ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಾತ್ಮಕ ಸೃಜನಶೀಲತೆ ಮರೆತ ಪ್ರಭುತ್ವ

Last Updated 5 ಜುಲೈ 2016, 19:30 IST
ಅಕ್ಷರ ಗಾತ್ರ

ಎರಡನೇ ಸಹಸ್ರಮಾನದಲ್ಲಿ ಯೂರೋಪಿನ ಧಾರ್ಮಿಕ ಪ್ರಭುತ್ವ ಅನುಭವಿಸಿದಂಥದ್ದೇ ಸವಾಲನ್ನು ಮೂರನೇ ಸಹಸ್ರಮಾನದ ರಾಜಕೀಯ ಪ್ರಭುತ್ವಗಳು ಎದುರಿಸುತ್ತಿವೆ. ಜರ್ಮನಿಯ ಕಮ್ಮಾರ ಮತ್ತು ಸೊನಗಾರ ಜೋಹಾನ್ಸ್ ಗುಟನ್‌ಬರ್ಗ್ ಕಂಡುಹಿಡಿದ ಮುದ್ರಣಯಂತ್ರ ತಂದ ಬದಲಾವಣೆಗಳು ಸಣ್ಣವೇನೂ ಅಲ್ಲ. ಪುರೋಹಿತರ ಕೈಯಲ್ಲಿದ್ದ ಬೈಬಲ್ ಮುದ್ರಣಗೊಂಡು ಜನಸಾಮಾನ್ಯರ ಕೈಗೂ ತಲುಪಿದಾಗ ಕ್ರೈಸ್ತ ಮತದಲ್ಲೊಂದು ವಿಭಜನಯೇ ಸಂಭವಿಸಿಬಿಟ್ಟಿತು. ಮುದ್ರಿತ ಬೈಬಲ್ ಅನ್ನು ಹೇಗೆ ನಿರ್ವಹಿಸುವುದು ಎಂಬುದು ಅರ್ಥವಾಗದೆ ಆ ಕಾಲದ ಧಾರ್ಮಿಕ ಪ್ರಭುತ್ವ ಗೊಂದಲಕ್ಕೊಳಗಾಗಿತ್ತು. ಧರ್ಮಗ್ರಂಥದ ಮುದ್ರಿತ ಆವೃತ್ತಿಗಳನ್ನು ನಿರ್ಲಕ್ಷಿಸುವುದಕ್ಕಂತೂ ಅಂದಿನ ಪುರೋಹಿತಶಾಹಿಗೆ ಸಾಧ್ಯವಿರಲಿಲ್ಲ. ಇದನ್ನೋದಿ ಜನರು ಎತ್ತುತ್ತಿರುವ ಪ್ರಶ್ನೆಗಳಿಗೂ ಅದರ ಬಳಿ ಉತ್ತರವಿರಲಿಲ್ಲ.

ಡಿಜಿಟಲ್ ತಂತ್ರಜ್ಞಾನದ ಪರಿಣಾಮವಾಗಿ ಆಧುನಿಕ ಪ್ರಭುತ್ವಗಳು ಇದಕ್ಕಿಂತ ಸಂಕೀರ್ಣವಾದ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಕಾಲದ ಎಲ್ಲಾ ಸರ್ಕಾರಗಳೂ ಮುಕ್ತ ಮಾರುಕಟ್ಟೆಯ ಆರ್ಥಿಕತೆಯನ್ನು ಒಂದಲ್ಲಾ ಒಂದು ಬಗೆಯಲ್ಲಿ ಒಪ್ಪಿಕೊಂಡಿವೆ. ಡಿಜಿಟಲ್ ತಂತ್ರಜ್ಞಾನದ ವಿಸ್ತರಣೆ ಇದೇ ಆರ್ಥಿಕತೆಯ ಭಾಗವಾಗಿ ಬರುತ್ತಿದೆ. ತಂತ್ರಜ್ಞಾನವನ್ನು ವಿರೋಧಿಸುವುದೆಂದರೆ ಸರ್ಕಾರಗಳು ತಾತ್ವಿಕವಾಗಿ ಒಪ್ಪಿಕೊಂಡಿರುವ ಆರ್ಥಿಕತೆಯನ್ನೇ ವಿರೋಧಿಸಿದಂತಾಗುತ್ತದೆ. ಆದರೆ ತಂತ್ರಜ್ಞಾನ ಬೆಳೆಯುತ್ತಿರುವ ವೇಗಕ್ಕೆ ಸ್ಪಂದಿಸುವಂಥ ಸಾಂಸ್ಥಿಕ ಮನಸ್ಥಿತಿಯೊಂದನ್ನು ಈ ಸರ್ಕಾರಗಳಿಗೆ ಇಲ್ಲ. ಪರಿಣಾಮವಾಗಿ ವ್ಯಾಪಾರ ವಹಿವಾಟುಗಳ ಮಟ್ಟಿಗೆ ಅಗತ್ಯವಾಗಿರುವ ಸುಸ್ಥಿರ ನಿಯಂತ್ರಣ ವ್ಯವಸ್ಥೆಯೊಂದನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ.

ಹೆಚ್ಚು ಕಡಿಮೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಗೊಂದಲಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ಟ್ಯಾಕ್ಸಿ ಸೇವೆಗೆ ಭಾರತಕ್ಕೆ ಕಾರು ಬಂದಷ್ಟೇ ಹಳೆಯ ಇತಿಹಾಸವಿದೆ. ಮೊಬೈಲ್ ಫೋನುಗಳು ಸ್ಮಾರ್ಟ್ ಆಗಿ ಬದಲಾದಾಗ ಟ್ಯಾಕ್ಸಿ ಸೇವೆಯ ಕ್ಷೇತ್ರದಲ್ಲಿ ಹೊಸತೊಂದು ವ್ಯಾಪಾರಿ ಅವಕಾಶ ಸೃಷ್ಟಿಯಾಯಿತು.

ಜಿಪಿಎಸ್ ತಂತ್ರಜ್ಞಾನ, ಇಂಟರ್ನೆಟ್‌ಗಳೆರಡನ್ನೂ ಬಳಸಬಹುದಾದ ಸ್ಮಾರ್ಟ್ ಫೋನುಗಳ ಬಳಕೆದಾರರಿಗೆ ಟ್ಯಾಕ್ಸಿ ಸೇವೆಯನ್ನು ಒದಗಿಸುವುದಕ್ಕೆ ಬೇಕಿರುವ ವರ್ಚುವಲ್ ಮಾರುಕಟ್ಟೆ ಪ್ರದೇಶವೊಂದರ ಆವಿಷ್ಕಾರವಾಯಿತು. ಸ್ಮಾರ್ಟ್ ಫೋನ್ ಹೊಂದಿರುವ ಬಳಕೆದಾರರು ತನ್ನ ಫೋನ್‌ನಲ್ಲಿರುವ ಕಿರುತಂತ್ರಾಂಶ ಬಳಸಿ ತನ್ನ ಬೇಡಿಕೆ ಸಲ್ಲಿಸುತ್ತಾರೆ. ಇದು ಬಳಕೆದಾರರ ಸಮೀಪದಲ್ಲಿರುವ ಟ್ಯಾಕ್ಸಿ ಚಾಲಕರ ಫೋನ್ ನಲ್ಲಿರುವ ಆ್ಯಪ್ ಗೆ ಸಂದೇಶ ರವಾನೆಯಾಗುತ್ತದೆ. ಒಪ್ಪಿಕೊಳ್ಳುವ ಚಾಲಕರಿಗೆ ಆ ಗ್ರಾಹಕ ಸಿಗುತ್ತಾನೆ. ಆ್ಯಪ್ ಆಧಾರಿತ ವೇದಿಕೆಯನ್ನು ನಿರ್ವಹಿಸುವ ಕಂಪೆನಿಗೆ ಗ್ರಾಹಕರನ್ನು ಹುಡುಕಿಕೊಟ್ಟದ್ದಕ್ಕೆ ಒಂದಷ್ಟು ಹಣ ದೊರೆಯುತ್ತದೆ.

ಓಲಾ, ಊಬರ್‌ಗಳೆಲ್ಲವೂ ಕಾರ್ಯನಿರ್ವಹಿಸುವುದು ಇದೇ ವಿಧಾನದಲ್ಲಿ. ಈ ಕಂಪೆನಿಗಳು ಕಾರುಗಳ ಮಾಲೀಕರಲ್ಲ. ಇವುಗಳದ್ದೇನಿದ್ದರೂ ಗ್ರಾಹಕ ಮತ್ತು ಸೇವಾದಾತರ ನಡುವೆ ಸಂಪರ್ಕ ಕಲ್ಪಿಸುವ ಕೆಲಸವಷ್ಟೇ. ಇದಕ್ಕೆ ಬೇಕಿರುವ ತಂತ್ರಜ್ಞಾನಾಧಾರಿತ ವೇದಿಕೆಯನ್ನು ಸೃಷ್ಟಿಸಿ ಅದನ್ನು ನಿರ್ವಹಿಸುವ ಕೆಲಸವನ್ನು ಇವು ಮಾಡುತ್ತವೆ. ಅದೇ ಕಾರಣಕ್ಕೆ ಇವು ತಮ್ಮನ್ನು ತಂತ್ರಜ್ಞಾನ ಕಂಪೆನಿಗಳು ಎಂದು ಹೇಳಿಕೊಳ್ಳುತ್ತವೆ. ಗ್ರಾಹಕ ಟ್ಯಾಕ್ಸಿ ನಿಲ್ದಾಣವನ್ನು ಅರಸಿ ಹೋಗಬೇಕಾಗಿಲ್ಲ. ಟ್ಯಾಕ್ಸಿಗಳು ನಿಲ್ದಾಣದಲ್ಲಿ ಗಿರಾಕಿಗಳಿಗಾಗಿ ಕಾಯಬೇಕಾಗಿಲ್ಲ.

ಮೇಲ್ನೋಟಕ್ಕೆ ಇದು ಸರಳವಾಗಿ ಕಾಣಿಸುವ ವ್ಯವಸ್ಥೆ. ಆದರೆ ಎಲ್ಲಾ ವ್ಯಾಪಾಗಳಲ್ಲಿರುವಂತೆಯೇ ಇದರಲ್ಲೂ ಒಂದಷ್ಟು ಒಳಸುಳಿಗಳಿವೆ. ಲಾಭಕೋರತನ ಎಂಬುದು ಎಲ್ಲಾ ವ್ಯಾಪಾರದ ಸಂದರ್ಭಗಳಲ್ಲಿಯೂ ಕಾಣಿಸಿಕೊಳ್ಳುವ ದೌರ್ಬಲ್ಯ. ಅದು ಈ ವ್ಯವಸ್ಥೆಯಲ್ಲೂ ಇದೆ. ಇದರಲ್ಲೊಂದು ಸಮತೋಲನ ಸಾಧ್ಯವಾಗಬೇಕಾದರೆ ಪ್ರಭುತ್ವದ ಮಧ್ಯ ಪ್ರವೇಶ ಅಗತ್ಯ. ಅಂದರೆ ಆಧಾರಿತ ಟ್ಯಾಕ್ಸಿ ಸೇವೆಗಳಿಗೊಂದು ನಿಯಮಗಳ ಚೌಕಟ್ಟು ಬೇಕಾಗುತ್ತದೆ. ಗ್ರಾಹಕರಿಗೆ ಇರುವ ಹಕ್ಕುಗಳೇನು? ಸೇವಾದಾತರ ಜವಾಬ್ದಾರಿಗಳೇನು? ಇತ್ಯಾದಿಗಳನ್ನು ಸರ್ಕಾರ ನಿರ್ವಚಿಸಬೇಕಾಗುತ್ತದೆ. ಇದು ಅಷ್ಟೊಂದು ಸಂಕೀರ್ಣ ಪ್ರಕ್ರಿಯೆಯೇ?

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನಿಯಂತ್ರಣಕ್ಕಾಗಿ ವಿವಿಧ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಸರ್ಕಸ್ ನೋಡಿದರೆ ಮುದ್ರಿತ ಬೈಬಲ್‌ ಯೂರೋಪಿನ ಧಾರ್ಮಿಕ ಪ್ರಭುತ್ವಗಳಿಗೆ ಒಡ್ಡಿದ್ದಕ್ಕಿಂತ ದೊಡ್ಡ ಸವಾಲು ಈ ಸರ್ಕಾರಗಳ ಮುಂದಿರುವಂತೆ ಕಾಣಿಸುತ್ತದೆ. ಹಲವು ರಾಜ್ಯಗಳ ಸಾರಿಗೆ ಇಲಾಖೆಗಳು ಡಿಜಿಟಲ್ ಪೂರ್ವ ಕಾಲಘಟ್ಟದಲ್ಲಿ ರೂಪುಗೊಂಡಿದ್ದ ಕಾನೂನುಗಳನ್ನು ಬಳಸಿಕೊಂಡು ಆ್ಯಪ್ ಆಧಾರಿತ ಟ್ಯಾಕ್ಸಿಗಳ ನಿಯಂತ್ರಣಕ್ಕೆ ಹೊರಟವು.

ಡಿಜಿಟಲ್ ಮಧ್ಯವರ್ತಿ ಎಂಬ ಪರಿಕಲ್ಪನೆಯೇ ಇಲ್ಲದ ಕಾಲದಲ್ಲಿ ರೂಪುಗೊಂಡ ಕಾನೂನುಗಳನ್ನು ಅನ್ವಯಿಸಲು ಹೊರಟರೆ ಏನಾಗಬಹುದು ಅದು ಸಂಭವಿಸಿತು. ಓಲಾ ಮತ್ತು ಊಬರ್‌ಗಳು ಸರ್ಕಾರವೇ ರೂಪಿಸಿರುವ ನಿಯಮಾವಳಿಗಳ ಪ್ರಕಾರವೇ ತಂತ್ರಜ್ಞಾನ ಕಂಪೆನಿಗಳು. ಇವುಗಳ ಮೇಲೆ ಸಾರಿಗೆ ಇಲಾಖೆಗೆ ನಿಯಂತ್ರಣವೇ ಇಲ್ಲ. ಇಲಾಖೆಗೆ ನಿಯಂತ್ರಣವಿದ್ದ ಟ್ಯಾಕ್ಸಿಗಳ ಮೇಲೆ ದಾಳಿ, ಮುಟ್ಟುಗೋಲು ಇತ್ಯಾದಿಗಳ ನಡೆದವು. ಇದು ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಮತ್ತಷ್ಟು ಸಂಕೀರ್ಣಗೊಳಿಸಿತು. ಅದಿನ್ನೂ ಮುಂದುವರಿದಿದೆ.

ನಕ್ಷೆಗಳು ಕಾಗದದ ಮೇಲಷ್ಟೇ ಇರಲು ಸಾಧ್ಯ ಎಂದುಕೊಂಡಿದ್ದ ಕಾಲದಲ್ಲಿ ರೂಪಿಸಿದ್ದ ನಿಯಮಗಳ ಗುಂಗಿನಲ್ಲಿರುವ ಸರ್ಕಾರಿ ವ್ಯವಸ್ಥೆ ನಕ್ಷೆ ಆಧಾರಿತ ವ್ಯಾಪಾರಿ ಸೇವೆಗಳ ಮೇಲೆಯೂ ಇಂಥದ್ದೇ ವಿಚಿತ್ರ ನಿಯಂತ್ರಣ ಹೇರಿದೆ. ರಾಷ್ಟ್ರವೊಂದು ತನ್ನ ಗಡಿಗಳ ಬಗ್ಗೆ ಕಾಳಜಿ ವಹಿಸುವುದು ಸಹಜ. ಅದು ರಾಜತಂತ್ರಕ್ಕೆ ಸಂಬಂಧಿಸಿದ ಸಂಗತಿ. ಡಿಜಿಟಲ್ ನಕ್ಷೆಗಳ ಈ ಕಾಲದಲ್ಲಿ ದೇಶದೊಳಗೆ, ಜನಸಾಮಾನ್ಯರ ನಿತ್ಯದ ಕೆಲಸಗಳಿಗೆ ಬಳಕೆಯಾಗಬಹುದಾದ ನಕ್ಷೆಗೂ ಇದೇ ಬಿಗುನಿಲುವನ್ನು ಅನುಸರಿಸಬೇಕೇ?

ಇದೇನೂ ನಿನ್ನ ಮೊನ್ನೆಯ ಸಮಸ್ಯೆಯಲ್ಲ. ಭಾರತದಲ್ಲಿ ಈ ಸಮಸ್ಯೆಗೆ 16 ವರ್ಷಗಳ ಇತಿಹಾಸವಿದೆ. 2000ನೇ ಇಸ್ವಿಯ ಜೂನ್ 9ರಂದು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ ‘ಮಾಹಿತಿ ತಂತ್ರಜ್ಞಾನ ಕಾಯ್ದೆ-2000’ರಲ್ಲಿ ಇದ್ದ ಸಮಸ್ಯೆಗಳು ಈತನಕವೂ ಬೇರೆ ಬೇರೆ ಬಗೆಯಲ್ಲಿ ಮುಂದುವರಿದಿವೆ ಅಷ್ಟೇ ಅಲ್ಲ ಹೆಚ್ಚು ಹೆಚ್ಚು ಸಂಕೀರ್ಣಗೊಳ್ಳುತ್ತಾ ಹೋಗಿವೆ. ಒಂದೂವರೆ ದಶಕದ ಹಿಂದೆ ರೂಪುಗೊಂಡಿದ್ದ ಕಾಯ್ದೆಯಿಂದ ತೊಡಗಿ ಇತ್ತೀಚಿನ ಭೂಪಟಗಳ ನಿಯಂತ್ರಣದ ಮಸೂದೆಯ ಕರಡಿನ ತನಕದ ಎಲ್ಲೆಡೆಯೂ ಇರುವುದು ಒಂದೇ ಸಮಸ್ಯೆ. ತಂತ್ರಜ್ಞಾನದ ಸಹಜ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳದ ನಿಯಂತ್ರಣಾ ತತ್ಪರತೆ.

ಈ ನಿಯಂತ್ರಣಾ ತತ್ಪರತೆಗೆ ಒಂದು ವಿಲಕ್ಷಣ ಗುಣವಿದೆ. ಇದು ಜನತಂತ್ರ ವ್ಯವಸ್ಥೆಗೆ ಬಹಳ ಅಸಹಜವಾದ ಗುಣ. ಡಿಜಿಟಲ್ ತಂತ್ರಜ್ಞಾನ ಎಲ್ಲೆಲ್ಲಿ ಗ್ರಾಹಕನನ್ನು ಅಥವಾ ಪ್ರಜೆಯನ್ನು ಸಬಲಗೊಳಿಸಬಹುದೋ ಅಲ್ಲೆಲ್ಲಾ ನಿಯಂತ್ರಣದ ನಿಯಮಗಳು ಹೆಚ್ಚು ಕಠಿಣವಾಗುತ್ತವೆ. ಇತ್ತೀಚೆಗೆ ನ್ಯಾಯಾಲಯವೇ ಅಮಾನ್ಯಗೊಳಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘66ಎ’ ಕಲಮು ಇದಕ್ಕೊಂದು ಉದಾಹರಣೆ. ಸಾಂಪ್ರದಾಯಿಕ ಸಮೂಹ ಸಂವಹನ ಮಾಧ್ಯಮಗಳ್ಯಾವುದಕ್ಕೂ ಅನ್ವಯಿಸದ ವಿಚಿತ್ರ ನಿಯಮ ಇದಾಗಿತ್ತು. ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಅಪರಾಧವಾಗದೇ ಇದ್ದದ್ದು ವೆಬ್‌ಸೈಟಿನಲ್ಲಿ ಪ್ರಕಟವಾದಾಗ ಅಪರಾಧವಾಗುವಂಥ ವಿಚಿತ್ರ ನಿಯಮ ಇದಾಗಿತ್ತು. ಇದನ್ನು ನ್ಯಾಯಾಲಯವೇ ತಪ್ಪು ಎಂದು ಹೇಳಿದ ನಂತರವೂ ಹಿಂಬಾಗಿಲಲ್ಲಿ ಅದನ್ನು ಮತ್ತೆ ತರುವ ಪ್ರಯತ್ನಗಳು ಜಾರಿಯಲ್ಲಿವೆ.

ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ‘ಮುಕ್ತ ಸರ್ಕಾರ’ದಂಥ ಪರಿಕಲ್ಪನೆಗಳಿಗೆ ಬೆಂಬಲ ನೀಡುವ ಮಾತುಗಳನ್ನಾಡುತ್ತಲೇ  ಬಳಕೆಗೆ ಅಸಾಧ್ಯವಾಗುವ ಕಡತ ಮಾದರಿಗಳಲ್ಲಿ ಸರ್ಕಾರಿ ವೆಬ್‌ಸೈಟುಗಳಲ್ಲಿ  ಮಾಹಿತಿಯನ್ನು ನೀಡುವುದೀ ‘ಸಹಜ’ ಎಂದು ಒಪ್ಪಿಕೊಳ್ಳಬೇಕಾದ ಸ್ಥಿತಿ ಇದೆ. ಇದರ ಮಧ್ಯೆಯೇ ‘ಮುಕ್ತ ದತ್ತಾಂಶ’ ಒದಗಿಸುವ ವೆಬ್‌ಸೈಟ್ ಒಂದನ್ನೂ ಸರ್ಕಾರವೇ ರೂಪಿಸಿದೆ. ಇಲ್ಲಿ ಭಾರೀ ಪ್ರಮಾಣದ ದತ್ತಾಂಶ ಇರುವಂತೆ ಕಾಣಿಸುತ್ತಿದ್ದರೂ ಅದು ನೀತಿ ನಿರೂಪಣೆಯ ಪ್ರಕ್ರಿಯೆಯಲ್ಲಿ ಸ್ವತಂತ್ರ ತಜ್ಞರು ಪಾಲ್ಗೊಳ್ಳಬಹುದಾದ ಮಾಹಿತಿಯನ್ನು ಒಳಗೊಂಡಿದೆಯೇ ಎಂಬ ಪ್ರಶ್ನೆ ಇದೆ.

ಇವೆಲ್ಲವೂ ಸಂಕ್ರಮಣ ಕಾಲವೊಂದರಲ್ಲಿ ಎದುರಿಸಲೇಬೇಕಾಗಿ ಬರುವ ಅನಿವಾರ್ಯ ಬಿಕ್ಕಟ್ಟು ಎನ್ನುವುದು ಸಮಸ್ಯೆಯ ಸರಳೀಕರಣವಾಗುತ್ತದೆ. ಹದಿನೆಂಟೇ ತಿಂಗಳಿಗೆ ದತ್ತಾಂಶ ಸಂಸ್ಕರಣೆಯ ವೇಗ ದುಪ್ಪಟ್ಟಾಗುವ ತತ್ವದ ಆಧಾರದ ಮೇಲೆ ತಂತ್ರಜ್ಞಾನ ಮುಂದುವರಿಯುತ್ತಿದೆ. ಆದರೆ ನೀತಿ ನಿರೂಪಣೆಯ ವೇಗ ಮಾತ್ರ ಇದರ ಹತ್ತುಪಟ್ಟು ನಿಧಾನಗತಿಯಲ್ಲಿದೆ. ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ನಡೆದ ತಂತ್ರಜ್ಞಾನದ ಬೆಳವಣಿಗೆಗಳಿಗೆಲ್ಲವೂ ನಮ್ಮಲ್ಲಿರುವುದು ಒಂದು ಮಾಹಿತಿ ತಂತ್ರಜ್ಞಾನ ಕಾಯ್ದೆ ಮಾತ್ರ. ಅದನ್ನು ಸಮಗ್ರವಾಗಿ ಪರಿಷ್ಕರಿಸಬೇಕೆನ್ನುವ ತಜ್ಞ ಸಲಹೆಗಳ ಸಂಖ್ಯೆಯೇ ಲಕ್ಷಗಳಲ್ಲಿದ್ದರೂ ಅದಕ್ಕೆ ಸರ್ಕಾರ ಸ್ಪಂದಿಸಿರುವ ಉದಾಹರಣೆಗಳ ಸಂಖ್ಯೆ ಬೆರಳೆಣಿಕೆಯನ್ನು ಮೀರುವುದಿಲ್ಲ.

ಈ ಕಾಲದ ನೀತಿ ನಿರೂಪಣೆಗೆ ಬೇಕಿರುವುದು ಹಳೆಯದನ್ನು ಸುಧಾರಿಸಿ ಹೊಸ ಕಾಲಕ್ಕೆ ಅನ್ವಯಿಸುವ ಮಾದರಿಯಲ್ಲ. ಹೊಸತನ್ನು ಹೊಸಕಾಲದಲ್ಲಿಯೇ ಗ್ರಹಿಸಿ ಸ್ಪಂದಿಸುವ ಕಾರ್ಯತತ್ಪರತೆ. ಜನತಂತ್ರದ ಸಂದರ್ಭದಲ್ಲಿ ಇದನ್ನು ಸಕಾರಾತ್ಮಕವಾಗಿ ಬಳಸುವುದಕ್ಕೂ ಸಾಧ್ಯವಿದೆ. ತಂತ್ರಜ್ಞಾನವನ್ನೇ ಬಳಸಿಕೊಂಡು ನಿಯಂತ್ರಣಾಧಿಕಾರದಲ್ಲಿ ಪ್ರತಿಯೊಬ್ಬರೂ ಪಾಲುದಾರರಾಗುವಂತೆ ಮಾಡಲು ಸಾಧ್ಯವಿದೆ. ಇದಕ್ಕೆ ಬೇಕಿರುವುದು ಆಡಳಿತಾತ್ಮಕ ಸೃಜನಶೀಲತೆಯೇ ಹೊರತು ‘ಕನಿಷ್ಠ ನಿಯಂತ್ರಣ; ಗರಿಷ್ಠ ಆಡಳಿತ’ದಂಥ ಪ್ರಾಸಬದ್ಧ ಘೋಷಣೆಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT