ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಮಾಡಿಕೊಳ್ಳಬೇಕಾದವರು ಪ್ರೇಕ್ಷಕರಲ್ಲವೇ?

Last Updated 30 ಜೂನ್ 2011, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. `ಇಷ್ಟೊಂದು ಸಿನಿಮಾಗಳನ್ನು ನಿರ್ಮಿಸಿದರೆ ನೋಡುವವರ‌್ಯಾರು?~ ಎಂದು ಹಿರಿಯ ನಟಿ ಪ್ರತಿಮಾದೇವಿ ಅವರು ಮುಗ್ಧವಾಗಿ ಪ್ರಶ್ನಿಸುತ್ತಾರೆ.

ಈ ಪ್ರಶ್ನೆ ಕೇಳಿ, ಒಂದುವಾರದೊಳಗೆ `ಐ ಯಾಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ~ ಎನ್ನುವ ಕನ್ನಡ ಚಿತ್ರವನ್ನು 49 ಚಿತ್ರಮಂದಿರಗಳಲ್ಲಿ, ಬಿಡುಗಡೆಯಾದ ಮೂರೇ ದಿನದೊಳಗೆ ವಾಪಸು ತೆಗೆದುಕೊಳ್ಳಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ ವೇದನೆ ತೋಡಿಕೊಂಡರು.

ಹೊಸ ಸಿನಿಮಾ ಆದರೂ, ವಿಭಿನ್ನ ನಿರೂಪಣೆ ಇದ್ದರೂ, ಈ ಚಿತ್ರವನ್ನು ಜನ ನೋಡಲು ಬರಲಿಲ್ಲ. ಚಿತ್ರಮಂದಿರಗಳ ದುಬಾರಿ ಬಾಡಿಗೆ ಕೊಡಲು ಸಾಧ್ಯವಿಲ್ಲ ಎಂದು ಅವರು ಕಂಗಾಲಾಗಿದ್ದರು.
 
ಇದಾದ ಕೆಲದಿನಗಳಲ್ಲೇ ಟೀವಿ ಧಾರಾವಾಹಿ ನಿರ್ಮಾಪಕ, ನಿರ್ದೇಶಕ ಹಿರಿಯೂರು ರಾಘವೇಂದ್ರ ಸಾಲದ ಹೊರೆ ತಾಳಲಾಗದೆ ಪತ್ರಿಕಾಗೋಷ್ಠಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದರು.

ಜನ ಒಮ್ಮೆಲೆ ಚಿತ್ರಮಂದಿರದಿಂದಲೂ, ಧಾರಾವಾಹಿಗಳಿಂದಲೂ ದೂರ ಸರಿದರೇ? ರೈತರ ಹಾಗೆ ಸಿನಿಮಾ ಮಂದಿಯೂ ಆತ್ಮಹತ್ಯೆಯ ಹಾದಿ ಹಿಡಿದರೇ? 
ಸಾಯಿಪ್ರಕಾಶ್ ಕೂಡ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿ. ತೀರಾ ಇತ್ತೀಚೆಗೆ `ಗನ್~ ಚಿತ್ರದ ನಾಯಕ, ಹರೀಶ್‌ರಾಜ್, ಚಿತ್ರಮಂದಿರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದರು.
 
ಹೆಚ್ಚು ಚಿತ್ರ ತಯಾರಾಗುವ ಕಾಲದಲ್ಲಿನ ಪ್ರಶ್ನೆ ಇದಲ್ಲ. 1951ರಲ್ಲಿ ನಟ, ನಿರ್ದೇಶಕ ಕೆಂಪರಾಜ ಅರಸು ಅವರು ಕೂಡ ಇದೇ ತರಹದ ಪರಿಸ್ಥಿತಿಯನ್ನು ಎದುರಿಸಿದ್ದರು.

`ರಾಜಾ ವಿಕ್ರಮ~ ಚಿತ್ರ ಯಶಸ್ಸಾದರೂ, ನಿರ್ಮಾಪಕರಿಗೆ ಹಣ ವಾಪಸು ಬರುವುದಿಲ್ಲ. ವಿತರಕನಿಗೆ ಲಾಭ. ತಯಾರಿಸಿದವನಿಗೆ ಸಾಲದ ಹೊರೆ. ವಿತರಕರಿಂದ ಮೋಸವಾಯಿತು ಎಂದು ಕೆಂಪರಾಜರು ನ್ಯಾಯಾಲಯದ ಮೊರೆ ಹೋಗುತ್ತಾರೆ.

ಅವರ ಮತ್ತೊಂದು ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೂ, ಅದನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದಾಗ, ಚಿತ್ರಮಂದಿರದ ಮುಂದೆ ಕುಳಿತು ಪ್ರತಿಭಟಿಸುತ್ತಾರೆ. ಚಿತ್ರರಂಗದ ಪರಿಸ್ಥಿತಿ ಅಂದೂ-ಇಂದೂ ಒಂದೇ ರೀತಿ ಇದೆ.

1947ರಲ್ಲಿ `ಮಹಾನಂದ~ ಎನ್ನುವ ಕನ್ನಡ ಚಿತ್ರ ಬಿಡುಗಡೆಯಾಗಿ, ಕೇವಲ 14 ದಿನ ಮಾತ್ರ ನಡೆಯುತ್ತದೆ (ಆ ವರ್ಷ ಕನ್ನಡದಲ್ಲಿ ತಯಾರಾದದ್ದು ಕೇವಲ 4 ಚಿತ್ರ ಮಾತ್ರ).

ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಹಿಂದೀ ಚಿತ್ರವೊಂದು ಶತದಿನ ಆಚರಿಸಿಕೊಳ್ಳುತ್ತದೆ! `ಮಹಾನಂದ~ ಲಾಸ್ ಆದದ್ದು ನಿರ್ಮಾಪಕರಿಗೆ ಬೇಸರವಾಗಿ ಜನ ಏಕೆ ಇದನ್ನು ತಿರಸ್ಕರಿಸಿದರು ಎನ್ನುವುದು ಗೊತ್ತಾಗದೆ, ಮತ್ತೆ ಇದೇ ಚಿತ್ರವನ್ನು 1950ರಲ್ಲಿ `ಶಿವ ಪಾರ್ವತಿ~ ಎನ್ನುವ ಹೆಸರಿನಲ್ಲಿ ಬಿಡುಗಡೆ ಮಾಡುತ್ತಾರೆ.

ಈ ಚಿತ್ರವನ್ನೂ ಜನ ತಿರಸ್ಕರಿಸುತ್ತಾರೆ. ನಿರ್ಮಾಪಕರಿಗೆ ತಮ್ಮ ಕೆಟ್ಟ ಚಿತ್ರವನ್ನು ತೋರಿಸಿಯೇ ತೀರುವ ಹಠ. ಪ್ರೇಕ್ಷಕರಿಗೆ ನೋಡಲೇ ಬಾರದು ಎನ್ನುವ ಹಠ. ಈ ಜೂಟಾಟ ಸಿನಿಮಾ ಇತಿಹಾಸದಲ್ಲಿ ಪುನರಾವರ್ತನೆಯಾಗುತ್ತಲೇ ಇದೆ.

ನಮ್ಮ ಸಿನಿಮಾ ಪ್ರೇಕ್ಷಕರು ಅಂದೂ, ಇಂದೂ ಒಂದೇ ಎನ್ನುವುದು ಈ ಮೂಲಕ ಸಾಬೀತಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾಗಳ ಇಂಥ ಸೋಲಿಗೆ, ಪ್ರೇಕ್ಷಕರನ್ನು ದೂರಲಾಗುತ್ತದೆ.
 
ಚಿತ್ರ ವಿತರಕರನ್ನು, ಚಿತ್ರಮಂದಿರದ ಮಾಲೀಕರನ್ನು, ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹಾಗೂ ಚಿತ್ರಮಂದಿರಗಳ ಮೇಲೆ ಬಿಗಿ ಹಿಡಿತ ಹೊಂದಿರುವ ಪಟ್ಟಭದ್ರರನ್ನು ಹೊಣೆ ಮಾಡಲಾಗುತ್ತದೆ.

ಹೊಸದಾಗಿ ಚಿತ್ರರಂಗ ಪ್ರವೇಶಿಸುವ ನಿರ್ಮಾಪಕರು ಈ ಎಲ್ಲ ವ್ಯವಸ್ಥೆಯ ಒಳಗೆ ಕಕ್ಕಾಬಿಕ್ಕಿಯಾಗುವ ಸಂಭವವೇ ಹೆಚ್ಚು. ಪುನೀತ್ ಹಾಗೂ ಉಪೇಂದ್ರ ಅಭಿನಯದ ಚಿತ್ರಗಳನ್ನೂ 169 ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿ ಹಣ ದೋಚುವ ಮಾರ್ಗ ಒಂದು ಕಡೆ ಇದೆ.

ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೇ ನನ್ನ ಚಿತ್ರವನ್ನು ಚಿತ್ರಮಂದಿರದಿಂದ ಹಿಂತೆಗೆದುಕೊಳ್ಳುತ್ತೇನೆ, ಬಾಡಿಗೆ ಕಟ್ಟಲು ಹಣ ಇಲ್ಲ ಎಂದು ಹೇಳುವ ನಿರ್ಮಾಪಕ ವರ್ಗ ಮತ್ತೊಂದು ಕಡೆ ಇದೆ.

ಈ ಎರಡೂ ವರ್ಗದವರೂ ಚಲನಚಿತ್ರ ಕ್ಷೇತ್ರದಲ್ಲಿ ವ್ಯವಹಾರ ನಡೆಸಲೆಂದೇ ಬಂದವರು. ಸಿನಿಮಾವೊಂದನ್ನು ನೂರು ದಿನ ಪ್ರದರ್ಶಿಸಿ ದಾಖಲೆ ಮಾಡುವುದು ಇನ್ನು ಮುಂದೆ ಕನಸು ಎಂದೇ ಎಲ್ಲ ನಿರ್ಮಾಪಕರು ಹೇಳುತ್ತಾರೆ. ಹಾಗಾದರೆ ಪ್ರೇಕ್ಷಕ ಬದಲಾದನೇ?

ಖಂಡಿತಾ ಇಲ್ಲ, ಚಲನಚಿತ್ರಗಳ ಮೋಹ ನಮ್ಮ ಪ್ರೇಕ್ಷಕರಿಗೆ ಎಂದೂ ಬಿಟ್ಟು ಹೋಗುವುದಿಲ್ಲ. ಸಿನಿಮಾಗಳು ತಾಂತ್ರಿಕ ನಿಕಷಕ್ಕೆ ಒಳಪಟ್ಟು ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಹೋದಂತೆ ಪ್ರೇಕ್ಷಕನ ಅಭಿರುಚಿ ಕೂಡ ಹೊಸತನಕ್ಕಾಗಿ ಹಂಬಲಿಸಲಾರಂಭಿಸುತ್ತದೆ.

ನಮ್ಮಲ್ಲಿ ವರ್ಷಕ್ಕೆ ಸಾವಿರ ಚಿತ್ರಗಳು ತಯಾರಾದರೂ ಅದರಲ್ಲಿ ಪ್ರೇಕ್ಷಕನ ಆಯ್ಕೆ ಹತ್ತು ಮಾತ್ರವಾಗಿರುತ್ತದೆ. ಉಳಿದವು ಪ್ರೇಕ್ಷಕರ ಪಾಲಿಗೆ ಕಾಗಕ್ಕ ಗುಬ್ಬಕ್ಕನ ಕಥೆಗಳೇ.

ಹೀಗಾಗಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಅಷ್ಟು ಸುಲಭವಾಗಿ ಹೋಗುವುದಿಲ್ಲ.
ಮನರಂಜನಾ ಮಾಧ್ಯಮವಾಗಿ ಜನ ಸ್ವೀಕರಿಸಿರುವ ಟೀವಿ ಧಾರಾವಾಹಿಗಳ ಕತೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಚಲನಚಿತ್ರಗಳನ್ನು ನಮ್ಮ ಪ್ರೇಕ್ಷಕ ಹೇಗೆ ತಿರಸ್ಕರಿಸಿದ್ದಾನೋ ಅದೇ ರೀತಿ ಕಿರುತೆರೆ ಕಾರ್ಯಕ್ರಮಗಳ ಬಗ್ಗೆಯೂ ಜಿಗುಪ್ಸೆಗೊಂಡಿದ್ದಾನೆ ಎಂಬುದು ನಿರ್ಮಾಪಕನ ಆತ್ಮಹತ್ಯೆ ಘಟನೆಯಿಂದ ಸ್ಪಷ್ಟವಾಗುತ್ತದೆ.

ಕಿರುತೆರೆ ನಿರ್ಮಾಪಕರು, ನಿರ್ದೇಶಕರು, ಸಿನಿಮಾ ನಿರ್ದೇಶಕರು ಆತ್ಮಹತ್ಯೆಗೆ ಯತ್ನಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ನ್ಯಾಯವಾಗಿ ಅದನ್ನು ವೀಕ್ಷಿಸುವ ಪ್ರೇಕ್ಷಕರಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು!

ಕಿರುತೆರೆ ಚಾನಲ್‌ಗಳು ಸಂಖ್ಯೆಯಲ್ಲಿ ಹೆಚ್ಚು ಹೆಚ್ಚಾದಂತೆ, ಇಪ್ಪತ್ತನಾಲ್ಕು ಗಂಟೆಯೂ ಕಾರ್ಯಕ್ರಮಗಳನ್ನು ಕೊಡುತ್ತಾ ಜನರನ್ನು ಸೆಳೆಯಲು ನಾನಾ ತಂತ್ರಗಳನ್ನು ಬಳಸುತ್ತಿರುವುದು ಎಲ್ಲರಿಗೂ ಗೊತ್ತಾಗುವಂತೆಯೇ ಇದೆ.

ಪ್ರಸಾರವಾಗುವ ಧಾರಾವಾಹಿಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಂಡು, ನೋಡಲೇಬೇಕಾದ ದಯನೀಯ ಸ್ಥಿತಿ ಇಂದಿನ ಪ್ರೇಕ್ಷಕರದ್ದು. ಪ್ರೇಕ್ಷಕನ ಬಗ್ಗೆ ಚಾನಲ್ ಮಾಲೀಕರಿಗಾಗಲೀ, ಧಾರಾವಾಹಿ ನಿರ್ದೇಶಕ, ನಿರ್ಮಾಪಕರಿಗಾಗಲಿ ಕಿಂಚಿತ್ತೂ ಗೌರವವಿಲ್ಲ ಎನ್ನುವುದು ಸ್ಪಷ್ಟ.

ತಮಗೆ ಬೇಕಾದವರನ್ನು ವಿಜೃಂಭಿಸಲು ಧಾರಾವಾಹಿಗಳನ್ನು ನಿರ್ಮಿಸುವುದು, ವ್ಯಾಪಕ ಪ್ರಚಾರದ ಮೂಲಕ ಟಿ.ಆರ್.ಪಿ. ಸೃಷ್ಟಿಸುವುದು, ಧಾರಾವಾಹಿ ಪ್ರಸಾರಕ್ಕೆ ಚಾನಲ್‌ನವರು ಲಂಚ ಪಡೆಯುವುದು-  ಇವೆಲ್ಲಾ ಇಲ್ಲಿ ಹೊಸ ವಿಷಯಗಳಲ್ಲ.

ಬೇಕಾದವರನ್ನೂ ಬೇಡವಾದವರನ್ನೂ ಕರೆದು, ಕೂರಿಸಿಕೊಂಡು ಹರಟೆ ಹೊಡೆಯುವ ನೆಪದಲ್ಲಿ ನಿರೂಪಕರು ತಮಗೆ ತೋಚಿದ್ದನ್ನೇ ಹೇಳಿ, ಎಲ್ಲರ ಮೇಲೆ ತಮ್ಮ ಅಭಿಪ್ರಾಯವನ್ನೇ ಹೇರಿ, ನಾಟಕ ಮಾಡುವ ಸಂಗತಿಯೂ ಈಗ ಹಳಸಲಾಯಿತು.

ಬೆಳಿಗ್ಗೆ ಎದ್ದ ಕೂಡಲೇ ಭವಿಷ್ಯ ಹೇಳುವ ಖಯಾಲಿಯನ್ನು ಆರಂಭಿಸಿ, ಜನರನ್ನು ಮತ್ತಷ್ಟು ಮೌಢ್ಯಕ್ಕೆ ತಳ್ಳುತ್ತಿರುವುದೂ ಟೀವಿ ಚಾನಲ್‌ಗಳೇ. ಈಗಾಗಲೇ ಟೀವಿಗಳಲ್ಲಿ ಭವಿಷ್ಯ ಕೇಳುವ, ಹೇಳುವ ಪಿಡುಗು ವ್ಯಾಪಿಸಿಬಿಟ್ಟಿದೆ.

ಬ್ರಹ್ಮಾಂಡದ ಹೆಸರಿನಲ್ಲಿ ಜನರನ್ನು ಬೆಚ್ಚಿಬೀಳಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಇನ್ನೂ ಅಂಕುಶ ಹಾಕಿಲ್ಲ. ಆದರೆ, ಲಂಡನ್‌ನಲ್ಲಿ ಟೀವಿ ಚಾನಲ್ಲೊಂದು ಭವಿಷ್ಯ ವಿಭಾಗ ತೆರೆದು, ಅಸಂಬದ್ಧ ಸಂಗತಿಗಳನ್ನೆಲ್ಲಾ ಹೇಳಲಾರಂಭಿಸುತ್ತಿದ್ದಂತೆಯೇ ಅಲ್ಲಿನ ಸರ್ಕಾರ, ಕಿರುತೆರೆಯಲ್ಲಿ ಭವಿಷ್ಯ ಪ್ರಸಾರ ನಿಷೇಧಿಸಿ ಆದೇಶ ಹೊರಡಿಸಿತು. ನಾವಿನ್ನೂ ಸಹಿಸಿಕೊಂಡಿದ್ದೇವೆ.

ನಮ್ಮ ಚಾನಲ್‌ಗಳಿಗೆ ಬದ್ಧತೆ ಎಂಬುದೇ ಇಲ್ಲ. ಕಾರ್ಯಕ್ರಮಗಳಲ್ಲಿ ಒಂದು ಸುಸಂಬದ್ಧತೆ ಇಲ್ಲ. ರೀಮೇಕಿಗೂ ಸೈ, ಡಬ್ಬಿಂಗಿಗೂ ಸೈ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ತುತ್ತೂರಿ ಊದುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಇದೂ ಒಂದು ರೀತಿಯಲ್ಲಿ `ಕಾಸಿಗಾಗಿ ಕಾರ್ಯಕ್ರಮ~.

ಈ ಹಿನ್ನೆಲೆ ಇಟ್ಟುಕೊಂಡಿರುವ, ಕಣ್ಣಿಗೆ ರಾಚುವಂತ ಬೌದ್ಧಿಕ ಭ್ರಷ್ಟಾಚಾರದಲ್ಲಿ ನಿರತವಾಗಿರುವ ಚಾನಲ್‌ಗಳಿಂದ ಒಳ್ಳೆಯ ಧಾರಾವಾಹಿಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲೀ ನಿರೀಕ್ಷಿಸಲು ಸಾಧ್ಯವೇ? ಪತ್ರಿಕಾಗೋಷ್ಠಿ ಕರೆದು ಆತ್ಮಹತ್ಯೆಗೆ ಯತ್ನಿಸಿದ ರಾಘವೇಂದ್ರ ಅವರು ಸ್ವಲ್ಪ ಯೋಚಿಸಬೇಕಿತ್ತು.

ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವ ಭರಾಟೆಯಲ್ಲಿ ರಿಯಾಲಿಟಿ ಶೋ ಒಂದರ ಕತೆ ಕೇಳಿಲ್ಲವೇ? ಶಿಲ್ಪಾ ಶೆಟ್ಟಿ ಕತೆ ಹಳತಾಯಿತು. ಇತ್ತೀಚೆಗೆ ಕನ್ನಡದ ಚಾನಲ್‌ನಲ್ಲಿ `ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್~ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಕ್ಷತಾ ಎಂಬ ಯುವತಿ, ಅಲ್ಲಿ ನಡೆಯುತ್ತಿರುವ ಶೋಷಣೆ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಆರೋಪಿಸಿದ್ದರು.

ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದೊಂದು ಗಿಮಿಕ್ ಸೃಷ್ಟಿಸುವುದು ಚಾನೆಲ್‌ಗಳ ಕೆಲಸ. ಹೀಗಾಗಿ ಪ್ರೇಕ್ಷಕರಿಗೆ ಈಗ ಸಿನಿಮಾಗಳೆಂದರೂ ಅಲರ್ಜಿ, ಟೀವಿ ಕಾರ್ಯಕ್ರಮಗಳೆಂದರೂ ಅಲರ್ಜಿ. ಸಿನಿಮಾ ಜನ ಇದನ್ನು ಅರಿತು ಆತ್ಮಹತ್ಯೆಯ ದಾರಿ ತೊರೆದು ಪ್ರೇಕ್ಷಕರನ್ನು ಗೆಲ್ಲುವ ತಂತ್ರಗಳನ್ನು ಹುಡುಕಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT