಷೇಮವನ್ನು ಚಿಂತಿಸುತ್ತಿರುವಂತಿತ್ತು.

ಏನೋ ಯೋಚಿಸಿ ಕುಳಿತಿದ್ದ ಆಕೆ, ಇದ್ದಕಿದ್ದಂತೆ, ‘ನೀನು ಈ ರಾತ್ರಿ ಬ್ರಿಸ್ಟಲ್‌ಗೆ ಪ್ರಯಾಣ ಮಾಡುವ ಬದಲು ನಮ್ಮ ತೋಟದ ಮನೆಗೆ ಬಾ, ನನ್ನ ಪತಿ ನಿನ್ನನ್ನು ಬೆಳಗಿನ ಜಾವ ರೈಲ್ವೆ ನಿಲ್ದಾಣಕ್ಕೆ ಬಿಡುತ್ತಾನೆ. ಚಿತ್ರೋತ್ಸವದ ಆರಂಭಕ್ಕೆ ಮುನ್ನ ನೀನು ಬ್ರಿಸ್ಟಲ್ ತಲುಪಬಹುದು’ ಎಂದಳು.

‘ನನ್ನ ಪತಿ ಬಹಳ ಒಳ್ಳೆಯ ಮನುಷ್ಯ, ಒಳ್ಳೆಯ ಅಭಿರುಚಿಯುಳ್ಳ ಆತ ನಿನಗೆ ಖಂಡಿತವಾಗಿಯೂ ಇಷ್ಟವಾಗುತ್ತಾನೆ’ ಎಂದಾಗ ಆಕೆಯ ಕಳಕಳಿಯ ಬಗ್ಗೆ ನನಗೆ ಗೌರವ ಮೂಡಿತು.

ಮೂರು ವಾರಗಳ ಬಳಿಕ ಮನೆಗೆ ಹಿಂದಿರುತ್ತಿದ್ದ ಆಕೆ ವಿಮಾನದಿಂದ ಇಳಿದಾಗ ಭಾವೋದ್ವೇಗಕ್ಕೊಳಗಾಗಿದ್ದಳು. ಪ್ರಯಾಣದುದ್ದಕ್ಕೂ ನನ್ನಿಂದ ಪಡೆದ ಸಣ್ಣಪುಟ್ಟ ಸಹಾಯಗಳನ್ನೆಲ್ಲ ನೆನೆದು ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ವ್ಯಕ್ತಿತ್ವವನ್ನು ಕೊಂಡಾಡಿದಳು.

ಆಕೆಯ ಲಗೇಜ್‌ಗಳನ್ನೆಲ್ಲ ಟ್ರಾಲಿಯಲ್ಲಿರಿಸಿ ಕಸ್ಟಮ್ ಕೌಂಟರ್ ದಿಕ್ಕಿಗೆ ಜೊತೆಯಾಗಿ ಮಾತನಾಡುತ್ತಾ ಸಾಗಿದೆವು. ಅಪರಿಚಿತ ನೆಲದಲ್ಲಿ ಬೆಚ್ಚನೆಯ ಸ್ನೇಹದ ಸ್ಪರ್ಶವಾಯಿತು.

ಕಸ್ಟಮ್ ಕ್ಯಾಬಿನ್ ಎದುರಿಗಿದ್ದ ಸಾಲುಗಳನ್ನು ಗಮನಿಸಿದಾಗ ನಾನು ವಾಸ್ತವಕ್ಕೆ ಬಂದೆ. ಆಗಷ್ಟೆ ನಾನು ಎಲ್ಲಿ ಸಲ್ಲುವೆನೆಂಬ ಅರಿವುಂಟಾಯಿತು. ಉರುಳಿಬಿದ್ದ ರೈಲಿನ ಬೋಗಿಗಳಂತೆ ಅಂಕುಡೊಂಕಾಗಿ ಸಾಗಿದ್ದ ಉದ್ದನೆಯ ಆ ಸಾಲಿನಲ್ಲಿ ಏಷ್ಯಾ ಮತ್ತು ಆಫ್ರಿಕಾದವರಷ್ಟೇ ಇದ್ದರು. ಪಕ್ಕದಲ್ಲಿದ್ದ ಇನ್ನೆರಡು ಕೌಂಟರ್‌ಗಳ ಬಳಿ ಇದ್ದದ್ದು ಇಬ್ಬರು ಮೂವರು ಬಿಳಿಯರು ಮಾತ್ರ.

ಹರ್ಷಚಿತ್ತಳಾಗಿ ನನ್ನೊಂದಿಗೆ ಹರಟುತ್ತಾ ನಡೆದಿದ್ದ ಆಕೆಯನ್ನು ತಡೆದು, ನೀನು ಈ ಉದ್ದನೆಯ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲವೆಂದು ‘ಬ್ರಿಟಿಷ್ ಪ್ರಜೆಗಳಿಗೆ ಮಾತ್ರ’ ಎಂಬ ಫಲಕವಿದ್ದ ಕೌಂಟರ್ ತೋರಿದೆ. ಟ್ರಾಲಿಯನ್ನು ಆ ಕೌಂಟರ್‌ನತ್ತ ತಿರುಗಿಸಿದಳು.

ಕೌಂಟರ್‌ನ ಗಾಜಿನ ಪರದೆಯ ಹಿಂದಿನಿಂದ ಬ್ರಿಟಿಷ್ ಪ್ರಜೆಯೊಬ್ಬ ಕೈ ಬೀಸುತ್ತಾ ಯಾರದೋ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದ. ಬಹುಶಃ ಆಕೆಯು ಆತನನ್ನು ಗಮನಿಸಿರಬಹುದು.

ಅಲ್ಲಿಯವರೆಗೆ ಮೆಲ್ಲಗೆ ಸಾಗಿದ್ದ ಆಕೆಯ ಹೆಜ್ಜೆಗಳು ಇನ್ನಷ್ಟು ವೇಗವಾಗಿ ಮುನ್ನಡೆದವು. ಆಕೆ ಈಗ ಹಿಂದೆ ತಿರುಗಿ ನನ್ನನ್ನು ನೋಡುತ್ತಾಳೆ, ಹೊರನಡೆದ ಬಳಿಕ ವಿಮಾನ ನಿಲ್ದಾಣದಲ್ಲಿ ತಾನು ಕಾದು ನಿಲ್ಲಲಿರುವ ಯಾವುದೋ ನಿರ್ದಿಷ್ಟ ಸ್ಥಳವನ್ನು ಸೂಚಿಸುತ್ತಾಳೆ, ಎಂದು ದೃಢವಾಗಿ ನಂಬಿದ್ದೆ.

ಕೌಂಟರ್‌ನಲ್ಲಿ ಪಾಸ್‌ಪೋರ್ಟ್‌ಗೆ ಮುದ್ರೆ ಬಿದ್ದೊಡನೆ, ಆಕೆ ಪುಟ್ಟ ಹುಡುಗಿಯಂತೆ ಚಿಮ್ಮುತ್ತಾ ಗಾಜಿನ ಬಾಗಿಲುಗಳನ್ನು ದಾಟಿ ಹೊರನಡೆದು ಕೈಬೀಸುತ್ತಿದ್ದವನತ್ತ ಸಾಗಿದಳು. ಬಳಿಕ ಅವರಿಬ್ಬರು ಪರಸ್ಪರ ಅಪ್ಪಿಕೊಂಡಿರುವುದನ್ನು ಕಂಡೆ. ಏನಿಲ್ಲದಿದ್ದರೂ ನನ್ನತ್ತ ಕೈ ಬೀಸಿ ಗುಡ್‌ಬೈ ಹೇಳುತ್ತಾಳೆಂದು ನಿರೀಕ್ಷಿಸುತ್ತಾ ನಿಂತೆ...

ಕ್ಷಣ ಕಾಲ ಕತ್ತಲು ಕವಿದಂತಾಗಿತ್ತು... ಮತ್ತೆ ನೋಡಿದಾಗ ಅಲ್ಲೆಲ್ಲೂ ಅವರಿಬ್ಬರು ಕಾಣಲಿಲ್ಲ... ನಾನು ವಾಸ್ತವದೆಡೆಗೆ ತಿರುಗಿದೆ. ಅಂಕುಡೊಂಕಾಗಿ ಸಾಗಿದ್ದ ಆ ಉದ್ದನೆಯ ಸಾಲಿನಲ್ಲಿ ಕಟ್ಟಕಡೆಯವನಾಗಿ ನಿಂತಿದ್ದೆ.

ಸರದಿಯಲ್ಲಿದ್ದ ಭಾರತ ಮೂಲದ ವಿದ್ಯಾರ್ಥಿಯೊಬ್ಬ ತನಿಖಾಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಬೆಚ್ಚಿ ತಡವರಿಸುತ್ತಿದ್ದ. ತಪಾಸಣೆಯ ವೇಳೆಯಲ್ಲಿ ಸೂಟ್‌ಕೇಸ್‌ಗಳಿಂದ ಚೆಲ್ಲಾಡಿದ ದಾಖಲೆ ಪತ್ರಗಳನ್ನು ಹೆಕ್ಕುತ್ತಾ ಅಸಹಾಯಕನಾಗಿ ನಿಂತಿದ್ದ. ನಾನು ದೀರ್ಘಕಾಲ ಕಾಯಲು ಮಾನಸಿಕವಾಗಿ ಸಿದ್ಧನಾದೆ.

ಕೆಲವೆ ನಿಮಿಷಗಳ ಹಿಂದೆ, ಅಪರಿಚಿತ ನೆಲದಲ್ಲಿ ಸಂಪಾದಿಸಿದ್ದ ಬೆಚ್ಚನೆಯ ಸ್ನೇಹ ಮಾಯವಾಗಿತ್ತು.

ನನ್ನ ಮನಸ್ಸು ಕದಡಿ, ಹಲವಾರು ಯೋಚನೆಗಳು ಬಿಡಿ ಬಿಡಿಯಾಗಿ ಮೂಡಿ ಅಂತರ್ಧಾನಗೊಳ್ಳುತ್ತಿದ್ದವು. ಬಾಬಾರವರ ಪ್ರವಚನವನ್ನು ಆಕೆ ಅರ್ಥಮಾಡಿಕೊಳ್ಳುವಲ್ಲಿ ಎಡವಿದ್ದಳೋ ಅಥವ ಬಾಬಾರ ಬೋಧನೆಯೇ ಅಪೂರ್ಣವಾಗಿತ್ತೋ ತಿಳಿಯಲಿಲ್ಲ. ಮುಂದೊಂದು ದಿನ ಅಕಸ್ಮಾತ್ ಬಾಬಾರವರನ್ನು ಭೇಟಿಯಾದರೆ ಈ ಪ್ರಶ್ನೆಯನ್ನು ಕೇಳಬೇಕೆಂಬ ಆಲೋಚನೆ ನನ್ನಲ್ಲಿ ಸುಳಿದಿತ್ತು.

*
ಈ ಕಥೆ ಇಲ್ಲಿಗೆ ಮುಗಿಯಲಿಲ್ಲ...
ಹದಿನೆಂಟು ವರ್ಷಗಳ ನಂತರ ಆಕೆಯ ಗುರುಗಳಾದ ಇಂಡಿಯಾದ ಆ ಬಾಬಾ ಅವರನ್ನು ನಾನು ಭೇಟಿಯಾದೆ. ಆದರೆ, ಆ ವೇಳೆಗೆ ಬಾಬಾರವರು ಮೃತಹೊಂದಿ ಮೂರು ವರ್ಷಗಳೇ ಕಳೆದಿದ್ದವು.

ಅಂದು ಬಾಬಾ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾನು ಮಾತನಾಡುವುದಿತ್ತು. ಸಂಸ್ಥೆಯ ಧರ್ಮದರ್ಶಿಗಳು, ಅನುಯಾಯಿಗಳು ಅಲ್ಲಿ ಉಪಸ್ಥಿತರಿದ್ದರು. ಸಭಾಂಗಣದ ಮುಂಭಾಗದಲ್ಲಿ ಬಾಬಾರವರು ಆಸೀನರಾಗಲು ಸಿಂಹಾಸನದಂತಿದ್ದ ಗುರುಪೀಠವೊಂದು ಸಿದ್ಧವಾಗಿತ್ತು. ಸಭೆ ಆರಂಭಗೊಳ್ಳುವ ಮುನ್ನ ಬಾಬಾರವರು ಆಗಮಿಸಿ ಪೀಠದಲ್ಲಿ ಆಸೀನರಾಗಬಹುದೆಂದು ನಿರೀಕ್ಷಿಸಿದ್ದೆ.

ಎಲ್ಲರೂ ಭಜನೆಯಲ್ಲಿ ಮೈಮರೆತಿದ್ದರು. ಉಕ್ಕಿ ಹರಿದಿದ್ದ ಭಕ್ತಿ ಕೊಠಡಿಯನ್ನೆಲ್ಲಾ ಆವರಿಸಿಕೊಂಡಿತ್ತು. ಭಜನೆ ಮುಗಿದ ಬಳಿಕ ಭಕ್ತರೆಲ್ಲಾ ಬಲಗೈ ಹಸ್ತವನ್ನು ಹೃದಯದ ಮೇಲಿರಿಸಿಕೊಂಡು ಕೊಠಡಿಯ ಮುಖ್ಯದ್ವಾರದತ್ತ ಮುಖಮಾಡಿ ನಿಂತರು.

ಸ್ವಲ್ಪ ಕಾಲ ದಿವ್ಯ ಮೌನ. ಆನಂತರ ಎಲ್ಲರ ಕಣ್ಣುಗಳು, ಕ್ಯಾಮೆರಾ ಪ್ಯಾನ್ ಮಾಡಿದಂತೆ, ಏಕಕಾಲದಲ್ಲಿ ಮುಖ್ಯದ್ವಾರದಿಂದ ಪೀಠದತ್ತ, ಮೆಲ್ಲನೆ ತಿರುಗಿದವು. ಬಳಿಕ ಎಲ್ಲರೂ ಪೀಠಕ್ಕೆ ಕೈ ಮುಗಿದರು. ನನಗೇನೂ ಅರ್ಥವಾಗಲಿಲ್ಲ.

ಬಾಬಾ ಎಲ್ಲಿ – ಯಾವಾಗ ಬರುವರೆಂದು ಕಾತರದಿಂದ ಕಾಯುವಂತಾಗಿತ್ತು. ಆದರೆ ಬಾಬಾ ಬರಲೇ ಇಲ್ಲ. ಪಕ್ಕದಲ್ಲಿದ್ದವರಿಗೆ ‘ಬಾಬಾ ಬರುವುದಿಲ್ಲವೆ’ ಎಂದೆ. ‘ಆಗಲೇ ಬಂದು ಪೀಠದಲ್ಲಿ ಆಸೀನರಾಗಿದ್ದಾರಲ್ಲ’ ಎಂದು ಧ್ಯಾನಕ್ಕೆ ಮರಳಿದರು.

ಎಚ್ಚರಿಕೆಯಿಂದ ಪೀಠವನ್ನು ಮತ್ತೆ ಗಮನಿಸಿದೆ. ಎಲ್ಲ ಕುರ್ಚಿಗಳು ಭರ್ತಿಯಾಗಿದ್ದವು. ಧರ್ಮಗುರುಗಳ ಆ ಮಹಾಪೀಠ ಮಾತ್ರ ಖಾಲಿ ಇತ್ತು. ನನ್ನ ಗೊಂದಲವನ್ನರಿತ ಆ ಭಕ್ತರು ‘ಬಾಬಾ ಸೂಕ್ಷ್ಮಶರೀರದಲ್ಲಿರುವರು’ ಎಂದು ಪಿಸುಗುಟ್ಟಿದರು. ಆಧ್ಯಾತ್ಮಿಕ ಲೋಕದ ಅರ್ಥಕೋಶಗಳ ಪರಿಚಯವಿಲ್ಲದ ನನಗೆ ಏನೂ ತಿಳಿಯಲಿಲ್ಲ.

ಒಮ್ಮೆ ಕ್ವಾಂಟಂ ಫಿಸಿಕ್ಸ್ ವಿಜ್ಞಾನಿಯೊಬ್ಬರೊಡನೆ ಮಾತನಾಡುತ್ತಿದ್ದಾಗ, ಆಯಾಮಗಳ ಬಗೆಗಿನ ವೈಜ್ಞಾನಿಕ ಚಿಂತನೆಗಳು ಮತ್ತು ಕಾಲದಲ್ಲಿ ಪಯಣಿಸುವ ಸಾಧ್ಯತೆಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಚರ್ಚಿಸಿದ್ದರು.

ಈ ಸಭೆಯಲ್ಲಿ, ನನಗೆ ಕಾಣದ ಬಾಬಾರೊಂದಿಗೆ ಅಲ್ಲಿ ನೆರೆದವರೆಲ್ಲಾ ಸರಾಗವಾಗಿ ಸಂವಾದ ನಡೆಸಿದ್ದರು. ನಾನು ಮತ್ತು ಆ ಭಕ್ತವೃಂದ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿಂತು ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಿರುವಂತೆ ಕಾಣುತ್ತಿತ್ತು. ಜೀವವಿಜ್ಞಾನದ ವಿದ್ಯಾರ್ಥಿಯಾದ ನನಗೆ ಮತ್ತೊಂದು ಪ್ರಶ್ನೆ ಕಾಡಿತ್ತು.

ಪ್ರಪಂಚದಾದ್ಯಂತ ಎಲ್ಲ ನಾಗರಿಕತೆಗಳಲ್ಲಿ ನಂಬಿಕೆಗಳಿವೆ ಹಾಗೂ ಅವು ಇಂದಿಗೂ ಉಳಿದುಬಂದಿವೆ. ನಂಬಿಕೆಗಳಿಗಾಗಿ ಯುದ್ಧ ನಡೆದಿವೆ, ಸರ್ಕಾರಗಳು ಉರುಳಿವೆ, ಅಸ್ತಿತ್ವಕ್ಕೂ ಬಂದಿವೆ. ಹಾಗಾದರೆ ನಂಬಿಕೆಗಳು ಮನುಷ್ಯನನ್ನು ರೂಪಿಸುವಲ್ಲಿ ಪಾತ್ರವಹಿಸಿರಬಹುದೆ? ಮಾನವನ ವಿಕಾಸದ ಹಾದಿಯಲ್ಲಿನ ಪ್ರಾಕೃತಿಕ ಆಯ್ಕೆಯಲ್ಲಿ ನಂಬಿಕೆಗಳು ಕೂಡ ಒಂದು ಶಕ್ತಿಯಾಗಿ ಕಾರ್ಯನಿರ್ವಹಿಸಿರಬಹುದೆ?

ಅಷ್ಟರಲ್ಲಿ ಮುಖ್ಯ ಧರ್ಮದರ್ಶಿಗಳು ಖಾಲಿ ಇದ್ದ ಪೀಠಕ್ಕೆ ಕಾಲೂರಿ ನಮಸ್ಕರಿಸಿ, ತಾನು ಮಾತನಾಡಲು ಅಪ್ಪಣೆ ನೀಡುವಂತೆ ಕೋರಿಕೊಂಡರು. ಬಳಿಕ ನನ್ನನ್ನು ಬಾಬಾರಿಗೆ ಪರಿಚಯಿಸಿದರು. ನಾನು ಸಂಪೂರ್ಣ ಗೊಂದಲಕ್ಕೀಡಾದೆ.

ಆದರೂ ನಾನು ಅವರನ್ನು, ಸಭೆಯನ್ನು, ಉದ್ದೇಶಿಸಿ ಮಾತನಾಡಿದೆ. ಲೇಖನದ ಆರಂಭದಲ್ಲಿ ಹೇಳಿದ ವಿಮಾನದ ಘಟನೆ ನನ್ನ ಭಾಷಣದ ತಿರುಳಾಗಿತ್ತು. ಆದರೆ ಸಮಯದ ಅಭಾವದಿಂದ ಕಥೆಯ ಅರ್ಧ ಭಾಗವನಷ್ಟೆ ಅಲ್ಲಿ ಹೇಳಿದ್ದೆ. ಎಲ್ಲರೂ ನನ್ನ ಭಾಷಣವನ್ನು ಮೆಚ್ಚಿದರು. ಬಾಬಾರವರಿಗೂ ಅದು ಬಹಳ ಇಷ್ಟವಾಯಿತೆಂದು ನನಗೆ ಧರ್ಮದರ್ಶಿಗಳು ತಿಳಿಸಿದರು.

ನಂಬಿಕೆ ಎಂಬ ನಂಬಿಕೆಯಲ್ಲಿ ಭಕ್ತರೆಲ್ಲಾ ಬಾಬಾ ಅವರನ್ನು ನೋಡುತ್ತಿದ್ದರು ಮತ್ತು ಬಾಬಾರೊಂದಿಗಿದ್ದರು. ನಾನು ನನ್ನ ನಂಬಿಕೆಗಳನ್ನು ಉಳಿಸಿಕೊಂಡು ಸಮಾರಂಭ ಮುಗಿಸಿ ಹಿಂದಿರುಗಿದೆ.

ನಾನು ಬಾಬಾ ಅವರಿಗೆ ಕೇಳಬೇಕೆಂದಿದ್ದ ಪ್ರಶ್ನೆ ನನ್ನಲ್ಲೇ ಉಳಿಯಿತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT