ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಾತ್ಮಕ ಶಿಕ್ಷಣ; ಬದಲಾವಣೆ ಅಗತ್ಯ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಹೊಸ ವರ್ಷದ ಹೊಸ್ತಿಲಲ್ಲಿ ನಾನು ಹತಾಶೆಯಿಂದಲೇ ಅಂಕಣ ಆರಂಭಿಸಲು ಇಷ್ಟಪಡುವುದಿಲ್ಲ. ಹಳೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಸ್ವಾಗತಿಸುವ ಈ ಹಂತದಲ್ಲಿ ಜಾಗತಿಕ ಮತ್ತು ದೇಶಿ ಅರ್ಥ ವ್ಯವಸ್ಥೆಯ ಆರೋಗ್ಯದ ಸ್ಥಿತಿಗತಿ ತೋರಿಸುವ ಅಳತೆಗೋಲುಗಳೆಲ್ಲ ನಿರಾಶೆಯ ಚಿತ್ರಣವನ್ನೇ ನೀಡುತ್ತಿವೆ.
 
ಹೀಗಾಗಿ ಆರ್ಥಿಕ ವಿದ್ಯಮಾನಗಳ ಬಗ್ಗೆಯೇ ಬರೆಯುವುದರ ಬದಲಿಗೆ ಉದ್ದಿಮೆ ವಹಿವಾಟು ನಿರ್ವಹಣೆಯ (ಬಿಸಿನೆಸ್ ಮ್ಯಾನೇಜ್‌ಮೆಂಟ್) ಭವಿಷ್ಯದ ಪೀಳಿಗೆ ಸಿದ್ಧಪಡಿಸುವ ಶಿಕ್ಷಣದ ಸದ್ಯದ ಸ್ವರೂಪ ಮತ್ತು ಹದಗೆಟ್ಟ ಶೈಕ್ಷಣಿಕ ಸ್ವರೂಪದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕೆಲ ಅನಿಸಿಕೆಗಳನ್ನು ಓದುಗರ ಜತೆ ಹಂಚಿಕೊಳ್ಳಲು ಬಯಸುತ್ತೇನೆ.

ವಾಸ್ತವ ಬದುಕಿನ ಪಾಠಗಳು, ತರಗತಿಯಲ್ಲಿ ಬೋಧಿಸುವುದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಈ ಮಾತು ದೇಶದ ಅತ್ಯುತ್ತಮ `ಬಿಸಿನೆಸ್ ಸ್ಕೂಲ್~ಗಳಿಗೂ ಸರಿಯಾಗಿಯೇ ಅನ್ವಯಿಸುತ್ತದೆ.
 
ತೀವ್ರ ಏರಿಳಿತ ಕಾಣುತ್ತಿರುವ ಮತ್ತು ಕುಂಠಿತಗೊಂಡಿರುವ ಅರ್ಥ ವ್ಯವಸ್ಥೆಯಲ್ಲಿ `ಎಂಬಿಎ~ ವಿದ್ಯಾರ್ಥಿಗಳಿಗೂ  ಸಾಕಷ್ಟು ಉದ್ಯೋಗ ಅವಕಾಶ ಮತ್ತು ಸೂಕ್ತ ಸಂಬಳ- ಭತ್ಯೆಗಳೂ ದೊರೆಯುತ್ತಿಲ್ಲ.

ನಿಯತಕಾಲಿಕೆಯೊಂದು ಇತ್ತೀಚೆಗೆ ದೇಶದಲ್ಲಿನ `ಬಿಸಿನೆಸ್ ಸ್ಕೂಲ್~ಗಳ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದ್ದು, ದೇಶಿ ಶೈಕ್ಷಣಿಕ ರಂಗದಲ್ಲಿ ಇಂತಹ ಶಾಲೆಗಳ ಸ್ಥಾನಮಾನ (ರ‌್ಯಾಂಕಿಂಗ್) ಪಟ್ಟಿ ಮಾಡಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ-ಬಿ) ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ.

ಈ ಲೇಖನ ಓದುತ್ತಿದ್ದಂತೆ ನನಗೆ ಎಪ್ಪತ್ತರ ದಶಕದಲ್ಲಿ `ಎಂಬಿಎ~ ಪದವಿಗೆ ಇದ್ದ ಮಾನ್ಯತೆ ನೆನಪಾಯಿತು. ಅಂದಿನ ದಿನಗಳಲ್ಲಿ `ಎಂಬಿಎ~ ಪದವಿ ಪಡೆಯುವುದು ಎಂದರೆ, ಯಶಸ್ಸಿಗೆ ರಹದಾರಿ ಸಿಕ್ಕಿದಂತೆಯೇ ಸರಿ ಎನ್ನುವ ಭಾವನೆ ಮನೆ ಮಾಡಿತ್ತು. ನಾನು ಆಗ `ಐಐಎಂ-ಬಿ~ನ ಎರಡನೇ ತಂಡದ (ಬ್ಯಾಚ್‌ನ) ವಿದ್ಯಾರ್ಥಿಯಾಗಿದ್ದೆ.
 
ಆ ದಿನಗಳಲ್ಲಿ ಕೆಲವೇ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಈ ವಿಷಯದ ಬೋಧನಾ ಸೌಲಭ್ಯ ಇತ್ತು. ಮೂವತ್ತೈದು ವರ್ಷಗಳ ನಂತರ ಶೈಕ್ಷಣಿಕ ರಂಗದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಬೆಂಗಳೂರು ಮತ್ತು ನಗರದ ಸುತ್ತಮುತ್ತ ನೂರಾರು ಶಿಕ್ಷಣ ಸಂಸ್ಥೆಗಳಲ್ಲಿ `ಎಂಬಿಎ~ ಕಲಿಕಾ ಸೌಲಭ್ಯ ಇದೆ.

ಸದ್ಯಕ್ಕೆ `ಐಐಎಂ-ಬಿ~ನ ಆಡಳಿತ ಮಂಡಳಿಯ ಸದಸ್ಯನೂ ಆಗಿರುವ ನಾನು, `ಎಂಬಿಎ~ ಬೋಧಿಸುವ ಇನ್ನೊಂದು ಶಿಕ್ಷಣ ಸಂಸ್ಥೆಯ ಜತೆಯಲ್ಲಿಯೂ ಕೆಲಸ ನಿರ್ವಹಿಸುತ್ತಿರುವೆ.

ದೇಶದಲ್ಲಿನ `ಬಿಸಿನೆಸ್ ಮ್ಯಾನೇಜ್‌ಮೆಂಟ್~ ಶಿಕ್ಷಣದ ಸ್ವರೂಪದಲ್ಲಿ ವ್ಯಾಪಕ ಬದಲಾವಣೆಗಳು ಆಗಿರುವುದಕ್ಕೂ ನಾನು ಸಾಕ್ಷಿಯಾಗಿರುವೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಎನ್ನುವ ಖ್ಯಾತಿಗೆ ಎರವಾಗಿದ್ದರೂ ಅನೇಕ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಈ ಕೋರ್ಸ್ ಒದಗಿಸುತ್ತಲೇ ಇವೆ.

2000ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದ `ಎಂಬಿಎ~ ಕೋರ್ಸ್‌ನ ಪ್ರವೇಶ ಪರೀಕ್ಷೆಗೆ ಕೇವಲ 2000 ವಿದ್ಯಾರ್ಥಿಗಳು ಹಾಜರಾಗಿದ್ದರು. 2011ರಲ್ಲಿ ಕರ್ನಾಟಕ ಶಿಕ್ಷಣ ಪ್ರಾಧಿಕಾರವು, `ಎಂಬಿಎ~ದ ಸರ್ಕಾರಿ  ಸೀಟುಗಳಿಗಾಗಿ ನಡೆಸಿದ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಪಿಜಿಸಿಇಟಿ) 19 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು.
ದಶಕವೊಂದರಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ 10 ಪಟ್ಟು ಹೆಚ್ಚಿದೆ. ಇತರ ರಾಜ್ಯಗಳಲ್ಲಿಯೂ ಇದೇ ಬಗೆಯಲ್ಲಿ `ಎಂಬಿಎ~ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿರಬಹುದು ಎಂದೂ ನಾವು ಊಹಿಸಬಹುದು.

ದೇಶದಾದ್ಯಂತ ಇರುವ ಮೂರು ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ಲಕ್ಷದಷ್ಟು `ಎಂಬಿಎ~ ಸೀಟುಗಳನ್ನು ಸೃಷ್ಟಿಸಲಾಗಿದೆ. ಇಂತಹ ಪ್ರವೃತ್ತಿಯು 2008ರಲ್ಲಿ ಗಮನಾರ್ಹ ಹೆಚ್ಚಳ ಕಂಡಿತು. ಅಲ್ಲಿಂದಾಚೆಗೆ ಬೋಧನಾ ಗುಣಮಟ್ಟವೂ ದಿಢೀರಾಗಿ ಕುಸಿಯತೊಡಗಿತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳೆಲ್ಲ ಒಮ್ಮೆಲೆ ಹಠಾತ್ತಾಗಿ ಬಹಿರಂಗಗೊಳ್ಳತೊಡಗಿದವು.

ಸಾಕಷ್ಟು ತರಬೇತಿ ಪಡೆದ ಮತ್ತು ಬೋಧನೆಗೆ ಬದ್ಧರಾದ ಶಿಕ್ಷಣ ತಜ್ಞರ ಅಲಭ್ಯತೆ, ಅಷ್ಟೇನೂ ಜಾಣರಲ್ಲದ ವಿದ್ಯಾರ್ಥಿಗಳೂ `ಎಂಬಿಎ~ ಪದವಿ ಪಡೆಯಲು ಬಯಸಿರುವುದು, ಮೂಲ ಸೌಕರ್ಯಗಳ ಕೊರತೆ, ಬೋಧನಾ ಕೊಠಡಿಗಳ ಅಭಾವ, ಬೋಧಕರ ಅಜ್ಞಾನ, ತರಬೇತಿಯಲ್ಲಿ ಹೊಸತನ ಕಾಣದಿರುವುದು, ಆಳವಿಲ್ಲದ ಬರೀ ತೋರಿಕೆಯ ಸಂಶೋಧನೆ ಮತ್ತಿತರ ಕಾರಣಗಳಿಂದಾಗಿ `ಎಂಬಿಎ~ ಪಡೆದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳೂ ದೊರೆಯುತ್ತಿಲ್ಲ.

ಎಲ್ಲ ಬಗೆಯ ಅರ್ಹತೆ ಮತ್ತು ಗುಣಮಟ್ಟ ಹೊಂದಿರುವ 30 ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ತೃಪ್ತಿದಾಯಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತಿವೆ. ಅನೇಕ `ಎಂಬಿಎ~ ವಿದ್ಯಾರ್ಥಿಗಳು ಗುಮಾಸ್ತ ಹುದ್ದೆಯನ್ನೂ ಒಪ್ಪಿಕೊಂಡ ನಿದರ್ಶನಗಳಿವೆ.
 
ಹೀಗಾಗಿ ಇತ್ತೀಚಿನ ದಿನಗಳಲ್ಲಿ `ಎಂಬಿಎ~ ಪದವಿಯ ಆಕರ್ಷಣೆ ಕಡಿಮೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ಶೈಕ್ಷಣಿಕ ವ್ಯವಸ್ಥೆ ಬಲಪಡಿಸುವ ಮತ್ತು ವ್ಯಾಪಕ ಬದಲಾವಣೆ ತರುವ ಪ್ರಯತ್ನಗಳು ನಡೆಯಬಹುದು. ಅಂತಹ ಬದಲಾವಣೆಗಳ ಅಗತ್ಯ ಮತ್ತು ಸ್ವರೂಪವನ್ನು ನಾನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸಿರುವೆ.

ಬೋಧಕರ ಗುಣಮಟ್ಟ: ತರಬೇತಿ ಪಡೆದ ಬೋಧಕರ ಕೊರತೆಯು ಅಗಾಧ ಪ್ರಮಾಣದಲ್ಲಿ ಇದೆ. ಹೆಚ್ಚಿನ ವೇತನ ಮತ್ತು ವೃತ್ತಿಯಲ್ಲಿ ಮುನ್ನಡೆಯುವ ಅವಕಾಶಗಳು ಕಡಿಮೆ ಇರುವ ಕಾರಣಕ್ಕೆ ಪ್ರತಿಭಾವಂತರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.

ಬೋಧಕರ ಬೋಧನಾ ಕೌಶಲ್ಯ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳೂ ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಬೋಧಕರ ವೃತ್ತಿಯಲ್ಲಿ ಯಾವುದೇ ಸುಧಾರಣೆ ಇಲ್ಲದಿರುವುದರಿಂದ ವೃತ್ತಿ ಬಿಟ್ಟು ತೆರಳುವವರ ಸಂಖ್ಯೆ ಹೆಚ್ಚುತ್ತಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ: ಇದೊಂದು ಇನ್ನೊಂದು ಮಹತ್ವದ ಸಂಗತಿ. ಮುಂಚೂಣಿಯಲ್ಲಿ ಇರುವ 50 ರಿಂದ 100 ಶಿಕ್ಷಣ ಸಂಸ್ಥೆಗಳು ಹೊರತುಪಡಿಸಿ ಬಹುತೇಕ ಇತರ ಸಂಸ್ಥೆಗಳಿಗೆ ಗುಣಮಟ್ಟದ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಿಲ್ಲ.
 
ಪ್ರವೇಶ ಪರೀಕ್ಷೆಗಳು ಕೇವಲ ತೋರಿಕೆಗೆ ನಡೆಯುತ್ತಿವೆ. ಉದಾಹರಣೆಗೆ 2011ರಲ್ಲಿ ನಡೆದ `ಪಿಜಿಸಿಇಟಿ~ಯಲ್ಲಿ ಭಾಗಿಯಾಗಿದ್ದ 19 ಸಾವಿರ ವಿದ್ಯಾರ್ಥಿಗಳ ಪೈಕಿ ಶೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ 40ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರು.

ಇಂತಹ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ಸ್ವಾಭಾವಿಕ ಕೌಶಲ, ಪದ ಪ್ರಯೋಗ ಸಾಮರ್ಥ್ಯ, ತಾರ್ಕಿಕ ಚಿಂತನೆ, ಸಂಖ್ಯೆಗಳ ಪರಿಣತಿ ಪರೀಕ್ಷಿಸುತ್ತವೆ. ಈ ಪರೀಕ್ಷೆಗಳು ಮಾಧ್ಯಮಿಕ ಶಾಲಾ ಮಟ್ಟದ ವಿದ್ಯಾರ್ಥಿಗಳ ಜಾಣತನ ಪರೀಕ್ಷಿಸುವ ಮಟ್ಟದಲ್ಲಿ ಇರುತ್ತವೆ.
ಇಂತಹ ಸಾಮರ್ಥ್ಯ ಪರೀಕ್ಷಿಸುವ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣವಾಗಲೂ ವಿಫಲವಾಗಿರುವುದು ನಿಜಕ್ಕೂ ಆಘಾತಕಾರಿಯಾದದ್ದು.

ವಿಶ್ವವಿದ್ಯಾನಿಲಯದಿಂದ ಹೊರ ಬರುವ ನಾಲ್ಕರಲ್ಲಿ ಮೂವರು ವಿದ್ಯಾರ್ಥಿಗಳು ಉದ್ಯೋಗಕ್ಕೂ ಅರ್ಹವಾಗಿರುವುದಿಲ್ಲ ಎಂದು ಎನ್. ಆರ್. ನಾರಾಯಣ ಮೂರ್ತಿ ಅವರು ಹೇಳಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಪಠ್ಯಕ್ರಮ ಅಭಿವೃದ್ಧಿ: ಉದ್ದಿಮೆ ವಹಿವಾಟಿನ ಜಗತ್ತು ಗಮನಾರ್ಹವಾಗಿ ಬದಲಾಗುತ್ತಿರುವ ಈ ದಿನಗಳಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ರಂಗದ ಅಗತ್ಯಗಳಿಗೆ ತಕ್ಕಂತೆ ಪಠ್ಯಕ್ರಮ ಬದಲಾಯಿಸಲೂ ಮುಂದಾಗಿಲ್ಲ. ಹೀಗಾಗಿ ಉದ್ದಿಮೆ ವಹಿವಾಟಿಗೆ ಹೆಚ್ಚು ಉಪಯೋಗ ಆಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಪ್ರಯತ್ನಗಳು ನಡೆಯುತ್ತಿಲ್ಲ.

ಉದಾಹರಣೆಗೆ, ವಿಶ್ವದಾದ್ಯಂತ ಹೊಸ ಅಲೆ ಎಬ್ಬಿಸಿರುವ ಸಾಮಾಜಿಕ ಮಾಧ್ಯಮಗಳು ನಿರ್ವಹಿಸುವ ಪಾತ್ರದ ಬಗ್ಗೆ ಯಾವುದೇ ಶಿಕ್ಷಣ ಸಂಸ್ಥೆಯು ಇದುವರೆಗೂ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ.

ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಬರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಬೋಧನಾ ಕಾರ್ಯಕ್ರಮಗಳು ಒಂದೇ ಬಗೆಯಲ್ಲಿ ಇರುತ್ತವೆ. ಹೀಗಾಗಿ `ಬಿಸಿನೆಸ್ ಮ್ಯಾನೇಜ್‌ಮೆಂಟ್~ನ ವೈಶಿಷ್ಟ್ಯವೇ  ಕಣ್ಮರೆಯಾಗುವ ಅಪಾಯ ಎದುರಿಸುತ್ತಿದೆ.

ಭಾರತಕ್ಕೆ ಅನ್ವಯಿಸುವಂತಹ ಸಂಶೋಧನೆಗಳ ಅಭಾವ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಆಡಳಿತ ನಿರ್ವಹಣೆ ವಿಜ್ಞಾನ ರಂಗದಲ್ಲಿ ಸಂಶೋಧನೆಗಳೇ ನಡೆಯುತ್ತಿಲ್ಲ. ಭಾರತದ ನಿದರ್ಶನಗಳ ಅಧ್ಯಯನಗಳೂ ತೀರ ಕಡಿಮೆ ಸಂಖ್ಯೆಯಲ್ಲಿ ಇವೆ. ಬಹುತೇಕ ಸಂಸ್ಥೆಗಳು ಸಂಶೋಧನೆಗೆ ತಮ್ಮ ಬಳಿ ಹಣ ಇಲ್ಲ ಎನ್ನುವ ಸಬೂಬು ನೀಡುತ್ತಲೇ ಇವೆ.

ಉದ್ದಿಮೆ ಮತ್ತು ಶೈಕ್ಷಣಿಕ ರಂಗದ ಮಧ್ಯೆ ಸಂಬಂಧ: ಇದೊಂದು ಇನ್ನೊಂದು ಕಳವಳಕಾರಿ ಸಂಗತಿ. ಈ ಎರಡೂ ರಂಗಗಳ ಮಧ್ಯೆ ದೊಡ್ಡ ಕಂದರ ಉಂಟಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ತಮ್ಮದೇ ಸರಿ ಎನ್ನುವ ಧೋರಣೆ ತಳೆದು ದಂತಗೋಪುರದಲ್ಲಿ ನೆಲೆಸಿದ್ದರೆ, ಇತರ ಸಂಸ್ಥೆಗಳಲ್ಲಿ ಇಂತಹ ಆಲೋಚನೆಗಳೇ ಇಲ್ಲ.

ದೇಶದ ಎಲ್ಲ ಉದ್ದಿಮೆ ವಲಯಗಳಲ್ಲಿ ಮತ್ತು ಎಲ್ಲ ಹಂತಗಳಲ್ಲಿ ಸೂಕ್ತ ತರಬೇತಿ ಪಡೆದ ಆಡಳಿತಾತ್ಮಕ ನಿರ್ವಾಹಕರ ಅಗತ್ಯ ಇದೆ. ಜನಸಂಖ್ಯೆಯ ಅನುಕೂಲತೆ ಜತೆಗೆ, ಇಂಗ್ಲಿಷ್ ಭಾಷಾ ಜ್ಞಾನ ಹಿನ್ನೆಲೆಯಲ್ಲಿ ಭಾರತದ `ಬಿಸಿನೆಸ್ ಮ್ಯಾನೇಜ್‌ಮೆಂಟ್~ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಸಾಕಷ್ಟು ಬೇಡಿಕೆ ಇದೆ.

ಮುಂಚೂಣಿಯಲ್ಲಿ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಷ್ಟೇ ಈ ಬೇಡಿಕೆ ಪೂರೈಸಲಾರವು. ಆದರೆ, ಇತರ ಸಂಸ್ಥೆಗಳು ಈ  ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗದಿದ್ದರೆ ಕಂದರ ಭರ್ತಿ ಮಾಡುವ ದೊಡ್ಡ ಸವಾಲನ್ನೇ ಎದುರಿಸಬೇಕಾದೀತು. ಶಿಕ್ಷಣ ಸಂಸ್ಥೆಗಳು ತಮ್ಮ ಅಲ್ಪಾವಧಿ ಲಾಭದ ಉದ್ದೇಶ ಬಲಿಗೊಟ್ಟು ತಮ್ಮೆಲ್ಲ ದೋಷಗಳನ್ನು ಸರಿಪಡಿಸಲು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕಾಗಿದೆ.

ವಿಶ್ವವಿದ್ಯಾನಿಲಯಗಳೂ  `ಬಿಸಿನೆಸ್ ಮ್ಯಾನೇಜ್‌ಮೆಂಟ್~ ಶಿಕ್ಷಣದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕಾರ್ಯಪ್ರವೃತ್ತವಾಗಬೇಕಾಗಿದೆ. ವಿದೇಶಿ ಭಾಷೆಗಳಾದ ಮಂಡಾರಿನ್ ಅಥವಾ ಸ್ಪಾನಿಷ್ ಭಾಷೆಗಳ ಕಲಿಕೆ ಕಡ್ಡಾಯ ಮಾಡಬೇಕಾಗಿದೆ.

ಇದರಿಂದ `ಎಂಬಿಎ~ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಸಹಜವಾಗಿಯೇ ಬೇಡಿಕೆ ಹೆಚ್ಚುತ್ತದೆ. ಇದಕ್ಕೆ ಪೂರಕವಾಗಿ ವಿದೇಶಿ ಶಿಕ್ಷಣ ತಜ್ಞರನ್ನೂ ಬೋಧನೆಗಾಗಿ ಆಹ್ವಾನಿಸಬೇಕು.

ಇಂತಹ ಎಲ್ಲ ಕ್ರಮಗಳ ಜಾರಿಗೆ ದೀರ್ಘಾವಧಿ ಯೋಜನೆ ಮತ್ತು ಹಣಕಾಸಿನ ನೆರವು ಕೂಡ ಅಗತ್ಯ. ಯಾರಾದರೊಬ್ಬರು ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟು ಬೋಧನಾ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಮಾತ್ರ ಕಾಲದ ಪರೀಕ್ಷೆಯಲ್ಲಿ  ಉತ್ತೀರ್ಣಗೊಳ್ಳಲಿವೆ ಎನ್ನಬಹುದು.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT