ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ನಾನೇ ರಾಜ

Last Updated 10 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಮದ್ರಾಸ್‌ನಲ್ಲಿ 1980ರ ದಶಕದ ಮೊದಲ ಭಾಗ ನನ್ನ ಪಾಲಿಗೆ ಸುವರ್ಣಯುಗ. ಟಿ-ನಗರದಲ್ಲಿದ್ದ ನನ್ನ ಬಂಗಲೆಯಲ್ಲಿ ಸುಸಜ್ಜಿತವಾದ ಬಾರ್ ಇತ್ತು. ಆಗಿನ ಕಾಲದಲ್ಲಿ ಎರಡು ಹವಾನಿಯಂತ್ರಣ ವ್ಯವಸ್ಥೆಯ ಯಂತ್ರಗಳನ್ನು ತರಿಸಿದ್ದೆ. ಇಷ್ಟವಾದ ಬಟ್ಟೆ, ಮೆಚ್ಚಿನ ಕಾರಿನಲ್ಲಿ ರಾಜನ ತರಹ ಓಡಾಡುತ್ತಿದ್ದೆ. ನನ್ನ ಸ್ಟೈಲ್ ನೋಡಿ ಬೇರೆ ಭಾಷೆಯ ನಟರೂ `ಇವನು ಹೇಗೆಲ್ಲಾ ಸ್ಟೈಲ್ ಮಾಡುತ್ತಾನೆ, ನೋಡೋಕೇ ಸಂತೋಷವಾಗುತ್ತದೆ~ ಎನ್ನುತ್ತಿದ್ದರಂತೆ. ನನಗೆ ಆಮೇಲೆ ಆಪ್ತೇಷ್ಟರು ಆ ವಿಷಯ ಹೇಳಿದರು.

ನನ್ನ ಮನೆಯಲ್ಲಿ ಸಂಜೆಯಾದೊಡನೆ ಚಿತ್ರರಂಗದ ಅನೇಕರು ಸೇರುತ್ತಿದ್ದರು. ಅವರಲ್ಲಿ ನಟರು, ವಿತರಕರು, ನಿರ್ಮಾಪಕರು, ಬೇರೆ ಚಿತ್ರರಂಗದ ದಿಗ್ಗಜರು ಇರುತ್ತಿದ್ದರು. ಸಿನಿಮಾಗಳ ಟ್ರೆಂಡ್, ಮಾರುಕಟ್ಟೆ, ನಿರ್ಮಾಣದ ಪಟ್ಟುಗಳು, ಉದ್ಯಮದ ಕಷ್ಟಗಳು ಎಲ್ಲವೂ ಅಲ್ಲಿ ವಿನಿಮಯವಾಗುತ್ತಿತ್ತು. ಒಂದು ವಿಧದಲ್ಲಿ ಅದನ್ನು ವಿಚಾರ ಮಂಥನ ಎಂದೇ ಹೇಳಬಹುದು.

ರಜನೀಕಾಂತ್ ನನ್ನ ಆಪ್ತಸ್ನೇಹಿತನಾಗಿದ್ದ. `ಅಡತ್ತವಾರಿಸ್~ ಚಿತ್ರಕ್ಕೆ ಆತ ಕಾಲ್‌ಷೀಟ್ ಕೊಟ್ಟ ರೀತಿಯನ್ನು ನಾನು ಬದುಕಿನಲ್ಲಿ ಮರೆಯಲು ಸಾಧ್ಯವೇ ಇಲ್ಲ. ಅಂಥ ಸೂಪರ್‌ಸ್ಟಾರ್ ತಾನು ತೊಟ್ಟಿದ್ದ ಕಾಸ್ಟ್ಯೂಮ್ ಜೇಬಿನಿಂದ ಡೇಟ್ಸ್‌ಗಳ ಪಟ್ಟಿಯನ್ನು ತೆಗೆದುಕೊಟ್ಟಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಒಂದು ಕಾಲದಲ್ಲಿ ನನ್ನ ಚಿತ್ರಗಳನ್ನು ನೋಡಿದ್ದ ರಜನೀಕಾಂತ್‌ಗೆ ಬೆಂಗಳೂರಿನಲ್ಲಿದ್ದಾಗ ನಾನೇನೂ ಕರೆದು ಅವಕಾಶ ಕೊಟ್ಟಿರಲಿಲ್ಲ, ನಿಜ. ಆದರೂ ಅಲ್ಲಿ ನಾನು ಕಷ್ಟದಲ್ಲಿದ್ದಾಗ ಆತ ನಾನಿದ್ದ ಜಾಗಕ್ಕೇ ಬಂದು, ಒಡನಾಡಿದ್ದು ಅಪರೂಪದ ಅನುಭವವೇ ಹೌದು.

`ಮೂಣ್ರುಮುಗಂ~ ಎಂಬ ಸಿನಿಮಾ ನೋಡಿದ ನನಗೆ ಅದನ್ನು ಕನ್ನಡದಲ್ಲಿ ಮಾಡುವ ಮನಸ್ಸಾದದ್ದೇ ಆ ಚಿತ್ರದ ರೀಮೇಕ್ ಹಕ್ಕುಗಳನ್ನು ಬಲುಬೇಗ ಕೊಡಿಸಿದ್ದು ಅದೇ ರಜನಿ. ಮಗನ ಕಣ್ಣಿನ ಸಮಸ್ಯೆ, ಬೆಂಗಳೂರಿನಲ್ಲಿ ಎಲ್ಲವನ್ನೂ ಬಿಟ್ಟು ಹೋಗಿ ಮದ್ರಾಸ್‌ನಲ್ಲಿ ಸಿನಿಮಾ ಬದುಕನ್ನು ಕಟ್ಟಿಕೊಳ್ಳುವ ಉಸಾಬರಿ ಎರಡರ ಹೊಯ್ದಾಟದ ನಂತರ ಕಾಣಿಸಿದ ಬೆಳ್ಳಿಗೆರೆ ರಜನಿ. ಆಮೇಲೆ ಬದುಕು ತಿಟ್ಹತ್ತಿತು. ಪ್ರತಿನಿತ್ಯ ತಾಜ್ ಕೋರಮಂಡಲ್ ಹೆಲ್ತ್ ಕ್ಲಬ್‌ನಲ್ಲಿ ಘಟಾನುಘಟಿ ನಟರು ನನಗೆ ಸಿಗುತ್ತಿದ್ದರು.
 
ಜಿತೇಂದ್ರ, ಮೋಹನ್‌ಲಾಲ್. ಶರತ್‌ಕುಮಾರ್ ಹಾಗೂ ಅವರ ಸ್ನೇಹಿತ ಸಂಪತ್, ರಿಶಿ ಕಪೂರ್ ಎಲ್ಲರೊಂದಿಗೆ ಅಲ್ಲಿ ಒಡನಾಟ ಸಾಧ್ಯವಾಯಿತು.
ತೆಲುಗಿನ ನಟ ಕೃಷ್ಣಾ ಅವರ ಸಹೋದರರು ಬಂದು ಪದ್ಮಾಲಯ ಪ್ರೊಡಕ್ಷನ್ಸ್‌ಗಾಗಿ ಒಂದು ಸಿನಿಮಾ ನಿರ್ಮಿಸಿಕೊಡಿ ಎಂದು ಕೇಳಿದರು. ಅದು ದೊಡ್ಡ ಬ್ಯಾನರ್.

ಅಂಥವರೆಲ್ಲಾ ನನ್ನ ಮನೆಗೆ ಎಡತಾಕುತ್ತಿದ್ದರು. ಹಣಕಾಸು ನೆರವು ನೀಡುವ ಸಂಸ್ಥೆಗಳಿಗೆ ಸಂಬಂಧಪಟ್ಟವರ ಕಾರುಗಳಂತೂ ನನ್ನ ಮನೆಯ ಎದುರು ನಿತ್ಯವೂ ನಿಲ್ಲುತ್ತಿದ್ದವು. ರಜನಿ ಜೊತೆಗಿನ ನನ್ನ ಸ್ನೇಹಕ್ಕೆ ಸಂದ ಮನ್ನಣೆ ಅದು. ಆ ಕಾಲ ತುಂಬಾ ಸೊಗಸಾದದ್ದು. ಗುರುಮುಖ್ ಸಿಂಗ್ ಚಿಕ್ಕಪ್ಪ ಬಿಹಾರಿಲಾಲ್ ಎಂಬುವರು ಆ ಕಾಲದಲ್ಲಿ ರಾಜೇಶ್ ಖನ್ನಾ ಅವರ ಬಹುತೇಕ ಚಿತ್ರಗಳಿಗೆ ಹಣಕಾಸು ನೆರವನ್ನು ನೀಡಿದ್ದರು. ಅಂಥವರೊಡನೆ ಒಡನಾಡುವ ಅವಕಾಶ ನನಗೆ ಸಿಕ್ಕಿತ್ತು. ರಾಮಾನಾಯ್ಡು ಸೇರಿದಂತೆ ತೆಲುಗಿನ ಪ್ರಮುಖ ನಿರ್ಮಾಪಕರಿಗೂ ಹಣಕಾಸು ನೀಡುತ್ತಿದ್ದ ಅವರಿಂದಲೇ ನನಗೆ ಬಾಲಿವುಡ್‌ನ ನಿರ್ಮಾಪಕರ ಪರಿಚಯವಾದದ್ದು.

ಆ ಕಾರಣದಿಂದಲೇ ನಾನು ಕೂಡ ಹಿಂದೆ ಬರೆದಂತೆ ರಾಜೇಶ್ ಖನ್ನಾ ಅವರ ಚಿತ್ರವೊಂದರ ನಿರ್ಮಾಪಕರಲ್ಲಿ ಒಬ್ಬನಾದೆ. ಗುರುಮುಖ್ ಸಿಂಗ್ ಹಾಗೂ ಬಿಹಾರಿಲಾಲ್ ಅವರಿಗೆ ನನ್ನ ಮೇಲೆ ತುಂಬಾ ವಿಶ್ವಾಸ. ಅವರ ಕುಟುಂಬದವರು ಈಗಲೂ ನನ್ನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. `ದ್ವಾರಕೀಶ್‌ಗೆ ದುಡ್ಡು ಕೊಟ್ಟರೆ ಬೇರೆಲ್ಲೂ ಹೋಗುವುದಿಲ್ಲ. ಸಿನಿಮಾ ಮೇಲೆಯೇ ವಿನಿಯೋಗವಾಗುತ್ತದೆ.

ಯಾವುದಕ್ಕೆ ಎಷ್ಟು ಹಣ ಖರ್ಚುಮಾಡಬೇಕು. ಹಾಕಿದ ಹಣವನ್ನು ಮರಳಿ ಪಡೆಯುವ ದಾರಿ ಯಾವುದು ಎಂದು ಅವರಿಗೆ ಗೊತ್ತು~ ಎಂದು ಯಾವಾಗಲೂ ಹೇಳುತ್ತಿದ್ದರು. ಆ ಮಾತುಗಳನ್ನೇ ಅವರ ಕುಟುಂಬದವರು ಈಗಲೂ ಪುನರುಚ್ಚರಿಸಿದಾಗ ಹೆಮ್ಮೆ ಎನ್ನಿಸುತ್ತದೆ.

ಹಿಂದಿಯಲ್ಲಿ ಪೂರ್ಣಚಂದ್ರ `ಜಾನ್ ಜಾನಿ ಜನಾರ್ದನ್~ ಸಿನಿಮಾ ತೆಗೆದರಲ್ಲ; ಅದನ್ನೇ ನಾನು `ಗೆದ್ದಮಗ~ ಎಂದು ನಿರ್ಮಿಸಿದ್ದು. ಆ ಕಾಲ ಎಷ್ಟು ಸುಭಿಕ್ಷವಾಗಿತ್ತು ಎಂಬುದಕ್ಕೆ `ಅಡತ್ತವಾರಿಸ್~ ಮುಹೂರ್ತದ ಅದ್ದೂರಿತನವೇ ಸಾಕ್ಷಿ. ಏಕಕಾಲದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಎರಡು ಸಿನಿಮಾ ಮಾಡುವಷ್ಟು ಶಕ್ತಿಯನ್ನು ಭಗವಂತ ಆಗ ಕೊಟ್ಟಿದ್ದ. ಅದಕ್ಕೆ ತಕ್ಕಂತೆ ಫೈನಾನ್ಶಿಯರ್‌ಗಳೂ ಹತ್ತಿರ ಸುಳಿದಾಡುತ್ತಿದ್ದರು.

ನಾನು ಮದ್ರಾಸ್‌ನಲ್ಲಿ ನೆಲೆಸಿದ್ದರಿಂದ ಪ್ರೇರಣೆಗೊಂಡು ವಿಷ್ಣುವರ್ಧನ್ ಕೂಡ ಅಲ್ಲಿಗೆ ಬಂದನೋ ಏನೋ? ನಾನು ಹೊರಟುಬಂದಂತೆಯೇ ಅವನೂ ತನ್ನ ಜಯನಗರದ ಮನೆಯನ್ನು ಬಾಡಿಗೆಗೆ ಕೊಟ್ಟು ಬಂದ.
 
`ನ್ಯಾಯ ಎಲ್ಲಿದೆ~ ಚಿತ್ರದಿಂದ ಅವನನ್ನು ಬಿಟ್ಟು ಕೆಲವು ಚಿತ್ರಗಳನ್ನು ನಾನು ಅದಾಗಲೇ ನಿರ್ಮಿಸಿದ್ದೆ. ಶಂಕರ್‌ನಾಗ್ ನನ್ನ ಕೆಲವು ಚಿತ್ರಗಳ ನಾಯಕನಾಗಿದ್ದ. ಶಂಕರ್‌ಗೆ ಬ್ರೇಕ್‌ನ ಅಗತ್ಯವಿದ್ದಾಗ ನಾನು ಅವಕಾಶ ಕೊಟ್ಟಿದ್ದೆ. ಆ ವಿಷಯ ಶಂಕರ್‌ಗೂ ಗೊತ್ತಿತ್ತು. ಮದ್ರಾಸ್‌ಗೆ ವಿಷ್ಣು ಬಂದಮೇಲೆ ಮತ್ತೆ ಅವನ, ನನ್ನ ಬಾಂಧವ್ಯ ಬೆಸೆದುಕೊಂಡಿತು. ಹೆಲ್ತ್ ಕ್ಲಬ್‌ನ ನನ್ನ ಒಡನಾಟದಲ್ಲಿ ಅವನೂ ಶಾಮೀಲಾಗುತ್ತಿದ್ದ. ರಜನಿ ಹಾಗೂ ವಿಷ್ಣು ಶಾಲಾದಿನಗಳಲ್ಲಿ ಸ್ನೇಹಿತರಾಗಿದ್ದರು ಎಂದೂ ಕೇಳಿದ್ದೇನೆ.

ಹಾಗಾಗಿ ಅವರಿಬ್ಬರ ನಡುವೆಯೂ ನಂಟು ಬೆಳೆಯಿತು. ನಾನು ಕೊಟ್ಟಷ್ಟು ಹಣ ಪಡೆದು ನಟಿಸುತ್ತಿದ್ದ ವಿಷ್ಣುವರ್ಧನ್‌ಗೂ `ಪ್ರಚಂಡ ಕುಳ್ಳ~ ಚಿತ್ರಕ್ಕೆ ಕೇಳಿದಷ್ಟು ಸಂಭಾವನೆಯನ್ನು ಒಂದೇ ಪೇಮೆಂಟ್‌ನಲ್ಲಿ ಕೊಟ್ಟೆ. ಹಾಗೆ ಹಣವನ್ನು ಸಲೀಸಾಗಿ ಹೊಂದಿಸಬಲ್ಲ ದಾರಿಗಳೂ ಆಗ ನನ್ನೆದುರು ನಿಚ್ಚಳವಾಗಿ ಇದ್ದವು. ತಮಿಳು ಚಿತ್ರರಂಗದ ಮಟ್ಟಿಗೆ ರಜನಿ, ಕನ್ನಡದ ಮಟ್ಟಿಗೆ ವಿಷ್ಣು. ಇಬ್ಬರು ದಿಗ್ಗಜ ನಟರ ಸ್ನೇಹ ನನ್ನ ಸುತ್ತ ಚಿತ್ರೋದ್ಯಮದ ಗಣ್ಯರೆಲ್ಲಾ ಓಡಾಡಲು ಪ್ರೇರೇಪಿಸಿತ್ತು.

1982ರಿಂದ 87ರವರೆಗೆ ತಮಿಳುನಾಡಿನಲ್ಲಿ ನಾನು ರಾಜನಂತಿದ್ದೆ ಎಂದು ನಿಸ್ಸಂಶಯವಾಗಿ ಹೇಳಿಕೊಳ್ಳುತ್ತೇನೆ. ಮದ್ರಾಸ್‌ನ ಮಾಧ್ಯಮದಲ್ಲೂ ಆಗ ನನ್ನ-ರಜನಿ ಸ್ನೇಹದ ಸುದ್ದಿ ಪುಂಖಾನುಪುಂಖವಾಗಿ ಪ್ರಕಟಗೊಂಡವು. ಕೆಲವರಂತೂ ಕರ್ನಾಟಕದ ಭಲೇ ಜೋಡಿ ಎಂಬ ಧಾಟಿಯಲ್ಲಿ ನಮ್ಮಿಬ್ಬರ ನಂಟಿನ ಬಗೆಗೆ ಬರೆದರು.

ಇಳಯರಾಜಾ ಅವರಿಗೆ ಒಂದೇ ಪೇಮೆಂಟ್ ಮಾಡಿದ್ದು ಕೂಡ ಸುದ್ದಿಯಾಗಿ, `ದ್ವಾರಕೀಶ್ ಈಸ್ ದಿ ಫೈನೆಸ್ಟ್ ಪೇ ಮಾಸ್ಟರ್~ (ದ್ವಾರಕೀಶ್ ಧಾರಾಳವಾಗಿ ಸಂಭಾವನೆ ಕೊಡುತ್ತಾನೆ) ಎಂಬ ಅಭಿಪ್ರಾಯ ಮೂಡಿತು. ಆ ಕಾಲಘಟ್ಟದಲ್ಲಿ ನಾನು ಮತ್ತೆ ಬೆಂಗಳೂರಿಗೆ ಬಂದು ನೆಲೆಸುತ್ತೇನೆ ಎಂದು ಎಣಿಸಿಯೇ ಇರಲಿಲ್ಲ.

1982ರಿಂದ 85ರ ಅವಧಿಯಲ್ಲಿ ರಜನೀಕಾಂತ್ ನಾಯಕನಾದ ಮೂರು ಸಿನಿಮಾಗಳನ್ನು ನಿರ್ಮಿಸಿದೆ. ಆಮೇಲೆ ನಾನು ಎಣಿಸಿರದಂತೆ ಕಾಲಚಕ್ರ ತಿರುಗಿತು. ರಜನಿ ನನ್ನಿಂದ ಯಾಕೆ ದೂರವಾದರು, ವಿಷ್ಣು ಜೊತೆಗೇಕೆ ಪದೇಪದೇ ವಿರಸ ಎಂದು ಪದೇಪದೇ ಪ್ರಶ್ನೆ ಕೇಳಿಕೊಂಡಿದ್ದೇನೆ. ಉತ್ತರ ಮಾತ್ರ ಸಿಕ್ಕಿಲ್ಲ.

ನಾನು ಚಿಕ್ಕಂದಿನಿಂದ ಮೆಚ್ಚಿಕೊಂಡಿದ್ದ ಆನಂದ ಪಿಕ್ಚರ್ಸ್‌ ಸಂಸ್ಥೆಗೆ `ಅಡತ್ತವಾರಿಸ್~ ಚಿತ್ರವನ್ನು ಒಳ್ಳೆಯ ಬೆಲೆಗೆ ಕೊಟ್ಟೆ. ಆಮೇಲೆ ಕೆ.ಸಿ.ಎನ್.ಗೌಡರ ಮಗ ಕೆ.ಸಿ.ಎನ್.ಚಂದ್ರಶೇಖರ್ ನನ್ನ ಒಂದು ಸಿನಿಮಾದಲ್ಲಿ ಹಣ ತೊಡಗಿಸುವ ಆಸೆ ವ್ಯಕ್ತಪಡಿಸಿದ. ಅವನು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ನನ್ನನ್ನು ಅತಿಥಿಯಾಗಿ ಕರೆದುಕೊಂಡು ಹೋಗಿದ್ದ. ನಾನೆಂದರೆ ಅವನಿಗೆ ತುಂಬಾ ಅಭಿಮಾನ. ಸುಬ್ಬರಾವ್ ಎಂಬ ರೈಟರ್‌ಗೆ ಹೇಳಿ ಒಂದು ಕತೆ ಬರೆಸಿದ. ಅದೇ `ಪ್ರಚಂಡ ಕುಳ್ಳ~. ಹೆಚ್ಚು ಬಜೆಟ್ ಬೇಕಾಯಿತು ಎಂಬ ಕಾರಣಕ್ಕೆ ಅದನ್ನು ನಾನೇ ನಿರ್ಮಿಸಿದೆ. ವಿಷ್ಣು ಶಿವನ ಪಾತ್ರದಲ್ಲಿ ನಟಿಸಿದ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT